Wednesday, February 22, 2012

ಕನ್ನಡದೂರಿನ ಕನ್ನಡತಿ ನಾನು.......



೨೦೦೮ ನವೆಂಬರ್ ತಿಂಗಳಲ್ಲಿ,

- ೫ ವರ್ಷಗಳ ಕಾಲ ಯೋಕೊಗಾವ ಇಂಡಿಯಾದಲ್ಲಿ ಕೆಲಸ ಮಾಡಿ ಆಗಷ್ಟೇ ಆಸಿಪೆಕ್ ಅನ್ನುವ ಕಂಪನಿ ಒಂದರ ಚೇರ್ಮನ್ನಿಗೆ ಅಸಿಸ್ಟೆಂಟ್‌ಆಗಿ ಸೇರಿದ್ದೆ.
ಅದುವರೆಗೂ ಆರ್ಕುಟ್ನ ಪರಿಚಯ ನನಗಿರಲಿಲ್ಲ. ನಿಜ ಹೇಳಬೇಕಂದ್ರೆ ಆರ್ಕುಟ್ ಅನ್ನುವ ಪದ ಕೇಳಿಯೇ ಇರಲಿಲ್ಲ. ಕಾರಣ ಇಷ್ಟೇ, - ಯಾವುದೇ ಸಾಮಾಜಿಕ ಅಂತರ್ಜಾಲಗಳ ಬಳಕೆ ಯೋಕೊಗಾವದ ಕೆಲಸಗಾರರಿಗೆ ಲಭ್ಯವಿರಲಿಲ್ಲ. ಆಸಿಪೆಕ್‌ಗೆ ಸೇರಿದ ಮೊದಲೆರಡು ದಿನಗಳಲ್ಲಿ ನನಗೆ ಆತ್ಮೀಯತೆ ತೋರಿದವರು ವನಜ ಹಾಗೂ ರಜನಿ. ಮೂಲತಃ ಕೇರಳದವರು! ಬೆಂಗಳೂರಿನ ವಾಸ ಇವರಿಗೆ ಅಷ್ಟಿಷ್ಟು ಕನ್ನಡ ಮಾತನಾಡೋದನ್ನ ಕಲಿಸಿಯೇ ಇತ್ತು.

ಉತ್ತರ-ಭಾರತೀಯರು, ಆಂಗ್ಲೋ-ಭಾರತೀಯರು ಹಾಗು ತಮ್ಮ ಇಂಟರ್ನ್-ಶಿಪ್ ಮಾಡಲು ಬಂದ ಹೊರ ದೇಶದವರೇ ಕೂಡಿದ್ದ ಆ ಸಂಸ್ಥೆಯಲ್ಲಿ ನನ್ನವರಂತೆ ನನಗೆ ಕಂಡಿದ್ದು ರಜನಿ ಹಾಗು ವನಜ.

೫ ವರ್ಷಗಳು ಅಂದರೆ - ಸುಮಾರು ೧೮೦೦ಕ್ಕೂ ಹೆಚ್ಚು ದಿನಗಳ ಕಾಲ ಯೋಕೊಗಾವದಲ್ಲಿ ಕೆಲಸ ಮಾಡಿದ್ದೆ! ಸಾವಿರಕ್ಕೂ ಹೆಚ್ಚು ಮಂದಿ ಇದ್ದ ಆ ಸಂಸ್ಥೆಯಲ್ಲಿ - ಅನೇಕ ಸ್ನೇಹಿತರು! ನನ್ನ ಸ್ನೇಹಿತರನ್ನ ಅಗಲಿದ ನೋವು ಇನ್ನು ಹಸಿಯಾಗೆ ಇದ್ದ ದಿನಗಳವು! ಮುಖ ಮನದ ಕನ್ನಡಿ ಎನ್ನುವ ಹಾಗೆ -ನನ್ನ ಮುಖದಲ್ಲಿ ಆ ಅಗಲಿಕೆಯ ಛಾಯೆ ಆಗಾಗ ಎದ್ದು ಕಾಣುತಿತ್ತು. ಇದನ್ನ ಗಮನಿಸಿದ ರಜನಿ, ಆರ್ಕುಟ್ ಅನ್ನುವ ಅಂತರ್ಜಾಲದ ನೆಲೆಯೊಂದನ್ನು ಪರಿಚಯಿಸಿದಳು. ನನಗಾಗಿ ಆರ್ಕುಟ್ನಲ್ಲಿ ಒಂದು ಖಾತೆ ಸಹ ತೆರೆದು ಕೊಟ್ಟಳು! ರಜನಿಗೆ ಒಂದು ದೊಡ್ಡ ಥ್ಯಾಂಕ್ಸ್ ಹೇಳಿ - ಕಳೆದ ಉಳಿದ ಸ್ನೇಹಿತರನ್ನೆಲ್ಲ ಗುಡ್ಡೆ ಹಾಕಿಕೊಂಡೆ. ಅಬ್ಬ! ಸ್ನೇಹಕ್ಕೆ ಸ್ನೇಹವೇ ಸಾಟಿ! ಮರುಕಳಿಸಿತು ನನ್ನಲ್ಲಿ ಕುಗ್ಗಿದ್ದ ಉತ್ಸಾಹ ಹಾಗು ಹುರುಪು.

ಆರ್ಕುಟ್ ಏನಿದು?:
ಹೀಗೆ ಆರ್ಕುಟ್‌ನ ಒಳಗೆ ಧುಮುಕಿ ಇದರ ಸರಿ-ತಪ್ಪು-ಒಪ್ಪುಗಳನ್ನ ಜಾಲಾಡಿದೆ! ಆಗ ನನಗನಿಸಿದ್ದು, - ಅಂತರ್ಜಾಲ... ಹಂತ ಹಂತವಾಗಿ ತನ್ನ ಬಲೆಗೆ ಸಿಲುಕಿಸುವ ಜಾಲವೇ ಸರಿ ಎಂದು. ಇದನ್ನ ಒಳಿತಿಗಾಗಿ ಉಪಯೋಗಿಸುವವರು ಎಷ್ಟು ಮಂದಿ ಇದ್ದಾರೋ - ಕೆಡುಕಿಗೆ೦ದೆ ಬಳಸುವವರೂ ಅಷ್ಟೇ ಮಂದಿ! ಸ್ಪಾಮ್ / ವೈರಸ್ / ಹ್ಯಾಕಿಂಗ್ ನಿಂದ ಕೂಡಿ ನಮ್ಮ ಕ೦ಪ್ಯೂಟರ್ ಅಲ್ಲದೆ ಮನಸ್ಥಿತಿಯನ್ನು ಕದಡುವ ಶಕ್ತಿ ಈ ಜಾಲಕ್ಕಿದೆ. ಅದೇನೇ ಇರಲಿ ನಮ್ಮ ಜೋಪಾನ ನಮ್ಮ ಕೈಯಲ್ಲಿರಬೇಕು ಅನ್ನುವ ದೊಡ್ಡವರ ಮಾತು ನೆನಪಾಗಿತ್ತು.


ನನ್ನ ಹುಡುಕಾಟದ ಮಧ್ಯೆ ಆರ್ಕುಟ್‌ನ ಮತ್ತೊಂದು ವಿಶೇಷ ಕಂಡೆ! ಅದೇ ಸಮುದಾಯಗಳು / ಕಮ್ಯುನಿಟಿಗಳು. ಅಲ್ಲಿ ಪ್ರತಿ ಆಶಯಕ್ಕೊಂದು ಸಮುದಾಯ, ಪ್ರತಿ ಭಾಷೆಗೊಂದು ಸಮುದಾಯ, ಇಷ್ಟ - ಕಷ್ಟಗಳಿಗೊಂದು ಸಮುದಾಯ, ಪ್ರೇಮಕ್ಕೆ - ಪ್ರಣಯಕ್ಕೆ ಒಂದೊಂದು ಸಮುದಾಯ, ಬೇಜಾರಿಗೊಂದು - ಸಂತಸಕ್ಕೊಂದು ಸಮುದಾಯ.... ಹೇಳಬೇಕೆಂದರೆ ಮನದಲ್ಲಿ ನೆನೆಸಿದ ಪ್ರತಿಯೊಂದು ಅಂಶಗಳಿಗೆ ಅಲ್ಲೊಂದು ಸಮುದಾಯವಿತ್ತು. ಇದೊಂದು ಅಚ್ಚರಿಯಂತೆ ಕಂಡಿತ್ತು ಅಂದು.
ನನಗಿಷ್ಟವಾದ ಸಮುದಾಯಗಳಿಗೆಲ್ಲ ನಾನು ಸದಸ್ಯೆಯಾದೆ, - ಬಡ ಮಕ್ಕಳ ಅಭಿವೃದ್ದಿ, ಹೆಣ್ಣು ಮಗುವನ್ನು ಉಳಿಸಿ, ವಯಸ್ಸಾದ ಜೀವಗಳಿಗೆ ಬೆಂಬಲ,ಸೋನು ನಿಗಮ್ ಫ್ಯಾನ್ ಕ್ಲಬ್, ಕನ್ನಡ ಹಾಡುಗಳು, ಚಿತ್ರತಾರೆ ಕೊಂಕೋಣ ಸೇನ್, ಸೂರ್ಯ, ಆರ್ ಕೆ ನಾರಾಯಣ್, ರಂಗಶಂಕರ ..... ಹೀಗೆ ಅನೇಕ ಅನೇಕ ಸಮುದಾಯಗಳಿಗೆ ಸದಸ್ಯೆಯಾದೆ. ಇಲ್ಲಿ ನಡೆಸುವ ಕಾರ್ಯಚಟುವಟಿಕೆಗಳನ್ನ ಗಮನಿಸಿದೆ. ಆರ್ಕುಟ್ ಬಗ್ಗೆ ಇದಿಷ್ಟು ತಿಳಿದುಕೊಂಡೆ.

ಇನ್ನು ಆಸಿಪೆಕ್ನಲ್ಲಿ :

ಕನ್ನಡದಲ್ಲಿ ನನ್ನ ಹೆಸರಿನ ನಾಮಫಲಕ ಬರೆದು ಹಾಕಿಕೊಂಡಿದ್ದೆ. "ಜೊತೆಯಲಿ ಜೊತೆ - ಜೊತೆಯಲಿ ಇರುವೆನು ಹೀಗೆ ಎಂದು" ಅಂತ ಕನ್ನಡ ಹಾಡಿನ ರಾಗವನ್ನು ಮನಸಲ್ಲಿಯೇ ಗುನಗುನಿಸಿದ್ದೆ! ಇದನ್ನು ಕೇಳಿದ್ದ ರಜನಿ - ವನಜ, "ಕನ್ನಡ ಹಾಡು ಹಾಡ್ತೀಯ ಗುಡ್ ಗುಡ್" ಅಂದಿದ್ದರು. ಸುಮಾರು ಕನ್ನಡ ಹಾಡುಗಳನ್ನು ಹಾಡಿಸಿಕೊಂಡಿದ್ದರು. ಹಾಡುವ ಮೊದಲು ಸಾಲುಗಳ ಅರ್ಥವನ್ನು ಹೇಳುತಿದ್ದ ಕಾರಣ ಅವರಿಬ್ಬರಿಗೂ ಆ ಹಾಡುಗಳು ಇಷ್ಟವಾಗತೊಡಗಿದವು! ಅದು ಯಾವ ಮಟ್ಟಿಗೆ ಇಷ್ಟವಾಗಿತ್ತೆಂದರೆ "ಅವರುಗಳ ಕನ್ನಡ ಫೇವರಿಟ್" ಹಾಡುಗಳ ಪಟ್ಟಿ ಸಹ ಮಾಡಿಕೊಂಡಿದ್ದರು. ಅವರಿಗಿಷ್ಟ ಬಂದಾಗಲೆಲ್ಲ "roops - ಪ್ಲೀಸ್ ಸಿಂಗ್ ದಿಸ್, ಸಿಂಗ್ ದಟ್" ಅಂತ ತಮ್ಮ ಇಷ್ಟವಾದ ಕನ್ನಡ ಹಾಡುಗಳನ್ನ ಹಾಡಿಸುತ್ತಿದ್ದರು.
ನಾನೇನು ಮಹಾನ್ ಗಾಯಕಿಯಲ್ಲ! ನಾನು ಯಾವ ಮಟ್ಟಿಗೆ ಹಾಡಬಲ್ಲೆ ಎಂದು ಕೇಳದಿರಿ - ಇದೊಂದು ಗೋಜಲು ಪ್ರಶ್ನೆ! ಆ ಸಮಯದಲ್ಲಿ ಕನ್ನಡ ತಿಳಿಯದವರ ಮುಂದೆ ನಾನು ಹಾಡುತಿದ್ದ ಹಾಡುಗಳು ನನಗೆ ಕನ್ನಡದ ಮೇಲಿನ ಅಭಿಮಾನವನ್ನು ಹೆಚ್ಚಿಸುತ್ತಿತ್ತು ಮಾತ್ರ.


ಹೀಗಿರುವಾಗ ಒಂದು ದಿನ ಮಧ್ಯಾಹ್ನದ ಊಟ ಮುಗಿಸಿ ನನ್ನ ಟೇಬಲ್ಲಿಗೆ ಅಂಟಿಕೊಂಡಿದ್ದ ನೋಟೀಸ್ ಬೋರ್ಡ್ ಒಂದರ ಮೇಲೆ ಹೀಗೆ ಗೀಚಿಕೊಂಡೆ!

ಕನ್ನಡದೂರಿನ ಕನ್ನಡತಿ ನಾನು!
ಹೊಳೆಯುವ ಮೂಗುತಿ ಹೇಳದೆ ಏನು?

ಹೀಗೆ ಬರೆಯಲು ಕಾರಣ? ಮತ್ತದೇ ಲಾಜಿಕ್! ಕಾರಣ ಏಕೆ ಬೇಕು... ಬರೆದೆನೆಂದರೆ ಹೀಗೆ ಬರೆಯಬೇಕನಿಸಿತ್ತು ಅಷ್ಟೇ!
ಇದನ್ನು ನೋಡಿದ ವನಜ,- "ಯಾನಿದು {ಏನಿದು} ರೂಪ, ವಾಟ್ ಈಸ್ ದೀಸ್?" ಅಂತ ಕೇಳಿದ್ದೆ ತಡ, "ವೇಟ್ - ಲೆಟ್ ಮಿ ಟೆಲ್ ಯು"... ಅಂತ ಇದರ ಅರ್ಥ ಅವಳಿಗೆ ಅರ್ಥೈಸಿದೆ! "ವಃ ವಃ ಟೂ ಗುಡ್, ವಾಟ್ ಯು ಆರ್ ಪೊಯೆಟ್ಟು?" ಅಂತ ಆಶ್ಚರ್ಯವಾಗಿ ರಾಗವಾಗಿ ಕೇಳಿದ್ದಳು. "Nopes, i just scribble.. & if you call me a poet! either I am lucky to have met you or you are a Sweet Dumb!" [ಇಲ್ಲಮ್ಮ! ಹೀಗೆ ಅದು ಇದು ಗೀಚುವ ಅಭ್ಯಾಸ. ನೀನು ನನ್ನ ಕವಿ ಅಂತ ಕರೆದರೆ, -ನಿನ್ನ ಬೇಟಿ ಆದದ್ದು ನನ್ನ ಅದೃಷ್ಟ ಇರಬೇಕು ಅಥವಾ ನೀನು ಮುದ್ದು ದಡ್ಡಿಯಾಗಿರಬೇಕು!].....


ಈ ಮಾತುಕತೆಯೇನೋ ಅಲ್ಲಿಗೆ ಮುಗಿದಿತ್ತು. ಆದರೆ ಇದರ ಪರಿಣಾಮ ಮಾತ್ರ ನನ್ನ ತಲೆಯಲ್ಲಿ ಕನ್ನಡಕ್ಕಾಗಿ ಮತ್ತೊಂದು ಸಸಿಯನ್ನು ನೆಟ್ಟಿತ್ತು! ಏನದು ...?

Sunday, February 19, 2012

ಪ್ರದಕ್ಷಿಣೆ:

ಕೆಲವೊಂದು ಪದಗಳು ಮನಸ್ಸಿಗೆ ಇಷ್ಟವಾಗಿ ಹೋಗ್ತದೆ ಇಷ್ಟವಾಗದೇ ಹೋದದ್ದನ್ನು ಆಚೆ ತಳ್ಳಿಬಿಟ್ಟರೆ ಮನಸ್ಸು ನಿರಾಳ!. ಆದರೆ ಏನೇ ಆದರೂ ಇಷ್ಟ ಅಗ್ಬೇಕಂದ್ರೆ ಅದಕ್ಕೆ ಕಾರಣಗಳಿರಬೇಕ? ನನ್ನ ಮಟ್ಟಿಗೆ ಕೆಲವು ಪದಗಳು ಅಥವಾ ಘಟನೆಗಳು ಇಷ್ಟವಾಗಲು ಕಾರಣಗಳಿದ್ದರೆ - ಇನ್ನು ಕೆಲವಕ್ಕೆ ಕಾರಣವೇ ಇರೋಲ್ಲ.


ಮನಸ್ಸಿಗೆ ತುಂಬಾ ಇಷ್ಟವಾಗುವ ಕೆಲವು ಪದಗಳಲ್ಲಿ ಈಗಷ್ಟೇ ಸೇರ್ಪಡೆಯಾದ ಪದ 'ಪ್ರದಕ್ಷಿಣೆ'!
ಹೆಸರಿನಲ್ಲೇ ಭಕ್ತಿ, ಶ್ರದ್ಧೆ, ವಿನಯ ಎಲ್ಲವೂ ಒಮ್ಮಿಂದೊಮ್ಮೆಲೆ ಮೂಡಿಸುವ ಪದ ಅನಿಸಿತು.
ಮೊದಲಬಾರೀ ಈ ಹೆಸರು ಕೇಳಿದಾಗ..ನಮ್ಮೊಳಗೇ ಎಲ್ಲೋ ಇರುವ ಪದವಲ್ಲವೇ ಅನಿಸಿತು!!. ಏಕೆಂದರೆ ಕೆಲವಕ್ಕೆ ಕಾರಣಗಳೇ ಇಲ್ಲದ ಹಾಗೆ, ಮನುಷ್ಯ ತನ್ನೊಳಗೆ ಅರಿವಿದ್ದೋ, ಅರಿವಿಲ್ಲದೆಯೋ ಕೆಲವು ಭಾವನೆಗಳಿಗೆ 'ಪ್ರದಕ್ಷಿಣೆ' ಹಾಕುತ್ತಲೇ ಇರುತ್ತಾನೆ.

ಪ್ರದಕ್ಷಿಣೆ ಹೆಸರು ಕಿವಿಗೆ ಬಿದ್ದಾಗ, ಒಂದು ಗರ್ಭಗುಡಿಯ ಸುತ್ತ ಹೋಗಿ ಬಂದ ಭಾವನೆ! ದೇವಸ್ಥಾನಕ್ಕೆ ಹೋಗದೆ ದೇವರ ಸುತ್ತ ಪ್ರದಕ್ಷಿಣೆ ಹಾಕಿದ ಭಾವನೆ..! ಈ ಭಾವನೇನೆ ಇರಬಹುದು - ಈ ಹೆಸರು ಇಷ್ಟವಾಗಲು ಕಾರಣ.

'ಜಗದಗಲ ಒಂದು ಸುತ್ತು' ...ಸ್ನೇಹಿತರೇ, ಒಂದೇ ಸುತ್ತು ಸಾಕೆ.. ನನ್ನನ್ನು ಬಿಟ್ಟರೆ ನನ್ನ ವಾನರ ಸೇನೆಯೊಂದಿಗೆ ರಿಂಗ-ರಿಂಗ-ರೋಸೆಸ್ ಅಂತ ಸುತ್ಮೇಲೆ ಸುತ್ತು-ಸುತ್ತ್ಮೇಲೆ ಸುತ್ತು.. ಹೊಡೆಯುತಿದ್ದೆನೇನೋ!

ಸಧ್ಯಕ್ಕೆ ಜಗದಗಲ ಒಂದು ಸುತ್ತು ಅನ್ನುವಾಗ ಕಲ್ಪನೆಯಾಗಿದ್ದು, ಅದೊಂದು ಸಣ್ಣ ಭೂ-ಚೆಂಡಿನಂತೆ, ಆ ಭೂಮಿಯನ್ನ ತಬ್ಬಿಕೊಂಡಂತೆ, ಬಿರಬಿರನೆ ಓಡಿ ಒಂದು ಸುತ್ತು ಹೊಡೆದು ನಾನೇ ಫಸ್ಟ್ ಅಂತ ಏದುಸಿರು ಬಿಟ್ಟು ಹೇಳಿಕೊಂಡಂತೆ, ಇದಕ್ಕೂ ಮೀರಿ ಅನಿಸಿದ್ದು, 'ಹೇಳಿದಷ್ಟು ಸುಲಭವಾಗಿ, ವಾಸ್ತವತೆಯಲ್ಲಿ ಈ ಜಗತನ್ನು ಇಷ್ಟು ಬೇಗ ಒಂದು ಸುತ್ತು ಹೊಡೆದು ಬರಬಹುದೇ ಅಂತ.
ಒಂದೊಂದು ಜೀವಕ್ಕೆ ಒಂದೊಂದು 'ಜಗತ್ತು', ಒಬೊಬ್ಬರ ಭಾವನೆಯಲ್ಲಿ ಒಂದೊಂದು 'ಜಗತ್ತು' - ಈ ಪದಕ್ಕೂ ಪರಿಮಿತಿ ಎಲ್ಲಿದೆ? ಇದರ ಒಳಾರ್ಥ ಎಲ್ಲೆಲ್ಲಿಯ ತನಕ ಸೀಮಿತ?-ಹೌದು, ಸೀಮಾತೀತ!!

ಅದೇನೇ ಅದರು ಜಗತ್ತು ಕೈಗೆಟುಕಿಸಿದಂತ ಅನುಭವ ಕೊಟ್ಟಿದ್ದು ಈ ಪ್ರದಕ್ಷಿಣೆಯ 'ಜಗದಗಲ ಒಂದು ಸುತ್ತು'..
ನವಿರಾದ ನೆಂಟಸ್ತಿಕೆ ಬೆಳೆಯುತ್ತಿದೆ ಈ ಪದಗಳ ಜೊತೆ, ಈ ತಾಣದ ಜೊತೆ.
ನನಗರಿವಿಲ್ಲದೆ ಸುಲಭವಾಗಿ ಈ ಭಾವನೆಗಳನ್ನ ಮೂಡಿಸಿ ಪ್ರದಕ್ಷಿಣೆ!

ನಮ್ಮ ತಂಡವನ್ನು ನಾವು ಒಂದು ಸಮುದಾಯ ಎಂದು ಕರೆದುಕೊಳ್ಳಲು, ಅಂತರಜಾಲವೂ ಕಾರಣ ಬಿಡಿ. 3k ಅಂದರೇ ಅಚ್ಚರಿ ಕೆಲವರಿಗೆ. ಕನ್ನಡದಲ್ಲಿ ಮೂರುಖ ಎಂದು ಓದಿ, ನಮ್ಮನ್ನು ಲೀಲಾಜಾಲವಾಗಿ ಮತ್ತು ಅಕಾರಣವಾಗಿ(?!) ಮೂರ್ಖರ ಪಟ್ಟಿಗೆ ಸೇರಿಸಿಬಿಡುತ್ತಾರೆ. ಅದು 3k ಅಂದರೆ ಕನ್ನಡ-ಕವಿತೆ-ಕವನ ಎಂದು ಹೇಳಿದರೆ ಮುಸಿ ಮುಸಿ ನಗುತ್ತಾರೆ!!. ಕವಿತ-ಕವನ.....ಏನು ವ್ಯತ್ಯಾಸ ಎಂದು ಕೇಳಿದರೆ, ಕೇಳಿದವರ ಜೊತೆಗೆ ನಾವೂ ಮೂರ್ಖರೇ......?? ಗೊತ್ತಿಲ್ಲಪ್ಪ.

ಆದರೆ ನಾನಂತೂ ಮೂರ್ಖರ ತಂಡದ ನಾಯಕಿ- 'ಮಹಾನ್ ಮೂರ್ಖ 'ಎಂದೇ ಪ್ರಸಿದ್ದ. ಆದರೆ ನಮ್ಮ ಸುತ್ತಲೂ ಹೀಗೆ 'ಪ್ರದಕ್ಷಿಣೆ' ಅರ್ಥ ಕಂಡುಕೊಂಡಿದ್ದರೆ ಅದಕ್ಕೆ ನಾವು,ಕವಿತೆ-ಕವನಕ್ಕಿಂತಲೂ ಕನ್ನಡ ಪ್ರೀತಿಯೇ ದೊಡ್ಡದು ಎಂದು ನಂಬಿದ್ದೇವೆ-ಆ ಮೂಲಕ ನಾವು ಮೂರ್ಖರಲ್ಲ ಸ್ವಾಮಿ.

ನಮ್ಮ ಬಂಡವಾಳದ ಬಗ್ಗೆಯೂ ಕುತೂಹಲ ಸಹಜ. ನಮ್ಮಲ್ಲೂ 'ಬಂಡವಾಳಶಾಹಿ'ಗಳಿದ್ದಾರೆ. ಮೂಲ ಬಂಡವಾಳ-ಕನ್ನಡ ಪರ ಮನಸ್ಸು. ಅದನ್ನು ತಂದು ಇಲ್ಲಿ ಹಾಕಿದರೆ ಮುಗಿಯಿತು. ಮತ್ತೆ ನಮ್ಮ ಸದಸ್ಯರುಗಳ ಭಾವನೆಗಳೇ ಇದರ ಬಂಡವಾಳ............!
ಆ ಭಾವನೆಗಳ ಖಜಾನೆ ಹೊತ್ತು ಪ್ರದಕ್ಷಿಣೆ ಹಾಕಲು ಸಜ್ಜಾಗಿರುವೆ. ನಿಮ್ಮ ಪ್ರೀತಿ ಬಯಸುತ್ತ........ ಪ್ರೀತಿಯೊಂದಿಗೆ ಮೆಚ್ಚುಗೆಯೂ ಇರಲಿ...ತಪ್ಪಿದಲ್ಲಿ ತಿದ್ದಲು ಮರೆಯದಿರಿ.....ನಾವು ಮೂರ್ಖರಾದರೂ ನೀವು ಅಲ್ಲವಲ್ಲ......??

ಅಂದ ಹಾಗೆ...ಇದು ಮುಗಿಯುವ ಕಥೆಯಲ್ಲ......ಕಥೆಯ ಆರಂಭ ಅಷ್ಟೇ.....ಕಥೆ ಮುಂದೆಯೂ ಇದೆ.

ಬಾಳೊಂದು ಭಾವಗೀತೆ

ನಿಮ್ಮೊಂದಿಗೆ

Monday, November 28, 2011

ಭಾವಸಿಂಚನ ... stage ಮೇಲೆ..

3K ಸಮುದಾಯದ ಚೊಚ್ಚಲ ಪ್ರಕಟಣೆ... ಕವಿಗಳಲ್ಲದವರ ಕವನಗಳ ಗುಂಜನ ಭಾವಸಿಂಚನ
ಈ ಸಮುದಾಯ ನನ್ನ ಮನಸಿಗೆ ತುಂಬಾ ಹತ್ತಿರ. ಎಲ್ಲರೂ ರೂಪಕ್ಕ ಅಂತ ಕರೆಯೋದು ಇದಕ್ಕೆ ಕಾರಣ ಇರಬಹುದು....
ಕಳೆದುಕೊಂಡ ಪ್ರೀತಿಯ ತಮ್ಮನ ನೆನಪು ಎಂದಿಗೂ ಆರದು. ಅವನು ಇಲ್ಲೇ ನನ್ನ ಜೊತೆಯಲ್ಲೇ ಇದ್ದಾನೆ ಅಂತ ಸಾರಿ ಸಾರಿ ಹೇಳೋಕೆ, 3K ಯ ಗೆಳೆಯರೆಲ್ಲರಿಂದಲೂ ರೂಪಕ್ಕ ಅಂತ ಕರೆಸಿಕೊಂಡು ಅವನು ನನ್ನೊಡನೆ ಇದ್ದಾನೆ ಅಂತ್ ಸಂತೃಪ್ತಳಾಗೋಕೆ !

ಇನ್ನು 26 ನವೆಂಬರ್ 3K ಯ ಇತಿಹಾಸದಲ್ಲಿ ಇದೊಂದು ಸುದಿನ. ಕನ್ನಡ ಸಾಹಿತ್ಯ ಪರಿಷತ್ನಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ದುಂಡಿರಾಜ್ ಸರ್, ಕವಿರಾಜ್ ರವರು ಹಾಗು ನನ್ನ ಸ್ನೇಹಿತರು ಲೇಖಕರು ಆದ ಮಂಜುನಾಥ್ ಕೊಳ್ಳೆಗಾಲ ... ಇವರಿಂದಲೇ ಪುಸ್ತಕದ ಬಿಡುಗಡೆ ಆಗಿದ್ದು. ಭಾವಸಿಂಚನದ ಸಾರ್ಥಕತೆ ಯಾದದ್ದು.

3K ತಂಡ ಇದಕ್ಕಾಗಿ ಪಟ್ಟ ಪರಿಶ್ರಮ ನನಗೆ ಗೊತ್ತಿದೆ! ಇವರನ್ನ ನನ್ನ ಅಣ್ಣ ತಮ್ಮಂದಿರು ಅಂತ ಹೇಳಿಕೊಳ್ಳೋಕೆ ನನಗೆ ಹೆಮ್ಮೆ. ಆ ರೀತಿಯ ಒಂದು ಬಾಂಧವ್ಯ 3K ಶೃಷ್ಟಿಸಿದೆ!
--------------
ಇನ್ನು ಹೇಳಿಕೊಳ್ಳೋಕೆ ಆಗದ ಒಂದು ಸಂದಿಗ್ಧವೆಂದರೆ : ಅತಿಥಿಗಳೊಡನೆ stage ಮೇಲೆ ಕೂರುವುದು! ಅವರ ಮುಂದೆ ಕೂರುವ ಯೋಗ್ಯತೆ ಇರಲಿ, ನಿಲ್ಲುವ ಅರ್ಹತೆ ಸಹ ಇಲ್ಲದವಳು. ಎಂಥದೋ ಮುಜುಗರವಾಗ್ತಿತ್ತು, ಇರದ ಗಾಂಭೀರ್ಯ ತಾನಾಗೆ ಬಂದು ಮುಖದ ಮೇಲೆ ಬಂದು ಕುಳಿತಿತ್ತು... ದೇವರೇ ನನ್ನ ಸ್ನೇಹಿತರು ಇದಕ್ಕೆ ಬಲವಂತ ಮಾಡದೆ ಹೋಗಿದ್ದರೆ ನಾನು ನಾನಾಗೆ ಇರಬಹುದಿತ್ತು... ಇದೆಂಥ ಸಂಕಟ .... ಅಲ್ಲಿ ಹೇಗೆ ಕೂರಬೇಕು.. ಕೈ ಕಟ್ಟಿಕೊಂಡು ಕೂರಬೇಕ? ಕೈ ಬಿಟ್ಟು ಕುಂತರೆ ತಪ್ಪಾಗುತ್ತ... ಇಲ್ಲಸಲ್ಲದ confidence ತುಂಬಿಸಿಕೊಂಡು.... ಅಲ್ಲಿ ಇಲ್ಲಿ ನೋಡಿಕೊಂಡು ತೋರ್ಪಡಿಸದೆ ವಿಶ್ವ ಪ್ರಯತ್ನ ಮಾಡುತಿದ್ದೆ... ಇನ್ನು ಉಳಿದಂತೆ - Hall ನಲ್ಲಿ ಕುಂತ ಜನರ ಪೈಕಿ - ಯಾರಾದರು "ಈ ಹುಡುಗಿಯನ್ನೆಕೆ ಇಲ್ಲಿ ಕೂರಿಸಿದರು" ಅಂತ ನಗಾಡಿರ್ತಾರ...

ಈ ರೀತಿಯ ಕಾರ್ಯಕ್ರಮ ನನಗೂ ಹೊಸತು... blog ಪ್ರಪಂಚಕ್ಕೆ ಹೊಸಬಳಲ್ಲದಿದ್ದರು ಹೆಚ್ಚಾಗಿ ಬ್ಲಾಗಿಸುವುದು ಆಗದು... ನನಗೆ ಸಮಯದ ಕೊರತೆ .... ಕಾರ್ಯಕ್ರಮಕ್ಕೆ ಬಂದಂಥ ಹಿರಿಯರಲ್ಲಿ Manikanth AR, Prakash ಹೆಗ್ಡೆ ಯಂಥವರು ... ಇವರ ಮುಖ ಪರಿಚಯ ನನಗಿಲ್ಲ! ಇವರ ಬಗ್ಗೆ ಕೇಳಿದ್ದೆ ಆದರು ಇವರ ಪರಿಚಯವಾದಾಗಲು ನನಗೆ ಗಲಿಬಿಲಿ .... ಇವರೇನಾ ಅವರು... ಅಥವಾ ನಾನು ಕೇಳಿಸಿಕೊಂಡಿದ್ದು ಸರಿಯೇ... ಯಾವುದಕ್ಕೂ ಹೇಗೆ react ಮಾಡೋದು ಅಂತ ತಿಳಿಯದೆ ಒದ್ದಾಡಿದ್ದುಂಟು...

ಇದೆಂಥ ಪರಿಸ್ಥಿತಿ - ಮುಂದೆ ಈ ರೀತಿ ಆಗಬಾರದು - ಯಾರು ಎಷ್ಟೇ ಬಲವಂತ ಮಾಡಿದರು stage ಹತ್ತುವ ಸಾಹಸ ಮಾಡ ಬೇಡ ಅಂತ ನನ್ನ ಮನಸಿಗೆ ನಾನೇ ಸಾಂತ್ವನ ಹೇಳಿಕೊಳ್ಳಬೇಕಾಯ್ತು... "ನೋಡ್ರಪ್ಪ : ಇನ್ನು ಮುಂದೆ ನನಗೆ ಯಾವುದಾದರು chocolate ಹಂಚುವ ಕೆಲಸಗಳಿದ್ದರೆ ಮಾತ್ರ ಹೇಳಿ, ಏನಾದ್ರೂ ಮೈಕ್ ಹಿಡಿದು ಮಾತನಾಡಲು ಹೇಳಿ, ಆದರೆ ಅತಿಥಿಗಳೊಡನೆ ಕೂರಲು ಮಾತ್ರ ಹೇಳಬೇಡಿ.. "
ಅಲ್ಲಿ ಅಮ್ಮ - ಚಿಕ್ಕಪ್ಪ ಎಲ್ಲರೂ ಕುಳಿತು ನೋಡುತಿದ್ದಾರೆ... ಅವರಮುಂದೆ ನಾನು ಇಲ್ಲಿ ಕುಳಿತಿರುವುದು ಯಾವ ಚಂದ!
ಹೇಗೆ ಅನ್ನಿಸಿತ್ತೋ ಹಾಗೆ ಬರೆದಿರುವೆ... ಅಷ್ಟೇ !

Wednesday, November 23, 2011

ಕನಸಾಗಿದೆ

ಕನಸಾಗಿದೆ
ಆಕಾಶವೆಲ್ಲ ಒಂದು ಹಾಳೆಯಂತೆ
ಪತ್ರವೊಂದು ನನಗೆಂದೆ ಅದರೊಳಗೆ ಬರೆದಂತೆ
ಮಡಚಿ ಮಡಚಿ ಅಂಗಯಲ್ಲಿ ಅವಚಿ
ಬೆನ್ನ ಹಿಂದೆ ಬಚ್ಚಿಟ್ಟುಕೊಂಡಂತೆ !
ಕನಸಾಗಿದೆ
ಮಲ್ಲಿಗೆ ಹೂದೋಟವೆಲ್ಲ ಸುಂದರ ಚಿಂತ್ರದಂತೆ
ಗುಲಾಬಿಯೊಂದು ಅದರೊಳಗೆ ಬಿರಿದಂತೆ
ಕದ್ದ ಗುಲಾಬಿಯು ತೋರ್ಬೆರಳ ಚುಚ್ಚಿದರು
ನನಗೆಂದೆ ಕಿತ್ತು ಅವಿತಿಟ್ಟು ಕೊಂಡಂತೆ !
ಕನಸಾಗಿದೆ
ಕಡಲೆಲ್ಲ ಮನೆಯಂಗಳದಿ ಹರಿವ ನೀರಂತೆ
ಕಾಗದದ ದೋಣಿಗಳ ಹರಿಬಿಟ್ಟಂತೆ
ಕಡಲೊಳಗೆ ಧುಮುಕಿ ಮುತ್ತೊಂದ ಹೆಕ್ಕಿ
ದೋಣಿಯೊಳಗಿಟ್ಟು ನನ್ನೆಡೆ ರವಾನಿಸಿದಂತೆ !
ಕನಸಾಗಿದೆ
ದೊಡ್ಡ ಹನಿಗಳ ಪುಟ್ಟ ಮಳೆಯೊಂದು ಸುರಿವಂತೆ
ಕೊರೆವ ಛಳಿಯ ಮರೆತು ನೆನೆದಿರುವೆ ಮನಬಂದಂತೆ
ಸಣ್ಣ ಜ್ವರವೊಂದು ಕಂಪಿಸಿ ಕಾಡಿದರು
ಕೊಡೆಹಿಡಿದು ಕೈಯಲ್ಲಿ ನನ್ನನ್ನು ನಡೆಸಿದಂತೆ !
ಕನಸಾಗಿದೆ
ಮಾತುಬಾರದೆ ಬಿಕ್ಕಳಿಸಿ ಅಳುವಂತೆ
ಗಾಯ ಹೃದಯ ಮತ್ತೊಮ್ಮೆ ಯಾರೋ ತರಚಿ ಹೋದಂತೆ
ಮುಲಾಮು ಎಲ್ಲಿದೆ ಈ ನೋವಿಗೆ
ದೇವರೇ ಬಿಕ್ಕಳಿಸುತ್ತ ಕುಳಿತಂತೆ !

Wednesday, August 3, 2011

ಉಳಿದದ್ದು ನನಗೆ ಬಿಡು ....

ಮುಂಜಾವು...ಮಂಜು .....
ಇಲ್ಲಿದೆ ನವಿರ ಭಾವ...ಎಲೆ-ಮರ-ಗಿಡ-ಹೂ-ದುಂಬಿಗಳ ತಾಜಾ ಉಸಿರಾಟ
ಮುದ್ದು ಚಿಲಿ-ಪಿಲಿಗಳ ಸಣ್ಣ ದನಿಯ ಪಿಸುಮಾತು
ಆಗಷ್ಟೇ ಜನಿಸಿದ ಎಳೆ ಬಿಸಿಲುಹಸಿರು,
ಹೊಳೆಯುತ್ತಿರುವ ಬಿಂದು
ಎಲ್ಲೆಡೆ ನವೋನ್ಮಯ .........
ಆಹಾ! ಹೊಸ ಹುರುಪಿನ ಈ ದಿನ
ನನ್ನ ಜಗತ್ತೆಲ್ಲ ಅರಳಿದ ನವೊಲ್ಲಾಸ
ಇದಕೆಲ್ಲ ಯಾರು ಕಾರಣ
ನಿನ್ನ ಮೋಹಕ ನಸುನಗೆ?
ಆಗಿದ್ದಲ್ಲಿ, ಹೀಗೆಯೇ - ದಿನಕೊಮ್ಮೆ , just ಒಮ್ಮೆ
ನನ್ನ ನೋಡಿ ನಕ್ಕುಬಿಡು ....
ಉಳಿದದ್ದು ನನಗೆ ಬಿಡು ....

Tuesday, January 11, 2011

ಮೊದಲ ಹನಿಗಳು ...

ನೆನಪು
ನೀನಿದ್ದಾಗಲು - ಇರದಿದ್ದಾಗಲು ಕಾಡುತ್ತಿರುವ ನಿನ್ನ ಹಳೆಯ ಪ್ರೀತಿಯ ವರಸೆ !
ಪ್ರ(ಯತ್ನ)
ಮುರಿದ ಗೊಂಬೆಯ ಕೈ ಕಾಲು ಜೋಡಿಸಲು ವರುಷಗಳಿಂದ ಯೆಣಗಾಡುತ್ತಿರುವ ರೀತಿ !
ಕುರುಡು
ತಪ್ಪೆಂದು ತಿಳಿದರು ಅದೇ ನಿಟ್ಟಿನಲ್ಲಿಡುತ್ತಿರುವ ಹೆಜ್ಜೆ !

Friday, July 30, 2010

ವರ್ಣರoಜಿತ ಖಾಲಿ ಚಿತ್ರ

ಚಿತ್ರ ಬಿಡಿಸಲು ಕುಳಿತಾಗ, ಬಗೆಬಗೆಯ ಊಹೆಗಳಿತ್ತು,
ಕುಂಚ ಲೋಕಕ್ಕೆ ಲಗ್ಗೆ ಇಟ್ಟು, ಸ್ವರ್ಣಚಿತ್ತಾರವ ಮನದಲಿ ನೆನೆದು!
ಪ್ರೇಮ ಪರವಷಳಾಗಿ ಬಿಡಿಸಿದ ಚಿತ್ರ,
ಖಾಲಿ ಖಾಲಿ ಎಂದೇಕೆ ಅನಿಸಿದ್ದು?

ಮೆಲುಕಿ ಹಾಕಿ, ಎಳೆ ಎಳೆಯಾಗಿ ಸುರಿದ ಬಣ್ಣಗಳ ರಾಶಿ,
ಹಾ! ಹಸಿರು, ಬಿಳಿ, ನೀಲಿ.... ಇದೊಂದು ಸುಪ್ತವರ್ಣಗಳ ಕಾಶಿ!
ನೋಡುಗರು ನಿಬ್ಬೆರಗಾದರೂ,
ಖಾಲಿ ಖಾಲಿ ಎಂದೇಕೆ ಅನಿಸಿದ್ದು?

ಚಿತ್ರ ರಸಿಕರ ಕಣ್ಸೆಳೆದು, ಕಲೆ-ಆರಾಧಕರ ಮನಗೆದ್ದು,
ವಿಮರ್ಶಕರ ಕಿಚ್ಚಿಗೆ ತುತ್ತಾಗಿ..,
ಮೋಹಕವಾಗಿ ಬೆಳೆದಿದ್ದು!ವರ್ಣರoಜಿತ - ಸ್ವರ್ಣಸಂಚಿತವಾದರೂ,
ಖಾಲಿ ಖಾಲಿ ಎಂದೇಕೆ ಅನಿಸಿದ್ದು?

ಹಸಿರು ಒಣಗಿದ ಹುಲ್ಲಿನಂತೆ, ಬಿಳಿ ಬಿಳಿಚಿದ ಸುಣ್ಣದಂತೆ,
ನೀಲಿ ನರಳಿ ನುಸುಳಿದಂತೆ!! ಮಾಸಿದಂತಿದೆ ಮನಸಿನ ಬಣ್ಣಗಳು?
ಪ್ರೀತಿಸಿ, ಪೋಷಿಸಿ, ಮುದ್ದಿಸಿ ಬರೆದದ್ದು,
ಕೊನೆಗೂ ಖಾಲಿ ಖಾಲಿ ಎಂದೇಕೆ ಅನಿಸಿದ್ದು?

Quietly Done!

Quietly Done! Off late, I've been choosing my circle, selective and true. Just a few connections who actually shine and comfort me throu...