Wednesday, March 5, 2014

ಹೀಗೊಂದು ಮಹಿಳಾ ದಿನಾಚರಣೆ!!

ಈ ದಿನ ಎಂದಿಲ್ಲದ ಕೆಲಸ ಮನೆಯಿಂದಲೇ ಮೊದಲಾಗಿತ್ತು, ಅನಿರೀಕ್ಷಿತ ನೆಂಟರು - ಅತಿಥಿ ದೇವೋಭವ! ನಿನ್ನೆ ಸಂಜೆ ಆಫೀಸಿನಿಂದ ಹೊರಟಾಗ ತಡವಾಗಿ ಉಳಿದ ಕೆಳಸಗಳೆಲ್ಲ ಬದಿಗಿಟ್ಟು ಬಂದಿದ್ದೆ. ಈ ದಿನ ಮನೆಯಿಂದಲೇ ವಿಳಂಬ. ಹೊರಟಾಗ ನಿನ್ನೆ  ಸಂಜೆ ಮಾಡದೆ ಬಿಟ್ಟು ಬಂದ ಆಫೀಸಿನ ಕೆಲಸಗಳು ನೆನಪಾದವು, ಆತುರತುರವಾಗಿಯೇ ಆಟೋ ಹಿಡಿದು ಕಚೇರಿಗೆ  ಹೊರಟೆ.

Happy Womens Day 2012 04

ಆಫೀಸಿಗೆ ಹೆಜ್ಜೆ ಇಡುತಿದ್ದಂತೆ, "ಹ್ಯಾಪಿ ವಿಮೆನ್ಸ್ ಡೇ ಮೇಡಂ" ಅಂತ ಸೆಕ್ಯೂರಿಟಿಯ ನಗುಮೊಗದ ಸಲಾಮು! ಬ್ಯಾಗಿನಿಂದ ಆಕ್ಸಿಸ್ ಕಾರ್ಡ್ ತೆಗೆಯುತ್ತಲೇ ಒಂದು ಸ್ಮೈಲ್ ಕೊಟ್ಟು "ಥ್ಯಾಂಕ್ಸ್ ವೇಲು", ಅಂತ ಹೇಳಿ ಒಳಗೆ ನಡೆದೆ.  ಈ ದಿನ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ!  ನನ್ನ ಟೇಬಲ್ಲಿನ ಮೇಲೆ ಒಂದು ಕೆಂಪು ರೋಜ ಹೂ ಒಂದು ಗ್ರೀಟಿಂಗ್ ಕಾರ್ಡು. "Happy Women's Day To Smt. Roopa Satish, from Admin Staff" ಅಂತ ಬರೆದಿತ್ತು. ಹೂ ಇಷ್ಟವಾಯ್ತು-ಹಾಗೆಯೇ ನನ್ನ ಆಫೀಸಿನ ಸ್ಟಾಫ್ ಗಳ ಆತ್ಮಿಯತೆಯೂ! ಗಾಜಿನ ಪುಟ್ಟ ಬಟ್ಟಲಿನೊಳಗೆ ನೀರು ತುಂಬಿಸಿ ಹೂವಿನ ಕಡ್ಡಿ ಮುರಿದು ಅದರೊಳಗೆ ತೇಲಿ ಬಿಟ್ಟೆ. ಇನ್ನು ಮೇಲ್ ಬಾಕ್ಸ್ ತುಂಬಾ ವಿಶೇಷವಾದ ಶುಭ ಸಂದೇಶಗಳು. ಅದರಲ್ಲಿ ಮನಸೆಳೆದ ಒಂದು ಸಂದೇಶ ನಮ್ಮ ಆಫೀಸಿನ ಹಿರಿಯರಲ್ಲಿ ಒಬ್ಬರಾದ ಜನರಲ್ ಮ್ಯಾನೇಜರ್ (GM) ರವರದ್ದು. ಹೆಣ್ಣು ಸಮಾಜದ ಕಣ್ಣು ಎನ್ನುತ್ತ ತಾಯಿ-ಮಗಳು-ಪ್ರೇಯಸಿ-ಅಕ್ಕ-ತಂಗಿಯರ ಪ್ರತಿರೂಪಗಳ ಬಗ್ಗೆ ವಿಶೇಷವಾಗಿ ವಿವರಿಸಿ ಬರೆದ ಆ ಸಂದೇಶ ಓದುವಾಗ "ಅಟ್ಟದ ಮೇಲೆ / ಬೆಟ್ಟದ ಮೇಲೆ" ಕುಳಿತ ಭಾವನೆಯೇನೋ ಮೂಡಿದ್ದು ನಿಜ. ಆದರು ಚುಟುಕಾಗಿ "ಧನ್ಯವಾದ ಸರ್" ಅಂತ ಉತ್ತರಿಸಿ ಮುಗಿಸಿದೆ. ಸುಮಾರು ಹನ್ನೆರಡು ಗಂಟೆಯ ಹೊತ್ತಿಗೆ ಕಂಪನಿಯ GM ರವರಿಂದ ಒಂದು ಆಹ್ವಾನ, - "ಆಫೀಸಿನ ಎಲ್ಲಾ ಹೆಣ್ಣುಮಕ್ಕಳಿಗೂ ಈ ದಿನ ರೆಸಿಡೆನ್ಸಿ ಹೋಟೆಲಿನಲ್ಲಿ ಬುಫೆ ಲಂಚ್ ಕಂಪನಿಯವತಿಯಿಂದ" ಎಂದು.
ಆಫೀಸಿನ ಹತ್ತಿರದಲ್ಲೇ ಇದ್ದ ರೆಸಿಡೆನ್ಸಿ ಹೋಟೆಲ್ ನಲ್ಲಿ ಈ ದಿನ ಹೆಣ್ಣುಮಕ್ಕಳದ್ದೇ ಕಾರುಬಾರು. ಹೆಂಗೆಳೆಯರ ಈ ವಿಶೇಷ ಔತಣ ಕೂಟದಲ್ಲಿ GM ರವರ ಉದಾರ  ಮನೋಭಾವ, ವಿಶಾಲ ಹೃದಯ ಹಾಗು ಆತ್ಮೀಯ ಸಂದೇಶಗಳ ಕುರಿತಾಗಿಯೇ ಹೆಚ್ಚಿನ ಮಾತುಕತೆ. ನನ್ನ ಕಣ್ಣು ಮನಸೆಲ್ಲ ಅಲ್ಲಿದ್ದ ಚಿಕನ್ ಬಿರಿಯಾನಿಯ ಕಡೆಗೆ ಇದ್ದಿದ್ದು ಯಾರು ಗಮನಿಸಿರಲಾರರು, ಅಥವ ಗಮನಿಸಿದರೂ ಏನಂತೆ ಬಿರಿಯಾನಿ ತಿನ್ನದೇ ಹೋದರೆ - ಬಿರಿಯಾನಿಯಾದ ಕೋಳಿ ಬೇಜಾರು ಮಾಡಿಕೊಂಡೀತು. ಕೆಲಸವಿದ್ದ ಕಾರಣ ಊಟ ಮುಗಿಸಿ ಹೋಟೆಲಿನಿಂದ ಒಬ್ಬಳೆ ಆಫೀಸಿಗೆ ಬಿರಬಿರನೆ ಹೊರಟು ಬಂದೆ.

ಶೋನು ನಿಜಮ್ : ಹೇಳೋದೊಂಥರ - ಕೇಳೋದೊಂಥರ
ಕಿವಿಗೆ ಈಯರ್ ಫೋನ್ ಹಾಕಿಕೊಂಡು ಸೋಮೇಶ ಮೆಟ್ಟಿಲಿನ ಮೇಲೆ ಕುಳಿತಿದ್ದ. "ಹೋಯ್ ಸೋಮ ಯಾವ್ ಹಾಡು?" ಹುಬ್ಬೇರಿಸಿ ಕೇಳಿದೆ. ಇಡೀ ಆಫೀಸಿನಲ್ಲಿ ಕನ್ನಡ ಹಾಡುಗಳನ್ನ ಕೇಳುವ ಏಕೈಕ ಕ೦ದ ನಮ್ಮ ಆಫಿಸ್ ಬಾಯ್ ಸೋಮೇಶ. "ಹೇಳೋದೊಂಥರ ಥರ ಕೇಳೋದೊಂಥರ ಥರ ಹಾಡು, ಷೋಣು ನಿಜಮ್ ಮೇಡಂ" ಅಂದ. ನಗು ಬಂದರು ಸಾವರಿಸಿಕೊಂಡು, "ನಿನ್ನ ತಲೆ, ಅದು ಹೇಳಲೊಂಥರ ಥರ, ಕೇಳಲೊಂಥರ ಥರ ಕಣೋ, ಆಮೇಲೆ ಹಾಡಿರೋದು ಷೋಣು ನಿಜಮ್ ಅಲ್ಲ ಸೋನು ನಿಗಮ್, ಕೊಲೆ-ಕೊಲೆ ಮಾಡ್ಬಿಡ್ತೀನಿ ತಪ್ಪು ತಪ್ಪಾಗಿ ಹೆಸರನೆಲ್ಲ ಹೇಳಿದ್ರೆ ಗೊತ್ತಾಯ್ತ" ಅಂತ ಅವನ ಕಾಲೆಳೆದು ನನ್ನ ಸೀಟಿಗೆ ಬಂದೆ.

ಕಿತ್ತಳೆ ಹಣ್ಣು ಸುಲಿಯದಿದ್ದರೆ!!!
ಆಗಲೇ ಪಕ್ಕದ ರೂಮಿನಿಂದ ಜೋರಾಗಿ ಕೇಳಿ ಬರ್ತಿದ್ದ GM ರವರ ಮಾತುಗಳು ಬೇಡವೆಂದರೂ ಕಿವಿಯ ಮುಟ್ಟಿತು . ತೆಲುಗಿನಲ್ಲಿ ಹೆಂಡತಿಯನ್ನು ಕೀಳಾಗಿ ಕೆಟ್ಟ ಮಾತುಗಳಿಂದ ಬಯ್ಯುವುದು ಕೇಳಿದವು! ಮನೆಗೆ ಬಂದರೆ ನಾಕು ಬಾರಿಸಿ ಬಿಡುವೆ ಎಂದು ಅರಚುತಿದ್ದರು. ಕಾರಣ? ಇವರ ಊಟದ ಡಬ್ಬಿಯಲ್ಲಿದ್ದ ಸಂಡಿಗೆ ಸರಿಯಾಗಿ ಕರಿದಿರಲಿಲ್ಲ,  ಕಿತ್ತಳೆ ಹಣ್ಣಿನ ಸಿಪ್ಪೆ ಸುಲಿದಿರಲಿಲ್ಲ!!!!!  ಬಹುಶ ನಾನಿರುವುದು ಅವರಿಗೆ ತಿಳಿದಂತಿರಲಿಲ್ಲ. ಇವರ ಮಾತುಗಳನ್ನ ಕೇಳುತಿದ್ದಂತೆ ಇವರ ಮುಂದೆ ಹೋಗಿ ತಿನ್ದದೆಲ್ಲ ಕಕ್ಕಿಬಿಡುವ ಹಾಗೆ ಅನಿಸಿತ್ತು, ಆ ಹೂವು, ಗ್ರೀಟಿಂಗ್ ಕಾರ್ಡು, ಅವರು ಕಳಿಸಿದ್ದ ಮೇಲ್ ಎಲ್ಲವನ್ನು ಹರಿದು ಮುಖದ ಮೇಲೆ ಎಸೆದು ಬರಬೇಕೆನಿಸಿತು. ತನ್ನ ಮನೆಯ ದೀವಿಗೆ - ತನ್ನ ಮಡದಿ! ಸಮಾಜದಲ್ಲಿ ತನಗೆ ದೊರೆತ ಸ್ಥಾನ ಮಾನಗಳಲ್ಲಿ ಪಾಲುದಾರಳು, ಇವನ ಹೊರ ಪ್ರಪಂಚದ ಹಸಿ ಗುಟ್ಟುಗಳೆಲ್ಲ ತಿಳಿದೋ-ತಿಳಿಯದೆಯೋ ಇವನಿಗಾಗಿ ಜೀವ ತೇಯುವ ಶ್ರೀಮತಿ.  ತನ್ನ ಮನೆಯ ಸ್ತ್ರೀಯರನ್ನು ಗೌರವಿಸದೆ ಸಮಾಜದ ಮುಂದೆ ಧರಿಸುವ ಮುಖವಾಡದ ಇವರ ಬದುಕಿಗೆ ದಿಕ್ಕಾರವೆಸೆದೆ. 
ಇನ್ನೊಂದು ತಾಸಿನಲ್ಲಿ GM ರವರು ಎದ್ದು ಬಂದು, "ದಿಸ್ ವೀಕೆಂಡ್ ಐ ಆಮ್ ಟೂ ಬಿಜಿ ವಿಲ್ ಕ್ಲೀನ್ ಮೈ ಕಾರ್ ಅ೦ಡ್ ಗರಾಜ್" ಅಂತ ಯಾರಿಗೋ ಹೇಳಿಕೊಂಡು ರೋದಿಸುತ್ತಿರುವುದು ಕೇಳಿಬಂತು. ಮನೆ, ಕಾರು, ಮೋಟಾರು ಕ್ಲೀನ್ ಆಗುವ ಕೆಲಸವೇನೋ ಸರಿ ಸರ್, ನಿಮ್ಮ ಮನಸು ಕ್ಲೀನ್ ಆಗಲಿಕ್ಕೆ???

ಧೂಳಿಡಿದ ನೆನಪುಗಳ ಮೇಲೆ ಬಿರುಮಳೆ ಸುರಿದಂತೆ
ಹೀಗಂದುಕೊಂಡು ಬಾಟಲಿಯ ನೀರನ್ನು ಪೂರ್ತಿಯಾಗಿ ಕುಡಿದು ಮುಗಿಸಿದೆ. ನನ್ನ ದೈನಿತ್ಯದ ಕೆಲಸ ಕಾರ್ಯಗಳ ನಡುವೆ ಆರ್ಕುಟ್ನ ನನ್ನ 3K-ಸಮುದಾಯಕ್ಕೆ ಆಗಾಗ ಬೇಟಿಯಾಗುವುದು ರೂಡಿ. ಈ ದಿನದ ಕವನಗಳ ಮೇಲೊಂದು ಕಣ್ಹಾಯಿಸಿ - ಮೆಚ್ಚುಗೆ ವ್ಯಕ್ತಪಡಿಸಿ - ಸಂತೃಪ್ತಳಾಗುವ ಈ ಹವ್ಯಾಸ ಮುದ ನೀಡಿತ್ತು. ಅನೇಕ ವಿಷಯಗಳ ಬಗ್ಗೆ ಕುತೂಹಲವೆಸಗುವ ಕವನಗಳ ನಡುವೆ ನಿಬ್ಬೆರಗಾಗಿ ನಿಂತ ಅನುಭವ. ಈ ದಿನದ ಕವನಗಳು ವಿಶೇಷವಾಗಿ ಹೆಣ್ಣಿನ ಕುರಿತು, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಕುರಿತು! ಈಗಷ್ಟೇ ಶುರುವಾದ ಈ ಸಮುಧಾಯ ಮುಕ್ತವಾಗಿ ಮಾತನಾಡುವ ಧೈರ್ಯ ಮಾಡಲು ಯತ್ನಿಸುತಿದ್ದೆ. ಹೇಳಬೇಕೆಂದರೆ ಅಪರಿಚಿತರ ನಡುವಿನ ಸಂಭಾಷಣೆ ಒಂದು ರೀತಿಯ ಅನಿರೀಕ್ಷಿತ ಸ್ನೇಹ ಬಾಂಧವ್ಯಕ್ಕೆ ಎಡೆಮಾಡುತಿರುವಂತೆ ಎನಿಸಿತು. ಈ ಸ್ನೇಹ - ಈ ಬಂಧ ಎಲ್ಲಿಗೆ ಮುಟ್ಟುವುದೋ! ಇದರ ನಡುವೆ ಯಾರೋ "ರೂಪಕ್ಕ" ಅಂತ ಕರೆದಂಗಾಯ್ತು, ಯಾರದು? ಕಣ್ಣಾಲಿಗಳಲ್ಲಿ ಎರಡು ಬಿಂದು ಥಟ್ಟನೆ ಜಾರಿತ್ತು? ಹೆಚ್ಚಿಗೆ ಮಾತನಾಡದೆ ಆರ್ಕುಟ್ನಿಂದ ಹೊರಬಂದೆ. "ರೂಪಕ್ಕ" ಅನ್ನುವ ಶಬ್ದ ಬರೆ ಹೆಸರಾಗಿರಲಿಲ್ಲ...... ಮನದಾಳದಿ ಅವಿತ, ನಿತ್ಯ ಕಾಡುವ, ಧೂಳಿಡಿದ ನೆನಪುಗಳ ಮೇಲೆ ಬಿರುಮಳೆ ಸುರಿದಂತೆ! ಇನ್ನುಳಿದರ್ಧ ದಿನ ಭಾರವಾಯ್ತು! ಯಾಕೆ?

ಪ್ರತಿ ಬೆಳಗೂ ಹೊಸತನ....

ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತ...