Thursday, April 24, 2014

ಮಿತಿ


ಭಾಗ (೧) : ಪ್ರಕಾಶ್ ಹೆಗಡೆಯವರ "ಬೇಲಿ" http://ittigecement.blogspot.in/2014/04/blog-post.html
ಭಾಗ (೨) :  ದಿನಕರ್ ಮೋಗೆರರವರ "ದಣಪೆhttp://dinakarmoger.blogspot.in/2014/04/blog-post_14.html  
ಭಾಗ (೩) : ಬಾಲು ಸರ್ ರವರ "ಎಲ್ಲೆಯ ಮಿಂಚು" http://nimmolagobba.blogspot.in/2014/04/blog-post_1912.html
ಭಾಗ (೪) :  "ಮಿತಿ" ಎಂದು ಮುಂದುವರೆಸುವ ನನ್ನ ಪುಟ್ಟ ಪ್ರಯತ್ನ: 


ಅಲ್ಲಿಂದ ಮನೆಯ ಹಾದಿ ಹಿಡಿದು ಹೇಗೆ ಬಂದೆನೋ! ಬಂದೊಡನೆ ಏನೊಂದು ಭಾವವಿಲ್ಲದೆ ಮೂಖಿಯಂತೆ ಕುಳಿತುಬಿಟ್ಟೆ. ಫ್ಯಾನಿನ ಗಾಳಿ ಜೋರಾಗಿ ಬೀಸುತಿದ್ದರೂ ಬೆವರುತ್ತಿದ್ದೆ. ನನ್ನ ಬಗ್ಗೆ ನನಗೆ ನಾಚಿಕೆ, ಕೀಳರಿಮೆ. ಪತಿಯ ಪ್ರಾಮಾಣಿಕತೆ  ಆ ಘಳಿಗೆಯನ್ನು  ಎಚ್ಚರಿಸಿತ್ತು. ಅವರ ನಿಷ್ಕಲ್ಮಷ ಪ್ರೀತಿಗೆ ಎಷ್ಟೊಂದು ಶಕ್ತಿಯಿದೆ ಎಂದು ಗ್ರಹಿಸಿರಲಿಲ್ಲ. ನಾನು ಮಾರುಹೋದೆ!

ನವಿರಾದ ಭಾವಗಳು 
ಹಸೆಮಣೆಯ ಕನಸಂತೆ 
ಮದುಮಗನ ಮುಗುಳ್ನಗೆ 
ಮನಸದುವೆ ಸೋತಂತೆ 
ನವ-ನವೀನ ಬಯಕೆಗಳು 
ಅವಕಿಲ್ಲ ಮಿತಿಯಂತೆ!

ಅಲ್ಲಿಯ ತನಕ ಆ ನನ್ನ ಗೆಳೆಯನಿಗಾಗಿ  ಹಂಬಲಿಸಿದ್ದೆ, ಮನಸಿನಲ್ಲೇ ಮೋಹಿಸಿದ್ದೆ, ಎಲ್ಲೆಲ್ಲೂ ಅವನೇ ಆವರಿಸಿಕೊಂಡಿದ್ದ! ನನಗಾದರೂ ಯಾವ ಮಂಕು ಬಡಿದಿತ್ತೊ? ಆ ಸಮಯದಲ್ಲಿ ಇವರು ಫೋನ್ ಮಾಡದೆ ಇದ್ದಿದ್ದರೆ! ಅಬ್ಭಾ..! ಊಹೆಯೂ ಸಹ ತಲೆ ತಗ್ಗಿಸುವಂತೆ ಮಾಡಿದೆ. 

ಅದೆಷ್ಟು ಹೊತ್ತು ಹಾಗೆ ಶವದಂತೆ ಕುಳಿತಿದ್ದೆನೋ, ಪಕ್ಕದ ಮನೆಯ ಚಿಂಟು ನಮ್ಮ ಮನೆಯ ಬಾಗಿಲು ಬಡಿದಾಗಲೆ ಎಚ್ಚರವಾಗಿದ್ದು. ಅವನನ್ನ ನೋಡಿದೊಡನೆ, ತವರಿನಲ್ಲಿರುವ ನನ್ನ ಮಗಳ ನೆನಪಾಯ್ತು, ದುಖ-ಅಳು ಇಮ್ಮಡಿಯಾಗಿ ಇನ್ನಷ್ಟು ಬಿಕ್ಕಳಿಸಿದೆ. ಇನ್ನಷ್ಟು ಮರುಗಿ ಹೋದೆ. 

ಆ ಕ್ಷಣದಲ್ಲಿ ನನ್ನ ಗಂಡನ ತೋಳ ತೆಕ್ಕೆ ಬೇಕೆನಿಸಿತ್ತು. ಅಂದಿನವರೆಗೂ ಅವರ ನಿಷ್ಕಲ್ಮಷ ಪ್ರೀತಿಯ, ಔದಾರ್ಯದ, ಅಪ್ಪುಗೆಯ ಮಹತ್ವ ನನ್ನ ಅರಿವಿಗೆ ಇರದೇ ಹೋದದ್ದು ವಿಪರ್ಯಾಸ. ನಮ್ಮ ಮಗುವಿನ  ಹೆರಿಗೆಯ ಸಮಯ, ಪ್ರಸವ ವೇದನೆಯ ಜೊತೆ ನನ್ನ ಜೀವ ಉಳಿಯುವುದೂ ಕ್ಲಿಷ್ಟವೇ ಆಗಿದ್ದ ಸಮಯ. ನನಗಾಗಿ, ನಮ್ಮ ಮಗುವಿಗಾಗಿ ಗುರುರಾಯರಲ್ಲಿ ಉರುಳು ಸೇವೆ ಮಾಡುವೆನೆಂದು ಹರಕೆ ಹೊತ್ತಿದ್ದರು. ಆಸ್ಪತ್ರೆಯಲ್ಲಿ ಇದ್ದ ಮೇರಿ ಮಾತಾಳ ಪ್ರತಿಮೆಯ ಮುಂದೆ 101 ಮೊಂಬತ್ತಿ ಬೆಳಗುವುದಾಗಿ ಬೇಡಿಕೊಂಡಿದ್ದರು. ನಾ ತಾಯಾಗಿ ಸಂಭ್ರಮಿಸಿದ್ದಕ್ಕಿಂತ ಹೆಚ್ಚಾಗಿ ಅವರು ತಂದೆಯಾಗಿ - ನನ್ನ ಪತಿಯಾಗಿ ಸಂಭ್ರಮಿಸಿದ್ದರು. ಎಲ್ಲವನ್ನೂ ನಾ ಹೇಗೆ ಮರೆತುಬಿಟ್ಟೆ? ಆ ಮನೆ - ಮನ ಒಡೆಯುವ ಕಾಯಕಕ್ಕೆ ಇವು ನೆನಪು ಬಾರದೆ? 

ನನ್ನ ತವರು ಮನೆಯ ನೆನಪೂ ಸಹ ಆಗುತ್ತಿದೆ! ಅಪ್ಪ ಅಮ್ಮನಲ್ಲಿ ಅಷ್ಟಾಗಿ ಹೊಂದಾಣಿಕೆ ಇರಲಿಲ್ಲ ಹೌದು. ಆದರು ಅವರು ಒಬ್ಬರಿಗಾಗಿ ಒಬ್ಬರು ಬಾಳಿದ್ದರು, ಬದುಕಿದ್ದರು. ಯಾರೊಬ್ಬರು ಮನೆಯಲ್ಲಿ ಇಲ್ಲದಿದ್ದರೂ ಒಬ್ಬರನ್ನೊಬ್ಬರು ಅತಿಯಾಗಿ ಮಿಸ್ ಮಾಡಿಕೊಳ್ಳುತಿದ್ದರು, ಏನನ್ನೋ ಕಳೆದುಕೊಂಡವರಂತೆ ಆಡುತಿದ್ದರು. ಪ್ರೀತಿ ಆಮೇಲೆ, ಜಗಳವಾಡಲೂ ಸಹ ನಿಮ್ಮಮ್ಮ ಇಲ್ಲವಲ್ಲ ಅಂತ ಹೇಳುತಿದ್ದ ಅಪ್ಪನ ಮಾತು ಈಗ ನೆನಪಾಗುತ್ತಿದೆ. ಅಪ್ಪನಿಗಾಗಿ ಅಮ್ಮ ಅನುಸರಿಸಿಕೊಂಡು ಹೋಗುತಿದ್ದ ಸಹನೆಯ ರೀತಿ ನೆನಪಾಗುತ್ತಿದೆ. ಇವರ ಸಂಸ್ಕಾರವೇ ಅಲ್ಲವೇ ನನಗೆ. ಯಾಕೋ ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ. 

ಅಷ್ಟಕ್ಕೂ ನನ್ನ ಸಂಸಾರವನ್ನು ಹೋಲಿಸಿಕೊಂಡರೆ, ನಾನೆಷ್ಟು ಪುಣ್ಯವಂತೆ! ಎಂದಾದರೊಮ್ಮೆ ಅಪ್ಪಿ ತಪ್ಪಿ ಜೋರಾಗಿ ಗದರಿದರು, "ತಪ್ಪಾಯ್ತು ಕಣೆ" ಅಂತ ಗೋಗರಿಯುತ್ತಿದ್ದ ನನ್ನ ಪತಿಯ ಅಗಾಧ ಪ್ರೀತಿ ನಾನೇಕೆ ತಿಳಿಯದೆಹೋದೆ? ಹಣ ಖರ್ಚು ಮಾಡುವ ವಿಷಯದಲ್ಲೂ ಎಂದೂ ಸಾಕೆನ್ನಲಿಲ್ಲ. ದೇವರ ಕರುಣೆಯಿಂದ ಮಾಡಿದಂತ ಸಂಸಾರ ನನ್ನದು. ನಮ್ಮ ಜೋಡಿಯನ್ನು, ಸಂಸಾರವನ್ನು ನೋಡುತಿದ್ದ ನಮ್ಮ ಸಂಬಂಧಿಕರು  "ನಿಮ್ಮ ಜೋಡಿ ಹೀಗೆ ನೂರ್ ಕಾಲ ಇರಲಿ" ಅಂತ ಹರಸಿದ್ದುಂಟು, ಸ್ನೇಹಿತೆಯರು ಹೊಟ್ಟೆಕಿಚ್ಚು ಪಟ್ಟಿದ್ದುಂಟು. ಎಲ್ಲ ಸುಗಮವಾಗಿ ಸರಾಗವಾಗಿ ನಡೆಯುವಾಗ ಈ ಹುಚ್ಚಾಟ ನನಗೆ ಬೇಕಿತ್ತೆ? ಈ ಸ್ವಚ್ಚಂದ - ಚೇಷ್ಟೆ ನನ್ನ ಬದುಕಿನ ದಿಕ್ಕನ್ನೇ ಬದಲಾಯಿಸಲು ಹೊರಟಿತ್ತು.
ಸರಿ-ತಪ್ಪುಗಳ ಸೆರೆ 
ಬಲಿಯಾದ ಅಸ್ತಿತ್ವ 
ಬದಲಾದ ಸಂಬಂಧ 
ಬರಿದಾದ ವ್ಯಕ್ತಿತ್ವ 
ಸೆಲೆ, ಸಂಕೋಲೆ 
ಬೇಕಿತ್ತು ವಯಸ್ಸಿಗೆ, ಮನಸಿಗೆ!

ಯಾಕೋ ಎಲ್ಲವನ್ನು ಅವರ ಬಳಿ ಹೇಳಿಕೊಳ್ಳಬೇಕೆನಿಸಿದೆ. ಅವರಲ್ಲಿ ಕ್ಷಮೆ ಕೇಳಬೇಕು. ಈ ಪಾಪ ಪ್ರಜ್ಞೆಯಿಂದ ಹೊರಬರಬೇಕು. ಆ ದೇವರಿಗಿಂತ ಎತ್ತರವಾಗಿ ಕಾಣ್ತಿದ್ದಾರೆ ಅವರು. ನನ್ನ ಮಾತು ಆಲಿಸ್ತಾರೆ, ಹಾಂ ಆಲಿಸ್ತಾರೆ, ನಂಗೊತ್ತು,  ಅವರದು ದೊಡ್ಡ ಮನಸು, ನನ್ನ ಕ್ಷಮಿಸ್ತಾರೆ ಸಹ. ದೇವರ ದೀಪ ಹಚ್ಚಿದೆ, ಆ ದೀಪಗಳಿಂದ ಹೊಮ್ಮುತಿದ್ದ ಬೆಳಕು ಹೊಸದಾಗಿ ಪ್ರಕಾಶಿಸುತ್ತಿದೆ, ಎಲ್ಲವೂ ಮತ್ತೊಮ್ಮೆ ಹೊಸದಾಗಿ ಶುರು ಮಾಡಬೇಕು. 

ಹೀಗಂದುಕೊಳ್ಳುವಾಗಲೇ, ಮೊಬೈಲಿಗೆ ಅವರ ಮೆಸೇಜ್, "Have Your Dinner Chinnu, I Will Be Late Tonight".....  ಆ ಮೊಬೈಲಿಗೊಂದು ಮುತ್ತಿಟ್ಟೆ. ಅವರಿಗಾಗಿ ಕಾಯುತ್ತ ಸೋಫಾದ ಮೇಲೆ ಕುಳಿತಿದ್ದವಳು ಹಾಗೇ ಮಲಗಿಬಿಟ್ಟೆ. 

ಕಣ್ಣು ಬಿಟ್ಟಾಗ ಬೆಳಗಿನ ಐದು ಗಂಟೆ! ನನ್ನ ತಲೆಯ ಕೆಳಗೆ ದಿಂಬು? ಅವರು ಆಗಲೇ ಬಂದಾಗಿದೆ! ರಾತ್ರಿಯ ಯಾವ ಹೊತ್ತಿನಲ್ಲಿ ಬಂದರೋ, ರೂಮಿನ ಕಡೆ ನಡೆದೆ. ಅವರನ್ನೊಮ್ಮೆ ಅಪ್ಪಿಕೊಳ್ಳಬೇಕಿತ್ತು. ಮನಸಾರೆ ಅತ್ತು ಎಲ್ಲವನ್ನು ಹೇಳಬೇಕಿತ್ತು.  ನನ್ನ ಮನಸಿನ ಹೊರೆ ಇಳಿಸಿಕೊಳ್ಳಬೇಕಿತ್ತು. ಗಾಢ ನಿದ್ರೆಯಲ್ಲಿದ್ದಾರೆ, ಹೇಗೆ ಎಬ್ಬಿಸೋದು...ಇನ್ನಷ್ಟು  ಮಲಗಲಿ.  

ಅಡುಗೆ ಮನೆಯ ಕಿಟಕಿಯಿಂದ ಇಣುಕಿದ ಸೂರ್ಯನ ಕಿರಣ ಈ ದಿನ ಹೊಸ ಬದುಕನ್ನು ಕಟ್ಟಿ ಕೊಟ್ಟಂತೆ ಭಾಸವಾಗಿದೆ. ಇನ್ನು ಇವರು ಮಲಗೇ ಇದ್ದಾರೆ ಎಂದುಕೊಂಡು ಬಂದೆ, ಅರೆ ಇದೇನಿದು ಇಷ್ಟು ಬೇಗ ರೆಡಿ ಆಗ್ತಿದ್ದಾರೆ....., "ರೀ ನಿಮ್ಮ ಹತ್ರ ಮಾತಾಡಬೇಕಿತ್ತು, " ಎನ್ನುವಷ್ಟರಲ್ಲಿ, "ಚಿನ್ನು ನಾ ಆಫೀಸಿಗೆ ಹೊರಡಬೇಕು, ತುಂಬಾ ಅರ್ಜೆಂಟ್ ಕೆಲಸವಿದೆ ಬಂದು ಮಾತಾಡ್ತೀನಿ" ಅಂತ ಹೇಳಿ, ತಿಂಡಿಯೂ ತಿನ್ನದೇ ತಮ್ಮ ಲ್ಯಾಪ್-ಟಾಪ್ ಬ್ಯಾಗ್ ಹಿಡಿದು ಹೊರಟೇ ಬಿಟ್ಟರು. ಇರಲಿ, ಸಂಜೆ ಬಂದೆ  ಬರ್ತಾರೆ ಎಲ್ಲಿಗೆ ಹೋಗ್ತಾರೆ ಅಂದುಕೊಂಡು ಅವರಿಗೆ ಬೀಳ್ಕೊಟ್ಟೆ. 

ಡೈನಿಂಗ್ ಟೇಬಲ್ಲಿನ ಮೇಲೆ ಇವರ ಮೊಬೈಲ್ ರಿಂಗ್ ಆಗುವ ಶಬ್ದ, ಅರೆ ಇವರು ಗಡಿಬಿಡಿಯಲ್ಲಿ ಮೊಬೈಲ್ ಇಲ್ಲೇ ಬಿಟ್ಟು ಹೋದಂತಿದೆ. ನೋಡಬೇಕೆನಿಸದಿದ್ದರು, ಮೇಲಿಂದ ಮೇಲೆ ಬರುತಿದ್ದ ಮೆಸೇಜ್ಗಳ ಹಾವಳಿ ಒಮ್ಮೆ ನೋಡುವಂತೆ ಮಾಡಿತ್ತು. ಆ ಮೊಬೈಲ್ ಕೈಗೆತ್ತಿಕೊಂಡು ನೋಡುತಿದ್ದಂತೆ............ಕುಸಿದೆ.......... ಕುಸಿದು ಬಿದ್ದೆ........... ನನ್ನ ಲೋಕ ತಲೆಕೆಳಗಾದಂತೆ ಕುಸಿದು ಬಿದ್ದೆ!!!!!!

Saturday, April 5, 2014

ದೇವರ ಹೂ



Inline image 1

ಶಾನಭೋಗರ ಮನೆಯಲ್ಲಿಂದು ವಿಶೇಷ ಪೂಜೆ. ಎ೦ದಿನ೦ತೆ ಕೆ೦ಚಿ ಹೊ ಬುಟ್ಟಿ ಹೊತ್ತು ಅವರ ಮನೆಯ ಕಡೆ ಹೊರಟಳು. 

"ಎಷ್ಟೊತ್ತೆ ಕೆ೦ಚಿ! ಹೂ ತ೦ದ್ಯಾ?"....
"ಅಲ್ಲೇ ಇಡು. ಅಲ್ಲೇ, ಅಲ್ಲೇ. ಎರಡು ಹಾರ ಜಾಸ್ತಿ ತ೦ದಿದ್ದೀ ತಾನೆ? ತುಳಸಿ ಮಾಲೆ ಬೇರೆಯಾಗಿ ಕಟ್ಟಿದ್ದೀಯ? ನಿ೦ಗೆಷ್ಟು ಸರ್ತಿ ಹೇಳೋದು, ಹೂ ತ೦ದಾಗ ದೂರದಿ೦ದ್ಲೆ ಆ ಟೇಬಲ್ ಮೇಲಿಡು ಅ೦ತ".... "ಬ೦ದಾಗ್ಲೆಲ್ಲ ಅದೂ ಇದೂ ಮುಟ್ಕೊ೦ಡೇ ಹೋಡಾಡ್ತೀಯ!", ಕೆ೦ಚಿಯ ಕಡೆ ದುರದುರನೆ ನೋಡಿ ಗೊಣಗಾಡಿದರು ಶಾ೦ತಮ್ಮ.

"ಇನ್ನೂ ಇಲ್ಲೇ ನಿ೦ತಿದ್ದೀಯ? ದುಡ್ಡು ನಾಳೆ ತಗೊ, ಎಲ್ಲ್ರೂ ಬರೊ ಹೊತ್ತಾಯ್ತು ಹೊರಡು", ಅ೦ತ ಮತ್ತೊಮ್ಮೆ ಗುಡಗಿದರು ಶಾ೦ತಮ್ಮ.

"ಇಲ್ಲಾ ಅಮ್ಮೋರೆ, ಮಗಳ ಪೀಸ್ ಕಟ್ಬೇಕು ಇಸ್ಕೂಲಿ೦ದ ವಾಪಸ್ ಕಳ್ಸೋರೆ, ಈ ತಿ೦ಗಳ್ದು ಪೂರ್ತಿ ಈಗ್ಲೆ ಕೊಟ್ಬಿಡಿ, ಈವೊತ್ತಿ೦ದು ತಿ೦ಗಳ್ದು ಎಲ್ಲಾ ಸೇರಿ 900 ಆಯ್ತು",  ಅ೦ತ ದೃಢವಾಗಿ ಅಲ್ಲಿಯೇ ನಿ೦ತಳು ಕೆ೦ಚಿ.

"ಅದ್ಯಾಕೆ ಆ ವಯ್ಯಾರ, ಸರಿಯಾಗಿ ಕೇಳು. ಇನ್ನೊ೦ದ್ಸರ್ತಿ ಮನೇಲಿ ಎಲ್ಲಾ ಮುಟ್ಕೊ೦ಡು ಹೋಡಾಡ್ಬೇಡ ಆಯ್ತ, ಬ೦ದಾಗೆಲ್ಲ ಎರಡೆರಡು ಕೆಲ್ಸ ಕೊಡ್ತೀಯ, ಮಡಿ-ಮೈಲಿಗೆ ಒ೦ದೂ ಇಲ್ಲ", ಬೈದಾಡಿಕೊ೦ಡೇ ಒಳಗಿನಿ೦ದ ದುಡ್ಡು ತ೦ದು ಟೇಬಲ್ ಮೇಲಿಟ್ಟರು ಶಾ೦ತಮ್ಮ.


"ದ್ಯಾವ್ರೆ! ಆ ಕುಡ್ಕನ್ ಕಣ್ಗೆ ಬೀಳೋಕಿನ್ಮು೦ಚೆ ಈ ದುಡ್ಡಿಗೇನೇನ್ ಬರ್ತದೊ ಎಲ್ಲಾ ತಕ್ಕೊ೦ಡು ಮನೀಕಡೆ ಹೊಳ್ಟೋಗ್ಬೇಕು", ಅ೦ತ ಗ೦ಡನನ್ನ ಶಪಿಸಿಕೊ೦ಡು ಬಶೀರಣ್ಣನ ಅ೦ಗಡಿಯ ಕಡೆ ನಡೆದಳು ಕೆ೦ಚಿ.

ಮನೆ ತಲುಪಿದಾಗ ಚಾಪೆ ಮುದುರಿಕೊ೦ಡು ಕುಳಿತಿದ್ದ ಕೆ೦ಚಿಯ ಮಗಳು, "ಇವತ್ತಾದ್ರು ಅಮ್ಮೋವ್ರಿಗೆ ಹೇಳಿದ್ಯಾ ಅಮ್ಮಯ್ಯ?" ಅ೦ತ ಸಣ್ಣದಾಗಿ ಕೇಳಿದಳು. "ಇಲ್ಲಾ ಮಗ, ಅವ್ರಿಗೆ ಹೇಳ್ದೆ ಅ೦ತಿಟ್ಕೊ ಇನ್ನ ಮಡಿ, ಮೈಲ್ಗೆ, ಅನಿಷ್ಟ ಅ೦ತ ಹನ್ನೊ೦ದು ದಿನಾನೊ ಹದ್ಮೂರ್ ದಿನಾನೊ ನಮ್ತಾವ ಹೂವೇ ತಕ್ಕಳಲ್ಲ. ಸೂತ್ಕ ತೆಗಿಯೋಗ೦ಟ ಮನೆಗೆ ಬರ್ಬೇಡ ಅ೦ತಾರೆ. ಇವತ್ತು ಪೆಶಲ್ ಪೂಜೆ, ವರ್ತನೆ ಹೂಗಿ೦ತ ದಾಸ್ತಿನೇ ಕೇಳಿದ್ರು, ನಾನೇನಾರ ಹಿ೦ಗೆ ಅ೦ದಿದ್ರೆ ಇದ್ನೂ ಬೇಡ ಅ೦ತ ಬುಟ್ಬುಡ್ತಿದ್ರಷ್ಟೇಯಾ.  ನೀನು ಅದ್ನೆಲ್ಲಾ ಯೋಚ್ನೆ ಮಾಡ್ಬೇಡ ಬುಡು, ಮುತ್ತೈದೇರ್ಗೆ ಹೇಳಿವ್ನಿ, ಎಲ್ರೂ ಬ೦ದು ನಿ೦ಗೆ ಆರ್ತಿ ಮಾಡ್ತವ್ರೆ. ನಿ೦ಗಿನ್ನು ಹಸಿ ಮೈ, ಎಲ್ಲ೦ದ್ರಲ್ಲಿ ಕೂರ೦ಗಿಲ್ಲ, ಸಿಕ್ಕಿದ್ನೆಲ್ಲ ತಿನ್ನ೦ಗಿಲ್ಲ ಆತಾ", ಅ೦ತ ತನ್ನ ಮುದ್ದಾದ ಕರುಳ ಬಳ್ಳಿಯ ಕಡೆ ಮಮತೆಯ ನೋಟ ಬೀರಿದಳು. 

ಅಷ್ಟಕ್ಕೇ ಸುಮ್ಮನಿರದ ಮಗಳು, "ನೀ ಹಿ೦ಗೆಲ್ಲ ಮಾಡಿದ್ರೆ ದ್ಯಾವ್ರಿಗೆ ಕೋಪ ಬರ೦ಗಿಲ್ವ ಅಮ್ಮಯ್ಯ?" ಅ೦ತ ತನ್ನ ಕುತೂಹಲ ಹೊರಗಿಟ್ಟಳು."ಬರ್ತದೆ, ಕೋಪಾನು ಬರ್ತದೆ, ಶಾಪಾನು ಕೊಡ್ತಾನೆ. ಅದೆಲ್ಲಾ ನ೦ಗೆ ತಾನೆ, ನಿ೦ಗಲ್ವಲ್ಲ ಬುಡು."

"ದ್ಯಾವ್ರ ಪಾದಕ್ಕೆ ಸೇರಿದ್ಮೇಲೆ ಎಲ್ಲಾ ಹೂವು ಮಡಿ ಆಗೋಗ್ತದೆ", ಅ೦ತ ಹೇಳಿಕೊ೦ಡು ಬಶೀರಣ್ಣನ ಅ೦ಗಡಿಯಿ೦ದ ತ೦ದ ಸಾಮಾನುಗಳ ಕಡೆಗೆ ಕಣ್ಣಾಡಿಸುತ್ತ ಕು೦ತಳು ಕೆ೦ಚಿ.

*  *  *  *  * 
ಶಾನಭೋಗರ ಪೂಜೆ, ಶಾ೦ತಮ್ಮನ ಮಡಿ, ಅಮ್ಮನ ಅಸಹಾಯಕತೆ - ಮಮತೆ ಇವುಗಳ ನಡುವೆ ಆ ದೇವರ ಹೂವು......... 

ಪ್ರತಿ ಬೆಳಗೂ ಹೊಸತನ....

ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತ...