Monday, June 3, 2013

ಸೂಚನೆ : ಸಸ್ಯಹಾರಿಗಳಿಗೆ ಸೂಕ್ತವಲ್ಲ :)

ಹಿ ಹಿ ಹೀಗೊಂದು ಭಾನುವಾರ!

ಪ್ರತಿ ದಿನ ಬೆಳಗ್ಗೆ 6.30 ಕ್ಕೆ ಆಫಿಸ್ ಹೊರಡುವ ಸಮಯ, ಹಾಗಾಗಿ 5 ಗಂಟೆಗೆ ಏಳುವ ಅಭ್ಯಾಸ! ಅಮ್ಮ ನಮ್ಮೊಟ್ಟಿಗೆ ಉಳಿಯುವ೦ದಿನಿಂದ ಅರ್ಧ ಗಂಟೆ ಬೋನಸ್ ನಿದ್ದೆ, ಈ ನಡುವೆ ಏಳುವುದು 5.30ಕ್ಕೆ. ಭಾನುವಾರವೆಂದರೆ - ಬೇಕಾದಷ್ಟು ನಿದ್ದೆ ಮಾಡುವ ದಿನ, ಯಾರನ್ನೂ ಯಾರು ನಿದ್ದೆಯಿಂದೆಬ್ಬಿಸದೆ - ಯಾರು ಮೊದಲು ಏಳ್ತಾರೊ ಅವರೇ ಎಲ್ಲರಿಗು ಕಾಫಿ ಮಾಡಬೇಕು, ಇದು ನಾವು ರೂಡಿಸಿಕೊಂಡಿರುವ ಪದ್ಧತಿ. "ಕಾಫಿ" ಅಂತ ಅಮ್ಮ ಕೂಗುವವರೆಗೂ ಹಾಸಿಗೆ ಬಿಟ್ಟು ಏಳುವ ಪ್ರಾಣಿ ನಾನಂತೂ ಅಲ್ಲ. ಇವತ್ತು ಭಾನುವಾರ, ಆರಾಮ್ ನಿದ್ದೆ, ಅಮ್ಮನ ಕೂಗು ಕೇಳಿ ಬಂದು ನಾನು ಕಣ್ ಬಿಟ್ಟಾಗ ಒಂಬತ್ತಕ್ಕೆ ಇನ್ನು ಹತ್ತು ನಿಮಿಷ ಬಾಕಿ.

ತಿಂಡಿಯಾದ ಮೇಲೆ ಅಮ್ಮನಿಗೆ ಏನನ್ನಿಸಿತೋ, ಒಂಟಿ ಕೊಪ್ಪಲ್ ಪಂಚಾಗ ಹಿಡಿದು, "ಇವತ್ತು ತಿನ್ನಬಹುದು" ಎಂದರು! "ಅಜ್ಜಿ ತಿನ್ನೋದಕ್ಕೂ ವಾರ - ನಕ್ಷತ್ರ ನೋಡ್ತಾರ?", ಅಂತ ಮಗಳ ನಗು / ಕೀಟಲೆ. "ಇವತ್ತು ಅರ್ಧ - ಮುಕ್ಕಾಲು KG ಮಟನ್ ತಂದು ಬಿಡು, ಸಾರು ಮಾಡಿ ಮುದ್ದೆ ಮಾಡ್ಬಿಡ್ತೀನಿ" ಅಂತ ಅಮ್ಮ ಹೆಳ್ತಿದ್ದಂಗೆ, ಮನೆಯಲ್ಲಿ ಸ್ಪೆಷಲ್ ಅಡುಗೆ ಅಂತ ಮಗಳಿಗೆ ಖುಷಿ. ಸರಿ ಮನೆಯ ಬಳಿ ಇರುವ "ಚಾಯ್ಸ್ ಚಿಕೆನ್" ಅಂಗಡಿಯಿಂದ ಕೋಳಿ ಅಥವಾ ಅದರ ಮೊಟ್ಟೆ ತಂದು ಅಭ್ಯಾಸ, ಹಿಂದೆಂದು ಹೋದದ್ದಿಲ್ಲ ಈಗ ಮಟನ್ ಅಂಗಡಿ ಹುಡುಕಿಕೊಂಡು ಎಲ್ಲಿ ಹೋಗಲಿ? ಮನೆಯಲ್ಲಿ ಮಟನ್ ಅಪರೂಪವೆಂದರೆ ವರುಷಕ್ಕೆಲ್ಲ ಒಂದು - ಎರಡು ಬಾರಿ ಅಷ್ಟೇ!!.... "ಅಪ್ಪ ಎಲ್ಲಿ ತರ್ತಿದ್ದು ಗೊತ್ತಾ?" ಅಂತ ಮಗಳು ಕೇಳಿದಾಗ ನೆನಪಾಯ್ತು ಇನ್ನು ಸ್ವಲ್ಪ ದೂರದಲ್ಲಿರುವ ಮೀನಿನಂಗಡಿ, ಅದರ ಪಕ್ಕದಲ್ಲೇ ಇರುವ ಮಟನ್ ಅಂಗಡಿ. ಅಲ್ಲಿ ಹೋದ ಮೇಲೆ ತಿಳಿಯಿತು ಅದು "ರೆಹಮಾನ್ ಮಟನ್ ಸ್ಟಾಲ್"! .

"KG - 400/-" ಅಂತ ಬರೆದ ಸ್ಲೇಟು ನೇತಾಡುತ್ತಿತ್ತಾದರು ಅಂಗಡಿ ತುಂಬಾ ಊರಹಬ್ಬ ಮಾಡುವ೦ತೆ ಜನ-ಜಂಗುಳಿ. ನನ್ನ ಸರದಿ ಬರುವ ಹೊತ್ತಿಗೆ ಮುಂದಿರುವವರೆಲ್ಲ, "ರೆಹಮಾನ್ ಭಾಯ್,- .......ಅದು ಬೇಡ, ಇದು ತೆಗಿರಿ, ಇದನ್ನ ಹಾಕಿ, ಬಿಡಿ ತೂಕ ಏನಾಗುತ್ತೆ, ಓದ್ವಾರ ಕೊಟ್ಟಿದ್ದು ಸ್ವಲ್ಪ ಬಲ್ತೋಗಿತ್ತು, ಮತ್ತೆ ಅದನ್ನೇ ಹಾಕ್ತೀಯಲ್ಲಪ್ಪಾ ತೆಗಿ ತೆಗಿ, ಇಲ್ನೋಡು ಇದನ್ನ ಸ್ವಲ್ಪ ಹಾಕು, ಯಾವ್ದಂದ್ರೆ ಅದನ್ನ ಹಾಕ್ಬೇಡ.... " ಹೀಗೆ ಏನಾದರೊಂದು ಹೇಳ್ತಿರೊದನ್ನ ಗಮನಿಸಿದೆ. ಹೀಗೆಲ್ಲ ಉಂಟೆ? ಅಂಗಡಿಯವನನ್ನ ಏನು ಕೇಳಬೇಕೋ ತಿಳಿಯುತ್ತಿಲ್ಲವಲ್ಲ? ಯಾವುದು ಬೇಕು - ಯಾವುದು ಬೇಡ ಅಂತ ಹೆಂಗೆ ಹೇಳೋದು? ಅದರ ಬಗ್ಗೆ ಗೊತ್ತಿದ್ದರೆ ತಾನೆ ಹೇಳೋಕೆ / ಕೇಳೋಕೆ! ನನ್ನ ಸರದಿ ಬರುವ ಹೊತ್ತಿಗೆ, ಎಷ್ಟುದ್ದ ನೇತಾಡುತಿದ್ದ ಮಟನ್ ಇಷ್ಟೇ ಆಗಿ ಹೋಗಿದೆ, ಎಲ್ಲರಿಗೂ ಕೊಟ್ಟು-ಬಿಟ್ಟು ಉಳಿದಿರುವುದನ್ನ ಕೊಡ್ತಾನೆಯೆ? ಪೇಚಾಟ! ಸ್ವಲ್ಪ ಮುಜುಗರವಾದರೂ, ಅಕ್ಕ-ಪಕ್ಕ ನಿಂತು ನೋಡುತಿದ್ದ ಜನರ ನಡುವೆಯೇ, "ನೋಡಿ ಇದೆ ಮೊದಲು ಬರ್ತಿರೋದು, ಯಾವುದು ತಗೋಬೇಕೊ / ತಗೊಬಾರ್ದೊ ಗೊತ್ತಾಗ್ತಿಲ್ಲ, ದಯವಿಟ್ಟು ಒಳ್ಳೇದು ಕೊಡಿ, ಮನೆಗೆ ಹೋದ್ಮೇಲೆ ಯಾರು ನನ್ನ ಬಯ್ಯಬಾರದು ಅಂತ ಮಟನ್ ಕೊಡಿ ಪ್ಲೀಸ್" ಅಂತ ರೆಹಮಾನನನ್ನು ಕೇಳಿಕೊಂಡೆ. "ಯೋಚನೆನೆ ಮಾಡ್ಬೇಡಿ ಮೇಡಂ - ಇದ್ರಲ್ಲಿ ಮಿಟಾಯಿ - ಮಿಟಾಯಿ ಮಾಡ್ಬೋದು ಅಷ್ಟು ಚೆನ್ನಾಗಿದೆ, ಇಲ್ನೋಡಿ ಇದನ್ನ ಹಾಕ್ಲ?" ಅಂತ ಯಾವುದೋ ಒಂದು ಮಾಂಸದ ತುಂಡನ್ನು ತೋರಿಸಿದ. ಅದೇನೆಂದು ಗೊತ್ತಿಲ್ಲವಾದರು, ಯಾವುದಕ್ಕೂ ಬೇಡ ಅನ್ನುವುದೇ ಒಳ್ಳೆಯದು ಅಂತ, "ಬೇಡ ಬೇಡ ಹಾಕಬೇಡಿ" ಅಂದೆ. ಅಷ್ಟಕ್ಕೇ ಸುಮ್ಮನೆಲ್ಲಿದ್ದ ರೆಹೆಮಾನ, "ಇದು ಮೇಡಂ" ಅಂತ ಇನ್ನೇನನ್ನೋ ತೋರಿಸಿದ. "ಹಾ, ಲಿವರ್ ಅಲ್ವ ಹಾಕಿ ಹಾಕಿ" ಅಂದೇ, "ಹೆ ಹೆ ಅದು ಲಿವರ್ ಅಲ್ಲ ಹಾರ್ಟು" ಅಂತ ಹೇಳಿ ನಗುತ್ತ ಇನ್ನಷ್ಟು ಮುಜುಗರ ಮೂಡಿಸಿದ.

ಅಂತೂ ಇಂತೂ ಅದನ್ನ ಮನೆಗೆ ತಂದು ಅಮ್ಮನ ಕೈಗಿಟ್ಟು, "ಹೇಗಿದೆಯೋ ಗೊತ್ತಿಲ್ಲ - ಅವನು ಕೊಟ್ಟ - ನಾನು ತಂದೆ - ಇದ್ರಲ್ಲಿ ಮಿಟಾಯಿ ಮಾಡಬಹುದಂತೆ" ಅಂದೇ..... "ಹ ಹ ಹ ಮಟನ್ ಮಿಟಾಯಿ - ಬರ್ಫಿ ಮಾಡ್ತೀರ ಅಜ್ಜಿ? ಇದೊಂಥರ ಚೆನ್ನಾಗಿದೆ", ಅಂತ ಮಗಳು. ಸಧ್ಯ ರೆಹಮಾನ್ ಅಂಗಡಿಯ ಮಿಟಾಯಿ ಅಮ್ಮ ಓಕೆ ಮಾಡಿದರು.

ಮಳೆಯೂ ಬರದ ಬಿಸಿಲು ಇರದ ಸಣ್ಣ ಚಳಿಯಲ್ಲಿ ಸುಖಿಸುವ ಸೋಮಾರಿ ಭಾನುವಾರವಿದು. ಇಂಥ ಸ್ಪೆಶಲ್ ಅಡುಗೆ ಮಾಡಿದಾಗ, ತಮ್ಮ ತಟ್ಟೆಯಿಂದಾಯ್ದು ಮೆತ್ತಗಿರುವ ಸಣ್ಣ ಸಣ್ಣ ತುಂಡುಗಳನ್ನ ತಮ್ಮ ಮಕ್ಕಳ ಬಾಯಿಗೆ ತುತ್ತಿಡುವುದು ಅಪ್ಪಂದಿರಿಗೆ ಒಂದು ವಿಶೇಷ ಸಂತೃಪ್ತಿ ಕೊಡುವ ಸಂಗತಿ. ಮಗಳಿಗೂ ಈ ರೀತಿ ತಿನ್ನಿಸುವಾಗ ಅವಳ ಅಪ್ಪನ ಮುಖದಲ್ಲಿ ಚಿಮ್ಮುತಿದ್ದ ಒಂದು ಖುಷಿಯನ್ನ ನಾನು ಸಹ ನೋಡಿದ್ದೇನೆ.


ತಡವಾದಷ್ಟು ಹಸಿವೆ ಹೆಚ್ಚು! ಎಲ್ಲರೂ ಊಟಕ್ಕೆ ಕುಳಿತದ್ದಾಯ್ತು. ಮಗಳಿಗೆ ತಿನಿಸಲು ನನ್ನ ತಟ್ಟೆಯಲ್ಲಿ ಕೆದಕಿ - ಹುಡುಕಿ, ಎರಡು - ಮೂರು - ನಾಕು ಬಾರಿ ತಿನಿಸಿದ ಮೇಲೆ, ನಿಜವಾಗಿಯೂ ಎಂತದ್ದೋ ಖುಷಿ. ಇಂದಿಗೂ ಮಗಳಿಗೆ ತಿನ್ನಿಸುವುದು ತಪ್ಪಿಲ್ಲ, ಅನೇಕ ಬಾರಿ "ನೀನೆ ತಿನ್ಸಿದ್ರೆ ತಿಂತೀನಿ" ಅನ್ನೋ ಹಠ ಹಿಡೀತಾಳೆ.  ಅವಳಿಗೆ ತಿನ್ನಿಸುವುದೊಂದು ಪ್ರೀತಿಯಾದರೆ - ಈ ರೀತಿ  ಮಟನ್ / ಚಿಕನ್ ಮಾತ್ರ ತಟ್ಟೆಯಿಂದ ಹುಡುಕಿ ಕೆದಕಿ ತಿನ್ನಿಸುವುದು ನನಗಿನ್ನೂ ಹೊಸತು. ಇದೊಂದು ವಿಚಿತ್ರ ಅನುಭವ, ಹೀಗಿರಬಹುದೆಂದು ಊಹಿಸಿರಲಿಲ್ಲ! 

ಅಂದ ಹಾಗೆ, ರೆಹಮಾನನ ಮಾತು ನಿಜ, ನನ್ನ ಕಸಿವಿಸಿಯ ಹೊರತು ಅವನ ಅಂಗಡಿಯ ಮಟನ್ ನಿಜಕ್ಕೂ ಚೆನ್ನಾಗಿತ್ತು, ಅಮ್ಮನ ಕೈ ರುಚಿ ಕೂಡಿದ ಅಡುಗೆಗೆ ಸಾಟಿ ಉಂಟೆ!  ಇವೆಲ್ಲದರ ನಡುವೆ, ಮತ್ತೊಮ್ಮೆ ಅಂಗಡಿಗೆ ಹೋದಾಗ ಏನು ಕೇಳಬೇಕು ಅನ್ನುವ ವಿಷಯವಂತು ಇನ್ನು ಗೋಜಲಾಗಿಯೇ ಉಳಿದಿದೆ!!!



Wednesday, May 15, 2013

ಶೋಕವಿಲ್ಲಿ ಸಂಭ್ರಮಿಸಬೇಕಿದೆ


ಈ ದಿನ ಎಂದಿನಂತಲ್ಲ, ವಿಶೇಷ! ಈ ದಿನಕ್ಕಾಗಿ ಎಷ್ಟು ತಿಂಗಳುಗಳಿಂದ ತಯ್ಯಾರಿ! ಕಳೆದ ಒಂದು ವಾರದಿಂದ ನಿದ್ದೆ ಮಾಡಿದ್ದು ಅಷ್ಟಕ್ಕಷ್ಟೇ. ನನಗೆ ಮಾತ್ರವಲ್ಲ - ಈ ದಿನಕ್ಕಾಗಿ ಕಾದು ಸಿದ್ದತೆ ನಡೆಸಿದ ಎಲ್ಲರಿಗೂ ಹೀಗೆ ಇರಬಹುದ? ನಿನ್ನೆ ಸಂಜೆ ಎಲ್ಲರಿಗೂ ಒಮ್ಮೆ ಫೋನಾಯಿಸಿ - ಎಲ್ಲವೂ ಸರಿಯಾಗಿದೆಯೆಂದು ತಿಳಿದಿದ್ದೆ. ಆದರೆ, ಕಾಡುತಿದ್ದ ವಿಷಯವೇ ಬೇರೆ.

ಜೀವನದ ದಿಕ್ಕುಗಳೆಲ್ಲ ಬದಲಾಗಿ ಇಂದಿಗೆ ಸರಿಯಾಗಿ ಐದು ತಿಂಗಳು. ರಾಯರ ಗುಡಿಯ ಪುರೋಹಿತರನ್ನ ನೋಡಿ, ಕೊಡಬೇಕಾದದ್ದು ಕೊಟ್ಟು ಮನೆಗೆ ಬಂದೆ. ವಡೆ ಪಾಯಸ ಇತ್ಯಾದಿ ಎಲ್ಲವು ದೀಪ ಹಚ್ಚಿದ ಫೋಟೋ ಮುಂದೆ - ನಂತರ ಮಹಡಿಯ ಮೇಲೆ. ಯಾರನ್ನು ಕಾಯಿಸದ ಜೀವಾತ್ಮವದು - ಇಷ್ಟವಾದ ತಿನಿಸು ಕಚ್ಚಿಕೊಂಡು ಹಾರಿದೆ. ಹಾ ಹೌದಲ್ವೆ ತಮಗೂ ತಿಳಿದಿರುವನ್ತದೆ ಈ ದಿನದ ವಿಶೇಷ. ನನಗಿನ್ನು ಸಮಯವೆಲ್ಲಿದೆ, ತಯ್ಯಾರಾಗಬೇಕಿದೆ! ಮನೆಯವರೆಲ್ಲ ಮತ್ತೆ - ಮತ್ತೆ ಹೇಳ್ತಿದ್ದು ಅದನ್ನೇ, "ಅತ್ಕೊಂಡು ಮುಖ ಊದಿಸ್ಕೊಂಡು ಫೋಟೋ - ಕ್ಯಾಮೆರ ಕಣ್ಣಿಗೆ ಬೂದುಗುಂಬಳ ಆಗ್ಬೆಕೇನು?". ಅದು ಕೂಡ ಸರಿಯೇ.

ಶೋಕವಿಲ್ಲಿ ಸಂಭ್ರಮಿಸಬೇಕಿದೆ! ... ಹತ್ತು ಜನರಿಗೆ ಸಮಜಾಯಿಸಬಹುದು, ಇಲ್ಲಿ ನೂರು ಮಂದಿ. ಇವರ ಹಣ ಖಾತೆಗೆ ಜಮೆಯಾಗಿ ತಿಂಗಳುಗಳೇ ಕಳೆದಿವೆ, ಇನ್ನು ತಡ ಮಾಡುವ ಹಾಗಿಲ್ಲ. ಈಗಾಗಲೇ ನನ್ನಿಂದಾಗಿ ಬಹಳಷ್ಟು ತಡವಾಗಿದೆ, ಇದು ನನ್ನ ತಂಡದ ಪ್ರತಿಷ್ಠೆ - ನನ್ನ ಬಾದ್ಯತೆ ಕೂಡ, ಹಿಂದಿರುಗುವ ಮಾತಿಲ್ಲ.

ಕಳೆದೈದು ತಿಂಗಳುಗಳಿಂದ ಸೀರೆಗಳ ಕಡೆ ಕಣ್ಣಾಯಿಸಿಯೇ ಇರಲಿಲ್ಲ. ತಂಗಿ ಮತ್ತೆ ಮತ್ತೆ ಯಾವ ಸೀರೆ ಉಡ್ತೀಯ ಅಂತ ಕೇಳಿದಾಗಲು - ಯಾವುದೋ ಒಂದು ನಿರ್ಲಕ್ಷೆ. ಮತ್ತೆ ಈ ದಿನಕ್ಕೆ ತೆಗೆದದ್ದು ಮಾತ್ರ ಪೆಟ್ಟಿಗೆ ತೆರೆದಾಗ ಕಂಡ ಮೊದಲ ಸೀರೆ. ಅದರಲ್ಲೂ ನೂರಾರು ನೆನಪುಗಳು! ಸಧ್ಯಕ್ಕೆ, ಅಲಂಕಾರ ಅನಿವಾರ್ಯ! ಮೇಜಿನ ಮೇಲಿದ್ದ ಮಲ್ಲಿಗೆ ದಿಂಡು ಅತಿಯಾಗಿ ಕಾಡಿದೆ. ಹೂ ಇಲ್ಲದ ರೇಶಿಮೆ ಸೀರೆಗೆ ಸೊಬಗೆಲ್ಲಿ? ಮುದ್ದಾಗಿ ಕಾಣ್ತಿದಾಳೆ ಮಗಳು - ಅವಳ ತಲೆಗೆ ಹೂ ದಿಂಡು ಮೂಡಿಸಿದ್ದಾಯ್ತು. ಅತಿಯಾಗಿ ಅವಳನ್ನೇ ನೋಡುವಾಸೆ, ತಡೆದೆ - ಹನಿ ಜಾರಿ ಮುಖದ ಮೇಲಿನ ಅಲಂಕಾರ ಹಾಳಾದೀತು, ಆಗಬೇಕಾಗಿರುವ ಕೆಲಸಗಳು ಬಹಳಷ್ಟಿವೆ!

ರೂಮಿನಿಂದ ಹೊರ ಬಂದ ಒಂದೆರಡು ನಿಮಿಷದಲೇ ಅಮ್ಮನ ಕಣ್ಣಲ್ಲಿ ಬಾಷ್ಪ! "ಹಾಗ್ನೋದ್ಬೇಡಮ್ಮ ದೃಷ್ಟಿ ಆಗುತ್ತೆ" ಅಂತ ತಮಾಷೆ ಮಾಡಿಕೊಂಡೆ ಅಮ್ಮನ ಕಾಲು ಮುಟ್ಟಿ ನಮಸ್ಕರಿಸಿದ್ದಾಯ್ತು. ಚಪ್ಪಲಿ ಹಾಕಿಕೊಂಡು ಮನೆಯಿಂದ ಹೊರಟಾಗ ಕಾಡಲು ಶುರುವಾಗಿದ್ದು ಮತ್ತದೇ - ಮತ್ತದೇ ವಿಷಯ. ಇದ್ದಕ್ಕಿದ್ದ ಹಾಗೆ ಈ ಪಾಟಿ ತಯ್ಯಾರಾಗಿ ಹೋಗ್ತಿದ್ದ್ರೆ ಜನರೇನು ಅಂದುಕೊಂಡಾರು? ಆತಂಕ, ಭಯ - ಮೂರು ಅಂತಸ್ತಿನ ಒಂದೊಂದು ಮೆಟ್ಟಿಲು ಇಳಿದಾಗಲು ಒಂದೊಂದು ಭಾವ! ಅರೆರೆ, ಛೆ ...... ಕಾರಿನ ಕೀ ಮನೆಯಲ್ಲೇ ಬಿಟ್ಟು ಇಳಿದು ಬಂದ್ನೆ! ಪಾರ್ಕಿಂಗ್ನಿಂದ ಮನೆಯ ಕಡೆಗೆ ಮತ್ತದೇ ದಾರಿ ಹಿಡಿಯಬೇಕಿದೆ, ಅವರಿವರ ಕಣ್ಣುಗಳ ಹೆದರಿಸುವ ಭಯ. ಅಮ್ಮನನ್ನೋ, ತಂಗಿಯನ್ನೋ ಕೆಳಗಿಂದಲೇ ಜೋರಾಗಿ ಕೂಗಿ ಕೀ ತೆಗೆಸಿಕೊಳ್ಳಬಹುದು. ಮುಜುಗರದಿಂದ ಹೆಣವಾಗಿ ಹೋಗಿದ್ದೇನೆ, ಮತ್ತದೇ ಮೂರಂತಸ್ತು ಹತ್ತಿ ಕೀ ತೆಗೆದುಕೊಂಡು ಬಂದದ್ದಾಯ್ತು. ಪಾರ್ಕಿಂಗ್ ಸೆಕ್ಯುರಿಟಿ ಸಿದ್ದಪ್ಪ, ಅವರಿಗೇನನಿಸ್ತೊ, "ಈ ತರಹ ನಿಮ್ಮನ್ನ ನೋಡೇ ಇರ್ಲಿಲ್ಲಮ್ಮ" ಅಂದ್ರು, "ಹೌದ ತಾತ - ನಾನು ಸಹ", ಅಂತಂದುಕೊಂಡೆ ಕಾರ್ ಹತ್ತಿಸಿ ಮನೆಯ ಮುಂದೆ ತರುವಷ್ಟರಲ್ಲಿ, ಮೆಟ್ಟಿಲಿಳಿದು ಬರುತಿದ್ದದ್ದು ಮಗಳು. ಅವಳಿಗೂ ಮುಜುಗರವೇನೋ - ವರ್ಷ ಕಳೆಯುವ ತನಕ ಯಾರ ಮನೆಗೂ - ಯಾವ ಶುಭ ಕಾರ್ಯಕ್ಕೂ ಹೋಗುವಹಾಗಿಲ್ಲವಂತೆ?!

ಸಭಾಂಗಣ ಹತ್ತಿರವಾಗುತಿದ್ದಂತೆ ಮತ್ತದೇ ಭಯ, ಯಾರನ್ನ ಹೇಗೆ ಮಾತನಾಡಿಸಬೇಕೋ? ಯಾರ ಬಳಿ ಹೇಗಿರಬೇಕೋ? ಇದೆಂಥ ವಿಧಿಯಾಟ. ನನ್ನೊಡನೆ ನನ್ನ ಸಮರ! ಯಾರನ್ನ ಮೆಚ್ಚಿಸಬೇಕಿದೆ? ನನ್ನ ಅಶ್ರು, ನನ್ನ ಯಾತನೆ, ನನ್ನ ಶೋಕ - ಎಲ್ಲವೂ ನನ್ನವೇ. ಉತ್ತರಿಸಬೇಕಾಗಿರುವುದು ದೇವರಿಗೆ, ನನ್ನೊಳಗಿನ ಧರ್ಮಪ್ರಜ್ಞೆಗೆ, ನಾ ಸೋತು ಗೆಲ್ಲುವ ನನ್ನಾತ್ಮಸಾಕ್ಷಿಗೆ. ಸಭಾಂಗಣದೊಳಗೆ ಕಾಲಿಡುತಿದ್ದಂತೆ ನನ್ನ ಪ್ರೀತಿಯ ತಂಡ! ಹಾಗೆ ನಿಂತಿದ್ದ ಉಸಿರೊಂದು ಹಿಂದಿರುಗಿ ಬಂದಂತೆ! ಎಂದಿನ ಹಾಗೆ ಅದಂತೆ - ಇದಂತೆ ಎನ್ನುವಷ್ಟರಲ್ಲಿ ಬಂದದ್ದು ನನ್ನ ಮನೆಯವರು - ನನ್ನ ಮಿತ್ರರು - ಗುರು ಹಿರಿಯರು. ಹಿಂಗಿದ್ದ ದೈರ್ಯ, ಕುಸಿದಿದ್ದ ವಿಶ್ವಾಸಕ್ಕೆ ಇವರಲ್ಲವೇ ಚೈತನ್ಯ? ಕಣ್ಣಂಚಿನಲ್ಲಿ ಜಾರುತಿದ್ದ ಹನಿಯನ್ನೇ ಗಮನಸಿ ಬಾಯಿಗೆ ಉಪ್ಪಿಟ್ಟು ತುರುಕಿದ್ದು ತಂಗಿ.

ಬಂದವರೆಲ್ಲ ಭಗವಂತನೇ ಕಳಿಸಿದ ದೇವತೆಗಳಿರಬೇಕು? ಅಬ್ಬಬ್ಬ! ತಾನು ಇದ್ದೀನಿ ಅಂತ ಸಾಬೀತು ಪಡಿಸೋಕೆ ಇವರುಗಳ ಮುಗ್ಧ ನಗುವಿನಲ್ಲಿ, ಅಭಿಮಾನ ತುಂಬಿದ ಮಾತುಗಳಲ್ಲಿ ನಿರೂಪಿಸಲು ತಯ್ಯಾರಾಗಿದ್ದಾನೆ. ಶತಮಾನಂ ಭವತಿ ಎಂದು ಹರಸಿದ್ದಾನೆ!

ಕಾರ್ಯಕ್ರಮ ಸುಸೂತ್ರವಾಗಿ ನೆರವೇರಿದೆ. ಕಡೆಗೂ ತಡೆಯಲಾಗದೆ ಉಕ್ಕಿಬಂದ ಕಣ್ಣ ಹನಿಗಳೊಡನೆ ಸಿಕ್ಕಿಬಿದ್ದೆ ಇವರುಗಳ ಕೈಗೆ. "ರೂಪಕ್ಕ ನೀವು ಮಾತ್ರ ಅಳಬಾರದು" - ಇದು ಸಾಂತ್ವನ, ಇದು ಆಜ್ಞೆ! ಮಗಳನ್ನ ಜೋರಾಗಿ ತಬ್ಬಿಕೊಳ್ಳಬೇಕಿದೆ, ಅಮ್ಮನ ತೊಡೆಯ ಮೇಲೆ ತಲೆಯಿಟ್ಟು ಮಲಗಬೇಕಿದೆ, ಹೆಪ್ಪುಗಟ್ಟಿರುವ ಅಳಲು ಕರಗಬೇಕಿದೆ.
ಮರುದಿನವೇ ಕಾರ್ಯಕ್ರಮದ ಭಾವಚಿತ್ರಗಳು ಎಲ್ಲೆಡೆ ಹರಿದಾಡಿದೆ. ನಿನ್ನೆ ಮಗಳನ್ನ ಕಣ್ಣಿಟ್ಟು ನೋಡದೆ ನನ್ನಿಂದ ನನ್ನನ್ನೇ ಕಟ್ಟಿ ಹಾಕಿದ್ದು ನಿಜ. ಈ ದಿನ ಅವಳ ಫೋಟೋ ನೋಡಿ ಬಿಕ್ಕಳಿಸಿ ಬಂದ ಅಳುವು, "ಅವರ ಅಪ್ಪನ ಹಾಗೆ" ಅಂತ ಪ್ರತಿಕ್ರಿಯಿಸಿ ಹೊರ ನಡೆದಿದೆ!................

Wednesday, February 20, 2013

ಸಾಧ್ಯವಾದರೆ ಕೈ ಜೋಡಿಸಿ, ಇಲ್ಲವಾದರೆ......

"ರೂಪ ಮೇಡಂ, ನೀವು ಕೆಲಸ ಮಾಡುವ NGO ಬಗ್ಗೆ ಕೇಳಿದ್ದೇವೆ, ಯಾವಾಗ ಬಿಡುವಿರುತ್ತೆ ಹೇಳಿ ನಿಮ್ಮ ಜೊತೆ ನಾವು ಸಹ ಬರ್ತೀವಿ" ಅಂತ ನನ್ನ ಪರಿಚಯದವರೊಬ್ಬರು ಆಗಾಗ ವಿಚಾರಿಸುತಿದ್ದಾರೆ. ಆಗಲಿ, ನೋಡೋಣ ಅಂತ ಹೇಳಿ ಸುಮ್ಮನಾಗ್ತಿದೀನಿ.

ಯಾಕೋ ಈ ನಡುವೆ ಯಾರನ್ನೂ ಅಲ್ಲಿಗೆ ಕರೆದೊಯ್ಯುವ ಮುನ್ನ ಯೋಚಿಸುವನ್ತಾಗಿದೆ! NGO ಗೆ ಹೋದವರಲ್ಲಿ ಕೆಲವರಿಗೆ ಆ ಮಕ್ಕಳನ್ನ ಹೇಗೆ ಮಾತಾಡಿಸಬೇಕು, ಏನೇನು ಕೇಳಬೇಕು, ಏನೇನು ಕೇಳಬಾರದು ಎನ್ನುವ ಸಾಮಾನ್ಯ ಪ್ರಜ್ಞೆಯೂ ಇರೋದಿಲ್ಲ. ಎಲ್ಲರೂ ಹೀಗಿರ್ತಾರೆ ಅಂತಲ್ಲ. ಆದ್ರೆ - ಹೀಗೂ ಇರ್ತಾರೆ ಅನ್ನೋದೇ ವಿಪರ್ಯಾಸ. ಅಲ್ಲಿಗೆ ಹೋಗುವ ಮುನ್ನ ನನ್ನದೊಂದು ನಿವೇದನೆ ಸದಾ ಇರುತ್ತದೆ. ಮಕ್ಕಳೊಡನೆ ಆಡಿ, ಅವರನ್ನ ನಗಿಸಿ, ಮುದ್ದಿಸಿ, ಮಾತನಾಡಿಸಿ ತಮ್ಮ ದಿನವನ್ನ ಅರ್ಥಪೂರ್ಣವಾಗಿಸಿ ಅಂತ. ಆದರು ಮಕ್ಕಳನ್ನು ಬೇಟಿಯಾದವರಲ್ಲಿ ಅನೇಕ ಪ್ರಶ್ನೆಗಳಿರುತ್ತವೆ!

"ಒಹ್, ನಿಂಗೆ ಅಮ್ಮ ಇಲ್ವಾ ಹಾಗಿದ್ರೆ?, ನಿಂಗೇ, ಒಹ್ ಇಬ್ರೂ ಇಲ್ವಾ? ಛೆ ಛೆ! ಪಾಪ, ಯಾವಾಗ್ ಬಂದ್ರಿ ಇಲ್ಗೆ? ಯಾರ್ ಕರ್ಕೊಂಡ್ ಬಂದಿದ್ದು? ನಿಂದು ಯಾವೂರನ್ತಾನೆ ಗೊತ್ತಿಲ್ವ? ನಿಮ್ಮಪ್ಪ ಅಮ್ಮ ನೆನಪಾಗ್ತಾರ? ನೆನಪಾದಾಗ ಏನ್ ಮಾಡ್ತೀರ? ಛೆ, ಅಯ್ಯೋ ಪಾಪ! ನಿಮಗೂ ಒಂದು ಮನೆ ಅಂತ ಇದ್ದಿದ್ದರೆ ಚೆನ್ನಾಗಿರ್ತಿತ್ತು ಅನ್ನಿಸಿರುತ್ತೆ ಅಲ್ವ?"



ಇಂಥ ಪ್ರಶ್ನೆಗಳಿಂದ ಮಕ್ಕಳ ಮನಸಿನ ಮೇಲೆ ಯಾವ ಪರಿಣಾಮ ಬೀಳಬಹುದೆಂದು ಯೋಚಿಸುವ ಗೋಜಿಗೂ ಹೋಗುವುದಿಲ್ಲ ಇವರು. ಆಶ್ರಮಕ್ಕೆ ಬಂದ ಅತಿಥಿಗಳೆಲ್ಲ ಹೋದ ಮೇಲೆ, ಕೆಲವು ಮಕ್ಕಳ ಮನಸ್ಥಿತಿಯಲ್ಲಿ ಏರು ಪೇರು ಕಾಣಬಹುದು. ಯಾರ ಬಳಿಯೂ ಮಾತನಾಡದೆ ಇದ್ದಕಿದ್ದ ಹಾಗೆ ಮಂಕಾಗಿಬಿಡ್ತಾರೆ. ಮತ್ತೊಮ್ಮೆ ಈ ಮಕ್ಕಳನ್ನ ಒಂದು ಮನಸ್ಥಿತಿಗೆ ತರುವಲ್ಲಿ ನಮ್ಮೆಲ್ಲರ ಪ್ರಯತ್ನ ಒಮ್ಮೊಮ್ಮೆ ವಿಫಲವಾಗುತ್ತೆ.

ಇತ್ತೀಚಿಗೊಬ್ಬರು, "ನೀವು ಹೇಳಿದ್ರಿ ಇದು ಅನಾಥಾಶ್ರಮ - Orphanage ಅಂತ, ನಾವೆಲ್ಲೋ ಅಪ್ಪ-ಅಮ್ಮ ಯಾರು ಇರದ ಅನಾಥರು ಅಂದುಕೊಂಡ್ವಿ" ಅಂತ ನನ್ನ ಕೇಳಿಯೇ ಬಿಟ್ಟರು. "ಯಾಕೆ ಸರ್, ತುಂಬ disappoint ಆಗೋಯ್ತ? ಏನೋ ಒಂದು image ಇಟ್ಟುಕೊಂಡು ಬಂದಿದ್ರಿ ಅನ್ಸುತ್ತೆ! ಸಧ್ಯ, ಈ ಮಕ್ಕಳಿಗೆ ಯಾರೂ ಇಲ್ಲದೆ ಯಾರಾದರೊಬ್ಬರು ಇದ್ದಾರಲ್ಲ ಅಂತ ಖುಷಿಪಡಬೇಕು ಅಲ್ವ? ನಿಜ, ಈ ಆಶ್ರಮದಲ್ಲಿ ಕೆಲವರಿಗೆ ಅಪ್ಪ, ಕೆಲವರಿಗೆ ಅಮ್ಮ, ಇನ್ನೂ ಕೆಲವರಿಗೆ ಯಾರೋ ಸಂಬಂಧಿಕರು ಅಂತ ಇದ್ದಾರೆ, ಇಬ್ಬರೂ ಇರದ ಮಕ್ಕಳಿಗೆ ಯಾರೂ ಇಲ್ಲ ಅಂತಲ್ಲ - ನಾವಿದೀವಿ" ಅಂತ ಹೇಳಬೇಕಾಯ್ತು. "ಅಲ್ಲಿದ್ದಾನೆ ನೋಡಿ, ಅವರಪ್ಪ ಆ ಹುಡುಗನ ಮುಂದೆಯೇ ಕೊಲೆಯಾಗಿ ಹೋದ, ಮತ್ತೊಬ್ಬ ಇದ್ದಾನಲ್ಲ ಅವನಮ್ಮ ಜೈಲಿನಲ್ಲಿ, ಇವನಪ್ಪ ದೊಡ್ಡ ಕುಡುಕ, ಇವರಮ್ಮ ಬಿಟ್ಟು ಎಲ್ಲಿಗೊದರೋ ಗೊತ್ತಿಲ್ಲ, ಅವನ ಚಿಕ್ಕಪ್ಪ ಅವನಿಗೆ ಕೊಟ್ಟ ಕಾಟದ ಗುರುತುಗಳು ಅವನ ಮುಖದಲ್ಲಿವೆ ನೋಡಿ, ಇವನು ಯಾವೂರಿಂದ ಓಡಿ ಬಂದನೋ ಗೊತ್ತಿಲ್ಲ, ಹೀಗೆ..... ಪಿಳಿ ಪಿಳಿ ಎಂದು ನೋಡುತಿರುವ ಪುಟ್ಟ ಕಣ್ಣುಗಳ ಹಿಂದೆ ಅನೇಕಾನೇಕ ಕಥೆಗಳಿವೆ, ಅವರನ್ನೆಲ್ಲ ಯಾಕೆ ಕೆಣಕಿ ಕಾಡ್ತೀರಿ?" ಅಂತ ಕೇಳಬೇಕನಿಸಿತ್ತು.

ಸೇವೆಯ ಹೆಸರಿನಲ್ಲಿ ಪುಣ್ಯಗಳಿಸಲು ಹೊರಟ ಮಂದಿಯ ನಡುವೆ ಅರಿವಿಲ್ಲದೆ ಪೆಟ್ಟು ತಿನ್ನುವ ಕಂದಮ್ಮಗಳು ಇವರು. ಸಮಾಜವನ್ನ ಹೆದರಿಸುವ ಶಕ್ತಿ / ಕಲೆ ಒಲಿಯುವು ಮುಂಚೆಯೇ ಇವರಲ್ಲಿ ಕೀಳರಿಮೆ ಮೂಡಿಸುವುದು ಎಷ್ಟು ಸರಿ? ಹಿಂದೊಮ್ಮೆ IT ಕಂಪನಿಯ ಗುಂಪೊಂದು ಆಶ್ರಮಕ್ಕೆ ಬಂದು ಹೋದ ಮೇಲೆ, "ರೂಪಕ್ಕ, ಅಳು ಬರೋತರ ಆಗ್ತಿದೆ" ಅಂತ ಕೃಷ್ಣ ಹೇಳಿದ್ದು ಈಗಲೂ ನೆನಪಿದೆ. ಅವನಿಗೆ ಸಮಜಾಯಷಿ ಹೇಳಿ ಮನೆಗೆ ಬಂದಾಗ ಮನಸು ಭಾರವಾಗಿತ್ತು, ಯಾರನ್ನ ಪ್ರಶ್ನಿಸೋದು? ಯಾರಿಗೆ ಉತ್ತರಿಸೋದು?

ಕೃಷ್ಣನ - ದೀಪಾವಳಿ

ದೀಪಾವಳಿ, ಎಲ್ಲರ ಮನೆಯಲ್ಲು ಸ೦ತಸ,
ರುಚಿ-ಅಡುಗೆ, ಹೊಸ-ಬಟ್ಟೆ, ಪಟಾಕಿಗಳ ಹಾವಳಿ!
ಕೃಷ್ಣನಿಗೆ ಮಾತ್ರ ಎ೦ದಿನ೦ತೆ ದಿನಚರಿ,
ಎದ್ದವನೇ ಆಶ್ರಮದ ಸುತ್ತ ಒಡೆದೆಸೆದು ಕಸ ಕಡ್ಡಿ,
ಗೋಡೆಗೊರಗಿ ಕುಳಿತ ಸುತ್ತಿಟ್ಟ ಚಾಪೆಯ ಹರಡಿ!

ಮನೆ ಮ೦ದಿಯೊಡನೆ ಬೆಳೆದ ಅನುಭವ ಅವನಿಗೆಲ್ಲಿ,
ಹಿ೦ದಿಲ್ಲ-ಮು೦ದಿಲ್ಲ,
ತೊಳೆದ ಎಂಜಲು ತಟ್ಟೆ ಹೊರತೊಂದು ನೆನಪಿಲ್ಲ!
ಒಡ್ಡುತನ - ಬಡತನಗಳ ನಡುವೆ ಹೇಗೆ ಬೆಳೆದು ಬ೦ದನೋ,
ಅ೦ತು ಸೇರಿದ್ದ ಆಶ್ರಮ - ಪುಣ್ಯಾತ್ಮರ ನೆರವೇನೋ!

ಅಲ್ಲಿರುವ ಅಣ್ಣ ತಮ್ಮ೦ದಿರೆ ಅವನಪಾಲಿಗೆಲ್ಲ,
ಪ್ರೀತಿ ಪ್ರೇಮ ತು೦ಬಿದ೦ತೆ ಬಾ೦ಧವ್ಯದ ಒಡಲ!
ಹ೦ಚಿಕೊಳ್ಳಲು ಅವನಲ್ಲಿ ಮಾತುಕತೆಗಳು ಅನೇಕ,
ಭಾವಗಳ ಬಚ್ಚಿಟ್ಟ - ಅವನಿಗೇಕೊ ಬಿ೦ಕ!

ಅ೦ದೊಮ್ಮೆ, ಇ೦ದೊಮ್ಮೆ ಬ೦ದು ಹೋಗುವ ಮ೦ದಿ,
ಹಣ್ಣು, ಹಾಲು, ಸಿಹಿತಿನಿಸು ಕೊಡುವುದು೦ಟು
ತಮ್ಮ ಗೆಲುವು ಸಂಭ್ರಮಗಳ ನೆಪವೊಡ್ಡಿ!
ಯಾರೊ ತೊಟ್ಟು ಎಸೆದ ಬಟ್ಟೆ, ಆಡಿಬಿಟ್ಟ ಆಟಿಕೆಗಳು,
ಓದಿಬಿಟ್ಟ ಹಾಳೆಗಳ ಅ೦ಟಿಸಿ ಓದುವ ಪುಸ್ತಕಗಳು!

ಅವರಿವರ ಕರುಣೆಗೆ ತುತ್ತಾಗಿ ಬೆಳೆಯುತ,
ಮು೦ದೇನು ಎ೦ದು ಅರಿಯದ ಬದುಕು!
ಪ್ರತಿ ಹೆಜ್ಜೆಗೂ ಭಿಕ್ಷೆ - ಮಾಡದ ತಪ್ಪಿಗೆ ಶಿಕ್ಷೆ,
ಕನಸ ಕಾಣಲು ಸಹ ಮನದೊಳಗೆ ಅಳುಕು!
ಕೃಷ್ಣನ ಪರಪುಟ್ಟ ಕಣ್ಣುಗಳು ಬೆದರಿದ೦ತೆ,
ಮೌನರೋದನೆ ಪ್ರಶ್ನಾರ್ತಕ ಒಳಗೊಳಗೆ!
"ನನಗೇಕೆ ಈ ಬಾಳು..?, ನಾನಿಲ್ಲಿ ಹೀಗೇಕೆ "..?
ಅ೦ಜಿಕೆ ನಡುವೆ ಅನಿವಾರ್ಯ -
 ಬಯಸುವುದು ಹೇಗೆ
ಹೊ೦ಬಣ್ಣದಾಕಾಶ, ಬೆಳಕಿನದೀವಳಿ?

Thursday, December 6, 2012

ನಿನಗಾಗಿ

ನಿನಗಾಗಿ 
 ಸಂತಸದ
ದಿಸೆಯಲಿ
ಬೇಸತ್ತ
ಘಳಿಗೆಯಲಿ
ನಿನ್ನ
ಬೇಟಿ!
ಹೊಸ ಬಗೆಯ
ಖುಷಿಯಾಗಿ,
ಹೊಸ ಬಗೆಯ 
ರುಚಿಯಾಗಿ
ನಿನಗೆ ನೀನೆ 
ಸಾಟಿ !

ನಿನಗಾಗಿ
ನನ್ನಲ್ಲಿರುವ
ಪ್ರೀತಿ,
ಮೋಹ
ದಿನದಿಂದ
ದಿನಕ್ಕೆ
ಹೆಚ್ಚುತಲೇ
ಇದೆ! 

ಓ ನನ್ನ ಮುದ್ದು.... ಕೋಳಿಯೆ.....
ಇದೋ ನಿನಗೊಂದು ಉಮ್ಮ್ಹ .....!!

Wednesday, November 21, 2012

ಕೊನೆಗೂ ಮನೆಯಲ್ಲಿದ್ದ ಕಸ(ಬ) ಗುಡಿಸಿ ಎಸೆದೆವು!!


ಇಲ್ಲೊಬ್ಬ ಸಂತಸದಿಂದ ಕುಣಿದಿದ್ದಾನೆ!

ಮತ್ತೊಬ್ಬ "ಹಾಲು-ಕುಡಿದಂಗಾಯ್ತು" ಎಂದ

"ಸಿಹಿ ಉಂಡೇ ಬಿಡುವೆ" ಅಂದನವನು

"ಈ ದಿನ ನನ್ನದೇ ಔತಣ" ಎಂದನಿವನು

"ಅಬ್ಭಾ...ಅಂತೂ ಏನೋ ಒಂದು ಗತಿ ಆಯ್ತು"

"ಎಂಥ ಖುಷಿ ಕೊಡುವ ಸುದ್ದಿ" ಎಂದರೆ ಇನ್ನೊಬ್ಬ.....

" ***** " ಉಸುರಿದ ಅವನೊಬ್ಬ

"ಪಟಾಕಿ ಹೊಡಿಬೇಕನಿಸ್ತಿದೆ" ಮಗದೊಬ್ಬ ....

ಹೀಗೆ ಇನ್ನು ಅನೇಕಾನೇಕ ಪ್ರತಿಕ್ರಿಯೆಗಳು!!


ಸಾವನ್ನು ಸಂಭ್ರಮದಿಂದ ಆಚರಿಸುವ ಈ ಪರಿ ನಾನಂತೂ ನನ್ನ ಜೀವನದಲ್ಲೇ ಕಂಡಿದ್ದಿಲ್ಲ!

ಈ ದಿನ ಪ್ರತಿಯೊಬ್ಬ ಭಾರತೀಯನೂ ಸಂಭ್ರಮದಿಂದ ಸಾವನ್ನು ಆಚರಿಸಿದ್ದಾನೆ....!

ಕಸಬ ಸತ್ತ.......!

ಎಲ್ಲರ ಮುಖದಲ್ಲೂ ನಗು!

ಕಸಬನನ್ನು ತಾನೇ ಕೊಂದವನಂತೆ ತೋರುವ ಕಿಚ್ಚೆದೆಯ ವೀರನ ಗಮ್ಮತ್ತು!

ನನ್ನ ದೇಶದ ಯಾವ ವೇದ-ಪುರಾಣ-ಧರ್ಮಗಳಲ್ಲಿಯೂ ಸಾವನ್ನು ಸಂಭ್ರಮದಿಂದ ಆಚರಿಸಿ ಎಂದು ಬರೆದಿಲ್ಲ. ಆದರೆ ಇದು ಅಂತಿಂಥ ಸಾವಲ್ಲ. ದೇಶಪ್ರೇಮ ಎನ್ನುವುದು ಈ ಎಲ್ಲಾ ವಿಧಿ, ವೇದ, ಪುರಾಣ, ಧರ್ಮಗಳಿಗಿಂತ ಮಿಗಿಲಾದದ್ದು ಎನ್ನುವುದಕ್ಕೆ ಈ ಸಾವಿನಿಂದ ಹೊಮ್ಮುತಿರುವ ಭಾವನೆಗಳೇ ಸಾಕ್ಷಿ.......



ಈ ಭಾವನೆಯಲ್ಲಿ ಮಿಶ್ರ ಅನಿಸಿಕೆಗಳಿಗೆ, ಅನ್ಯ ಅಭಿಪ್ರಾಯಗಳಿಗೆ ಎಡೆಯಿಲ್ಲ, ಜಾತಿ - ನೀತಿ - ಪಜೀತಿಗಳಿಲ್ಲ! ಎಲ್ಲರಲ್ಲೂ ಹಾಗು ಎಲ್ಲೆಲ್ಲರಲ್ಲೂ ಅಡಗಿರುವ 26/11ನ ಕಪ್ಪು ಛಾಯೆ. ನನ್ನ ದೇಶಕ್ಕೆ ಲಗ್ಗೆಯಿಟ್ಟು ನನ್ನ ಜನರನ್ನೇ ಕೊಂದವನ ಮೇಲಿರುವ ಉದ್ರಿಕ್ತ ಆವೇಶ. ನಾನು, ನನ್ನದು, ನನ್ನಿಂದ ಎನ್ನುವ ಅಹಂಗಳಿಗಿಂತಲೂ ಅತೀ ಅತೀ ದೊಡ್ಡದಾದ ಭಾವನೆಯಿದು.

ಈ ಸಾವು ಮರೆಯುವನ್ತದ್ದಲ್ಲ! ನಮ್ಮ ಕಾನೂನು, ನಮ್ಮ ಸರ್ಕಾರದ ನಡುವೆ ಕುದಿಯುತ್ತಿದ್ದ ನೋವುಂಡ ಜೀವಗಳ ಸೇಡಿಗೆ ಇದು ಉತ್ತರ. ಇವನ ಹಿಂದೆ ಅಡಗಿದೆ ಸರ್ಕಾರಗಳ ಮುಖವಾಡ, ರಾಜಕೀಯ ಇರಾದೆ, ತಮ್ಮ- ತಮ್ಮ ಪಕ್ಷಗಳಿಗೆ ಜನರ ಅಭಿಮತಗಳಿಸಲು ಯತ್ನಿಸುತಿದ್ದ ಎಣಿಕೆಗಳು! ಇವನಿಗಾಗಿ ನಮ್ಮೆಲ್ಲರ ಹಣ ವ್ಯರ್ಥವಾದದ್ದು ಎಷ್ಟೋ. ಡೋಲಾಯಮಾನದಂತೆ ನ್ಯಾಯ ಸಮ್ಮತಿಗಳ ನಡುವೆ ತೂಗುತಿದ್ದ ನಮ್ಮ ಕಾನೂನು.

ಇವೆಲ್ಲದರ ನಡುವೆ ಜನಸಾಮಾನ್ಯನ ಸಿಟ್ಟು ಹೆಪ್ಪುಗಟ್ಟಿ ಗೂಡಾಗಿ ಹೇಳಲು ಆಗದೆ ಅನುಭವಿಸಲು ಆಗದೆ ಪಟ್ಟ ರೋದನೆ. ಬದಲಿಗೆ ಜನಸಾಮಾನ್ಯನ ಆಕ್ರೋಶವೆಲ್ಲ - ಲೇಖನಗಳಾಗಿ, ಕವನಗಳಾಗಿ, ನಗೆಹನಿಗಳಾಗಿ, ವಿಡಂಬನೆಗಳಾಗಿ, ವ್ಯಂಗ್ಯಚಿತ್ರಗಳಾಗಿ, ಚರ್ಚೆಗಳಾಗಿ ಹರಿದಾಡಿದ್ದು ತಿಳಿದೇ ಇದೆ.

ಇವನ ಸಹಪಾಟಿಯೊಂದಿಗೆ ಕಿಂಚಿತ್ತು ಮರುಕವಿಲ್ಲದೆ ೧೬೫ ಜನರನ್ನು ಮಾತ್ರ ಕೊಂದವನಲ್ಲ, ಅವರ ಸಂಸಾರಗಳನ್ನು ಕೊಂದವ, ಅವರ ಕನಸುಗಳನ್ನು ಕೊಂದವ, ಅವರ ಜೀವನದ ದಿಕ್ಕುಗಳನ್ನೇ ಬದಲಾಯಿಸಿದವ. ದೇಶ ದೇಶವೇ ನಡುಗಿತ್ತು, ಮರುಗಿತ್ತು. ಇವನ ಬಂದೂಕಿಗೂ, ತಮ್ಮ ಜೀವಕ್ಕೂ ಹೆದರದೆ ದಾಳಿಗಿಳಿದ ನಮ್ಮ ಪೋಲೀಸರ ಪಡೆ ಕಡೆಗೂ ಇವನೊಬ್ಬನನ್ನು ಹಿಡಿದಾಗ ನನ್ನ ದೇಶದ ಕೋಟಿ ಕೋಟಿ ಜನರ ರೋಮ ರೋಮವೂ ಆವೇಶದಿಂದ ಕುದಿಯುತಿತ್ತು.

ತಡವಾದರೂ ಸದ್ದಿಲ್ಲದೇ ಅವನ ಸಾವು ಸಂಭವಿಸಿದೆ, ಉರಿವ ಬೆಂಕಿಯ ಮೇಲೆ ನೀರು ಸುರಿದಂತೆ....ಹಬೆ ಇನ್ನೂ ಆರಿಲ್ಲ. ಇವನ ತಂದೆ-ತಾಯಿ, ಬಂಧು-ಬಳಗ, ಊರು-ಕೇರಿ, ದೇಶಕ್ಕೆ ಇವನು ಬೇಕಿಲ್ಲ.

ಒಬ್ಬ ಕಸಬ ಸತ್ತರೆ ನೂರಾರು ಕಸಬರು ಹುಟ್ಟಿ ಬರುತ್ತಾರಂತೆ, ಆದರೇನಂತೆ ...ಯಾವ ಹುಳುವನ್ನೂ ಬಿಡುವ ಮಾತೇ ಇಲ್ಲ, ತಡವಾದರೂ ಬಂದೆ ಬಂತು ಸಾವು .....ಇದು ಭಾರತ!



Friday, October 12, 2012

ಹಳೆಯ ಡೈರಿ - ಹಳೆಯ ನೆನಪು


ಎಲ್ಲರೂ ಡೈರಿ ಬರೆಯುತ್ತಾರೆ ಹಾಗೆಯೇ ನಾನು ಸಹ ಬರೆಯಬೇಕು ಎಂದು ಚಿಕ್ಕಂದಿನಲ್ಲಿ ಡೈರಿ ಬರೆಯುವ ಅಭ್ಯಾಸ ಶುರುವಿಟ್ಟೆ! ಅದು-ಇದು ಇಷ್ಟವಾಗಿದ್ದು ಇಲ್ಲವಾಗಿದ್ದು ಬರೆದುಕೊಂಡ ಡೈರಿ ಅದು. ಶಾಲೆಯ ದಿನಗಳಲ್ಲಿ ಬರೆಯುತ್ತ - ಕಾಲೇಜಿನ ಮೆಟ್ಟಿಲು ಹತ್ತುವಷ್ಟರಲ್ಲಿ ಆ ಅಭ್ಯಾಸ ಬಿಟ್ಟು ಹೋಗಿತ್ತು. ನನ್ನ ಸ್ನೇಹಿತರು, ತಂಗಿಯರು, ಅವರಿವರ ಚೇಷ್ಟೆ, ಪತ್ರಿಕೆಗಳಿಂದ ಕತ್ತರಿಸಿ ಅಂಟಿಸಿದ್ದ ವಿಭಿನ್ನ ವಿಷಯಗಳು, ಹುಟ್ಟುಹಬ್ಬದ೦ದು ಸಿಕ್ಕ ಉಡುಗೊರೆಯ ಪಟ್ಟಿ, ಸಿಟ್ಟು, ಕಲಾಪ, ಹೀಗೆ ಅನೇಕ ವಿಷಯಗಳು ಅದರಲ್ಲಿದೆ. ವ್ಯಾಕರಣಾತ್ಮಕ ಹೊರತು-ಮರೆತು ಓದಬೇಕಷ್ಟೇ!!

ಡೈರಿ ಬರೆಯುವುದರಿಂದ ಮನಸಿಗೆ ನೆಮ್ಮದಿ ಸಿಗೋದು, ಮನದ ಮಾತುಗಳೆಲ್ಲ ಹೊರಗೆ ಬರೋಕೆ ಸಹಾಯವಾಗುತ್ತೆ ಅನ್ನೋದು ಎಷ್ಟು ನಿಜ? ಅಷ್ಟಕ್ಕೂ ಈ ಡೈರಿ ಬರೆಯುವ ನನ್ನ ಸ್ನೇಹಿತರು ಹೇಳಿಕೊಂಡಂತೆ ಅದರಿಂದ ಆದ ಅನಾಹುತ, ಅಪಾರ್ಥ, ಅಪವಾದಗಳೆ ಹೆಚ್ಚು. ನನ್ನ ಮಟ್ಟಿಗೆ - ನಾನಂತೂ ಕಿಲಾಡಿ ಎಂದುಕೊಂಡೆ! ನನಗೆ ಬೇಕಾಗಿರುವ ವಸ್ತುಗಳನ್ನ ಅಪ್ಪನಿಗೆ ಸೂಚನೆ ಕೊಡುವ ಸಲುವಾಗಿ ಬರೆದು - ಬರೆದು ಅವರ ಕೈಗೆ ಸಿಗುವ ಜಾಗದಲ್ಲೇ ಇಡುತಿದ್ದೆ. ಸಾಲದಕ್ಕೆ ನನ್ನ ಡೈರಿಯನ್ನ ಓದಲಿ ಎನ್ನುವ ಸಲುವಾಗಿ "Do Not Open - My Personal Diary" ಅಂತ ದಪ್ಪಕ್ಷರಗಳಲ್ಲಿ ಡೈರಿಯ ಮೇಲೆ ಬರೆದಿದ್ದೆ. ಅಪ್ಪನಿಗೆ ನನ್ನ ಪೆದ್ದುತನ ತಿಳಿದಿದ್ದರೂ - ಏನೂ ತಿಳಿಯದವರಂತೆ ಮುದ್ದು ಮಾಡುತಿದ್ದರು ಎನ್ನುವ ವಿಷಯ ನಾನು ತಾಯಿ ಆದಮೇಲೆಯೇ ನನಗೆ ಅರಿವಿಗೆ ಬಂದದ್ದು.

ಆಗೊಮ್ಮೆ ಈಗೊಮ್ಮೆ ಕಣ್ಣಿಗೆ ಬಿದ್ದು ಮಾಯವಾಗುತಿದ್ದ ಈ ಹಳೆಯ ಡೈರಿ ಕೆಲವು ತಿಂಗಳುಗಳ ಹಿಂದೆ ಮತ್ತೆ ಕಾಣಿಸಿತ್ತು. ಕೈಗೆತ್ತಿಕೊಂಡು ಒಂದೊಂದೇ ಪುಟಗಳನ್ನ ಕುತೂಹಲದಿಂದ ಓದುತಿದ್ದೆ! ಪ್ರತೀ ಬಾರಿ ಈ ಡೈರಿ ಓದುವಾಗಲು ಒಂದೊಂದು ಅನುಭವ. ನೆನಪುಗಳ ಬುತ್ತಿ ಬಿಚ್ಚಿಟ್ಟಹಾಗಿತ್ತು. ಒಂದು ಪುಟದ ಮೂಲೆಯಲ್ಲೆಲ್ಲೋ "I will not like Nanju Ajji" ಎಂದು ಬರೆದಿದ್ದು ಕಾಣಿಸಿತು. ಇದೆಂತ: ಇಂಗ್ಲಿಷೋ! ಹೀಗೂ ಸಹ ಬರೆದಿದ್ನ ಅಂತ. ಸರಿ, ಹೀಗ್ಯಾಕೆ ಬರೆದಿದ್ದೆ? ನಂಜು ಅಜ್ಜಿ, - ಅವರ್ಯಾಕೆ ಇಷ್ಟವಿರಲಿಲ್ಲ? ನೆನಪಿಸಿಕೊಳ್ಳುವುದು, ಕೆದಕುವುದು ಈಗ ಅನಿವಾರ್ಯ.

ಮೊದಲ ಮೊಗ್ಗಿನ ಜಡೆ

ನಂಜು ಅಜ್ಜಿಗೆ ಇಬ್ಬರು ಗಂಡುಮಕ್ಕಳು - ಆರು ಜನ ಹೆಣ್ಣುಮಕ್ಕಳು. ಇವರ ಕೊನೆಯ ಮಗಳು ನಿರ್ಮಲ ನನ್ನ ಸ್ನೇಹಿತೆ. ಶಾಲೆಗೆ ಜೊತೆಯಲ್ಲೇ ಹೊಗಿಬರುತಿದ್ದೆವು. ಕೆಲವೊಮ್ಮೆ ಜೊತೆಯಲ್ಲಿ ಆಡುತಿದ್ದೆವು. ಅವಳಿಗಿಷ್ಟ ಬಂದಾಗಷ್ಟೇ ನನ್ನ ಜೊತೆ ಇರುತಿದ್ದಳು - ಇಲ್ಲವಾದಾಗ ಮುಲಾಜಿಲ್ಲದೆ "ನೀನೀಗ ಹೋಗ್ತೀಯ ನಾನು ಊಟ ಮಾಡ್ಬೇಕು, ಹೊಸ ಗೊಂಬೆ ಜೊತೆ ಆಟ ಆಡ್ಬೇಕು" ಅಂತ ಹೇಳಿ ಓಡಿಸುತಿದ್ದಳು. ನಮ್ಮ ಮನೆಯ ಬೀದಿಯ ಕೊನೆಯಲ್ಲೇ ಇವರ ಮನೆ. ಓಡಿಸಿದಾಗೆಲ್ಲ ನಮ್ಮ ಮನೆಗೆ ಓಡಿ ಬಂದು ಏನು ಆಗದಂತೆ ಇದ್ದು ಬಿಡುವುದು ವಾಡಿಕೆಯಾಗಿಬಿಟ್ಟಿತ್ತು. ನಂಜು ಅಜ್ಜಿ ಅಂತ ಎಲ್ಲರು ಕರೆಯುತಿದ್ದು, ನಾನು ಸಹ ಅವಳ ತಾಯಿಯನ್ನ ಹಾಗೆ ಕರೆಯುತಿದ್ದೆ.


ಬೇಸಿಗೆ ರಜೆ. ಸರಿಯಾಗಿ ನೆನಪಿಲ್ಲವಾದರೂ ಎರಡನೇ ಅಥವಾ ಮೂರನೇ ತರಗತಿಯಲ್ಲಿರಬಹುದು.  ಮೊದಲ ಬಾರಿ ಅಮ್ಮ ನನಗೆ ಮೊಗ್ಗಿನ ಜಡೆ ಹಾಕಿಸಿದ್ದು. ಅವರ ಮೊದಲ ಮುದ್ದು ಮಗಳು ನಾನು, ಅವರ ಪ್ರಯೋಗಗಳೆಲ್ಲವು ನನ್ನ ಮೇಲೆ ಆಗಾಗ ನಡೆಯುತಲೆ ಇತ್ತು. ಅಂದು ಮೊಗ್ಗಿನ ಜಡೆ ಹಾಕಿಸಿದ್ದ ದಿನ, ಹೊಸ ರೇಶಿಮೆ ಲಂಗ, ಎರಡೂ ಕೈಗಳ ತುಂಬ ಗಾಜಿನ ಬಳೆಗಳು, ಅಮ್ಮನ ಬಂಗಾರ, ಅಜ್ಜಿಯ ಅವಲಕ್ಕಿ ಸರ ಎಲ್ಲವೂ ನನ್ನ ಮೇಲೇ ಇತ್ತು. ಅಪ್ಪ-ಅಮ್ಮನ ಜೊತೆ ಅವೇನ್ಯೂ ರೋಡಿನಲ್ಲಿದ್ದ ಎಂಪೈರ್ ಸ್ಟುಡಿಯೋಗೆ ಹೋದದ್ದು, ಬಣ್ಣ ಬಣ್ಣದ ಪ್ಲಾಸ್ಟಿಕ್ ಹೂವಿನ ಕುಂಡದ ಮುಂದೆ ನಿಲ್ಲಿಸಿ ಫೋಟೋ ತೆಗೆಸಿದ್ದು, ಅಪ್ಪ ನನ್ನನ್ನು ತಬ್ಬಿ ಮುದ್ದಾಡಿದ್ದು, ಮನೆಗೆ ಬಂದು ಆ ದಿನ ರಾತ್ರಿ ತಿಂದ ಊಟವನ್ನೆಲ್ಲ ಕಕ್ಕಿದ್ದು, ನ೦ತರ ಉಪ್ಪು - ಮೆಣಸು ನಿವಾಳಿಸಿ, ಪೊರಕೆ ಕಡ್ಡಿಗಳನ್ನ ಸುಟ್ಟು ಅಮ್ಮ ದೃಷ್ಟಿ ತೆಗೆದದ್ದು.... ಎಲ್ಲವೂ ನೆನಪಿದೆ!

ಎರಡು ದಿನಗಳ ನಂತರ ಸ್ಟುಡಿಯೋದಿಂದ ಅಪ್ಪ ಫೋಟೋ ತಂದಿದ್ದರು, ಅದನ್ನ ನೋಡಿದ್ದೆ ನನ್ನ ಮುಖ ಊರಗಲ ಅರಳಿತ್ತು. ಸುಮ್ಮನಿರದೆ ಆ ಫೋಟೋವನ್ನು ನಿರ್ಮಲಳಿಗೆ ತೋರಿಸಲು ಅವಳ ಮನೆಯ ಕಡೆ ಓಡಿದ್ದೆ. ಅವಳಂತೂ ಮನೆಯಲ್ಲಿರಲಿಲ್ಲ, ಬದಲಿಗೆ ನಂಜು ಅಜ್ಜಿ ನನ್ನ ಫೋಟೋ ನೋಡಿದರು. ನೋಡುತ್ತಲೇ, "ನಮ್ಮ ನಿರ್ಮಲಳ ಫೋಟೋ ಇನ್ನು ಚೆನ್ನಾಗಿರುತ್ತೆ, ಅವಳ ಕಲರ್ ನೋಡಿದ್ಯ ಏನ್ ಕಲರ್ ಇದಾಳೆ, ನಿನಗಿಂತ ಬೆಳ್ಳಗೆ ಬರ್ತಾಳೆ ಫೋಟೋದಲ್ಲಿ, ಅವಳ ಮೊಗ್ಗಿನ ಜಡೆ ಇನ್ನೂ ಉದ್ದ ಇರುತ್ತೆ" ಅಂತ ವ್ಯಂಗ್ಯವಾಗಿ ಹೇಳಿಬಿಟ್ಟರು. ಫೋಟೋ ತೆಗೆದುಕೊಂಡು ಅಳುತ್ತಲೇ ಮನೆಗೆ ಬಂದೆ. ಕಣ್ಣೀರ ಕೆಲವು ಹನಿಗಳು ಜಾರಿ ನನ್ನ ಮೊದಲ ಮೊಗ್ಗಿನ ಜಡೆಯ ಫೋಟೋದ ಮೇಲೆ ಬಿದ್ದಿತ್ತು. ಆ ಫೋಟೋ ಕದಡಿ ಅಲ್ಲಲ್ಲಿ ಹಾಳಾಗಿ ಹೋಯ್ತು. ಇಂದಿಗೂ ಆ ಫೋಟೋ ಹಾಗೆಯೇ ಇದೆ. ಒಂದೇ ಚಿತ್ರದ ಮೂರು ಪ್ರತಿಗಳಿದ್ದರಿಂದ ಅಪ್ಪ ಮತ್ತೊಂದು ಫೋಟೋಗೆ ಫ್ರೇಮ್ ಹಾಕಿಸಿಟ್ಟರು.


ಆ ಘಟಣೆಯ ನೆನಪಿನಲ್ಲಿ ನಂಜು ಅಜ್ಜಿಯ ಬಗ್ಗೆ ಆ ಸಾಲು ಬರೆದಿರುತ್ತೇನೆ ಎಂದುಕೊಂಡೆ. ಅಷ್ಟಕ್ಕೂ ಇದ್ಯಾವುದು ನೆನಪಿರಲಿಲ್ಲ. ಆ ಹಳೆಯ ಡೈರಿ ನೋಡಿದಾಗಲೆಲ್ಲ ಈ ವಿಷಯ ಕಣ್ಣಿಗೂ ಬೀಳುತಿರಲಿಲ್ಲ. ಮೂಲೆಯಲ್ಲೆಲ್ಲೋ ಬರೆದದ್ದು ಈ ಬಾರಿ ಕಂಡುಬಂದದ್ದು ಯಾಕಂತಲೂ ತಿಳಿಯುತ್ತಿಲ್ಲ!

ನಂಜು ಅಜ್ಜಿ ಮತ್ತೆ ನೆನಪಾದದ್ದು

ನಂಜು ಅಜ್ಜಿ ಬಗ್ಗೆ ಇತ್ತೀಚೆಗಷ್ಟೇ ಮತ್ತೆ ಕೇಳಿಪಟ್ಟೆ. ಅಮ್ಮನಿಗೆ ಯಾರೋ ಹೇಳಿದ ಇತ್ತೀಚಿನ ಸುದ್ದಿ ಇದು. ಎಂಟು ಮಕ್ಕಳ ಮಹಾತಾಯಿ ಆಕೆ. ಅವರ ಇಬ್ಬರು ಗಂಡು ಮಕ್ಕಳಾಗಲಿ, ಆರು ಮಂದಿ ಹೆಣ್ಣು ಮಕ್ಕಳಾಗಲಿ, ಸೊಸೆ - ಅಳಿಯನ್ದಿರಾಗಲಿ ಇವರನ್ನು ನೋಡಿಕೊಳ್ಳಲು ನಿರಾಕರಿಸಿದ್ದಾರೆ. ಎಲ್ಲರು ಸೇರಿ ಮಾತು-ಕತೆ ನಡೆಸಿ ಇವರನ್ನು ವೃದ್ದಾಶ್ರಮದಲ್ಲಿ ಬಿಟ್ಟಿದ್ದಾರೆ. ಇವರ ಆಶ್ರಮದಲ್ಲಿನ ಖರ್ಚಿಗೂ ಹಣ ಕೊಡುವುದಕ್ಕೆ ಇವರ ಮಕ್ಕಳು ಜಗಳಕ್ಕೆ ಬಿದ್ದಿದ್ದಾರೆ. ಒಬ್ಬೊಬ್ಬರೂ ಉನ್ನತ ಸ್ಥಾನಗಳಲ್ಲಿರುವವರೇ, ಆಸ್ತಿ ಅಂತಸ್ತು ಅಂತ ಹೆಚ್ಚೆಚ್ಚಿಗೆ ಮಾಡಿಕೊಂಡವರೆ. ಇನ್ನುಳಿದಂತೆ ನಂಜು ಅಜ್ಜಿಯ ಹೆಸರಿಗಿದ್ದ ಆಸ್ತಿಯನ್ನ ಅಕ್ಷರ ಸಹ ಇವರ ಮಕ್ಕಳು ತಮ್ಮ ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.

ನಂಜು ಅಜ್ಜಿ ಇನ್ನೂ ಆರೋಗ್ಯವಾಗೇ ಇದ್ದಾರೆ, ಮೊಮ್ಮಕ್ಕಳೆಂದರೆ ಇವರಿಗೆ ಪ್ರಪಂಚ, ಕೊನೆಯ ಮಗಳೆಂದರೆ ಅಪಾರ ಪ್ರೀತಿ. ಆ ಆಶ್ರಮದಲ್ಲಿ ಇವರು ಹೇಗೆ ಕಾಲ ಕಳೆಯುತ್ತಿರಬಹುದು? ಇವರ ಮನಸ್ತಿತಿಗೆ ಸ್ಪಂದಿಸುವ ಒಂದು ಜೀವವು ಇವರ ಮನೆಯಲ್ಲಿ ಇಲ್ಲವಾಗಿದೆ. ಇದು ವಿಪರ್ಯಾಸ.

ಯಾಕೋ ಈ ವಿಷಯ ಅಮ್ಮನಿಂದ ತಿಳಿದು ನಂಜು ಅಜ್ಜಿಯ ಬಗ್ಗೆ ದುಖವಾಗ್ತಿದೆ. ಇವರನ್ನ ಬೇಟಿ ಆಗಿ ಬರುವ ಮನಸ್ಸಾಗಿದೆ. ವಯಸ್ಸಾಗುತಿದ್ದಂತೆ ಮತ್ತೊಮ್ಮೆ ಮಕ್ಕಳೇ ಆಗಿಬಿಡ್ತಾರೆ ಅಂತ ಕೇಳಿದ್ದೆ. ಇದು ಅಕ್ಷರ ಸಹ ನಿಜ, ಅನುಭವವಾಗಿದೆ. ಮಕ್ಕಳಂತೆ ಇವರಿಗೂ ಹೆಚ್ಚಿನ ಖಾಳಜಿ ನೀಡಬೇಕಿದೆ. ವ್ರುದ್ದಾಶ್ರಮದೆಡೆಗೆ ದೂಡಿದ ನಂಜು ಅಜ್ಜಿಯ ಎಂಟೂ ಜನ ಮಕ್ಕಳು ಹಾಗು ಇವರು ಬೆಳೆಸಿಕೊಂಡು ಬಂದ ಮೌಲ್ಯಗಳ ಮೇಲೆ ದಿಕ್ಕಾರವಿದೆ. ಪ್ರೀತಿ ಗೌರವಗಳಿಂದ ವಂಚಿತರಾದ ನಂಜು ಅಜ್ಜಿಯ ಮೇಲೆ ಅನುಕಂಪವಿದೆ. ಅಲ್ಲಲ್ಲಿ / ಕಾರ್ಯಕ್ರಮಗಳಲ್ಲಿ ಸಿಗುವ ಇವರ ಮಕ್ಕಳನ್ನ ನೋಡಿದಾಗ ಮಾತನಾಡಿಸುವ ಮನಸೂ ಆಗುವುದಿಲ್ಲ. ನನ್ನ ಸಿಟ್ಟು, ನನ್ನ ವರ್ತನೆಯನ್ನ ನಿಯಂತ್ರಿಸುವ ಮಾರ್ಗ ಹುಡುಕಿಕೊಳ್ಳುತಿರುತ್ತೇನೆ.

--------------------------------------------------------

ಹಳೆ ಡೈರಿಯ...ಮಾತು ಕತೆ...ನೆನಪುಗಳು ...ಇನ್ನೂ ಇವೆ!

Quietly Done!

Quietly Done! Off late, I've been choosing my circle, selective and true. Just a few connections who actually shine and comfort me throu...