Friday, March 9, 2012



ಮಗಳಿಗೆ ಜಡೆ ಹೆಣೆಯಬೇಕಿದೆ

ಈ ಕಂಪನಿಯ ಇಂಟರ್ವ್ಯೂಗೆ ಬಂದಾಗ ಅದರ ಮ್ಯಾನೇಜಿಂಗ್ ಡೈರೆಕ್ಟರ್ ಕೇಳಿದ್ದ ಹಲವಾರು ಪ್ರಶ್ನೆಗಳಲ್ಲಿ ಒಂದು ಪ್ರಶ್ನೆ ಹೀಗಿತ್ತು- "ಐದು ವರ್ಷಗಳ ಕಾಲ ಒಂದೇ ಕಡೆ ಕೆಲಸ ಮಾಡಿದ್ದು ಈಗ ಬದಲಾಯಿಸಬೇಕೆಂದು ನಿಮಗನಿಸಿದ್ದು ಏಕೆ?". ಆಲೋಚಿಸಿ ಸೂಕ್ತ ಕೆಲವು ಉತ್ತರ ಕೊಟ್ಟಿದ್ದೆ. ಜೊತೆಗೆ ನನಗರಿವಿಲ್ಲದಂತೆ, "ಸರ್, ಐದು ವರ್ಷಗಳಲ್ಲ, ನನ್ನ ಹಳೆಯ ಎರಡು ಕಂಪನಿಗಳೂ ಸೇರಿ ಸುಮಾರು ಹತ್ತು ವರ್ಷಗಳ ಕಾಲ ವಿಜಯನಗರದಿಂದ ಎಲೆಕ್ಟ್ರಾನಿಕ್ ಸಿಟಿಗೆ ಪ್ರಯಾಣಿಸುತ್ತಿದ್ದೇನೆ. ಬೆಳಗ್ಗೆ ಆರು ಗಂಟೆಗೆ ಮನೆಯಿಂದ ಹೊರಟರೆ ಮತ್ತೆ ಮನೆ ಸೇರುವುದು ಸಂಜೆ ಆರೂವರೆಗೆ. ನನ್ನ ಅವಸವಸರದ ಬದುಕಿನ ನಡುವೆ ನನ್ನ ಏಳು ವರ್ಷದ ಮಗಳಿಗೆ ಗಿಡ್ದವಾಗಿ ಕೂದಲನ್ನ ಕತ್ತರಿಸಿ ಬಾಬ್ ಕಟ್ ಮಾಡಿಸಿದ್ದೇನೆ. ಅವಳಿಗೆ ಎಲ್ಲರಂತೆ ಜಡೆ ಹಾಕಿಕೊಂಡು ಶಾಲೆಗೆ ಹೋಗುವ ಆಸೆ. ನಿಮ್ಮ ಕಂಪನಿ ಕೆಲಸದ ವೇಳೆ ೯.೩೦ಕ್ಕೆ. ಮಗಳಿಗೆ ಜಡೆ ಹಾಕಿ ಶಾಲೆಗೆ ಕಳಿಸಿ ನಂತರ ಆಫೀಸಿಗೆ ಬರಬಹುದೆಂಬ ಒಂದು ಸಣ್ಣ ಆಸೆ ನನಗೂ ಇದೆ" ಎಂದಿದ್ದೆ.

ನನ್ನೂರು - ನನ್ನಮ್ಮನ ಒಡಲಲ್ಲೇ ಇರುವಂತೆ!
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಹತ್ತು ವರ್ಷಗಳ ಕಾಲ ಕೆಲಸ ಮಾಡಿದ್ದರೂ, ಕೆಲಸಕ್ಕೆ ಹತ್ತಿರವಾಗುವಂತೆ ಮನೆಯನ್ನು ಬದಲಾಯಿಸಲು ಸ್ನೇಹಿತರೆಲ್ಲ ಸೂಚಿಸಿದ್ದರೂ ಅದರ ಬಗ್ಗೆ ಕಿಂಚಿತ್ತು ಯೋಚಿಸಲಿಲ್ಲ. ಯಾಕೆಂದರೆ - ವಿಜಯನಗರ ಅಚ್ಚು ಮೆಚ್ಚು. ಬೆಂಗಳೂರಿನ ನೇಟಿವಿಟಿ ಅಲ್ಪ ಸ್ವಲ್ಪ ಜೀವಂತವಾಗಿದೆಯೆಂದರೆ ಮಲ್ಲೇಶ್ವರಂ, ರಾಜಾಜಿನಗರ, ಬಸವನಗುಡಿ, ವಿಜಯನಗರದ ಆಸುಪಾಸಿನಲ್ಲೇ ಅಂತ ನನ್ನ ಭಾವನೆ. ಇಲ್ಲಿನ ನೆರೆಹೊರೆ, ಗುಡಿಗೋಪುರ, ಆಡುಭಾಷೆ, ಅಂಗಡಿಗಳು, ರಂಗೋಲಿ ಬಿಡಿಸಿದ ರಸ್ತೆಗಳು, ಮನೆಯಂಗಳದಿ ತುಳಸಿ, ಹರಿಶಿನ ಕುಂಕುಮದ ಒಸ್ತಿಲು, ಹಬ್ಬ-ಹರಿದಿನಗಳ ವಾತಾವರಣ, ಚೌಕಾಸಿ ವ್ಯಾಪಾರ, ರಸ್ತೆಬದಿಯ ತರಕಾರಿ, ಹೂವು, ಬಜ್ಜಿ ಬೋಂಡ, ಊರದೇವತೆ ಅಣ್ಣಮ್ಮನ ಮೆರವಣಿಗೆ, ಹರಿಶಿನ ಕೆನ್ನೆಯ ಹಿರಿ ಮುತ್ತೈದೆಯರು, ರಾಜ್ಯೋತ್ಸವದಂದು ನಡೆವ ಆರ್ಕೆಷ್ಟ್ರಾಗಳು, ರಾಮನವಮಿಯ ಮಜ್ಜಿಗೆ ಪಾನಕ ಕೋಸಂಬರಿ, ಬೀದಿಯಲ್ಲಿ ಆಡುವ ಮಕ್ಕಳ ಗೋಲಿ - ಲಗೋರಿ....ಹೀಗೆ ನನ್ನೂರು ನನಗಿಷ್ಟ! ಇವೆಲ್ಲವನ್ನೂ ಬಿಟ್ಟು ಹೋಗುವ ಮನಸ್ಸೆಂದು ಆಗಲಿಲ್ಲ.

ಈಗ ಕೆಲಸಕ್ಕೆ ಸೇರಿ ಒಂದೂವರೆ ತಿಂಗಳು. ಬ್ರಿಗೆಡ್ ರೋಡಿನ ಬಳಿ ಇರುವ ಈ ಆಫೀಸ್ - ಅಯೋಮಯ ಬದುಕು ಇಲ್ಲಿ. ನಮ್ಮೂರಲ್ಲೇ ಇದ್ದು ನಮ್ಮೂರಲ್ಲಿಲ್ಲದಂತ ವಾತಾವರಣ. ಯಾಕೋ ನಾನು ಸಹ ಇವರ ಹಾಗೆ ಆಗಿಬಿಟ್ಟರೆ ಎಂಬ ಸಣ್ಣ ಭಯ. ರಜನಿ-ವನಜ-ಸೋಮೇಶ್ವರರ ಮಧ್ಯೆ ಸಧ್ಯಕ್ಕೆ ಜೀವನ. ಈ ಕೆಲಸ ಹೊಸತಲ್ಲ - ಅದು ತ೦ತಾನೇ ವೇಗವಾಗಿ ನಡೆಯುತ್ತಿದೆ. ಆಫೀಸಿನವರಿಂದ ಮೆಚ್ಚುಗೆ ಗಳಿಸಲು ಹೆಚ್ಚು ಕಾಲ ಹಿಡಿಯಲಿಲ್ಲ. ಮನುಜ ಅಲ್ಪ, ಬದುಕ್ಕಿದ್ದವರೆಗೂ ಕಲಿಕೆಯಲ್ಲೇ ಜೀವನ, ಹೇಳಿದರೂ ಕೇಳದಿದ್ದರೂ ಮಣ್ಣಾಗುವವರೆಗೆ ಜೀವನವಂತೂ ಪಾಠ ಕಲಿಸುತ್ತಲೇ ಇರುತ್ತದೆ. ಸದಾ ಕಾಲ ಏನನ್ನಾದರೂ ಕಲಿಯುತ್ತಲೇ ಇರಬೇಕೆಂಬ ಸ್ವಭಾವದವಳು. ಸಂಬಳವೇ ಸರ್ವಸ್ವವಲ್ಲ. ಈ ಕೆಲಸ - ಈ ಕಂಪನಿ ಒಂದು ರೀತಿಯ ಶೂನ್ಯತೆಯ ಭಾವ ತಂದಿದೆ. ಕೆಲಸದಲ್ಲಿ ನನಗಿರುವ ಅನುಭವಗಳೆಲ್ಲ ಮೂಲೆ ಗು೦ಪಾದ೦ತಾಗಿದೆ! ಮಗಳಿಗೆ ಬಾಬ್ ಕಟ್ ಮಾಡಿಸದೆ - ಜಡೆ ಹಾಕಿ ಶಾಲೆಗೆ ಕಳಿಸುವ ತೃಪ್ತಿ ಮಾತ್ರ! ಕೆಲಸದ ಅನಿವಾರ್ಯತೆ, ಮಮತೆಯ ಒಡಲು - ನಡುವಣ ಸಂದಿಗ್ಧ! ನನ್ನಂತೆ ತನ್ನೊಳಗೆ ತಾನನುಭವಿಸುವ ಅಮ್ಮಂದಿರಿಗೆ ಕಾಣುವುದು ಕಾಣದ ನನ್ನಳಲು. ಇಂತಹ ಅನಿಸಿಕೆಗಳೆಷ್ಟೋ, ಅದು ಹಾಗಿರಲಿ ಬಿಡಿ. ಪರಲೋಕದಂತಿರುವ ಈ ಕಂಪನಿಯಲ್ಲಿ ನನ್ನದೇ ಆದ ಒಂದು ಪುಟ್ಟಲೋಕ ರೂಪುಗೊಳ್ಳುತಿದೆ.

ಜೀವವಿಲ್ಲದ ವನ - ಬರಡು ಭೂಮಿಯ ಮನ
ಇವೆರಡರ ನಡುವೆ - ಸಾಗಿಹುದು ಜೀವನ!

ಕತ್ತಲುಕವಿದ ನೋಟ - ಆಡಲು ಬಾರದ ಆಟ
ಇವೆರಡರ ನಡುವೆ - ಜೀವನದ ಪರದಾಟ!

ಕೈಗೆಟುಕದ ಆಕಾಶ - ಅರ್ಥವಾಗದ ಶಬ್ಧಕೋಶ
ಇವೆರಡರ ನಡುವೆ - ಮನಸಲೆಲ್ಲೋ ಆಶ!

ಆ ಘಳಿಗೆಯಲ್ಲಿ - ಈ ಸಾಲುಗಳು ನನ್ನ ಡೈರಿ ಸೇರಿತು. ಇದೂ ಸಹ ಕವನವೇನೋ ಎಂಬ ನನ್ನ ಬ್ರಾಂತಿ!

ಸಮುದಾಯವೊಂದು ಆರ್ಕುಟ್ನಲ್ಲಿ
ಕನ್ನಡದಲ್ಲಿ ಮಾತನಾಡುವ ಹಂಬಲ, ಬರೆಯುವ ಆಸೆ, ಭಾಷೆಯ ಮೇಲಿನ ಪ್ರೇಮ - ಇದರ ನಡುವೆ ಈ ಶೂನ್ಯತೆ ಭಾವ. ಇದರ ಪರಿಣಾಮವಾಗಿ ಈಗಾಗಲೇ ಆರ್ಕುಟ್ನಲ್ಲಿ ಸಮುದಾಯದ ಕುರಿತು ತಲೆಯಲ್ಲಿ ವಿಚಿತ್ರ ಪಾಸಿಟಿವ್ ಫೋರ್ಸ್ ಒಂದು ಕಾಡುತಿದೆ. ಅದೊಂದು (ಸು)ದಿನ - ಜುಲೈ ೧೧, ೨೦೦೮ ರಂದು "3k - ಕನ್ನಡ ಕವಿತೆ ಕವನ" ಎಂಬ ನಾಮಕರಣದೊಂದಿಗೆ ಸಮುದಾಯವನ್ನು ಆರ್ಕುಟ್ನಲ್ಲಿ ಹುಟ್ಟುಹಾಕಿದೆ. ಸದಾ ಕಾಲ ಆಂಗ್ಲ ಭಾಷೆಯಲ್ಲೇ ಕಾರ್ಯ ವ್ಯವಹಾರಗಳು ನಡೆಸುವವರ ನಡುವೆ ಕನ್ನಡ ಜೀವಂತವಾಗಿರಬೇಕು - ಕವಿತೆ/ಕವನ ಅಂತ ಹೇಳಿಕೊಂಡು ಏನೋ ಒಂದು ಬರೆಯೋಣ. ಬರೆದು ಓದಿ ಕಲಿಯೋಣ! ಕೆಲಸ ಕಲಾಪಗಳ ನಡುವೆ ನಮ್ಮಲ್ಲಿ ಅಡಗಿ ಕುಂತಿರುವ ಭಾಷಾಭಿಮಾನವನ್ನ ಕವಿತೆ ರೂಪದಲ್ಲಿ ಮತ್ತೊಮ್ಮೆ ಹೊರತರೋಣ. ಅಂದೆಂದೋ ಬರೆದು - ಮೂಲೆಗುಂಪಾದ ಕವನಗಳೆಲ್ಲ ಹೊರಬರಲಿ - ಈ ತಾಣಕ್ಕೆ ಬಂದವರಿಗೆ ಪ್ರಾಮಾಣಿಕ ಹಾಗು ಸುಮಧುರ ಭಾವನೆಯೊಂದು ಹೊಮ್ಮಲಿ.

ಹೀಗೆಲ್ಲ ಅಂದುಕೊಂಡು ಶುರುವಾದ 3k ಸಮುದಾಯದ ಮೊದಲ ಸದಸ್ಯೆ ನಾನಾದೆ, ನನ್ನ ನಂತರ ನನ್ನ ಸ್ನೇಹಿತೆಯರು ರಜನಿ ಹಾಗು ವನಜ ಸದಸ್ಯರಾದರು. ಕನ್ನಡ ಓದಲು ಬರೆಯಲು ಬರದವರು ಈ ಸಮುದಾಯದ ಸದಸ್ಯರುಗಳಲ್ಲಿ ಮೊದಲಿಗರು...!?? ನಾನೇನೆ ಬರೆದರೂ ಅದನ್ನ ಕವಿತೆ ಎಂದು ಪ್ರಶಂಸೆ ನೀಡಿದವರು. "ಗುಡ್, ಸೂಪೆರ್ಬ್, wow" ಅಂತ ಕಾಮೆಂಟ್ ಮಾಡಿ ನನ್ನನ್ನು ಹುರಿದುಂಬಿಸಿದವರು. ನನ್ನ ಆರ್ಕುಟ್ ಸ್ನೇಹಿತರಿಗೆಲ್ಲ ಈ ಸಮುದಾಯಕ್ಕೆ ಸೇರಲು ಔತಣ ಕಳಿಸಿದ್ದೆ. ಸುಮಾರು ಹತ್ತು ಮಂದಿ ಸದ್ಸ್ಯರಾಗುವಷ್ಟರಲ್ಲಿ 3k ಗೆ ಒಂದು ತಿಂಗಳಾಗಿತ್ತು. ನನ್ನ ಕವನ ನಾನೇ ಪೋಸ್ಟ್ ಮಾಡಿ ರಜನಿ ವನಜರಿಗೆ ಓದಿ, ಅರ್ಥ ಹೇಳಿ, ಅದಕ್ಕೆ ಕಾಮೆಂಟ್ ಮಾಡುವಂತೆ ಹೇಳುತಿದ್ದೆ. "ನೀನೇ ಬಂದು ನಮ್ಮ ಕಂಪ್ಯೂಟರ್‌ನಿಂದ ಏನು ಬೇಕೋ ಅದನ್ನ ಕಾಮೆಂಟ್ ಮಾಡಿಬಿಡು" ಅಂತ ತಮಾಷೆ ಮಾಡುತಿದ್ದರು.

ಹತ್ತು ಮಂದಿ ಇದ್ದ ಈ ಸಮುದಾಯ, ಸರಿ ಸುಮಾರು ಮೂರು ವರ್ಷಗಳಲ್ಲಿ ಈ ರೀತಿ ಬೆಳೆದದ್ದಾದರು ಹೇಗೆ?

2 comments:

  1. ಏನೇ ಹೇಳಿ ಎಲ್ಲರೂ ಈ ಶತ ಮೂರ್ಕರನ್ನು ಗಮನಿಸುತ್ತಿದ್ದಾರೆ..ನಮ್ಮ ಮೂರ್ಖತನಕ್ಕು ಪಬ್ಲಿಸಿಟಿ ಇದೆ ಅಲ್ಲವ ...ಲೆಟ್ಸ್ ರಾಕ್ ೩ಕ ...

    ReplyDelete

ಪ್ರತಿ ಬೆಳಗೂ ಹೊಸತನ....

ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತ...