Wednesday, December 6, 2017

#88 - ಗೀಚು ಹೊತ್ತಿಗೆ

*********************
ಅರ್ಧ
ಮಾತು
ಒಂದರ್ಧ
ಮೌನ
ನಡುವಲ್ಲೆಲ್ಲೋ
ಒಂದು ಸತ್ಯ !!

ಸಣ್ಣ
ಆಣೆ
ಎರಡು
ಗುರುತು
ಮತ್ತದೇ ನಾಟಕ
ಒಂದು ಮರೆವು !!

ಪುಟ್ಟ
ಹೃದಯ
ಮೊನಚು
ನೋಟ
ಹಗಲುಗನಸಿನಲೂ
ಒಂದು ಸುಳ್ಳು !!

ಚಂದಿರನಿಗೀಗ
ಚಾಡಿ
ಹೇಳುವ ಸಮಯ ....
- RS

Sunday, November 5, 2017

ನಸುಕಿನ ಕನವರಿಕೆಗಳು


ಬರೆದು ಮನದಟ್ಟಾಗಿಸಬೇಕು....
ಮನದ ಮರೆಯ ನೆನಪು,
ಹೃದಯದ ಆಸುಪಾಸಿನಲ್ಲಿ 
ಬೆಚ್ಚಗಿನ ಕಾವು!!!
ನೆನೆದು ಮರೆತುಬಿಡಬೇಕು....
ಕಣ್ಣಂಚಿನಲ್ಲೇ ಕುಳಿತು ಒಳಗೆ ಬಾರದ ನಿದಿರೆ!
ಬಡಬಡಿಕೆಯ ಉಸ್ತುವಾರಿಯಲ್ಲಿ
ಕಳೆದುಬಿಡುವ ಮುಂಜಾವು!!!
ಆರಾಧಿಸಿ ಸ್ತುತಿಸಬೇಕು....
ಅಲಕ್ಷಿಸಿ, ಕಡೆಗಣಿಸಿದ ಕ್ಷಣಗಳ,
ಪ್ರೀತಿಯಲ್ಲಿನ ವೈಕಲ್ಯ .... ಮತ್ತೆ
ಶರಣಾಗತಿಯಲ್ಲಿನ ಜಾಣ್ಮೆ!!!
ಪ್ರಸವವದು ಅರಿವಿರಬೇಕು....
ಕೊಲ್ಲುವ ಆ ಪ್ರಕ್ಷುಬ್ಧ ಭಾವನೆಗಳ
ಮರುಜನ್ಮಕ್ಕೆ ಕಾರಣ
ಆ ನೋಟ... ಅವನ ಕುಡಿನೋಟ !!!
ಮುಂಜಾವಿನ ಹೊತ್ತಿಗೆ
ಮುಗುದೆಯ ಚಡಪಡಿಕೆ
ಕಳೆದು ಹೋದಳೆಂದು ಊರಲ್ಲೆಲ್ಲಾ ಗುಲ್ಲು
ತನ್ನನ್ನೇ ತಾನು ಹುಡುಕಿಕೊಳ್ಳುವ ನಕಲಿ ಕನಸು!!!

- RS

Tuesday, April 25, 2017

ವಾಟ್ಸಾಪ್ ರಾಯರೆ??


"ಅಷ್ಟು ಸಲ ಕಾಲ್ ಮಾಡ್ತಿದೀನಿ ತೆಗಿಯಕ್ಕೇನು ದಾಡಿ ನಿಂಗೆ.  ಅಪ್ಪ ಎಲ್ಲಿ??? ಲ್ಯಾಂಡ್ ಲೈನ್ಗೆ ಕಾಲ್ ಮಾಡಿದ್ರು ತೆಗೀತಿಲ್ಲ ... ಅಪ್ಪ ಎಲ್ಲಿ? ಎಲ್ಲೋದ್ರು.... ಆ ಮೊಬೈಲ್ ಹಿಡ್ಕೊಂಡು ಎಲ್ಲಾದ್ರೂ ಕೂತಿರ್ತಾರೆ ನೋಡು, ಅದೊಂದು ಕಯ್ಯಲ್ಲಿದ್ರೆ ಜವಾಬ್ದಾರಿಗಳೆಲ್ಲ ಮಾರ್ತೊಗಿರ್ತಾರೆ. ನಂಗೆ ನಂಗೆ ಬರ್ತಿರೋ ಸಿಟ್ಟಿಗೆ  ನೀನು ... ನೀನು ... ಛೇ !!! ಸುಮ್ನೆ ಫೋನ್  ಇಡು, ಮನೆಗೆ ಬಂದು ಮಾಡ್ತೀನಿ" , ಅಂತ ಆಫೀಸಿನ ಫೋನಲ್ಲಿ ತನ್ನ ಹೆಂಡತಿಗೆ ಗದರಿ ಫೋನ್ ಇಟ್ಟ ಸುಕೇಶ್. 

"ಯಾರಮ್ಮ ಫೋನಲ್ಲಿ... ನಿನ್ ಗಂಡನೇ? ನಾನ್ ಬರೋಷ್ಟ್ರಲ್ಲಿ ಆ  ಲ್ಯಾಂಡ್ ಲೈನ್  ಬಡ್ಕೊಂಡ್  - ಬಡ್ಕೊಂಡು ಕಟ್ ಆಯ್ತು. ಹೋಗ್ಲಿ ಬಿಡು. ಏನಂತೆ? ನನ್ನೇ ಬೈತಿರ್ತಾನೆ ನಂಗೊತ್ತು. ಮೊಬೈಲಲ್ಲಿ ನನ್ ಫ್ರೆಂಡು ಅಮೇರಿಕಾದಿಂದ ವಿಡಿಯೋ ಕಳ್ಸಿದಾನೆ, ಅಬ್ಬಬ್ಭಾ ಏನ್ ಚೆಂದ ಇದೆ ಅಂತೀಯಾ. ತುಂಬಾ ಖುಷಿಯಾಗಿದ್ದಾನೆ. ಅವ್ನ ಮಕ್ಕಳು ಮೊಮ್ಮಕ್ಕಳ ಜೊತೆ ತೆಗ್ಸಿರೋ ಡಿಸ್ನಿ ವರ್ಲ್ಡ್ ಫೋಟೋಗಳೂ ಇವೆ. ನಿಂಗೂ ವಾಟ್ಸಾಪ್ ಮಾಡ್ಲಾ?? ನೋಡ್ತೀಯ!" ಅಂದ್ರು ಶ್ರೀಪತಿ ರಾಯರು ಸೊಸೆಯ ಕಡೆಗೆ. 

"ಮಾವ, ನಿಮ್ಮ ಮಗ ಸಂಜೆ ಬಂದು ರಾದ್ಧಾಂತ ಮಾಡ್ತಾರೆ ಅನ್ಸುತ್ತೆ. ಅವ್ರ ಮುಂದೆ ಮೊಬೈಲ್ ಇಟ್ಕೊಂಡು ಕೂರ್ಬೇಡಿ. ಎಷ್ಟು ಸಲ ಹೇಳೋದು  ನಿಮ್ಗೆ. ನೀವು ಬೈಸ್ಕೊಳ್ತೀರ, ನಂಗೂ ಬೈಸ್ತೀರ. ನಂಗ್ಯಾವ್ದು ಫೋಟೋ ಗೀಟೊ ಕಳಿಸ್ಬೇಡಿ." ಅಂತ ಗೊಣಗಾಡಿಕೊಂಡೇ ತನ್ನ ರೂಮಿಗೆ ನಡೆದಳು ಸಂಜನಾ.  

ಹೊಸ ಮನೆ ಕಟ್ಟಿಸಿಕೊಂಡು ಹೋದ ಮೇಲೆ ರಾಯರಿಗೆ ಸ್ನೇಹಿತರ ಸಂಖ್ಯೆ ಕುಗ್ಗಿತ್ತು. ಇರುವ ಒಬ್ಬ ಮೊಮ್ಮೊಗನನ್ನು ಬೋರ್ಡಿಂಗ್ ಸ್ಕೂಲ್ ಸೇರಿಸಿದ್ದರು. ತಮ್ಮ ಒಂಟಿತನವನ್ನು ನಿವಾರಿಸಲು  ಆ ಸಮಯಕ್ಕೆ ಅವರ ನೆರವಿಗೆ ಬಂದಿದ್ದು ಆಂಡ್ರಾಯ್ಡ್ ಫೋನ್.  ಇನ್ನು ರಾಯರೇ ಹೇಳುವ ಹಾಗೆ ಸಾಕ್ಷಾತ್ ದೇವರೇ ನಿಂತು ಇವರಿಗಾಗಿ ವರವನ್ನು ಕರುಣಿಸಿದ್ದ ...... ವಾಟ್ಸಾಪ್ ಎನ್ನುವ ಅದ್ಭುತ್ತದ ಮೂಲಕ. ಅದನ್ನು ಅವರು, "ದೇವರ-ಕೊಂಡಿ" ಎಂದು ಹೆಸರಿಸಿಕೊಂಡಿದ್ದರು. ಜಗತ್ತಿನಲ್ಲಿ ಎಲ್ಲರೂ ಸದಾ ಸಂಪರ್ಕದಲ್ಲಿರಬೇಕು, ಖುಷಿಯಾಗಿರಬೇಕು. ಯಾರನ್ನು ಕಳೆದುಕೊಂಡ ಭಾವ ಮೂಡಬಾರದೆಂದು ಆ ದೇವರೇ ಈ ಅದ್ಭುತವನ್ನು ತಯ್ಯಾರಿಸಲು ಇದರ ಸೃಷ್ಟಿಕರ್ತರ ಕನಸಲ್ಲಿ ಬಂದು ಹೇಳಿರಬೇಕು ಎನ್ನುತಿದ್ದರು. 
 
ವಾಟ್ಸಾಪ್ ಮೂಲಕ ತಮ್ಮ ಸ್ನೇಹಿತರ ಜೊತೆ ಮತ್ತೊಮ್ಮೆ ಸಂಪರ್ಕ ಕುದುರಿಸಿಕೊಂಡರು. ಜೊತೆಗೆ ನೆರೆಹೊರೆಯವರು, ನೆಂಟರು, ಹಳೆಯ ಸಹೋದ್ಯೋಗಿಗಳು,  ಅಂಗಡಿಯವರು, ಎಲ್ಲರೊಂದಿಗೂ ವಾಟ್ಸಾಪ್ ಮೂಲಕ ಮಾತುಕತೆ, ವಿಚಾರ ವಿನಿಮಯ ಸರಾಗವಾಗಿ ಸಾಗುತಿತ್ತು.  ನೋಡುವವರಿಗೆ ತುಸು ಬೇಸರವೇ ಆದರೂ ರಾಯರು ಮಾತ್ರ ಈ ವಾಟ್ಸಾಪನ್ನು ಹೆಚ್ಚಾಗಿಯೇ ಹಚ್ಚಿಕೊಂಡಿದ್ದರು.  ತಮ್ಮ ಮೊಬೈಲಲ್ಲಿ ಮುಳುಗಿರುವ ಹೊತ್ತಿನಲ್ಲಿ ಸುಕೇಶ್ ತಲೆ ಚಚ್ಚಿಕೊಂಡು ಹೊಡಾಡುತಿದ್ದ. ಈ ವಾಟ್ಸಾಪ್ ಕಂಡು ಹಿಡಿದವರನ್ನ ಹುಡುಕಿಕೊಂಡು ತಂದು ಚಚ್ಚಬೇಕು ಅಂತ ಬೈದಾಡುತಿದ್ದ. ಯಾವುದಕ್ಕೂ ತಲೆಯೇ ಕೆಡಿಸಿಕೊಳ್ಳುತ್ತಿರಲಿಲ್ಲ ರಾಯರು. ಬೇಸರವಾಗಲು ವಾಟ್ಸಾಪ್ ಅವರನ್ನು ಬಿಡುತ್ತಿರಲಿಲ್ಲ. ಬೆಳಗಿನ ಶುಭ ಸಂದೇಶದಿಂದ ಹಿಡಿದು ರಾತ್ರಿಯ ಶುಭರಾತ್ರಿಯವರೆಗೆ ಅವರ ಸಂಗಾತಿಯಾಗಿತ್ತು. 

ಈ ಬೆಳವಣಿಗೆ ಸುಕೇಶನನ್ನ ಆಗಾಗ ಚಿಂತಿಸುವಂತೆ ಮಾಡುತಿತ್ತು. "ಅಪ್ಪನಿಗೆ ಏನಾಗಿದೆ, ಅತಿಯಾಗಿ ಆಡ್ತಿದಾರೆ. ಡಾಕ್ಟರ್ ಹತ್ರ ತೋರಿಸೊದ? ಇದಕ್ಕೆ ಅಂದ್ರೆ ಅವ್ರು ನಂಜೊತೆ ಆಸ್ಪತ್ರೆಗೆ ಬರ್ತಾರಾ? ಹ್ಮ್ಮ್ ಇಲ್ಲ ... ಯಾವುದಕ್ಕೂ ನಾನೇ ಹೋಗಿ ಡಾಕ್ಟರ್ ಬಳಿ ಮಾತಾಡಿಸಿಕೊಂಡು ಬರ್ತೀನಿ." ಅಂತ ನಿರ್ಧರಿಸಿ ಅಂದೊಮ್ಮೆ ತಮ್ಮ ಫ್ಯಾಮ್ಮಿಲಿ ಡಾಕ್ಟರ್ ಬಳಿಗೆ ಹೋರಟ. 

ಸುಕೇಶನ ಪ್ರಕ್ಷುಬ್ಧ ಸ್ಥಿತಿ ನೋಡಿ ಡಾಕ್ಟರ್ ಚಂದ್ರು , "ಏನಯ್ಯ ನೀನು, ಇದೂ ಒಂದು ಪ್ರಾಬ್ಲಮ್ಮಾ !!! ಹ ಹ, ಇದಕ್ಕೂ ಮೆಡಿಸಿನ್ ಕೊಡ್ಬೇಕೆನೆಯ್ಯ" ಎಂದು ನಗಾಡಿದರು. "ನೋಡಪ್ಪ ಸುಕೇಶ ಹೊಸತರಲ್ಲಿ ಎಲ್ರಿಗೂ ಈ ರೀತಿ ಆಗೋದು ಸಹಜ. ರಾಯರು ಅದೆಷ್ಟು ದಿನ ಅಂತ ಈ ವಾಟ್ಸಾಪ್ ಬಳಸ್ತಾರೆ ಹೇಳು? ಅಂದ್ರೆ, ಅದನ್ನ ಕಂಡ್ರೆ ವಾಕರಿಕೆ ಬಂದು ಅವರೇ ದೂರ ಮಾಡ್ಕೋತಾರೆ. ಅಲ್ಲಿ ತನಕ ನೀನು ಸಹನೆಯಿಂದ ಇರಬೇಕು ಕಣಯ್ಯಾ. ಅರ್ಥ ಆಯ್ತಾ? ಯಾವ್ದಕ್ಕೂ ನಂಗೊಂದು ಫೋನ್ ಮಾಡ್ಸು ನಾನು ಮಾತಾಡ್ತೀನಿ " ಅಂತ ಹೇಳಿ ಸುಕೇಶನನ್ನ ಕಳಿಸಿಕೊಟ್ಟರು.

ಅಪ್ಪನಿಗೆ ಒಂಟಿತನ ಅತಿಯಾಗಿ ಕಾಡುತ್ತಿರಬೇಕು , ಅದಕ್ಕಾಗಿಯೇ ಈ ರೀತಿ ಆಗಿರಬೇಕು ಅಂತ ಅವನ ಸ್ನೇಹಿತ ನಿರಂಜನ್ ಹೇಳಿದ ಮಾತು ನೆನಪಿಗೆ ಬಂತು. ಅಷ್ಟೇ ಅಲ್ಲ. ಅದರ ಒಳಿತು ಕೆಟ್ಟದರ ತೀವ್ರತೆ ಕೂಡ ಅವರಿಗೆ ಗೊತ್ತಿರಲಿಕ್ಕಿಲ್ಲ. ನೀನು ಕಿರುಚಾಡದೆ ಅವರೊಂದಿಗೆ ಮೊದಲು ಸರಿಯಾಗಿ ಮಾತನಾಡು. ಈ ಸಮಸ್ಯೆಗೆ ಏನೋ ಒಂದು ಪರಿಹಾರ ಸಿಗುತ್ತೆ ಅಂತಲೂ ಹೇಳಿದ ಅವನ ಮಾತು ನಿಜ ಎನಿಸತೊಡಗಿತು. ಅಪ್ಪನ ಈ ವಾಟ್ಸಾಪ್ ಹುಚ್ಚನ್ನ ಬಿಡಿಸುವುದು ಹೇಗೆಂದು ಯೋಚಿಸುವಾಗಲೇ ಸುಕೇಶನಿಗೆ ಒಂದು ಆಲೋಚನೆ ಹೊಳೆಯಿತು. ಅಪ್ಪನನ್ನ ಮತ್ತೊಮ್ಮೆ ಯಾವುದಾದರೊಂದು ಕೆಲಸದಲ್ಲಿ ನಿರತರಾಗಿಸಬೇಕು. ಇದರ ಕುರಿತು ಅಪ್ಪನ ಬಳಿ ಮಾತನಾಡಬೇಕು, ಹ್ಮೂ ರೇಗಾಡಬಾರದು ಅಂತ ನಿರ್ಧರಿಸಿಕೊಂಡು ಮನೆಗೆ ಬಂದ.

"ಅಪ್ಪ ಎಲ್ಲಿ ಕಾಣ್ತಿಲ್ಲ!!!" ಎನ್ನುವಷ್ಟರಲ್ಲಿ, "ಅವ್ರ ಸ್ನೇಹಿತರೊಬ್ಬರು ತೀರಿಕೊಂಡರಂತೆ ನೋಡ್ಕೊಂಡು ಬರ್ತೀನಿ ಅಂತ ಹೋಗಿದಾರೆ" ಅಂತ ಉತ್ತರ ಬಂದಿತ್ತು. ರಾಯರು ಮನೆಗೆ ಬರುವ ಹೊತ್ತಿಗೆ ತಡರಾತ್ರಿಯಾಗಿತ್ತು. ಬಂದಾಗಿನಿಂದ ಬಹಳಷ್ಟು ಮಂಕಾಗಿ ಸಪ್ಪಗಾಗಿ ಹೋಗಿದ್ದರು ರಾಯರು. ಮರುದಿನವೂ ಹೀಗೆಯೇ!! ಸದಾ ಕಾಲ ತಮ್ಮ ಫೋನ್ ಜೊತೆಗೆ ಇರುತಿದ್ದ ರಾಯರು ಅದರ ಕಡೆ ತಿರುಗಿಯೂ ನೋಡುತ್ತಿರಲಿಲ್ಲ. ಅಪ್ಪನ ಈ ವರ್ತನೆ ಕಂಡು ಸುಕೇಶನಿಗೆ ಖುಷಿ-ಗಾಬರಿ ಎರಡೂ ಒಟ್ಟೊಟ್ಟಿಗೆ ಆದರೂ ಆತಂಕವೂ ಆವರಿಸತೊಡಗಿತು. ಯಾವುದಕ್ಕೂ ಕೇಳಿಯೇ ಬಿಡೋಣವೆಂದು, "ಯಾಕಪ್ಪ ಹೀಗಿದ್ದೀಯ ? ಏನಾಯ್ತು... ನಿಮ್ಮ ಸ್ನೇಹಿತರು ತೀರಿಕೊಂಡಾಗಿನಿಂದ ಬಹಳ ಮಂಕಾಗಿಬಿಟ್ರಿ" ಅಂತ ರಾಯರನ್ನು ಕೇಳಿದ. "ಏನಿಲ್ಲ ಕಣೋ, ನನ್ನ ಖಾಸಾ ದೋಸ್ತು ವೆಂಕಯ್ಯ. ಚೆನ್ನಾಗೇ ಇದ್ದ. ನಂಗೆ ಈ ಫೋನ್ ತೆಗೊಳೋಕೆ, ವಾಟ್ಸಾಪ್ ಬಳಸೋಕೆ ಹೇಳಿಕೊಟ್ಟವನೇ ಅವನು. ನನ್ನ ಗುರು. ಯಾರೋ ಇವನಿಗೆ ಕಳಿಸಬಾರದ ಒಂದು ವಿಡಿಯೋ ವಾಟ್ಸಾಪಲ್ಲಿ ಕಳ್ಸಿದ್ದಾರೆ. ಅದನ್ನ ನೋಡಿ ಹೆದರಿದ್ದಾನೆ. ಬೆವರು ಬಂದು ಹೃದಯಾಘಾತ ಆಗಿದೆ. ಉಳಿಸಿಕೊಳ್ಳಲು ಆಗಲೇ ಇಲ್ಲ. ಇದನ್ನೆಲ್ಲಾ ನೆನೆಸಿಕೊಂಡರೆ ಭಯವಾಗುತ್ತೆ" ಅಂದರು. ಈ ಒಂದು ಸಮಯಕ್ಕಾಗಿ ಕಾಯುತಿದ್ದ ಸುಕೇಶ ಅಪ್ಪನ ಕೈ ಹಿಡಿದು ತನ್ನ ಮಾತು ಮುಂದುವರೆಸಿದ ................................................ !!!!

- ರೂಪ ಸತೀಶ್

ಪ್ರತಿ ಬೆಳಗೂ ಹೊಸತನ....

ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತ...