Thursday, December 29, 2022

ಪ್ರತಿ ಬೆಳಗೂ ಹೊಸತನ....


ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತು ಕಾಫಿಯ ಬೆಸುಗೆ ನೆನ್ನೆ ಮೊನ್ನೆಯದಲ್ಲ.  ಫಿಲ್ಟರ್ ಕಾಫಿ, ಸ್ವಲ್ಪವೇ ಸ್ವಲ್ಪ ಸಕ್ಕರೆ ಅಥವಾ ಬೆಲ್ಲ ನನ್ನ ಅಚ್ಚುಮೆಚ್ಚು.  ಹಾಗೆ ನೋಡಿದರೆ ಇಂಟರ್ನೆಟ್ ತುಂಬಾ ಕಾಫಿ ಕುರಿತು ಬೇಕಾದಷ್ಟು ಮೀಮ್ಸ್ ಹರಿದಾಡುತ್ತಿರುತ್ತವೆ. ಪ್ರತಿ ಪೋಸ್ಟ್ ನನಗೆಂದೇ ಬರೆದಿರುವುದೇನೋ ಅಂತ ಅನಿಸೋದುಂಟು. 

ಸಂಜೆಯ ಕಾಫಿಗೂ ಕೂಡ ಇಷ್ಟೇ ಮಹತ್ವ. ತಾಯಿಯ ಸಾಂತ್ವನದಂತೆ. ಗೆಳತಿಯ ಹೆಗಲಿನಂತೆ. ತಂಗಿಯ ಕಾಳಜಿಯಂತೆ ಭಾಸವಾಗುವ ಕಾಫಿ ನನ್ನ ಪಾಲಿಗೆ ಅಮೃತ. ಹಾಗಂತ ಇಡೀ ದಿನ ಕಾಫಿಯೊಂದೇ ಕುಡಿಯುತ್ತೇನೆ ಅಂತಲ್ಲ. ದಿನಕ್ಕೆ ೨-೩ ಬಾರಿ ಕುಡಿಯುವ ನನ್ನ ಕಾಫಿ ನಿಜವಾಗಲೂ ನನ್ನ ಪಾಲಿಗೆ ವಿಶೇಷ.  

ಶನಿವಾರ / ಭಾನುವಾರಗಳಲ್ಲಿ ಸಂಜೆಯ ಕಾಫಿ ಮುಗಿಸಿ ಮನೆಯ ಬಳಿಯಿರುವ ಪಾರ್ಕಿಗೆ ವಾಕಿಂಗ್ ಎಂದು ಹೋಗುವುದನ್ನ ರೂಡಿಸಿಕೊಂಡು ಸುಮಾರು ಆರು ತಿಂಗಳಾಯಿತು. ಪಾರ್ಕ್ ಎಂದರೆ ದೊಡ್ಡದೇನಲ್ಲ. ಸುತ್ತಲೂ ಸಿಮೆಂಟು ಕಟ್ಟಡಗಳೇ ಮುತ್ತಿಕೊಂಡಿದ್ದರೂ `ನನಗೂ ಆ ಕಟ್ಟಡಗಳಿಗೂ ಸಂಬಂಧವೇ ಇಲ್ಲ', ಎಂಬಂತೆ ಏಕಾಗ್ರತೆ ಕಾಪಾಡಿಕೊಳ್ಳಲು ಹವಣಿಸುತ್ತಿರುವ ಪುಟ್ಟ ಉದ್ಯಾನ. ಮೊಬೈಲ್ ಫೋನ್ ಮನೆಯಲ್ಲೇ ಬಿಟ್ಟು ಬರುವುದರಿಂದ ನನ್ನೊಟ್ಟಿಗೆ ನಾನೊಬ್ಬಳೇ ಕಳೆಯುವ ಈ ಸಮಯ ಅಮೂಲ್ಯ. ಸಾಧಾರಣ ಮಿತಿಯಲ್ಲಿ ಹೆಜ್ಜೆ ಹಾಕಿಕೊಂಡು ಮೂರು ಸುತ್ತು ಮುಗಿದು ಕಲ್ಲುಬೆಂಚಿನ ಮೇಲೆ ಐದು ನಿಮಿಷದ ಸಣ್ಣ ವಿರಾಮ. ನಂತರ ಸಣ್ಣದಾಗಿ ೪-೫ ಸುತ್ತು ಓಡುವ ಪ್ರಯಾಸ ! ಆಗಾಗ ಈ ಎನರ್ಜಿ ಎಂಬ ಮಾಂತ್ರಿಕ ದಬ್ಬಿದರೆ ಮಾತ್ರ ಇನ್ನೊಂದೆರಡು ಸುತ್ತಿಗೆ ಅವಕಾಶ. ಬೆವರು, ಏದುಸಿರು ಬೆರೆತ ಸಮಾಧಾನ! ಎಲ್ಲಾ ಸುತ್ತುಗಳು ಮುಗಿಸಿ  ಕಲ್ಲುಬೆಂಚಿಗೆ ಆನಿ ಸುಧಾರಿಸಿಕೊಂಡು  ಸುತ್ತಲೂ ಒಂದು ಕಣ್ಣಾಡಿಸಿದರೆ ಪಾರ್ಕಿನಲ್ಲಿ ಕಾಣಸಿಗುವ ಕೇಳಸಿಗುವ ಪುಟ್ಟ ಕಥೆಗಳು.  




ಬಹುಶ ಮೊಬೈಲ್ ಇಲ್ಲದ ಕಾರಣ ಇವರ ಕಥೆಗಳು  ಸ್ಪಷ್ಟವಾಗಿ ಕೇಳುಸುತ್ತವೇನೋ. ಮೊದಮೊದಲಿಗೆ ಮುಜುಗರವಾಗುತಿದ್ದರೂ ಯಾವುದನ್ನೂ ಯಾರನ್ನೂ ಜಡ್ಜ್ ಮಾಡದೆ ಅವರಿರುವಂತೆ ಅವರನ್ನು ನೋಡಲು ಅರಿಯಲು ಇದೊಂದು ಸದಾವಕಾಶವಾಗಿ ಕಂಡಿತು.  ಹೀಗೆ ವಾರಾಂತ್ಯಗಳಲ್ಲಿ ವಾಕಿಂಗ್ ಮಾಡುವುದೊಂದಾದರೆ ನಂತರದ ಈ ಕಥೆಗಳಿಗಾಗಿ ಹವಣಿಸಲು ಮೊದಲಾಯಿತು ಮನಸು .....  

ಈ ಸಣ್ಣಪುಟ್ಟ ಕಥಾನುಭವಗಳು ಹೀಗೆ ಇಲ್ಲಿ ಬರೆಯಬೇಕೆನಿಸಿ.... 

(ಸಶೇಷ)

Tuesday, April 20, 2021

ಉತ್ತರಾರ್ಧ ... ನನ್ನ ಇತ್ತೀಚಿನ ಓದು.

********

ಪ್ರತಿಯೊಂದು ವಿಷಯಕ್ಕೂ, ಘಟನೆಗೂ ನಾನಾ ಮಜಲುಗಳು, ವಾಸ್ತವಗಳು. ನಾವು ನಿಂತ ನೆಲದ ಮೇಲೆ, ಒಂದು ಬದಿಯಲ್ಲಿ ನಮ್ಮ ಕಣ್ಣಳತೆಗೆ ಕಾಣಿಸುವಷ್ಟು ವಿಸ್ತಾರ ಮಾತ್ರ ನಮ್ಮ ಸತ್ಯ. ನಮಗೆ ಕಾಣಿಸದ ಇನ್ನೊಂದು ಬದಿ ಇದೆ. ಅಲ್ಲಿಯೂ ಒಂದು ಸತ್ಯ ಇದೆ. ಒಂದು ಪೂರ್ವಾರ್ಧ - ಮತ್ತೊಂದು ಉತ್ತರಾರ್ಧ. ಎಲ್ಲವೂ ಸರಿ, ಎಲ್ಲರೂ ಸರಿ; ಅವರವರ ನೇರಕ್ಕೆ.
ಜಯಕ್ಕ, ನಿಮ್ಮ ಕಥಾಸಂಕಲನ ಉತ್ತರಾರ್ಧ ಓದಿದೆ. ಹತ್ತು ಕತೆಗಳೂ ಹತ್ತು ಆಯಾಮಗಳನ್ನು ಹೊಂದಿರುವ ಅರ್ಥಪೂರ್ಣ ರಚನೆಗಳು. ಪ್ರತಿಯೊಂದು ಕತೆಯಲ್ಲೂ ತೆರೆದಿಟ್ಟಿರುವುದು ಒಂದು ಬದಿಯ ದೃಷ್ಟಿಕೋನ, ಉತ್ತರಾರ್ಧ. ಮತ್ತೊಂದು ಬದಿ ಏನಿದ್ದಿರಬಹುದು, ಏನಾಗಿರಬಹುದೆಂದು ಓದುಗರ ಆಲೋಚನೆಗೆ, ಒರೆಗೆ ಹಚ್ಚಿ ಬಿಟ್ಟ ಪೂರ್ವಾರ್ಧ!
Indeed, a very interesting concept.

ತನ್ನೊಡಲ ತುಂಬ ಲಕ್ಷೋಪಲಕ್ಷ ಚುಕ್ಕಿಗಳನ್ನು ತುಂಬಿಕೊಂಡಿರುವ ಆಗಸಕ್ಕೆ, ಮೂರು ಚುಕ್ಕಿಗಳನ್ನು ತನ್ನೊಡಲಿಗೂ ಎಸೆದುಬಿಡು ಎನ್ನುತ್ತಾ, ಒಂದಿಷ್ಟು ಬೆಳಕಿಗಾಗಿ ಹಂಬಲಿಸಿ ಬೇಡುವ ನಾಯಕನ ಅಸಹಾಯಕತೆ. ಸಂಸಾರಗಳಲ್ಲಿ ಬಿರುಕುಗಳು ಅದಾವ ಕ್ಷಣದಲ್ಲಿ ಮೂಡುವವೋ! ಸಾನ್ವಿಯ ಆ ತೀರ್ಮಾನ ಎಷ್ಟು ಸರಿಯೋ - ಎಷ್ಟು ತಪ್ಪೋ? ಅವಳ ಬದಿಯ ಕತೆ ಅಥವಾ ವಾಸ್ತವ ಏನಿರಬಹುದೋ?
"ನೆಲ ಮುಗಿಲುಗಳ ನಡುವೆ ಮುನಿಸು, ಕಾಳಗವೇ? ಅವೆರಡು ಕೂಡ ಒಂದಕ್ಕೊಂದು ವಿರೋಧವೇ ಅಥವಾ ಯಾವೊಂದನ್ನು ಹೊರತುಪಡಿಸಿದರೂ ಮತ್ತೊಂದಕ್ಕೆ ಅರ್ಥವಿಲ್ಲವೇ? ಹಾಗಿದ್ದಲ್ಲಿ, ಅವೆರಡು ಎಂದೂ ಬೇರ್ಪಡಿಸಲಾಗದ ಒಂದೇ ಕಿರಣದ ಆದಿ ಮತ್ತು ಅಂತ್ಯ ಅಲ್ಲವೇ?"
ಅನಂತು ಹಾಗೂ ಅವನ ಸ್ನೇಹಿತನ ಬದುಕಿನ ಪುಟಗಳನ್ನು ತಿರುವಿದಾಗ, ನಿಜಕ್ಕೂ ಒಂದಷ್ಟು ಜನ ತಮ್ಮ ಜೀವನವನ್ನು ಪೂರ್ತಿಯಾಗಿ ಹೀಗೆ ಕಳೆದುಬಿಡುತ್ತಾರಾ, ಎಂದು ಅನಿಸಿತು ಜಯಕ್ಕ.
ನಿಕಾಶ ಮತ್ತು ಅವಳ ಮೂರು ಮಕ್ಕಳ ಅಲೆದಾಟ, ಯಾವ ನೆಲಕ್ಕೂ ಸಲ್ಲದಂತೆ ನಿರಂತರ ಅಭದ್ರತೆಯ ಭಯದಲ್ಲಿ ಪರಿತಪಿಸುವ ಅವಳಂತ ನಿರಾಶ್ರಿತರ ಬದುಕು ಕಣ್ಣ ಮುಂದಿ ಹಾದುಹೋಯಿತು. ಮಾನವನಿಗಿಂತ ಕ್ರೂರ ಮತ್ತೋರ್ವ ಪ್ರಾಣಿ ಇರಲು ಅಸಾಧ್ಯ ನಿಜ. ಬದುಕನುಳಿಸುವ ನೆಪದಲ್ಲಿ, ಬದುಕನಳಿಸುವ ಯತ್ನ, ಮಾನವೀಯತೆ ಮೆರೆವ ಟೊಳ್ಳು ಯತ್ನವದು.
ಒಂದೆಡೆ ಅದಿತಿ, ವಲ್ಲಭ ಮತ್ತು ವಲ್ಲಭನ ಒಂದೂವರೆ ಕಾಲು; ಮತ್ತೊಂದೆಡೆ ಸೋಲೊಪ್ಪಲು ತಯಾರಿಲ್ಲದ ಅವನ ಗಾಲಿಕುರ್ಚಿ ಮತ್ತು ಆ ಜೀವವಿಲ್ಲದ ಕುರ್ಚಿ ಅವನನ್ನು ಅವನ ಗುರಿಯ ಕಡೆಗೆ ಹುರಿದುಂಬಿಸುವ ಪರಿ, ಇಷ್ಟವಾಗುತ್ತವೆ.
ಸುರಸುಂದರಾಂಗ ಪತ್ರೀಗೌಡನ ತಿಣುಕಾಟ ಮತ್ತು ಅವನ ಬಾಸ್ ಜೊತೆಗಿನ ಪೇಚಾಟಗಳು ಸಾಕಷ್ಟು ನಗಿಸಿದ್ದು ಹೌದು. ಆದರೂ ಯಾವ ಸಂದರ್ಭದಲ್ಲೂ ಕೆಟ್ಟದ್ದನ್ನು ಮನಸಾ ಅಪೇಕ್ಷಿಸಬಾರದು ಅನ್ನುವುದಕ್ಕೆ ಈ ಕತೆ ನಿದರ್ಶನವಾಗಿತ್ತು. This one was too effective.
ಮನು ಮತ್ತು ಗಿರಿಯ ಮದುವೆ! ಅದೊಂದು ತ್ಯಾಗವೋ ಅಥವಾ ಪ್ರಾಯಶ್ಚಿತವೋ, ಸಹಜವಾದ ಗೊಂದಲವಿದೆ ನನಗೂ. ಮತ್ತೆ, ಆ ಹರಕಲು ಪುಸ್ತಕದ ಹಾಳೆಗಳಲ್ಲಿ ಮೆರೆದಿದ್ದು ಮಾತ್ರ ಮನ ಸೂರೆಗೊಳಿಸುವ ಬಾಜೀರಾಯ ಹಾಗೂ ಮಸ್ತಾನಿಯ ಗಾಢವಾದ "ಪ್ರೇಮ್ ಕಹಾನೀ" ನೋಡಿ.
ನಮ್ಮಲ್ಲಿ ಹೆಂಡತಿಯನ್ನು ಹೊಡೆಯುವ ಮಹನೀಯರುಗಳಿಗೇನು ಕಮ್ಮಿ ಇಲ್ಲ. ಅವರು ಎಲ್ಲ ವರ್ಗಗಳಲ್ಲೂ ಸಿಗುತ್ತಾರೆ, from all corners of the world. ನ್ಯಾಯ ಹೇಳುವ ನ್ಯಾಯಾಧೀಶೆಗೆ ತನ್ನ ಗಂಡ ಹೊಡೆದು ಬಡೆದು ಮಾಡುತ್ತಿದ್ದರೂ ಅದನ್ನು ಸಹಿಸುವ ಆ ತಾಳ್ಮೆ, ಆ ತ್ಯಾಗ ಯಾವ ನಿಲುಮೆಯನ್ನು ಸೂಚಿಸುತ್ತದೆ!? ಇದು ಕೇವಲ ನಮ್ಮ ದೇಶದ ಸ್ಥಿತಿ ಮಾತ್ರವಲ್ಲ. ಈ PATRIARCHY ಎಲ್ಲ ದೇಶಗಳ, ಎಲ್ಲ ವರ್ಗಗಳ ಹೆಣ್ಣುಮಕ್ಕಳು, ಒಂದಲ್ಲ ಒಂದು ರೀತಿಯಲ್ಲಿ ಅನುಭವಿಸಿಯೇ ತೀರುತ್ತಾರೆ ಅನ್ನುವುದು ನನ್ನ ಭಾವನೆ. Its still a long, long way to go!
ಜಯಕ್ಕ, ನೀವು ಪ್ರತಿಯೊಂದು ವಿಷಯದಲ್ಲೂ ಅದೆಷ್ಟು ಅಪ್ಡೇಟ್ ಆಗಿರುತ್ತೀರಿ ಅಂತ, ನಿಮ್ಮ ಬಗ್ಗೆ ಒಂದು ಸಣ್ಣ ಬೆರಗು ಸದಾ ಇದೆ ನನ್ನೊಳಗೆ. ಅದು ನಿಮ್ಮ ಕತೆಗಳಲ್ಲೂ ಕಾಣಿಸಿದ್ದು ನನಗಂತೂ ಆಶ್ಚರ್ಯವೆನಿಸಲಿಲ್ಲ.
ಉತ್ತರಾರ್ಧ ಬಹಳ ಇಷ್ಟವಾಯಿತು 🙂 ❤
ಮತ್ತೊಮ್ಮೆ ಅಭಿನಂದನೆಗಳು ನಿಮಗೆ.


Wednesday, June 5, 2019

ಒಲವ ಭಿಕ್ಷೆ!!!

ಒಲವ
ಭಿಕ್ಷೆಗೆ
ಕಾಯುವಾಗ 
ಧರೆಯ
ತಾಳ್ಮೆ
ಇರಬೇಕು
ಹೀಗೆಂದು
ಗೊಣಗಿಕೊಂಡು ಹೊರಟಿದ್ದ ಆ ಫಕೀರ !!!
ಬಿಡಿಗಾಸಿಗೂ
ಬೆಲೆ ಬಾಳದ
ಅವನ ಹರಕಲು
ಜೋಳಿಗೆಯ ಮೇಲೆ
ನನ್ನ ಕಣ್ಣು !!
ಅದರೊಳಗೇನಿರಬಹುದು?
ಹಿಂಬಾಲಿಸಿದಷ್ಟೂ
ಕುತೂಹಲ
ಆಗೊಮ್ಮೆ ಹೀಗೊಮ್ಮೆ
ಜೋಪಾನ ಮಾಡಿಕೊಳ್ಳುವ !!
ಭುಜಕ್ಕೆ ಜೋತು ಬಿದ್ದ
ಆ ಜೋಳಿಗೆಯನ್ನ
ತಲೆದಿಂಬಾಗಿಸಿ
ಆ ಮರದಡಿ
ಮಲಗಿರುವ!!
ಅವರಿವರ ಮನೆಯ
ಪರಮಾನ್ನ
ಅಬ್ಭಾ! ನಿದ್ದೆ ಜೋರು ನಿದ್ದೆ ...
ಕಣ್ ಬಿಟ್ಟವನೆ
ಏನೋ ನೆನಪಿಸಿಕೊಂಡವನಂತೆ
ಜೋಳಿಗೆಯೊಳಗಿಂದ
ಗಂಟೊಂದನ್ನ ತೆಗೆದಿಟ್ಟ !!!
ಹಿಂಬಾಲಿಸಿ
ಬಂದವಳಿಗೆ ಮೋಸವಿಲ್ಲ.
ಗಂಟು ಬಿಚ್ಚಿದಂತೆಲ್ಲ
ನಕ್ಷತ್ರಗಳು
ಒಂದೊಂದಾಗಿ ಹೊರಬಂದವು
ಬಾಂದಳದೆಡೆ ದಾರಿ ಮಾಡಿಕೊಂಡು
ಒಂದರ ಹಿಂದೆ ಒಂದು
ಸಾಗಿದವು ...
ಆಹಾ! ಏನಿದು ದೃಶ್ಯ
ತಲೆ ಎತ್ತಿ ನೋಡಿದಾಗ
ಆಕಾಶವೆಲ್ಲ ಹೊಳೆಯುತ್ತಿದೆ!!!
ತುಂಬು ಚುಕ್ಕಿಗಳ ಸಂಭ್ರಮ ....
ಅರೆ!!! ಈ ಫಕೀರ ಎಲ್ಲಿ ಮಾಯವಾದ ...
- RS

Saturday, April 20, 2019

"ಆನ್ ಸುಲ್ಲಿವನ್" ಎಂಬ ಪಂಜು !!!

"When one door of happiness closes, another opens; but often we look so long at the closed door that we do not see the one which has been opened for us.Helen Keller

**** 

ಈ ಹೇಳಿಕೆ ಹೆಲೆನ್ ಕೆಲರ್ ರವರದ್ದು. ಒಂದೂವರೆ ವರ್ಷದ ಹಸುಗೂಸಾಗಿದ್ದಾಗಲೇ ಮೆನಿಂಗಿಟಿಸ್ ಎಂಬ ಅಪರೂಪದ ಕಾಯಿಲೆಗೆ ತುತ್ತಾಗಿ ತಮ್ಮ ದೃಷ್ಠಿ ಕಳೆದುಕೊಂಡು - ಕಿವುಡಾಗಿ,  ಕಗ್ಗತ್ತಲಿನ ನಿಶಬ್ಧ ಜಗತ್ತಿನಲ್ಲಿ ಒಂಟಿಯಾಗಿ ಬಡಿದಾಡುತಿದ್ದ ಜೀವವದು. ಹೆತ್ತವರು ಸಿರಿವಂತರಾಗಿದ್ದರೂ, ತಮ್ಮ ಮಗುವಿನ ಈ ಸ್ಥಿತಿಗೆ ಸಾಧ್ಯವಾದಷ್ಟು ಚಿಕಿತ್ಸೆ ಕೊಡಿಸಿದ್ದರೂ, ಏನೊಂದೂ ಫಲಿಸದೆ ತಮ್ಮ ಕೈ ಚೆಲ್ಲಿ ಕೂರುವ ಹೊತ್ತಿಗೆ ಬೆಳಕಿನ ಕಿಡಿ ಹಿಡಿದು ಬಂದವರೇ ಅವರ ಶಿಕ್ಷಕಿ "ಆನ್ ಸುಲ್ಲಿವನ್ ಮ್ಯಾಸಿ". 


ಹೆಲೆನ್ ಕೆಲರ್ - Bachelor of  Arts ಡಿಗ್ರಿ ಪಡೆದ ವಿಶ್ವದ ಪ್ರಪ್ರಥಮ ಕಿವುಡು ಮತ್ತು ಅಂಧ ವಿದ್ಯಾರ್ಥಿ, ಪ್ರಖ್ಯಾತ ಬರಹಗಾರ್ತಿ, ಉಪನ್ಯಾಸಕಿ, ಸಾಮಾಜ ಸೇವಕಿ ಮತ್ತು  ಹೋರಾಟಗಾರ್ತಿಯಾಗಲು, ಹೆಲೆನ್ ಕೆಲರ್ - ಹೆಲೆನ್ ಕೆಲರ್ರಾಗಲು ಕಾರಣ "ಆನ್ ಸುಲ್ಲಿವನ್" ಎಂಬ ಶಿಕ್ಷಕ ಶಕ್ತಿ.


"The best and the most beautiful things in the world cannot be seen or even touched - they must be felt with the heart",  ಎಂಬ ಹೆಲೆನ್ ಕೆಲರ್ ರ ಈ ಮಾತಿನಲ್ಲಿ "ಆನ್ ಸುಲ್ಲಿವನ್"ರ ಅಪಾರ ಪರಿಶ್ರಮ, ವೃತ್ತಿಪರ  ಸಮರ್ಪಣೆ ಹಾಗು ಹೆಲೆನ್ ಕೆಲರ್ ರ  ಪರವಾಗಿ ಅವರು ತೋರಿದ ಬದ್ಧತೆಯ ಪ್ರತಿಫಲವಿದೆ.  

ಹೆಲೆನ್ ಕೆಲರ್ - ಆನ್ ಸುಲ್ಲಿವನ್ 

ಆನ್ ಸುಲ್ಲಿವನ್ ಎಂಬ ಅದ್ಭುತ ಶಿಕ್ಷಕಿಯ ಪರಿಚಯವಾಗಿದ್ದು,  "The Miracle Workerಎಂಬ ಚಲನಚಿತ್ರದ ಮೂಲಕ https://www.youtube.com/watch?v=-3kqkHT3HzM !!!! ಈ ಚಿತ್ರ ಹೆಲೆನ್ ಕೆಲರ್ ರ ಬಾಲ್ಯದ ಒಂದು ತುಣುಕಾದರು, ತಮ್ಮ ಜೀವನದ ದಿಕ್ಕನ್ನೇ ಬದಲಿಸಿದ ಅತ್ಯಮೂಲ್ಯ ಹಾಗೂ ಅದ್ಭುತ ಹಂತವೇ ಸರಿ!! ಹೆಲೆನ್ ಕೆಲರ್ ರ ಬಾಲ್ಯದ ಆ ದಿನಗಳಿಂದ ಹಿಡಿದು ತಮ್ಮ ಕೊನೆಯ ದಿನಗಳವರೆಗೂ ಆನ್ ಸುಲ್ಲಿವನ್ ಅವರ ಜೊತೆ ಇದ್ದದ್ದು ಮತ್ತೊಂದು ವಿಶೇಷ. ಶಾಲಾ ದಿನಗಳ ಪಠ್ಯ ಪುಸ್ತಕದಲ್ಲಿ ಓದಿದ್ದ ತುಸು ನೆನಪುಗಳನ್ನು ಬಿಟ್ಟರೆ, ಹಾಗು ಅವರ ಕೆಲವು ಪ್ರಖ್ಯಾತ ಉಲ್ಲೇಖಗಳನ್ನು ಬಿಟ್ಟರೆ ಮತ್ತೆ ಹೆಲೆನ್ ಕೆಲರ್ ರನ್ನು ಹಾಗು ಮಿಗಿಲಾಗಿ ಆನ್ ಸುಲ್ಲಿವನ್ ರನ್ನು ಕಂಡದ್ದು ಇಲ್ಲೇ!! ಇವರ ಬಗ್ಗೆ ತಿಳಿಯಲು, ಮತ್ತಷ್ಟು ಓದಲು  https://en.wikipedia.org/wiki/Anne_Sullivan ವಿಕಿ ನೆರವಾಗಿದೆ. 


ಆನ್ ಸುಲ್ಲಿವನ್ ರಿಗೆ ಸಾಷ್ಟಾಂಗ ಪ್ರಣಾಮವಿತ್ತು  !!!  ಸಾಧ್ಯವಾದರೆ ನೀವು ಕೂಡ ಈ ಚಿತ್ರವನ್ನೊಮ್ಮೆ ನೋಡಿ ಎಂಬ ಒತ್ತಾಸೆ :) 
PS : ಧನ್ಯವಾದ ವಿದ್ಸ್ ನಿಮ್ಮ ಶಿಫಾರಸ್ಸಿಗೆ :) 

Sunday, October 21, 2018

ದಿ ಪ್ರೊಫೆಷನಲ್ - ಬದುಕಿನ ಕೊನೆ ಪುಟಗಳಲ್ಲಿ


ಬದುಕು; ಒಬ್ಬೊಬ್ಬೊರಿಗೂ ಒಂದೊಂದು ಅನುಭವ ಕೊಡುವುದೇ ಅದರ ಪ್ರಮುಖ ಲಕ್ಷಣ. ಈ ಬದುಕೆಂಬ ರಥ ಮುಂದೂಡಲು ಒಬ್ಬೊಬ್ಬರದ್ದು ಒಂದೊಂದು ವೃತ್ತಿ! ಎಲ್ಲವೂ ಹೊಟ್ಟೆ ಪಾಡಿನ ಹೆಸರಿನಲ್ಲಿ ನಡೆಸುವ ಕಾಯಕ. ರಾಕೆಟ್ ವೇಗದ ಯುಗದಲ್ಲಿ ಮನುಜತೆಗೆ ಅರ್ಥವೇ ಇಲ್ಲವೆಂಬಂತೆ ಒಬ್ಬರನ್ನೊಬ್ಬರು ಕಾಲೆಳೆದು ಮುಂದೆ ಸಾಗುವ ಮಂದಿ, ತಮಗೆ ಲಾಭವಿಲ್ಲದೆ ಒಂದು ಕಡ್ಡಿಯನ್ನೂ ಸಹ ಅಲುಗಾಡಿಸಲಾರರು. ಅದೇನೇ ದುಡಿದು ಗುಡ್ಡೆ ಹಾಕಿಕೊಂಡರೂ, "ನಮ್ಮ ಸಮಯ ಬಂದಾಗ ಎಲ್ಲವೂ ತೊರೆದು ಹೋಗಲೇಬೇಕು - ಗಳಿಸಿದ್ದಾವುದೂ ನಮ್ಮೊಟ್ಟಿಗೆ ಬರಲಾರದು" ಎಂದು ಮನವರಿಕೆ ಆಗುವಷ್ಟರಲ್ಲಿ ಈ ಬಾಳೆಂಬ ಬಂಡಿ ತನ್ನ ಗಾಲಿಗಳನ್ನ ಸವೆಸಿ ಮುಕ್ಕಾಲು ದಾರಿ ಹಾದು ಹೋಗಿರುತ್ತದೆ.

ಇತ್ತೀಚಿಗೆ ಸುಬ್ರತೊ ಬಾಗ್ಚಿ ರವರ "ದಿ ಪ್ರೊಫೆಷನಲ್" ಎಂಬ ಮ್ಯಾನೇಜ್ಮೆಂಟ್ ಪುಸ್ತಕವೊಂದನ್ನ ಓದುತ್ತಿದ್ದೆ. ವೃತ್ತಿಪರವುಳ್ಳ ಮೇಧಾವಿಗಳ ಅನೇಕ ಉದಾಹರಣೆಗಳು ಓದಲು ದೊರಕಿದವು. ಆ ಸರಣಿಯ ಓದಿನಲ್ಲಿ ಮೊದಲಿಗೆ ಕಂಡುಬಂದದ್ದು "ತ್ರಿವಿಕ್ರಮ ಮಹದೇವ" ಎಂಬ ಪುಣ್ಯಜೀವಿಯ ಕುರಿತ ಉದಾಹರಣೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರಗೊಂಡ ಈ ಪುಸ್ತಕದಲ್ಲಿ ಮಹಾದೇವರ ಪ್ರಸ್ತಾವನೆ ಕಂಡು ಕುತೂಹಲ ನೂರ್ಮಡಿಯಾಗಿದ್ದು ನಿಜ. ಅಷ್ಟಕ್ಕೂ ಈ ಮಹದೇವ ಯಾರು?

ಮಹಾದೇವರ ಹುಟ್ಟೂರು ನಂಜನಗೂಡಿನ ಬಳಿಯಿರುವ ಪುಟ್ಟ ಹಳ್ಳಿ. ಮಹಾದೇವ ತಮ್ಮ ನಾಲ್ಕನೇ ವಯಸ್ಸಿನಲ್ಲಿರುವಾಗ ಮನೆಯಲ್ಲಿ ದೊಡ್ಡ ಜಗಳವಾಗಿ, ಅವಮಾನಿತಳಾದ ಇವರ ತಾಯಿ ಇವರನ್ನು ಕರೆದುಕೊಂಡು ಚಾಮರಾಜನಗರಕ್ಕೆ ಬರುತ್ತಾರೆ. ಮಹಾದೇವ ತನ್ನ ಎಂಟನೇ ವಯಸ್ಸಿನಲ್ಲಿರುವಾಗ ಇವರ ತಾಯಿಯು ತೀವ್ರ ಅನಾರೋಗ್ಯಗೊಳ್ಳುತ್ತಾರೆ. ವೈದ್ಯರ ಸಲಹೆಯಂತೆ ಬೆಂಗಳೂರಿನ ದೊಡ್ಡಾಸ್ಪತ್ರೆ ಎಂದೇ ಹೇಳಲ್ಪಟ್ಟ ವಿಕ್ಟೊರಿಯಾ ಆಸ್ಪತ್ರೆಗೆ ಬರುತ್ತಾರೆ. ಹೀಗೆ ತಾಯಿಯೊಡನೆ ಬೆಂಗಳೂರಿಗೆ ಬಂದ ಹುಡುಗ, ತನ್ನ ಪುಟ್ಟ ವಯಸ್ಸಿನಿಂದಲೇ ಸಾವಿರಾರು ಜನರ ಬದುಕಿನಾಚೆಯ ಕೊನೆಯ ಪುಟಗಳಿಗೆ ಸಹಿ ಹಾಕುವ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಾನೆ.

ಮಹಾನಗರಿ ಬೆಂಗಳೂರಿನ ರೀತಿ ರಿವಾಜುಗಳ ಪರಿವಿಲ್ಲದೆ, ಆಸ್ಪತ್ರೆಗೆ ದಾಖಲಾಗುವ ನಿಯಮಗಳನ್ನರಿಯದೆ ನಾಲ್ಕು ದಿನಗಳಾದರೂ ಆಸ್ಪತ್ರೆಯ ಹೊರಗೆ ರಸ್ತೆ ಬದಿಯನ್ನೇ ವಸತಿ ಮಾಡಿಕೊಂಡು ನರಳುತ್ತಾರೆ ಇವನ ತಾಯಿ. ಕಡೆಗೆ ಅಮ್ಮನ ಬಳಿಯಿರುವ ಪುಡಿ ಚಿನ್ನವನ್ನು ಆಸ್ಪತ್ರೆಯ ಅಟೆಂಡರ್ ಕೈಗಿತ್ತು ಅವರನ್ನು ಆಸ್ಪತ್ರೆಗೆ ದಾಖಲಿಸಿದರೆ, ಬೇಕಾದ ಆರೈಕೆ ಹಾಗು ಚಿಕಿತ್ಸೆ ದೊರಕದೆ ತಾಯಿ ಸಾವನ್ನಪ್ಪುತ್ತಾರೆ. ಇದಾವುದರ ಅರಿವಿಲ್ಲದ ಮಹಾದೇವ ಆಸ್ಪತ್ರೆಯ ಹೊರಗೆ ಸ್ನೇಹಿತರನ್ನು ಮಾಡಿಕೊಂಡು ದಿನವಿಡೀ ಆಟವಾಡುತ್ತ, ಅಂಗಡಿಯವರು ಅವರಿವರು ಕೊಟ್ಟ ತಿಂಡಿ ತಿನಿಸುಗಳನ್ನು ಉಂಡು ಜಗುಲಿಯ ಮೇಲೆ ಕಾಲ ಕಳೆಯುತ್ತಾನೆ. ತಾಯಿ ಸತ್ತ ಎರಡು ವಾರದ ಬಳಿಕ ಅಟೆಂಡರ್ ನ ಕಣ್ಣಿಗೆ ಸಿಕ್ಕ ಈ ಹುಡುಗನಿಗೆ, ತಾಯಿ ತೀರಿಕೊಂಡ ವಿಷಯ ತಿಳಿಯುತ್ತದೆ. ಅಮ್ಮನ ಅಂತ್ಯಕ್ರಿಯೆಯನ್ನು ಮಾಡಿದ್ದು 80ರ ಮುದುಕ ಕೃಷ್ಣಪ್ಪನೆಂದು ತಿಳಿಯುತ್ತದೆ. ಆಸ್ಪತ್ರೆಗೆ ಬರುವ ಅನಾಥ ಶವಗಳಿಗೆ ಇವರೇ ಬಂಧು, ಬಳಗ ಎಲ್ಲವೂ. ಮಹಾದೇವನ ಪಾಡನ್ನು ದೈನಿತ್ಯ ಗಮನಿಸುತ್ತಿದ್ದ ಸ್ನೇಹಿತರು 12 ರೂಪಾಯಿ ಒಟ್ಟುಗೂಡಿಸಿ ಊರಿಗೆ ಹಿಂದಿರುಗಲು ಹೇಳುತ್ತಾರೆ. ತನ್ನ ಊರಿಗೆ ಮರುಳಲು ಒಪ್ಪದೆ ವಯಸ್ಸಾದ ಕೃಷ್ಣಪ್ಪನೊಂದಿಗೆ ವಾಸಿಸಲು ಮೊದಲಾಗುತ್ತಾನೆ ಮಹಾದೇವ. ಇವರಿಬ್ಬರ ವಾಸವೂ ಸಹ ಆಸ್ಪತ್ರೆಯ ಮೂಲೆಯಲ್ಲೆಲ್ಲೊ. ಇವನನ್ನು ಅಪ್ಪಿಕೊಂಡ ಕೃಷ್ಣಪ್ಪ ತನ್ನ ವೃತ್ತಿಯನ್ನು ಕಲಿಸಿ ಬದುಕಿಗೆ ನೆರವಾಗುತ್ತಾರೆ. ಅಂದಿನಿಂದ ಮೊದಲಾಗುತ್ತದೆ ಈ ಪುಟ್ಟ ಬಾಲಕನ ಸೇವೆ - ಅನಾಥ ಶವಗಳ ಮುಕ್ತಿ ಮಾರ್ಗದಲ್ಲಿ ತನ್ನ ಬದುಕು ರೂಪಿಸಿಕೊಳ್ಳುವ ಪರಿ. ಇದು ನಡೆದದ್ದು 1971 ರಲ್ಲಿ.

45 ವರ್ಷಗಳ ಬಳಿಕ, ಇಂದಿಗೆ ಸಾವಿರಾರು ಅನಾಥ ಶವಗಳನ್ನು ಹೊತ್ತು, ಹೂತು ಆತ್ಮಗಳಿಗೆ ಕೈ ಮುಗಿದಿದ್ದಾರೆ ಮಹಾದೇವ. ಇದು ಪಾಲಿಕೆಯ ಕೆಲಸವಾದರೂ ಈ ವಿಭಾಗವು ವ್ಯವಸ್ಥಿತವಾಗಿ ಇಲ್ಲದಿರುವುದು ವಿಪರ್ಯಾಸ. ಇವರ ಕಾರ್ಯಶ್ರಮ ಮತ್ತು ವೈಖರಿ ಎಲ್ಲೆಡೆ ಹರಡುತ್ತಿದ್ದಂತೆ, ಪೊಲೀಸರು ಎಲ್ಲಿಯೇ ಅನಾಥ ಶವಗಳನ್ನು ಕಂಡರೂ ಇವರನ್ನು ಕರೆಯಲು ಆರಂಭಿಸಿ, ಒಂದು ಶವಸಂಸ್ಕಾರಕ್ಕೆ ಸುಮಾರು 200 ರಿಂದ 300 ರೂಪಾಯಿಗಳನ್ನು ನೀಡುತ್ತಾರೆ. ಖರ್ಚು ಕಳೆದು ಪ್ರತಿಯೊಂದು ಅಂತ್ಯಕ್ರಿಯೆಗೂ 25
/- ರಿಂದ 50/- ಇವರ ಪಾಲಾಗುತ್ತದೆ.


ಅನುರಾಗ, ಅನುಕಂಪ ಹಾಗು ಸಂಬಂಧಗಳ ಸಹಜ ಭಾವನೆಗಳೇ ಇರದೆ ತಾನು ಮಾಡುವ ಕೆಲಸ ಅದು ತನ್ನ ಹೊಟ್ಟೆಪಾಡಿಗೆಂದು ದುಡಿಯುತ್ತಿರುವಾಗ, ಕೃಷ್ಣಪ್ಪ ತನ್ನ 92ನೇ ವಯಸ್ಸಿನಲ್ಲಿ ಮಹಾದೇವರ ತೋಳಿನಲ್ಲೆ ಸಾವನ್ನಪ್ಪುತ್ತಾರೆ. ಮೊದಲ ಬಾರಿಗೆ ತನ್ನವರನ್ನು ಕಳೆದುಕೊಂಡ ನೋವಿನನುಭವ ಮಹಾದೇವರಿಗೆ ಆಗುತ್ತದೆ. ಸಂಕಟ ದುಃಖಗಳ ಮೊದಲ ಪರಿಚಯವೇ ಇದು. ಅಂದಿನಿಂದ ಪ್ರತಿಯೊಂದು ಶವಸಂಸ್ಕಾರವು ಇವರ ಪಾಲಿಗೆ ಹೊಟ್ಟೆಪಾಡಿನ ಕಾಯಕ ಮಾತ್ರವಲ್ಲದೆ ದೇವರ ಕೆಲಸದಂತೆ ಭಾಸವಾಗತೊಡಗುತ್ತದೆ. ಒಂದು ಕಾಲದಲ್ಲಿ ರಾಜರಂತೆ ಮೆರೆದವರು, ನೂರಾರು ಜನರ ನಡುವೆ ಬಾಳಿ ಬದುಕಿದ್ದವರು ಅನಾಥ ಶವವಾಗಿ ಅಂತ್ಯೆಗೊಳ್ಳುವ ಹೊತ್ತಿಗೆ ಮುಕ್ತಿ ಮಾರ್ಗದಲ್ಲಿ ಮಹಾದೇವ ನೆರವಾಗಿದ್ದಾರೆ. ಕೊಳೆತ ಶವಗಳಾಗಲಿ ಮತ್ತೊಂದಾಗಲಿ ಇವರ ಶಿಸ್ತು, ಅಚ್ಚುಕಟ್ಟುತನ, ಶ್ರದ್ಧೆ - ಶ್ರಾದ್ಧವಾಗಿ ಪರಿಣಮಿಸುತ್ತದೆ.

ಮೊದಲಿಗೆ ತಳ್ಳುವ ಗಾಡಿಯಲ್ಲಿ ಶವಗಳನ್ನು ಹೊರುತ್ತಿದ್ದ ಮಹಾದೇವ ನಂತರ ಕುದುರೆ ಬಂಡಿಯೊಂದನ್ನು ತಮ್ಮ ಪಯಣದಲ್ಲಿ ಜೊತೆಗೂಡಿಸಿಕೊಳ್ಳುತ್ತಾರೆ. ಸಹೃದಯಿಗಳು ಇವರ ಕೆಲಸ ಕಾರ್ಯಗಳನ್ನು ಗಮನಿಸಿ ಆಟೋ, ನಂತರ ಮಾರುತಿ ವ್ಯಾನ್ ಖರೀದಿಸಿ ಕೊಡುತ್ತಾರೆ. ಇವರ
ಕಥೆ / ಜೀವನ ಚರಿತ್ರೆ ಅನೇಕ ಪತ್ರಿಕೆಗಳಲ್ಲಿ ಹಾಗು ಮಾಧ್ಯಮಗಳಲ್ಲಿ ಪ್ರಸಾರವಾಗುವ ಹೊತ್ತಿಗೆ ದಿವಂಗತ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ರಿಂದ ಸನ್ಮಾನ, 1999ರಲ್ಲಿ ಮುಖ್ಯ ಮಂತ್ರಿಗಳಿಂದ ಚಿನ್ನದ ಪದಕ, 2004ರಲ್ಲಿ ಕೆಂಪೇಗೌಡ ಪ್ರಶಸ್ತಿ ಮತ್ತು 2006ರಲ್ಲಿ ಗಾಡ್ಫ್ರೆ ಫಿಲಿಪ್ಸ್ ಬ್ರೆವರೀ ಅವಾರ್ಡ್ಗಳು ಇವರ ಪಾಲಾಗುತ್ತದೆ. ಇವರಿಗೆ ತ್ರಿವಿಕ್ರಮ ಮಹಾದೇವ ಎಂಬ ಬಿರುದು ಸಹ ನೀಡಲಾಗುತ್ತದೆ. 1991ರಲ್ಲಿ ರಾಜೀವ್ ಹತ್ಯೆಯ ಪ್ರಮುಖ ಆರೋಪಿ ಶಿವರಸನ್ ನ ಅಂತ್ಯಕ್ರಿಯೆ ನಡೆಸಲು ಮಹಾದೇವ ಆಯ್ಕೆಯಾಗುತ್ತಾರೆ. ಇಂದಿಗೂ ಇವರ ಬಳಿ ಡ್ರೈವಿಂಗ್ ಲೈಸೆನ್ಸ್ ಇಲ್ಲ, ಪೊಲೀಸ್ ಇಲಾಖೆಯ ಪ್ರತಿಯೊಬ್ಬರೂ ತನಗೆ ಚಿರಪರಿಚಿತರೇ ಎನ್ನುತ್ತಾರೆ ಮಹಾದೇವ್. ಭಾರತೀಯ ರೈಲ್ವೆ ಯವರು ಮೊಬೈಲ್ ಫೋನ್ ಖರೀದಿಸಿ ಕೊಟ್ಟಿದ್ದಾರೆ. ದಾನಿಗಳು ಇವರ ವಾಹನಕ್ಕೆ ಉಚಿತವಾಗಿ ಪೆಟ್ರೋಲ್ ಹಾಕಿಸುತ್ತಾರೆ.


ಮಹಾದೇವರ ಜೀವನ ವೃತ್ತಾಂತದ ಜಾಡು ಹಿಡಿದು ಇವರಿಗೆ ಫೋನಾಯಿಸಿದೆ.  ಇಂದಿಗೆ ಬೆಂಗಳೂರಿನ ಮೈಸೂರು ರಸ್ತೆಯ ಬಳಿಯಿರುವ ಅಡಿಗೆವಡೆಯರ ಹಳ್ಳಿಯಲ್ಲಿ ಇವರ ವಾಸ. ಪುಷ್ಪಲತಾರನ್ನು ಮದುವೆಯಾಗಿದ್ದಾರೆ; ಇವರ ಮಕ್ಕಳು ಶಾಲೆಗೆ ಹೋಗುತ್ತಿದ್ದು, ಮಹಾದೇವರ ಕೆಲಸಗಳಿಗೂ ಸಹಾಯ ಮಾಡುತ್ತಾರೆ. "ಮಾಡುತ್ತಿರುವ ಕೆಲಸ ಆತ್ಮತೃಪ್ತಿ ನೀಡಿದೆ. ದೇವರು ಎಲ್ಲಿಯೂ ಇಲ್ಲ, ನಮ್ಮ ನಿಮ್ಮಲ್ಲೇ ಇದ್ದಾನೆ ಪುಟ್ಟಿ" ಎಂದು ನನ್ನಲ್ಲಿ ಹೇಳಿದಾಗ, ಮಹಾದೇವರ ಬದುಕಿಗೊಂದು ಸಾಷ್ಟಾಂಗ ಪ್ರಣಾಮವಿಟ್ಟು, ಇವರ ಬದುಕು ಹಸನಾಗಲಿ ಎಂದು ಮನಸಾರೆ ಹರಸಿದೆ.

ಪುಣ್ಯವೆಂದರೆ ಮನುಷ್ಯತ್ವಕ್ಕೆ ಸನಿಹವಿರುವುದೇ ಅಲ್ಲವೇ? ಹುಟ್ಟು ಅದು ಹೇಗೆ ಗೌಪ್ಯವೋ ಸಾವೂ ಕೂಡ ಅಷ್ಟೇ ನಿಗೂಢ. ಇವೆರಡರ ನಡುವಣ ಬದುಕೆಂಬ ಮಾಯೆಯ ಬಗೆಯಂತೂ ಹೇಳತೀರದು. ಗ್ರಹಿಕೆಗೆ ಸಿಗದ - ಎಣಿಕೆಗೆ ಸಿಗದ ಮಾಯಾಮಂಜರಿ. ಅವಸಾನದಲಿ ಆತ್ಮಪಕ್ಷಿ ಹಾರಿಹೋಗುವ ಹೊತ್ತಿಗೆ ಯಾರ ಮರಣ ಎಲ್ಲಿದೆಯೊ!!

ಮಹಾದೇವ ಸರ್, ಹ್ಯಾಟ್ಸ್ ಆಫ್ ಟು ಯು ಫಾರ್ "ದಿ ಪ್ರೊಫೆಷನಲ್" ದಟ್ ಯು ಆರ್. ಯಾವ ಕೆಲಸವಾದರೇನು, ವೃತ್ತಿಪರ ಆಗುವುದು ಸುಲಭದ ಮಾತಲ್ಲ. ಮತ್ತೆ, ಸುಬ್ರೊತೊ ಬಾಗ್ಚಿರವರಿಗೆ ಈ ಮೂಲಕ ಒಂದು ನಮನ.

ರೂಪ ಸತೀಶ್
ಬೆಂಗಳೂರು


Wednesday, December 6, 2017

#88 - ಗೀಚು ಹೊತ್ತಿಗೆ

*********************
ಅರ್ಧ
ಮಾತು
ಒಂದರ್ಧ
ಮೌನ
ನಡುವಲ್ಲೆಲ್ಲೋ
ಒಂದು ಸತ್ಯ !!

ಸಣ್ಣ
ಆಣೆ
ಎರಡು
ಗುರುತು
ಮತ್ತದೇ ನಾಟಕ
ಒಂದು ಮರೆವು !!

ಪುಟ್ಟ
ಹೃದಯ
ಮೊನಚು
ನೋಟ
ಹಗಲುಗನಸಿನಲೂ
ಒಂದು ಸುಳ್ಳು !!

ಚಂದಿರನಿಗೀಗ
ಚಾಡಿ
ಹೇಳುವ ಸಮಯ ....
- RS

Sunday, November 5, 2017

ನಸುಕಿನ ಕನವರಿಕೆಗಳು


ಬರೆದು ಮನದಟ್ಟಾಗಿಸಬೇಕು....
ಮನದ ಮರೆಯ ನೆನಪು,
ಹೃದಯದ ಆಸುಪಾಸಿನಲ್ಲಿ 
ಬೆಚ್ಚಗಿನ ಕಾವು!!!
ನೆನೆದು ಮರೆತುಬಿಡಬೇಕು....
ಕಣ್ಣಂಚಿನಲ್ಲೇ ಕುಳಿತು ಒಳಗೆ ಬಾರದ ನಿದಿರೆ!
ಬಡಬಡಿಕೆಯ ಉಸ್ತುವಾರಿಯಲ್ಲಿ
ಕಳೆದುಬಿಡುವ ಮುಂಜಾವು!!!
ಆರಾಧಿಸಿ ಸ್ತುತಿಸಬೇಕು....
ಅಲಕ್ಷಿಸಿ, ಕಡೆಗಣಿಸಿದ ಕ್ಷಣಗಳ,
ಪ್ರೀತಿಯಲ್ಲಿನ ವೈಕಲ್ಯ .... ಮತ್ತೆ
ಶರಣಾಗತಿಯಲ್ಲಿನ ಜಾಣ್ಮೆ!!!
ಪ್ರಸವವದು ಅರಿವಿರಬೇಕು....
ಕೊಲ್ಲುವ ಆ ಪ್ರಕ್ಷುಬ್ಧ ಭಾವನೆಗಳ
ಮರುಜನ್ಮಕ್ಕೆ ಕಾರಣ
ಆ ನೋಟ... ಅವನ ಕುಡಿನೋಟ !!!
ಮುಂಜಾವಿನ ಹೊತ್ತಿಗೆ
ಮುಗುದೆಯ ಚಡಪಡಿಕೆ
ಕಳೆದು ಹೋದಳೆಂದು ಊರಲ್ಲೆಲ್ಲಾ ಗುಲ್ಲು
ತನ್ನನ್ನೇ ತಾನು ಹುಡುಕಿಕೊಳ್ಳುವ ನಕಲಿ ಕನಸು!!!

- RS

ಪ್ರತಿ ಬೆಳಗೂ ಹೊಸತನ....

ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತ...