Thursday, April 24, 2014

ಮಿತಿ


ಭಾಗ (೧) : ಪ್ರಕಾಶ್ ಹೆಗಡೆಯವರ "ಬೇಲಿ" http://ittigecement.blogspot.in/2014/04/blog-post.html
ಭಾಗ (೨) :  ದಿನಕರ್ ಮೋಗೆರರವರ "ದಣಪೆ" http://dinakarmoger.blogspot.in/2014/04/blog-post_14.html  
ಭಾಗ (೩) : ಬಾಲು ಸರ್ ರವರ "ಎಲ್ಲೆಯ ಮಿಂಚು" http://nimmolagobba.blogspot.in/2014/04/blog-post_1912.html
ಭಾಗ (೪) :  "ಮಿತಿ" ಎಂದು ಮುಂದುವರೆಸುವ ನನ್ನ ಪುಟ್ಟ ಪ್ರಯತ್ನ: 


ಅಲ್ಲಿಂದ ಮನೆಯ ಹಾದಿ ಹಿಡಿದು ಹೇಗೆ ಬಂದೆನೋ! ಬಂದೊಡನೆ ಏನೊಂದು ಭಾವವಿಲ್ಲದೆ ಮೂಖಿಯಂತೆ ಕುಳಿತುಬಿಟ್ಟೆ. ಫ್ಯಾನಿನ ಗಾಳಿ ಜೋರಾಗಿ ಬೀಸುತಿದ್ದರೂ ಬೆವರುತ್ತಿದ್ದೆ. ನನ್ನ ಬಗ್ಗೆ ನನಗೆ ನಾಚಿಕೆ, ಕೀಳರಿಮೆ. ಪತಿಯ ಪ್ರಾಮಾಣಿಕತೆ  ಆ ಘಳಿಗೆಯನ್ನು  ಎಚ್ಚರಿಸಿತ್ತು. ಅವರ ನಿಷ್ಕಲ್ಮಷ ಪ್ರೀತಿಗೆ ಎಷ್ಟೊಂದು ಶಕ್ತಿಯಿದೆ ಎಂದು ಗ್ರಹಿಸಿರಲಿಲ್ಲ. ನಾನು ಮಾರುಹೋದೆ!

ನವಿರಾದ ಭಾವಗಳು 
ಹಸೆಮಣೆಯ ಕನಸಂತೆ 
ಮದುಮಗನ ಮುಗುಳ್ನಗೆ 
ಮನಸದುವೆ ಸೋತಂತೆ 
ನವ-ನವೀನ ಬಯಕೆಗಳು 
ಅವಕಿಲ್ಲ ಮಿತಿಯಂತೆ!

ಅಲ್ಲಿಯ ತನಕ ಆ ನನ್ನ ಗೆಳೆಯನಿಗಾಗಿ  ಹಂಬಲಿಸಿದ್ದೆ, ಮನಸಿನಲ್ಲೇ ಮೋಹಿಸಿದ್ದೆ, ಎಲ್ಲೆಲ್ಲೂ ಅವನೇ ಆವರಿಸಿಕೊಂಡಿದ್ದ! ನನಗಾದರೂ ಯಾವ ಮಂಕು ಬಡಿದಿತ್ತೊ? ಆ ಸಮಯದಲ್ಲಿ ಇವರು ಫೋನ್ ಮಾಡದೆ ಇದ್ದಿದ್ದರೆ! ಅಬ್ಭಾ..! ಊಹೆಯೂ ಸಹ ತಲೆ ತಗ್ಗಿಸುವಂತೆ ಮಾಡಿದೆ. 

ಅದೆಷ್ಟು ಹೊತ್ತು ಹಾಗೆ ಶವದಂತೆ ಕುಳಿತಿದ್ದೆನೋ, ಪಕ್ಕದ ಮನೆಯ ಚಿಂಟು ನಮ್ಮ ಮನೆಯ ಬಾಗಿಲು ಬಡಿದಾಗಲೆ ಎಚ್ಚರವಾಗಿದ್ದು. ಅವನನ್ನ ನೋಡಿದೊಡನೆ, ತವರಿನಲ್ಲಿರುವ ನನ್ನ ಮಗಳ ನೆನಪಾಯ್ತು, ದುಖ-ಅಳು ಇಮ್ಮಡಿಯಾಗಿ ಇನ್ನಷ್ಟು ಬಿಕ್ಕಳಿಸಿದೆ. ಇನ್ನಷ್ಟು ಮರುಗಿ ಹೋದೆ. 

ಆ ಕ್ಷಣದಲ್ಲಿ ನನ್ನ ಗಂಡನ ತೋಳ ತೆಕ್ಕೆ ಬೇಕೆನಿಸಿತ್ತು. ಅಂದಿನವರೆಗೂ ಅವರ ನಿಷ್ಕಲ್ಮಷ ಪ್ರೀತಿಯ, ಔದಾರ್ಯದ, ಅಪ್ಪುಗೆಯ ಮಹತ್ವ ನನ್ನ ಅರಿವಿಗೆ ಇರದೇ ಹೋದದ್ದು ವಿಪರ್ಯಾಸ. ನಮ್ಮ ಮಗುವಿನ  ಹೆರಿಗೆಯ ಸಮಯ, ಪ್ರಸವ ವೇದನೆಯ ಜೊತೆ ನನ್ನ ಜೀವ ಉಳಿಯುವುದೂ ಕ್ಲಿಷ್ಟವೇ ಆಗಿದ್ದ ಸಮಯ. ನನಗಾಗಿ, ನಮ್ಮ ಮಗುವಿಗಾಗಿ ಗುರುರಾಯರಲ್ಲಿ ಉರುಳು ಸೇವೆ ಮಾಡುವೆನೆಂದು ಹರಕೆ ಹೊತ್ತಿದ್ದರು. ಆಸ್ಪತ್ರೆಯಲ್ಲಿ ಇದ್ದ ಮೇರಿ ಮಾತಾಳ ಪ್ರತಿಮೆಯ ಮುಂದೆ 101 ಮೊಂಬತ್ತಿ ಬೆಳಗುವುದಾಗಿ ಬೇಡಿಕೊಂಡಿದ್ದರು. ನಾ ತಾಯಾಗಿ ಸಂಭ್ರಮಿಸಿದ್ದಕ್ಕಿಂತ ಹೆಚ್ಚಾಗಿ ಅವರು ತಂದೆಯಾಗಿ - ನನ್ನ ಪತಿಯಾಗಿ ಸಂಭ್ರಮಿಸಿದ್ದರು. ಎಲ್ಲವನ್ನೂ ನಾ ಹೇಗೆ ಮರೆತುಬಿಟ್ಟೆ? ಆ ಮನೆ - ಮನ ಒಡೆಯುವ ಕಾಯಕಕ್ಕೆ ಇವು ನೆನಪು ಬಾರದೆ? 

ನನ್ನ ತವರು ಮನೆಯ ನೆನಪೂ ಸಹ ಆಗುತ್ತಿದೆ! ಅಪ್ಪ ಅಮ್ಮನಲ್ಲಿ ಅಷ್ಟಾಗಿ ಹೊಂದಾಣಿಕೆ ಇರಲಿಲ್ಲ ಹೌದು. ಆದರು ಅವರು ಒಬ್ಬರಿಗಾಗಿ ಒಬ್ಬರು ಬಾಳಿದ್ದರು, ಬದುಕಿದ್ದರು. ಯಾರೊಬ್ಬರು ಮನೆಯಲ್ಲಿ ಇಲ್ಲದಿದ್ದರೂ ಒಬ್ಬರನ್ನೊಬ್ಬರು ಅತಿಯಾಗಿ ಮಿಸ್ ಮಾಡಿಕೊಳ್ಳುತಿದ್ದರು, ಏನನ್ನೋ ಕಳೆದುಕೊಂಡವರಂತೆ ಆಡುತಿದ್ದರು. ಪ್ರೀತಿ ಆಮೇಲೆ, ಜಗಳವಾಡಲೂ ಸಹ ನಿಮ್ಮಮ್ಮ ಇಲ್ಲವಲ್ಲ ಅಂತ ಹೇಳುತಿದ್ದ ಅಪ್ಪನ ಮಾತು ಈಗ ನೆನಪಾಗುತ್ತಿದೆ. ಅಪ್ಪನಿಗಾಗಿ ಅಮ್ಮ ಅನುಸರಿಸಿಕೊಂಡು ಹೋಗುತಿದ್ದ ಸಹನೆಯ ರೀತಿ ನೆನಪಾಗುತ್ತಿದೆ. ಇವರ ಸಂಸ್ಕಾರವೇ ಅಲ್ಲವೇ ನನಗೆ. ಯಾಕೋ ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ. 

ಅಷ್ಟಕ್ಕೂ ನನ್ನ ಸಂಸಾರವನ್ನು ಹೋಲಿಸಿಕೊಂಡರೆ, ನಾನೆಷ್ಟು ಪುಣ್ಯವಂತೆ! ಎಂದಾದರೊಮ್ಮೆ ಅಪ್ಪಿ ತಪ್ಪಿ ಜೋರಾಗಿ ಗದರಿದರು, "ತಪ್ಪಾಯ್ತು ಕಣೆ" ಅಂತ ಗೋಗರಿಯುತ್ತಿದ್ದ ನನ್ನ ಪತಿಯ ಅಗಾಧ ಪ್ರೀತಿ ನಾನೇಕೆ ತಿಳಿಯದೆಹೋದೆ? ಹಣ ಖರ್ಚು ಮಾಡುವ ವಿಷಯದಲ್ಲೂ ಎಂದೂ ಸಾಕೆನ್ನಲಿಲ್ಲ. ದೇವರ ಕರುಣೆಯಿಂದ ಮಾಡಿದಂತ ಸಂಸಾರ ನನ್ನದು. ನಮ್ಮ ಜೋಡಿಯನ್ನು, ಸಂಸಾರವನ್ನು ನೋಡುತಿದ್ದ ನಮ್ಮ ಸಂಬಂಧಿಕರು  "ನಿಮ್ಮ ಜೋಡಿ ಹೀಗೆ ನೂರ್ ಕಾಲ ಇರಲಿ" ಅಂತ ಹರಸಿದ್ದುಂಟು, ಸ್ನೇಹಿತೆಯರು ಹೊಟ್ಟೆಕಿಚ್ಚು ಪಟ್ಟಿದ್ದುಂಟು. ಎಲ್ಲ ಸುಗಮವಾಗಿ ಸರಾಗವಾಗಿ ನಡೆಯುವಾಗ ಈ ಹುಚ್ಚಾಟ ನನಗೆ ಬೇಕಿತ್ತೆ? ಈ ಸ್ವಚ್ಚಂದ - ಚೇಷ್ಟೆ ನನ್ನ ಬದುಕಿನ ದಿಕ್ಕನ್ನೇ ಬದಲಾಯಿಸಲು ಹೊರಟಿತ್ತು.
ಸರಿ-ತಪ್ಪುಗಳ ಸೆರೆ 
ಬಲಿಯಾದ ಅಸ್ತಿತ್ವ 
ಬದಲಾದ ಸಂಬಂಧ 
ಬರಿದಾದ ವ್ಯಕ್ತಿತ್ವ 
ಸೆಲೆ, ಸಂಕೋಲೆ 
ಬೇಕಿತ್ತು ವಯಸ್ಸಿಗೆ, ಮನಸಿಗೆ!

ಯಾಕೋ ಎಲ್ಲವನ್ನು ಅವರ ಬಳಿ ಹೇಳಿಕೊಳ್ಳಬೇಕೆನಿಸಿದೆ. ಅವರಲ್ಲಿ ಕ್ಷಮೆ ಕೇಳಬೇಕು. ಈ ಪಾಪ ಪ್ರಜ್ಞೆಯಿಂದ ಹೊರಬರಬೇಕು. ಆ ದೇವರಿಗಿಂತ ಎತ್ತರವಾಗಿ ಕಾಣ್ತಿದ್ದಾರೆ ಅವರು. ನನ್ನ ಮಾತು ಆಲಿಸ್ತಾರೆ, ಹಾಂ ಆಲಿಸ್ತಾರೆ, ನಂಗೊತ್ತು,  ಅವರದು ದೊಡ್ಡ ಮನಸು, ನನ್ನ ಕ್ಷಮಿಸ್ತಾರೆ ಸಹ. ದೇವರ ದೀಪ ಹಚ್ಚಿದೆ, ಆ ದೀಪಗಳಿಂದ ಹೊಮ್ಮುತಿದ್ದ ಬೆಳಕು ಹೊಸದಾಗಿ ಪ್ರಕಾಶಿಸುತ್ತಿದೆ, ಎಲ್ಲವೂ ಮತ್ತೊಮ್ಮೆ ಹೊಸದಾಗಿ ಶುರು ಮಾಡಬೇಕು. 

ಹೀಗಂದುಕೊಳ್ಳುವಾಗಲೇ, ಮೊಬೈಲಿಗೆ ಅವರ ಮೆಸೇಜ್, "Have Your Dinner Chinnu, I Will Be Late Tonight".....  ಆ ಮೊಬೈಲಿಗೊಂದು ಮುತ್ತಿಟ್ಟೆ. ಅವರಿಗಾಗಿ ಕಾಯುತ್ತ ಸೋಫಾದ ಮೇಲೆ ಕುಳಿತಿದ್ದವಳು ಹಾಗೇ ಮಲಗಿಬಿಟ್ಟೆ. 

ಕಣ್ಣು ಬಿಟ್ಟಾಗ ಬೆಳಗಿನ ಐದು ಗಂಟೆ! ನನ್ನ ತಲೆಯ ಕೆಳಗೆ ದಿಂಬು? ಅವರು ಆಗಲೇ ಬಂದಾಗಿದೆ! ರಾತ್ರಿಯ ಯಾವ ಹೊತ್ತಿನಲ್ಲಿ ಬಂದರೋ, ರೂಮಿನ ಕಡೆ ನಡೆದೆ. ಅವರನ್ನೊಮ್ಮೆ ಅಪ್ಪಿಕೊಳ್ಳಬೇಕಿತ್ತು. ಮನಸಾರೆ ಅತ್ತು ಎಲ್ಲವನ್ನು ಹೇಳಬೇಕಿತ್ತು.  ನನ್ನ ಮನಸಿನ ಹೊರೆ ಇಳಿಸಿಕೊಳ್ಳಬೇಕಿತ್ತು. ಗಾಢ ನಿದ್ರೆಯಲ್ಲಿದ್ದಾರೆ, ಹೇಗೆ ಎಬ್ಬಿಸೋದು...ಇನ್ನಷ್ಟು  ಮಲಗಲಿ.  

ಅಡುಗೆ ಮನೆಯ ಕಿಟಕಿಯಿಂದ ಇಣುಕಿದ ಸೂರ್ಯನ ಕಿರಣ ಈ ದಿನ ಹೊಸ ಬದುಕನ್ನು ಕಟ್ಟಿ ಕೊಟ್ಟಂತೆ ಭಾಸವಾಗಿದೆ. ಇನ್ನು ಇವರು ಮಲಗೇ ಇದ್ದಾರೆ ಎಂದುಕೊಂಡು ಬಂದೆ, ಅರೆ ಇದೇನಿದು ಇಷ್ಟು ಬೇಗ ರೆಡಿ ಆಗ್ತಿದ್ದಾರೆ....., "ರೀ ನಿಮ್ಮ ಹತ್ರ ಮಾತಾಡಬೇಕಿತ್ತು, " ಎನ್ನುವಷ್ಟರಲ್ಲಿ, "ಚಿನ್ನು ನಾ ಆಫೀಸಿಗೆ ಹೊರಡಬೇಕು, ತುಂಬಾ ಅರ್ಜೆಂಟ್ ಕೆಲಸವಿದೆ ಬಂದು ಮಾತಾಡ್ತೀನಿ" ಅಂತ ಹೇಳಿ, ತಿಂಡಿಯೂ ತಿನ್ನದೇ ತಮ್ಮ ಲ್ಯಾಪ್-ಟಾಪ್ ಬ್ಯಾಗ್ ಹಿಡಿದು ಹೊರಟೇ ಬಿಟ್ಟರು. ಇರಲಿ, ಸಂಜೆ ಬಂದೆ  ಬರ್ತಾರೆ ಎಲ್ಲಿಗೆ ಹೋಗ್ತಾರೆ ಅಂದುಕೊಂಡು ಅವರಿಗೆ ಬೀಳ್ಕೊಟ್ಟೆ. 

ಡೈನಿಂಗ್ ಟೇಬಲ್ಲಿನ ಮೇಲೆ ಇವರ ಮೊಬೈಲ್ ರಿಂಗ್ ಆಗುವ ಶಬ್ದ, ಅರೆ ಇವರು ಗಡಿಬಿಡಿಯಲ್ಲಿ ಮೊಬೈಲ್ ಇಲ್ಲೇ ಬಿಟ್ಟು ಹೋದಂತಿದೆ. ನೋಡಬೇಕೆನಿಸದಿದ್ದರು, ಮೇಲಿಂದ ಮೇಲೆ ಬರುತಿದ್ದ ಮೆಸೇಜ್ಗಳ ಹಾವಳಿ ಒಮ್ಮೆ ನೋಡುವಂತೆ ಮಾಡಿತ್ತು. ಆ ಮೊಬೈಲ್ ಕೈಗೆತ್ತಿಕೊಂಡು ನೋಡುತಿದ್ದಂತೆ............ಕುಸಿದೆ.......... ಕುಸಿದು ಬಿದ್ದೆ........... ನನ್ನ ಲೋಕ ತಲೆಕೆಳಗಾದಂತೆ ಕುಸಿದು ಬಿದ್ದೆ!!!!!!

Saturday, April 5, 2014

ದೇವರ ಹೂ



Inline image 1

ಶಾನಭೋಗರ ಮನೆಯಲ್ಲಿಂದು ವಿಶೇಷ ಪೂಜೆ. ಎ೦ದಿನ೦ತೆ ಕೆ೦ಚಿ ಹೊ ಬುಟ್ಟಿ ಹೊತ್ತು ಅವರ ಮನೆಯ ಕಡೆ ಹೊರಟಳು. 

"ಎಷ್ಟೊತ್ತೆ ಕೆ೦ಚಿ! ಹೂ ತ೦ದ್ಯಾ?"....
"ಅಲ್ಲೇ ಇಡು. ಅಲ್ಲೇ, ಅಲ್ಲೇ. ಎರಡು ಹಾರ ಜಾಸ್ತಿ ತ೦ದಿದ್ದೀ ತಾನೆ? ತುಳಸಿ ಮಾಲೆ ಬೇರೆಯಾಗಿ ಕಟ್ಟಿದ್ದೀಯ? ನಿ೦ಗೆಷ್ಟು ಸರ್ತಿ ಹೇಳೋದು, ಹೂ ತ೦ದಾಗ ದೂರದಿ೦ದ್ಲೆ ಆ ಟೇಬಲ್ ಮೇಲಿಡು ಅ೦ತ".... "ಬ೦ದಾಗ್ಲೆಲ್ಲ ಅದೂ ಇದೂ ಮುಟ್ಕೊ೦ಡೇ ಹೋಡಾಡ್ತೀಯ!", ಕೆ೦ಚಿಯ ಕಡೆ ದುರದುರನೆ ನೋಡಿ ಗೊಣಗಾಡಿದರು ಶಾ೦ತಮ್ಮ.

"ಇನ್ನೂ ಇಲ್ಲೇ ನಿ೦ತಿದ್ದೀಯ? ದುಡ್ಡು ನಾಳೆ ತಗೊ, ಎಲ್ಲ್ರೂ ಬರೊ ಹೊತ್ತಾಯ್ತು ಹೊರಡು", ಅ೦ತ ಮತ್ತೊಮ್ಮೆ ಗುಡಗಿದರು ಶಾ೦ತಮ್ಮ.

"ಇಲ್ಲಾ ಅಮ್ಮೋರೆ, ಮಗಳ ಪೀಸ್ ಕಟ್ಬೇಕು ಇಸ್ಕೂಲಿ೦ದ ವಾಪಸ್ ಕಳ್ಸೋರೆ, ಈ ತಿ೦ಗಳ್ದು ಪೂರ್ತಿ ಈಗ್ಲೆ ಕೊಟ್ಬಿಡಿ, ಈವೊತ್ತಿ೦ದು ತಿ೦ಗಳ್ದು ಎಲ್ಲಾ ಸೇರಿ 900 ಆಯ್ತು",  ಅ೦ತ ದೃಢವಾಗಿ ಅಲ್ಲಿಯೇ ನಿ೦ತಳು ಕೆ೦ಚಿ.

"ಅದ್ಯಾಕೆ ಆ ವಯ್ಯಾರ, ಸರಿಯಾಗಿ ಕೇಳು. ಇನ್ನೊ೦ದ್ಸರ್ತಿ ಮನೇಲಿ ಎಲ್ಲಾ ಮುಟ್ಕೊ೦ಡು ಹೋಡಾಡ್ಬೇಡ ಆಯ್ತ, ಬ೦ದಾಗೆಲ್ಲ ಎರಡೆರಡು ಕೆಲ್ಸ ಕೊಡ್ತೀಯ, ಮಡಿ-ಮೈಲಿಗೆ ಒ೦ದೂ ಇಲ್ಲ", ಬೈದಾಡಿಕೊ೦ಡೇ ಒಳಗಿನಿ೦ದ ದುಡ್ಡು ತ೦ದು ಟೇಬಲ್ ಮೇಲಿಟ್ಟರು ಶಾ೦ತಮ್ಮ.


"ದ್ಯಾವ್ರೆ! ಆ ಕುಡ್ಕನ್ ಕಣ್ಗೆ ಬೀಳೋಕಿನ್ಮು೦ಚೆ ಈ ದುಡ್ಡಿಗೇನೇನ್ ಬರ್ತದೊ ಎಲ್ಲಾ ತಕ್ಕೊ೦ಡು ಮನೀಕಡೆ ಹೊಳ್ಟೋಗ್ಬೇಕು", ಅ೦ತ ಗ೦ಡನನ್ನ ಶಪಿಸಿಕೊ೦ಡು ಬಶೀರಣ್ಣನ ಅ೦ಗಡಿಯ ಕಡೆ ನಡೆದಳು ಕೆ೦ಚಿ.

ಮನೆ ತಲುಪಿದಾಗ ಚಾಪೆ ಮುದುರಿಕೊ೦ಡು ಕುಳಿತಿದ್ದ ಕೆ೦ಚಿಯ ಮಗಳು, "ಇವತ್ತಾದ್ರು ಅಮ್ಮೋವ್ರಿಗೆ ಹೇಳಿದ್ಯಾ ಅಮ್ಮಯ್ಯ?" ಅ೦ತ ಸಣ್ಣದಾಗಿ ಕೇಳಿದಳು. "ಇಲ್ಲಾ ಮಗ, ಅವ್ರಿಗೆ ಹೇಳ್ದೆ ಅ೦ತಿಟ್ಕೊ ಇನ್ನ ಮಡಿ, ಮೈಲ್ಗೆ, ಅನಿಷ್ಟ ಅ೦ತ ಹನ್ನೊ೦ದು ದಿನಾನೊ ಹದ್ಮೂರ್ ದಿನಾನೊ ನಮ್ತಾವ ಹೂವೇ ತಕ್ಕಳಲ್ಲ. ಸೂತ್ಕ ತೆಗಿಯೋಗ೦ಟ ಮನೆಗೆ ಬರ್ಬೇಡ ಅ೦ತಾರೆ. ಇವತ್ತು ಪೆಶಲ್ ಪೂಜೆ, ವರ್ತನೆ ಹೂಗಿ೦ತ ದಾಸ್ತಿನೇ ಕೇಳಿದ್ರು, ನಾನೇನಾರ ಹಿ೦ಗೆ ಅ೦ದಿದ್ರೆ ಇದ್ನೂ ಬೇಡ ಅ೦ತ ಬುಟ್ಬುಡ್ತಿದ್ರಷ್ಟೇಯಾ.  ನೀನು ಅದ್ನೆಲ್ಲಾ ಯೋಚ್ನೆ ಮಾಡ್ಬೇಡ ಬುಡು, ಮುತ್ತೈದೇರ್ಗೆ ಹೇಳಿವ್ನಿ, ಎಲ್ರೂ ಬ೦ದು ನಿ೦ಗೆ ಆರ್ತಿ ಮಾಡ್ತವ್ರೆ. ನಿ೦ಗಿನ್ನು ಹಸಿ ಮೈ, ಎಲ್ಲ೦ದ್ರಲ್ಲಿ ಕೂರ೦ಗಿಲ್ಲ, ಸಿಕ್ಕಿದ್ನೆಲ್ಲ ತಿನ್ನ೦ಗಿಲ್ಲ ಆತಾ", ಅ೦ತ ತನ್ನ ಮುದ್ದಾದ ಕರುಳ ಬಳ್ಳಿಯ ಕಡೆ ಮಮತೆಯ ನೋಟ ಬೀರಿದಳು. 

ಅಷ್ಟಕ್ಕೇ ಸುಮ್ಮನಿರದ ಮಗಳು, "ನೀ ಹಿ೦ಗೆಲ್ಲ ಮಾಡಿದ್ರೆ ದ್ಯಾವ್ರಿಗೆ ಕೋಪ ಬರ೦ಗಿಲ್ವ ಅಮ್ಮಯ್ಯ?" ಅ೦ತ ತನ್ನ ಕುತೂಹಲ ಹೊರಗಿಟ್ಟಳು."ಬರ್ತದೆ, ಕೋಪಾನು ಬರ್ತದೆ, ಶಾಪಾನು ಕೊಡ್ತಾನೆ. ಅದೆಲ್ಲಾ ನ೦ಗೆ ತಾನೆ, ನಿ೦ಗಲ್ವಲ್ಲ ಬುಡು."

"ದ್ಯಾವ್ರ ಪಾದಕ್ಕೆ ಸೇರಿದ್ಮೇಲೆ ಎಲ್ಲಾ ಹೂವು ಮಡಿ ಆಗೋಗ್ತದೆ", ಅ೦ತ ಹೇಳಿಕೊ೦ಡು ಬಶೀರಣ್ಣನ ಅ೦ಗಡಿಯಿ೦ದ ತ೦ದ ಸಾಮಾನುಗಳ ಕಡೆಗೆ ಕಣ್ಣಾಡಿಸುತ್ತ ಕು೦ತಳು ಕೆ೦ಚಿ.

*  *  *  *  * 
ಶಾನಭೋಗರ ಪೂಜೆ, ಶಾ೦ತಮ್ಮನ ಮಡಿ, ಅಮ್ಮನ ಅಸಹಾಯಕತೆ - ಮಮತೆ ಇವುಗಳ ನಡುವೆ ಆ ದೇವರ ಹೂವು......... 

Wednesday, March 5, 2014

ಹೀಗೊಂದು ಮಹಿಳಾ ದಿನಾಚರಣೆ!!

ಈ ದಿನ ಎಂದಿಲ್ಲದ ಕೆಲಸ ಮನೆಯಿಂದಲೇ ಮೊದಲಾಗಿತ್ತು, ಅನಿರೀಕ್ಷಿತ ನೆಂಟರು - ಅತಿಥಿ ದೇವೋಭವ! ನಿನ್ನೆ ಸಂಜೆ ಆಫೀಸಿನಿಂದ ಹೊರಟಾಗ ತಡವಾಗಿ ಉಳಿದ ಕೆಳಸಗಳೆಲ್ಲ ಬದಿಗಿಟ್ಟು ಬಂದಿದ್ದೆ. ಈ ದಿನ ಮನೆಯಿಂದಲೇ ವಿಳಂಬ. ಹೊರಟಾಗ ನಿನ್ನೆ  ಸಂಜೆ ಮಾಡದೆ ಬಿಟ್ಟು ಬಂದ ಆಫೀಸಿನ ಕೆಲಸಗಳು ನೆನಪಾದವು, ಆತುರತುರವಾಗಿಯೇ ಆಟೋ ಹಿಡಿದು ಕಚೇರಿಗೆ  ಹೊರಟೆ.

Happy Womens Day 2012 04

ಆಫೀಸಿಗೆ ಹೆಜ್ಜೆ ಇಡುತಿದ್ದಂತೆ, "ಹ್ಯಾಪಿ ವಿಮೆನ್ಸ್ ಡೇ ಮೇಡಂ" ಅಂತ ಸೆಕ್ಯೂರಿಟಿಯ ನಗುಮೊಗದ ಸಲಾಮು! ಬ್ಯಾಗಿನಿಂದ ಆಕ್ಸಿಸ್ ಕಾರ್ಡ್ ತೆಗೆಯುತ್ತಲೇ ಒಂದು ಸ್ಮೈಲ್ ಕೊಟ್ಟು "ಥ್ಯಾಂಕ್ಸ್ ವೇಲು", ಅಂತ ಹೇಳಿ ಒಳಗೆ ನಡೆದೆ.  ಈ ದಿನ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ!  ನನ್ನ ಟೇಬಲ್ಲಿನ ಮೇಲೆ ಒಂದು ಕೆಂಪು ರೋಜ ಹೂ ಒಂದು ಗ್ರೀಟಿಂಗ್ ಕಾರ್ಡು. "Happy Women's Day To Smt. Roopa Satish, from Admin Staff" ಅಂತ ಬರೆದಿತ್ತು. ಹೂ ಇಷ್ಟವಾಯ್ತು-ಹಾಗೆಯೇ ನನ್ನ ಆಫೀಸಿನ ಸ್ಟಾಫ್ ಗಳ ಆತ್ಮಿಯತೆಯೂ! ಗಾಜಿನ ಪುಟ್ಟ ಬಟ್ಟಲಿನೊಳಗೆ ನೀರು ತುಂಬಿಸಿ ಹೂವಿನ ಕಡ್ಡಿ ಮುರಿದು ಅದರೊಳಗೆ ತೇಲಿ ಬಿಟ್ಟೆ. ಇನ್ನು ಮೇಲ್ ಬಾಕ್ಸ್ ತುಂಬಾ ವಿಶೇಷವಾದ ಶುಭ ಸಂದೇಶಗಳು. ಅದರಲ್ಲಿ ಮನಸೆಳೆದ ಒಂದು ಸಂದೇಶ ನಮ್ಮ ಆಫೀಸಿನ ಹಿರಿಯರಲ್ಲಿ ಒಬ್ಬರಾದ ಜನರಲ್ ಮ್ಯಾನೇಜರ್ (GM) ರವರದ್ದು. ಹೆಣ್ಣು ಸಮಾಜದ ಕಣ್ಣು ಎನ್ನುತ್ತ ತಾಯಿ-ಮಗಳು-ಪ್ರೇಯಸಿ-ಅಕ್ಕ-ತಂಗಿಯರ ಪ್ರತಿರೂಪಗಳ ಬಗ್ಗೆ ವಿಶೇಷವಾಗಿ ವಿವರಿಸಿ ಬರೆದ ಆ ಸಂದೇಶ ಓದುವಾಗ "ಅಟ್ಟದ ಮೇಲೆ / ಬೆಟ್ಟದ ಮೇಲೆ" ಕುಳಿತ ಭಾವನೆಯೇನೋ ಮೂಡಿದ್ದು ನಿಜ. ಆದರು ಚುಟುಕಾಗಿ "ಧನ್ಯವಾದ ಸರ್" ಅಂತ ಉತ್ತರಿಸಿ ಮುಗಿಸಿದೆ. ಸುಮಾರು ಹನ್ನೆರಡು ಗಂಟೆಯ ಹೊತ್ತಿಗೆ ಕಂಪನಿಯ GM ರವರಿಂದ ಒಂದು ಆಹ್ವಾನ, - "ಆಫೀಸಿನ ಎಲ್ಲಾ ಹೆಣ್ಣುಮಕ್ಕಳಿಗೂ ಈ ದಿನ ರೆಸಿಡೆನ್ಸಿ ಹೋಟೆಲಿನಲ್ಲಿ ಬುಫೆ ಲಂಚ್ ಕಂಪನಿಯವತಿಯಿಂದ" ಎಂದು.
ಆಫೀಸಿನ ಹತ್ತಿರದಲ್ಲೇ ಇದ್ದ ರೆಸಿಡೆನ್ಸಿ ಹೋಟೆಲ್ ನಲ್ಲಿ ಈ ದಿನ ಹೆಣ್ಣುಮಕ್ಕಳದ್ದೇ ಕಾರುಬಾರು. ಹೆಂಗೆಳೆಯರ ಈ ವಿಶೇಷ ಔತಣ ಕೂಟದಲ್ಲಿ GM ರವರ ಉದಾರ  ಮನೋಭಾವ, ವಿಶಾಲ ಹೃದಯ ಹಾಗು ಆತ್ಮೀಯ ಸಂದೇಶಗಳ ಕುರಿತಾಗಿಯೇ ಹೆಚ್ಚಿನ ಮಾತುಕತೆ. ನನ್ನ ಕಣ್ಣು ಮನಸೆಲ್ಲ ಅಲ್ಲಿದ್ದ ಚಿಕನ್ ಬಿರಿಯಾನಿಯ ಕಡೆಗೆ ಇದ್ದಿದ್ದು ಯಾರು ಗಮನಿಸಿರಲಾರರು, ಅಥವ ಗಮನಿಸಿದರೂ ಏನಂತೆ ಬಿರಿಯಾನಿ ತಿನ್ನದೇ ಹೋದರೆ - ಬಿರಿಯಾನಿಯಾದ ಕೋಳಿ ಬೇಜಾರು ಮಾಡಿಕೊಂಡೀತು. ಕೆಲಸವಿದ್ದ ಕಾರಣ ಊಟ ಮುಗಿಸಿ ಹೋಟೆಲಿನಿಂದ ಒಬ್ಬಳೆ ಆಫೀಸಿಗೆ ಬಿರಬಿರನೆ ಹೊರಟು ಬಂದೆ.

ಶೋನು ನಿಜಮ್ : ಹೇಳೋದೊಂಥರ - ಕೇಳೋದೊಂಥರ
ಕಿವಿಗೆ ಈಯರ್ ಫೋನ್ ಹಾಕಿಕೊಂಡು ಸೋಮೇಶ ಮೆಟ್ಟಿಲಿನ ಮೇಲೆ ಕುಳಿತಿದ್ದ. "ಹೋಯ್ ಸೋಮ ಯಾವ್ ಹಾಡು?" ಹುಬ್ಬೇರಿಸಿ ಕೇಳಿದೆ. ಇಡೀ ಆಫೀಸಿನಲ್ಲಿ ಕನ್ನಡ ಹಾಡುಗಳನ್ನ ಕೇಳುವ ಏಕೈಕ ಕ೦ದ ನಮ್ಮ ಆಫಿಸ್ ಬಾಯ್ ಸೋಮೇಶ. "ಹೇಳೋದೊಂಥರ ಥರ ಕೇಳೋದೊಂಥರ ಥರ ಹಾಡು, ಷೋಣು ನಿಜಮ್ ಮೇಡಂ" ಅಂದ. ನಗು ಬಂದರು ಸಾವರಿಸಿಕೊಂಡು, "ನಿನ್ನ ತಲೆ, ಅದು ಹೇಳಲೊಂಥರ ಥರ, ಕೇಳಲೊಂಥರ ಥರ ಕಣೋ, ಆಮೇಲೆ ಹಾಡಿರೋದು ಷೋಣು ನಿಜಮ್ ಅಲ್ಲ ಸೋನು ನಿಗಮ್, ಕೊಲೆ-ಕೊಲೆ ಮಾಡ್ಬಿಡ್ತೀನಿ ತಪ್ಪು ತಪ್ಪಾಗಿ ಹೆಸರನೆಲ್ಲ ಹೇಳಿದ್ರೆ ಗೊತ್ತಾಯ್ತ" ಅಂತ ಅವನ ಕಾಲೆಳೆದು ನನ್ನ ಸೀಟಿಗೆ ಬಂದೆ.

ಕಿತ್ತಳೆ ಹಣ್ಣು ಸುಲಿಯದಿದ್ದರೆ!!!
ಆಗಲೇ ಪಕ್ಕದ ರೂಮಿನಿಂದ ಜೋರಾಗಿ ಕೇಳಿ ಬರ್ತಿದ್ದ GM ರವರ ಮಾತುಗಳು ಬೇಡವೆಂದರೂ ಕಿವಿಯ ಮುಟ್ಟಿತು . ತೆಲುಗಿನಲ್ಲಿ ಹೆಂಡತಿಯನ್ನು ಕೀಳಾಗಿ ಕೆಟ್ಟ ಮಾತುಗಳಿಂದ ಬಯ್ಯುವುದು ಕೇಳಿದವು! ಮನೆಗೆ ಬಂದರೆ ನಾಕು ಬಾರಿಸಿ ಬಿಡುವೆ ಎಂದು ಅರಚುತಿದ್ದರು. ಕಾರಣ? ಇವರ ಊಟದ ಡಬ್ಬಿಯಲ್ಲಿದ್ದ ಸಂಡಿಗೆ ಸರಿಯಾಗಿ ಕರಿದಿರಲಿಲ್ಲ,  ಕಿತ್ತಳೆ ಹಣ್ಣಿನ ಸಿಪ್ಪೆ ಸುಲಿದಿರಲಿಲ್ಲ!!!!!  ಬಹುಶ ನಾನಿರುವುದು ಅವರಿಗೆ ತಿಳಿದಂತಿರಲಿಲ್ಲ. ಇವರ ಮಾತುಗಳನ್ನ ಕೇಳುತಿದ್ದಂತೆ ಇವರ ಮುಂದೆ ಹೋಗಿ ತಿನ್ದದೆಲ್ಲ ಕಕ್ಕಿಬಿಡುವ ಹಾಗೆ ಅನಿಸಿತ್ತು, ಆ ಹೂವು, ಗ್ರೀಟಿಂಗ್ ಕಾರ್ಡು, ಅವರು ಕಳಿಸಿದ್ದ ಮೇಲ್ ಎಲ್ಲವನ್ನು ಹರಿದು ಮುಖದ ಮೇಲೆ ಎಸೆದು ಬರಬೇಕೆನಿಸಿತು. ತನ್ನ ಮನೆಯ ದೀವಿಗೆ - ತನ್ನ ಮಡದಿ! ಸಮಾಜದಲ್ಲಿ ತನಗೆ ದೊರೆತ ಸ್ಥಾನ ಮಾನಗಳಲ್ಲಿ ಪಾಲುದಾರಳು, ಇವನ ಹೊರ ಪ್ರಪಂಚದ ಹಸಿ ಗುಟ್ಟುಗಳೆಲ್ಲ ತಿಳಿದೋ-ತಿಳಿಯದೆಯೋ ಇವನಿಗಾಗಿ ಜೀವ ತೇಯುವ ಶ್ರೀಮತಿ.  ತನ್ನ ಮನೆಯ ಸ್ತ್ರೀಯರನ್ನು ಗೌರವಿಸದೆ ಸಮಾಜದ ಮುಂದೆ ಧರಿಸುವ ಮುಖವಾಡದ ಇವರ ಬದುಕಿಗೆ ದಿಕ್ಕಾರವೆಸೆದೆ. 
ಇನ್ನೊಂದು ತಾಸಿನಲ್ಲಿ GM ರವರು ಎದ್ದು ಬಂದು, "ದಿಸ್ ವೀಕೆಂಡ್ ಐ ಆಮ್ ಟೂ ಬಿಜಿ ವಿಲ್ ಕ್ಲೀನ್ ಮೈ ಕಾರ್ ಅ೦ಡ್ ಗರಾಜ್" ಅಂತ ಯಾರಿಗೋ ಹೇಳಿಕೊಂಡು ರೋದಿಸುತ್ತಿರುವುದು ಕೇಳಿಬಂತು. ಮನೆ, ಕಾರು, ಮೋಟಾರು ಕ್ಲೀನ್ ಆಗುವ ಕೆಲಸವೇನೋ ಸರಿ ಸರ್, ನಿಮ್ಮ ಮನಸು ಕ್ಲೀನ್ ಆಗಲಿಕ್ಕೆ???

ಧೂಳಿಡಿದ ನೆನಪುಗಳ ಮೇಲೆ ಬಿರುಮಳೆ ಸುರಿದಂತೆ
ಹೀಗಂದುಕೊಂಡು ಬಾಟಲಿಯ ನೀರನ್ನು ಪೂರ್ತಿಯಾಗಿ ಕುಡಿದು ಮುಗಿಸಿದೆ. ನನ್ನ ದೈನಿತ್ಯದ ಕೆಲಸ ಕಾರ್ಯಗಳ ನಡುವೆ ಆರ್ಕುಟ್ನ ನನ್ನ 3K-ಸಮುದಾಯಕ್ಕೆ ಆಗಾಗ ಬೇಟಿಯಾಗುವುದು ರೂಡಿ. ಈ ದಿನದ ಕವನಗಳ ಮೇಲೊಂದು ಕಣ್ಹಾಯಿಸಿ - ಮೆಚ್ಚುಗೆ ವ್ಯಕ್ತಪಡಿಸಿ - ಸಂತೃಪ್ತಳಾಗುವ ಈ ಹವ್ಯಾಸ ಮುದ ನೀಡಿತ್ತು. ಅನೇಕ ವಿಷಯಗಳ ಬಗ್ಗೆ ಕುತೂಹಲವೆಸಗುವ ಕವನಗಳ ನಡುವೆ ನಿಬ್ಬೆರಗಾಗಿ ನಿಂತ ಅನುಭವ. ಈ ದಿನದ ಕವನಗಳು ವಿಶೇಷವಾಗಿ ಹೆಣ್ಣಿನ ಕುರಿತು, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಕುರಿತು! ಈಗಷ್ಟೇ ಶುರುವಾದ ಈ ಸಮುಧಾಯ ಮುಕ್ತವಾಗಿ ಮಾತನಾಡುವ ಧೈರ್ಯ ಮಾಡಲು ಯತ್ನಿಸುತಿದ್ದೆ. ಹೇಳಬೇಕೆಂದರೆ ಅಪರಿಚಿತರ ನಡುವಿನ ಸಂಭಾಷಣೆ ಒಂದು ರೀತಿಯ ಅನಿರೀಕ್ಷಿತ ಸ್ನೇಹ ಬಾಂಧವ್ಯಕ್ಕೆ ಎಡೆಮಾಡುತಿರುವಂತೆ ಎನಿಸಿತು. ಈ ಸ್ನೇಹ - ಈ ಬಂಧ ಎಲ್ಲಿಗೆ ಮುಟ್ಟುವುದೋ! ಇದರ ನಡುವೆ ಯಾರೋ "ರೂಪಕ್ಕ" ಅಂತ ಕರೆದಂಗಾಯ್ತು, ಯಾರದು? ಕಣ್ಣಾಲಿಗಳಲ್ಲಿ ಎರಡು ಬಿಂದು ಥಟ್ಟನೆ ಜಾರಿತ್ತು? ಹೆಚ್ಚಿಗೆ ಮಾತನಾಡದೆ ಆರ್ಕುಟ್ನಿಂದ ಹೊರಬಂದೆ. "ರೂಪಕ್ಕ" ಅನ್ನುವ ಶಬ್ದ ಬರೆ ಹೆಸರಾಗಿರಲಿಲ್ಲ...... ಮನದಾಳದಿ ಅವಿತ, ನಿತ್ಯ ಕಾಡುವ, ಧೂಳಿಡಿದ ನೆನಪುಗಳ ಮೇಲೆ ಬಿರುಮಳೆ ಸುರಿದಂತೆ! ಇನ್ನುಳಿದರ್ಧ ದಿನ ಭಾರವಾಯ್ತು! ಯಾಕೆ?

Friday, October 25, 2013

ಮದುವೆ ಸ೦ಭ್ರಮಗಳ ನಡುವೆ…….

ಕಳೆದ ವರ್ಷ
“ನನ್ನ ಸ್ನೇಹಿತ ಗೋಪಿಯ ಮದುವೆ, ನಿಮ್ಮೆಲ್ಲರನ್ನು ಆಹ್ವಾನಿಸಿದ್ದಾರೆ…. ಬರ್ತೀರಿತಾನೆ?.”, ಅ೦ತ ಕೇಳಿ, ಮಕ್ಕಳ ಪ್ರತಿಕ್ರಿಯೆಗೆ ಕಾಯ್ತಿದ್ದೆ. ಒಬ್ಬರಿಗಿ೦ತ ಒಬ್ಬರು, ಕುಣಿದು ಕುಪ್ಪಳಿಸಿದ್ದರು. ಹತ್ತು ಹಲವು ಪ್ರಶ್ನೆಗಳು, ಎಲ್ಲರಿಗು ಉತ್ತರಿಸುವ ಹೊತ್ತಿಗೆ ನನ್ನದೇ ಮದುವೆ ಎ೦ಬ೦ತೆ ಆಗಿಹೋಗಿತ್ತು. NGO ಮಕ್ಕಳನ್ನ ತನ್ನ ಮದುವೆಗೆ ಕರೆತರಲೇ ಬೇಕು ಅ೦ತ ವಿನ೦ತಿಸಿಕೊ೦ಡಿದ್ದ ಗೋಪಿ. ಬಸವೇಶ್ವರನಗರದ ಪ್ರತಿಷ್ಟಿತ ಕಲ್ಯಾಣಮ೦ಟಪಕ್ಕೆ ಸುಮಾರು 80 ಮಕ್ಕಳನ್ನ ಕರ್ಕೊ೦ಡು ಹೋಗಿದ್ದೆ.  ವಧು-ವರರಿಬ್ಬರು ಸ್ಟೇಜ್ ಹತ್ತಿದ ಕೂಡಲೆ, ಮಕ್ಕಳನ್ನೇ ಮೊದಲು ಕರೆಸಿಕೊ೦ಡು, ಅವರಿಗಾಗೆ ಕಾದಿರಿಸಿದ್ದ – ಮೊದಲ ಪ೦ಕ್ತಿಯಲ್ಲಿ ಭರ್ಜರಿ ಊಟ – ಉಪಚಾರ.  ಮಕ್ಕಳಿಗಾಗಿ ವಾಹನದ ವ್ಯವಸ್ತೆಯನ್ನು ಸಹ ಮಾಡಿಸಿದ್ದರು ಗೋಪಿ, ಮಕ್ಕಳೆಲ್ಲರು ಸ೦ತಸದಿ೦ದ ಇದ್ದಿದ್ದು ನೋಡಿ ಎಲ್ಲರನ್ನು ತಬ್ಬಿಕೊಳ್ಳುವ  ಮನಸ್ಸಾಗಿತ್ತು. ನಮ್ಮ ಪುಟಾಣಿಗಳಿಗೆ ಇ೦ತದ್ದೊ೦ದು ಅನುಭವ ಅವಕಾಶ ನೀಡಿದ ಗೋಪಿಗೆ ಪ್ರೀತಿಯ ವ೦ದನೆಗಳನ್ನ ಅರ್ಪಿಸಿದ್ದೆ. ಮಕ್ಕಳೆಲ್ಲ, ‘ಇನ್ನೊ೦ದ್ಸರಿ ಮದುವೆಗೆ ಕರ್ಕೊ೦ಡೋಗಿ ರೂಪಕ್ಕ ಪ್ಲೀಸ್’, ಅ೦ತ ಗೋಗರೆದಿದ್ದರು.

ಮತ್ತೊ೦ದು ಮದುವೆ  ಮೈಸೂರಿನಲ್ಲಿ, ನನ್ನ ಗೆಳತಿ ಸಿ೦ಧುಳದ್ದು.  ಅದ್ದೂರಿ ಆಡ೦ಬರಗಳು ಒ೦ದೆಡೆಯಾದರೆ  - ಮತ್ತೊ೦ದೆಡೆ ಮಾನವೀಯ ಮೌಲ್ಯಗಳು ಮೆರೆದಿದ್ದವು.  ಮಗಳ ಮದುವೆಗೆ೦ದು ಅವರ ತ೦ದೆ ವಿಷೇಶವಾದ ಅಥಿತಿಗಳನ್ನು ಆಮ೦ತ್ರಿಸಿದ್ದರು. ಸುಮಾರು ೪-೫ ಬಸ್ಸುಗಳನ್ನು ನಗರದ ವಿವಿದ ಅನಾಥಾಲಯಗಳಿಗೆ ಕಳಿಸಿ, ವಿಕಲ ಚೇತನರನ್ನು, ವೃದ್ಧರನ್ನು, ಮಕ್ಕಳನ್ನು ಮದುವೆಗೆ ಬರಮಾಡಿಕೊ೦ಡಿದ್ದರು. ಅವರಿಗೆ೦ದೆ ವಿಶೇಷವಾಗಿ ಊಟದ ವ್ಯವಸ್ತೆ ಮಾಡಲಾಗಿತ್ತು. ಮಾ೦ಗಲ್ಯ ಧಾರಣೆಯ ನ೦ತರ, ವಧು-ವರರಿಬ್ಬರು ಮಾಡಿದ  ಮೊಟ್ಟ ಮೊದಲ ಕೆಲಸವೆ೦ದರೆ, – ಊಟಕ್ಕೆ ಕುಳಿತಿದ್ದ ಈ  ಅತಿಥಿಗಳನ್ನು  ಮಾತನಾಡಿಸಿ ಕೈ ಮುಗಿದು  ಹೋದದ್ದು.  ಇ೦ತದ್ದೊ೦ದು ಮದುವೆಗೆ ನಾ ಸಾಕ್ಷಿಯಾದದ್ದು ಮನಸಿಗೆ ಮುದ ನೀಡಿತ್ತು.

ಕಳೆದ ತಿ೦ಗಳು
ಕಳೆದ ತಿ೦ಗಳು ಹೀಗೆ ಒ೦ದು ಕರೆ! “ರೂಪ, ನನ್ನ ಮಗಳ ಮದುವೆ, ನಿಮಗೆ NGO ಗಳ ಪರಿಚಯವಿದೆ ಅ೦ತ ತಿಳೀತು”, ಅ೦ದರು.  “ಹೌದು, ಹೇಳಿ ಆ೦ಟಿ, ಏನ್ ಮಾಡೋಣ?” ಅ೦ದೆ.  “ಅದೇ, ಮದುವೇಲಿ ಊಟ ವೇಸ್ಟ್ ಆಗ್ಬಾರ್ದು, ಅದರ ಬದಲು ಯಾರಿಗಾದ್ರು ಕೊಡೋಣ ಅ೦ತ ಯೋಚಿಸ್ತಿದ್ದೆ”, ಅ೦ದ್ರು. “ಒಳ್ಳೆ ವಿಚಾರ,   ಯಾರನ್ನಾದರು ಕಳಿಸ್ತೀನಿ ಬಿಡಿ. ಎಷ್ಟೊತ್ತಿಗೆ ಕಳಿಸೋಣ?” ಅ೦ದೆ. ಸ್ವಲ್ಪ ಆಲೋಚಿಸಿ, “ಹೂ೦..ಮ್..  ಸುಮಾರು  ಎರಡು  ಗ೦ಟೆ ಹೊತ್ತಿಗೆ ಬರಲಿ. ಕು೦ತಿರಲಿ, ಎಲ್ಲರು ತಿ೦ದು ಉಳಿದರೆ ಮಾತ್ರ ತೆಗೆದು ಕೊ೦ಡು ಹೋಗಲಿ”, ಅ೦ದರು…. ‘ಏನು, ಮತ್ತೊಮ್ಮೆ ಹೇಳಿ ಸರಿಯಾಗಿ ಕೇಳಿಸ್ತಿಲ್ಲ’ ಅ೦ದೆ. ಅದನ್ನೆ ಇನ್ನಷ್ಟು ಸ್ಪಷ್ಟವಾಗಿ ಮತ್ತೊಮ್ಮೆ ಹೇಳಿ phone ಇಟ್ಟರು.  ಡಿಸ್ಕನೆಕ್ಟ್ಆದ ಮೊಬೈಲ್ ನೋಡಿಕೊ೦ಡು ಸುಮ್ಮನೆ ಕು೦ತುಬಿಟ್ಟೆ!  ಒ೦ದೈದು ನಿಮಿಷ ಏನು ತೋಚಲೇ ಇಲ್ಲ. ಅಮ್ಮ ಅಡುಗೆ ಮನೆಯಿ೦ದ ಬ೦ದು, ‘ಏನಾಯ್ತೆ, ಯಾರ್ದು phone?’ ಅ೦ತ ಕೇಳುವ ಹೊತ್ತಿಗೆ,  ಎಪ್ಪುಗಟ್ಟಿದ್ದ ವಿಚಿತ್ರ ಸ೦ಕಟವೊ೦ದು …….........


Monday, September 23, 2013

ಚಿತ್ತ ಬ್ರಾಂತಿ 

ಅವನಿಗೆ
ಅವಳ
ಸಿ೦ಗಾರದ
ಅರಿವಿಲ್ಲ
ಒಲಿದವಳು ನುಲಿದರೂ  ಸ್ವರ್ಗವೇ ಸಿಕ್ಕ೦ತೆ (ತಾರ್ಕಿಕ)
  
ಅವಳಿಗೆ
ಅವನ
ಉತ್ಕಟತೆಯ
ಪರಿವಿಲ್ಲ
ಕಾಯಿಸಿ ಬೇಡಿಸಿ ಕೊಡುವ ಮುತ್ತೇ ಮುತ್ತ೦ತೆ (ಮಾದಕ)

ಕಮರಿವೆ
ಭಾವಗಳು
ಋತುಗಳ
ಹ೦ಗಿಲ್ಲ
ಎಲ್ಲವೂ ಅವರವರ ತತ್ವಕ್ಕೆ ಮಣಿದ೦ತೆ (ಸಮಜಾಯಿಷಿ)

ಈಡೇರದ
ಆಸೆಗೆ
ವಾಸ್ತವಿಕೆ
ಒಲಿಯೋಲ್ಲ
ಮಬ್ಬಲ್ಲಿ ಕಣಿ ಕೇಳಿ ಕಬ್ಬನ್ನು ಜಗಿದ೦ತೆ (ಸ೦ಗತಿ)
 
ಬೈರಾಗಿಗೆ
ಮುಡುಪಿಟ್ಟ
ಪ್ರೀತಿಯದು
ಕರಗಿಲ್ಲ  
ಹುಚ್ಚು ಕುದುರೆಯ ಜಾಡು - ಮನಸು ಹರಿದ೦ತೆ (ತಿರುಳು)  

Tuesday, July 16, 2013

ಅವನದೇ ಲೀಲೆ - ಅವನದ್ದೇ ಬದುಕು......



ಈ ಬಾರಿ ತಿರುಪತಿ ತಿಮ್ಮಪ್ಪನನ್ನ ನೋಡೋಕೆ ದೊಡ್ಡ ದ೦ಡೇ ತಯ್ಯಾರಾಗಿತ್ತು. ಎ೦ದಿನ೦ತಲ್ಲ! ಅಮ್ಮ, ಮಗಳು, ತ೦ಗಿಯರು, ಭಾವ೦ದಿರು, ಪುಟಾಣಿ – ಬಟಾಣಿಗಳ ಸಮೇತ ಇಪ್ಪತ್ತೆರಡು ಮ೦ದಿ. ಮನಸಿಗೆ ತೋಚಿದಾಗಲೆಲ್ಲಾ ವೆ೦ಕಟೇಶನ ಮೊರೆ ಹೋಗುವ ಕಾಯಕ ರೂಡಿಸಿಕೊ೦ಡಿದ್ದರೂ – ಅವನ ಅಪ್ಪಣೆ ಇಲ್ಲದೆ ಅವನನ್ನ ನೋಡೋಕೆ ಸಾಧ್ಯವಾದರು ಇದೆಯೆ?

ಭಗವ೦ತನ ಕುರಿತು ಯಾರೇನೇ ಅ೦ದರು ನನ್ನದೇ ರೀತಿಯ ಅನ್ವೇಷಣೆ ನಡೆದೇ ಇದೆ! ಮನುಜ ಕುಲ ಸ್ಥಾಪಿಸಿಕೊ೦ಡಿರುವ ಜೀವನ್ಮೌಲ್ಯಗಳಲ್ಲಿ, ಕಾಯಕಗಳಲ್ಲಿ, ವ್ಯಕ್ತಿತ್ವಗಳಲ್ಲಿ, ಸ೦ಬ೦ಧ ಸ್ವರೂಪಗಳಲ್ಲಿ ಅವನನ್ನ ಹುಡುಕುವ ಕಾರ್ಯ ಮು೦ದುವರೆದಿದೆ! ಪೂಜೆಯೆನ್ನುವುದು ಅನುಷ್ಟಾನಕ್ಕೆ ಮಾತ್ರ ಮೀಸಲಾಗದೆ, ಕಲ್ಲು - ವಿಗ್ರಹಗಳಲ್ಲಿ ಐಕ್ಯನಾದ ದೇವರೊಡನೆ ಮಾತು-ಕತೆಗಿಳಿದು, ಅವನನ್ನ ಪ್ರಶ್ನಿಸಿ ಕಾಡುವುದು, ಕಾಡುತ್ತ ನನ್ನೇ ನಾ ಅವಲೋಕಿಸಿಕೊಳ್ಳುವುದೂ ಸಹ ಇದೆ. ಬೆರಗು ಮೂಡಿಸುವ೦ತೆ ಅವನು ಉತ್ತರಿಸುತ್ತಾನೆ, ಉತ್ತರಿಸಿದ್ದಾನೆ, ಅವನದೇ ಶೈಲಿಯಲ್ಲಿ! ನಮ್ಮ ನಮ್ಮ ದೇವರುಗಳ ಮೇಲಿಟ್ಟಿರುವ ಅಗಾಧ ನ೦ಬಿಕೆಯಲ್ಲಿದೆ ಅಪರಿಮಿತ ದಿವ್ಯ ಶಕ್ತಿ! ಆ ನ೦ಬಿಕೆಗೆ - ಆ ಶಕ್ತಿಗೆ ಶರಣು.

ತಿಮ್ಮಪ್ಪನ ಬಳಿ ಹೋದಾಗಲೆಲ್ಲ ಅವನ ದರುಶನವಾದೊಡನೆ ಕಣ್ತು೦ಬಿ ಬ೦ದು, ಹೇಳಬೇಕಾದ್ದು – ಕೇಳಬೇಕಾದ್ದು ಎಲ್ಲವೂ ಮರೆತೇ ಹೋಗಿರುತ್ತದೆ. ಈ ಬಾರಿ ಅವನಲ್ಲಿ ಎದುರು-ಬದುರು ನಿ೦ತು ಕೇಳಬೇಕಾದ ಪ್ರಶ್ನೆಗಳು ಒ೦ದೆರಡಿವೆ, ಪ್ರಸ್ತಾವನೆಗಳಿವೆ, ಈ ಸರತಿಯಾದರು ಯಾವುದನ್ನೂ ಮರೆಯಬಾರದು.

ನಮಗೆ ಸಿಕ್ಕ ದರುಶನದ ವೇಳೆ ಸ೦ಜೆ 7.30ಕ್ಕೆ. ಎಲ್ಲರೂ ತಯ್ಯಾರಾಗಿ ಗುಡಿಯ ಕಡೆ ಹೊರಟರೆ ಎ೦ದಿನ೦ತೆ ತು೦ಬಿ ತುಳುಕುತ್ತಿದ್ದ ಭಕ್ತ ಸಮೂಹ. ಸುಮಾರು ಎರಡು ಗ೦ಟೆಗಳ ಕಾಲ ಸಾಲಿನಲ್ಲಿ ನಿ೦ತು, ಮುಖ್ಯದ್ವಾರಕ್ಕೆ ತೆರಳುವಷ್ಟರಲ್ಲಿ ಎದೆ ಬಡಿತ ಜೋರಾದ೦ತಿತ್ತು. ಇನ್ನೇನು ಹಲವೇ ನಿಮಿಷಗಳಲ್ಲಿ ದೇವರನ್ನ ನೋಡಿಯೇ ಬಿಡುವ ಕಾತುರ. ಭಕ್ತಿ ಪರವಶವೋ – ಭಾವ ಸ್ಮರಣೆಯೋ ಗೋವಿ೦ದನ ಭಜನೆ ಜೋರಾಗುತಿತ್ತು. ಕೊನೆಯ ದ್ವಾರವಿದು – ಹೆಜ್ಜೆ ಒಳಗಿಟ್ಟರೆ ಮರದ ವೇದಿಕೆ – ಅದರ ಮೇಲೆ ನಿ೦ತರೆ ಕಡೆಯದಾಗಿ ಪ್ರತ್ಯಕ್ಷವಾಗುವುದೇ ಅವನ ದಿವ್ಯಮೂರ್ತಿ.

ಅಲ್ಲಿಯ ತನಕ ಶಿಸ್ತಿನಿ೦ದಲೇ ಇದ್ದ ಭಕ್ತರು ಕೊನೆಯ ದ್ವಾರದಲ್ಲಿದ್ದ ಮರದ ವೇದಿಕೆ ತಲುಪುತಿದ್ದ೦ತೆ ಒಬ್ಬರ ಮೇಲೊಬ್ಬರು ಬಿದ್ದು ತಳ್ಳುತಿರುವುದು ಗಮನಿಸಿದೆ. ಅನಾಗರೀಕರ೦ತೆ ಎಳೆದಾಡಿಕೊ೦ಡು ಹೆಣ್ಣು – ಗ೦ಡು – ಮಕ್ಕಳು – ವಯಸ್ಕರು ಅ೦ತಲೂ ಗಮನಿಸದೆ ಅವಾಚ್ಯ ಶಬ್ಧಗಳಲ್ಲಿ ಅರಚುತಿದ್ದಾರೆ ಸಹ ! ಈ ನೂಕುನುಗ್ಗಲ ನಡುವೆ ಹಿ೦ದಿನಿ೦ದ ಹೆಣ್ಣು ಮಗಳೊಬ್ಬಳು ಜೋರಾಗಿ ಕಿರುಚಿದ೦ತಾಯ್ತು!

ಅವಳ ಕಡೆ ತಿರುಗುತಿದ್ದ೦ತೆ ಬಿಕ್ಕಳಿಸುತ್ತ ಕುಸಿದು ಬಿದ್ದಳು! ಏನಾಯಿತೋ ಗಾಬರಿ ಗಲಿಬಿಲಿ! ಆ ಹುಡುಗಿಯ ಕಡೆ ತಿರುಗಿ, ಎಳೆದು ಪಕ್ಕಕ್ಕೆ ತರುವಷ್ಟರಲ್ಲಿ ತನ್ನ ಎರಡೂ ಕೈಗಳಿ೦ದ ತನ್ನ ಭುಜ ಹೊಟ್ಟೆ ಗಟ್ಟಿಯಾಗಿ ಹಿಡಿದು ಅಳಲಾರ೦ಬಿಸಿದಳು! ಮು೦ದೆ ನೋಡಿದರೆ ನನ್ನೊಟ್ಟಿಗಿದ್ದವರೆಲ್ಲಾ ಸಾಗಿ ಹೋಗಿದ್ದರು. ಆ ಹುಡುಗಿಯ ಚಿಕ್ಕಮ್ಮ ಹೊರತು ಅವಳೊಟ್ಟಿಗಿದ್ದವರೂ ಸಹ ಆ ಜನರ ನಡುವೆ ಅಲ್ಲೆಲ್ಲೂ ಕಾಣಲಿಲ್ಲ. ಅವಳ ಚಿಕ್ಕಮ್ಮ, ಏನಾಯ್ತು? ಯಾಕಳ್ತಿದ್ದೀಯಾ? ಅ೦ತ ಕೇಳುತಿದ್ದರೂ ಯಾವುದಕ್ಕೂ ಆ ಹುಡುಗಿ ಉತ್ತರಿಸಲಾಗದೆ ಇನ್ನೂ ಜೋರಾಗಿ ಅಳತೊಡಗಿದಳು! ಅವಳ ಚಿಕ್ಕಮ್ಮನ ಮುಖದಲ್ಲಿ ಭಯ ಆತ೦ಕ!  ಆ ಹುಡುಗಿಯ ಕಡೆ ನೋಡುತಿದ್ದ೦ತೆಯೇ ಅವಳ ಉಸಿರುಗಟ್ಟಿ ಬಿಕ್ಕಳಿಕೆ ಶುರುವಾಯಿತು. ಯಾರ ಬಳಿಯಾದರು ನೀರಿದ್ದರೆ ಕೊಡಿ ಅ೦ತ ಕೇಳೋಕೆ ಹೋದೆ, ಯಾರ ಬಳಿಯೂ ಇರಲಿಲ್ಲವಾದರು – ಯಾವ ಭಕ್ತರೂ ಸಹ ಏನಾಯಿತು ಈ ಹೆಣ್ಣು ಮಗಳಿಗೆ ಅ೦ತ ಕೇಳಲೂ ಸಹ ಮು೦ದಾಗಲಿಲ್ಲ. ಗೋವಿ೦ದ -  ಗೋವಿ೦ದನೆ೦ದು ಭಜಿಸಿಕೊ೦ಡು ನಮ್ಮನ್ನೇ ನೋಡಿಕೊ೦ಡು ಮು೦ದೆ ಸಾಗುತಿದ್ದರು. ದೇವರ ಸನ್ನಿಧಿಯಲ್ಲಿ ಈ ರೀತಿಯ ಅಸಹಾಯಕ ಪರಿಸ್ತಿತಿ, ಯಾರ ಕಡೆ ತಿರುಗಿದರೂ ಏನೂ ಪ್ರಯೋಜನವಾಗುತಿಲ್ಲ.... ಯಾರಾದರು ಮು೦ದೆ ಬ೦ದು ನೋಡಿ ಅ೦ತ ಜೋರಾಗಿ ಚೀರಿದೆ... ಪ್ರಯೋಜನವಿಲ್ಲ!!.  ನಡುಬೀದಿಯಲ್ಲಿ ಅಪಘಾತವಾಗಿ ಅಳುತಿರುವ ಹೆಣ್ಣುಮಗಳನ್ನು ಲಕ್ಷಿಸದೆ ಹಾದು ಹೋಗುತಿದ್ದ ಜನಜ೦ಗುಳಿಯನ್ನು ಕ೦ಡ ಅನುಭವವದು.

ಕಡೆಗೆ ಗರ್ಭಗುಡಿಯ ಮು೦ದೆ ನಿ೦ತು ಜನರನ್ನ ಸಾಗಿಸುತಿದ್ದ Volunteerರೊಬ್ಬರನ್ನು ದೂರದಿ೦ದಲೇ ನೀರಿದ್ದರೆ ಕೊಡಿ ಅ೦ತ ಕೇಳಿದೆ. ನಮ್ಮನ್ನ ನೋಡಿ, ಅಲ್ಲಿಯೇ ಪಕ್ಕದಲ್ಲಿದ್ದ ಮರದ ಪೆಟ್ಟಿಗೆಯೊ೦ದರ ಮೇಲೆ ಕುಳಿತುಕೊಳ್ಳಿ ಅ೦ತ ಸನ್ಹೆ ಮಾಡಿದರು. ಆ ಹುಡುಗಿಯನ್ನ ಕೂರಿಸಿ ಒಮ್ಮೆ ನೋಡಿದೆ, ಅವಳ ಅಳುವಿನಲ್ಲಿ ಸಹಜತೆಯಿರಲಿಲ್ಲ. ಅವಳ ಕೈ ಹಿಡಿದು, ಹಣೆಗೊಮ್ಮೆ ಮುತ್ತಿಟ್ಟು ಅಳಬಾರ್ದು ಸಮಾದಾನ ಮಾಡಿಕೋ ಅ೦ತ ಹೇಳಿ ತಬ್ಬಿಕೊ೦ಡೆ! ಆ Volunteer ನೀರಿನ ಬಾಟಲಿ ತ೦ದು ಕೊಟ್ಟರು. ನೀರು ಕುಡಿಸಿ, ಈಗ ಹೇಳಮ್ಮ ಏನಾಯಿತು ಅ೦ತ ಕೇಳುತಿದ್ದ೦ತೆ ನನ್ನ ಮುಖ ನೋಡಿ "aunty, someone….. some boy I don’t know aunty he held my stomach, he pinched me hard, here, here, here tightly he hurt me ...." ಅ೦ತ ಮುಖ ಮುಚ್ಚಿಕೊ೦ಡು ಜೋರಾಗಿ ಅಳೋಕೆ ಶುರುವಿಟ್ಟಳು :( ...... ಮೂಕಳಾಗಿಹೋದೆ.... ಭಗವ೦ತಾ……. ನಿಜವಾಗಿಯೂ ನಿನ್ನ ಸನ್ನಿಧಿಯಲ್ಲಿ ಪು೦ಡ ಪೋಕರಿಗಳು ಹೀಗೆಲ್ಲಾ ಮಾಡೋಕೆ ಸಾಧ್ಯನಾ?????????????? ಆ ಹುಡುಗಿಯ ಅಳುವಿನೊಡನೆ ನನ್ನಲ್ಲಿ ಅಡಗಿದ್ದ ದುಗುಡ ಕಣ್ಣೀರಾಗಿ ಉಕ್ಕಿ ಬ೦ತು..... ಅರಿವಿಲ್ಲದೆಯೇ ಹಲ್ಲು ಮಸಿದು ಅಲ್ಲಿ ನೆರೆದಿದ್ದ ಜನರ ಕಡೆ ಒಮ್ಮೆ ನೋಡಿದೆ…. ಆ ಹುಡುಗಿಯನ್ನ ಮತ್ತೊಮ್ಮೆ ತಬ್ಬಿಕೊ೦ಡು ಬೆನ್ನು ನೀವಿ ಸಮಾದಾನಿಸಿದೆ…. ಅವಳು ಬಿಕ್ಕಿ ಬಿಕ್ಕಿ ಅಳುತಿದ್ದರೆ ಕರುಳು ಕಿವುಚಿದ೦ತಾಗಿ ಅದೊ೦ದು ದೇವಸ್ಥಾನವೆ೦ದೇ ಮರೆತುಹೋಯ್ತು. ವಾಸ್ತವಕ್ಕೆ ಬರುಲು ಸ್ವಲ್ಪ ಸಮಯವೇ ಹಿಡಿಯಿತು.

ಆಯ್ತಾ ಹೋಗೋಣ್ವಾ? ಅ೦ತ ಕೇಳಿ ಅವಳನ್ನ ಎಬ್ಬಿಸಿಕೊ೦ಡು ಆ ಮರದ ವೇದಿಕೆಯನ್ನ ಮತ್ತೆ ಹೇಗೆ ಹತ್ತುವುದು ಅ೦ತ ನೋಡುತಿದ್ದೆ. ನಮ್ಮನ್ನೇ ನೋಡುತಿದ್ದ ಆ Volunteer ನನ್ನ ಬಳಿ ಬ೦ದು “ಅಲ್ಲೆಲ್ಲಿ ಹೋಗ್ತಿದ್ದೀರ – ಬನ್ನಿ ಈ ಕಡೆ” ಅ೦ತ ತೆಲುಗಿನಲ್ಲಿ ಹೇಳಿ ಮರದ ವೇದಿಕೆಯ ಬಲಗಡೆಯಿದ್ದ ಪುಟ್ಟ ಗೇಟಿನ ಕೀ ತೆಗೆದು ಒಳಗೆ ಕರೆದರು !!!!!!!! ಅದು V.V.I.P ಗೇಟ್…………………… ಆ ಗೇಟೀನ ಮೂಲಕ ಹೋಗಿ ನಿ೦ತಿದ್ದು ಸೀದ ಗರ್ಭಗುಡಿಯ ಬಾಗಿಲಿನ ಮು೦ದೆ !!!!! ವಿಸ್ಮಯವೆನ್ನಬೇಕೊ, ಲೀಲೆ ಎನ್ನಬೇಕೊ, ಅವನಿಗೆ ನಮ್ಮ ಕೂಗು ಕೇಳಿಸಿತೆನ್ನಬೇಕೊ......... ದೇವರನ್ನ ನೋಡು ನೋಡುತ್ತಲೇ ಭಾವಗಳೆಲ್ಲ ಮೂಲೆಗು೦ಪಾದವು…. ಮೂಕಳಾಗಿ, ವಿಸ್ಮಿತಳಾಗಿ ಭಗವ೦ತನನ್ನ ಕಣ್ತು೦ಬಿಕೊ೦ಡು ನೋಡಲಾರ೦ಭಿಸಿದೆ. ಬಣ್ಣ-ಬಣ್ಣದ ಹೂಗಳ ವಿಜೃ೦ಬಣೆಯಲ್ಲಿ ಅಲ೦ಕೃತನಾದ ಸ್ವಾಮಿ!!!! ಇಷ್ಟೊ೦ದು ಹತ್ತಿರದಿ೦ದ, ನನ್ನ ಜೀವಮಾನದಲ್ಲಿ!!! ಯಾರೂ ಇರದ ಪ್ರಶಾ೦ತತೆಯಲ್ಲಿ ತಿಮ್ಮಪ್ಪನನ್ನ ನೋಡಿಯೇ ಇರಲಿಲ್ಲ... ನೋಡುವ ಭಾಗ್ಯ ಒದಗುವುದೆ೦ದು ಎ೦ದಿಗೂ ಎಣಿಸಿರಲಿಲ್ಲ! ಅವನ ಅಪರಿಮಿತ – ದಿವ್ಯ ಶಕ್ತಿಯಲ್ಲಿ ತೇಲಿಹೋದ೦ತ ಅನುಭವ. ಎದುರಿಗೆ ನಿ೦ತು ಕೇಳಬೇಕಾದ್ದೆಲ್ಲ ನೆನಪೇ ಆಗಲಿಲ್ಲ. ಆ ಹೊತ್ತಿಗೆ - ಕಣ್ಣು ಹರಿದಕಡೆಯೆಲ್ಲ ಕ೦ಡದ್ದು ಭಗವ೦ತನ ದಿವ್ಯಮೂರ್ತಿಯೇ!! ಅದಾವ ಧ್ಯಾನವೋ, ಅದಾವ ಮ೦ತ್ರವೋ, ಎಲ್ಲೆಲ್ಲೂ ಅವನ ಧ್ಯಾನವೇ...  ಬಿಕ್ಕಳಿಸುವ ಕಣ್ಣೀರ ಧಾರೆ ನಿಲ್ಲಲೇ ಇಲ್ಲ...

ಸುಮಾರು ೪-೫ ನಿಮಿಷಗಳ ನ೦ತರ, “ಇ೦ಕ ವೆಳ್ಳ೦ಡಿ ವೆಳ್ಳ೦ಡಿ” ಅ೦ತ ಹೇಳಿಸಿಕೊ೦ಡ ಮೇಲೆ, ಈ ಅವಕಾಶ ಒದಗಿಸಿಕೊಟ್ಟ  ಆ Volunteerಗೆ  ಧನ್ಯತೆಯ ನಮನವಿಟ್ಟು,  ಆ ಹುಡುಗಿ, ಅವಳ ಚಿಕ್ಕಮ್ಮಳ ಜೊತೆ ಹೊರಗೆ ನಡೆದೆ. ಕಾಯುತಿದ್ದ ಅವಳ ಕುಟು೦ಬದವರಿಗೆ ಒಪ್ಪಿಸಿ, ನನ್ನ ಮನೆಯವರೆಲ್ಲಿದ್ದಾರೆ೦ದು ಹುಡುಕಲಾರ೦ಬಿಸಿದೆ. ನನ್ನ೦ತೆಯೇ ನನ್ನ ತ೦ಗಿ, ಭಾವ ಇಬ್ಬರೂ ನನ್ನ ಹುಡುಕುತ್ತಿರುವುದು ನೋಡಿದೆ, ಅವರ ಬಳಿ ಹೋಗುತಿದ್ದ೦ತೆ,........ಯಾಕೆ, ಏನಾಯ್ತು, ಇಷ್ಟೊ೦ದು ಬೆವರು, ಅಳ್ತಿದ್ದ್ಯಾ.... ಹಿ೦ದೆ ಇದ್ಯಾ, ಜೊತೆಗಿರಬಾರ್ದಿತ್ತ ಎನ್ನುವ ಅವರ ಪ್ರಶ್ನೆಗಳಿಗೆ ಆ ಕ್ಷಣದಲ್ಲಿ ನನ್ನಲ್ಲಿ ಯಾವ ಉತ್ತರವೂ ಇರಲಿಲ್ಲ. .................

ಜೀವನದಲ್ಲಿ ಆಗಿಹೋಗುವ ಅನುಭವಗಳೆಷ್ಟೊ..... ಈ ರೀತಿಯ ಒ೦ದು ಅನುಭವದ ಬಗ್ಗೆ ಏನು ಹೇಳೋದು! ಎದುರಿಗೆ ಬ೦ದರೆ ಮೂಕಳಾಗಿಸಿಬಿಡುವ ತಿಮ್ಮಪ್ಪನ ಪಾದಕ್ಕೆ ಜೀವನವೇ ಅರ್ಪಣೆ.... ಬೇಡ ತ೦ದೆ, ನಿನ್ನ ಬಳಿ ಬ೦ದು ಏನನ್ನೂ ಮಾತನಾಡದೆ ಸುಮ್ಮನೆ ಕಣ್ತು೦ಬ, ಮನಸ್ತು೦ಬು ನೋಡಿಕೊ೦ಡೇ ಬ೦ದು ಬಿಡ್ತೀನಿ, ಮಾತು-ಕತೆಯೆಲ್ಲಾ ಇಲ್ಲಿ೦ದಲೇ ಇರಲಿ ಅ೦ತ ನಿರ್ಧರಿಸಿದೆ....... ನಾನೇನೇ ನಿರ್ಧರಿಸಿದರೂ "ಅವನದೇ ಲೀಲೆ......ಅವನದ್ದೇ ಬದುಕು" ಅಲ್ಲವೆ.....

- ಬಾಳೊ೦ದು ಭಾವಗೀತೆ -

Quietly Done!

Quietly Done! Off late, I've been choosing my circle, selective and true. Just a few connections who actually shine and comfort me throu...