Wednesday, June 27, 2012

ಪುಸ್ತಕದ ಮಹಲು

ಈ ದಿನ ಹೊಸದೊಂದು ಅನುಭವದೆಡೆಗೆ ಹೆಜ್ಜೆ.  ಹೊಸದೊಂದು ಗುಂಪು, ಹೊಸ ಪರಿಚಯ, ನಾನಿಲ್ಲಿ ಹೊಸಬಳು - ಒಂದು ರೀತಿಯ ಕುತೂಹಲ ಈ ದಿನ ಹೇಗಿರಬಹುದೆಂಬ ಯೋಚನೆ ಹೊಸ ಹುರುಪಿನಲ್ಲಿ ಮಗಳ ಜೊತೆ, ಜ್ಯೋತಿ ಬಸು ಹಾಗು ಅವರ ಮಕ್ಕಳ ಜೊತೆ ನಾಯ೦ಡಳ್ಳಿ  ಸರ್ಕಲ್ನಲ್ಲಿ ಬಸ್ಸಿಗಾಗಿ ಕಾದು ನಿಂತ ಕೆಲವೇ ನಿಮಿಷಗಳಲ್ಲಿ ಬಸ್ಸು ಹಾಜರಿ.

ಹತ್ತಿದೊಡನೆ ಎಲ್ಲರನ್ನು ಒಮ್ಮೆ ಕಣ್ಣಾಯಿಸಿ ಕೈ ಬೀಸಿ ಸೀಟಿನಲ್ಲಿ ಕುಳಿತೆ. ಸ್ವಲ್ಪ ಹೊತ್ತಿನಲ್ಲೇ ಎಲ್ಲರ ಪರಿಚಯಗಳು ಶುರುವಾದವು. ಮಹೇಶ್, ಜ್ಯೋತಿ ಬಸು, ಶ್ರೀಕಾಂತ್, ಶಿವೂ, ಓಂ ಶಿವಪ್ರಕಾಶ್, ಪವಿತ್ರ, ಪ್ರಕಾಶ್ ಹೆಗ್ಡೆ, ಆಜಾದ್ ಸರ್, ಉಮೇಶ್, ಸುದೇಶ್, ಸುಲತ, ಸಂಧ್ಯಾ, ಗಿರೀಶ್, ನವೀನ, ನಂದಿನಿ, ಗುರು ಹೀಗೆ ಎಲ್ಲರ ಪರಿಚಯಗಳು ಮುಗಿದವು. ಇವರ ಮಧ್ಯೆ ನನ್ನ ನೆಚ್ಚಿನ ಆಶಾ ಪ್ರಕಾಶ್ ಹೆಗ್ಡೆ ಕೂಡ. ನೋಡಿದಾಗ, "ಅರೆ, ಇವರ!! ಇವರ ಬಗ್ಗೆ ನನಗೆ ಈಗಾಗಲೇ ತಿಳಿದಿದೆ,  ಪರಿಚಯವಿದೆ - ಇವರನ್ನ ಪ್ರಕಾಶ್ ರವರ ಪುಸ್ತಕಗಳಲ್ಲಿ, ಛಾಯಾಚಿತ್ರಗಳಲ್ಲಿ, ಅವರ ಕವನಗಳಲ್ಲಿ ಬೇಟಿ ಆಗಿರುವೆ" ಎಂದೆನಿಸಿದ್ದು ನಿಜ. ನಾನಿವರ A/c ಅಂದರೆ ತಪ್ಪಾಗಲಾರದು, ಕಾರಣ!..... ಯಾರೊಬ್ಬರ ಅಭಿಮಾನಿಯಾಗಲು ಕಾರಣಗಳಿರಲೇಬೇಕೆ? ಅವರನ್ನು ನೋಡಿದ್ದೇ ಒಂದು ಸಂತಸ.

ಅಲ್ಲಿಂದ ಶುರುವಾದ ಪಯಣ :

ಪ ಪ ಪ ಪರಿಚಯಗಳು - ಬಿಡದಿ ಖ್ಯಾತಿಯ ಇಡ್ಲಿಗಳು - ಅಂತ್ಯಾಕ್ಷರಿ ಹಾ ಹಾ ಹಾ ಹಾಡುಗಳ - ನಡುವೆ ಕೀ ಕೀ ಕೀ ಕೀಟಲೆಗಳು - ಆಡು ಆಡುತ್ತಲೇ ತಲುಪಿದ್ದು ಹಾಯಾಗಿ ಮಲಗಿರುವ ಶ್ರೀ ರಂಗನ ಪಟ್ಟಣಕ್ಕೆ. ಈ ಪುಟ್ಟ ನಗರದಲ್ಲಿ ಅಡಗಿರುವ ಇತಿಹಾಸಗಳೆಷ್ಟೋ - ಇದರ ನಡುವೆ ನಮ್ಮ ಮನೆಯ ಕುಲದೇವತೆ ನಿಮಿಷಾಂಬ ದೇವಿಯು ನದಿಯ ದಂಡೆಯಲ್ಲಿ ಹಸನ್ಮುಖಿಯಾಗಿ ವಾಸಿಸುತ್ತಿದಾಳೆ. ಇನ್ನು ನಮಗಂತಲೇ ಕಾದಿದ್ದ ಬಾಲು ಸರ್ ಬೇಟಿ. ಅವರ ಮುಗ್ಧ ನಗೆ ಹಾಗು ಮನ ಮುದ ನೀಡುವ ಪ್ರಾಮಾಣಿಕ ಮಾತುಗಳು. ಮಾತನಾಡುತ್ತಲೇ ತಲುಪಿದ್ದು ಒಂದು ಭವ್ಯ ಲೋಕಕ್ಕೆ, ಮೂಕ ವಿಸ್ಮಿತವಾಗಿಸುವ ಒಂದು ಪುಸ್ತಕದ ಮಹಲಿಗೆ. ಪಾಂಡವಪುರಕ್ಕೆ.




ಪಾಂಡವಪುರ ಹಾಗು ಅಂಕೆಗೌಡರು

"ಪಾಂಡವಪುರದ ಪುಸ್ತಕ ಮಹಲು" ಈ ಮಹಲಿನೊಳಗೆ ಕಾಲಿಡುತ್ತಿದ್ದಂತೆ ಎಲ್ಲಿ ನೋಡಿದರಲ್ಲಿ ಶಾರದಾಂಬೆಯ ಒಲವು - ಸರಸ್ವತಿಯದ್ದೆ ಗೆಲುವು. ಈ ಮಹಲನ್ನು ಹುಟ್ಟುಹಾಕಿದವರು ಅಂಕೆಗೌಡರು. ಅತಿ ಸರಳ ವ್ಯಕ್ತಿತ್ವ. ಅವರ ಮಹಲಿನಲ್ಲಿ ಪುಸ್ತಕಗಳದ್ದೆ ಕಾರುಬಾರು. ಎಲ್ಲೆಲ್ಲೂ ರಾಶಿ ರಾಶಿ ಪುಸ್ತಕಗಳು, ಕಾಲಿಟ್ಟೆಡೆ ಪುಸ್ತಕಗಳು, ಕಣ್ಣು ಹಾಯಿಸಿದಲ್ಲೆಲ್ಲ ಪುಸ್ತಕಗಳು!


ಈ ಸಂಗ್ರಹ ನೆನ್ನೆ ಮೊನ್ನೆಯದಲ್ಲ - ಅಂಕೆಗೌಡರ ಜೀವಮಾನದ ಸಂಗ್ರಹ! ಆರುನೂರು ವರ್ಷಗಳ ಹಿಂದಿನ ಪುಸ್ತಕಗಳಿಂದ ಹಿಡಿದು ಇತ್ತೀಚಿನ ವರೆಗೂ ಎಲ್ಲವೂ ಲಭ್ಯ!! ಒಂದು ಲಕ್ಷಕ್ಕಿಂತ ಹೆಚ್ಚು ಪುಸ್ತಕಗಳಿರಬಹುದು. ಅವರು ವೃತ್ತಿಯಲ್ಲಿ ಗಳಿಸಿದ ಪ್ರತಿಯೊಂದು ರೂಪಾಯಿ ಈ ಪುಸ್ತಕಗಳ ಖರೀದಿಗೆ ಬಳಸಿದ್ದಾರೆ. ತಮ್ಮಲ್ಲಿರುವ ಆಸ್ತಿಗಳನೆಲ್ಲ ಮಾರಿ ಪುಸ್ತಕ ಸಂಗ್ರಹಕ್ಕೆ ಉಪಯೋಗಿಸಿದ್ದಾರೆ. ಸುತ್ತ ಮುತ್ತಲಿನ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಇವರ ಪುಸ್ತಕ ನಿಧಿ ಉಪಯುಕ್ತವಾಗುತ್ತಿದೆ. ಇವರ ಈ ನಿಲುವಿಗೆ ಇವರ ಪತ್ನಿಯ ಸಹಕಾರವೂ ಮೆಚ್ಚುವಂತದ್ದೆ.



ಇವರ ಬಗ್ಗೆ ಬಾಲುರವರ ಬ್ಲಾಗಿನಲ್ಲಿ ಓದಿದ್ದೆ [http://nimmolagobba.blogspot.in/2010/08/blog-post_16.html]. ಕಣ್ಣಾರೆ ನೋಡಿದಮೇಲಂತೂ ನನ್ನ ಪ್ರತಿಯೊಬ್ಬ ಸ್ನೇಹಿತರಿಗೂ, ಪುಸ್ತಕ ಪ್ರೇಮಿಗಳಿಗೂ ಇಲ್ಲೊಮ್ಮೆ ಬೇಟಿಯಾಗುವಂತೆ ಹೇಳಲೇಬೇಕಿದೆ.


ಇವರ ಪುಸ್ತಕ ಬಂಡಾರ ಸಾರ್ವಜನಿಕರಿಗೆ ಅರ್ಪಿಸಿ ಗ್ರಂಥಾಲಯವಾಗಿಸಿದ್ದಾರೆ. ಹಾಗು ಹೀಗೂ ನಾವೆಲ್ಲರೂ ಸ್ವಾರ್ಥ ಲೋಕದಲ್ಲಿ ತೇಲುವ ನಾವಿಕರೆ ಹೌದು, ನಮ್ಮೆಲ್ಲರ ನಡುವೆ ವಿಭಿನ್ನವಾಗಿ ಸಮಾಜ ಸೇವೆ ಮಾಡುತಿರುವ ಅಂಕೆಗೌಡರಿಗೆ ನನ್ನ ಹೃದಯಪೂರ್ವಕ ನಮನ. ಇವರ ನಿಸ್ವಾರ್ಥ ಬದುಕು ಜ್ಞಾನದ ದೀವಿಗೆಯನ್ನು ಪ್ರಜ್ವಲಿಸಿ ಬೆಳಗಿಸಿದೆ! ಈ ಪುಸ್ತಕ ಪ್ರೇಮಿಗೆ - ಜ್ಞಾನ ದೇಗುಲವನ್ನು ನಿರ್ಮಿಸಿದ ಮಹಾನುಭಾವನಿಗೆ ಅನಂತಾನಂತ ವಂದನೆಗಳು.

ಎಲ್ಲರು ಮೂಕರಾಗಿ ಯಾವ ಪುಸ್ತಕವನ್ನು ನೋಡುವುದು - ಬಿಡುವುದೆಂದು ಗೊಂದಲದಲ್ಲಿರುವಾಗಲೇ ಅಂಕೆಗೌಡರನ್ನು ಪರಿಚಯಿಸಿ ಸನ್ಮಾನ ಮಾಡಿದರು ಬಾಲು ಸರ್, ಅಜಾದ್ ಸರ್ ಹಾಗು ಪ್ರಕಾಶ್ರವರು. ಈ ಸನ್ಮಾನ ಇವರ ಸಾಧನೆಗೆ ಸಲ್ಲಿಸಿದ ಗೌರವ.


ಅವರನ್ನು ಬೇಟಿ ಮಾಡಿದಾಗ ನಮ್ಮಲ್ಲಿರುವ ಒಂದೊಂದು ಪುಸ್ತಕವನ್ನು ಅಂಕೆಗೌಡರಿಗೆ ನೀಡೋಣವೆಂದು ಪ್ರಕಾಶ್ರವರು ಸೂಚಿಸಿದ್ದರು. ಅಂತೆಯೇ ನಮ್ಮೆಲ್ಲರ ಅನಿಸಿಕೆಗಳನ್ನು ಅವರೊಂದಿಗೆ ಹಂಚಿಕೊಂಡೆವು. "ಭಾವಸಿಂಚನ" ವನ್ನು ಅಂಕೆಗೌಡರ ಕಯ್ಯಲ್ಲಿ ನೋಡಿದಾಗ ಹೆಮ್ಮೆ ಅನಿಸಿದ್ದು ನಿಜ.


"ಭಾವಸಿಂಚನ" 3K ಸಧಸ್ಯರುಗಳ ಚೊಚ್ಚಲ ಕವನ ಸಂಕಲನ - ಇಂಥದೊಂದು ಐತಿಹಾಸಿಕ ತಾಣವಾಗಲಿರುವ ಗ್ರಂಥಾಲಯದಲ್ಲಿ "ಭಾವಸಿಂಚನ" - ಈಗಲೂ ನೆನೆಸಿಕೊಂಡರೆ ಒಂದು ರೀತಿಯ ರೋಮಾಂಚನ. ಈ ಖುಷಿಯನ್ನು ನನ್ನ 3K ಕುಟುಂಬಕ್ಕೆ ಹಂಚಲೆಬೇಕಿದೆ. ಈ ತಾಣಕ್ಕೆ ಬೇಟಿಯಾದವರು ಮೂಕವಿಸ್ಮಿತರಾಗುವುದಂತು ಹೇಳನಿಶ್ಚಯ!  ಅಲ್ಲಿಂದ ಹೊರಡುವ ಮಾತಿರಲಿ ಎದ್ದೇಳುವ ಮನಸು ಯಾರಿಗೂ ಇರಲಿಲ್ಲ!


ಕರಿಘಟ್ಟ [ಬೆಟ್ಟ]

ಇಲ್ಲಿಂದ ಹೊರಟದ್ದು ಹತ್ತಿರದಲ್ಲೇ ಇದ್ದ ಕರಿಘಟ್ಟಕ್ಕೆ... ವೆಂಕಟರಮಣ ಸ್ವಾಮಿಯ ದೇಗುಲಕ್ಕೆ. ನಮಗೆಂದೇ ಕಾದಿದ್ದ ಸ್ವಾಮಿಯ ಕೊನೆಯ ದರುಶನ ಮುಗಿಸಿ - ಭರ್ಜರಿ ಊಟಕ್ಕೆ ಲಗ್ಗೆ! ಮೂರು ಬಾರಿ ಪುಳಿಯೋಗರೆ ತಿನ್ನುವಷ್ಟು ರುಚಿಯಾದ ಅಡುಗೆ...ನಂತರ ಬೆಟ್ಟದ ಮೇಲಿದ್ದ ಒಂದು ಪುಟ್ಟ ಓಪನ್ ಏರ್ ಥಿಯೇಟರ್.... ಗುರು ಹಾಗು ಶಿವೂರವರ ನೇತ್ರತ್ವದಲ್ಲಿ ಆಟ - ಒಡನಾಟ. ಆದರಲ್ಲಿ ನಾವು ಬೇಟಿಯಾದ ಚೆ೦ಡಾನಂದ ಸ್ವಾಮೀಜಿಗಳು, ಅವರ ವೇಷ ಭೂಷಣ ಹಾಗು ಭಕ್ತರಿಗೆ ನೀಡಿದ ಸಲಹೆಗಳು, ಅಳು ಬರುವಷ್ಟು ನಕ್ಕ ಕ್ಷಣಗಳು ಅವಿಸ್ಮರಣೀಯ!
ಸಂಜೆಯಷ್ಟರಲ್ಲಿ - ಈ ದಿಗ್ಗಜರುಗಳೇ ತುಂಬಿದ ಬ್ಲಾಗಿಗರ ಸಮೂಹದಲ್ಲಿ ನಾನಿನ್ನು ಹೊಸಬಳು ಎನ್ನುವ ಮಾತು ಹೇಳುವಂತಿರಲಿಲ್ಲ. ಇದೊಂದು ಸುಂದರ ಪ್ರವಾಸ, ಮರೆಯಲಾಗದ ಸ್ನೇಹಕೂಟ .... ಸಜ್ಜನರ ಸಹವಾಸದೋಳ್ ಹೆಜ್ಜೇನ ಸವಿದೆ.... ಮನೆಗೆ ಬಂದಾದರೂ ಇಲ್ಲಿಯವರೆಗೂ ಅಲ್ಲಿನ ನೆನಪುಗಳು ಕಾಡುತಿವೆ.

ಮತ್ತೆ, ಒಬ್ಬೊಬ್ಬರ ಕಯ್ಯಲ್ಲೂ ನೋಡಿದ ಕ್ಯಾಮೆರಾಗಳು ನನ್ನನ್ನು ಹಣುಕಿಸಿದ್ದುಂಟು, ಗಾಬರಿಗೊಳಿಸಿದ್ದುಂಟು! ಹೊಸ ಕ್ಯಾಮೆರ ಕೊಡಿಸದೇ ಹೋದರೆ ಅಡುಗೆ ಮಾಡಲಾರೆ ಎಂದು ಪಟ್ಟು ಹಿಡಿದರೆ ಕ್ಯಾಮೆರ ಮನೆಗೆ ಬಂದರೂ ಬಂದೀತು:-)

ಸಂತಸವೆಂದರೆ ಮತ್ತೊಮ್ಮೆ ಪಾಂಡವಪುರಕ್ಕೆ ನನ್ನ ಬೇಟಿ ಆಗುವ ಎಲ್ಲ ಸಂಭವಗಳು ಇವೆ. ಬೇಗ ತಿಳಿಸುತ್ತೇನೆ. ಇಂತದೊಂದು ಪ್ರವಾಸಕ್ಕೆ ನನ್ನನ್ನು ಆಮಂತ್ರಿಸಿದ ಪ್ರಕಾಶ್ರವರಿಗೆ ಹೃದಯಪೂರ್ವಕ ಧನ್ಯವಾದಗಳು.

 * * * *

 
ತಮ್ಮ ಫೋಟೋಗಳನ್ನು ನನಗೆ ನೀಡಿದ ಜ್ಯೋತಿ ಬಸು ಹಾಗು (ಅಲ್ಲಿಲ್ಲಿ ನಾನೇ ಕದ್ದು ತಂದ) ಫೋಟೋಗಳ ಮಾಲೀಕರಿಗೆ ಪ್ರೀತಿಯ ಧನ್ಯವಾದಗಳು.

PS : ಅಂಕೆಗೌಡರಿಗೆ ತಮ್ಮ ಪುಸ್ತಕಗಳನ್ನು ಕಳಿಸಲು ಇಚ್ಚಿಸುವವರು, ಸಹಾಯ ಹಸ್ತ ನೀಡಲಿಚ್ಚಿಸುವವರು, ಬೇಟಿ ಆಗ ಬಯಸುವವರು - ಈ ವಿಳಾಸವನ್ನು ಬರೆದುಕೊಳ್ಳಿ :
ಶ್ರೀ ಅಂಕೆ ಗೌಡ ಜ್ಞಾನ ಪ್ರತಿಷ್ಠಾನ [ರಿ]
ಹರಳ ಹಳ್ಳಿ
ಪಾಂಡವಪುರ ತಾಲೂಕ್
ಮಂಡ್ಯ ಜಿಲ್ಲೆ.571434
ಮೊಬೈಲ್ ನಂಬರ್ ;9242844934 ,9242844206

Tuesday, June 19, 2012

ರಾಗಿ ಮುದ್ದೆ ತಿನ್ನುವಂತದಲ್ಲ!


ಈ ದಿನ ಮನೆಗೆ ನಮ್ಮ ಮನೆಯವರ ಸೋದರ ಮಾವ ಬಂದಿದ್ದಾರೆ. ಮೈಸೂರು ಜಿಲ್ಲೆಯ, ಹುಣಸೂರಿನ ಬಳಿ ಒಂದು ಪುಟ್ಟ ಹಳ್ಳಿ ಅವರದು. ಪ್ರತಿ ವರ್ಷ ಅವರೇ ಬಿತ್ತಿ ಬೆಳೆಯುವ ಅಕ್ಕಿಯ ಮೂಟೆಯೊಂದನ್ನು ಮನೆಗೆ ತಂದು ಕೊಡುವ ಪದ್ಧತಿ ಅವರದು. ರೈತ ಬಂಧು - ನಮ್ಮ ಮನೆಯ ಅನ್ನದಾತ! ಇವರು ಬಂದಾಗಲೆಲ್ಲ ನನಗೊಂದು ಪುಟ್ಟ ಸಮಸ್ಯೆ! ಹಾಗೆ ನೋಡಿದರೆ ಅದು ದೊಡ್ಡ ಸಮಸ್ಯೆಯು ಹೌದು. ಇವರು ರಾಗಿ ಮುದ್ದೆ ಇಲ್ಲದೆ ಊಟ ಮಾಡುವ ಆಸಾಮಿ ಅಲ್ಲ. ಹಾಗೊಮ್ಮೆ-ಹೀಗೊಮ್ಮೆ ರಾಗಿ ಮುದ್ದೆಯನ್ನು ತಿನ್ನುತಿದ್ದ ನಾನು, ಅದು ತಿನ್ನುವಂತದಲ್ಲ, ನುಂಗುವಂತದ್ದು ಎನ್ನುವ ಸಂಗತಿ ಅರಿತು - ನುಂಗುವುದನ್ನು ಕಲೆಯಲು ಸುಮಾರು ವರ್ಷಗಳೇ ಹಿಡಿದವು. ಹೀಗಿರುವಾಗ, ಮನೆಯಲ್ಲಿ ರಾಗಿ ಮುದ್ದೆ ಅಷ್ಟು ಸುಲಭವಾಗಿ ಮಾಡುವುದೆಲ್ಲಿಂದ ಬರಬೇಕು? ಮನೆಯವರಿಗೆ ಇಷ್ಟವಾದರು ಮಾಡಲಿಕ್ಕೆ ಬರದೆ ಒದ್ದಾಡಿದ್ದುಂಟು. ಈ ಸಧ್ಯಕ್ಕೆ ನಮ್ಮ ಅನ್ನದಾತನಿಗೆ ರಾಗಿ ಮುದ್ದೆ ಊಟಕ್ಕೆ ಬಡಿಸಲು ಪಕ್ಕದ ಮನೆಯ ಸುನಿತರನ್ನು ಮಾಡಿಕೊಡುವಂತೆ ಕೇಳಿಕೊಳ್ಳಬೇಕು, ಅವರು ತಮ್ಮ ಕೆಲಸ ಕಾರ್ಯಗಳನೆಲ್ಲ ಬಿಟ್ಟು ನಮ್ಮ ಮನೆಗೆ ಬಂದು ಮುದ್ದೆ ಮಾಡಿಕೊಡಬೇಕು, ಅದನ್ನು ನೋಡಿ ನಮ್ಮ ಅನ್ನದಾತ, "ಇನ್ನು ಮುದ್ದೆ ಕಟ್ಲಿಕ್ಕೆ ಬರಕಿಲ್ವೇನವ್ವ" ಅಂತ ಡೈಲಾಗ್ ಹೊಡಿಬೇಕು, ಇದನ್ನ ಕೇಳಿಸಿಕೊಂಡ ನಮ್ಮ ರಾಯರು ನನ್ನ ಕಸಿವಿಸಿ ಗಮನಿಸಿ ಕಣ್ ಹೊಡೆದು ಹೋಗಬೇಕು, ಸಂಜೆ ಇದರ ಬಗ್ಗೆ ಮನೆಯಲ್ಲಿ ಒಂದು ಸಣ್ಣ ಚರ್ಚೆಯಾಗಬೇಕು....

ಮಾಡಲು ಬಾರದ ರಾಗಿಮುದ್ದೆ!
ನನ್ನವರಿಗಿಷ್ಟ ರಾಗಿಮುದ್ದೆ,
ಬಾರದು ನನಗೆ ಕಷ್ಟವೋ ಅಡುಗೆ!

ಅಮ್ಮನ ಕೇಳಿದೆ ಮಾಡುವ ರೀತಿ,
ಆದರು ಆಯಿತು ಎಲ್ಲ ಪಜೀತಿ!
ನಲ್ಲನ ಟೀಕೆ ಎಲ್ಲರ ಮುಂದೆ,
ನನಗೋ ಹಿಂಸೆ ನಾಚಿಕೆ ಒಳಗೆ!

ಆದರು ಬಿಡದೆ ಕಲಿಯಲು ಹೊರಟೆ
ಮಾಡುವುದ್ಹೆಂಗೆ? ಕಲೆಸುವುದೆಂಗೆ?
ವಿಧವಿಧವಾದ ಮುದ್ದೆಯ ಶೋಧನೆ,
ತಂದಿತು ನನ್ನಲಿ ಸಂಕಟ ರೋದನೆ!

ನೀರಿನ ಮುದ್ದೆ, ಗಟ್ಟಿಯ ಮುದ್ದೆ,
ಬೇಯದ ಮುದ್ದೆ, ಗಂಟಿನ ಮುದ್ದೆ!
ಹೇಗೆ ಮಾಡಿದರು ಕೆಟ್ಟಿತು ಮುದ್ದೆ,
ಕಾಡಿತು ನನ್ನ ಬಾರದೆ ನಿದ್ದೆ!

ತುಂಬಿದ ಕಂಗಳು ಹರಸಿತು ಗಂಗೆ,
ನಲ್ಲನ ತೋಳಲಿ ಅತ್ತಿದ್ದು ಹಿಂಗೆ!
ಹಣೆಗಿಟ್ಟ ಮುತ್ತಿನ ಸಾಂತ್ವನ
ಮನಸಿಗೆ ನೀಡಿತು ಪ್ರೀತಿಯ ಸಿಂಚನ

ಮುದ್ದಿನ ನಲ್ಲನ ಮುದ್ದೆಯ ಪ್ರೀತಿ
ಮಾಡಲು ಕಲಿಸಿತೆ ನನಗೊಂದು ದಿನ!

- ಬಾಳೊಂದು ಭಾವಗೀತೆ -

ಅದು ಹಾಗಿರಲಿ, ಹಾಗೇ ಇರಲಿ ಅಂದುಕೊಳ್ಳುವಾಗ ಬರೆದ ಈ ಕವನ 3Kಯಲ್ಲಿ ಪೋಸ್ಟ್ ಮಾಡಿದೆ: [ಇದನ್ನು ಕವನ ಎಂದು ಕರೆಯಲು ಈಗ ವಿಪರೀತ ಸಂಕಟ]. ಕವನಕ್ಕೆ ಬಂದ ಅಭಿಪ್ರಾಯ ಅನಿಸಿಕೆಗಳು ಪ್ರೇರಣಾತ್ಮಕ! ಪ್ರತಿ ಬಾರಿ ಕವನ ಬರೆದು ಸಮುದಾಯದಲ್ಲಿ ಪೋಸ್ಟ್ ಮಾಡುವಾಗ ಏನೋ ಒಂದು ತಳಮಳ. ಪರೀಕ್ಷೆಯಲ್ಲಿ ಬರೆದ ವಿಧ್ಯಾರ್ಥಿಯ ಮನಸು, ಪಲಿತಾಂಶಕ್ಕಾಗಿ ಕಾಯುವ ತವಕ. ಒಂದೆರಡು ಅನಿಸಿಕೆಗಳು ಬಂದರು ಸಹ, ಒಂದು ಸಾರ್ಥಕತೆಯ ಉಲ್ಲಾಸ. ಈ ಉಲ್ಲಾಸ ಎಷ್ಟೊಂದು ವಿಶಿಷ್ಟವಾಗಿದೆ, ಈ ಉಲ್ಲಾಸಕ್ಕೆ ಎಷ್ಟೊಂದು ಶಕ್ತಿ ಇದೆ.

ಬಾಂಧವ್ಯದಲ್ಲಿ ದೇವರಿದ್ದಾನೆ ನಿಜಾನ?

ನಾ ಕಂಡಂತೆ ಸಮುದಾಯದಲ್ಲಿ ಹೆಚ್ಚಿನ ಸಧಸ್ಯತ್ವಕ್ಕೆ ಅರ್ಜಿಗಳು ಬರತೊಡಗಿವೆ. ಇಲ್ಲಿ ಕವನಗಳಿಗೆ ಪ್ರೇರಣೆಯೇ ಪುಷ್ಟಿ ನೀಡುವ ಅಮೃತಬಿಂಧು ಆಗಿದೆ. ಪ್ರೇರಣೆ ಅಂದರೆ ಹೀಗೇನಾ? ಕಾಲಿ ಬಾಟಲಿನಲ್ಲಿ ಗಾಳಿಯು ಸಹ ಪೂರ್ತಿ ತುಂಬಿದೆ ಎಂದು ತೋರುವ ರೀತಿನ? ಜಾರಿ ಬಿದ್ದವನಿಗೆ ಕೈಕೊಟ್ಟು ಎಳೆದೆಬ್ಬಿಸುವ ಹಸ್ತಾನ? ಬತ್ತಿ ಹೋದ ಜೀವಕ್ಕೆ ಒಂದು ಮುಗುಳುನಗೆಯ ಕಾಣಿಕೆನಾ? ಒಂದು "ಭಲೇ" ಎನ್ನುವ ಪದ ನೂರು ಜೀವಕಣಗಳಿಗೆ ಉತ್ತೆಜನನಾ? ಈ ಕಣಗಳು ಕ್ರಿಯಾತ್ಮಕತೆಯ ಸಾಗರವಾಗುವುದು ಸರೀನಾ? ಮುಖ ಪರಿಚಯವೇ ಇಲ್ಲದ ಅಪರಿಚಿತರು

ಮೆಚ್ಚುಗೆಯಾಡಿದಾಗ ಅಣು-ಅಣುವು ಪುಟಿಯುವುದು ನ್ಯಾಯಾನ? ಒಂದೇ ಆಕಾಶದ ಕೆಳಗೆ - ಒಬ್ಬನೇ ಚಂದ್ರನನ್ನ ಹಂಚಿಕೊಂಡ ಬೇರೆ ಬೇರೆ ಊರು ಕೇರಿಯ ಧೀಮಂತರ ನಡುವೆ, ಅರಳುತ್ತಿರುವ ನವ-ಬಾಂಧವ್ಯದಲ್ಲಿ ದೇವರಿದ್ದಾನೆ ನಿಜಾನ?

3K ಸಮುದಾಯದ ಮೊದಲ ಹೆಜ್ಜೆ

ಸಮುದಾಯದಲ್ಲಿ ಮೂಡಿ ಬಂದ ಕವನಗಳನ್ನು ವಿಶ್ಲೇಷಿಸುತ್ತ - ಅನುವಾದಗಳ ನಡುವೆ ನನ್ನನ್ನು "ಅಕ್ಕ" ಎಂದು ಕರೆದು ನಾಮಕರಣ ಮಾಡಿದ್ದ ಕ್ವಿಕಿ ಅರುಣ್! ಇದರ ಜೊತೆಗೆ ನನಗೊಂದು ಮೇಲ್ ಸಹ! "ಅಕ್ಕ, ನಿಮ್ಮ ಅನುಮತಿಯಿದ್ದರೆ ನನ್ನನ್ನು ಈ ಸಮುದಾಯಕ್ಕೆ ಮಾಡರೇಟಾರ್ ಆಗಿ ಮಾಡಿ", ಎಂದು. ಇವನು ನನ್ನನ್ನು ಅಕ್ಕ ಎಂದು ಕರೆದ ರೀತಿಗೆ ಅರ್ಧ ಸೋತು (ಸತ್ತು) ಹೋಗಿದ್ದೆ! ಇವನ ಪತ್ರ ಓದಿ ಕುಣಿಯುವಂತಾದರು, ಸುಧಾರಿಸಿಕೊಂಡೆ, ಸಾವರಿಸಿಕೊ೦ಡೆ, ಆಸಕ್ತಿಗೆ ಕೃತಜ್ಞಳಾಗಿ, "ಆದಷ್ಟು ಬೇಗ ತಿಳಿಸುತ್ತೇನೆ" ಎಂದು ಉತ್ತರಿಸಿದೆ. ಇವನು ನನ್ನನ್ನು "ಅಕ್ಕ" ಎಂದು ಏಕೆ ಕರೆದ? ಹೇಗೆ ಕರೆದ? ನನ್ನ ವಯಸ್ಸು ತಿಳಿಯಲು ಸಮುದಾಯದಲ್ಲಿ ನನ್ನ ಭಾವಚಿತ್ರವಂತು ಇನ್ನು ಪ್ರಕಟಿಸಿಲ್ಲ. ಕವನಗಳ ನಡುವಿನ ಮಾತು ಕತೆಯ ಹೊರತು ಇನ್ನ್ಯಾವ ಪರಿಚಯವೂ ಇರಲಿಲ್ಲ, ಬಹುಶ ನನ್ನ ನಡುವಳಿಕೆ ತುಂಬಾ ದೊಡ್ದವಳಹಾಗೆ ಅನಿಸಿಹೊಗಿದೆಯೇ? ಅದೇನೇ ಇರಲಿ, ಅವನಿಟ್ಟ ಹೆಸರು / ಪದ ನನ್ನ ಜೀವಕ್ಕೆ ಅತ್ಯಂತ ಸನಿಹ. ಇದರ ಹಿಂದೆ ನನ್ನ ಅನ೦ತಾನಂತ ನೆನಪುಗಳೇ ಅಡಗಿವೆ.
ಸಮುದಾಯ ಹೀಗೆ ರೂಪುಗೊಳ್ಳುತಿರುವುದು ಸರಿ, ಅದರ ಪರಿಣಾಮಗಳನ್ನು ವಿಂಗಡಿಸುವಂತೆ ಮನಸು ಹೇಳುತಿದೆ. ಮುಂದೇನಾಗುವುದೋ ಎಂದು ಕಾದು ನೋಡುವ ಪ್ರೇಕ್ಷಕರ ವರ್ಗಕ್ಕೆ ನಾನು ಸಹ ಸೇರಿಹೋದೆ. 3K ಸಮುದಾಯದ ಬುನಾದಿಗೆ ಕ್ವಿಕಿಯ ಈ ಮೇಲ್ ಮೊದಲ ಹೆಜ್ಜೆಯೇನೋ?

ಹ...ಹ...ಹ...ಹರಟೆ

ಹರಟೆ ಹೊಡೆಯುವ ಕಾಯಕ ಯಾರಿಗೆ ತಾನೇ ಇಷ್ಟವಾಗದು. ಇದನ್ನು ಎಲ್ಲರಿಗಿಂತ ಚೆನ್ನಾಗಿ ಅರಿತ ನಮ್ಮ ಸಧಸ್ಯ ಹ..ಹ..ಹ..ಹರಟೆ ಎಂದನೇ? ಕ..ಕ..ಕ..ಕಟ್ಟೆ ಎಂದನೇ? ಕವನಗಳ ಸಮುದಾಯದಲ್ಲಿ ಈ ಕಟ್ಟೆಗೇನು ಕೆಲಸ? ಏನ್ ಕೆಲಸ? ನೀವೇ ಹೇಳಿ ಏನ್ ಕೆಲಸ ಅಂತ :-)

ಪ್ರತಿ ಬೆಳಗೂ ಹೊಸತನ....

ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತ...