Friday, October 3, 2014

ಪಂಜುವಿನಲ್ಲಿ ............

http://www.panjumagazine.com/?p=8071


ಸೌಮ್ಯ : ಅಪ್ಪನ ಕುಡಿತಕ್ಕೆ, ಸಾಲಗಳಿಗೆ ಬಲಿಯಾಗಿ ನಗರದಲ್ಲಿ ಮನೆಕೆಲಸಕ್ಕಿರುವ ೮ ವರುಷದ ಬಾಲಕಿ. 
ರಾಜು : ಹೆತ್ತವರ ಆರನೇ ಕುಡಿ, ವಯಸ್ಸು ೧೧! ತನ್ನೂರ ಬಿಟ್ಟು ನಗರಕ್ಕೆ ಬಂದು ಯಾವುದೋ ಟೀ ಅಂಗಡಿಯಲ್ಲಿ ಕೆಲಸಕ್ಕಿದ್ದಾನೆ. 
ದೀಪ : ತಾನು ಕಲಿಯುತಿದ್ದ ಶಾಲೆಯ ಶಿಕ್ಷಕನಿಂದಲೇ ಲೈಂಗಿಕ ದೌರ್ಜ್ಯನಕ್ಕೊಳಗಾಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಪಡೆಯುತ್ತಿರುವ ಮುಗುದೆ. 
ರವಿ : ಪರೀಕ್ಷೆಯಲ್ಲಿ ಕಡಿಮೆ ಅಂಕಗಳ ಪಡೆದ ಕಾರಣ ಅಮ್ಮ ಬೈದಳೆ೦ದು, ಸಮಾಜದ ಒತ್ತಡಕ್ಕೆ ಮಣಿದು ಆತ್ಮಹತ್ಯೆಗೆ ಶರಣಾದ ೧೪ ವರುಷದ ಬಾಲಕ. 
ಚೈತ್ರ : ಹದಿಮೂರು ವರುಷದ ಬಾಲಕಿ, ಆಗಲೇ ಗರ್ಭಿಣಿ. 
ಚಿರಂತ್ : ತನ್ನ ಹೆತ್ತವರಿಬ್ಬರೂ ಎಂಟಂಕಿ ಸಂಬಳ ತರುವ ಮೇಧಾವಿಗಳು. ಮಗನಿಗಾಗಿ ಅವರ ಬಳಿ ಸಮಯವಿಲ್ಲ. ತನ್ನ ೧೨ನೇ ವಯಸ್ಸಿನಲ್ಲಿ ಸಿಗರೇಟು, ಗಾಂಜಾ ಸೇವನೆ! ಈಗ ಮಾನಸಿಕ ಅಸ್ವಸ್ಥ. 
ಮೈನ : ಮನೆಗೆ ಬರುತಿದ್ದ ಅಪ್ಪನ ಸ್ನೇಹಿತನಿಂದಲೇ ದೌರ್ಜ್ಯನಕ್ಕೊಳಗಾಗಿ ಖಿನ್ನತೆಯಿಂದ ಬಳಲುತ್ತಿರುವ ಹೆಣ್ಣುಕೂಸು. 
ಸುಂದರ್ : ಅವನ ಊರು ಕೇರಿ ತಿಳಿಯದು! ಹಸಿವಿನಿಂದ ಬಳಲಿ, ಕಂಗಾಲಾಗಿ ಕಡೆಗೆ ಅಂಗಡಿಯವನನ್ನೇ ಚಾಕುವಿನಿಂದ ಇರಿದು ಕೊಂದ ಅಪ್ರಾಪ್ತ
ಲಿಲ್ಲಿ / ಸಮೀರ : ಮೈನೆರೆಯುವ ಮುನ್ನವೇ ಹೊರ ದೇಶಕ್ಕೆ ಮಾರಾಟವಾದ ಹೆಣ್ಣು ಮಕ್ಕಳು. 
ಆಶ್ರಮ : ಆರರಿಂದ ಹದಿನಾರು ವಯಸ್ಸಿನ ಮಕ್ಕಳನ್ನು ಸಾಕುತಿದ್ದ ಅನಾಥಾಶ್ರಮದ ಮುಖ್ಯಸ್ಥನಿಂದಲೇ ಮಕ್ಕಳಿಗೆ ಕಿರುಕುಳ, ಹಿಂಸೆ.  
ಚಂದ್ರು : ಎಲ್ಲದರಲ್ಲೂ ನಂಬರ್ ೧ ಇರಲೇಬೇಕೆಂದು ಅಪ್ಪ ಅಮ್ಮನ ಒತ್ತಡ, ಆಟ-ಪಾಟ-ನೃತ್ಯ-ಸಂಗೀತ-ಕಲೆ ಎಲ್ಲೆದರಲ್ಲೂ ಮುಂದಿರಬೇಕು. ಅಪ್ಪ ಅಮ್ಮನ ಕನಸುಗಳಿಗೆ ಇವನ ಕನಸುಗಳು / ಆಸೆಗಳೆಲ್ಲವು ಬಲಿ. 
ಬಣ್ಣ ಬಣ್ಣದ ಚಿಟ್ಟೆಗಳು
ಕಲ್ಪನೆಗಳ ರೆಕ್ಕೆಗಳು
ಮುದುಡಿವೆ
ಕಡೆದಿವೆ,
ಇನ್ನೆಂದೂ ಹಾರಲಾರವು…..
 
ರಂಗು ರಂಗಿನ ಬಿಲ್ಲು
ಗಗನವೆಲ್ಲಾ ಆವರಿಸಿದ್ದರೂ
ಬಣ್ಣಗಳೆಲ್ಲ  ಕಮರಿವೆ,
ಕದಡಿವೆ
ಎಲ್ಲವೂ ಅಸ್ಪಷ್ಟ….. 
ಇವು ಉದಾಹರಣೆ ಮಾತ್ರವಲ್ಲ! ಪ್ರತಿ ನಿತ್ಯ ಒಂದಲ್ಲ ಒಂದು ರೀತಿಯ ದೌರ್ಜ್ಯನಕ್ಕೊಳಗಾಗುತಿರುವ ನಮ್ಮ ಸಮಾಜದ ಮುಗ್ಧ ಪೀಳಿಗೆಯ ಒಂದು ಸಣ್ಣ ಝಲಕ್. ಆಗಷ್ಟೇ ಚಿಗುರಬೇಕಿದ್ದ ಪುಟ್ಟ ಹೃದಯಗಳು, ಆಗಲೇ ಜೀವನದ ಅನೇಕ ಕಷ್ಟಗಳನ್ನು ಎದುರಿಸಿ ತಮ್ಮ ಬಾಲ್ಯವನ್ನು ಕಳೆದುಕೊಂಡ ಅಮಾಯಕ ಮನಸುಗಳ ವ್ಯಥೆ. 
ಮಕ್ಕಳಿಗೆ ಆಶ್ರಯವಾಗಿ ನೆರವಾಗಿ ನಿಂತ ಸಮಾಜ ಒಂದೆಡೆಯಾದರೆ, ಅವರನ್ನು ಒಂದಲ್ಲ ಒಂದು ರೀತಿಯ ದೌರ್ಜನ್ಯಕ್ಕೆ ದೂಡುತಿರುವ ವರ್ಗ ಮತ್ತೊಂದೆಡೆ. ಅಷ್ಟಕ್ಕೂ ಆ ವರ್ಗದಲ್ಲಿರುವ ಜನರು ಸಹ ನಾವೇ ತಾನೆ? ಮಕ್ಕಳ ಮನಸ್ಥಿತಿ ಅರಿಯದಷ್ಟು ಮೌಢ್ಯ, ಮನುಷ್ಯರೆಂಬುದನ್ನೇ ಮರೆಸಿ, ಮೌಲ್ಯಗಳೆಲ್ಲ ಮಾಯವಾಗಿಸಬಲ್ಲ ಕ್ರೌರ್ಯ!!  ಮುಗ್ಧ ಸ್ವಭಾವಕ್ಕೆ ಸ್ಪಂದಿಸಲಾರದ ಮನಸುಗಳೇ ಅವು?

ಆದುನಿಕತೆಯ ಪ್ರಭಾವ! ಎಲ್ಲರನ್ನೂ ಓಡಿಸುತ್ತಿದೆ, ಬದುಕಲು ಸಮಯವೇ ಇಲ್ಲವೇನೋ ಎಂಬಂತೆ ದೌಡಾಯಿಸುತ್ತಿದೆ! ಆ ಬಾಲ್ಯ ಇನ್ನೆಲ್ಲಿ? ಎಲ್ಲವೂ ಕಳೆದು ಹೋಗುತ್ತಿದೆ! ನಾ ಮುಂದು, ತಾ ಮುಂದು ಎನ್ನುವ  ಹಪ-ಹಪಿಯಲ್ಲಿ ನೈಜತೆ ಮರೆ. ಇನ್ನು ಟಿವಿ, ಮೊಬೈಲ್, ಇಂಟರ್ ನೆಟ್ ಬಳಕೆ ಬೇಕಾಗಿರುವುದರ ಜೊತೆ ಬೇಡವಾಗಿರುವುದನ್ನೇ ಹೆಚ್ಚಾಗಿ ಮಕ್ಕಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿದೆ. ತಮ್ಮ ವಯಸ್ಸಿಗೆ ಮೀರಿದ  ಬೆಳವಣಿಗೆ, ನಡುವಳಿಕೆ ಹಾಗು ಚಿಂತನೆ.  
ಪುಟ್ಟ ಮಕ್ಕಳಿಗೂ ಸಹ ಗೊತ್ತು :
ಕಾಗದದ ದೋಣಿ – ದೋಣಿಯಲ್ಲ
ಬೀಜ ನುಂಗಿದರೆ – ಮರವಾಗೋಲ್ಲ
ನವಿಲು ಗರಿಯಿಂದ – ಪಾಸಾಗೋಲ್ಲ
ಆಕಾಶದ ನೀಲಿ – ಬಣ್ಣವಲ್ಲ
ಚಿಂದಿರನ ಬಿಂಬ – ಚಿತ್ರವಲ್ಲ
ಸೂರ್ಯನ ಬಳಿ – ಲಾಂದ್ರವಿಲ್ಲ
"ಈ"ಎಂದರೆ ಈಶನೊಬ್ಬನೇ ಅಲ್ಲ…. ಎಂದು 
ಈ ಸ್ಥಿತಿಗತಿಗಳಿಗೆ ಕಾರಣಗಳು ಒಂದೇ – ಎರಡೆ! ನಮ್ಮಿ೦ದಾದರು ಏನು ಮಾಡಲು ಸಾಧ್ಯ? ಬೆಂಬಲವಾಗಿ, ಸಹಾಯವಾಗಿ ನಾವಿದ್ದೇವೆಯೇ? ನನ್ನದೂ ಸಹ ಕೆಲವು ಪ್ರಶ್ನೆಗಳಿವೆ, ಆತಂಕಗಳಿವೆ….  
ಮಕ್ಕಳ ಮೂಲಕ ತಮ್ಮ ಆಸೆಗಳನ್ನು ಪ್ರತಿಷ್ಠೆ ಘನತೆಗಳನ್ನು ಮೆರೆಯುವ ತಂದೆ ತಾಯಂದಿರು ಬದಲಾಗುವುದು ಎಂದು? ಮಕ್ಕಳಿಗೆ ಮುನ್ನುಗ್ಗುವ, ಗೆಲ್ಲುವ ಮಾರ್ಗ ಒಂದಿದ್ದರೆ ಸಾಕೆ? ಅವರಿಗೆ ಸೋಲನ್ನು ಎದುರಿಸುವ ಬಗ್ಗೆ ಹೇಳಿಕೊಡುವುದು ಅತ್ಯಗತ್ಯ. ಗೆದ್ದಾಗ ಅವರೊಟ್ಟಿಗಿರುವುದ ಸಹಜ ಸರಿ, ಸೋತಾಗಲೇ ಅಲ್ಲವೇ  ಮಕ್ಕಳಿಗೆ ಹೆತ್ತವರ ಅವಶ್ಯಕತೆ ಹೆಚ್ಚು. ಮುದ್ದು, ಅಪ್ಪುಗೆ, ಸ್ಪರ್ಶ ಎಲ್ಲವೂ ಮಕ್ಕಳ  ಪಾಲಿನ ಹರುಷ! ಅವರಿಗೆ ಸಲ್ಲಬೇಕಾದಷ್ಟು ಸಲ್ಲಿರುವುದೆ? 
ಹೋಲಿಕೆ! ಒತ್ತಡವೇರಿಸಿ ಕೀಳರಿಮೆ ಮೂಡಿಸಬಲ್ಲ ಅಸ್ತ್ರ. ಕುಗ್ಗಿಹೋಗುವ ಮನಸುಗಳಿಗೆ ಬಾರುಕೋಲಿನ ಪೆಟ್ಟು. ರೆಕ್ಕೆಗಳನ್ನ ಕಟ್ಟಿಹಾಕದೆ ಹಾರಲು ಬಿಟ್ಟರಲ್ಲವೇ ಸ್ವಾವಲಂಬಿಗಳಾಗಲು ಸಾಧ್ಯ! ನಡೆಯಬೇಕು, ನಡೆಸಬೇಕು, ಬೀಳಬೇಕು, ಏಳಬೇಕು, ಪೆಟ್ಟಾಗಬೇಕು, ಕಲೆ ನಿಲ್ಲಬೇಕು, ಪಾಠ ಕಲಿಯಬೇಕು. ಅವರದ್ದೇ ಸ್ವಂತಿಕೆಯನ್ನು ಕಟ್ಟಿಕೊಡಲು ನೆರವಾಗಬೇಕಾದವರು ನಾವು. 
ಬೇಕೆಂದರೂ ಬೇಡವೆಂದರೂ ಮಕ್ಕಳಿಗೆ ಲೈಂಗಿಕ ಶಿಕ್ಷಣ ಇಂದಿನ ಅನಿವಾರ್ಯತೆ / ಅವಶ್ಯಕತೆ. ಕೆಟ್ಟ ದೃಷ್ಟಿಗಳ ಸೂಕ್ಷ್ಮತೆಯ ಅರಿವು ಸಣ್ಣ ವಯಸ್ಸಿನಲ್ಲೇ ಮೂಡಿಸದಿದ್ದರೆ ಬಲಿಪಷುಗಳಾಗುವುದು ಈ ಹೂ ಹೃದಯದ ಎಳೆ ಚಿಗುರುಗಳು. ಮುಕ್ತವಾಗಿ ಚರ್ಚಿಸದಿದ್ದರು, ಮುಜುಗರ ಮುರಿದು ಹೆತ್ತವರು ಮಕ್ಕಳಿಗೆ ತಮ್ಮದೇ ರೀತಿಯಲ್ಲಿ ಅರಿವು ಮೂಡಿಸುವ ಅವಶ್ಯಕತೆಯಿದೆ.  
ಇನ್ನು ಮಕ್ಕಳ ಮುಗ್ಧ ಪ್ರಶ್ನೆಗಳಿಗೆ ಕಡಿವಾಣ! ಮುಕ್ತವಾಗಿ ಪ್ರಶ್ನಿಸುವ ಅಧಿಕಾರ ಅವರಿಗಿಲ್ಲವೇಕೆ? ಪ್ರಷ್ನಿಸಿದರಲ್ಲವೆ ಸೃಜನಶೀಲತೆಗೆ, ತಮ್ಮಲ್ಲಿ ಅಡಗಿರುವ ಕ್ರಿಯೇಟಿವಿಟಿಯ ಮೊಳಕೆಗಳಿಗೆ ನೀರುಣಿಸಲು ಸಾಧ್ಯ! ಪ್ರಶ್ನಿಸುವ ಹಕ್ಕು, ಅಭಿಪ್ರಾಯ ವ್ಯಕ್ತಪಡಿಸಲು ವೇದಿಕೆ, ಅದನ್ನು ಗೌರವಿಸುವ ಪದ್ಧತಿ ಮನೆಯಿಂದಲೇ ಮೊದಲಾಗಬೇಕು. ತಮಗಾಗುವ ಅನ್ಯಾಯವನ್ನು ಸಹಿಸುವುದು ಸರಿಯಲ್ಲ, ಇಂದಿಗೂ ಸಹ – ಮುಂದೆಯೂ ಸಹ. ಉತ್ತರಗಳು ಬೇಕೆಂದಾದರು, ಸಿಗದೇ ಹೋದರು ಪ್ರಶ್ನಿಸಲೇ ಬೇಕು. ಸಹನೆಯ ಇತಿಮಿತಿಗಳನ್ನು ಜೀವನವೇ ಕಲಿಸುತ್ತದೆ, ಉಳಿದಂತೆ ಮನೋಬಲ ಹೆಚ್ಚಿಸುವುದು ನಮ್ಮ ಕರ್ತವ್ಯ. 
ನಮಗೆ ದೊರೆಯದಿರುವುದು ನಮ್ಮ ಮಕ್ಕಳಿಗಾದರು ಸಿಗಲೆಂದು ಬಯಸುವ ಪರಿ, ಮಕ್ಕಳಲ್ಲಿ ವಸ್ತುಗಳ ಮೌಲ್ಯತೆ ಕುಗ್ಗಿಸುತ್ತಿದೆ. ತಮಗೆ ಬೇಕಾದನ್ನು ಪಡೆಯಲು ಅವರು ಕಷ್ಟವೇ ಪಡಬೇಕಿಲ್ಲ, ಎಲ್ಲವೂ ಸುಲಭವಾಗಿ ದೊರೆಯುತ್ತಿದೆ! ತುಡಿತ – excitement ಕ್ಷಣಾರ್ಧದಲ್ಲಿ ಮಾಯ!! ಬಯಸಿದ್ದನ್ನು ಪಡೆಯಬೇಕು ಎನ್ನುವುದಕ್ಕಿಂತ ಅದನ್ನು ಗಳಿಸಿಕೊಳ್ಳೊಬೇಕು ಎನ್ನುವ ಜ್ಞಾನೋದಯವೇ ಸೂಕ್ತ.   
ಮಕ್ಕಳಿಗಾಗಿ, ಅವರ ರಕ್ಷಣೆಗಾಗಿ ಹೆಲ್ಫ್ ಲೈನ್ ಗಳು / ಎನ್ ಜಿ ಓಗಳು ಪ್ರಯತ್ನಿಸುತ್ತಿವೆ. ಶಾಲೆಯಲ್ಲಿ, ಮನೆಯಲ್ಲಿ ಸಹಾಯವಾಣಿಗಳ / ಫೋನ್ ನಂಬರ್ ಗಳನ್ನು ಬಾಯಿಪಾಟ ಮಾಡಿಸುವುದು ಅತ್ಯವಶ್ಯಕ. 
ಮಕ್ಕಳ ಮನೋವಿಕಾಸ, ಪರಿಪಕ್ವತೆ, ವ್ಯಕ್ತಿ ವಿಕಸನದ ಪ್ರೇರಣೆ / ಪ್ರಚೋದನೆ ನಾವುಗಳೇ.ನಿಲ್ಲದೇ ಸಾಗುತಿರಲಿ ನಮ್ಮ ಪ್ರಯತ್ನ ಮುದ್ದು ಕಂದಮ್ಮರನ್ನು ನಾಡಿನ ಉತ್ತಮ ಪ್ರಜೆಗಳನ್ನಾಗಿ ಮಾಡುವಲ್ಲಿ, ದೌರ್ಜನ್ಯಕ್ಕೆ ಆಹುತಿಯಾಗದಂತೆ ರಕ್ಷಿಸುವುದರಲಿ, ಆತ್ಮವಿಶ್ವಾಸ  ತುಂಬುವುದರಲ್ಲಿ. 

3 comments:

 1. ತಮ್ಮ ಈ ಸಾಮಾಜಿ ತುಡಿತವೇ ನಮಗೆ ಸದಾ ಮಾದರಿ.
  ಈ ಹಿಂದೆ ತುಂಬಾ ಮಕ್ಕಳ ನಡುವೆ ತಾವು ಕುಳಿತ ಒಂದು ಚಿತ್ರವನ್ನು ನೋಡಿ ಖುಷಿಪಟ್ಟಿದ್ದೆ.

  ನಮ್ಮ ನಡುವೆ ಮಕ್ಕಳನ್ನು ಹೆತ್ತವರು ಅನೇಕ ಮಂದಿ ಅವರನ್ನು ಕ್ರೆಡೆಲುಗಳ ಸುಪರ್ಧಿಗೆ ಬಿಟ್ಟು ನೌಕರಿಗೆ ದೌಡಾಯಿಸುವುದನ್ನು ಕಂಡಿದ್ದೇನೆ. ದುಡಿಯುವ ಅನಿವಾರ್ಯತೆ ನಿಜವಾದರೂ, ಆ ವಯಸ್ಸಿನಲ್ಲಿ ಮಗು ಹೆತ್ತವರನ್ನು miss ಮಾಡಿಕೊಳ್ಳುವ ವೇದನೆ ದಾಖಲಿಸುವವರ್ಯಾರು?

  ಕೆಲ ಪಾಲಕರು, ಮಕ್ಕಳನ್ನು ಮುದ್ದು ಮಾಡುವ ನೆಪದಲ್ಲಿ ಬೇಡದ್ದು ಕೊಡಿಸಿ, ಬೇಡದ್ದೆಲ್ಲ ತಿನಿಸುತ್ತಾರೆ. ಬಹುಶಃ ಅವರೊಳಗಿನ ಪಾಪಪ್ರಜ್ನೆಯು ಇದಕ್ಕೆ ಕಾರಣವಿದ್ದೀತು.

  ಸ್ವಸ್ಥ ಸಮಾಜವನ್ನು ರೂಪಿಸುವತ್ತ ನಮ್ಮದೂ ಒಂದು ಕಿರು ಹೆಜ್ಜೆಯನ್ನು ಪ್ರೇರೇಪಿಸುವ ತಮ್ಮ ಈ ಬರಹ ನನಗೆ ತುಂಬಾ ನೆಚ್ಚಿಗೆಯಾಯಿತು.

  ನೀವು ಮಾರ್ಗದರ್ಶಕರು ನಾವು ನಿಮ್ಮ ಹಿಂಬಾಲಕರು... ನಡೆಯಲಿ ಪುಟ್ಟ ಪ್ರಯತ್ನ.

  ReplyDelete
 2. ಈ ಸಮಾಜವನ್ನು ಸುಧಾರಿಸುವುದು ಹೇಗೆ?

  ReplyDelete
 3. 1098 makkala sahayavani kelsa madtha illa sir

  ReplyDelete

"ಆನ್ ಸುಲ್ಲಿವನ್" ಎಂಬ ಪಂಜು !!!

"When one door of happiness closes, another opens; but often we look so long at the closed door that we do not see the one which h...