Sunday, October 21, 2018

ದಿ ಪ್ರೊಫೆಷನಲ್ - ಬದುಕಿನ ಕೊನೆ ಪುಟಗಳಲ್ಲಿ


ಬದುಕು; ಒಬ್ಬೊಬ್ಬೊರಿಗೂ ಒಂದೊಂದು ಅನುಭವ ಕೊಡುವುದೇ ಅದರ ಪ್ರಮುಖ ಲಕ್ಷಣ. ಈ ಬದುಕೆಂಬ ರಥ ಮುಂದೂಡಲು ಒಬ್ಬೊಬ್ಬರದ್ದು ಒಂದೊಂದು ವೃತ್ತಿ! ಎಲ್ಲವೂ ಹೊಟ್ಟೆ ಪಾಡಿನ ಹೆಸರಿನಲ್ಲಿ ನಡೆಸುವ ಕಾಯಕ. ರಾಕೆಟ್ ವೇಗದ ಯುಗದಲ್ಲಿ ಮನುಜತೆಗೆ ಅರ್ಥವೇ ಇಲ್ಲವೆಂಬಂತೆ ಒಬ್ಬರನ್ನೊಬ್ಬರು ಕಾಲೆಳೆದು ಮುಂದೆ ಸಾಗುವ ಮಂದಿ, ತಮಗೆ ಲಾಭವಿಲ್ಲದೆ ಒಂದು ಕಡ್ಡಿಯನ್ನೂ ಸಹ ಅಲುಗಾಡಿಸಲಾರರು. ಅದೇನೇ ದುಡಿದು ಗುಡ್ಡೆ ಹಾಕಿಕೊಂಡರೂ, "ನಮ್ಮ ಸಮಯ ಬಂದಾಗ ಎಲ್ಲವೂ ತೊರೆದು ಹೋಗಲೇಬೇಕು - ಗಳಿಸಿದ್ದಾವುದೂ ನಮ್ಮೊಟ್ಟಿಗೆ ಬರಲಾರದು" ಎಂದು ಮನವರಿಕೆ ಆಗುವಷ್ಟರಲ್ಲಿ ಈ ಬಾಳೆಂಬ ಬಂಡಿ ತನ್ನ ಗಾಲಿಗಳನ್ನ ಸವೆಸಿ ಮುಕ್ಕಾಲು ದಾರಿ ಹಾದು ಹೋಗಿರುತ್ತದೆ.

ಇತ್ತೀಚಿಗೆ ಸುಬ್ರತೊ ಬಾಗ್ಚಿ ರವರ "ದಿ ಪ್ರೊಫೆಷನಲ್" ಎಂಬ ಮ್ಯಾನೇಜ್ಮೆಂಟ್ ಪುಸ್ತಕವೊಂದನ್ನ ಓದುತ್ತಿದ್ದೆ. ವೃತ್ತಿಪರವುಳ್ಳ ಮೇಧಾವಿಗಳ ಅನೇಕ ಉದಾಹರಣೆಗಳು ಓದಲು ದೊರಕಿದವು. ಆ ಸರಣಿಯ ಓದಿನಲ್ಲಿ ಮೊದಲಿಗೆ ಕಂಡುಬಂದದ್ದು "ತ್ರಿವಿಕ್ರಮ ಮಹದೇವ" ಎಂಬ ಪುಣ್ಯಜೀವಿಯ ಕುರಿತ ಉದಾಹರಣೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರಗೊಂಡ ಈ ಪುಸ್ತಕದಲ್ಲಿ ಮಹಾದೇವರ ಪ್ರಸ್ತಾವನೆ ಕಂಡು ಕುತೂಹಲ ನೂರ್ಮಡಿಯಾಗಿದ್ದು ನಿಜ. ಅಷ್ಟಕ್ಕೂ ಈ ಮಹದೇವ ಯಾರು?

ಮಹಾದೇವರ ಹುಟ್ಟೂರು ನಂಜನಗೂಡಿನ ಬಳಿಯಿರುವ ಪುಟ್ಟ ಹಳ್ಳಿ. ಮಹಾದೇವ ತಮ್ಮ ನಾಲ್ಕನೇ ವಯಸ್ಸಿನಲ್ಲಿರುವಾಗ ಮನೆಯಲ್ಲಿ ದೊಡ್ಡ ಜಗಳವಾಗಿ, ಅವಮಾನಿತಳಾದ ಇವರ ತಾಯಿ ಇವರನ್ನು ಕರೆದುಕೊಂಡು ಚಾಮರಾಜನಗರಕ್ಕೆ ಬರುತ್ತಾರೆ. ಮಹಾದೇವ ತನ್ನ ಎಂಟನೇ ವಯಸ್ಸಿನಲ್ಲಿರುವಾಗ ಇವರ ತಾಯಿಯು ತೀವ್ರ ಅನಾರೋಗ್ಯಗೊಳ್ಳುತ್ತಾರೆ. ವೈದ್ಯರ ಸಲಹೆಯಂತೆ ಬೆಂಗಳೂರಿನ ದೊಡ್ಡಾಸ್ಪತ್ರೆ ಎಂದೇ ಹೇಳಲ್ಪಟ್ಟ ವಿಕ್ಟೊರಿಯಾ ಆಸ್ಪತ್ರೆಗೆ ಬರುತ್ತಾರೆ. ಹೀಗೆ ತಾಯಿಯೊಡನೆ ಬೆಂಗಳೂರಿಗೆ ಬಂದ ಹುಡುಗ, ತನ್ನ ಪುಟ್ಟ ವಯಸ್ಸಿನಿಂದಲೇ ಸಾವಿರಾರು ಜನರ ಬದುಕಿನಾಚೆಯ ಕೊನೆಯ ಪುಟಗಳಿಗೆ ಸಹಿ ಹಾಕುವ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಾನೆ.

ಮಹಾನಗರಿ ಬೆಂಗಳೂರಿನ ರೀತಿ ರಿವಾಜುಗಳ ಪರಿವಿಲ್ಲದೆ, ಆಸ್ಪತ್ರೆಗೆ ದಾಖಲಾಗುವ ನಿಯಮಗಳನ್ನರಿಯದೆ ನಾಲ್ಕು ದಿನಗಳಾದರೂ ಆಸ್ಪತ್ರೆಯ ಹೊರಗೆ ರಸ್ತೆ ಬದಿಯನ್ನೇ ವಸತಿ ಮಾಡಿಕೊಂಡು ನರಳುತ್ತಾರೆ ಇವನ ತಾಯಿ. ಕಡೆಗೆ ಅಮ್ಮನ ಬಳಿಯಿರುವ ಪುಡಿ ಚಿನ್ನವನ್ನು ಆಸ್ಪತ್ರೆಯ ಅಟೆಂಡರ್ ಕೈಗಿತ್ತು ಅವರನ್ನು ಆಸ್ಪತ್ರೆಗೆ ದಾಖಲಿಸಿದರೆ, ಬೇಕಾದ ಆರೈಕೆ ಹಾಗು ಚಿಕಿತ್ಸೆ ದೊರಕದೆ ತಾಯಿ ಸಾವನ್ನಪ್ಪುತ್ತಾರೆ. ಇದಾವುದರ ಅರಿವಿಲ್ಲದ ಮಹಾದೇವ ಆಸ್ಪತ್ರೆಯ ಹೊರಗೆ ಸ್ನೇಹಿತರನ್ನು ಮಾಡಿಕೊಂಡು ದಿನವಿಡೀ ಆಟವಾಡುತ್ತ, ಅಂಗಡಿಯವರು ಅವರಿವರು ಕೊಟ್ಟ ತಿಂಡಿ ತಿನಿಸುಗಳನ್ನು ಉಂಡು ಜಗುಲಿಯ ಮೇಲೆ ಕಾಲ ಕಳೆಯುತ್ತಾನೆ. ತಾಯಿ ಸತ್ತ ಎರಡು ವಾರದ ಬಳಿಕ ಅಟೆಂಡರ್ ನ ಕಣ್ಣಿಗೆ ಸಿಕ್ಕ ಈ ಹುಡುಗನಿಗೆ, ತಾಯಿ ತೀರಿಕೊಂಡ ವಿಷಯ ತಿಳಿಯುತ್ತದೆ. ಅಮ್ಮನ ಅಂತ್ಯಕ್ರಿಯೆಯನ್ನು ಮಾಡಿದ್ದು 80ರ ಮುದುಕ ಕೃಷ್ಣಪ್ಪನೆಂದು ತಿಳಿಯುತ್ತದೆ. ಆಸ್ಪತ್ರೆಗೆ ಬರುವ ಅನಾಥ ಶವಗಳಿಗೆ ಇವರೇ ಬಂಧು, ಬಳಗ ಎಲ್ಲವೂ. ಮಹಾದೇವನ ಪಾಡನ್ನು ದೈನಿತ್ಯ ಗಮನಿಸುತ್ತಿದ್ದ ಸ್ನೇಹಿತರು 12 ರೂಪಾಯಿ ಒಟ್ಟುಗೂಡಿಸಿ ಊರಿಗೆ ಹಿಂದಿರುಗಲು ಹೇಳುತ್ತಾರೆ. ತನ್ನ ಊರಿಗೆ ಮರುಳಲು ಒಪ್ಪದೆ ವಯಸ್ಸಾದ ಕೃಷ್ಣಪ್ಪನೊಂದಿಗೆ ವಾಸಿಸಲು ಮೊದಲಾಗುತ್ತಾನೆ ಮಹಾದೇವ. ಇವರಿಬ್ಬರ ವಾಸವೂ ಸಹ ಆಸ್ಪತ್ರೆಯ ಮೂಲೆಯಲ್ಲೆಲ್ಲೊ. ಇವನನ್ನು ಅಪ್ಪಿಕೊಂಡ ಕೃಷ್ಣಪ್ಪ ತನ್ನ ವೃತ್ತಿಯನ್ನು ಕಲಿಸಿ ಬದುಕಿಗೆ ನೆರವಾಗುತ್ತಾರೆ. ಅಂದಿನಿಂದ ಮೊದಲಾಗುತ್ತದೆ ಈ ಪುಟ್ಟ ಬಾಲಕನ ಸೇವೆ - ಅನಾಥ ಶವಗಳ ಮುಕ್ತಿ ಮಾರ್ಗದಲ್ಲಿ ತನ್ನ ಬದುಕು ರೂಪಿಸಿಕೊಳ್ಳುವ ಪರಿ. ಇದು ನಡೆದದ್ದು 1971 ರಲ್ಲಿ.

45 ವರ್ಷಗಳ ಬಳಿಕ, ಇಂದಿಗೆ ಸಾವಿರಾರು ಅನಾಥ ಶವಗಳನ್ನು ಹೊತ್ತು, ಹೂತು ಆತ್ಮಗಳಿಗೆ ಕೈ ಮುಗಿದಿದ್ದಾರೆ ಮಹಾದೇವ. ಇದು ಪಾಲಿಕೆಯ ಕೆಲಸವಾದರೂ ಈ ವಿಭಾಗವು ವ್ಯವಸ್ಥಿತವಾಗಿ ಇಲ್ಲದಿರುವುದು ವಿಪರ್ಯಾಸ. ಇವರ ಕಾರ್ಯಶ್ರಮ ಮತ್ತು ವೈಖರಿ ಎಲ್ಲೆಡೆ ಹರಡುತ್ತಿದ್ದಂತೆ, ಪೊಲೀಸರು ಎಲ್ಲಿಯೇ ಅನಾಥ ಶವಗಳನ್ನು ಕಂಡರೂ ಇವರನ್ನು ಕರೆಯಲು ಆರಂಭಿಸಿ, ಒಂದು ಶವಸಂಸ್ಕಾರಕ್ಕೆ ಸುಮಾರು 200 ರಿಂದ 300 ರೂಪಾಯಿಗಳನ್ನು ನೀಡುತ್ತಾರೆ. ಖರ್ಚು ಕಳೆದು ಪ್ರತಿಯೊಂದು ಅಂತ್ಯಕ್ರಿಯೆಗೂ 25
/- ರಿಂದ 50/- ಇವರ ಪಾಲಾಗುತ್ತದೆ.


ಅನುರಾಗ, ಅನುಕಂಪ ಹಾಗು ಸಂಬಂಧಗಳ ಸಹಜ ಭಾವನೆಗಳೇ ಇರದೆ ತಾನು ಮಾಡುವ ಕೆಲಸ ಅದು ತನ್ನ ಹೊಟ್ಟೆಪಾಡಿಗೆಂದು ದುಡಿಯುತ್ತಿರುವಾಗ, ಕೃಷ್ಣಪ್ಪ ತನ್ನ 92ನೇ ವಯಸ್ಸಿನಲ್ಲಿ ಮಹಾದೇವರ ತೋಳಿನಲ್ಲೆ ಸಾವನ್ನಪ್ಪುತ್ತಾರೆ. ಮೊದಲ ಬಾರಿಗೆ ತನ್ನವರನ್ನು ಕಳೆದುಕೊಂಡ ನೋವಿನನುಭವ ಮಹಾದೇವರಿಗೆ ಆಗುತ್ತದೆ. ಸಂಕಟ ದುಃಖಗಳ ಮೊದಲ ಪರಿಚಯವೇ ಇದು. ಅಂದಿನಿಂದ ಪ್ರತಿಯೊಂದು ಶವಸಂಸ್ಕಾರವು ಇವರ ಪಾಲಿಗೆ ಹೊಟ್ಟೆಪಾಡಿನ ಕಾಯಕ ಮಾತ್ರವಲ್ಲದೆ ದೇವರ ಕೆಲಸದಂತೆ ಭಾಸವಾಗತೊಡಗುತ್ತದೆ. ಒಂದು ಕಾಲದಲ್ಲಿ ರಾಜರಂತೆ ಮೆರೆದವರು, ನೂರಾರು ಜನರ ನಡುವೆ ಬಾಳಿ ಬದುಕಿದ್ದವರು ಅನಾಥ ಶವವಾಗಿ ಅಂತ್ಯೆಗೊಳ್ಳುವ ಹೊತ್ತಿಗೆ ಮುಕ್ತಿ ಮಾರ್ಗದಲ್ಲಿ ಮಹಾದೇವ ನೆರವಾಗಿದ್ದಾರೆ. ಕೊಳೆತ ಶವಗಳಾಗಲಿ ಮತ್ತೊಂದಾಗಲಿ ಇವರ ಶಿಸ್ತು, ಅಚ್ಚುಕಟ್ಟುತನ, ಶ್ರದ್ಧೆ - ಶ್ರಾದ್ಧವಾಗಿ ಪರಿಣಮಿಸುತ್ತದೆ.

ಮೊದಲಿಗೆ ತಳ್ಳುವ ಗಾಡಿಯಲ್ಲಿ ಶವಗಳನ್ನು ಹೊರುತ್ತಿದ್ದ ಮಹಾದೇವ ನಂತರ ಕುದುರೆ ಬಂಡಿಯೊಂದನ್ನು ತಮ್ಮ ಪಯಣದಲ್ಲಿ ಜೊತೆಗೂಡಿಸಿಕೊಳ್ಳುತ್ತಾರೆ. ಸಹೃದಯಿಗಳು ಇವರ ಕೆಲಸ ಕಾರ್ಯಗಳನ್ನು ಗಮನಿಸಿ ಆಟೋ, ನಂತರ ಮಾರುತಿ ವ್ಯಾನ್ ಖರೀದಿಸಿ ಕೊಡುತ್ತಾರೆ. ಇವರ
ಕಥೆ / ಜೀವನ ಚರಿತ್ರೆ ಅನೇಕ ಪತ್ರಿಕೆಗಳಲ್ಲಿ ಹಾಗು ಮಾಧ್ಯಮಗಳಲ್ಲಿ ಪ್ರಸಾರವಾಗುವ ಹೊತ್ತಿಗೆ ದಿವಂಗತ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ರಿಂದ ಸನ್ಮಾನ, 1999ರಲ್ಲಿ ಮುಖ್ಯ ಮಂತ್ರಿಗಳಿಂದ ಚಿನ್ನದ ಪದಕ, 2004ರಲ್ಲಿ ಕೆಂಪೇಗೌಡ ಪ್ರಶಸ್ತಿ ಮತ್ತು 2006ರಲ್ಲಿ ಗಾಡ್ಫ್ರೆ ಫಿಲಿಪ್ಸ್ ಬ್ರೆವರೀ ಅವಾರ್ಡ್ಗಳು ಇವರ ಪಾಲಾಗುತ್ತದೆ. ಇವರಿಗೆ ತ್ರಿವಿಕ್ರಮ ಮಹಾದೇವ ಎಂಬ ಬಿರುದು ಸಹ ನೀಡಲಾಗುತ್ತದೆ. 1991ರಲ್ಲಿ ರಾಜೀವ್ ಹತ್ಯೆಯ ಪ್ರಮುಖ ಆರೋಪಿ ಶಿವರಸನ್ ನ ಅಂತ್ಯಕ್ರಿಯೆ ನಡೆಸಲು ಮಹಾದೇವ ಆಯ್ಕೆಯಾಗುತ್ತಾರೆ. ಇಂದಿಗೂ ಇವರ ಬಳಿ ಡ್ರೈವಿಂಗ್ ಲೈಸೆನ್ಸ್ ಇಲ್ಲ, ಪೊಲೀಸ್ ಇಲಾಖೆಯ ಪ್ರತಿಯೊಬ್ಬರೂ ತನಗೆ ಚಿರಪರಿಚಿತರೇ ಎನ್ನುತ್ತಾರೆ ಮಹಾದೇವ್. ಭಾರತೀಯ ರೈಲ್ವೆ ಯವರು ಮೊಬೈಲ್ ಫೋನ್ ಖರೀದಿಸಿ ಕೊಟ್ಟಿದ್ದಾರೆ. ದಾನಿಗಳು ಇವರ ವಾಹನಕ್ಕೆ ಉಚಿತವಾಗಿ ಪೆಟ್ರೋಲ್ ಹಾಕಿಸುತ್ತಾರೆ.


ಮಹಾದೇವರ ಜೀವನ ವೃತ್ತಾಂತದ ಜಾಡು ಹಿಡಿದು ಇವರಿಗೆ ಫೋನಾಯಿಸಿದೆ.  ಇಂದಿಗೆ ಬೆಂಗಳೂರಿನ ಮೈಸೂರು ರಸ್ತೆಯ ಬಳಿಯಿರುವ ಅಡಿಗೆವಡೆಯರ ಹಳ್ಳಿಯಲ್ಲಿ ಇವರ ವಾಸ. ಪುಷ್ಪಲತಾರನ್ನು ಮದುವೆಯಾಗಿದ್ದಾರೆ; ಇವರ ಮಕ್ಕಳು ಶಾಲೆಗೆ ಹೋಗುತ್ತಿದ್ದು, ಮಹಾದೇವರ ಕೆಲಸಗಳಿಗೂ ಸಹಾಯ ಮಾಡುತ್ತಾರೆ. "ಮಾಡುತ್ತಿರುವ ಕೆಲಸ ಆತ್ಮತೃಪ್ತಿ ನೀಡಿದೆ. ದೇವರು ಎಲ್ಲಿಯೂ ಇಲ್ಲ, ನಮ್ಮ ನಿಮ್ಮಲ್ಲೇ ಇದ್ದಾನೆ ಪುಟ್ಟಿ" ಎಂದು ನನ್ನಲ್ಲಿ ಹೇಳಿದಾಗ, ಮಹಾದೇವರ ಬದುಕಿಗೊಂದು ಸಾಷ್ಟಾಂಗ ಪ್ರಣಾಮವಿಟ್ಟು, ಇವರ ಬದುಕು ಹಸನಾಗಲಿ ಎಂದು ಮನಸಾರೆ ಹರಸಿದೆ.

ಪುಣ್ಯವೆಂದರೆ ಮನುಷ್ಯತ್ವಕ್ಕೆ ಸನಿಹವಿರುವುದೇ ಅಲ್ಲವೇ? ಹುಟ್ಟು ಅದು ಹೇಗೆ ಗೌಪ್ಯವೋ ಸಾವೂ ಕೂಡ ಅಷ್ಟೇ ನಿಗೂಢ. ಇವೆರಡರ ನಡುವಣ ಬದುಕೆಂಬ ಮಾಯೆಯ ಬಗೆಯಂತೂ ಹೇಳತೀರದು. ಗ್ರಹಿಕೆಗೆ ಸಿಗದ - ಎಣಿಕೆಗೆ ಸಿಗದ ಮಾಯಾಮಂಜರಿ. ಅವಸಾನದಲಿ ಆತ್ಮಪಕ್ಷಿ ಹಾರಿಹೋಗುವ ಹೊತ್ತಿಗೆ ಯಾರ ಮರಣ ಎಲ್ಲಿದೆಯೊ!!

ಮಹಾದೇವ ಸರ್, ಹ್ಯಾಟ್ಸ್ ಆಫ್ ಟು ಯು ಫಾರ್ "ದಿ ಪ್ರೊಫೆಷನಲ್" ದಟ್ ಯು ಆರ್. ಯಾವ ಕೆಲಸವಾದರೇನು, ವೃತ್ತಿಪರ ಆಗುವುದು ಸುಲಭದ ಮಾತಲ್ಲ. ಮತ್ತೆ, ಸುಬ್ರೊತೊ ಬಾಗ್ಚಿರವರಿಗೆ ಈ ಮೂಲಕ ಒಂದು ನಮನ.

ರೂಪ ಸತೀಶ್
ಬೆಂಗಳೂರು


10 comments:

  1. ಏನು ಹೇಳುವುದು. ಮೌನ.

    ReplyDelete
  2. ನಿಜಕ್ಕೂ ಪ್ರತಿಯೊಬ್ಬರೂ ಓದಲೇಬೇಕಾದ ಲೇಖನ, ಇದನ್ನು ಸುಮಾರು ೫೦ ಜನರಿಗೆ ವಾಟ್ಸ್ ಅಪ್ ಮೂಲಕ ಹಂಚಿದೆ. ಮಹಾದೇವ ಅವರ ಪುಣ್ಯದ ಕಾಯಕದಿಂದ ಅದೆಷ್ಟು ಸಾವಿರ ಆತ್ಮಗಳು ಸಂತಸ ವಾಗಿರಬಹುದು ಅನ್ನೋದನ್ನು ನೆನೆದರೆ ಈ ವ್ಯಕ್ತಿಯ ಕಾಯಕದ ಬಗ್ಗೆ ಗೌರವ ಮೂಡುತ್ತದೆ. ಇವರಿಗೆ ಜೀವನದಲ್ಲಿ ಮತ್ತಷ್ಟು ಒಳಿತು ಸಿಗಲಿ, ಇವರ ಬಾಳು ಬಂಗಾರವಾಗಲಿ ಅನ್ನೋದಷ್ಟೇ ನನ್ನ ಪ್ರಾರ್ಥನೆ.

    ReplyDelete
    Replies
    1. Balu Sir,
      Thank you for sharing :) Yes, ivara baalu bangaaravaagali annode nammellara prarthane :)

      Delete
  3. ರೂಪಾ ಎಂತೆಂಥಾ ಜೀವಿಗಳು. ಒವರ ಹಾಗೆ ಸಾಧನೆ ಏನೂ ಮಾಡಲಾಗದಿದ್ದರೂ ಅಂತಹ ವ್ಯಕ್ತಿಯನ್ನು‌ ಗೌರವದಿಂದ ನೆನೆಯಲು ಅನುವು ಮಾಡಿಕೊಟ್ಟ ನಿನಗೆ ಥ್ಯಾಂಕ್ಯೂ. 🙂

    ReplyDelete
    Replies
    1. Thanks for the read Appu :) enthenthavaru namma madhye irthaare annodakke udaharane.

      Delete
  4. ಸಾವಿರಾರು ಜನರ ಬದುಕಿನಾಚೆಯ ಕೊನೆಯ ಪುಟಗಳಿಗೆ ಸಹಿ ಹಾಕುವ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಾನೆ!!!

    ಈ ಸಾಲುಗಳು ಒಂದು ಕ್ಷಣ ನನ್ನ ಅಲುಗಾಡಿಸಿತು.. ಸರಳ ಪದಗಳ ಜೋಡಣೆಯಾದರೂ ಅದು ಕೊಡುವ ಅರ್ಥವಿಸ್ತಾರ ಆ ಭೂಮಂಡಲದಷ್ಟೇ ವಿಶಾಲ..

    ಮಾಡುವ ಕೆಲಸ ಯಾವುದಾದರೇನು ಅದರಲ್ಲಿ ಶ್ರದ್ಧೆ ನಿಷ್ಠೆ ಇದ್ದಾಗ ಕಾಪಾಡುತ್ತದೆ.. ಸಲಹುತ್ತದೆ.. ರಕ್ಷಿಸುತ್ತದೆ ಎನ್ನುವುದಕ್ಕೆ ಉದಾಹರಣೆ ಮಹದೇವ್ ಸರ್ ಅವರ ಜೀವನ.. ಆರಂಭದಲ್ಲಿ ಹೀಗಾಗುತ್ತೆ ಅಂತ ಅಂದುಕೊಂಡಿರಲಿಲ್ಲದಿದ್ದರೂ ಅವರು ಆಯ್ಕೆ ಮಾಡಿಕೊಂಡ ವೃತ್ತಿ.. ಮತ್ತು ಅದಕ್ಕೆ ತೋರಿದ ನಿಯತ್ತು ಇಂದು ಅವರನ್ನು ವಿಶಿಷ್ಟ ಪ್ರೊಫೆಷನಲ್ ಆಗಿ ಅಂತಾರಾಷ್ಟ್ರೀಯ ಮಟ್ಟದ ಪುಸ್ತಕದಲ್ಲಿ ದಾಖಲಾಗಿಸುವಂತೆ ನೋಡಿಕೊಂಡಿದೆ..

    DFR ಇಂತಹ ಮಹನೀಯರನ್ನು ಭೇಟಿ ಮಾಡಿದ ನಿಮಗೂ ನಿಮ್ಮ ಸಹೃದಯ ಮನಸ್ಸಿಗೂ ಒಂದು ದೊಡ್ಡ ಸಲಾಂ..

    ಜಗತ್ತು ಇಷ್ಟವಾಗುವುದು ಏತಕ್ಕೆ.. ಈ ಪ್ರಶ್ನೆಗೆ ಉತ್ತರ ಈ ರೀತಿಯ ಜೀವನದಲ್ಲಿ, ಜೀವನ ಮಾರ್ಗದಲ್ಲಿ ನೆಡೆಯುವ ಮಹನೀಯರ ವಿಚಾರಧಾರೆಯಲ್ಲಿ ಇರುತ್ತದೆ.. ಮತ್ತು ಅದನ್ನು ಹಂಚಿಕೊಳ್ಳುವ ನಿಮ್ಮನಂಥಹ ಸಹೃದಯರಲ್ಲಿ ಕಾಣುತ್ತದೆ..

    ಹಾಟ್ಸ್ ಆಫ್ DFR!!!

    ReplyDelete
  5. ಮಹಾದೇವರನ್ನು ಪರಿಚಯಸಿದ್ದಕ್ಕಾಗಿ ಧನ್ಯವಾದಗಳು.

    ReplyDelete
    Replies
    1. Sunaath Kaaka :) dhanyavaada. Odige, pratikriyege :)

      Delete

ಪ್ರತಿ ಬೆಳಗೂ ಹೊಸತನ....

ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತ...