ಈ ದಿನ ಹೊಸದೊಂದು ಅನುಭವದೆಡೆಗೆ ಹೆಜ್ಜೆ. ಹೊಸದೊಂದು ಗುಂಪು, ಹೊಸ ಪರಿಚಯ, ನಾನಿಲ್ಲಿ ಹೊಸಬಳು - ಒಂದು ರೀತಿಯ ಕುತೂಹಲ ಈ ದಿನ ಹೇಗಿರಬಹುದೆಂಬ ಯೋಚನೆ ಹೊಸ ಹುರುಪಿನಲ್ಲಿ ಮಗಳ ಜೊತೆ, ಜ್ಯೋತಿ ಬಸು ಹಾಗು ಅವರ ಮಕ್ಕಳ ಜೊತೆ ನಾಯ೦ಡಳ್ಳಿ ಸರ್ಕಲ್ನಲ್ಲಿ ಬಸ್ಸಿಗಾಗಿ ಕಾದು ನಿಂತ ಕೆಲವೇ ನಿಮಿಷಗಳಲ್ಲಿ ಬಸ್ಸು ಹಾಜರಿ.
ಹತ್ತಿದೊಡನೆ ಎಲ್ಲರನ್ನು ಒಮ್ಮೆ ಕಣ್ಣಾಯಿಸಿ ಕೈ ಬೀಸಿ ಸೀಟಿನಲ್ಲಿ ಕುಳಿತೆ. ಸ್ವಲ್ಪ ಹೊತ್ತಿನಲ್ಲೇ ಎಲ್ಲರ ಪರಿಚಯಗಳು ಶುರುವಾದವು. ಮಹೇಶ್, ಜ್ಯೋತಿ ಬಸು, ಶ್ರೀಕಾಂತ್, ಶಿವೂ, ಓಂ ಶಿವಪ್ರಕಾಶ್, ಪವಿತ್ರ, ಪ್ರಕಾಶ್ ಹೆಗ್ಡೆ, ಆಜಾದ್ ಸರ್, ಉಮೇಶ್, ಸುದೇಶ್, ಸುಲತ, ಸಂಧ್ಯಾ, ಗಿರೀಶ್, ನವೀನ, ನಂದಿನಿ, ಗುರು ಹೀಗೆ ಎಲ್ಲರ ಪರಿಚಯಗಳು ಮುಗಿದವು. ಇವರ ಮಧ್ಯೆ ನನ್ನ ನೆಚ್ಚಿನ ಆಶಾ ಪ್ರಕಾಶ್ ಹೆಗ್ಡೆ ಕೂಡ. ನೋಡಿದಾಗ, "ಅರೆ, ಇವರ!! ಇವರ ಬಗ್ಗೆ ನನಗೆ ಈಗಾಗಲೇ ತಿಳಿದಿದೆ, ಪರಿಚಯವಿದೆ - ಇವರನ್ನ ಪ್ರಕಾಶ್ ರವರ ಪುಸ್ತಕಗಳಲ್ಲಿ, ಛಾಯಾಚಿತ್ರಗಳಲ್ಲಿ, ಅವರ ಕವನಗಳಲ್ಲಿ ಬೇಟಿ ಆಗಿರುವೆ" ಎಂದೆನಿಸಿದ್ದು ನಿಜ. ನಾನಿವರ A/c ಅಂದರೆ ತಪ್ಪಾಗಲಾರದು, ಕಾರಣ!..... ಯಾರೊಬ್ಬರ ಅಭಿಮಾನಿಯಾಗಲು ಕಾರಣಗಳಿರಲೇಬೇಕೆ? ಅವರನ್ನು ನೋಡಿದ್ದೇ ಒಂದು ಸಂತಸ.
ಅಲ್ಲಿಂದ ಶುರುವಾದ ಪಯಣ :
ಪ ಪ ಪ ಪರಿಚಯಗಳು - ಬಿಡದಿ ಖ್ಯಾತಿಯ ಇಡ್ಲಿಗಳು - ಅಂತ್ಯಾಕ್ಷರಿ ಹಾ ಹಾ ಹಾ ಹಾಡುಗಳ - ನಡುವೆ ಕೀ ಕೀ ಕೀ ಕೀಟಲೆಗಳು - ಆಡು ಆಡುತ್ತಲೇ ತಲುಪಿದ್ದು ಹಾಯಾಗಿ ಮಲಗಿರುವ ಶ್ರೀ ರಂಗನ ಪಟ್ಟಣಕ್ಕೆ. ಈ ಪುಟ್ಟ ನಗರದಲ್ಲಿ ಅಡಗಿರುವ ಇತಿಹಾಸಗಳೆಷ್ಟೋ - ಇದರ ನಡುವೆ ನಮ್ಮ ಮನೆಯ ಕುಲದೇವತೆ ನಿಮಿಷಾಂಬ ದೇವಿಯು ನದಿಯ ದಂಡೆಯಲ್ಲಿ ಹಸನ್ಮುಖಿಯಾಗಿ ವಾಸಿಸುತ್ತಿದಾಳೆ. ಇನ್ನು ನಮಗಂತಲೇ ಕಾದಿದ್ದ ಬಾಲು ಸರ್ ಬೇಟಿ. ಅವರ ಮುಗ್ಧ ನಗೆ ಹಾಗು ಮನ ಮುದ ನೀಡುವ ಪ್ರಾಮಾಣಿಕ ಮಾತುಗಳು. ಮಾತನಾಡುತ್ತಲೇ ತಲುಪಿದ್ದು ಒಂದು ಭವ್ಯ ಲೋಕಕ್ಕೆ, ಮೂಕ ವಿಸ್ಮಿತವಾಗಿಸುವ ಒಂದು ಪುಸ್ತಕದ ಮಹಲಿಗೆ. ಪಾಂಡವಪುರಕ್ಕೆ.


ಪಾಂಡವಪುರ ಹಾಗು ಅಂಕೆಗೌಡರು
"ಪಾಂಡವಪುರದ ಪುಸ್ತಕ ಮಹಲು" ಈ ಮಹಲಿನೊಳಗೆ ಕಾಲಿಡುತ್ತಿದ್ದಂತೆ ಎಲ್ಲಿ ನೋಡಿದರಲ್ಲಿ ಶಾರದಾಂಬೆಯ ಒಲವು - ಸರಸ್ವತಿಯದ್ದೆ ಗೆಲುವು. ಈ ಮಹಲನ್ನು ಹುಟ್ಟುಹಾಕಿದವರು ಅಂಕೆಗೌಡರು. ಅತಿ ಸರಳ ವ್ಯಕ್ತಿತ್ವ. ಅವರ ಮಹಲಿನಲ್ಲಿ ಪುಸ್ತಕಗಳದ್ದೆ ಕಾರುಬಾರು. ಎಲ್ಲೆಲ್ಲೂ ರಾಶಿ ರಾಶಿ ಪುಸ್ತಕಗಳು, ಕಾಲಿಟ್ಟೆಡೆ ಪುಸ್ತಕಗಳು, ಕಣ್ಣು ಹಾಯಿಸಿದಲ್ಲೆಲ್ಲ ಪುಸ್ತಕಗಳು!
ಈ ಸಂಗ್ರಹ ನೆನ್ನೆ ಮೊನ್ನೆಯದಲ್ಲ - ಅಂಕೆಗೌಡರ ಜೀವಮಾನದ ಸಂಗ್ರಹ! ಆರುನೂರು ವರ್ಷಗಳ ಹಿಂದಿನ ಪುಸ್ತಕಗಳಿಂದ ಹಿಡಿದು ಇತ್ತೀಚಿನ ವರೆಗೂ ಎಲ್ಲವೂ ಲಭ್ಯ!! ಒಂದು ಲಕ್ಷಕ್ಕಿಂತ ಹೆಚ್ಚು ಪುಸ್ತಕಗಳಿರಬಹುದು. ಅವರು ವೃತ್ತಿಯಲ್ಲಿ ಗಳಿಸಿದ ಪ್ರತಿಯೊಂದು ರೂಪಾಯಿ ಈ ಪುಸ್ತಕಗಳ ಖರೀದಿಗೆ ಬಳಸಿದ್ದಾರೆ. ತಮ್ಮಲ್ಲಿರುವ ಆಸ್ತಿಗಳನೆಲ್ಲ ಮಾರಿ ಪುಸ್ತಕ ಸಂಗ್ರಹಕ್ಕೆ ಉಪಯೋಗಿಸಿದ್ದಾರೆ. ಸುತ್ತ ಮುತ್ತಲಿನ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಇವರ ಪುಸ್ತಕ ನಿಧಿ ಉಪಯುಕ್ತವಾಗುತ್ತಿದೆ. ಇವರ ಈ ನಿಲುವಿಗೆ ಇವರ ಪತ್ನಿಯ ಸಹಕಾರವೂ ಮೆಚ್ಚುವಂತದ್ದೆ.
ಇವರ ಬಗ್ಗೆ ಬಾಲುರವರ ಬ್ಲಾಗಿನಲ್ಲಿ ಓದಿದ್ದೆ [http://nimmolagobba.blogspot.in/2010/08/blog-post_16.html]. ಕಣ್ಣಾರೆ ನೋಡಿದಮೇಲಂತೂ ನನ್ನ ಪ್ರತಿಯೊಬ್ಬ ಸ್ನೇಹಿತರಿಗೂ, ಪುಸ್ತಕ ಪ್ರೇಮಿಗಳಿಗೂ ಇಲ್ಲೊಮ್ಮೆ ಬೇಟಿಯಾಗುವಂತೆ ಹೇಳಲೇಬೇಕಿದೆ.
ಎಲ್ಲರು ಮೂಕರಾಗಿ ಯಾವ ಪುಸ್ತಕವನ್ನು ನೋಡುವುದು - ಬಿಡುವುದೆಂದು ಗೊಂದಲದಲ್ಲಿರುವಾಗಲೇ ಅಂಕೆಗೌಡರನ್ನು ಪರಿಚಯಿಸಿ ಸನ್ಮಾನ ಮಾಡಿದರು ಬಾಲು ಸರ್, ಅಜಾದ್ ಸರ್ ಹಾಗು ಪ್ರಕಾಶ್ರವರು. ಈ ಸನ್ಮಾನ ಇವರ ಸಾಧನೆಗೆ ಸಲ್ಲಿಸಿದ ಗೌರವ.
ಅವರನ್ನು ಬೇಟಿ ಮಾಡಿದಾಗ ನಮ್ಮಲ್ಲಿರುವ ಒಂದೊಂದು ಪುಸ್ತಕವನ್ನು ಅಂಕೆಗೌಡರಿಗೆ ನೀಡೋಣವೆಂದು ಪ್ರಕಾಶ್ರವರು ಸೂಚಿಸಿದ್ದರು. ಅಂತೆಯೇ ನಮ್ಮೆಲ್ಲರ ಅನಿಸಿಕೆಗಳನ್ನು ಅವರೊಂದಿಗೆ ಹಂಚಿಕೊಂಡೆವು. "ಭಾವಸಿಂಚನ" ವನ್ನು ಅಂಕೆಗೌಡರ ಕಯ್ಯಲ್ಲಿ ನೋಡಿದಾಗ ಹೆಮ್ಮೆ ಅನಿಸಿದ್ದು ನಿಜ.
"ಭಾವಸಿಂಚನ" 3K ಸಧಸ್ಯರುಗಳ ಚೊಚ್ಚಲ ಕವನ ಸಂಕಲನ - ಇಂಥದೊಂದು ಐತಿಹಾಸಿಕ ತಾಣವಾಗಲಿರುವ ಗ್ರಂಥಾಲಯದಲ್ಲಿ "ಭಾವಸಿಂಚನ" - ಈಗಲೂ ನೆನೆಸಿಕೊಂಡರೆ ಒಂದು ರೀತಿಯ ರೋಮಾಂಚನ. ಈ ಖುಷಿಯನ್ನು ನನ್ನ 3K ಕುಟುಂಬಕ್ಕೆ ಹಂಚಲೆಬೇಕಿದೆ. ಈ ತಾಣಕ್ಕೆ ಬೇಟಿಯಾದವರು ಮೂಕವಿಸ್ಮಿತರಾಗುವುದಂತು ಹೇಳನಿಶ್ಚಯ! ಅಲ್ಲಿಂದ ಹೊರಡುವ ಮಾತಿರಲಿ ಎದ್ದೇಳುವ ಮನಸು ಯಾರಿಗೂ ಇರಲಿಲ್ಲ!
ಕರಿಘಟ್ಟ [ಬೆಟ್ಟ]
ಇಲ್ಲಿಂದ ಹೊರಟದ್ದು ಹತ್ತಿರದಲ್ಲೇ ಇದ್ದ ಕರಿಘಟ್ಟಕ್ಕೆ... ವೆಂಕಟರಮಣ ಸ್ವಾಮಿಯ ದೇಗುಲಕ್ಕೆ. ನಮಗೆಂದೇ ಕಾದಿದ್ದ ಸ್ವಾಮಿಯ ಕೊನೆಯ ದರುಶನ ಮುಗಿಸಿ - ಭರ್ಜರಿ ಊಟಕ್ಕೆ ಲಗ್ಗೆ! ಮೂರು ಬಾರಿ ಪುಳಿಯೋಗರೆ ತಿನ್ನುವಷ್ಟು ರುಚಿಯಾದ ಅಡುಗೆ...ನಂತರ ಬೆಟ್ಟದ ಮೇಲಿದ್ದ ಒಂದು ಪುಟ್ಟ ಓಪನ್ ಏರ್ ಥಿಯೇಟರ್.... ಗುರು ಹಾಗು ಶಿವೂರವರ ನೇತ್ರತ್ವದಲ್ಲಿ ಆಟ - ಒಡನಾಟ. ಆದರಲ್ಲಿ ನಾವು ಬೇಟಿಯಾದ ಚೆ೦ಡಾನಂದ ಸ್ವಾಮೀಜಿಗಳು, ಅವರ ವೇಷ ಭೂಷಣ ಹಾಗು ಭಕ್ತರಿಗೆ ನೀಡಿದ ಸಲಹೆಗಳು, ಅಳು ಬರುವಷ್ಟು ನಕ್ಕ ಕ್ಷಣಗಳು ಅವಿಸ್ಮರಣೀಯ!
ಇಲ್ಲಿಂದ ಹೊರಟದ್ದು ಹತ್ತಿರದಲ್ಲೇ ಇದ್ದ ಕರಿಘಟ್ಟಕ್ಕೆ... ವೆಂಕಟರಮಣ ಸ್ವಾಮಿಯ ದೇಗುಲಕ್ಕೆ. ನಮಗೆಂದೇ ಕಾದಿದ್ದ ಸ್ವಾಮಿಯ ಕೊನೆಯ ದರುಶನ ಮುಗಿಸಿ - ಭರ್ಜರಿ ಊಟಕ್ಕೆ ಲಗ್ಗೆ! ಮೂರು ಬಾರಿ ಪುಳಿಯೋಗರೆ ತಿನ್ನುವಷ್ಟು ರುಚಿಯಾದ ಅಡುಗೆ...ನಂತರ ಬೆಟ್ಟದ ಮೇಲಿದ್ದ ಒಂದು ಪುಟ್ಟ ಓಪನ್ ಏರ್ ಥಿಯೇಟರ್.... ಗುರು ಹಾಗು ಶಿವೂರವರ ನೇತ್ರತ್ವದಲ್ಲಿ ಆಟ - ಒಡನಾಟ. ಆದರಲ್ಲಿ ನಾವು ಬೇಟಿಯಾದ ಚೆ೦ಡಾನಂದ ಸ್ವಾಮೀಜಿಗಳು, ಅವರ ವೇಷ ಭೂಷಣ ಹಾಗು ಭಕ್ತರಿಗೆ ನೀಡಿದ ಸಲಹೆಗಳು, ಅಳು ಬರುವಷ್ಟು ನಕ್ಕ ಕ್ಷಣಗಳು ಅವಿಸ್ಮರಣೀಯ!
ಸಂಜೆಯಷ್ಟರಲ್ಲಿ - ಈ ದಿಗ್ಗಜರುಗಳೇ ತುಂಬಿದ ಬ್ಲಾಗಿಗರ ಸಮೂಹದಲ್ಲಿ ನಾನಿನ್ನು ಹೊಸಬಳು ಎನ್ನುವ ಮಾತು ಹೇಳುವಂತಿರಲಿಲ್ಲ. ಇದೊಂದು ಸುಂದರ ಪ್ರವಾಸ, ಮರೆಯಲಾಗದ ಸ್ನೇಹಕೂಟ .... ಸಜ್ಜನರ ಸಹವಾಸದೋಳ್ ಹೆಜ್ಜೇನ ಸವಿದೆ.... ಮನೆಗೆ ಬಂದಾದರೂ ಇಲ್ಲಿಯವರೆಗೂ ಅಲ್ಲಿನ ನೆನಪುಗಳು ಕಾಡುತಿವೆ.
ಮತ್ತೆ, ಒಬ್ಬೊಬ್ಬರ ಕಯ್ಯಲ್ಲೂ ನೋಡಿದ ಕ್ಯಾಮೆರಾಗಳು ನನ್ನನ್ನು ಹಣುಕಿಸಿದ್ದುಂಟು, ಗಾಬರಿಗೊಳಿಸಿದ್ದುಂಟು! ಹೊಸ ಕ್ಯಾಮೆರ ಕೊಡಿಸದೇ ಹೋದರೆ ಅಡುಗೆ ಮಾಡಲಾರೆ ಎಂದು ಪಟ್ಟು ಹಿಡಿದರೆ ಕ್ಯಾಮೆರ ಮನೆಗೆ ಬಂದರೂ ಬಂದೀತು:-)
ಮತ್ತೆ, ಒಬ್ಬೊಬ್ಬರ ಕಯ್ಯಲ್ಲೂ ನೋಡಿದ ಕ್ಯಾಮೆರಾಗಳು ನನ್ನನ್ನು ಹಣುಕಿಸಿದ್ದುಂಟು, ಗಾಬರಿಗೊಳಿಸಿದ್ದುಂಟು! ಹೊಸ ಕ್ಯಾಮೆರ ಕೊಡಿಸದೇ ಹೋದರೆ ಅಡುಗೆ ಮಾಡಲಾರೆ ಎಂದು ಪಟ್ಟು ಹಿಡಿದರೆ ಕ್ಯಾಮೆರ ಮನೆಗೆ ಬಂದರೂ ಬಂದೀತು:-)
ಸಂತಸವೆಂದರೆ ಮತ್ತೊಮ್ಮೆ ಪಾಂಡವಪುರಕ್ಕೆ ನನ್ನ ಬೇಟಿ ಆಗುವ ಎಲ್ಲ ಸಂಭವಗಳು ಇವೆ. ಬೇಗ ತಿಳಿಸುತ್ತೇನೆ. ಇಂತದೊಂದು ಪ್ರವಾಸಕ್ಕೆ ನನ್ನನ್ನು ಆಮಂತ್ರಿಸಿದ ಪ್ರಕಾಶ್ರವರಿಗೆ ಹೃದಯಪೂರ್ವಕ ಧನ್ಯವಾದಗಳು.
* * * *
ತಮ್ಮ ಫೋಟೋಗಳನ್ನು ನನಗೆ ನೀಡಿದ ಜ್ಯೋತಿ ಬಸು ಹಾಗು (ಅಲ್ಲಿಲ್ಲಿ ನಾನೇ ಕದ್ದು ತಂದ) ಫೋಟೋಗಳ ಮಾಲೀಕರಿಗೆ ಪ್ರೀತಿಯ ಧನ್ಯವಾದಗಳು.
PS : ಅಂಕೆಗೌಡರಿಗೆ ತಮ್ಮ ಪುಸ್ತಕಗಳನ್ನು ಕಳಿಸಲು ಇಚ್ಚಿಸುವವರು, ಸಹಾಯ ಹಸ್ತ ನೀಡಲಿಚ್ಚಿಸುವವರು, ಬೇಟಿ ಆಗ ಬಯಸುವವರು - ಈ ವಿಳಾಸವನ್ನು ಬರೆದುಕೊಳ್ಳಿ :
ಶ್ರೀ ಅಂಕೆ ಗೌಡ ಜ್ಞಾನ ಪ್ರತಿಷ್ಠಾನ [ರಿ]
ಹರಳ ಹಳ್ಳಿ
ಪಾಂಡವಪುರ ತಾಲೂಕ್
ಮಂಡ್ಯ ಜಿಲ್ಲೆ.571434
ಮೊಬೈಲ್ ನಂಬರ್ ;9242844934 ,9242844206