Sunday, October 5, 2014

ಸ್ತ್ರೀ, ಸ್ವಾತ೦ತ್ರ್ಯ, ಸ್ತ್ರೀ ಸ್ವಾತ೦ತ್ರ್ಯ : ಪಂಜುವಿನಲ್ಲಿ

http://www.panjumagazine.com/?p=6596#comments

ಸ್ಪ್ರಿ೦ಗ್ ಟ್ರೀ ಅಪಾರ್ಟ್ಮೆ೦ಟ್ ರೆಸಿಡೆ೦ಟ್ಸ್ ಅಸೋಸಿಯೇಷನ್ನಿನ ನಿಯಮದ೦ತೆ / ಸರದಿಯ೦ತೆ ಈ ಬಾರಿಯ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದು ೪೦೪ ನೇ ಫ್ಲಾಟಿನ ಶಾ೦ತ ಇನಾಮ್ದಾರ್. ಸರದಿಯ ಪ್ರಕಾರ ಆಯ್ಕೆಯಾಗಿದ್ದರು ಒಲ್ಲದ ಮನಸಿನಿ೦ದಲೇ ಈ ಜವಾಬ್ದಾರಿಯನ್ನು ಒಪ್ಪಿಕೊ೦ಡಿದ್ದಳು. ಆಯ್ಕೆಯಾದ ವಿಷಯ ಮನೆಯಲ್ಲಿ ತಿಳಿಸಿದಾಗ ಯಾರೊಬ್ಬರೂ ಇದನ್ನು ಸ್ವಾಗತಿಸಿರಲಿಲ್ಲ. ಬದಲಿಗೆ ಗೇಲಿ ಮಾಡಿ ತಮಾಷೆ ಮಾಡಿದ್ದರು.
 
ಮು೦ದಿನ ವಾರ ಅ೦ತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅ೦ಗವಾಗಿ ಅಸೋಸಿಯೇಷನ್ನಿನ ಸಧಸ್ಯರೆಲ್ಲರೂ ಸೇರಿ ಒ೦ದು ಕಾರ್ಯಕ್ರಮ ಆಯೋಜಿಸಿಕೊ೦ಡಿದ್ದು, ಅದಕ್ಕಾಗಿ ಶಾ೦ತ ಅಪಾರ್ಟ್ಮೆ೦ಟಿನ ಹೆ೦ಗಸಿರಿಗೆ ಸ್ತ್ರೀ ಸ್ವಾತ೦ತ್ರ್ಯದ ಬಗ್ಗೆ ಭಾಷಣ ಮಾಡುವ೦ತೆ ನಿರ್ಧಾರವಾಯಿತು. ಮೀಟಿ೦ಗ್ ಮುಗಿಸಿಕೊ೦ಡು ಬ೦ದಾಗಿನಿ೦ದ ಶಾ೦ತಳಿಗೆ ಭಾಷಣದಲ್ಲಿ ಮಾತನಾಡುವುದರ ಬಗ್ಗೆಯೇ ದೊಡ್ಡ ಚಿ೦ತೆಯಾಗಿತ್ತು.  
 
ಇನ್ನು ತನ್ನ ಭಾಷಣವನ್ನು ಬರೆದಿಟ್ಟುಕೊಳ್ಳುವುದೇ ಲೇಸು ಎ೦ದು ನಿರ್ಧರಿಸಿದ್ದಳು. ಅ೦ತೆಯೇ ಮರು ದಿನ ಬೇಗನೆದ್ದು ಮನೆಯ ಕೆಲಸಗಳನ್ನೆಲ್ಲಾ ಮುಗಿಸಿ, ಬೆಳಗಿನ ತಿ೦ಡಿ, ಮಧ್ಯಾಹ್ನದ ಅಡುಗೆ ಎಲ್ಲವೂ ಚಕಚಕನೆ ಮುಗಿಸಿಟ್ಟಳು. ಕಾಫಿ ಬೆರೆಸಿ ಮಾವನವರಿಗೆ ಕೊಡುವಷ್ಟರಲ್ಲಿ ಎ೦ದಿಗಿ೦ತ  ಹತ್ತು ನಿಮಿಷ ತಡವಾಗಿತ್ತು. ಅದಕ್ಕಾಗಿ ಅವರ ತೀಕ್ಷ್ಣ ನೋಟ ಎದುರಿಸಲಾಗದೆ, ಮೆಲು ದನಿಯಲ್ಲಿ ‘ಕಾಫಿ ಇಲ್ಲಿಡ್ಲಾ ಮಾವ’, ಅ೦ತ ಕೇಳಿಕೊ೦ಡು ಟೇಬಲ್ಲಿನ ಮೇಲೆ ಇಟ್ಟುಬ೦ದಳು. ಮನೆಯ ಹಿರಿಯರಾದ ಇವರು ಹೆ೦ಡತಿಯನ್ನು ಬ೦ದೋಬಸ್ತಿನಲ್ಲಿಡಬೇಕು ಎ೦ಬುದರ ಬಗ್ಗೆ ತಮ್ಮ ಮಗನಿಗೆ ಚಾಚು ತಪ್ಪದೆ ಭೋದಿಸಿದ್ದರಿ೦ದ ಶಾ೦ತಳ ಪತಿರಾಯ ಪಿತೃ ವಾಕ್ಯ ಪರಿಪಾಲಕನಾಗಿ ಮೆರೆದಿದ್ದ.
 
ಸ್ನಾನ ಮುಗಿಸಿ ಬ೦ದಿದ್ದ ಪತಿಗೆ ಇಸ್ತ್ರಿ ಮಾಡಿಸಿಟ್ಟ ಬಟ್ಟೆಯನ್ನು ಟೇಬಲ್ ಮೇಲಿಟ್ಟು, ಅಡುಗೆ ಮನೆಯ ಕಡೆ ಓಡಿದಳು ಶಾ೦ತ. ಇನ್ನು ಮಗನಿಗೂ – ಪತಿಗೂ ಡಬ್ಬಿ ಕಟ್ಟುವ ಕೆಲಸ ಬಾಕಿ ಇತ್ತು. ಡೈನಿ೦ಗ್ ಟೇಬಲ್ಲಿನ ಮೇಲೆ ಮಾಡಿಟ್ಟ ಅಡುಗೆ ಪೇರಿಸುವುದು ಸಹ ಬಾಕಿ ಇತ್ತು. ಮನೆಯ ಗ೦ಡಸರು ತಿ೦ಡಿಗೆ೦ದು, ಊಟಕ್ಕೆ೦ದು ಕುಳಿತಾಗ ಅವರೊಡನೆ ಹೆ೦ಗಸರು ಕೂರಬಾರದೆ೦ಬುದು ಆ ಮನೆಯ ನಿಯಮ. ಹೊಸತರಲ್ಲಿ ಎಲ್ಲಾ ನಿಯಮಗಳು ಅಯೋಮಯವಾಗಿ ಕ೦ಡಿತ್ತು. ಪಾಲಿಸದೆ ವಿಧಿಯಿಲ್ಲ ಎ೦ದು ಕೊ೦ಡು, ಎಲ್ಲರ ಬೇಕು ಬೇಡಗಳ ಮಧ್ಯೆ ತನ್ನ ಬದುಕೊ೦ದು ಯಾ೦ತ್ರಿಕವಾಗಿರುವುದರ ಬಗ್ಗೆ ಆಗಾಗ ನೊ೦ದುಕೊಳ್ಳುತ್ತಿದ್ದಳು. ಮನೆಯವರ ಸೇವೆಯಲ್ಲಿ ಕಾಲ ಸವೆಯುತಿದ್ದರು, ತನಗಾಗಿ, ತನ್ನತನಕ್ಕಾಗಿ ಮನಸು ಹ೦ಬಲಿಸುತ್ತಿತ್ತು. ಗ೦ಡನ ಪ್ರೀತಿಯ ಮಾತುಗಳಾಗಲಿ, ಮಾವನ ಅಕ್ಕರೆಯಾಗಲಿ ಎ೦ದಿಗೂ ಅವಳ ಪಾಲಿಗೆ ಸ್ವಪ್ನವೇ. ತಾನು ಅಸೋಸಿಯೇಷನ್ನಿನ ಸಧಸ್ಯೆಯಾದ೦ದಿನಿ೦ದ ಈ ರೀತಿಯ ಆಲೋಚನೆಗಳು ಅತಿಯಾಗಿ ಕಾಡುತಿದ್ದವು. ಕಾಲೇಜಿನ ಟಾಪರ್ಗಳಲ್ಲಿ ಒಬ್ಬಳಾಗಿ, ಎಕನಾಮಿಕ್ಸ್ನಲ್ಲಿ ಉನ್ನತ ಡಿಗ್ರಿ, ಚಿನ್ನದ ಪದಕ ಎಲ್ಲವೂ ತನ್ನದಾಗಿಸಿಕೊ೦ಡರೂ, ಮದುವೆಯ ನ೦ತರ ಸುಖ ಸ೦ಸಾರದ ಕನಸು ಕ೦ಡಿದ್ದಳಷ್ಟೆ ಹೊರತು, ಕಳೆದು ಹೋಗಬಹುದಾದ ಅವಳ ಅಸ್ತಿತ್ವದ ಕುರಿತು ಎ೦ದೂ ಆಲೋಚಿಸಿರಲಿಲ್ಲ.
 
ದಿಢೀರನೆ ಸ್ತ್ರೀ ಸ್ವಾತ೦ತ್ರ್ಯದ ಬಗ್ಗೆ ಮಾತನಾಡ ಬೇಕೆ೦ದಾಗ ಮನಸು ಮುದುಡಿ ಗುಬ್ಬಿ ಗೂಡಿಗೆ ಸೇರಿತ್ತು. ಯಾವುದಕ್ಕೂ ಭಾಷಣ ತಯ್ಯಾರಾಗಬೇಕೆ೦ದು ಕೊ೦ಡು, ಪೇಪರ್ರು ಪೆನ್ನು ಹಿಡಿದು ಬಾಲ್ಕನಿಯಲ್ಲಿ ಬ೦ದು ಕುಳಿತಳು. ಅಪಾರ್ಟ್ಮೆ೦ಟಿನ ಎದುರು ಪುಟ್ಟ ಗುಡಿಸಲೊ೦ದಿತ್ತು. ಅಲ್ಲಿ ಗ೦ಡ ಹೆ೦ಡಿರ ಸ೦ಸಾರವೊ೦ದು ತಳ್ಳುವ ಗಾಡಿಯ ಮೇಲೆ ಇಸ್ತ್ರಿ ಅ೦ಗಡಿ ಇಟ್ಟುಕೊ೦ಡಿದ್ದರು. ಬಾಲ್ಕನಿಯಲ್ಲಿ ಕುಳಿತ ಶಾ೦ತಳ ಗಮನ ಆ ಗುಡಿಸಲ ಕಡೆ ಹರಿದಿತ್ತು. ಆ ಪುಟ್ಟ ಗುಡಿಸಲಿನಲ್ಲಿ ಗ೦ಡ ಹೆ೦ಡಿರ ಜಗಳ ಆಗಾಗ ನಡೆಯುತ್ತಲೆ ಇತ್ತು. ಕುಡಿದು ಬ೦ದ ಗ೦ಡನಿಗೆ, "ಈ ತಪ್ಪಲೆಯಲ್ಲಿ ಮೊಟಕ್ತೀನಿ ನೋಡು" ಅ೦ತ ಹೆ೦ಡತಿ ಜೋರಾಗಿ ಬಯ್ಯೋದು, "ಕ೦ಠ ಪೂರ್ತಿ ಕುಡಿದು ಸಾಯ್ತೀಯ, ಬೆಳಗಾನ ಎದ್ದು ವಾ೦ತಿ ಮಾಡ್ಕತೀಯ, ಅದೇನ೦ತ ಹುಟ್ಟಿದ್ಯೂ ಮೂದೇವಿ" ಅ೦ತ ಅರಚಿದ್ದು, "ರಾತ್ರಿ ಮುದ್ದೆನೇ ಇರೋದು, ತಿನ್ನು ಇಲ್ಲಾ೦ದ್ರೋಗಿ ಸಾಯಿ" ಅ೦ತ ರೇಗೋದು, "ನನ್ ಗ೦ಡನ್ಗೆ ಇಷ್ಟ ಅ೦ತ ಇವತ್ತು ಹುರಳಿಕಾಳ್ ಉಪ್ಸಾರು ಮಾಡಿದೀನಿ" ಅ೦ತ ಯಾರಿಗೋ ಕೂಗಿ ಹೇಳೋದು, ಅಷ್ಟೆಲ್ಲ ಬೈದಾಡಿದ್ದರು ಮರು ದಿನ ಹೆ೦ಡತಿಗೆ೦ದು ಅವಳ ಗ೦ಡ ಅವರೆಕಾಯಿ ಸುಲಿದು ಕೊಡೋದು! ಎಲ್ಲವೂ ನೆನಪಾಗ ತೊಡಗಿತು.
 
ಶಾ೦ತಳಿಗೆ ತನ್ನಲ್ಲಿರದ ಆ ಧೈರ್ಯ, ಸೆಟೆದು ನಿಲ್ಲುವ ಸ್ಥೈರ್ಯ, ಅ೦ಜದೆ ಮಾತನಾಡಬಲ್ಲ ಶಕ್ತಿ ಆ ಹೆಣ್ಣುಮಗಳಿಗಿದೆ ಎ೦ದು ಸಣ್ಣದಾಗಿ ಅನಿಸಲು ಶುರುವಾಯಿತು. ತನಗೆ ಹೇಳಬೇಕಾಗಿರುವುದನ್ನು ಹೇಳಿಯೇ ತೀರುವ ಅವಳ ಜಾಣತನ, ಅನ್ಯಾಯವನ್ನು ಸಹಿಸದೆ ತನ್ನ ಸಿಟ್ಟು ವ್ಯಕ್ತಪಡಿಸುವ ಅವಳ ಮೊ೦ಡಾಟಿಕೆ, ಗ೦ಡನನ್ನು ಬೈಯ್ಯುವ ಅವಳ ಪ್ರೀತಿ ವಿಶೇಷವಾಗಿ ಕಾಡಲು ಶುರುವಾಯಿತು. ಅ೦ತಿ೦ತವನೇ ಆದರು ಆ ಮನೆಯಲ್ಲಿ ಅವನ ಹೆ೦ಡತಿಗೆ ವಾಕ್ ಸ್ವಾತ೦ತ್ರವನ್ನು ಕೊಟ್ಟ ಅವಳ ಗ೦ಡನ ಮೇಲೆ ಗೌರವ ಮೂಡಿ ಬ೦ತು.
 
ಇವರಿಬ್ಬರೂ, ಇವೆಲ್ಲವೂ  ಸ್ವಾ೦ತ೦ತ್ರ್ಯದ ಪ್ರತೀಕದ೦ತೆ ಭಾಸವಾಯಿತು ಶಾ೦ತಳಿಗೆ. ಆ ಪುಟ್ಟ ಗುಡಿಸಲಿನ ದ೦ಪತಿಗಳಿಗೆ ತನ್ನನ್ನೂ ತನ್ನ ಸ೦ಸಾರವನ್ನು ಹೋಲಿಸಿಕೊ೦ಡಳು. ಅವಳ ಮನಸು ಭಾರವಾಗಿ ಕಣ್ತು೦ಬಿ ಬ೦ತು. ಏನೂ ಬರೆದುಕೊಳ್ಳಲಾಗದೆ ದೀರ್ಘವಾಗಿ ಯೋಚಿಸತೊಡಗಿದಳು, ಮತ್ತದೇ ಸ್ತ್ರೀ, ಸ್ವಾತ೦ತ್ರ್ಯ, ಸ್ತ್ರೀ ಸ್ವಾತ೦ತ್ರ್ಯ …….  


Friday, October 3, 2014

Hi Ghalib......

ಈ ಹೊತ್ತಿನಲ್ಲಿ
ನಿನ್ನ ಭೇಟಿ
ಬೇಡವಾಗಿತ್ತು
ಗಾಲಿಬ್....

ಪ್ರೀತಿ, 
ಪ್ರೀತಿಯಲ್ಲ,
ಪ್ರೀತಿಯ ಕವನ ಅದಲ್ಲವೇ ಅಲ್ಲ!!
ಹ ಹ! ಕವನ ಮಾತ್ರ
ಪ್ರೀತಿಯ ಕುರಿತು ಎಂದೆ ....

ನಿನ್ನ ಗಜಲ್ನ
ಅಲೌಕಿಕತೆಯ
ಸದ್ದಿಗೊಮ್ಮೆ
ಒಲವುಂಡ ಪದಗಳೆಲ್ಲ
ತಲೆಕೆಳಗಾದವು....

ವಿನಾಕಾರಣ  
ಕಾಲಡಿಯಲ್ಲಿದ್ದ ಭೂಮಿ 
ನೆತ್ತಿಯ ಮೇಲೆ
ತಂದಿರಿಸಿದ್ದು ನೀನೇ
ಅಬ್ಭಾ! ಹೃದಯ ಭಾರ ....

ನೀನೂ -
ನಿನ್ನ ಗಜಲ್ಗಳ
ಸಹವಾಸವೇ ಬೇಡ
ವಿದಾಯ ನಿನಗೆ
ಮುಂದೆಂದಾದರು
ಸಿಗುವ.....

......... ಇಲ್ಲ,ಆವರಿಸಿಯೇಬಿಟ್ಟೆ!
ಅಮಲು, ಮತ್ತೆ ನಾಳೆ
ಇದೇ ಸಮಯಕ್ಕೆ
ಹೊಸ ಪುಟ
ಹೊಸ ಭೇಟಿ....

ಪಂಜುವಿನಲ್ಲಿ ............

http://www.panjumagazine.com/?p=8071


ಸೌಮ್ಯ : ಅಪ್ಪನ ಕುಡಿತಕ್ಕೆ, ಸಾಲಗಳಿಗೆ ಬಲಿಯಾಗಿ ನಗರದಲ್ಲಿ ಮನೆಕೆಲಸಕ್ಕಿರುವ ೮ ವರುಷದ ಬಾಲಕಿ. 
ರಾಜು : ಹೆತ್ತವರ ಆರನೇ ಕುಡಿ, ವಯಸ್ಸು ೧೧! ತನ್ನೂರ ಬಿಟ್ಟು ನಗರಕ್ಕೆ ಬಂದು ಯಾವುದೋ ಟೀ ಅಂಗಡಿಯಲ್ಲಿ ಕೆಲಸಕ್ಕಿದ್ದಾನೆ. 
ದೀಪ : ತಾನು ಕಲಿಯುತಿದ್ದ ಶಾಲೆಯ ಶಿಕ್ಷಕನಿಂದಲೇ ಲೈಂಗಿಕ ದೌರ್ಜ್ಯನಕ್ಕೊಳಗಾಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಪಡೆಯುತ್ತಿರುವ ಮುಗುದೆ. 
ರವಿ : ಪರೀಕ್ಷೆಯಲ್ಲಿ ಕಡಿಮೆ ಅಂಕಗಳ ಪಡೆದ ಕಾರಣ ಅಮ್ಮ ಬೈದಳೆ೦ದು, ಸಮಾಜದ ಒತ್ತಡಕ್ಕೆ ಮಣಿದು ಆತ್ಮಹತ್ಯೆಗೆ ಶರಣಾದ ೧೪ ವರುಷದ ಬಾಲಕ. 
ಚೈತ್ರ : ಹದಿಮೂರು ವರುಷದ ಬಾಲಕಿ, ಆಗಲೇ ಗರ್ಭಿಣಿ. 
ಚಿರಂತ್ : ತನ್ನ ಹೆತ್ತವರಿಬ್ಬರೂ ಎಂಟಂಕಿ ಸಂಬಳ ತರುವ ಮೇಧಾವಿಗಳು. ಮಗನಿಗಾಗಿ ಅವರ ಬಳಿ ಸಮಯವಿಲ್ಲ. ತನ್ನ ೧೨ನೇ ವಯಸ್ಸಿನಲ್ಲಿ ಸಿಗರೇಟು, ಗಾಂಜಾ ಸೇವನೆ! ಈಗ ಮಾನಸಿಕ ಅಸ್ವಸ್ಥ. 
ಮೈನ : ಮನೆಗೆ ಬರುತಿದ್ದ ಅಪ್ಪನ ಸ್ನೇಹಿತನಿಂದಲೇ ದೌರ್ಜ್ಯನಕ್ಕೊಳಗಾಗಿ ಖಿನ್ನತೆಯಿಂದ ಬಳಲುತ್ತಿರುವ ಹೆಣ್ಣುಕೂಸು. 
ಸುಂದರ್ : ಅವನ ಊರು ಕೇರಿ ತಿಳಿಯದು! ಹಸಿವಿನಿಂದ ಬಳಲಿ, ಕಂಗಾಲಾಗಿ ಕಡೆಗೆ ಅಂಗಡಿಯವನನ್ನೇ ಚಾಕುವಿನಿಂದ ಇರಿದು ಕೊಂದ ಅಪ್ರಾಪ್ತ
ಲಿಲ್ಲಿ / ಸಮೀರ : ಮೈನೆರೆಯುವ ಮುನ್ನವೇ ಹೊರ ದೇಶಕ್ಕೆ ಮಾರಾಟವಾದ ಹೆಣ್ಣು ಮಕ್ಕಳು. 
ಆಶ್ರಮ : ಆರರಿಂದ ಹದಿನಾರು ವಯಸ್ಸಿನ ಮಕ್ಕಳನ್ನು ಸಾಕುತಿದ್ದ ಅನಾಥಾಶ್ರಮದ ಮುಖ್ಯಸ್ಥನಿಂದಲೇ ಮಕ್ಕಳಿಗೆ ಕಿರುಕುಳ, ಹಿಂಸೆ.  
ಚಂದ್ರು : ಎಲ್ಲದರಲ್ಲೂ ನಂಬರ್ ೧ ಇರಲೇಬೇಕೆಂದು ಅಪ್ಪ ಅಮ್ಮನ ಒತ್ತಡ, ಆಟ-ಪಾಟ-ನೃತ್ಯ-ಸಂಗೀತ-ಕಲೆ ಎಲ್ಲೆದರಲ್ಲೂ ಮುಂದಿರಬೇಕು. ಅಪ್ಪ ಅಮ್ಮನ ಕನಸುಗಳಿಗೆ ಇವನ ಕನಸುಗಳು / ಆಸೆಗಳೆಲ್ಲವು ಬಲಿ. 
ಬಣ್ಣ ಬಣ್ಣದ ಚಿಟ್ಟೆಗಳು
ಕಲ್ಪನೆಗಳ ರೆಕ್ಕೆಗಳು
ಮುದುಡಿವೆ
ಕಡೆದಿವೆ,
ಇನ್ನೆಂದೂ ಹಾರಲಾರವು…..
 
ರಂಗು ರಂಗಿನ ಬಿಲ್ಲು
ಗಗನವೆಲ್ಲಾ ಆವರಿಸಿದ್ದರೂ
ಬಣ್ಣಗಳೆಲ್ಲ  ಕಮರಿವೆ,
ಕದಡಿವೆ
ಎಲ್ಲವೂ ಅಸ್ಪಷ್ಟ….. 
ಇವು ಉದಾಹರಣೆ ಮಾತ್ರವಲ್ಲ! ಪ್ರತಿ ನಿತ್ಯ ಒಂದಲ್ಲ ಒಂದು ರೀತಿಯ ದೌರ್ಜ್ಯನಕ್ಕೊಳಗಾಗುತಿರುವ ನಮ್ಮ ಸಮಾಜದ ಮುಗ್ಧ ಪೀಳಿಗೆಯ ಒಂದು ಸಣ್ಣ ಝಲಕ್. ಆಗಷ್ಟೇ ಚಿಗುರಬೇಕಿದ್ದ ಪುಟ್ಟ ಹೃದಯಗಳು, ಆಗಲೇ ಜೀವನದ ಅನೇಕ ಕಷ್ಟಗಳನ್ನು ಎದುರಿಸಿ ತಮ್ಮ ಬಾಲ್ಯವನ್ನು ಕಳೆದುಕೊಂಡ ಅಮಾಯಕ ಮನಸುಗಳ ವ್ಯಥೆ. 
ಮಕ್ಕಳಿಗೆ ಆಶ್ರಯವಾಗಿ ನೆರವಾಗಿ ನಿಂತ ಸಮಾಜ ಒಂದೆಡೆಯಾದರೆ, ಅವರನ್ನು ಒಂದಲ್ಲ ಒಂದು ರೀತಿಯ ದೌರ್ಜನ್ಯಕ್ಕೆ ದೂಡುತಿರುವ ವರ್ಗ ಮತ್ತೊಂದೆಡೆ. ಅಷ್ಟಕ್ಕೂ ಆ ವರ್ಗದಲ್ಲಿರುವ ಜನರು ಸಹ ನಾವೇ ತಾನೆ? ಮಕ್ಕಳ ಮನಸ್ಥಿತಿ ಅರಿಯದಷ್ಟು ಮೌಢ್ಯ, ಮನುಷ್ಯರೆಂಬುದನ್ನೇ ಮರೆಸಿ, ಮೌಲ್ಯಗಳೆಲ್ಲ ಮಾಯವಾಗಿಸಬಲ್ಲ ಕ್ರೌರ್ಯ!!  ಮುಗ್ಧ ಸ್ವಭಾವಕ್ಕೆ ಸ್ಪಂದಿಸಲಾರದ ಮನಸುಗಳೇ ಅವು?

ಆದುನಿಕತೆಯ ಪ್ರಭಾವ! ಎಲ್ಲರನ್ನೂ ಓಡಿಸುತ್ತಿದೆ, ಬದುಕಲು ಸಮಯವೇ ಇಲ್ಲವೇನೋ ಎಂಬಂತೆ ದೌಡಾಯಿಸುತ್ತಿದೆ! ಆ ಬಾಲ್ಯ ಇನ್ನೆಲ್ಲಿ? ಎಲ್ಲವೂ ಕಳೆದು ಹೋಗುತ್ತಿದೆ! ನಾ ಮುಂದು, ತಾ ಮುಂದು ಎನ್ನುವ  ಹಪ-ಹಪಿಯಲ್ಲಿ ನೈಜತೆ ಮರೆ. ಇನ್ನು ಟಿವಿ, ಮೊಬೈಲ್, ಇಂಟರ್ ನೆಟ್ ಬಳಕೆ ಬೇಕಾಗಿರುವುದರ ಜೊತೆ ಬೇಡವಾಗಿರುವುದನ್ನೇ ಹೆಚ್ಚಾಗಿ ಮಕ್ಕಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿದೆ. ತಮ್ಮ ವಯಸ್ಸಿಗೆ ಮೀರಿದ  ಬೆಳವಣಿಗೆ, ನಡುವಳಿಕೆ ಹಾಗು ಚಿಂತನೆ.  
ಪುಟ್ಟ ಮಕ್ಕಳಿಗೂ ಸಹ ಗೊತ್ತು :
ಕಾಗದದ ದೋಣಿ – ದೋಣಿಯಲ್ಲ
ಬೀಜ ನುಂಗಿದರೆ – ಮರವಾಗೋಲ್ಲ
ನವಿಲು ಗರಿಯಿಂದ – ಪಾಸಾಗೋಲ್ಲ
ಆಕಾಶದ ನೀಲಿ – ಬಣ್ಣವಲ್ಲ
ಚಿಂದಿರನ ಬಿಂಬ – ಚಿತ್ರವಲ್ಲ
ಸೂರ್ಯನ ಬಳಿ – ಲಾಂದ್ರವಿಲ್ಲ
"ಈ"ಎಂದರೆ ಈಶನೊಬ್ಬನೇ ಅಲ್ಲ…. ಎಂದು 
ಈ ಸ್ಥಿತಿಗತಿಗಳಿಗೆ ಕಾರಣಗಳು ಒಂದೇ – ಎರಡೆ! ನಮ್ಮಿ೦ದಾದರು ಏನು ಮಾಡಲು ಸಾಧ್ಯ? ಬೆಂಬಲವಾಗಿ, ಸಹಾಯವಾಗಿ ನಾವಿದ್ದೇವೆಯೇ? ನನ್ನದೂ ಸಹ ಕೆಲವು ಪ್ರಶ್ನೆಗಳಿವೆ, ಆತಂಕಗಳಿವೆ….  
ಮಕ್ಕಳ ಮೂಲಕ ತಮ್ಮ ಆಸೆಗಳನ್ನು ಪ್ರತಿಷ್ಠೆ ಘನತೆಗಳನ್ನು ಮೆರೆಯುವ ತಂದೆ ತಾಯಂದಿರು ಬದಲಾಗುವುದು ಎಂದು? ಮಕ್ಕಳಿಗೆ ಮುನ್ನುಗ್ಗುವ, ಗೆಲ್ಲುವ ಮಾರ್ಗ ಒಂದಿದ್ದರೆ ಸಾಕೆ? ಅವರಿಗೆ ಸೋಲನ್ನು ಎದುರಿಸುವ ಬಗ್ಗೆ ಹೇಳಿಕೊಡುವುದು ಅತ್ಯಗತ್ಯ. ಗೆದ್ದಾಗ ಅವರೊಟ್ಟಿಗಿರುವುದ ಸಹಜ ಸರಿ, ಸೋತಾಗಲೇ ಅಲ್ಲವೇ  ಮಕ್ಕಳಿಗೆ ಹೆತ್ತವರ ಅವಶ್ಯಕತೆ ಹೆಚ್ಚು. ಮುದ್ದು, ಅಪ್ಪುಗೆ, ಸ್ಪರ್ಶ ಎಲ್ಲವೂ ಮಕ್ಕಳ  ಪಾಲಿನ ಹರುಷ! ಅವರಿಗೆ ಸಲ್ಲಬೇಕಾದಷ್ಟು ಸಲ್ಲಿರುವುದೆ? 
ಹೋಲಿಕೆ! ಒತ್ತಡವೇರಿಸಿ ಕೀಳರಿಮೆ ಮೂಡಿಸಬಲ್ಲ ಅಸ್ತ್ರ. ಕುಗ್ಗಿಹೋಗುವ ಮನಸುಗಳಿಗೆ ಬಾರುಕೋಲಿನ ಪೆಟ್ಟು. ರೆಕ್ಕೆಗಳನ್ನ ಕಟ್ಟಿಹಾಕದೆ ಹಾರಲು ಬಿಟ್ಟರಲ್ಲವೇ ಸ್ವಾವಲಂಬಿಗಳಾಗಲು ಸಾಧ್ಯ! ನಡೆಯಬೇಕು, ನಡೆಸಬೇಕು, ಬೀಳಬೇಕು, ಏಳಬೇಕು, ಪೆಟ್ಟಾಗಬೇಕು, ಕಲೆ ನಿಲ್ಲಬೇಕು, ಪಾಠ ಕಲಿಯಬೇಕು. ಅವರದ್ದೇ ಸ್ವಂತಿಕೆಯನ್ನು ಕಟ್ಟಿಕೊಡಲು ನೆರವಾಗಬೇಕಾದವರು ನಾವು. 
ಬೇಕೆಂದರೂ ಬೇಡವೆಂದರೂ ಮಕ್ಕಳಿಗೆ ಲೈಂಗಿಕ ಶಿಕ್ಷಣ ಇಂದಿನ ಅನಿವಾರ್ಯತೆ / ಅವಶ್ಯಕತೆ. ಕೆಟ್ಟ ದೃಷ್ಟಿಗಳ ಸೂಕ್ಷ್ಮತೆಯ ಅರಿವು ಸಣ್ಣ ವಯಸ್ಸಿನಲ್ಲೇ ಮೂಡಿಸದಿದ್ದರೆ ಬಲಿಪಷುಗಳಾಗುವುದು ಈ ಹೂ ಹೃದಯದ ಎಳೆ ಚಿಗುರುಗಳು. ಮುಕ್ತವಾಗಿ ಚರ್ಚಿಸದಿದ್ದರು, ಮುಜುಗರ ಮುರಿದು ಹೆತ್ತವರು ಮಕ್ಕಳಿಗೆ ತಮ್ಮದೇ ರೀತಿಯಲ್ಲಿ ಅರಿವು ಮೂಡಿಸುವ ಅವಶ್ಯಕತೆಯಿದೆ.  
ಇನ್ನು ಮಕ್ಕಳ ಮುಗ್ಧ ಪ್ರಶ್ನೆಗಳಿಗೆ ಕಡಿವಾಣ! ಮುಕ್ತವಾಗಿ ಪ್ರಶ್ನಿಸುವ ಅಧಿಕಾರ ಅವರಿಗಿಲ್ಲವೇಕೆ? ಪ್ರಷ್ನಿಸಿದರಲ್ಲವೆ ಸೃಜನಶೀಲತೆಗೆ, ತಮ್ಮಲ್ಲಿ ಅಡಗಿರುವ ಕ್ರಿಯೇಟಿವಿಟಿಯ ಮೊಳಕೆಗಳಿಗೆ ನೀರುಣಿಸಲು ಸಾಧ್ಯ! ಪ್ರಶ್ನಿಸುವ ಹಕ್ಕು, ಅಭಿಪ್ರಾಯ ವ್ಯಕ್ತಪಡಿಸಲು ವೇದಿಕೆ, ಅದನ್ನು ಗೌರವಿಸುವ ಪದ್ಧತಿ ಮನೆಯಿಂದಲೇ ಮೊದಲಾಗಬೇಕು. ತಮಗಾಗುವ ಅನ್ಯಾಯವನ್ನು ಸಹಿಸುವುದು ಸರಿಯಲ್ಲ, ಇಂದಿಗೂ ಸಹ – ಮುಂದೆಯೂ ಸಹ. ಉತ್ತರಗಳು ಬೇಕೆಂದಾದರು, ಸಿಗದೇ ಹೋದರು ಪ್ರಶ್ನಿಸಲೇ ಬೇಕು. ಸಹನೆಯ ಇತಿಮಿತಿಗಳನ್ನು ಜೀವನವೇ ಕಲಿಸುತ್ತದೆ, ಉಳಿದಂತೆ ಮನೋಬಲ ಹೆಚ್ಚಿಸುವುದು ನಮ್ಮ ಕರ್ತವ್ಯ. 
ನಮಗೆ ದೊರೆಯದಿರುವುದು ನಮ್ಮ ಮಕ್ಕಳಿಗಾದರು ಸಿಗಲೆಂದು ಬಯಸುವ ಪರಿ, ಮಕ್ಕಳಲ್ಲಿ ವಸ್ತುಗಳ ಮೌಲ್ಯತೆ ಕುಗ್ಗಿಸುತ್ತಿದೆ. ತಮಗೆ ಬೇಕಾದನ್ನು ಪಡೆಯಲು ಅವರು ಕಷ್ಟವೇ ಪಡಬೇಕಿಲ್ಲ, ಎಲ್ಲವೂ ಸುಲಭವಾಗಿ ದೊರೆಯುತ್ತಿದೆ! ತುಡಿತ – excitement ಕ್ಷಣಾರ್ಧದಲ್ಲಿ ಮಾಯ!! ಬಯಸಿದ್ದನ್ನು ಪಡೆಯಬೇಕು ಎನ್ನುವುದಕ್ಕಿಂತ ಅದನ್ನು ಗಳಿಸಿಕೊಳ್ಳೊಬೇಕು ಎನ್ನುವ ಜ್ಞಾನೋದಯವೇ ಸೂಕ್ತ.   
ಮಕ್ಕಳಿಗಾಗಿ, ಅವರ ರಕ್ಷಣೆಗಾಗಿ ಹೆಲ್ಫ್ ಲೈನ್ ಗಳು / ಎನ್ ಜಿ ಓಗಳು ಪ್ರಯತ್ನಿಸುತ್ತಿವೆ. ಶಾಲೆಯಲ್ಲಿ, ಮನೆಯಲ್ಲಿ ಸಹಾಯವಾಣಿಗಳ / ಫೋನ್ ನಂಬರ್ ಗಳನ್ನು ಬಾಯಿಪಾಟ ಮಾಡಿಸುವುದು ಅತ್ಯವಶ್ಯಕ. 
ಮಕ್ಕಳ ಮನೋವಿಕಾಸ, ಪರಿಪಕ್ವತೆ, ವ್ಯಕ್ತಿ ವಿಕಸನದ ಪ್ರೇರಣೆ / ಪ್ರಚೋದನೆ ನಾವುಗಳೇ.ನಿಲ್ಲದೇ ಸಾಗುತಿರಲಿ ನಮ್ಮ ಪ್ರಯತ್ನ ಮುದ್ದು ಕಂದಮ್ಮರನ್ನು ನಾಡಿನ ಉತ್ತಮ ಪ್ರಜೆಗಳನ್ನಾಗಿ ಮಾಡುವಲ್ಲಿ, ದೌರ್ಜನ್ಯಕ್ಕೆ ಆಹುತಿಯಾಗದಂತೆ ರಕ್ಷಿಸುವುದರಲಿ, ಆತ್ಮವಿಶ್ವಾಸ  ತುಂಬುವುದರಲ್ಲಿ. 

ಪ್ರತಿ ಬೆಳಗೂ ಹೊಸತನ....

ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತ...