Sunday, July 15, 2012

ಹಾಡೊಂದು ಇಷ್ಟವಾಗಿಹೋಗಿದೆ



ಒಂದು ಹಾಡು ನಮ್ಮ ನೆಚ್ಚಿನ ಹಾಡುಗಳ ಸಾಲಿಗೆ ಸೇರೋದು ಯಾವಾಗ? ನಮ್ಮ ಫೇವರಿಟ್ ಆಗೋದು ಯಾವಾಗ? ಬಹುಶ ಆ ಹಾಡಿನ ಯಾವುದೋ ಒಂದು ಸಾಲು ನಮ್ಮನ್ನು ಆವರಿಸಿಕೊಂಡಂತೆ, ಹಾಡಿದವರ ಕಂಠದಲ್ಲಿ ಭಾವನೆಗಳು ಸರಾಗವಾಗಿ ಹರಿದಂತೆ, ಹಾಡಿನ ರಾಗ ಜೀವನದ ಯಾವುದೋ ಘಳಿಗೆಯನ್ನು ಸಂಯೋಜಿಸಿದಂತೆ, ಅದರ ಲಯ ಹೃದಯದ ಮೂಲೆಯಲ್ಲೆಲ್ಲೋ ಸಿಂಚನವಾದಂತೆ ಇರಬಹುದು. ಹೀಗೆ ಆವರಿಸಿಕೊಂಡು ಇಷ್ಟವಾದ ಹಾಡೊಂದನ್ನು ಆಗಷ್ಟೇ FM ನಲ್ಲಿ ಕೇಳಿಕೊಂಡು ಆಟೋ ಹತ್ತಿ ಆಫೀಸಿಗೆ ಹೊರಟೆ. ಆಗಷ್ಟೇ ಹೊಸದಾಗಿ ಬಿಡುಗಡೆ ಆದ ಕನ್ನಡ ಚಿತ್ರದ ಈ ಇ೦ಪಾದ ಹಾಡು ತುಂಬಾ ಇಷ್ಟವಾಗಿ ಹೋಗಿದೆ. ಅರೆ, ಇದೇನಿದು! ಈ ಹಾಡಿನ ನಡುವೆ ನನ್ನ ಕಂಪನಿಯ CEO ಕರೆ! ಇವರ ಮುಂದೆ ನಿಂತು ಎದುರ ಮಾತನಾಡುವ ವ್ಯಕ್ತಿಯನ್ನು ಇದುವರೆಗೂ ನಾನಂತೂ ಕಂಡಿಲ್ಲ. ಈಗ ಅವರ ಈ ಕರೆ! ಮಾತನಾಡಲು ಹೊರಟರೆ ಹಾಡಿನ ಪದಗಳು - ಸಾಹಿತ್ಯ - ಹಾಡನ್ನು ಕೇಳುವ ಸಂಭ್ರಮ ಎಲ್ಲವೂ ಸಧ್ಯಕ್ಕೆ ಮುಗಿದೇ ಹೋಗುವುದ೦ತು ನಿಶ್ಚಿತ. ಮಾಲೀಕರ ಈ ಕರೆಯನ್ನು ನಿರಾಕರಿಸಿದರೆ ಹೇಗೆ? ಆ ಅರೆ ಘಳಿಗೆ ಮನಸು ನಿರಾಕರಿಸುವಂತೆ ಸೂಚಿಸಿದೆ, ಆದರೆ ಈ ಸೂಚನೆಗೆ ಮುಂಚೆಯೇ ಕರೆ ನಿರಾಕರಿಸಿ ಆಗಿದೆ. ಹಾಡು ಸಂಪೂರ್ಣವಾಗಿ ಕೇಳಿದ ನಂತರ ತಕ್ಷಣವೇ ಕರೆ ಮಾಡಿ ಮಾತನಾಡಿದೆ.

ಇವರ ಕರೆ ನಿರಾಕರಿಸುವಷ್ಟು ಪ್ರಭಾವ ಈ ಹಾಡಿಗೆದೆಯೇ? ಪ್ರಾಮಾಣಿಕತೆಯಿಂದ ಮಾಡುವ ಕೆಲಸವೇನೋ ಸರಿ! ನಡುವೆ ಹಾಡು ಕೇಳುವುದೂ ಸಹ ಒ೦ದು ಸಣ್ಣ ಸಂಭ್ರಮ. ಕರೆ ನಿರಾಕರಿಸಿದ ಘಳಿಗೆ - 'ಪರಪಂಚ' ಮುಳುಗಿ ಹೋಗಲಿಲ್ಲ - ಕೆಲಸ, ಕಂಪನಿ, ಎಲ್ಲವೂ ಅದರದರ ಸ್ಥಾನಗಳಲ್ಲಿ ಹಾಗೆಯೇ ಇವೆ. ನನ್ನ ಈ ಸ್ವಾರ್ಥ, ಈ ಧೈರ್ಯ, ಈ ವರ್ತನೆ ಎಷ್ಟು ಸಮ೦ಜಸವೋ ತಿಳಿಯುತ್ತಿಲ್ಲ! ಸಾಂತ್ವನ ಹೇಳುವಂತೆಯೋ - ಗೇಲಿಮಾಡಿದ೦ತೆಯೋ ಸೂರ್ಯ ಅಲ್ಲಿಂದಲೇ ನನ್ನೆಡೆ ನೋಡಿ ಸಣ್ಣದೊಂದು ಎಳೆ ಬಿಸಿಲಿನ ನಗೆ ರವಾನಿಸಿದ್ದ. ಇವುಗಳ ನಡುವೆ ಅದೇ ಹಾಡಿನ ಸಾಲೊಂದು ಮತ್ತೆ ನೆನಪಾಯಿತು. ಇಷ್ಟಕ್ಕೂ ಸಣ್ಣ ಸಣ್ಣ ವಿಚಾರಗಳಲ್ಲಿ ಅಡಗಿರುವ ಸಂಭ್ರಮದ ಒಡನಾಟ - ಹುಡುಕಾಟ ಇಂದಿಗೂ ಜಾರಿಯಲ್ಲಿದೆ.

3K - ಪ್ರೇಮ ಕವನಗಳ ಕಾಶಿ

ಸಣ್ಣ ಪುಟ್ಟ ನಾಕು ಸಾಲಿನ ಕವನಗಳೆಲ್ಲ ಈಗ ದೊಡ್ಡ ದೊಡ್ಡ ಕವನಗಳ ರೂಪ ತಾಳುತಿದೆ. ಎಲ್ಲರೂ ಪ್ರೇಮ ಕವಿಗಳೇ ಎನ್ನುವ೦ತೆ ಸಧ್ಯಕ್ಕೆ ಹೆಚ್ಚೆಚ್ಚು ಪ್ರಕಟವಾಗುತಿರುವುದು ಪ್ರೇಮ ಕವನಗಳೇ! 3K ಸಮುದಾಯದಲ್ಲಿ ಈಗ ಪ್ರೀತಿ - ಪ್ರೇಮ - ಪ್ರಣಯದ ಕವನಗಳ ಪದ ಪುಂಜ ರಾಶಿ! ಎಲ್ಲರ ಕವನಗಳಲ್ಲಿಯೂ ಪ್ರೀತಿಯದೇ ಕಾರುಬಾರು - ಇವೆಲ್ಲ ಓದುತಿದ್ದರೆ ಪ್ರೇಮಿಗಳ ನಗರಕ್ಕೆ ಬಂದಂತಿದೆ. ನೇರ ಹೃದಯಕ್ಕೆ ಲಗ್ಗೆ ಇಡುವ ಸಾಲುಗಳು! ಮತ್ತೊಮ್ಮೆ ಪ್ರೀತಿಯಲ್ಲಿ ಬೀಳುವ೦ತೆ ಮನಸಾದರು ಆದೀತು. ಹೀಗೆ ಈ ಪ್ರೇಮ ಕವನಗಳ ಓದುವಾಗ ಮನಸಲಿ ಮೂಡಿಬಂತು ಈ ಸಾಲು "Have Just Fallen In Love With Live.... All Over Again". ಜೀವನವನ್ನು ಅತಿಯಾಗಿ ಪ್ರೀತಿಸುವಂತೆ ಮಾಡುವುದೇ ಈ ಪ್ರೀತಿ! ಮತ್ತೊಮ್ಮೆ ಜೀವನವೆಂಬ ಪ್ರೀತಿಯಲ್ಲಿ ಬೀಳುವ ಆಸೆ ಈ ಕವನಗಳು ಮೂಡಿಸುತ್ತಿವೆ.

ಹೀಗೆ ಈ ಕವನಗಳನ್ನು ಓದುವಾಗ ಹೀಗೊಂದು ಸಂಗತಿ ಗಮನಿಸಿದೆ! ಪ್ರೇಮ ಕವನಗಳನ್ನು ಹುಡುಗ ಹುಡುಗಿಯರೂ (ಕವಿಗಳು) ಇಬ್ಬರೂ ಬರೆಯುತಿದ್ದಾರೆ. ಇಬ್ಬರ ಪ್ರೇಮ ಕವನಗಳಲ್ಲೂ ಮೂಡಿಬರುತಿರುವ ವಸ್ತು,
  • ಸಂಗಾತಿ ಹೀಗಿರಬೇಕು
  • ಭಗ್ನ ಪ್ರೇಮ / ವ೦ಚನೆ
  • ಮೋಸಹೋದ ಹೃದಯ
  • ಕಾಡುವ ಪ್ರೇಮಿ
  • ಜೊತೆಯಲ್ಲಿ ಕಳೆದ ದಿನಗಳು
  • ಆಣೆ : ಭಾಷೆ
  • ಅವಳ ಸೌಂದರ್ಯ / ಅವನ ಗುಣಗಾನ
  • ಗಾಯಗೊಂಡ ಪ್ರೀತಿ
  • ಕಳೆದುಹೋದ ಹುಡುಗ / ಹುಡುಗಿ
ಈ ಕವನಗಳ ಜೀವಾಳ ಒಂದೇ ಆದರು ಅದನ್ನು ತಮ್ಮದೇ ಆದ ಭಾವಗಳಲ್ಲಿ ಹುಡುಗ - ಹುಡಗಿಯರಿಬ್ಬರೂ ಹೇಳಿಕೊಳ್ಳುತಿರುವ ವಿಭಿನ್ನ ರೀತಿ ಮನಸೆಳೆಯುವ೦ತದ್ದು . ಒಂದೆಡೆ ಮುಗ್ಧ ಹುಡುಗಿಯ ಹೃದಯ ಕದ್ದು ಪರಾರಿಯಾಗುವ ಹುಡುಗನಾದರೆ, ಮತ್ತೊಂದೆಡೆ ಅಮಾಯಕ ಹುಡುಗನ ಪ್ರೀತಿ ನಿರಾಕರಿಸಿ ಹೋದ ಹುಡುಗಿ. ಹಾಗಿದ್ದರೆ, ಇದು ನಿಜವೇ ಆಗಿದ್ದರೆ, ಒಂದಂತು ಖಾತರಿಯಾಗುತ್ತಿದೆ! ಒಳ್ಳೆಯ ಹುಡುಗನಿಗೆ ಗುಣವಂತೆ ಸಿಗಲಾರಳೋ ಅಥವಾ ಒಳ್ಳೆಯ ಹುಡುಗಿಗೆ ಹೃದಯವಂತ ಸಿಗಲಾರನೋ, ಅಂತೂ ಒಬ್ಬರಿಗೊಬ್ಬರು ಸಿಗದೇ 3K ಯಲ್ಲಿ ಕವನಗಳಾಗಿ ಹೋಗುತಿದ್ದಾರೆ. ಪ್ರೇಮ ಕವನಗಳಲ್ಲಿ ಪದಗಳಾಗಿಬಿಡುತಿದ್ದಾರೆ. ಕೆಲವು ಸ್ವಂತ ಅನುಭವಗಳಾಗಿದ್ದರೆ, ಹಲವು ಕಾಲ್ಪನಿಕವಿರಬಹುದು, ಇನ್ನು ಕೆಲವು ಅವರಿವರ ಕಂಡು ಬರೆದಿರಲೂ ಬಹುದು. ಅದೇನೇ ಇದ್ದರು ಇವರ ಮಟ್ಟಿಗೆ ಪ್ರೀತಿಯನ್ನು ಅನುಭವಿಸಿ ಬರೆದಿರಬಹುದೆ೦ಬುದಕ್ಕೆ ಈ ಕವನಗಳೇ ಸಾಕ್ಷಿ.

ಪ್ರೀತಿ ಪ್ರೇಮ ತುಂಬಿದ ಕವನಗಳ ನಡುವೆ ವಿಭಿನ್ನತೆ ಹೊಂದಿರುವ ಇತರ ವಿಚಾರಗಳ ಕವನಗಳನ್ನು ಓದುವಾಸೆ ಮನಸಿನ ಮೂಲೆಯಲ್ಲೆಲ್ಲೋ ಮೊಳಕೆ ಹೊಡೆಯುತ್ತಿದೆ.
"ಹರಟೆಕಟ್ಟೆ" ಎಂಬ ರೈಲುಬಂಡಿ

"ಹರಟೆಕಟ್ಟೆ" ಎಂದು ನವೀನ್ ಶುರುಮಾಡಿಯಾಗಿದೆ! ಈ ಕಟ್ಟೆ ಹೇಗಿದೆಯೆಂದರೆ : ಹೊಸದೊಂದು, ಬಹು ದೊಡ್ಡದೊಂದು - ದೂರದೂರಿನ ಪಯಣಕ್ಕೆ ರೈಲು ಗಾಡಿ ಹತ್ತಿದಂತಿದೆ. ಈ ಸಾಗುವ ಪಯಣದಲ್ಲಿ ಒಬೊಬ್ಬರೇ ರೈಲು ಹತ್ತಿ ಸುತ್ತಮುತ್ತಲಿನ ಪ್ರಯಾಣಿಕರನ್ನು ಕಣ್ಣರಳಿಸಿ ನೋಡುವಂತೆ! ಈಗಷ್ಟೇ ನಮ್ರತೆಯ ಮಾತುಕತೆ ಶುರುವಿಟ್ಟ೦ತಿದೆ! ತಮ್ಮಲ್ಲಿರುವ ಬುತ್ತಿಗಳನ್ನೆಲ್ಲ ಬಿಚ್ಚಿ ಎಲ್ಲರೊಡನೆ ಹಂಚಿಕೊಳ್ಳುವ ಮನಸಾದಂತಿದೆ. ಇಲ್ಲಿ ಎಲ್ಲಾ ವಯಸ್ಸಿನ ಪ್ರಯಾಣಿಕರೂ ಏರಿದಂತಿದೆ.

ನಿಧಾನವಾಗಿ ಒಬೊಬ್ಬರ ಪರಿಚಯಗಳು ನಡೆಯುತ್ತಿವೆ. ಅರೆ! ಈ ಹುಡುಗರು ಎಷ್ಟು ಬೇಗ ಪರಿಚಿತರಾಗಿಬಿಡ್ತಾರೆ. ಎಷ್ಟೋ ವರ್ಷಗಳ ನ೦ಟಸ್ತಿಕೆ ಇರುವ ಹಾಗೆ ಒಬ್ಬೊಬ್ಬರನ್ನು ಅವರು ಕರೆದುಕೊಳ್ಳುತಿರುವ ಹೆಸರುಗಳು : ಗುರುವೇ, ಶಿವ, ಮಚ್ಚಿ, ತಂದೆ, ಮಗ, ಮಾಮ etc., ಹೀಗೆ. (ಚೆರ್ರಿ ಚರಣ್ ಹಾಗು ಕ್ವಿಕಿ ಅರುಣ್ ಇನ್ನಷ್ಟು ಪದಗಳನ್ನು ಹೇಳಿಕೊಟ್ಟಿದ್ದಾರೆ, ಯಾವ ಶಬ್ದಕೋಶ - ಪದಕೋಶ - ಅರ್ಥಕೋಶ - ನಿಘಂಟುಗಳನ್ನೆಲ್ಲಾ ಹುಡುಕಿದರೂ ಆ ಪದಗಳಿಗರ್ಥ ಸಿಗಲಾರದು). ಈ ಹರಟೆಕಟ್ಟೆ ತಮಾಷೆಯಾಗಿದೆ, ಕವನಗಳ ಹೊರತು ಬೇರೆಲ್ಲ ವಿಷಯಗಳು ಈ ಕಟ್ಟೆಯಲ್ಲಿ ಮಾತನಾಡಬಹುದು.

ಏನೇ ಆಗಲಿ ಹರಟೆಕಟ್ಟೆಯಿಂದಾಗಿ 3K ಎಂದರೆ ಎಲ್ಲರಿಗೂ ಪ್ರೀತಿ ಮೂಡಿಸುವಂತಾಗುತಿದೆ. ನವೀನನಿಗೊಂದು ಪ್ರೀತಿಯ ಧನ್ಯವಾದ. ಈಗಷ್ಟೇ ಈ ರೈಲು ಬಂಡಿ ಹೊಸದೊಂದು ತಿರುವು ಪಡೆಯಲು ಮುಂದಾಗುತಿದೆ.......................

ಪ್ರತಿ ಬೆಳಗೂ ಹೊಸತನ....

ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತ...