Saturday, April 4, 2026

Quietly Done!


Quietly Done!

Off late, I've been choosing my circle, selective and true.
Just a few connections who actually shine and comfort me through.

Setting boundaries, choosing self, and figuring life! 
Not cold, not arrogant but just discerning well.

Longing for real intent, craving authenticity, and no pretense of any kind.
Distancing! Yeah... it's avoiding the dramas and guarding my energies.

Refusing the noises, I show no mercy as my peace is now non-negotiable. 
Silences are attractive, for they are honest, and I easily cut off emotional labor.

I reflect, I rewire and I feel the strength in being me.
Thus embracing the calmness, the tranquility, the wilderness...
yet setting myself free!

- RS - 

Sunday, June 8, 2025

ಟೂರಿಸ್ಟ್ ಫ್ಯಾಮಿಲಿ ...Tourist Family, an ode to humanity & compassion :)


ಸ್ವಾರ್ಥ ಮತ್ತು ಸ್ವಲಾಭ ತುಂಬಿರುವ ಇಂದಿನ ಅಪ್ರಾಮಾಣಿಕ ವಾತಾವರಣದಲ್ಲಿ ಮಾನವೀಯತೆ ಹಾಗೂ ವಿಶ್ವಾಸವೆಂಬ ಅಸ್ತ್ರಗಳು ಧರ್ಮ, ಪ್ರದೇಶ, ಪ್ರಾಂತ್ಯ ಹಾಗೂ ಭಾಷೆಗಳನ್ನು ಮೀರಿಸುತ್ತದೆ.  ಇಂತಹ ಒಂದು strong ಸಂದೇಶವನ್ನು ಸಾರುವ ಚಿತ್ರ, ತಮಿಳಿನ "Tourist Family".  It is one of the beautifully crafted Tamil movie.  

ಚಿತ್ರವು ಕರುಣೆ ಮತ್ತು ಸಹಾನುಭೂತಿಯನ್ನು ಬಲವಾಗಿ ಪ್ರತಿಪಾದಿಸುತ್ತ, ಈ ಗುಣಗಳು ಹೇಗೆ ವಿಘಟಿತ ಸಮುದಾಯವನ್ನು ಒಂದು ಕುಟುಂಬವಾಗಿ ಪರಿವರ್ತಿಸಬಹುದು ಎಂಬುದನ್ನು ತೋರಿಸುತ್ತದೆ.  "Tourist Family", is definitely a heartwarming and refreshing experience that strikes a perfect balance between gentle humor and profound emotional depth. 

ಅಭೀಷನ್ ಜೀವಿಂತ್ ರವರ ನಿರ್ದೇಶನದಲ್ಲಿ ಅತ್ಯಂತ ಸರಳತೆಯ ಕತೆ ಹೆಣಿಕೆಯೊಂದಿಗೆ ಗಂಭೀರವಾದ ವಿಷಯವನ್ನು ನೋಡುಗರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನವಿದು. Movie stands out for its simplicity, sincerity, and its powerful message about humanity transcending boundaries.  

ಶ್ರೀಲಂಕಾದ ತಮಿಳು ಕುಟುಂಬವೊಂದು ತಮ್ಮ ಆರ್ಥಿಕ ಸಂಕಷ್ಟದಿಂದ ಪಾರಾಗಲು ಅಕ್ರಮವಾಗಿ ಭಾರತಕ್ಕೆ ವಲಸೆ ಬರುವುದು,  ಬಂದು ಹೊಸ ಜೀವನ ಕಟ್ಟಿಕೊಳ್ಳುವ ಪ್ರಯತ್ನಪಡುವುದು, ಆ ಪ್ರಯತ್ನಗಳ ನಡುವೆ ತಮ್ಮ ಸಹಜ ಸರಳ ಮಾನವೀಯ ಮೌಲ್ಯಗಳಿಂದ ದೇಸೀಯರ ನಂಬಿಕೆ ಹಾಗೂ ಪ್ರೀತಿ ಸಂಪಾದಿಸುವುದು! ಈ ಚಿತ್ರದ ಮೂಲ ಕಥೆ ಇಷ್ಟೇ ಸರಳವಾದರೂ ಅದೊಂದು ಸಕಾರಾತ್ಮಕ ಭಾವನೆ ಮೂಡಿಸುವ feelgood ಸಿನಿಮಾ. ವಲಸೆ ಬಂದ ಸಾಮನ್ಯ ಕುಟುಂಬವೊಂದು ಇಡೀ ಬಡಾವಣೆಗೆ ಮಾದರಿಯಾಗಿ ನಿಲ್ಲುವ ರೀತಿಯನ್ನು ಯಾವುದೇ ಅನಗತ್ಯ flashbackಗಳು ಅಥವಾ ವಿಚಿತ್ರ ತಿರುವುಗಳಿಲ್ಲದೆ  ನೈಜವಾಗಿ ಬಿಂಬಿಸಲಾಗಿದೆ.   

ಎಲ್ಲಿಯೂ ಚಿತ್ರಕಥೆಯ ಹಿಡಿತವನ್ನು ಸಡಿಲಗೊಳಿಸದೆ, ಕತೆಗೆ ಹೊಂದುವ ಸಹಜ ಹಾಸ್ಯ, ಜೊತೆಗೆ  ಸಸಿಕುಮಾರ್, ಸಿಮ್ರನ್, ಬಾಲಕಲಾವಿದ ಕಮಲೇಶ್ ಜಗನ್, ಯೋಗಿ ಬಾಬು, ಹಾಗೂ ಉಳಿದ ಪಾತ್ರವರ್ಗದ ಭಾವನಾತ್ಮಕ ಅಭಿನಯ ಚಿತ್ರದ ತೂಕವನ್ನು ಹೆಚ್ಚಿಸುತ್ತದೆ.  ಹಾಗೆಯೇ, ಬಾಲಕಲಾವಿದ ಕಮಲೇಶನ ಪಾತ್ರನಿರ್ವಹಣೆ, ಅವನ comic timing ಮತ್ತು ಸಹಜ ಅಭಿನಯ ಚಿತ್ರದ ಹೈಲೈಟ್ ಕೂಡ ಆಗಿದೆ.   
Young Kamalesh Jagan shines as Mulli!! As a mischievous and innocent younger son, Mulli brings pure heart and humor to the screen. His charming antics not only create heartwarming moments and lighten the mood but also play a crucial role through out the movie. He's a true show-stealer!  One of the film's greatest strengths is its humor. It's organic and never feels forced, seamlessly blending into the narrative without overshadowing the film's emotional core.   

At its heart, the movie is a beautiful reminder that compassion and kindness are universal languages that unite us.  It's a genuine feel-good film that leaves us with a smile, a warm heart, and a renewed sense of hope in human connection. Definitely a must-watch for anyone looking for a soulful and meaningful cinematic experience. The movie does shed light on the struggles faced by refugees and illegal immigrants, but through a heartwarming and optimistic lens, the film strongly advocates for empathy above all differences. 

ಸ್ವಲ್ಪ ಸಮಯ ಮಾಡ್ಕೊಂಡು ಈ ಚಿತ್ರವನ್ನ ತಪ್ಪದೆ ನೋಡಿ... ನಂಗೊತ್ತು... ನಿಮಗಿಷ್ಟವಾಗುತ್ತೆ :) 

*****


Thursday, December 29, 2022

ಪ್ರತಿ ಬೆಳಗೂ ಹೊಸತನ....


ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತು ಕಾಫಿಯ ಬೆಸುಗೆ ನೆನ್ನೆ ಮೊನ್ನೆಯದಲ್ಲ.  ಫಿಲ್ಟರ್ ಕಾಫಿ, ಸ್ವಲ್ಪವೇ ಸ್ವಲ್ಪ ಸಕ್ಕರೆ ಅಥವಾ ಬೆಲ್ಲ ನನ್ನ ಅಚ್ಚುಮೆಚ್ಚು.  ಹಾಗೆ ನೋಡಿದರೆ ಇಂಟರ್ನೆಟ್ ತುಂಬಾ ಕಾಫಿ ಕುರಿತು ಬೇಕಾದಷ್ಟು ಮೀಮ್ಸ್ ಹರಿದಾಡುತ್ತಿರುತ್ತವೆ. ಪ್ರತಿ ಪೋಸ್ಟ್ ನನಗೆಂದೇ ಬರೆದಿರುವುದೇನೋ ಅಂತ ಅನಿಸೋದುಂಟು. 

ಸಂಜೆಯ ಕಾಫಿಗೂ ಕೂಡ ಇಷ್ಟೇ ಮಹತ್ವ. ತಾಯಿಯ ಸಾಂತ್ವನದಂತೆ. ಗೆಳತಿಯ ಹೆಗಲಿನಂತೆ. ತಂಗಿಯ ಕಾಳಜಿಯಂತೆ ಭಾಸವಾಗುವ ಕಾಫಿ ನನ್ನ ಪಾಲಿಗೆ ಅಮೃತ. ಹಾಗಂತ ಇಡೀ ದಿನ ಕಾಫಿಯೊಂದೇ ಕುಡಿಯುತ್ತೇನೆ ಅಂತಲ್ಲ. ದಿನಕ್ಕೆ ೨-೩ ಬಾರಿ ಕುಡಿಯುವ ನನ್ನ ಕಾಫಿ ನಿಜವಾಗಲೂ ನನ್ನ ಪಾಲಿಗೆ ವಿಶೇಷ.  

ಶನಿವಾರ / ಭಾನುವಾರಗಳಲ್ಲಿ ಸಂಜೆಯ ಕಾಫಿ ಮುಗಿಸಿ ಮನೆಯ ಬಳಿಯಿರುವ ಪಾರ್ಕಿಗೆ ವಾಕಿಂಗ್ ಎಂದು ಹೋಗುವುದನ್ನ ರೂಡಿಸಿಕೊಂಡು ಸುಮಾರು ಆರು ತಿಂಗಳಾಯಿತು. ಪಾರ್ಕ್ ಎಂದರೆ ದೊಡ್ಡದೇನಲ್ಲ. ಸುತ್ತಲೂ ಸಿಮೆಂಟು ಕಟ್ಟಡಗಳೇ ಮುತ್ತಿಕೊಂಡಿದ್ದರೂ `ನನಗೂ ಆ ಕಟ್ಟಡಗಳಿಗೂ ಸಂಬಂಧವೇ ಇಲ್ಲ', ಎಂಬಂತೆ ಏಕಾಗ್ರತೆ ಕಾಪಾಡಿಕೊಳ್ಳಲು ಹವಣಿಸುತ್ತಿರುವ ಪುಟ್ಟ ಉದ್ಯಾನ. ಮೊಬೈಲ್ ಫೋನ್ ಮನೆಯಲ್ಲೇ ಬಿಟ್ಟು ಬರುವುದರಿಂದ ನನ್ನೊಟ್ಟಿಗೆ ನಾನೊಬ್ಬಳೇ ಕಳೆಯುವ ಈ ಸಮಯ ಅಮೂಲ್ಯ. ಸಾಧಾರಣ ಮಿತಿಯಲ್ಲಿ ಹೆಜ್ಜೆ ಹಾಕಿಕೊಂಡು ಮೂರು ಸುತ್ತು ಮುಗಿದು ಕಲ್ಲುಬೆಂಚಿನ ಮೇಲೆ ಐದು ನಿಮಿಷದ ಸಣ್ಣ ವಿರಾಮ. ನಂತರ ಸಣ್ಣದಾಗಿ ೪-೫ ಸುತ್ತು ಓಡುವ ಪ್ರಯಾಸ ! ಆಗಾಗ ಈ ಎನರ್ಜಿ ಎಂಬ ಮಾಂತ್ರಿಕ ದಬ್ಬಿದರೆ ಮಾತ್ರ ಇನ್ನೊಂದೆರಡು ಸುತ್ತಿಗೆ ಅವಕಾಶ. ಬೆವರು, ಏದುಸಿರು ಬೆರೆತ ಸಮಾಧಾನ! ಎಲ್ಲಾ ಸುತ್ತುಗಳು ಮುಗಿಸಿ  ಕಲ್ಲುಬೆಂಚಿಗೆ ಆನಿ ಸುಧಾರಿಸಿಕೊಂಡು  ಸುತ್ತಲೂ ಒಂದು ಕಣ್ಣಾಡಿಸಿದರೆ ಪಾರ್ಕಿನಲ್ಲಿ ಕಾಣಸಿಗುವ ಕೇಳಸಿಗುವ ಪುಟ್ಟ ಕಥೆಗಳು.  




ಬಹುಶ ಮೊಬೈಲ್ ಇಲ್ಲದ ಕಾರಣ ಇವರ ಕಥೆಗಳು  ಸ್ಪಷ್ಟವಾಗಿ ಕೇಳುಸುತ್ತವೇನೋ. ಮೊದಮೊದಲಿಗೆ ಮುಜುಗರವಾಗುತಿದ್ದರೂ ಯಾವುದನ್ನೂ ಯಾರನ್ನೂ ಜಡ್ಜ್ ಮಾಡದೆ ಅವರಿರುವಂತೆ ಅವರನ್ನು ನೋಡಲು ಅರಿಯಲು ಇದೊಂದು ಸದಾವಕಾಶವಾಗಿ ಕಂಡಿತು.  ಹೀಗೆ ವಾರಾಂತ್ಯಗಳಲ್ಲಿ ವಾಕಿಂಗ್ ಮಾಡುವುದೊಂದಾದರೆ ನಂತರದ ಈ ಕಥೆಗಳಿಗಾಗಿ ಹವಣಿಸಲು ಮೊದಲಾಯಿತು ಮನಸು .....  

ಈ ಸಣ್ಣಪುಟ್ಟ ಕಥಾನುಭವಗಳು ಹೀಗೆ ಇಲ್ಲಿ ಬರೆಯಬೇಕೆನಿಸಿ.... 

(ಸಶೇಷ)

Tuesday, April 20, 2021

ಉತ್ತರಾರ್ಧ ... ನನ್ನ ಇತ್ತೀಚಿನ ಓದು.

********

ಪ್ರತಿಯೊಂದು ವಿಷಯಕ್ಕೂ, ಘಟನೆಗೂ ನಾನಾ ಮಜಲುಗಳು, ವಾಸ್ತವಗಳು. ನಾವು ನಿಂತ ನೆಲದ ಮೇಲೆ, ಒಂದು ಬದಿಯಲ್ಲಿ ನಮ್ಮ ಕಣ್ಣಳತೆಗೆ ಕಾಣಿಸುವಷ್ಟು ವಿಸ್ತಾರ ಮಾತ್ರ ನಮ್ಮ ಸತ್ಯ. ನಮಗೆ ಕಾಣಿಸದ ಇನ್ನೊಂದು ಬದಿ ಇದೆ. ಅಲ್ಲಿಯೂ ಒಂದು ಸತ್ಯ ಇದೆ. ಒಂದು ಪೂರ್ವಾರ್ಧ - ಮತ್ತೊಂದು ಉತ್ತರಾರ್ಧ. ಎಲ್ಲವೂ ಸರಿ, ಎಲ್ಲರೂ ಸರಿ; ಅವರವರ ನೇರಕ್ಕೆ.
ಜಯಕ್ಕ, ನಿಮ್ಮ ಕಥಾಸಂಕಲನ ಉತ್ತರಾರ್ಧ ಓದಿದೆ. ಹತ್ತು ಕತೆಗಳೂ ಹತ್ತು ಆಯಾಮಗಳನ್ನು ಹೊಂದಿರುವ ಅರ್ಥಪೂರ್ಣ ರಚನೆಗಳು. ಪ್ರತಿಯೊಂದು ಕತೆಯಲ್ಲೂ ತೆರೆದಿಟ್ಟಿರುವುದು ಒಂದು ಬದಿಯ ದೃಷ್ಟಿಕೋನ, ಉತ್ತರಾರ್ಧ. ಮತ್ತೊಂದು ಬದಿ ಏನಿದ್ದಿರಬಹುದು, ಏನಾಗಿರಬಹುದೆಂದು ಓದುಗರ ಆಲೋಚನೆಗೆ, ಒರೆಗೆ ಹಚ್ಚಿ ಬಿಟ್ಟ ಪೂರ್ವಾರ್ಧ!
Indeed, a very interesting concept.

ತನ್ನೊಡಲ ತುಂಬ ಲಕ್ಷೋಪಲಕ್ಷ ಚುಕ್ಕಿಗಳನ್ನು ತುಂಬಿಕೊಂಡಿರುವ ಆಗಸಕ್ಕೆ, ಮೂರು ಚುಕ್ಕಿಗಳನ್ನು ತನ್ನೊಡಲಿಗೂ ಎಸೆದುಬಿಡು ಎನ್ನುತ್ತಾ, ಒಂದಿಷ್ಟು ಬೆಳಕಿಗಾಗಿ ಹಂಬಲಿಸಿ ಬೇಡುವ ನಾಯಕನ ಅಸಹಾಯಕತೆ. ಸಂಸಾರಗಳಲ್ಲಿ ಬಿರುಕುಗಳು ಅದಾವ ಕ್ಷಣದಲ್ಲಿ ಮೂಡುವವೋ! ಸಾನ್ವಿಯ ಆ ತೀರ್ಮಾನ ಎಷ್ಟು ಸರಿಯೋ - ಎಷ್ಟು ತಪ್ಪೋ? ಅವಳ ಬದಿಯ ಕತೆ ಅಥವಾ ವಾಸ್ತವ ಏನಿರಬಹುದೋ?
"ನೆಲ ಮುಗಿಲುಗಳ ನಡುವೆ ಮುನಿಸು, ಕಾಳಗವೇ? ಅವೆರಡು ಕೂಡ ಒಂದಕ್ಕೊಂದು ವಿರೋಧವೇ ಅಥವಾ ಯಾವೊಂದನ್ನು ಹೊರತುಪಡಿಸಿದರೂ ಮತ್ತೊಂದಕ್ಕೆ ಅರ್ಥವಿಲ್ಲವೇ? ಹಾಗಿದ್ದಲ್ಲಿ, ಅವೆರಡು ಎಂದೂ ಬೇರ್ಪಡಿಸಲಾಗದ ಒಂದೇ ಕಿರಣದ ಆದಿ ಮತ್ತು ಅಂತ್ಯ ಅಲ್ಲವೇ?"
ಅನಂತು ಹಾಗೂ ಅವನ ಸ್ನೇಹಿತನ ಬದುಕಿನ ಪುಟಗಳನ್ನು ತಿರುವಿದಾಗ, ನಿಜಕ್ಕೂ ಒಂದಷ್ಟು ಜನ ತಮ್ಮ ಜೀವನವನ್ನು ಪೂರ್ತಿಯಾಗಿ ಹೀಗೆ ಕಳೆದುಬಿಡುತ್ತಾರಾ, ಎಂದು ಅನಿಸಿತು ಜಯಕ್ಕ.
ನಿಕಾಶ ಮತ್ತು ಅವಳ ಮೂರು ಮಕ್ಕಳ ಅಲೆದಾಟ, ಯಾವ ನೆಲಕ್ಕೂ ಸಲ್ಲದಂತೆ ನಿರಂತರ ಅಭದ್ರತೆಯ ಭಯದಲ್ಲಿ ಪರಿತಪಿಸುವ ಅವಳಂತ ನಿರಾಶ್ರಿತರ ಬದುಕು ಕಣ್ಣ ಮುಂದಿ ಹಾದುಹೋಯಿತು. ಮಾನವನಿಗಿಂತ ಕ್ರೂರ ಮತ್ತೋರ್ವ ಪ್ರಾಣಿ ಇರಲು ಅಸಾಧ್ಯ ನಿಜ. ಬದುಕನುಳಿಸುವ ನೆಪದಲ್ಲಿ, ಬದುಕನಳಿಸುವ ಯತ್ನ, ಮಾನವೀಯತೆ ಮೆರೆವ ಟೊಳ್ಳು ಯತ್ನವದು.
ಒಂದೆಡೆ ಅದಿತಿ, ವಲ್ಲಭ ಮತ್ತು ವಲ್ಲಭನ ಒಂದೂವರೆ ಕಾಲು; ಮತ್ತೊಂದೆಡೆ ಸೋಲೊಪ್ಪಲು ತಯಾರಿಲ್ಲದ ಅವನ ಗಾಲಿಕುರ್ಚಿ ಮತ್ತು ಆ ಜೀವವಿಲ್ಲದ ಕುರ್ಚಿ ಅವನನ್ನು ಅವನ ಗುರಿಯ ಕಡೆಗೆ ಹುರಿದುಂಬಿಸುವ ಪರಿ, ಇಷ್ಟವಾಗುತ್ತವೆ.
ಸುರಸುಂದರಾಂಗ ಪತ್ರೀಗೌಡನ ತಿಣುಕಾಟ ಮತ್ತು ಅವನ ಬಾಸ್ ಜೊತೆಗಿನ ಪೇಚಾಟಗಳು ಸಾಕಷ್ಟು ನಗಿಸಿದ್ದು ಹೌದು. ಆದರೂ ಯಾವ ಸಂದರ್ಭದಲ್ಲೂ ಕೆಟ್ಟದ್ದನ್ನು ಮನಸಾ ಅಪೇಕ್ಷಿಸಬಾರದು ಅನ್ನುವುದಕ್ಕೆ ಈ ಕತೆ ನಿದರ್ಶನವಾಗಿತ್ತು. This one was too effective.
ಮನು ಮತ್ತು ಗಿರಿಯ ಮದುವೆ! ಅದೊಂದು ತ್ಯಾಗವೋ ಅಥವಾ ಪ್ರಾಯಶ್ಚಿತವೋ, ಸಹಜವಾದ ಗೊಂದಲವಿದೆ ನನಗೂ. ಮತ್ತೆ, ಆ ಹರಕಲು ಪುಸ್ತಕದ ಹಾಳೆಗಳಲ್ಲಿ ಮೆರೆದಿದ್ದು ಮಾತ್ರ ಮನ ಸೂರೆಗೊಳಿಸುವ ಬಾಜೀರಾಯ ಹಾಗೂ ಮಸ್ತಾನಿಯ ಗಾಢವಾದ "ಪ್ರೇಮ್ ಕಹಾನೀ" ನೋಡಿ.
ನಮ್ಮಲ್ಲಿ ಹೆಂಡತಿಯನ್ನು ಹೊಡೆಯುವ ಮಹನೀಯರುಗಳಿಗೇನು ಕಮ್ಮಿ ಇಲ್ಲ. ಅವರು ಎಲ್ಲ ವರ್ಗಗಳಲ್ಲೂ ಸಿಗುತ್ತಾರೆ, from all corners of the world. ನ್ಯಾಯ ಹೇಳುವ ನ್ಯಾಯಾಧೀಶೆಗೆ ತನ್ನ ಗಂಡ ಹೊಡೆದು ಬಡೆದು ಮಾಡುತ್ತಿದ್ದರೂ ಅದನ್ನು ಸಹಿಸುವ ಆ ತಾಳ್ಮೆ, ಆ ತ್ಯಾಗ ಯಾವ ನಿಲುಮೆಯನ್ನು ಸೂಚಿಸುತ್ತದೆ!? ಇದು ಕೇವಲ ನಮ್ಮ ದೇಶದ ಸ್ಥಿತಿ ಮಾತ್ರವಲ್ಲ. ಈ PATRIARCHY ಎಲ್ಲ ದೇಶಗಳ, ಎಲ್ಲ ವರ್ಗಗಳ ಹೆಣ್ಣುಮಕ್ಕಳು, ಒಂದಲ್ಲ ಒಂದು ರೀತಿಯಲ್ಲಿ ಅನುಭವಿಸಿಯೇ ತೀರುತ್ತಾರೆ ಅನ್ನುವುದು ನನ್ನ ಭಾವನೆ. Its still a long, long way to go!
ಜಯಕ್ಕ, ನೀವು ಪ್ರತಿಯೊಂದು ವಿಷಯದಲ್ಲೂ ಅದೆಷ್ಟು ಅಪ್ಡೇಟ್ ಆಗಿರುತ್ತೀರಿ ಅಂತ, ನಿಮ್ಮ ಬಗ್ಗೆ ಒಂದು ಸಣ್ಣ ಬೆರಗು ಸದಾ ಇದೆ ನನ್ನೊಳಗೆ. ಅದು ನಿಮ್ಮ ಕತೆಗಳಲ್ಲೂ ಕಾಣಿಸಿದ್ದು ನನಗಂತೂ ಆಶ್ಚರ್ಯವೆನಿಸಲಿಲ್ಲ.
ಉತ್ತರಾರ್ಧ ಬಹಳ ಇಷ್ಟವಾಯಿತು 🙂 ❤
ಮತ್ತೊಮ್ಮೆ ಅಭಿನಂದನೆಗಳು ನಿಮಗೆ.


Wednesday, June 5, 2019

ಒಲವ ಭಿಕ್ಷೆ!!!

ಒಲವ
ಭಿಕ್ಷೆಗೆ
ಕಾಯುವಾಗ 
ಧರೆಯ
ತಾಳ್ಮೆ
ಇರಬೇಕು
ಹೀಗೆಂದು
ಗೊಣಗಿಕೊಂಡು ಹೊರಟಿದ್ದ ಆ ಫಕೀರ !!!
ಬಿಡಿಗಾಸಿಗೂ
ಬೆಲೆ ಬಾಳದ
ಅವನ ಹರಕಲು
ಜೋಳಿಗೆಯ ಮೇಲೆ
ನನ್ನ ಕಣ್ಣು !!
ಅದರೊಳಗೇನಿರಬಹುದು?
ಹಿಂಬಾಲಿಸಿದಷ್ಟೂ
ಕುತೂಹಲ
ಆಗೊಮ್ಮೆ ಹೀಗೊಮ್ಮೆ
ಜೋಪಾನ ಮಾಡಿಕೊಳ್ಳುವ !!
ಭುಜಕ್ಕೆ ಜೋತು ಬಿದ್ದ
ಆ ಜೋಳಿಗೆಯನ್ನ
ತಲೆದಿಂಬಾಗಿಸಿ
ಆ ಮರದಡಿ
ಮಲಗಿರುವ!!
ಅವರಿವರ ಮನೆಯ
ಪರಮಾನ್ನ
ಅಬ್ಭಾ! ನಿದ್ದೆ ಜೋರು ನಿದ್ದೆ ...
ಕಣ್ ಬಿಟ್ಟವನೆ
ಏನೋ ನೆನಪಿಸಿಕೊಂಡವನಂತೆ
ಜೋಳಿಗೆಯೊಳಗಿಂದ
ಗಂಟೊಂದನ್ನ ತೆಗೆದಿಟ್ಟ !!!
ಹಿಂಬಾಲಿಸಿ
ಬಂದವಳಿಗೆ ಮೋಸವಿಲ್ಲ.
ಗಂಟು ಬಿಚ್ಚಿದಂತೆಲ್ಲ
ನಕ್ಷತ್ರಗಳು
ಒಂದೊಂದಾಗಿ ಹೊರಬಂದವು
ಬಾಂದಳದೆಡೆ ದಾರಿ ಮಾಡಿಕೊಂಡು
ಒಂದರ ಹಿಂದೆ ಒಂದು
ಸಾಗಿದವು ...
ಆಹಾ! ಏನಿದು ದೃಶ್ಯ
ತಲೆ ಎತ್ತಿ ನೋಡಿದಾಗ
ಆಕಾಶವೆಲ್ಲ ಹೊಳೆಯುತ್ತಿದೆ!!!
ತುಂಬು ಚುಕ್ಕಿಗಳ ಸಂಭ್ರಮ ....
ಅರೆ!!! ಈ ಫಕೀರ ಎಲ್ಲಿ ಮಾಯವಾದ ...
- RS

Saturday, April 20, 2019

"ಆನ್ ಸುಲ್ಲಿವನ್" ಎಂಬ ಪಂಜು !!!

"When one door of happiness closes, another opens; but often we look so long at the closed door that we do not see the one which has been opened for us." - Helen Keller

**** 

ಈ ಹೇಳಿಕೆ ಹೆಲೆನ್ ಕೆಲರ್ ರವರದ್ದು. ಒಂದೂವರೆ ವರ್ಷದ ಹಸುಗೂಸಾಗಿದ್ದಾಗಲೇ ಮೆನಿಂಗಿಟಿಸ್ ಎಂಬ ಅಪರೂಪದ ಕಾಯಿಲೆಗೆ ತುತ್ತಾಗಿ ತಮ್ಮ ದೃಷ್ಠಿ ಕಳೆದುಕೊಂಡು - ಕಿವುಡಾಗಿ,  ಕಗ್ಗತ್ತಲಿನ ನಿಶಬ್ಧ ಜಗತ್ತಿನಲ್ಲಿ ಒಂಟಿಯಾಗಿ ಬಡಿದಾಡುತಿದ್ದ ಜೀವವದು. ಹೆತ್ತವರು ಸಿರಿವಂತರಾಗಿದ್ದರೂ, ತಮ್ಮ ಮಗುವಿನ ಈ ಸ್ಥಿತಿಗೆ ಸಾಧ್ಯವಾದಷ್ಟು ಚಿಕಿತ್ಸೆ ಕೊಡಿಸಿದ್ದರೂ, ಏನೊಂದೂ ಫಲಿಸದೆ ತಮ್ಮ ಕೈ ಚೆಲ್ಲಿ ಕೂರುವ ಹೊತ್ತಿಗೆ ಬೆಳಕಿನ ಕಿಡಿ ಹಿಡಿದು ಬಂದವರೇ ಅವರ ಶಿಕ್ಷಕಿ "ಆನ್ ಸುಲ್ಲಿವನ್ ಮ್ಯಾಸಿ". 


ಹೆಲೆನ್ ಕೆಲರ್ - Bachelor of  Arts ಡಿಗ್ರಿ ಪಡೆದ ವಿಶ್ವದ ಪ್ರಪ್ರಥಮ ಕಿವುಡು ಮತ್ತು ಅಂಧ ವಿದ್ಯಾರ್ಥಿ, ಪ್ರಖ್ಯಾತ ಬರಹಗಾರ್ತಿ, ಉಪನ್ಯಾಸಕಿ, ಸಾಮಾಜ ಸೇವಕಿ ಮತ್ತು  ಹೋರಾಟಗಾರ್ತಿಯಾಗಲು, ಹೆಲೆನ್ ಕೆಲರ್ - ಹೆಲೆನ್ ಕೆಲರ್ರಾಗಲು ಕಾರಣ "ಆನ್ ಸುಲ್ಲಿವನ್" ಎಂಬ ಶಿಕ್ಷಕ ಶಕ್ತಿ.


"The best and the most beautiful things in the world cannot be seen or even touched - they must be felt with the heart",  ಎಂಬ ಹೆಲೆನ್ ಕೆಲರ್ ರ ಈ ಮಾತಿನಲ್ಲಿ "ಆನ್ ಸುಲ್ಲಿವನ್"ರ ಅಪಾರ ಪರಿಶ್ರಮ, ವೃತ್ತಿಪರ  ಸಮರ್ಪಣೆ ಹಾಗು ಹೆಲೆನ್ ಕೆಲರ್ ರ  ಪರವಾಗಿ ಅವರು ತೋರಿದ ಬದ್ಧತೆಯ ಪ್ರತಿಫಲವಿದೆ.  

ಹೆಲೆನ್ ಕೆಲರ್ - ಆನ್ ಸುಲ್ಲಿವನ್ 

ಆನ್ ಸುಲ್ಲಿವನ್ ಎಂಬ ಅದ್ಭುತ ಶಿಕ್ಷಕಿಯ ಪರಿಚಯವಾಗಿದ್ದು,  "The Miracle Worker" ಎಂಬ ಚಲನಚಿತ್ರದ ಮೂಲಕ https://www.youtube.com/watch?v=-3kqkHT3HzM !!!! ಈ ಚಿತ್ರ ಹೆಲೆನ್ ಕೆಲರ್ ರ ಬಾಲ್ಯದ ಒಂದು ತುಣುಕಾದರು, ತಮ್ಮ ಜೀವನದ ದಿಕ್ಕನ್ನೇ ಬದಲಿಸಿದ ಅತ್ಯಮೂಲ್ಯ ಹಾಗೂ ಅದ್ಭುತ ಹಂತವೇ ಸರಿ!! ಹೆಲೆನ್ ಕೆಲರ್ ರ ಬಾಲ್ಯದ ಆ ದಿನಗಳಿಂದ ಹಿಡಿದು ತಮ್ಮ ಕೊನೆಯ ದಿನಗಳವರೆಗೂ ಆನ್ ಸುಲ್ಲಿವನ್ ಅವರ ಜೊತೆ ಇದ್ದದ್ದು ಮತ್ತೊಂದು ವಿಶೇಷ. ಶಾಲಾ ದಿನಗಳ ಪಠ್ಯ ಪುಸ್ತಕದಲ್ಲಿ ಓದಿದ್ದ ತುಸು ನೆನಪುಗಳನ್ನು ಬಿಟ್ಟರೆ, ಹಾಗು ಅವರ ಕೆಲವು ಪ್ರಖ್ಯಾತ ಉಲ್ಲೇಖಗಳನ್ನು ಬಿಟ್ಟರೆ ಮತ್ತೆ ಹೆಲೆನ್ ಕೆಲರ್ ರನ್ನು ಹಾಗು ಮಿಗಿಲಾಗಿ ಆನ್ ಸುಲ್ಲಿವನ್ ರನ್ನು ಕಂಡದ್ದು ಇಲ್ಲೇ!! ಇವರ ಬಗ್ಗೆ ತಿಳಿಯಲು, ಮತ್ತಷ್ಟು ಓದಲು  https://en.wikipedia.org/wiki/Anne_Sullivan ವಿಕಿ ನೆರವಾಗಿದೆ. 


ಆನ್ ಸುಲ್ಲಿವನ್ ರಿಗೆ ಸಾಷ್ಟಾಂಗ ಪ್ರಣಾಮವಿತ್ತು  !!!  ಸಾಧ್ಯವಾದರೆ ನೀವು ಕೂಡ ಈ ಚಿತ್ರವನ್ನೊಮ್ಮೆ ನೋಡಿ ಎಂಬ ಒತ್ತಾಸೆ :) 
PS : ಧನ್ಯವಾದ ವಿದ್ಸ್ ನಿಮ್ಮ ಶಿಫಾರಸ್ಸಿಗೆ :) 

Sunday, October 21, 2018

ದಿ ಪ್ರೊಫೆಷನಲ್ - ಬದುಕಿನ ಕೊನೆ ಪುಟಗಳಲ್ಲಿ


ಬದುಕು; ಒಬ್ಬೊಬ್ಬೊರಿಗೂ ಒಂದೊಂದು ಅನುಭವ ಕೊಡುವುದೇ ಅದರ ಪ್ರಮುಖ ಲಕ್ಷಣ. ಈ ಬದುಕೆಂಬ ರಥ ಮುಂದೂಡಲು ಒಬ್ಬೊಬ್ಬರದ್ದು ಒಂದೊಂದು ವೃತ್ತಿ! ಎಲ್ಲವೂ ಹೊಟ್ಟೆ ಪಾಡಿನ ಹೆಸರಿನಲ್ಲಿ ನಡೆಸುವ ಕಾಯಕ. ರಾಕೆಟ್ ವೇಗದ ಯುಗದಲ್ಲಿ ಮನುಜತೆಗೆ ಅರ್ಥವೇ ಇಲ್ಲವೆಂಬಂತೆ ಒಬ್ಬರನ್ನೊಬ್ಬರು ಕಾಲೆಳೆದು ಮುಂದೆ ಸಾಗುವ ಮಂದಿ, ತಮಗೆ ಲಾಭವಿಲ್ಲದೆ ಒಂದು ಕಡ್ಡಿಯನ್ನೂ ಸಹ ಅಲುಗಾಡಿಸಲಾರರು. ಅದೇನೇ ದುಡಿದು ಗುಡ್ಡೆ ಹಾಕಿಕೊಂಡರೂ, "ನಮ್ಮ ಸಮಯ ಬಂದಾಗ ಎಲ್ಲವೂ ತೊರೆದು ಹೋಗಲೇಬೇಕು - ಗಳಿಸಿದ್ದಾವುದೂ ನಮ್ಮೊಟ್ಟಿಗೆ ಬರಲಾರದು" ಎಂದು ಮನವರಿಕೆ ಆಗುವಷ್ಟರಲ್ಲಿ ಈ ಬಾಳೆಂಬ ಬಂಡಿ ತನ್ನ ಗಾಲಿಗಳನ್ನ ಸವೆಸಿ ಮುಕ್ಕಾಲು ದಾರಿ ಹಾದು ಹೋಗಿರುತ್ತದೆ.

ಇತ್ತೀಚಿಗೆ ಸುಬ್ರತೊ ಬಾಗ್ಚಿ ರವರ "ದಿ ಪ್ರೊಫೆಷನಲ್" ಎಂಬ ಮ್ಯಾನೇಜ್ಮೆಂಟ್ ಪುಸ್ತಕವೊಂದನ್ನ ಓದುತ್ತಿದ್ದೆ. ವೃತ್ತಿಪರವುಳ್ಳ ಮೇಧಾವಿಗಳ ಅನೇಕ ಉದಾಹರಣೆಗಳು ಓದಲು ದೊರಕಿದವು. ಆ ಸರಣಿಯ ಓದಿನಲ್ಲಿ ಮೊದಲಿಗೆ ಕಂಡುಬಂದದ್ದು "ತ್ರಿವಿಕ್ರಮ ಮಹದೇವ" ಎಂಬ ಪುಣ್ಯಜೀವಿಯ ಕುರಿತ ಉದಾಹರಣೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರಗೊಂಡ ಈ ಪುಸ್ತಕದಲ್ಲಿ ಮಹಾದೇವರ ಪ್ರಸ್ತಾವನೆ ಕಂಡು ಕುತೂಹಲ ನೂರ್ಮಡಿಯಾಗಿದ್ದು ನಿಜ. ಅಷ್ಟಕ್ಕೂ ಈ ಮಹದೇವ ಯಾರು?

ಮಹಾದೇವರ ಹುಟ್ಟೂರು ನಂಜನಗೂಡಿನ ಬಳಿಯಿರುವ ಪುಟ್ಟ ಹಳ್ಳಿ. ಮಹಾದೇವ ತಮ್ಮ ನಾಲ್ಕನೇ ವಯಸ್ಸಿನಲ್ಲಿರುವಾಗ ಮನೆಯಲ್ಲಿ ದೊಡ್ಡ ಜಗಳವಾಗಿ, ಅವಮಾನಿತಳಾದ ಇವರ ತಾಯಿ ಇವರನ್ನು ಕರೆದುಕೊಂಡು ಚಾಮರಾಜನಗರಕ್ಕೆ ಬರುತ್ತಾರೆ. ಮಹಾದೇವ ತನ್ನ ಎಂಟನೇ ವಯಸ್ಸಿನಲ್ಲಿರುವಾಗ ಇವರ ತಾಯಿಯು ತೀವ್ರ ಅನಾರೋಗ್ಯಗೊಳ್ಳುತ್ತಾರೆ. ವೈದ್ಯರ ಸಲಹೆಯಂತೆ ಬೆಂಗಳೂರಿನ ದೊಡ್ಡಾಸ್ಪತ್ರೆ ಎಂದೇ ಹೇಳಲ್ಪಟ್ಟ ವಿಕ್ಟೊರಿಯಾ ಆಸ್ಪತ್ರೆಗೆ ಬರುತ್ತಾರೆ. ಹೀಗೆ ತಾಯಿಯೊಡನೆ ಬೆಂಗಳೂರಿಗೆ ಬಂದ ಹುಡುಗ, ತನ್ನ ಪುಟ್ಟ ವಯಸ್ಸಿನಿಂದಲೇ ಸಾವಿರಾರು ಜನರ ಬದುಕಿನಾಚೆಯ ಕೊನೆಯ ಪುಟಗಳಿಗೆ ಸಹಿ ಹಾಕುವ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಾನೆ.

ಮಹಾನಗರಿ ಬೆಂಗಳೂರಿನ ರೀತಿ ರಿವಾಜುಗಳ ಪರಿವಿಲ್ಲದೆ, ಆಸ್ಪತ್ರೆಗೆ ದಾಖಲಾಗುವ ನಿಯಮಗಳನ್ನರಿಯದೆ ನಾಲ್ಕು ದಿನಗಳಾದರೂ ಆಸ್ಪತ್ರೆಯ ಹೊರಗೆ ರಸ್ತೆ ಬದಿಯನ್ನೇ ವಸತಿ ಮಾಡಿಕೊಂಡು ನರಳುತ್ತಾರೆ ಇವನ ತಾಯಿ. ಕಡೆಗೆ ಅಮ್ಮನ ಬಳಿಯಿರುವ ಪುಡಿ ಚಿನ್ನವನ್ನು ಆಸ್ಪತ್ರೆಯ ಅಟೆಂಡರ್ ಕೈಗಿತ್ತು ಅವರನ್ನು ಆಸ್ಪತ್ರೆಗೆ ದಾಖಲಿಸಿದರೆ, ಬೇಕಾದ ಆರೈಕೆ ಹಾಗು ಚಿಕಿತ್ಸೆ ದೊರಕದೆ ತಾಯಿ ಸಾವನ್ನಪ್ಪುತ್ತಾರೆ. ಇದಾವುದರ ಅರಿವಿಲ್ಲದ ಮಹಾದೇವ ಆಸ್ಪತ್ರೆಯ ಹೊರಗೆ ಸ್ನೇಹಿತರನ್ನು ಮಾಡಿಕೊಂಡು ದಿನವಿಡೀ ಆಟವಾಡುತ್ತ, ಅಂಗಡಿಯವರು ಅವರಿವರು ಕೊಟ್ಟ ತಿಂಡಿ ತಿನಿಸುಗಳನ್ನು ಉಂಡು ಜಗುಲಿಯ ಮೇಲೆ ಕಾಲ ಕಳೆಯುತ್ತಾನೆ. ತಾಯಿ ಸತ್ತ ಎರಡು ವಾರದ ಬಳಿಕ ಅಟೆಂಡರ್ ನ ಕಣ್ಣಿಗೆ ಸಿಕ್ಕ ಈ ಹುಡುಗನಿಗೆ, ತಾಯಿ ತೀರಿಕೊಂಡ ವಿಷಯ ತಿಳಿಯುತ್ತದೆ. ಅಮ್ಮನ ಅಂತ್ಯಕ್ರಿಯೆಯನ್ನು ಮಾಡಿದ್ದು 80ರ ಮುದುಕ ಕೃಷ್ಣಪ್ಪನೆಂದು ತಿಳಿಯುತ್ತದೆ. ಆಸ್ಪತ್ರೆಗೆ ಬರುವ ಅನಾಥ ಶವಗಳಿಗೆ ಇವರೇ ಬಂಧು, ಬಳಗ ಎಲ್ಲವೂ. ಮಹಾದೇವನ ಪಾಡನ್ನು ದೈನಿತ್ಯ ಗಮನಿಸುತ್ತಿದ್ದ ಸ್ನೇಹಿತರು 12 ರೂಪಾಯಿ ಒಟ್ಟುಗೂಡಿಸಿ ಊರಿಗೆ ಹಿಂದಿರುಗಲು ಹೇಳುತ್ತಾರೆ. ತನ್ನ ಊರಿಗೆ ಮರುಳಲು ಒಪ್ಪದೆ ವಯಸ್ಸಾದ ಕೃಷ್ಣಪ್ಪನೊಂದಿಗೆ ವಾಸಿಸಲು ಮೊದಲಾಗುತ್ತಾನೆ ಮಹಾದೇವ. ಇವರಿಬ್ಬರ ವಾಸವೂ ಸಹ ಆಸ್ಪತ್ರೆಯ ಮೂಲೆಯಲ್ಲೆಲ್ಲೊ. ಇವನನ್ನು ಅಪ್ಪಿಕೊಂಡ ಕೃಷ್ಣಪ್ಪ ತನ್ನ ವೃತ್ತಿಯನ್ನು ಕಲಿಸಿ ಬದುಕಿಗೆ ನೆರವಾಗುತ್ತಾರೆ. ಅಂದಿನಿಂದ ಮೊದಲಾಗುತ್ತದೆ ಈ ಪುಟ್ಟ ಬಾಲಕನ ಸೇವೆ - ಅನಾಥ ಶವಗಳ ಮುಕ್ತಿ ಮಾರ್ಗದಲ್ಲಿ ತನ್ನ ಬದುಕು ರೂಪಿಸಿಕೊಳ್ಳುವ ಪರಿ. ಇದು ನಡೆದದ್ದು 1971 ರಲ್ಲಿ.

45 ವರ್ಷಗಳ ಬಳಿಕ, ಇಂದಿಗೆ ಸಾವಿರಾರು ಅನಾಥ ಶವಗಳನ್ನು ಹೊತ್ತು, ಹೂತು ಆತ್ಮಗಳಿಗೆ ಕೈ ಮುಗಿದಿದ್ದಾರೆ ಮಹಾದೇವ. ಇದು ಪಾಲಿಕೆಯ ಕೆಲಸವಾದರೂ ಈ ವಿಭಾಗವು ವ್ಯವಸ್ಥಿತವಾಗಿ ಇಲ್ಲದಿರುವುದು ವಿಪರ್ಯಾಸ. ಇವರ ಕಾರ್ಯಶ್ರಮ ಮತ್ತು ವೈಖರಿ ಎಲ್ಲೆಡೆ ಹರಡುತ್ತಿದ್ದಂತೆ, ಪೊಲೀಸರು ಎಲ್ಲಿಯೇ ಅನಾಥ ಶವಗಳನ್ನು ಕಂಡರೂ ಇವರನ್ನು ಕರೆಯಲು ಆರಂಭಿಸಿ, ಒಂದು ಶವಸಂಸ್ಕಾರಕ್ಕೆ ಸುಮಾರು 200 ರಿಂದ 300 ರೂಪಾಯಿಗಳನ್ನು ನೀಡುತ್ತಾರೆ. ಖರ್ಚು ಕಳೆದು ಪ್ರತಿಯೊಂದು ಅಂತ್ಯಕ್ರಿಯೆಗೂ 25
/- ರಿಂದ 50/- ಇವರ ಪಾಲಾಗುತ್ತದೆ.


ಅನುರಾಗ, ಅನುಕಂಪ ಹಾಗು ಸಂಬಂಧಗಳ ಸಹಜ ಭಾವನೆಗಳೇ ಇರದೆ ತಾನು ಮಾಡುವ ಕೆಲಸ ಅದು ತನ್ನ ಹೊಟ್ಟೆಪಾಡಿಗೆಂದು ದುಡಿಯುತ್ತಿರುವಾಗ, ಕೃಷ್ಣಪ್ಪ ತನ್ನ 92ನೇ ವಯಸ್ಸಿನಲ್ಲಿ ಮಹಾದೇವರ ತೋಳಿನಲ್ಲೆ ಸಾವನ್ನಪ್ಪುತ್ತಾರೆ. ಮೊದಲ ಬಾರಿಗೆ ತನ್ನವರನ್ನು ಕಳೆದುಕೊಂಡ ನೋವಿನನುಭವ ಮಹಾದೇವರಿಗೆ ಆಗುತ್ತದೆ. ಸಂಕಟ ದುಃಖಗಳ ಮೊದಲ ಪರಿಚಯವೇ ಇದು. ಅಂದಿನಿಂದ ಪ್ರತಿಯೊಂದು ಶವಸಂಸ್ಕಾರವು ಇವರ ಪಾಲಿಗೆ ಹೊಟ್ಟೆಪಾಡಿನ ಕಾಯಕ ಮಾತ್ರವಲ್ಲದೆ ದೇವರ ಕೆಲಸದಂತೆ ಭಾಸವಾಗತೊಡಗುತ್ತದೆ. ಒಂದು ಕಾಲದಲ್ಲಿ ರಾಜರಂತೆ ಮೆರೆದವರು, ನೂರಾರು ಜನರ ನಡುವೆ ಬಾಳಿ ಬದುಕಿದ್ದವರು ಅನಾಥ ಶವವಾಗಿ ಅಂತ್ಯೆಗೊಳ್ಳುವ ಹೊತ್ತಿಗೆ ಮುಕ್ತಿ ಮಾರ್ಗದಲ್ಲಿ ಮಹಾದೇವ ನೆರವಾಗಿದ್ದಾರೆ. ಕೊಳೆತ ಶವಗಳಾಗಲಿ ಮತ್ತೊಂದಾಗಲಿ ಇವರ ಶಿಸ್ತು, ಅಚ್ಚುಕಟ್ಟುತನ, ಶ್ರದ್ಧೆ - ಶ್ರಾದ್ಧವಾಗಿ ಪರಿಣಮಿಸುತ್ತದೆ.

ಮೊದಲಿಗೆ ತಳ್ಳುವ ಗಾಡಿಯಲ್ಲಿ ಶವಗಳನ್ನು ಹೊರುತ್ತಿದ್ದ ಮಹಾದೇವ ನಂತರ ಕುದುರೆ ಬಂಡಿಯೊಂದನ್ನು ತಮ್ಮ ಪಯಣದಲ್ಲಿ ಜೊತೆಗೂಡಿಸಿಕೊಳ್ಳುತ್ತಾರೆ. ಸಹೃದಯಿಗಳು ಇವರ ಕೆಲಸ ಕಾರ್ಯಗಳನ್ನು ಗಮನಿಸಿ ಆಟೋ, ನಂತರ ಮಾರುತಿ ವ್ಯಾನ್ ಖರೀದಿಸಿ ಕೊಡುತ್ತಾರೆ. ಇವರ
ಕಥೆ / ಜೀವನ ಚರಿತ್ರೆ ಅನೇಕ ಪತ್ರಿಕೆಗಳಲ್ಲಿ ಹಾಗು ಮಾಧ್ಯಮಗಳಲ್ಲಿ ಪ್ರಸಾರವಾಗುವ ಹೊತ್ತಿಗೆ ದಿವಂಗತ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ರಿಂದ ಸನ್ಮಾನ, 1999ರಲ್ಲಿ ಮುಖ್ಯ ಮಂತ್ರಿಗಳಿಂದ ಚಿನ್ನದ ಪದಕ, 2004ರಲ್ಲಿ ಕೆಂಪೇಗೌಡ ಪ್ರಶಸ್ತಿ ಮತ್ತು 2006ರಲ್ಲಿ ಗಾಡ್ಫ್ರೆ ಫಿಲಿಪ್ಸ್ ಬ್ರೆವರೀ ಅವಾರ್ಡ್ಗಳು ಇವರ ಪಾಲಾಗುತ್ತದೆ. ಇವರಿಗೆ ತ್ರಿವಿಕ್ರಮ ಮಹಾದೇವ ಎಂಬ ಬಿರುದು ಸಹ ನೀಡಲಾಗುತ್ತದೆ. 1991ರಲ್ಲಿ ರಾಜೀವ್ ಹತ್ಯೆಯ ಪ್ರಮುಖ ಆರೋಪಿ ಶಿವರಸನ್ ನ ಅಂತ್ಯಕ್ರಿಯೆ ನಡೆಸಲು ಮಹಾದೇವ ಆಯ್ಕೆಯಾಗುತ್ತಾರೆ. ಇಂದಿಗೂ ಇವರ ಬಳಿ ಡ್ರೈವಿಂಗ್ ಲೈಸೆನ್ಸ್ ಇಲ್ಲ, ಪೊಲೀಸ್ ಇಲಾಖೆಯ ಪ್ರತಿಯೊಬ್ಬರೂ ತನಗೆ ಚಿರಪರಿಚಿತರೇ ಎನ್ನುತ್ತಾರೆ ಮಹಾದೇವ್. ಭಾರತೀಯ ರೈಲ್ವೆ ಯವರು ಮೊಬೈಲ್ ಫೋನ್ ಖರೀದಿಸಿ ಕೊಟ್ಟಿದ್ದಾರೆ. ದಾನಿಗಳು ಇವರ ವಾಹನಕ್ಕೆ ಉಚಿತವಾಗಿ ಪೆಟ್ರೋಲ್ ಹಾಕಿಸುತ್ತಾರೆ.


ಮಹಾದೇವರ ಜೀವನ ವೃತ್ತಾಂತದ ಜಾಡು ಹಿಡಿದು ಇವರಿಗೆ ಫೋನಾಯಿಸಿದೆ.  ಇಂದಿಗೆ ಬೆಂಗಳೂರಿನ ಮೈಸೂರು ರಸ್ತೆಯ ಬಳಿಯಿರುವ ಅಡಿಗೆವಡೆಯರ ಹಳ್ಳಿಯಲ್ಲಿ ಇವರ ವಾಸ. ಪುಷ್ಪಲತಾರನ್ನು ಮದುವೆಯಾಗಿದ್ದಾರೆ; ಇವರ ಮಕ್ಕಳು ಶಾಲೆಗೆ ಹೋಗುತ್ತಿದ್ದು, ಮಹಾದೇವರ ಕೆಲಸಗಳಿಗೂ ಸಹಾಯ ಮಾಡುತ್ತಾರೆ. "ಮಾಡುತ್ತಿರುವ ಕೆಲಸ ಆತ್ಮತೃಪ್ತಿ ನೀಡಿದೆ. ದೇವರು ಎಲ್ಲಿಯೂ ಇಲ್ಲ, ನಮ್ಮ ನಿಮ್ಮಲ್ಲೇ ಇದ್ದಾನೆ ಪುಟ್ಟಿ" ಎಂದು ನನ್ನಲ್ಲಿ ಹೇಳಿದಾಗ, ಮಹಾದೇವರ ಬದುಕಿಗೊಂದು ಸಾಷ್ಟಾಂಗ ಪ್ರಣಾಮವಿಟ್ಟು, ಇವರ ಬದುಕು ಹಸನಾಗಲಿ ಎಂದು ಮನಸಾರೆ ಹರಸಿದೆ.

ಪುಣ್ಯವೆಂದರೆ ಮನುಷ್ಯತ್ವಕ್ಕೆ ಸನಿಹವಿರುವುದೇ ಅಲ್ಲವೇ? ಹುಟ್ಟು ಅದು ಹೇಗೆ ಗೌಪ್ಯವೋ ಸಾವೂ ಕೂಡ ಅಷ್ಟೇ ನಿಗೂಢ. ಇವೆರಡರ ನಡುವಣ ಬದುಕೆಂಬ ಮಾಯೆಯ ಬಗೆಯಂತೂ ಹೇಳತೀರದು. ಗ್ರಹಿಕೆಗೆ ಸಿಗದ - ಎಣಿಕೆಗೆ ಸಿಗದ ಮಾಯಾಮಂಜರಿ. ಅವಸಾನದಲಿ ಆತ್ಮಪಕ್ಷಿ ಹಾರಿಹೋಗುವ ಹೊತ್ತಿಗೆ ಯಾರ ಮರಣ ಎಲ್ಲಿದೆಯೊ!!

ಮಹಾದೇವ ಸರ್, ಹ್ಯಾಟ್ಸ್ ಆಫ್ ಟು ಯು ಫಾರ್ "ದಿ ಪ್ರೊಫೆಷನಲ್" ದಟ್ ಯು ಆರ್. ಯಾವ ಕೆಲಸವಾದರೇನು, ವೃತ್ತಿಪರ ಆಗುವುದು ಸುಲಭದ ಮಾತಲ್ಲ. ಮತ್ತೆ, ಸುಬ್ರೊತೊ ಬಾಗ್ಚಿರವರಿಗೆ ಈ ಮೂಲಕ ಒಂದು ನಮನ.

ರೂಪ ಸತೀಶ್
ಬೆಂಗಳೂರು


Wednesday, December 6, 2017

#88 - ಗೀಚು ಹೊತ್ತಿಗೆ

*********************
ಅರ್ಧ
ಮಾತು
ಒಂದರ್ಧ
ಮೌನ
ನಡುವಲ್ಲೆಲ್ಲೋ
ಒಂದು ಸತ್ಯ !!

ಸಣ್ಣ
ಆಣೆ
ಎರಡು
ಗುರುತು
ಮತ್ತದೇ ನಾಟಕ
ಒಂದು ಮರೆವು !!

ಪುಟ್ಟ
ಹೃದಯ
ಮೊನಚು
ನೋಟ
ಹಗಲುಗನಸಿನಲೂ
ಒಂದು ಸುಳ್ಳು !!

ಚಂದಿರನಿಗೀಗ
ಚಾಡಿ
ಹೇಳುವ ಸಮಯ ....
- RS

Sunday, November 5, 2017

ನಸುಕಿನ ಕನವರಿಕೆಗಳು


ಬರೆದು ಮನದಟ್ಟಾಗಿಸಬೇಕು....
ಮನದ ಮರೆಯ ನೆನಪು,
ಹೃದಯದ ಆಸುಪಾಸಿನಲ್ಲಿ 
ಬೆಚ್ಚಗಿನ ಕಾವು!!!
ನೆನೆದು ಮರೆತುಬಿಡಬೇಕು....
ಕಣ್ಣಂಚಿನಲ್ಲೇ ಕುಳಿತು ಒಳಗೆ ಬಾರದ ನಿದಿರೆ!
ಬಡಬಡಿಕೆಯ ಉಸ್ತುವಾರಿಯಲ್ಲಿ
ಕಳೆದುಬಿಡುವ ಮುಂಜಾವು!!!
ಆರಾಧಿಸಿ ಸ್ತುತಿಸಬೇಕು....
ಅಲಕ್ಷಿಸಿ, ಕಡೆಗಣಿಸಿದ ಕ್ಷಣಗಳ,
ಪ್ರೀತಿಯಲ್ಲಿನ ವೈಕಲ್ಯ .... ಮತ್ತೆ
ಶರಣಾಗತಿಯಲ್ಲಿನ ಜಾಣ್ಮೆ!!!
ಪ್ರಸವವದು ಅರಿವಿರಬೇಕು....
ಕೊಲ್ಲುವ ಆ ಪ್ರಕ್ಷುಬ್ಧ ಭಾವನೆಗಳ
ಮರುಜನ್ಮಕ್ಕೆ ಕಾರಣ
ಆ ನೋಟ... ಅವನ ಕುಡಿನೋಟ !!!
ಮುಂಜಾವಿನ ಹೊತ್ತಿಗೆ
ಮುಗುದೆಯ ಚಡಪಡಿಕೆ
ಕಳೆದು ಹೋದಳೆಂದು ಊರಲ್ಲೆಲ್ಲಾ ಗುಲ್ಲು
ತನ್ನನ್ನೇ ತಾನು ಹುಡುಕಿಕೊಳ್ಳುವ ನಕಲಿ ಕನಸು!!!

- RS

Tuesday, April 25, 2017

ವಾಟ್ಸಾಪ್ ರಾಯರೆ??


"ಅಷ್ಟು ಸಲ ಕಾಲ್ ಮಾಡ್ತಿದೀನಿ ತೆಗಿಯಕ್ಕೇನು ದಾಡಿ ನಿಂಗೆ.  ಅಪ್ಪ ಎಲ್ಲಿ??? ಲ್ಯಾಂಡ್ ಲೈನ್ಗೆ ಕಾಲ್ ಮಾಡಿದ್ರು ತೆಗೀತಿಲ್ಲ ... ಅಪ್ಪ ಎಲ್ಲಿ? ಎಲ್ಲೋದ್ರು.... ಆ ಮೊಬೈಲ್ ಹಿಡ್ಕೊಂಡು ಎಲ್ಲಾದ್ರೂ ಕೂತಿರ್ತಾರೆ ನೋಡು, ಅದೊಂದು ಕಯ್ಯಲ್ಲಿದ್ರೆ ಜವಾಬ್ದಾರಿಗಳೆಲ್ಲ ಮಾರ್ತೊಗಿರ್ತಾರೆ. ನಂಗೆ ನಂಗೆ ಬರ್ತಿರೋ ಸಿಟ್ಟಿಗೆ  ನೀನು ... ನೀನು ... ಛೇ !!! ಸುಮ್ನೆ ಫೋನ್  ಇಡು, ಮನೆಗೆ ಬಂದು ಮಾಡ್ತೀನಿ" , ಅಂತ ಆಫೀಸಿನ ಫೋನಲ್ಲಿ ತನ್ನ ಹೆಂಡತಿಗೆ ಗದರಿ ಫೋನ್ ಇಟ್ಟ ಸುಕೇಶ್. 

"ಯಾರಮ್ಮ ಫೋನಲ್ಲಿ... ನಿನ್ ಗಂಡನೇ? ನಾನ್ ಬರೋಷ್ಟ್ರಲ್ಲಿ ಆ  ಲ್ಯಾಂಡ್ ಲೈನ್  ಬಡ್ಕೊಂಡ್  - ಬಡ್ಕೊಂಡು ಕಟ್ ಆಯ್ತು. ಹೋಗ್ಲಿ ಬಿಡು. ಏನಂತೆ? ನನ್ನೇ ಬೈತಿರ್ತಾನೆ ನಂಗೊತ್ತು. ಮೊಬೈಲಲ್ಲಿ ನನ್ ಫ್ರೆಂಡು ಅಮೇರಿಕಾದಿಂದ ವಿಡಿಯೋ ಕಳ್ಸಿದಾನೆ, ಅಬ್ಬಬ್ಭಾ ಏನ್ ಚೆಂದ ಇದೆ ಅಂತೀಯಾ. ತುಂಬಾ ಖುಷಿಯಾಗಿದ್ದಾನೆ. ಅವ್ನ ಮಕ್ಕಳು ಮೊಮ್ಮಕ್ಕಳ ಜೊತೆ ತೆಗ್ಸಿರೋ ಡಿಸ್ನಿ ವರ್ಲ್ಡ್ ಫೋಟೋಗಳೂ ಇವೆ. ನಿಂಗೂ ವಾಟ್ಸಾಪ್ ಮಾಡ್ಲಾ?? ನೋಡ್ತೀಯ!" ಅಂದ್ರು ಶ್ರೀಪತಿ ರಾಯರು ಸೊಸೆಯ ಕಡೆಗೆ. 

"ಮಾವ, ನಿಮ್ಮ ಮಗ ಸಂಜೆ ಬಂದು ರಾದ್ಧಾಂತ ಮಾಡ್ತಾರೆ ಅನ್ಸುತ್ತೆ. ಅವ್ರ ಮುಂದೆ ಮೊಬೈಲ್ ಇಟ್ಕೊಂಡು ಕೂರ್ಬೇಡಿ. ಎಷ್ಟು ಸಲ ಹೇಳೋದು  ನಿಮ್ಗೆ. ನೀವು ಬೈಸ್ಕೊಳ್ತೀರ, ನಂಗೂ ಬೈಸ್ತೀರ. ನಂಗ್ಯಾವ್ದು ಫೋಟೋ ಗೀಟೊ ಕಳಿಸ್ಬೇಡಿ." ಅಂತ ಗೊಣಗಾಡಿಕೊಂಡೇ ತನ್ನ ರೂಮಿಗೆ ನಡೆದಳು ಸಂಜನಾ.  

ಹೊಸ ಮನೆ ಕಟ್ಟಿಸಿಕೊಂಡು ಹೋದ ಮೇಲೆ ರಾಯರಿಗೆ ಸ್ನೇಹಿತರ ಸಂಖ್ಯೆ ಕುಗ್ಗಿತ್ತು. ಇರುವ ಒಬ್ಬ ಮೊಮ್ಮೊಗನನ್ನು ಬೋರ್ಡಿಂಗ್ ಸ್ಕೂಲ್ ಸೇರಿಸಿದ್ದರು. ತಮ್ಮ ಒಂಟಿತನವನ್ನು ನಿವಾರಿಸಲು  ಆ ಸಮಯಕ್ಕೆ ಅವರ ನೆರವಿಗೆ ಬಂದಿದ್ದು ಆಂಡ್ರಾಯ್ಡ್ ಫೋನ್.  ಇನ್ನು ರಾಯರೇ ಹೇಳುವ ಹಾಗೆ ಸಾಕ್ಷಾತ್ ದೇವರೇ ನಿಂತು ಇವರಿಗಾಗಿ ವರವನ್ನು ಕರುಣಿಸಿದ್ದ ...... ವಾಟ್ಸಾಪ್ ಎನ್ನುವ ಅದ್ಭುತ್ತದ ಮೂಲಕ. ಅದನ್ನು ಅವರು, "ದೇವರ-ಕೊಂಡಿ" ಎಂದು ಹೆಸರಿಸಿಕೊಂಡಿದ್ದರು. ಜಗತ್ತಿನಲ್ಲಿ ಎಲ್ಲರೂ ಸದಾ ಸಂಪರ್ಕದಲ್ಲಿರಬೇಕು, ಖುಷಿಯಾಗಿರಬೇಕು. ಯಾರನ್ನು ಕಳೆದುಕೊಂಡ ಭಾವ ಮೂಡಬಾರದೆಂದು ಆ ದೇವರೇ ಈ ಅದ್ಭುತವನ್ನು ತಯ್ಯಾರಿಸಲು ಇದರ ಸೃಷ್ಟಿಕರ್ತರ ಕನಸಲ್ಲಿ ಬಂದು ಹೇಳಿರಬೇಕು ಎನ್ನುತಿದ್ದರು. 
 
ವಾಟ್ಸಾಪ್ ಮೂಲಕ ತಮ್ಮ ಸ್ನೇಹಿತರ ಜೊತೆ ಮತ್ತೊಮ್ಮೆ ಸಂಪರ್ಕ ಕುದುರಿಸಿಕೊಂಡರು. ಜೊತೆಗೆ ನೆರೆಹೊರೆಯವರು, ನೆಂಟರು, ಹಳೆಯ ಸಹೋದ್ಯೋಗಿಗಳು,  ಅಂಗಡಿಯವರು, ಎಲ್ಲರೊಂದಿಗೂ ವಾಟ್ಸಾಪ್ ಮೂಲಕ ಮಾತುಕತೆ, ವಿಚಾರ ವಿನಿಮಯ ಸರಾಗವಾಗಿ ಸಾಗುತಿತ್ತು.  ನೋಡುವವರಿಗೆ ತುಸು ಬೇಸರವೇ ಆದರೂ ರಾಯರು ಮಾತ್ರ ಈ ವಾಟ್ಸಾಪನ್ನು ಹೆಚ್ಚಾಗಿಯೇ ಹಚ್ಚಿಕೊಂಡಿದ್ದರು.  ತಮ್ಮ ಮೊಬೈಲಲ್ಲಿ ಮುಳುಗಿರುವ ಹೊತ್ತಿನಲ್ಲಿ ಸುಕೇಶ್ ತಲೆ ಚಚ್ಚಿಕೊಂಡು ಹೊಡಾಡುತಿದ್ದ. ಈ ವಾಟ್ಸಾಪ್ ಕಂಡು ಹಿಡಿದವರನ್ನ ಹುಡುಕಿಕೊಂಡು ತಂದು ಚಚ್ಚಬೇಕು ಅಂತ ಬೈದಾಡುತಿದ್ದ. ಯಾವುದಕ್ಕೂ ತಲೆಯೇ ಕೆಡಿಸಿಕೊಳ್ಳುತ್ತಿರಲಿಲ್ಲ ರಾಯರು. ಬೇಸರವಾಗಲು ವಾಟ್ಸಾಪ್ ಅವರನ್ನು ಬಿಡುತ್ತಿರಲಿಲ್ಲ. ಬೆಳಗಿನ ಶುಭ ಸಂದೇಶದಿಂದ ಹಿಡಿದು ರಾತ್ರಿಯ ಶುಭರಾತ್ರಿಯವರೆಗೆ ಅವರ ಸಂಗಾತಿಯಾಗಿತ್ತು. 

ಈ ಬೆಳವಣಿಗೆ ಸುಕೇಶನನ್ನ ಆಗಾಗ ಚಿಂತಿಸುವಂತೆ ಮಾಡುತಿತ್ತು. "ಅಪ್ಪನಿಗೆ ಏನಾಗಿದೆ, ಅತಿಯಾಗಿ ಆಡ್ತಿದಾರೆ. ಡಾಕ್ಟರ್ ಹತ್ರ ತೋರಿಸೊದ? ಇದಕ್ಕೆ ಅಂದ್ರೆ ಅವ್ರು ನಂಜೊತೆ ಆಸ್ಪತ್ರೆಗೆ ಬರ್ತಾರಾ? ಹ್ಮ್ಮ್ ಇಲ್ಲ ... ಯಾವುದಕ್ಕೂ ನಾನೇ ಹೋಗಿ ಡಾಕ್ಟರ್ ಬಳಿ ಮಾತಾಡಿಸಿಕೊಂಡು ಬರ್ತೀನಿ." ಅಂತ ನಿರ್ಧರಿಸಿ ಅಂದೊಮ್ಮೆ ತಮ್ಮ ಫ್ಯಾಮ್ಮಿಲಿ ಡಾಕ್ಟರ್ ಬಳಿಗೆ ಹೋರಟ. 

ಸುಕೇಶನ ಪ್ರಕ್ಷುಬ್ಧ ಸ್ಥಿತಿ ನೋಡಿ ಡಾಕ್ಟರ್ ಚಂದ್ರು , "ಏನಯ್ಯ ನೀನು, ಇದೂ ಒಂದು ಪ್ರಾಬ್ಲಮ್ಮಾ !!! ಹ ಹ, ಇದಕ್ಕೂ ಮೆಡಿಸಿನ್ ಕೊಡ್ಬೇಕೆನೆಯ್ಯ" ಎಂದು ನಗಾಡಿದರು. "ನೋಡಪ್ಪ ಸುಕೇಶ ಹೊಸತರಲ್ಲಿ ಎಲ್ರಿಗೂ ಈ ರೀತಿ ಆಗೋದು ಸಹಜ. ರಾಯರು ಅದೆಷ್ಟು ದಿನ ಅಂತ ಈ ವಾಟ್ಸಾಪ್ ಬಳಸ್ತಾರೆ ಹೇಳು? ಅಂದ್ರೆ, ಅದನ್ನ ಕಂಡ್ರೆ ವಾಕರಿಕೆ ಬಂದು ಅವರೇ ದೂರ ಮಾಡ್ಕೋತಾರೆ. ಅಲ್ಲಿ ತನಕ ನೀನು ಸಹನೆಯಿಂದ ಇರಬೇಕು ಕಣಯ್ಯಾ. ಅರ್ಥ ಆಯ್ತಾ? ಯಾವ್ದಕ್ಕೂ ನಂಗೊಂದು ಫೋನ್ ಮಾಡ್ಸು ನಾನು ಮಾತಾಡ್ತೀನಿ " ಅಂತ ಹೇಳಿ ಸುಕೇಶನನ್ನ ಕಳಿಸಿಕೊಟ್ಟರು.

ಅಪ್ಪನಿಗೆ ಒಂಟಿತನ ಅತಿಯಾಗಿ ಕಾಡುತ್ತಿರಬೇಕು , ಅದಕ್ಕಾಗಿಯೇ ಈ ರೀತಿ ಆಗಿರಬೇಕು ಅಂತ ಅವನ ಸ್ನೇಹಿತ ನಿರಂಜನ್ ಹೇಳಿದ ಮಾತು ನೆನಪಿಗೆ ಬಂತು. ಅಷ್ಟೇ ಅಲ್ಲ. ಅದರ ಒಳಿತು ಕೆಟ್ಟದರ ತೀವ್ರತೆ ಕೂಡ ಅವರಿಗೆ ಗೊತ್ತಿರಲಿಕ್ಕಿಲ್ಲ. ನೀನು ಕಿರುಚಾಡದೆ ಅವರೊಂದಿಗೆ ಮೊದಲು ಸರಿಯಾಗಿ ಮಾತನಾಡು. ಈ ಸಮಸ್ಯೆಗೆ ಏನೋ ಒಂದು ಪರಿಹಾರ ಸಿಗುತ್ತೆ ಅಂತಲೂ ಹೇಳಿದ ಅವನ ಮಾತು ನಿಜ ಎನಿಸತೊಡಗಿತು. ಅಪ್ಪನ ಈ ವಾಟ್ಸಾಪ್ ಹುಚ್ಚನ್ನ ಬಿಡಿಸುವುದು ಹೇಗೆಂದು ಯೋಚಿಸುವಾಗಲೇ ಸುಕೇಶನಿಗೆ ಒಂದು ಆಲೋಚನೆ ಹೊಳೆಯಿತು. ಅಪ್ಪನನ್ನ ಮತ್ತೊಮ್ಮೆ ಯಾವುದಾದರೊಂದು ಕೆಲಸದಲ್ಲಿ ನಿರತರಾಗಿಸಬೇಕು. ಇದರ ಕುರಿತು ಅಪ್ಪನ ಬಳಿ ಮಾತನಾಡಬೇಕು, ಹ್ಮೂ ರೇಗಾಡಬಾರದು ಅಂತ ನಿರ್ಧರಿಸಿಕೊಂಡು ಮನೆಗೆ ಬಂದ.

"ಅಪ್ಪ ಎಲ್ಲಿ ಕಾಣ್ತಿಲ್ಲ!!!" ಎನ್ನುವಷ್ಟರಲ್ಲಿ, "ಅವ್ರ ಸ್ನೇಹಿತರೊಬ್ಬರು ತೀರಿಕೊಂಡರಂತೆ ನೋಡ್ಕೊಂಡು ಬರ್ತೀನಿ ಅಂತ ಹೋಗಿದಾರೆ" ಅಂತ ಉತ್ತರ ಬಂದಿತ್ತು. ರಾಯರು ಮನೆಗೆ ಬರುವ ಹೊತ್ತಿಗೆ ತಡರಾತ್ರಿಯಾಗಿತ್ತು. ಬಂದಾಗಿನಿಂದ ಬಹಳಷ್ಟು ಮಂಕಾಗಿ ಸಪ್ಪಗಾಗಿ ಹೋಗಿದ್ದರು ರಾಯರು. ಮರುದಿನವೂ ಹೀಗೆಯೇ!! ಸದಾ ಕಾಲ ತಮ್ಮ ಫೋನ್ ಜೊತೆಗೆ ಇರುತಿದ್ದ ರಾಯರು ಅದರ ಕಡೆ ತಿರುಗಿಯೂ ನೋಡುತ್ತಿರಲಿಲ್ಲ. ಅಪ್ಪನ ಈ ವರ್ತನೆ ಕಂಡು ಸುಕೇಶನಿಗೆ ಖುಷಿ-ಗಾಬರಿ ಎರಡೂ ಒಟ್ಟೊಟ್ಟಿಗೆ ಆದರೂ ಆತಂಕವೂ ಆವರಿಸತೊಡಗಿತು. ಯಾವುದಕ್ಕೂ ಕೇಳಿಯೇ ಬಿಡೋಣವೆಂದು, "ಯಾಕಪ್ಪ ಹೀಗಿದ್ದೀಯ ? ಏನಾಯ್ತು... ನಿಮ್ಮ ಸ್ನೇಹಿತರು ತೀರಿಕೊಂಡಾಗಿನಿಂದ ಬಹಳ ಮಂಕಾಗಿಬಿಟ್ರಿ" ಅಂತ ರಾಯರನ್ನು ಕೇಳಿದ. "ಏನಿಲ್ಲ ಕಣೋ, ನನ್ನ ಖಾಸಾ ದೋಸ್ತು ವೆಂಕಯ್ಯ. ಚೆನ್ನಾಗೇ ಇದ್ದ. ನಂಗೆ ಈ ಫೋನ್ ತೆಗೊಳೋಕೆ, ವಾಟ್ಸಾಪ್ ಬಳಸೋಕೆ ಹೇಳಿಕೊಟ್ಟವನೇ ಅವನು. ನನ್ನ ಗುರು. ಯಾರೋ ಇವನಿಗೆ ಕಳಿಸಬಾರದ ಒಂದು ವಿಡಿಯೋ ವಾಟ್ಸಾಪಲ್ಲಿ ಕಳ್ಸಿದ್ದಾರೆ. ಅದನ್ನ ನೋಡಿ ಹೆದರಿದ್ದಾನೆ. ಬೆವರು ಬಂದು ಹೃದಯಾಘಾತ ಆಗಿದೆ. ಉಳಿಸಿಕೊಳ್ಳಲು ಆಗಲೇ ಇಲ್ಲ. ಇದನ್ನೆಲ್ಲಾ ನೆನೆಸಿಕೊಂಡರೆ ಭಯವಾಗುತ್ತೆ" ಅಂದರು. ಈ ಒಂದು ಸಮಯಕ್ಕಾಗಿ ಕಾಯುತಿದ್ದ ಸುಕೇಶ ಅಪ್ಪನ ಕೈ ಹಿಡಿದು ತನ್ನ ಮಾತು ಮುಂದುವರೆಸಿದ ................................................ !!!!

- ರೂಪ ಸತೀಶ್

Monday, April 20, 2015

ಕಲ್ಬೆಂಚು

ಹಗುರಾಗಿ 
ಬಂದು 
ಸೋಕಿ ಹೋಗುವ 
ಗುಲ್ಮೊಹರಿನ 
ಪಕಳೆ ...

ಅಂಗೈನ 
ರೇಖೆಗೊತ್ತುವ 
ತರಗೆಲೆಗಳ 
ಮೊನಚು ತುದಿ ...

ಉಸಿರಿಗೆ 
ತಾಕಿ 
ನಡೆದುಬಿಡುವ 
ತಂಗಾಳಿಯ
ನಿಶಬ್ಧ ಮೌನ...

ಬೆರಳುಗಳ 
ನಡುವೆ 
ಸರಕ್ಕನೆ ಜಾರುವ 
ಗುಂಡಿಗೆಯಂತ 
ಒರಟುಗಲ್ಲು ...

ಕಲ್ಬೆಂಚಿನ
ಮೇಲೆ 
ನೆನಪುಗಳ 
ಗೀಚುತ್ತ ....  
"ಮುನಿದರೂ ಸೈ  
... ನನ್ನನ್ನಗಲಿ  ಹೋಗಬೇಡ" 

(RS)

Saturday, February 21, 2015

ಅವನೊಲವ ಸಾಲುಗಳು ......




ಸಾವಿರ ಸುಳ್ಳು ಹೇಳಿ ಪ್ರೀತ್ಸೋರು ಇರ್ತಾರೆ, ಮದುವೆ ಮಾಡೋರು ಇರ್ತಾರೆ! ನೂರ ಒಂದು ಗ್ರೀಟಿಂಗ್ ಕಾರ್ಡ್ ಒಟ್ಟಿಗೇ ಕೊಟ್ಟು - ಒಂದೊಂದ್ರಲ್ಲೂ ವಿಭಿನ್ನವಾಗಿ ನಿನ್ನ ಪ್ರೀತಿ ನಿವೇದಿಸಿ ಮೋಡಿ ಮಾಡಿದೋನು ನೀನೆ ಅನ್ಸುತ್ತೆ. ನೀ ಕೊಟ್ಟ ಅಷ್ಟೂ ಕಾರ್ಡ್ಗಳಲ್ಲಿ ನನ್ನ ತುಂಬಾ ಇಂಪ್ರೆಸ್ಸ್ ಮಾಡಿದ್ದು, ಇಗೋ ನಿನ್ನ ಈ ಸಾಲುಗಳು : 

  • "ಕನ್ನಡ ಓದೋಕೆ -  ಬರೆಯೋಕೆ ಬರುತ್ತಾ? "
  • "ನೀ ಬಲೆ ಬೀಸದೇನೆ ನಿನ್ನ ತೆಕ್ಕೆಯಲ್ಲಿ ಬಿದ್ದಿರುವೆನೆಂದರೆ, ಅದು ನನ್ನ ತಪ್ಪಲ್ಲ, ನಮ್ಮನ್ನು ಸೇರಿಸಬೇಕೆಂದು ಹೂಡಿರುವ ಭಗವಂತನ ಸಂಚು, ನಾ ಹೇಳೋದು ಅರ್ಥವಾಗುತ್ತ?"...
  • "ಪ್ರೀತ್ಸೋಕೆ ಯಾರ ಅಪ್ಪಣೆ ಬೇಕು ಹೇಳು? ಅದು ನನ್ನ ಸ್ವಂತ.  ಆದ್ರೆ ನಿನ್ನ ಹೊಗಳೋಕೆ ಬೇಕು, ಪ್ಲೀಸ್ ನಂಗೆ ಅನುಮತಿ ಕೊಡು" 
  • "ಈ ಹಿಂದೆ ನಾ ಯಾರನ್ನು ಪ್ರೀತ್ಸೇ ಇಲ್ಲ ಅಂತಲ್ಲ, ಸುಳ್ ಸುಳ್ಳೆಲ್ಲ ನಂಗೆ ಹೇಳೋಕೆ ಬರೋಲ್ಲ. ಬದುಕು ಅಂತಿದ್ರೆ ಅದು ಇಂಥವಳ ಜೊತೆ ಮಾತ್ರ ಅಂತ ಅನಿಸಿದ್ದು ನಿನ್ನ ನೋಡಿದ ಮೇಲೆ"...  
  • "ಆದ್ರು ತಪ್ಪೇ ಮಾಡದೆ - ನಿನ್ನ ಮುಂದೆ ತಪ್ಪಿತಸ್ತನ ಹಾಗೆ ನಿಲ್ಲ ಬಲ್ಲೆ" 
  • "ನಾನು ಸಾಯೋ ತನಕ ಮಾತ್ರ ಅಲ್ಲ - ಸತ್ತಮೇಲೂ ನನ್ನಷ್ಟು ನಿನ್ನನ್ನ ಪ್ರೀತ್ಸೋರು ಈ ಭೂಮಿ ಮೇಲೆ ಇರೋಕೆ ಸಾಧ್ಯನೇ ಇಲ್ಲ"......

ಹೀಗೆಲ್ಲ ಬರೆದು, ನನ್ನ ಬೆನ್ನಟ್ಟಿದ ಬೇತಾಳ ನೀನೆ. ಅಲ್ಲಿಯವರೆಗೂ ಶಾರುಖ್ ಖಾನ್ ಬಿಟ್ಟು ನ೦ಗ್ಯಾರು ಹಿಡ್ಸಿರ್ಲಿಲ್ಲ. ನೀನಂತು ಯಾವ ಕಡೆಯಿಂದಲೂ SRK ಹಂಗಿರ್ಲಿಲ್ಲ, ಮತ್ತೆ ನೀ ಇಷ್ಟವಾಗಿದ್ದಾದರು ಹೇಗೆ? ಪ್ರೀತಿಗೆ ಕಣ್ಣಿಲ್ಲ ಅನ್ನೋದು ಇದಕ್ಕೇನಾ :) ನಿನ್ನ ಲವ್ ಲೆಟರ್ ಪೂರ ಹಂಸಲೇಖರ ಸಾಲುಗಳನ್ನ ಬರೆದು ಬರೆದು ಪ್ರೀತಿ ಗಿಟ್ಟಿಸಿಕೊಂಡ ಏಕೈಕ ಪ್ರೇಮಿ ನೀನೆ. ಅದಕ್ಕೆ ನೋಡು ಪ್ರತಿ V-Day ದಿನ ಹಂಸಲೇಖರ ಹಾಡಿನ CD ತಪ್ಪದೆ ಖರೀದಿಸ್ತೀನಿ.

ನಿಜ ಹೇಳಲಾ? ನೀನಿಲ್ಲ ಅಂತ ನಂಗೆ ಅನಿಸೋದೇ ಇಲ್ಲ. ಉಸಿರಾಡೊವಾಗೆಲ್ಲ ನೆನಪಾಗ್ತೀಯ ಅಂದ್ರೆ, ನಿನ್ನನ್ನ ಎಷ್ಟು ಬಾರಿ ನೆನಪಿಸಿಕೊಳ್ತೀನಿ ಅಂತ ನೀನೆ ಲೆಕ್ಕ ಹಾಕು. ಮತ್ತೊಂದು ನಿಜ!  "ನಿನ್ನಷ್ಟು ನನ್ನ ಪ್ರೀತ್ಸೋರು - ನನ್ನಸ್ಟು ನಿನ್ನ ಪ್ರೀತ್ಸೋರು ಈ ಭೂಮಿ ಮೇಲೆ ಇರೋಕೆ ಸಾಧ್ಯವೇ ಇಲ್ಲ".

ಅಬ್ಭ ಕಂಗಳು ಮಂಜಾಗ್ತಿವೆ, ಗಂಟಲಿಗೂ ಕಷ್ಟವಾಗ್ತಿದೆ, ಬೇಗ ಹೇಳ್ಬಿಡ್ತೀನಿ, ಇವತ್ತು ವಿಶೇಷ,
Happy Valentine's Day ಮತ್ತೆ, ಮತ್ತೆ, I L ..............

<3 <3 <3


Sunday, November 23, 2014

ಈ ಭಾನುವಾರವೂ - ಕನ್ನಡಕ್ಕಾಗಿ / ಕಂಕಣಕ್ಕಾಗಿ

ಕಂಕಣ : ನಾಡು - ನುಡಿಗಾಗಿ 

ನಿನ್ನೆ ಭಾನುವಾರ, ಸಾಹಿತಿ - ಕವಿರಾಜ್ ರವರ ನೇತೃತ್ವದಲ್ಲಿ, "ಕಂಕಣ" ಬಳಗದ ಮೊದಲ ಹೆಜ್ಜೆ, JP ನಗರದ ಸೆಂಟ್ರಲ್ ಮಾಲ್ ಎದುರು!  
ಉದ್ದೇಶ ಇಷ್ಟೆ : "ಕನ್ನಡದವರೇ,  ಕನ್ನಡ ಮಾತಾಡಿ" ಅ೦ತ ವಿನಮ್ರವಾಗಿ ಫಲಕಗಳನ್ನ ಪ್ರದರ್ಶಿಸುವ ಮೂಲಕ ಕೇಳಿಕೊಳ್ಳೋದು. ಎಂದೂ ಯಾವ ಪ್ರತಿಭಟನೆಗಳಿಗೂ ರೋಡಿಗಿಳಿದವಳಲ್ಲ - ಮುಜುಗರ ಸರಿ - ಆದರೆ ಇದು ಪ್ರತಿಭಟನೆಯೇ ಅಲ್ಲ - ಮನವಿ ಮಾತ್ರ - ಒಂದೇ ಒಂದು ಘೋಷಣೆಯನ್ನೂ ಸಹ ಕೂಗದೆ - ಹೆಮ್ಮೆಯಿಂದ ನಾನು ಕನ್ನಡತಿ ಅಂತ ಸಾರುವ ಒಂದು ಸುವರ್ಣವಕಾಶ, ಬಿಡೋದುಂಟೆ? ಕನ್ನಡಿಗರನ್ನ ಎಬ್ಬಿಸಿ "ಕನ್ನಡ ಮಾತಾಡ್ರಪ್ಪ, ದೇವ್ರುಗಳ"!! ಅಂತ ಕೇಳಿಕೊಳ್ಳುವ ಅಭಿಯಾನ. 

ಈ ಅಭಿಯಾನಕ್ಕೆ ಬೇಕಿದ್ದ ಪೂರ್ವ ತಯಾರಿ ಅಷ್ಟಿಷ್ಟಲ್ಲ. ನಂಗೊತ್ತು ಕಂಕಣ ಬಳಗದ ಕೆಲವು ಸಧಸ್ಯರು ಅತ್ಯಂತ ಹೆಚ್ಚು ಶ್ರಮವಹಿಸಿ ತಯಾರಿ ನಡೆಸಿದ್ರು. ಚಿದಾನಂದ್, ಶ್ರೀಧರ್, ಪ್ರಕಾಶ್, ಭ್ರಮೇಶ್, ರವೀಂದ್ರ .... ಅನೇಕರು. ಕವಿರಾಜ್ ಅವರು ಸಹ ಖುದ್ದು ತಾವೇ ಪ್ರತಿಯೊಂದು ವಿಭಾಗದಲ್ಲೂ ಎಚ್ಚರ ವಹಿಸಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. 

ಮಾಲ್ ಬಳಿ ಸೇರಿದೆವು, ಗುಂಪುಗಳ ವಿಂಗಡಿಸಿದರು - "ಎಲ್ರೂ ನಿಮ್ಮ height ಪ್ರಕಾರ ನಿಲ್ಲಿ ಅಂದ್ರು", ಹ.ಹ.!  ನನ್ನ ಸ್ಕೂಲ್ PT ಮೇಡಂ ನೆನಪಾದ್ರು! ಎತ್ತರ ಇದ್ದೀನಿ ಅಂತ ಅಲ್ಲೆಲ್ಲೋ ಹಿಂದೆ ಹೋಗಿ ನಿಂತಾಗೆಲ್ಲ, "ಹೇ ನೀನು, ಹೂಂ ನೀನು, ಬಾ .. ಮುಂದೆ ಬಾ, ಯಾವಾಗ್ಲು ಹಿಂದೆ ಹೋಗಿ ನಿಲ್ತೀಯ" ಅಂತ ರೇಗುತಿದ್ದ ನೆನಪಾಯ್ತು.

"ಇದು ನಮ್ಮ ಮೊದಲ ಹೆಜ್ಜೆ - ಯಾರು ನಾಚ್ಕೊಬೇಡಿ - ಹೆಮ್ಮೆಯಿಂದ ಫಲಕ ಹಿಡ್ಕೊಂಡು ನಿಂತ್ಕೊಳ್ಳಿ - ನಡೀರಿ" ಅಂತ ಎಲ್ಲ ತಂಡಗಳಿಗೂ ಹುರಿದುಂಬಿಸಿದ್ದರು ಕವಿರಾಜ್. ಚಪ್ಪಾಳೆಗಳೊಂದಿಗೆ ಅಭಿಯಾನಕ್ಕೆ PLACARD ಹಿಡಿದು ಮುನ್ನಡೆದ ಮೊದಲ ತಂಡ ನಮ್ಮದು/ನನ್ನದು. 
* * * 
ಅದೇನು ಹುಮ್ಮಸ್ಸು - ಅದೆಲ್ಲಿಯ ಸ್ಪೂರ್ತಿ! ಇಂಥ ಒಂದು ಅಭಿಯಾನಕ್ಕೆ ಸಾಮಾನ್ಯ ಜನರು ಸ್ಪಂಧಿಸಿದ್ದು ಹೀಗೆ : 
- ಬೈಕಲ್ಲಿ / ಬಸ್ಸಲ್ಲಿ / ಕಾರಲ್ಲಿ ಹೋಗ್ತಿದ್ದವ್ರು ಕೈ ಬೀಸಿ ಹೋಗ್ತಿದ್ರು 
- ಕೆಲವರು ಫೋಟೋ ಕ್ಲಿಕ್ಕಿಸ್ತಿದ್ದ್ರು / ವಿಡಿಯೋ ಮಾಡ್ಕೊಳ್ತಿದ್ರು  
- ಒಂದು ಮುಗುಳ್ನಗೆಯೊಂದಿಗೆ THUMBS UP ಮಾಡ್ತಿದ್ರು 
- ತಾವಾಗೆ ಖುದ್ದಾಗಿ ಬಂದು "ಬೇಕಿತ್ತು ರೀ ಇದು" ಅಂತ ಹೇಳ್ತಿದ್ರು 
- ಬಸ್ ಡ್ರೈವರ್ಗಳು / ಕಂಡೆಕ್ಟರ್ಗಳು ಮೆಚ್ಚುಗೆ ಸೂಚಿಸುತ್ತಿದ್ರು
- ಇನ್ನು ಸಮಯ, ಉದಯ, ಜ್ಹೀ, ಬೀ, ಕಸ್ತೂರಿ ಸಹ ಅಲ್ಲಿದ್ರು 
* * * 
ಜನಸಾಮಾನ್ಯರು ಖುದ್ದಾಗಿ ನಮ್ಮ ಮಧ್ಯೆ - ನಮ್ಮ ಜೊತೆ ಬಂದು ಫಲಕ ಹಿಡಿದು ದನಿಯಾದದ್ದು ಹೀಗೆ :
* * * 
ಮಾಲ್ ಎದುರಿಗೆ ನಮ್ಮ ಅಭಿಯಾನಕ್ಕೆ ಯಾವುದೇ ತೊಂದರೆ ಆಗದಂತೆ ಟ್ರಾಫಿಕ್ಕನ್ನು ಅದ್ಭುತವಾಗಿ ನಿಭಾಯಿಸುತಿದ್ದ ಈ ಮಹಿಳಾ ಸಿಬ್ಬಂದಿಯವರಿಗೊಂದು ಸಲಾಮು. 
* * * 
ಪೋಲಿಸ್ ಆಫೀಸರ್ಗಳುಸಹ ನಮ್ಮ ಅಭಿಯಾನಕ್ಕೆ ಸಾಥ್ ಕೊಟ್ಟಿದ್ದು ಹೀಗೆ:
* * * 
ಇವರು - ಕವಿರಾಜ್ ರ ಪತ್ನಿ ರಾಜೇಶ್ವರಿ - ಕವಿಯವರಂತೆ ಸರಳ, ಸ್ನೇಹಮಯೀ, ಆತ್ಮೀಯ ವ್ಯಕ್ತಿತ್ವ! ಖುಷಿಯಾಯ್ತು ಭೇಟಿ :) ಅವರೊಟ್ಟಿಗೆ ಮುಂದಿನ ಫೆಬ್ರವರಿಯಲ್ಲಿ ಭುವಿಗಿಳಿವ ಪುಟ್ಟ ಜೀವವೂ ಸಹ ಇತ್ತು, ವಿಶೇಷ ! ಈಗಿಂದಲೇ ಅದಕ್ಕೂ ಕಂಕಣ! 
* * *
ದಿನಕರ್ ತೂಗುದೀಪ : ಇವರು ಸಹ "Guest"ಆಗಿ ಬಂದು ದನಿಗೂಡಿಸಿದ್ದು ವಿಶೇಷ
* * *
 ಎಲ್ಲರು ಸೇರಿ ಈ ಫೋಟೋ ತೆಗೆಸಿಕೊಳ್ಳುವಾಗ್ಲು ಒಂದು ಜೈಕಾರ ಆಗಲಿ / ಹಿಪ್ ಹಿಪ್ ಹುರ್ರೇ ಅಂತ ಆಗಲಿ ಏನನ್ನು ಕೂಗುವಂತಿರಲಿಲ್ಲ. ಉದ್ವೇಗ / ಖುಷೀ ಹೇಗೆಲ್ಲ ನಿಯಂತ್ರಿಸಿಕೊಳ್ಳಬೇಕು ನೋಡಿ :)  ....

ಕಡೆಗೆ ಬಂದ ಕಾಫಿ ಮಾತ್ರ - ಸೂಪರ್ - ಬೇಕಿತ್ತು - ಆ ಸಮಯಕ್ಕೆ ಸಿಕ್ಕ ಅಮೃತವದು :
ಎರಡುವರೆ / ಮೂರು ಗಂಟೆಗಳ ಕಾಲ ನಿಂತೇ ಇದ್ದು ಮನೆಗೆ ಬಂದ ಮೇಲೆ ಗೊತ್ತಾಗಿದ್ದು - ಕಾಲು ನೋವು ಅಂತ!! ಆ ನೋವಲ್ಲು ಒಂದು ಧನ್ಯತೆಯ ಭಾವ, ಅದೊಂದು Excellent Feel. 
ಕವಿರಾಜ್ ರವರಿಗೆ  - ಕಂಕಣಕ್ಕೆ ಒಂದು ನಮನ
ಈಗಷ್ಟೇ ಮೊದಲಾಗಿದೆ.... ಇನ್ನೂ ಬಹಳ ಬಾಕಿ ಇದೆ.
* * * 
ಅಂದಹಾಗೆ ಇದು ನನ್ನ ನೆಚ್ಚಿನ ಫೋಟೋ - ಮರೆತಿದ್ದೆ :) 
* * * 

Sunday, October 5, 2014

ಸ್ತ್ರೀ, ಸ್ವಾತ೦ತ್ರ್ಯ, ಸ್ತ್ರೀ ಸ್ವಾತ೦ತ್ರ್ಯ : ಪಂಜುವಿನಲ್ಲಿ

http://www.panjumagazine.com/?p=6596#comments

ಸ್ಪ್ರಿ೦ಗ್ ಟ್ರೀ ಅಪಾರ್ಟ್ಮೆ೦ಟ್ ರೆಸಿಡೆ೦ಟ್ಸ್ ಅಸೋಸಿಯೇಷನ್ನಿನ ನಿಯಮದ೦ತೆ / ಸರದಿಯ೦ತೆ ಈ ಬಾರಿಯ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದು ೪೦೪ ನೇ ಫ್ಲಾಟಿನ ಶಾ೦ತ ಇನಾಮ್ದಾರ್. ಸರದಿಯ ಪ್ರಕಾರ ಆಯ್ಕೆಯಾಗಿದ್ದರು ಒಲ್ಲದ ಮನಸಿನಿ೦ದಲೇ ಈ ಜವಾಬ್ದಾರಿಯನ್ನು ಒಪ್ಪಿಕೊ೦ಡಿದ್ದಳು. ಆಯ್ಕೆಯಾದ ವಿಷಯ ಮನೆಯಲ್ಲಿ ತಿಳಿಸಿದಾಗ ಯಾರೊಬ್ಬರೂ ಇದನ್ನು ಸ್ವಾಗತಿಸಿರಲಿಲ್ಲ. ಬದಲಿಗೆ ಗೇಲಿ ಮಾಡಿ ತಮಾಷೆ ಮಾಡಿದ್ದರು.
 
ಮು೦ದಿನ ವಾರ ಅ೦ತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅ೦ಗವಾಗಿ ಅಸೋಸಿಯೇಷನ್ನಿನ ಸಧಸ್ಯರೆಲ್ಲರೂ ಸೇರಿ ಒ೦ದು ಕಾರ್ಯಕ್ರಮ ಆಯೋಜಿಸಿಕೊ೦ಡಿದ್ದು, ಅದಕ್ಕಾಗಿ ಶಾ೦ತ ಅಪಾರ್ಟ್ಮೆ೦ಟಿನ ಹೆ೦ಗಸಿರಿಗೆ ಸ್ತ್ರೀ ಸ್ವಾತ೦ತ್ರ್ಯದ ಬಗ್ಗೆ ಭಾಷಣ ಮಾಡುವ೦ತೆ ನಿರ್ಧಾರವಾಯಿತು. ಮೀಟಿ೦ಗ್ ಮುಗಿಸಿಕೊ೦ಡು ಬ೦ದಾಗಿನಿ೦ದ ಶಾ೦ತಳಿಗೆ ಭಾಷಣದಲ್ಲಿ ಮಾತನಾಡುವುದರ ಬಗ್ಗೆಯೇ ದೊಡ್ಡ ಚಿ೦ತೆಯಾಗಿತ್ತು.  
 
ಇನ್ನು ತನ್ನ ಭಾಷಣವನ್ನು ಬರೆದಿಟ್ಟುಕೊಳ್ಳುವುದೇ ಲೇಸು ಎ೦ದು ನಿರ್ಧರಿಸಿದ್ದಳು. ಅ೦ತೆಯೇ ಮರು ದಿನ ಬೇಗನೆದ್ದು ಮನೆಯ ಕೆಲಸಗಳನ್ನೆಲ್ಲಾ ಮುಗಿಸಿ, ಬೆಳಗಿನ ತಿ೦ಡಿ, ಮಧ್ಯಾಹ್ನದ ಅಡುಗೆ ಎಲ್ಲವೂ ಚಕಚಕನೆ ಮುಗಿಸಿಟ್ಟಳು. ಕಾಫಿ ಬೆರೆಸಿ ಮಾವನವರಿಗೆ ಕೊಡುವಷ್ಟರಲ್ಲಿ ಎ೦ದಿಗಿ೦ತ  ಹತ್ತು ನಿಮಿಷ ತಡವಾಗಿತ್ತು. ಅದಕ್ಕಾಗಿ ಅವರ ತೀಕ್ಷ್ಣ ನೋಟ ಎದುರಿಸಲಾಗದೆ, ಮೆಲು ದನಿಯಲ್ಲಿ ‘ಕಾಫಿ ಇಲ್ಲಿಡ್ಲಾ ಮಾವ’, ಅ೦ತ ಕೇಳಿಕೊ೦ಡು ಟೇಬಲ್ಲಿನ ಮೇಲೆ ಇಟ್ಟುಬ೦ದಳು. ಮನೆಯ ಹಿರಿಯರಾದ ಇವರು ಹೆ೦ಡತಿಯನ್ನು ಬ೦ದೋಬಸ್ತಿನಲ್ಲಿಡಬೇಕು ಎ೦ಬುದರ ಬಗ್ಗೆ ತಮ್ಮ ಮಗನಿಗೆ ಚಾಚು ತಪ್ಪದೆ ಭೋದಿಸಿದ್ದರಿ೦ದ ಶಾ೦ತಳ ಪತಿರಾಯ ಪಿತೃ ವಾಕ್ಯ ಪರಿಪಾಲಕನಾಗಿ ಮೆರೆದಿದ್ದ.
 
ಸ್ನಾನ ಮುಗಿಸಿ ಬ೦ದಿದ್ದ ಪತಿಗೆ ಇಸ್ತ್ರಿ ಮಾಡಿಸಿಟ್ಟ ಬಟ್ಟೆಯನ್ನು ಟೇಬಲ್ ಮೇಲಿಟ್ಟು, ಅಡುಗೆ ಮನೆಯ ಕಡೆ ಓಡಿದಳು ಶಾ೦ತ. ಇನ್ನು ಮಗನಿಗೂ – ಪತಿಗೂ ಡಬ್ಬಿ ಕಟ್ಟುವ ಕೆಲಸ ಬಾಕಿ ಇತ್ತು. ಡೈನಿ೦ಗ್ ಟೇಬಲ್ಲಿನ ಮೇಲೆ ಮಾಡಿಟ್ಟ ಅಡುಗೆ ಪೇರಿಸುವುದು ಸಹ ಬಾಕಿ ಇತ್ತು. ಮನೆಯ ಗ೦ಡಸರು ತಿ೦ಡಿಗೆ೦ದು, ಊಟಕ್ಕೆ೦ದು ಕುಳಿತಾಗ ಅವರೊಡನೆ ಹೆ೦ಗಸರು ಕೂರಬಾರದೆ೦ಬುದು ಆ ಮನೆಯ ನಿಯಮ. ಹೊಸತರಲ್ಲಿ ಎಲ್ಲಾ ನಿಯಮಗಳು ಅಯೋಮಯವಾಗಿ ಕ೦ಡಿತ್ತು. ಪಾಲಿಸದೆ ವಿಧಿಯಿಲ್ಲ ಎ೦ದು ಕೊ೦ಡು, ಎಲ್ಲರ ಬೇಕು ಬೇಡಗಳ ಮಧ್ಯೆ ತನ್ನ ಬದುಕೊ೦ದು ಯಾ೦ತ್ರಿಕವಾಗಿರುವುದರ ಬಗ್ಗೆ ಆಗಾಗ ನೊ೦ದುಕೊಳ್ಳುತ್ತಿದ್ದಳು. ಮನೆಯವರ ಸೇವೆಯಲ್ಲಿ ಕಾಲ ಸವೆಯುತಿದ್ದರು, ತನಗಾಗಿ, ತನ್ನತನಕ್ಕಾಗಿ ಮನಸು ಹ೦ಬಲಿಸುತ್ತಿತ್ತು. ಗ೦ಡನ ಪ್ರೀತಿಯ ಮಾತುಗಳಾಗಲಿ, ಮಾವನ ಅಕ್ಕರೆಯಾಗಲಿ ಎ೦ದಿಗೂ ಅವಳ ಪಾಲಿಗೆ ಸ್ವಪ್ನವೇ. ತಾನು ಅಸೋಸಿಯೇಷನ್ನಿನ ಸಧಸ್ಯೆಯಾದ೦ದಿನಿ೦ದ ಈ ರೀತಿಯ ಆಲೋಚನೆಗಳು ಅತಿಯಾಗಿ ಕಾಡುತಿದ್ದವು. ಕಾಲೇಜಿನ ಟಾಪರ್ಗಳಲ್ಲಿ ಒಬ್ಬಳಾಗಿ, ಎಕನಾಮಿಕ್ಸ್ನಲ್ಲಿ ಉನ್ನತ ಡಿಗ್ರಿ, ಚಿನ್ನದ ಪದಕ ಎಲ್ಲವೂ ತನ್ನದಾಗಿಸಿಕೊ೦ಡರೂ, ಮದುವೆಯ ನ೦ತರ ಸುಖ ಸ೦ಸಾರದ ಕನಸು ಕ೦ಡಿದ್ದಳಷ್ಟೆ ಹೊರತು, ಕಳೆದು ಹೋಗಬಹುದಾದ ಅವಳ ಅಸ್ತಿತ್ವದ ಕುರಿತು ಎ೦ದೂ ಆಲೋಚಿಸಿರಲಿಲ್ಲ.
 
ದಿಢೀರನೆ ಸ್ತ್ರೀ ಸ್ವಾತ೦ತ್ರ್ಯದ ಬಗ್ಗೆ ಮಾತನಾಡ ಬೇಕೆ೦ದಾಗ ಮನಸು ಮುದುಡಿ ಗುಬ್ಬಿ ಗೂಡಿಗೆ ಸೇರಿತ್ತು. ಯಾವುದಕ್ಕೂ ಭಾಷಣ ತಯ್ಯಾರಾಗಬೇಕೆ೦ದು ಕೊ೦ಡು, ಪೇಪರ್ರು ಪೆನ್ನು ಹಿಡಿದು ಬಾಲ್ಕನಿಯಲ್ಲಿ ಬ೦ದು ಕುಳಿತಳು. ಅಪಾರ್ಟ್ಮೆ೦ಟಿನ ಎದುರು ಪುಟ್ಟ ಗುಡಿಸಲೊ೦ದಿತ್ತು. ಅಲ್ಲಿ ಗ೦ಡ ಹೆ೦ಡಿರ ಸ೦ಸಾರವೊ೦ದು ತಳ್ಳುವ ಗಾಡಿಯ ಮೇಲೆ ಇಸ್ತ್ರಿ ಅ೦ಗಡಿ ಇಟ್ಟುಕೊ೦ಡಿದ್ದರು. ಬಾಲ್ಕನಿಯಲ್ಲಿ ಕುಳಿತ ಶಾ೦ತಳ ಗಮನ ಆ ಗುಡಿಸಲ ಕಡೆ ಹರಿದಿತ್ತು. ಆ ಪುಟ್ಟ ಗುಡಿಸಲಿನಲ್ಲಿ ಗ೦ಡ ಹೆ೦ಡಿರ ಜಗಳ ಆಗಾಗ ನಡೆಯುತ್ತಲೆ ಇತ್ತು. ಕುಡಿದು ಬ೦ದ ಗ೦ಡನಿಗೆ, "ಈ ತಪ್ಪಲೆಯಲ್ಲಿ ಮೊಟಕ್ತೀನಿ ನೋಡು" ಅ೦ತ ಹೆ೦ಡತಿ ಜೋರಾಗಿ ಬಯ್ಯೋದು, "ಕ೦ಠ ಪೂರ್ತಿ ಕುಡಿದು ಸಾಯ್ತೀಯ, ಬೆಳಗಾನ ಎದ್ದು ವಾ೦ತಿ ಮಾಡ್ಕತೀಯ, ಅದೇನ೦ತ ಹುಟ್ಟಿದ್ಯೂ ಮೂದೇವಿ" ಅ೦ತ ಅರಚಿದ್ದು, "ರಾತ್ರಿ ಮುದ್ದೆನೇ ಇರೋದು, ತಿನ್ನು ಇಲ್ಲಾ೦ದ್ರೋಗಿ ಸಾಯಿ" ಅ೦ತ ರೇಗೋದು, "ನನ್ ಗ೦ಡನ್ಗೆ ಇಷ್ಟ ಅ೦ತ ಇವತ್ತು ಹುರಳಿಕಾಳ್ ಉಪ್ಸಾರು ಮಾಡಿದೀನಿ" ಅ೦ತ ಯಾರಿಗೋ ಕೂಗಿ ಹೇಳೋದು, ಅಷ್ಟೆಲ್ಲ ಬೈದಾಡಿದ್ದರು ಮರು ದಿನ ಹೆ೦ಡತಿಗೆ೦ದು ಅವಳ ಗ೦ಡ ಅವರೆಕಾಯಿ ಸುಲಿದು ಕೊಡೋದು! ಎಲ್ಲವೂ ನೆನಪಾಗ ತೊಡಗಿತು.
 
ಶಾ೦ತಳಿಗೆ ತನ್ನಲ್ಲಿರದ ಆ ಧೈರ್ಯ, ಸೆಟೆದು ನಿಲ್ಲುವ ಸ್ಥೈರ್ಯ, ಅ೦ಜದೆ ಮಾತನಾಡಬಲ್ಲ ಶಕ್ತಿ ಆ ಹೆಣ್ಣುಮಗಳಿಗಿದೆ ಎ೦ದು ಸಣ್ಣದಾಗಿ ಅನಿಸಲು ಶುರುವಾಯಿತು. ತನಗೆ ಹೇಳಬೇಕಾಗಿರುವುದನ್ನು ಹೇಳಿಯೇ ತೀರುವ ಅವಳ ಜಾಣತನ, ಅನ್ಯಾಯವನ್ನು ಸಹಿಸದೆ ತನ್ನ ಸಿಟ್ಟು ವ್ಯಕ್ತಪಡಿಸುವ ಅವಳ ಮೊ೦ಡಾಟಿಕೆ, ಗ೦ಡನನ್ನು ಬೈಯ್ಯುವ ಅವಳ ಪ್ರೀತಿ ವಿಶೇಷವಾಗಿ ಕಾಡಲು ಶುರುವಾಯಿತು. ಅ೦ತಿ೦ತವನೇ ಆದರು ಆ ಮನೆಯಲ್ಲಿ ಅವನ ಹೆ೦ಡತಿಗೆ ವಾಕ್ ಸ್ವಾತ೦ತ್ರವನ್ನು ಕೊಟ್ಟ ಅವಳ ಗ೦ಡನ ಮೇಲೆ ಗೌರವ ಮೂಡಿ ಬ೦ತು.
 
ಇವರಿಬ್ಬರೂ, ಇವೆಲ್ಲವೂ  ಸ್ವಾ೦ತ೦ತ್ರ್ಯದ ಪ್ರತೀಕದ೦ತೆ ಭಾಸವಾಯಿತು ಶಾ೦ತಳಿಗೆ. ಆ ಪುಟ್ಟ ಗುಡಿಸಲಿನ ದ೦ಪತಿಗಳಿಗೆ ತನ್ನನ್ನೂ ತನ್ನ ಸ೦ಸಾರವನ್ನು ಹೋಲಿಸಿಕೊ೦ಡಳು. ಅವಳ ಮನಸು ಭಾರವಾಗಿ ಕಣ್ತು೦ಬಿ ಬ೦ತು. ಏನೂ ಬರೆದುಕೊಳ್ಳಲಾಗದೆ ದೀರ್ಘವಾಗಿ ಯೋಚಿಸತೊಡಗಿದಳು, ಮತ್ತದೇ ಸ್ತ್ರೀ, ಸ್ವಾತ೦ತ್ರ್ಯ, ಸ್ತ್ರೀ ಸ್ವಾತ೦ತ್ರ್ಯ …….  


Friday, October 3, 2014

Hi Ghalib......

ಈ ಹೊತ್ತಿನಲ್ಲಿ
ನಿನ್ನ ಭೇಟಿ
ಬೇಡವಾಗಿತ್ತು
ಗಾಲಿಬ್....

ಪ್ರೀತಿ, 
ಪ್ರೀತಿಯಲ್ಲ,
ಪ್ರೀತಿಯ ಕವನ ಅದಲ್ಲವೇ ಅಲ್ಲ!!
ಹ ಹ! ಕವನ ಮಾತ್ರ
ಪ್ರೀತಿಯ ಕುರಿತು ಎಂದೆ ....

ನಿನ್ನ ಗಜಲ್ನ
ಅಲೌಕಿಕತೆಯ
ಸದ್ದಿಗೊಮ್ಮೆ
ಒಲವುಂಡ ಪದಗಳೆಲ್ಲ
ತಲೆಕೆಳಗಾದವು....

ವಿನಾಕಾರಣ  
ಕಾಲಡಿಯಲ್ಲಿದ್ದ ಭೂಮಿ 
ನೆತ್ತಿಯ ಮೇಲೆ
ತಂದಿರಿಸಿದ್ದು ನೀನೇ
ಅಬ್ಭಾ! ಹೃದಯ ಭಾರ ....

ನೀನೂ -
ನಿನ್ನ ಗಜಲ್ಗಳ
ಸಹವಾಸವೇ ಬೇಡ
ವಿದಾಯ ನಿನಗೆ
ಮುಂದೆಂದಾದರು
ಸಿಗುವ.....

......... ಇಲ್ಲ,ಆವರಿಸಿಯೇಬಿಟ್ಟೆ!
ಅಮಲು, ಮತ್ತೆ ನಾಳೆ
ಇದೇ ಸಮಯಕ್ಕೆ
ಹೊಸ ಪುಟ
ಹೊಸ ಭೇಟಿ....

ಪಂಜುವಿನಲ್ಲಿ ............

http://www.panjumagazine.com/?p=8071


ಸೌಮ್ಯ : ಅಪ್ಪನ ಕುಡಿತಕ್ಕೆ, ಸಾಲಗಳಿಗೆ ಬಲಿಯಾಗಿ ನಗರದಲ್ಲಿ ಮನೆಕೆಲಸಕ್ಕಿರುವ ೮ ವರುಷದ ಬಾಲಕಿ. 
ರಾಜು : ಹೆತ್ತವರ ಆರನೇ ಕುಡಿ, ವಯಸ್ಸು ೧೧! ತನ್ನೂರ ಬಿಟ್ಟು ನಗರಕ್ಕೆ ಬಂದು ಯಾವುದೋ ಟೀ ಅಂಗಡಿಯಲ್ಲಿ ಕೆಲಸಕ್ಕಿದ್ದಾನೆ. 
ದೀಪ : ತಾನು ಕಲಿಯುತಿದ್ದ ಶಾಲೆಯ ಶಿಕ್ಷಕನಿಂದಲೇ ಲೈಂಗಿಕ ದೌರ್ಜ್ಯನಕ್ಕೊಳಗಾಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಪಡೆಯುತ್ತಿರುವ ಮುಗುದೆ. 
ರವಿ : ಪರೀಕ್ಷೆಯಲ್ಲಿ ಕಡಿಮೆ ಅಂಕಗಳ ಪಡೆದ ಕಾರಣ ಅಮ್ಮ ಬೈದಳೆ೦ದು, ಸಮಾಜದ ಒತ್ತಡಕ್ಕೆ ಮಣಿದು ಆತ್ಮಹತ್ಯೆಗೆ ಶರಣಾದ ೧೪ ವರುಷದ ಬಾಲಕ. 
ಚೈತ್ರ : ಹದಿಮೂರು ವರುಷದ ಬಾಲಕಿ, ಆಗಲೇ ಗರ್ಭಿಣಿ. 
ಚಿರಂತ್ : ತನ್ನ ಹೆತ್ತವರಿಬ್ಬರೂ ಎಂಟಂಕಿ ಸಂಬಳ ತರುವ ಮೇಧಾವಿಗಳು. ಮಗನಿಗಾಗಿ ಅವರ ಬಳಿ ಸಮಯವಿಲ್ಲ. ತನ್ನ ೧೨ನೇ ವಯಸ್ಸಿನಲ್ಲಿ ಸಿಗರೇಟು, ಗಾಂಜಾ ಸೇವನೆ! ಈಗ ಮಾನಸಿಕ ಅಸ್ವಸ್ಥ. 
ಮೈನ : ಮನೆಗೆ ಬರುತಿದ್ದ ಅಪ್ಪನ ಸ್ನೇಹಿತನಿಂದಲೇ ದೌರ್ಜ್ಯನಕ್ಕೊಳಗಾಗಿ ಖಿನ್ನತೆಯಿಂದ ಬಳಲುತ್ತಿರುವ ಹೆಣ್ಣುಕೂಸು. 
ಸುಂದರ್ : ಅವನ ಊರು ಕೇರಿ ತಿಳಿಯದು! ಹಸಿವಿನಿಂದ ಬಳಲಿ, ಕಂಗಾಲಾಗಿ ಕಡೆಗೆ ಅಂಗಡಿಯವನನ್ನೇ ಚಾಕುವಿನಿಂದ ಇರಿದು ಕೊಂದ ಅಪ್ರಾಪ್ತ. 
ಲಿಲ್ಲಿ / ಸಮೀರ : ಮೈನೆರೆಯುವ ಮುನ್ನವೇ ಹೊರ ದೇಶಕ್ಕೆ ಮಾರಾಟವಾದ ಹೆಣ್ಣು ಮಕ್ಕಳು. 
ಆಶ್ರಮ : ಆರರಿಂದ ಹದಿನಾರು ವಯಸ್ಸಿನ ಮಕ್ಕಳನ್ನು ಸಾಕುತಿದ್ದ ಅನಾಥಾಶ್ರಮದ ಮುಖ್ಯಸ್ಥನಿಂದಲೇ ಮಕ್ಕಳಿಗೆ ಕಿರುಕುಳ, ಹಿಂಸೆ.  
ಚಂದ್ರು : ಎಲ್ಲದರಲ್ಲೂ ನಂಬರ್ ೧ ಇರಲೇಬೇಕೆಂದು ಅಪ್ಪ ಅಮ್ಮನ ಒತ್ತಡ, ಆಟ-ಪಾಟ-ನೃತ್ಯ-ಸಂಗೀತ-ಕಲೆ ಎಲ್ಲೆದರಲ್ಲೂ ಮುಂದಿರಬೇಕು. ಅಪ್ಪ ಅಮ್ಮನ ಕನಸುಗಳಿಗೆ ಇವನ ಕನಸುಗಳು / ಆಸೆಗಳೆಲ್ಲವು ಬಲಿ. 
ಬಣ್ಣ ಬಣ್ಣದ ಚಿಟ್ಟೆಗಳು
ಕಲ್ಪನೆಗಳ ರೆಕ್ಕೆಗಳು
ಮುದುಡಿವೆ
ಕಡೆದಿವೆ,
ಇನ್ನೆಂದೂ ಹಾರಲಾರವು…..
 
ರಂಗು ರಂಗಿನ ಬಿಲ್ಲು
ಗಗನವೆಲ್ಲಾ ಆವರಿಸಿದ್ದರೂ
ಬಣ್ಣಗಳೆಲ್ಲ  ಕಮರಿವೆ,
ಕದಡಿವೆ
ಎಲ್ಲವೂ ಅಸ್ಪಷ್ಟ….. 
ಇವು ಉದಾಹರಣೆ ಮಾತ್ರವಲ್ಲ! ಪ್ರತಿ ನಿತ್ಯ ಒಂದಲ್ಲ ಒಂದು ರೀತಿಯ ದೌರ್ಜ್ಯನಕ್ಕೊಳಗಾಗುತಿರುವ ನಮ್ಮ ಸಮಾಜದ ಮುಗ್ಧ ಪೀಳಿಗೆಯ ಒಂದು ಸಣ್ಣ ಝಲಕ್. ಆಗಷ್ಟೇ ಚಿಗುರಬೇಕಿದ್ದ ಪುಟ್ಟ ಹೃದಯಗಳು, ಆಗಲೇ ಜೀವನದ ಅನೇಕ ಕಷ್ಟಗಳನ್ನು ಎದುರಿಸಿ ತಮ್ಮ ಬಾಲ್ಯವನ್ನು ಕಳೆದುಕೊಂಡ ಅಮಾಯಕ ಮನಸುಗಳ ವ್ಯಥೆ. 
ಮಕ್ಕಳಿಗೆ ಆಶ್ರಯವಾಗಿ ನೆರವಾಗಿ ನಿಂತ ಸಮಾಜ ಒಂದೆಡೆಯಾದರೆ, ಅವರನ್ನು ಒಂದಲ್ಲ ಒಂದು ರೀತಿಯ ದೌರ್ಜನ್ಯಕ್ಕೆ ದೂಡುತಿರುವ ವರ್ಗ ಮತ್ತೊಂದೆಡೆ. ಅಷ್ಟಕ್ಕೂ ಆ ವರ್ಗದಲ್ಲಿರುವ ಜನರು ಸಹ ನಾವೇ ತಾನೆ? ಮಕ್ಕಳ ಮನಸ್ಥಿತಿ ಅರಿಯದಷ್ಟು ಮೌಢ್ಯ, ಮನುಷ್ಯರೆಂಬುದನ್ನೇ ಮರೆಸಿ, ಮೌಲ್ಯಗಳೆಲ್ಲ ಮಾಯವಾಗಿಸಬಲ್ಲ ಕ್ರೌರ್ಯ!!  ಮುಗ್ಧ ಸ್ವಭಾವಕ್ಕೆ ಸ್ಪಂದಿಸಲಾರದ ಮನಸುಗಳೇ ಅವು?

ಆದುನಿಕತೆಯ ಪ್ರಭಾವ! ಎಲ್ಲರನ್ನೂ ಓಡಿಸುತ್ತಿದೆ, ಬದುಕಲು ಸಮಯವೇ ಇಲ್ಲವೇನೋ ಎಂಬಂತೆ ದೌಡಾಯಿಸುತ್ತಿದೆ! ಆ ಬಾಲ್ಯ ಇನ್ನೆಲ್ಲಿ? ಎಲ್ಲವೂ ಕಳೆದು ಹೋಗುತ್ತಿದೆ! ನಾ ಮುಂದು, ತಾ ಮುಂದು ಎನ್ನುವ  ಹಪ-ಹಪಿಯಲ್ಲಿ ನೈಜತೆ ಮರೆ. ಇನ್ನು ಟಿವಿ, ಮೊಬೈಲ್, ಇಂಟರ್ ನೆಟ್ ಬಳಕೆ ಬೇಕಾಗಿರುವುದರ ಜೊತೆ ಬೇಡವಾಗಿರುವುದನ್ನೇ ಹೆಚ್ಚಾಗಿ ಮಕ್ಕಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿದೆ. ತಮ್ಮ ವಯಸ್ಸಿಗೆ ಮೀರಿದ  ಬೆಳವಣಿಗೆ, ನಡುವಳಿಕೆ ಹಾಗು ಚಿಂತನೆ.  
ಪುಟ್ಟ ಮಕ್ಕಳಿಗೂ ಸಹ ಗೊತ್ತು :
ಕಾಗದದ ದೋಣಿ – ದೋಣಿಯಲ್ಲ
ಬೀಜ ನುಂಗಿದರೆ – ಮರವಾಗೋಲ್ಲ
ನವಿಲು ಗರಿಯಿಂದ – ಪಾಸಾಗೋಲ್ಲ
ಆಕಾಶದ ನೀಲಿ – ಬಣ್ಣವಲ್ಲ
ಚಿಂದಿರನ ಬಿಂಬ – ಚಿತ್ರವಲ್ಲ
ಸೂರ್ಯನ ಬಳಿ – ಲಾಂದ್ರವಿಲ್ಲ
"ಈ"ಎಂದರೆ ಈಶನೊಬ್ಬನೇ ಅಲ್ಲ…. ಎಂದು 
ಈ ಸ್ಥಿತಿಗತಿಗಳಿಗೆ ಕಾರಣಗಳು ಒಂದೇ – ಎರಡೆ! ನಮ್ಮಿ೦ದಾದರು ಏನು ಮಾಡಲು ಸಾಧ್ಯ? ಬೆಂಬಲವಾಗಿ, ಸಹಾಯವಾಗಿ ನಾವಿದ್ದೇವೆಯೇ? ನನ್ನದೂ ಸಹ ಕೆಲವು ಪ್ರಶ್ನೆಗಳಿವೆ, ಆತಂಕಗಳಿವೆ….  
ಮಕ್ಕಳ ಮೂಲಕ ತಮ್ಮ ಆಸೆಗಳನ್ನು ಪ್ರತಿಷ್ಠೆ ಘನತೆಗಳನ್ನು ಮೆರೆಯುವ ತಂದೆ ತಾಯಂದಿರು ಬದಲಾಗುವುದು ಎಂದು? ಮಕ್ಕಳಿಗೆ ಮುನ್ನುಗ್ಗುವ, ಗೆಲ್ಲುವ ಮಾರ್ಗ ಒಂದಿದ್ದರೆ ಸಾಕೆ? ಅವರಿಗೆ ಸೋಲನ್ನು ಎದುರಿಸುವ ಬಗ್ಗೆ ಹೇಳಿಕೊಡುವುದು ಅತ್ಯಗತ್ಯ. ಗೆದ್ದಾಗ ಅವರೊಟ್ಟಿಗಿರುವುದ ಸಹಜ ಸರಿ, ಸೋತಾಗಲೇ ಅಲ್ಲವೇ  ಮಕ್ಕಳಿಗೆ ಹೆತ್ತವರ ಅವಶ್ಯಕತೆ ಹೆಚ್ಚು. ಮುದ್ದು, ಅಪ್ಪುಗೆ, ಸ್ಪರ್ಶ ಎಲ್ಲವೂ ಮಕ್ಕಳ  ಪಾಲಿನ ಹರುಷ! ಅವರಿಗೆ ಸಲ್ಲಬೇಕಾದಷ್ಟು ಸಲ್ಲಿರುವುದೆ? 
ಹೋಲಿಕೆ! ಒತ್ತಡವೇರಿಸಿ ಕೀಳರಿಮೆ ಮೂಡಿಸಬಲ್ಲ ಅಸ್ತ್ರ. ಕುಗ್ಗಿಹೋಗುವ ಮನಸುಗಳಿಗೆ ಬಾರುಕೋಲಿನ ಪೆಟ್ಟು. ರೆಕ್ಕೆಗಳನ್ನ ಕಟ್ಟಿಹಾಕದೆ ಹಾರಲು ಬಿಟ್ಟರಲ್ಲವೇ ಸ್ವಾವಲಂಬಿಗಳಾಗಲು ಸಾಧ್ಯ! ನಡೆಯಬೇಕು, ನಡೆಸಬೇಕು, ಬೀಳಬೇಕು, ಏಳಬೇಕು, ಪೆಟ್ಟಾಗಬೇಕು, ಕಲೆ ನಿಲ್ಲಬೇಕು, ಪಾಠ ಕಲಿಯಬೇಕು. ಅವರದ್ದೇ ಸ್ವಂತಿಕೆಯನ್ನು ಕಟ್ಟಿಕೊಡಲು ನೆರವಾಗಬೇಕಾದವರು ನಾವು. 
ಬೇಕೆಂದರೂ ಬೇಡವೆಂದರೂ ಮಕ್ಕಳಿಗೆ ಲೈಂಗಿಕ ಶಿಕ್ಷಣ ಇಂದಿನ ಅನಿವಾರ್ಯತೆ / ಅವಶ್ಯಕತೆ. ಕೆಟ್ಟ ದೃಷ್ಟಿಗಳ ಸೂಕ್ಷ್ಮತೆಯ ಅರಿವು ಸಣ್ಣ ವಯಸ್ಸಿನಲ್ಲೇ ಮೂಡಿಸದಿದ್ದರೆ ಬಲಿಪಷುಗಳಾಗುವುದು ಈ ಹೂ ಹೃದಯದ ಎಳೆ ಚಿಗುರುಗಳು. ಮುಕ್ತವಾಗಿ ಚರ್ಚಿಸದಿದ್ದರು, ಮುಜುಗರ ಮುರಿದು ಹೆತ್ತವರು ಮಕ್ಕಳಿಗೆ ತಮ್ಮದೇ ರೀತಿಯಲ್ಲಿ ಅರಿವು ಮೂಡಿಸುವ ಅವಶ್ಯಕತೆಯಿದೆ.  
ಇನ್ನು ಮಕ್ಕಳ ಮುಗ್ಧ ಪ್ರಶ್ನೆಗಳಿಗೆ ಕಡಿವಾಣ! ಮುಕ್ತವಾಗಿ ಪ್ರಶ್ನಿಸುವ ಅಧಿಕಾರ ಅವರಿಗಿಲ್ಲವೇಕೆ? ಪ್ರಷ್ನಿಸಿದರಲ್ಲವೆ ಸೃಜನಶೀಲತೆಗೆ, ತಮ್ಮಲ್ಲಿ ಅಡಗಿರುವ ಕ್ರಿಯೇಟಿವಿಟಿಯ ಮೊಳಕೆಗಳಿಗೆ ನೀರುಣಿಸಲು ಸಾಧ್ಯ! ಪ್ರಶ್ನಿಸುವ ಹಕ್ಕು, ಅಭಿಪ್ರಾಯ ವ್ಯಕ್ತಪಡಿಸಲು ವೇದಿಕೆ, ಅದನ್ನು ಗೌರವಿಸುವ ಪದ್ಧತಿ ಮನೆಯಿಂದಲೇ ಮೊದಲಾಗಬೇಕು. ತಮಗಾಗುವ ಅನ್ಯಾಯವನ್ನು ಸಹಿಸುವುದು ಸರಿಯಲ್ಲ, ಇಂದಿಗೂ ಸಹ – ಮುಂದೆಯೂ ಸಹ. ಉತ್ತರಗಳು ಬೇಕೆಂದಾದರು, ಸಿಗದೇ ಹೋದರು ಪ್ರಶ್ನಿಸಲೇ ಬೇಕು. ಸಹನೆಯ ಇತಿಮಿತಿಗಳನ್ನು ಜೀವನವೇ ಕಲಿಸುತ್ತದೆ, ಉಳಿದಂತೆ ಮನೋಬಲ ಹೆಚ್ಚಿಸುವುದು ನಮ್ಮ ಕರ್ತವ್ಯ. 
ನಮಗೆ ದೊರೆಯದಿರುವುದು ನಮ್ಮ ಮಕ್ಕಳಿಗಾದರು ಸಿಗಲೆಂದು ಬಯಸುವ ಪರಿ, ಮಕ್ಕಳಲ್ಲಿ ವಸ್ತುಗಳ ಮೌಲ್ಯತೆ ಕುಗ್ಗಿಸುತ್ತಿದೆ. ತಮಗೆ ಬೇಕಾದನ್ನು ಪಡೆಯಲು ಅವರು ಕಷ್ಟವೇ ಪಡಬೇಕಿಲ್ಲ, ಎಲ್ಲವೂ ಸುಲಭವಾಗಿ ದೊರೆಯುತ್ತಿದೆ! ತುಡಿತ – excitement ಕ್ಷಣಾರ್ಧದಲ್ಲಿ ಮಾಯ!! ಬಯಸಿದ್ದನ್ನು ಪಡೆಯಬೇಕು ಎನ್ನುವುದಕ್ಕಿಂತ ಅದನ್ನು ಗಳಿಸಿಕೊಳ್ಳೊಬೇಕು ಎನ್ನುವ ಜ್ಞಾನೋದಯವೇ ಸೂಕ್ತ.   
ಮಕ್ಕಳಿಗಾಗಿ, ಅವರ ರಕ್ಷಣೆಗಾಗಿ ಹೆಲ್ಫ್ ಲೈನ್ ಗಳು / ಎನ್ ಜಿ ಓಗಳು ಪ್ರಯತ್ನಿಸುತ್ತಿವೆ. ಶಾಲೆಯಲ್ಲಿ, ಮನೆಯಲ್ಲಿ ಸಹಾಯವಾಣಿಗಳ / ಫೋನ್ ನಂಬರ್ ಗಳನ್ನು ಬಾಯಿಪಾಟ ಮಾಡಿಸುವುದು ಅತ್ಯವಶ್ಯಕ. 
ಮಕ್ಕಳ ಮನೋವಿಕಾಸ, ಪರಿಪಕ್ವತೆ, ವ್ಯಕ್ತಿ ವಿಕಸನದ ಪ್ರೇರಣೆ / ಪ್ರಚೋದನೆ ನಾವುಗಳೇ.ನಿಲ್ಲದೇ ಸಾಗುತಿರಲಿ ನಮ್ಮ ಪ್ರಯತ್ನ ಮುದ್ದು ಕಂದಮ್ಮರನ್ನು ನಾಡಿನ ಉತ್ತಮ ಪ್ರಜೆಗಳನ್ನಾಗಿ ಮಾಡುವಲ್ಲಿ, ದೌರ್ಜನ್ಯಕ್ಕೆ ಆಹುತಿಯಾಗದಂತೆ ರಕ್ಷಿಸುವುದರಲಿ, ಆತ್ಮವಿಶ್ವಾಸ  ತುಂಬುವುದರಲ್ಲಿ. 

Quietly Done!

Quietly Done! Off late, I've been choosing my circle, selective and true. Just a few connections who actually shine and comfort me throu...