Thursday, December 29, 2022

ಪ್ರತಿ ಬೆಳಗೂ ಹೊಸತನ....


ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತು ಕಾಫಿಯ ಬೆಸುಗೆ ನೆನ್ನೆ ಮೊನ್ನೆಯದಲ್ಲ.  ಫಿಲ್ಟರ್ ಕಾಫಿ, ಸ್ವಲ್ಪವೇ ಸ್ವಲ್ಪ ಸಕ್ಕರೆ ಅಥವಾ ಬೆಲ್ಲ ನನ್ನ ಅಚ್ಚುಮೆಚ್ಚು.  ಹಾಗೆ ನೋಡಿದರೆ ಇಂಟರ್ನೆಟ್ ತುಂಬಾ ಕಾಫಿ ಕುರಿತು ಬೇಕಾದಷ್ಟು ಮೀಮ್ಸ್ ಹರಿದಾಡುತ್ತಿರುತ್ತವೆ. ಪ್ರತಿ ಪೋಸ್ಟ್ ನನಗೆಂದೇ ಬರೆದಿರುವುದೇನೋ ಅಂತ ಅನಿಸೋದುಂಟು. 

ಸಂಜೆಯ ಕಾಫಿಗೂ ಕೂಡ ಇಷ್ಟೇ ಮಹತ್ವ. ತಾಯಿಯ ಸಾಂತ್ವನದಂತೆ. ಗೆಳತಿಯ ಹೆಗಲಿನಂತೆ. ತಂಗಿಯ ಕಾಳಜಿಯಂತೆ ಭಾಸವಾಗುವ ಕಾಫಿ ನನ್ನ ಪಾಲಿಗೆ ಅಮೃತ. ಹಾಗಂತ ಇಡೀ ದಿನ ಕಾಫಿಯೊಂದೇ ಕುಡಿಯುತ್ತೇನೆ ಅಂತಲ್ಲ. ದಿನಕ್ಕೆ ೨-೩ ಬಾರಿ ಕುಡಿಯುವ ನನ್ನ ಕಾಫಿ ನಿಜವಾಗಲೂ ನನ್ನ ಪಾಲಿಗೆ ವಿಶೇಷ.  

ಶನಿವಾರ / ಭಾನುವಾರಗಳಲ್ಲಿ ಸಂಜೆಯ ಕಾಫಿ ಮುಗಿಸಿ ಮನೆಯ ಬಳಿಯಿರುವ ಪಾರ್ಕಿಗೆ ವಾಕಿಂಗ್ ಎಂದು ಹೋಗುವುದನ್ನ ರೂಡಿಸಿಕೊಂಡು ಸುಮಾರು ಆರು ತಿಂಗಳಾಯಿತು. ಪಾರ್ಕ್ ಎಂದರೆ ದೊಡ್ಡದೇನಲ್ಲ. ಸುತ್ತಲೂ ಸಿಮೆಂಟು ಕಟ್ಟಡಗಳೇ ಮುತ್ತಿಕೊಂಡಿದ್ದರೂ `ನನಗೂ ಆ ಕಟ್ಟಡಗಳಿಗೂ ಸಂಬಂಧವೇ ಇಲ್ಲ', ಎಂಬಂತೆ ಏಕಾಗ್ರತೆ ಕಾಪಾಡಿಕೊಳ್ಳಲು ಹವಣಿಸುತ್ತಿರುವ ಪುಟ್ಟ ಉದ್ಯಾನ. ಮೊಬೈಲ್ ಫೋನ್ ಮನೆಯಲ್ಲೇ ಬಿಟ್ಟು ಬರುವುದರಿಂದ ನನ್ನೊಟ್ಟಿಗೆ ನಾನೊಬ್ಬಳೇ ಕಳೆಯುವ ಈ ಸಮಯ ಅಮೂಲ್ಯ. ಸಾಧಾರಣ ಮಿತಿಯಲ್ಲಿ ಹೆಜ್ಜೆ ಹಾಕಿಕೊಂಡು ಮೂರು ಸುತ್ತು ಮುಗಿದು ಕಲ್ಲುಬೆಂಚಿನ ಮೇಲೆ ಐದು ನಿಮಿಷದ ಸಣ್ಣ ವಿರಾಮ. ನಂತರ ಸಣ್ಣದಾಗಿ ೪-೫ ಸುತ್ತು ಓಡುವ ಪ್ರಯಾಸ ! ಆಗಾಗ ಈ ಎನರ್ಜಿ ಎಂಬ ಮಾಂತ್ರಿಕ ದಬ್ಬಿದರೆ ಮಾತ್ರ ಇನ್ನೊಂದೆರಡು ಸುತ್ತಿಗೆ ಅವಕಾಶ. ಬೆವರು, ಏದುಸಿರು ಬೆರೆತ ಸಮಾಧಾನ! ಎಲ್ಲಾ ಸುತ್ತುಗಳು ಮುಗಿಸಿ  ಕಲ್ಲುಬೆಂಚಿಗೆ ಆನಿ ಸುಧಾರಿಸಿಕೊಂಡು  ಸುತ್ತಲೂ ಒಂದು ಕಣ್ಣಾಡಿಸಿದರೆ ಪಾರ್ಕಿನಲ್ಲಿ ಕಾಣಸಿಗುವ ಕೇಳಸಿಗುವ ಪುಟ್ಟ ಕಥೆಗಳು.  




ಬಹುಶ ಮೊಬೈಲ್ ಇಲ್ಲದ ಕಾರಣ ಇವರ ಕಥೆಗಳು  ಸ್ಪಷ್ಟವಾಗಿ ಕೇಳುಸುತ್ತವೇನೋ. ಮೊದಮೊದಲಿಗೆ ಮುಜುಗರವಾಗುತಿದ್ದರೂ ಯಾವುದನ್ನೂ ಯಾರನ್ನೂ ಜಡ್ಜ್ ಮಾಡದೆ ಅವರಿರುವಂತೆ ಅವರನ್ನು ನೋಡಲು ಅರಿಯಲು ಇದೊಂದು ಸದಾವಕಾಶವಾಗಿ ಕಂಡಿತು.  ಹೀಗೆ ವಾರಾಂತ್ಯಗಳಲ್ಲಿ ವಾಕಿಂಗ್ ಮಾಡುವುದೊಂದಾದರೆ ನಂತರದ ಈ ಕಥೆಗಳಿಗಾಗಿ ಹವಣಿಸಲು ಮೊದಲಾಯಿತು ಮನಸು .....  

ಈ ಸಣ್ಣಪುಟ್ಟ ಕಥಾನುಭವಗಳು ಹೀಗೆ ಇಲ್ಲಿ ಬರೆಯಬೇಕೆನಿಸಿ.... 

(ಸಶೇಷ)

3 comments:

  1. ಶುಭಾರಂಭ... ಶುಭವಾಗಲಿ.‌ ಬ್ಲಾಗ್ ಇದ್ದದ್ದೇ ಗೊತ್ತಿರಲಿಲ್ಲ ರೂಪ ನಿಮ್ಮದು.‌👏👏

    ReplyDelete
  2. ಮಾಯಬಜಾರಿನಂತಹ ವಾಟ್ಸಾಪ್..ಇನ್ಸ್ಡಾ ಗಳು ಬರಹಗಾರರ ಕುತ್ತಿಗೆ ಹಿಚುಕಿದೆಯೆ ಅಂತ ಹರಿದಾಡುವ ಪೋಸ್ಟ್ ಗಳನ್ನು ನೋಡಿದಾಗ..ದೇವರು ನಗುತ್ತಾನೆ ಎಂಬ ಶಾಲಾ ದಿನಗಳ ಪಾಠ ನೆನಪಿಗೆ ಬರುತ್ತಿತ್ತು...ಅದ್ಭುತ ಬರಹಗಾರರು ಅ ಆ ಈ ಈ ಬರೆದರೂ ಅದು ಚಂದದ ಲೇಖನ ಎನ್ನುವ ಅಭಿಪ್ರಾಯ ನನ್ನದು....DFR ಮತ್ತೆ ನಿಮ್ಮ ಬರಹದ ನಾಗಾಲೋಟ ಶುರುವಾಗಿರೋದುಬಲ ಖುಷಿಯ ಸಂಗತಿ...ಪರಿಸರವನ್ನು ಕೊರಳಿನ ಸರದಂತೆ ಪರಿಪರಿಯಾಗಿ ನೋಡಿ ರತ್ನಮಣಿಯಾಗಿ ಪೋಣಿಸುವ ನಿಮ್ಮ ಮನಸ್ಸು ಬಿಳಿ ಮುಗಿಲನ್ನು ಮುಟ್ಟಲಿ...ಶುಭವಾಗಲಿ DFR

    ReplyDelete
  3. ನಿಮ್ಮ ಕಥೆಗಳನ್ನು ಕೇಳುವ ಕುತೂಹಲವಿದೆ!

    ReplyDelete

ಪ್ರತಿ ಬೆಳಗೂ ಹೊಸತನ....

ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತ...