Wednesday, February 29, 2012
ಸೋಮವಾರದ ನೀಲಿ ಶುಭೋದಯ..... ಮಂಡೇ ಮಾರ್ನಿಂಗ್ ಬ್ಲೂಸ್!

ವೀಕೆಂಡ್ ಮುಗಿಸಿಕೊಂಡು ಬರುವ ಕಾರ್ಪೋರೆಟ್ ಮಂದಿ ತಮ್ಮ ಸೋಮವಾರಗಳಿಗೆ ಚಾಲನೆ ನೀಡಲು ಬಳಸುವ ಪದಸಮುಚ್ಚಯ ಇದು. ನೀಲಿ ಬಣ್ಣದ ಪದಪ್ರಯೋಗ ಏಕಿರಬಹುದು? ಅಮೆರಿಕನ್ನರು ವಿಷಾದಕರ ಗೀತೆಗಳನ್ನ ಉಲ್ಲೇಖಿಸಲು ಬ್ಲೂ ಥೀಮ್ಸ್ ಎಂದು ಬಳಸುವಾಗ, ಸೋಮವಾರದ ಸೋಮಾರಿತನಕ್ಕೆ ಈ ಹೆಸರು ರೂಡಿಸಿಕೊಂಡಿದ್ದಾರೆ! ಬ್ಲೂ - ನೀಲಿ - ವಿಶಾಲವಾದ ಮುಗಿಲಿನ ಮೈಬಣ್ಣ - ವಿಷಾದವೇಕೆ? ಪ್ರತೀ ಸೋಮವಾರ ತಾಜಾತನದ ವಾರವೊಂದು ಆಗಷ್ಟೇಗರಿಗರಿಯ ಉಡುಗೊರೆಯಾಗಿ ನನ್ನ ಮುಂದಿಟ್ಟಂತೆ ನನ್ನ ಭಾವನೆ! ವಾರದ ಕೆಲಸಗಳನ್ನೆಲ್ಲ ಕಣ್ಮುಂದೆ ತಂದುಕೊಂಡು ಅವುಗಳ ಆದ್ಯತೆಗನುಗುಣವಾಗಿ ಪೇರಿಸಿಕೊಳ್ಳುವ ಪ್ರಮುಖವಾರ ಈ ಸೋಮವಾರ.

ಸೋಮೇಶ್ವರ, ದಿ ಚಾಲೆಂಜಿಂಗ್ ಸ್ಟಾರ್!

"ಮೇಡಂ ಕಾಫಿ ಆರ್ ಟೀ?" ಅಂತ ಕೇಳ್ಕೊಂಡು ಬಂದ ಸೋಮೇಶ. ಈ ಸೋಮೇಶನ ಬಗ್ಗೆ ಒಂದೆರಡು ಮಾತು. ನಾನು ಕೆಲಸ ಮಾಡುತಿದ್ದ ಕಂಪನಿಯ ಆಫೀಸ್ ಬಾಯ್, ಮಹಾನ್ ಮಾತಿನ ಮಲ್ಲ! ಆದರೆ ಅಷ್ಟೇ ಚುರುಕಾಗಿ ಕೆಲಸ ನಿರ್ವಹಿಸುವಾತ. ಹಾಗೋ ಹೀಗೋ ಅಷ್ಟಿಷ್ಟು ಇಂಗ್ಲಿಷ್ - ಹಿಂದಿ ಮಾತನಾಡಿಕೊಂಡು ಕೆಲಸ ನಿಭಾಯಿಸುವ ಚಾಣಾಕ್ಷ. ಇಡೀ ಆಫೀಸಿನಲ್ಲಿ ನನ್ನ ಬಿಟ್ಟರೆ ಕನ್ನಡದಲ್ಲಿ ಮಾತನಾಡ ಬಲ್ಲ ಏಕೈಕ ವ್ಯಕ್ತಿ ಈ ಸೋಮೇಶ. ಇವನೊಟ್ಟಿಗೆ ಕನ್ನಡದಲ್ಲಿ ಮಾತ್ನಾಡೋದೊಂದು ಖುಷಿ. ಸೋಮೇಶನಿಗೊಬ್ಬ ಹೀರೋ! ಅವನ ಬಾಸ್, ಅವನ ಆರಾಧ್ಯದೈವ, ಅವನ ಅಣ್ಣ, ಅವನ ಗುರು.... ಚಾಲೆಂಜಿಂಗ್ ಸ್ಟಾರ್ ದರ್ಶನ್! ಅವನಿಂದಲೇ ನಾನು ತಿಳಿದಿದ್ದು, ದರ್ಶನ್ಗೆ ಈ ಬಿರುದಿದೆ ಎಂದು. ಚಾಲೆಂಜಿಂಗ್ ಸ್ಟಾರ್ ಅಂತ ಯಾಕೆ ಕರೀತಾರೆ ಅಂತ ಕೇಳ್ದಾಗ, "ನಮ್ಮಣ್ಣ ಮೇಡಂ - ಏನ್ ಹೇಳಿದ್ರೂ ಚಾಲೆಂಜ್ ಥರಾನೆ ತಗೊಳ್ತಾರೆ ಅದಕ್ಕೆ" ಅಂತ ಹೇಳಿಕೊಂಡಿದ್ದ. ಚಾಲೆಂಜಿಂಗ್ ಸ್ಟಾರ್ ಅಂದ್ರೆ ಹೀಗ??? ದರ್ಶನ್ ಕುರಿತು ಹೇಳಿಕೊಂಡಾಗೆಲ್ಲ ಅವನ ಮುಖದಲ್ಲೊಂದು ಹೊಳೆಯುವ ಕಾಂತಿ! ದರ್ಶನ್ ಕುರಿತಂತೆ ಎಲ್ಲಾ ವಿಷಯಗಳನ್ನು ಸಂಗ್ರಹಿಸಿದ್ದ, ಯಾವ ದಿನ ಯಾವ ಶೂಟಿಂಗ್ನಲ್ಲಿದ್ದಾರೆ ಅನ್ನುವ ಮಾಹಿತಿ ಸಹ ಅವನಿಗೆ ತಿಳಿಯುತ್ತಿತ್ತು. "ಮೇಡಂ, ನಿಮ್ಹತ್ರನೆ ನಾನು ಕನ್ನಡ ಮಾತಾಡೋದು, ಅದಕ್ಕೆ ನಿಮಗೆ ಸ್ಪೆಷಲ್ ಕಾಫಿ" ಅಂತ ಹೇಳೋದಲ್ಲ್ದೆ, ಆಫೀಸಿನಲ್ಲಿ ಇರುವವರ ಬಳಿಯೆಲ್ಲ "ಕನ್ನಡ ಮೇಡಂ" ಅಂತಲೇ ನನ್ನ ಹೆಸರನ್ನು ಬದಲಾಯಿಸಿಬಿಟ್ಟಿದ್ದ.

ಅದೊಂದು ಸೋಮವಾರ

ಸೋಮವಾರದ ಸಂಜೆ, ಕನ್ನಡದ ಸ್ಪೆಷಲ್ ಕಾಫಿ ನನ್ನ ಟೇಬಲ್ಲಿಗೆ ಬಂತು. ಎಂದಿನಂತೆ ಸೋಮೇಶ ಅವನಣ್ಣನ ಕುರಿತಂತೆ ಹೇಳತೊಡಗಿದ, "ಮೇಡಂ, ನಮ್ಮಣ್ಣ ದರ್ಶನ್ ಇವತ್ತು ಮಧ್ಯಾನ್ಹ ಎಡವಿದ್ರಂತೆ! ಬಲಗಾಲಿನ ಕಿರುಬೆರಳಿಗೆ ತಗುಲಿ ರಕ್ತ ಬಂತಂತೆ! ನಾಳೆ ಇದೆ ವಿಷಯ ಪೇಪರ್ನಲ್ಲಿ ಬರೋದು, ಅವ್ರ ಮನೆ ಹತ್ರ ಹೋಗಿ ಹೇಗಿದ್ದಾರಂತ ವಿಚಾರಿಸಿಕೊಂಡು ಬರಬೇಕು, ಅವರ ಮನೆ ಸೆಕ್ಯೂರಿಟಿ ನನಗೆ ಚೆನ್ನಾಗಿ ಪರಿಚಯ ಇದ್ದಾರೆ, ಹೋದ್ರೆ ಸಾಕು ಎಲ್ಲ ವಿಷಯ ಅವ್ರೆ ಹೇಳ್ಬಿಡ್ತಾರೆ, ನಮ್ಮಣ್ಣನಿಗೆ ಏನಾಗದಿದ್ರೆ ಸಾಕು", ವಿಪರೀತ ವಿಷಾದದಿಂದ ಹೇಳಿದ. "ಸೋಮ, ನಿಮ್ಮ ದರ್ಶನ್ ಅವರ ಗಾಯ ವಾಸಿಮಾಡ್ಕೊಳ್ತಾರೆ ಬಿಡು. ಎರಡು ತಿಂಗಳಾಯ್ತು ಮನೆಗೆ ಹೋಗಿ ಅಂತಿದ್ಯಲ್ಲ, ನಿಮ್ಮ ತಂದೆಗೆ ಹುಷಾರಿಲ್ಲ ಅಂತಿದ್ಯಲ್ಲ, ಫೋನ್ ಮಾಡಿ ವಿಚಾರ್ಸಿದ್ಯ? ಹೇಗಿದ್ದಾರೆ ಈಗ? " ಅಂತ ಕೇಳಿದ್ದೆ. "ಬಂದೆ ಮೇಡಂ" ಅಂತ ಹೇಳಿ, ಅಲ್ಲಿಂದ ಹೊರಟೆ ಬಿಟ್ಟ. ನನ್ನ ಮಾತು ಕಟುವಾಯ್ತೇನೋ? ನಯವಾಗೆ ಹೇಳಿದ್ನಲ್ಲ. ಅಷ್ಟಕ್ಕೂ ನಾನು ಹೇಳಿದ್ದರಲ್ಲಿ ತಪ್ಪೇನಿದೆ? ಅನಾರೋಗ್ಯದಿಂದ ಹಾಸಿಗೆ ಹಿಡಿದ ಅವನ ತಂದೆ, ಮನೆಯೊಳಗೇ - ಹೊರಗೆ ದುಡಿಯುವ ತಾಯಿ! ಜವಾಬ್ದಾರಿ ಕಳೆದುಕೊಳ್ಳಬಾರದು ಹುಡುಗ ಅನ್ನುವ ದೃಷ್ಟಿಯಲ್ಲಿ ಹೀಗಂದೆ, ನನಗೆ ನಾನೇ ಸಮರ್ತಿಸಿಕೊಂಡೆ. ಮಂಗಳವಾರ ಆಫೀಸಿಗೆ ಬರಲಿಲ್ಲ ಸೋಮೇಶ, ಕನ್ನಡದ ಸ್ಪೆಷಲ್ ಕಾಫಿ ಸಹ ಟೇಬಲ್ಲಿಗೆ ಬರಲಿಲ್ಲ! ಕಾಫಿ-ಮೇಕರ್ ಬಳಿ ಹೋಗಿ ನನ್ನ ಕಾಫಿ ನಾನೇ ಮಾಡಿಕೊಂಡು ಬಂದೆ. ಜೊತೆಗೆ, ದರ್ಶನ್ ಕಾಲ್ಬೆರಳು ನೆನೆಸಿಕೊಂಡು ಸಣ್ಣ ನಗೆಯೊಂದು ಬಂತು.

ಬುಧವಾರ ಬೆಳ್ಳಂ ಬೆಳಗ್ಗೆ

ಆಫೀಸಿಗೆ ಕಾಲಿಟ್ಟು ಸೀಟಿನ ಬಳಿ ಹೋಗಿದ್ದೆ ತಡ, ಸೋಮೇಶ ಪ್ರತ್ಯಕ್ಷ. "ಮೇಡಂ, ನಮ್ಮೂರಿಗೊಗಿದ್ದೆ, ನಮ್ಮಪ್ಪ ಅಮ್ಮನ್ನ ನೋಡ್ಕೊಂಡು ಬಂದೆ, ನಮ್ಮಪ್ಪನಿಗೆ ಪರವಾಗಿಲ್ಲ ಈಗ, ಹಣ್ಣು ಔಷದಿ ಕೊಡ್ಸಿ ಸ್ವಲ್ಪ ದುಡ್ಡು ಕೊಟ್ಟು ಬಂದೆ. ನೋಡಿ ಈ ದೇವರ ದಾರ ನಮ್ಮಮ್ಮ ಕಟ್ಟಿದ್ದು ಕೈಗೆ" ಅವನ ಕಯ್ಯಲ್ಲಿದ್ದ ಕಪ್ಪು ದಾರ ತೋರಿಸಿದ. "ಡಾಕ್ಟ್ರು ಹೇಳೋವ್ರೆ - ಒಂದು ಸಣ್ಣ ಆಪರೇಶನ್ ಮಾಡಿದ್ರೆ ಎಲ್ಲಾ ಸರಿ ಹೋಗ್ತದೆ ಅಂತ, ಎಲ್ಲಾ ವಾಸಿ ಆದ್ರೆ ನಮೂರ ಜಾತ್ರೆ ಟೈಮ್ನಲ್ಲಿ ಒಂದು ಕುರಿ ಕೊಡ್ತೀವಿ ಅಂತ ಹರಸಿಕೊಂಡು ಬಂದೆ" ಅಂದ. ಓ - ಇವನಿಗೆ ಪ್ರತಿಕ್ರಿಯೆ ನೀಡೋಕೆ ನನಗೆ ಅರೆಕ್ಷಣ ಬೇಕಾಯ್ತು! "ಸರಿ, ಸರಿ.... ಊರಿಗೋಗಿದ್ಯ, ಒಳ್ಳೆ ಕೆಲಸ ಮಾಡಿ ಬಂದೆ, ನಿಮ್ಮಪ್ಪ ಅಮ್ಮನ ಜೊತೆ ಸಂಪರ್ಕದಲ್ಲಿರು ಸೋಮ, ಮರೆತಂಗಿರಬೇಡ, ಹೆತ್ತವರು, ವಯಸ್ಸಾಗಿದೆ ನಿರ್ಲಕ್ಷೆ ಮಾಡಬಾರದು ಅಲ್ವಾ! ಗುಡ್ ಬಾಯ್ ನೀನು. ಈಗ್ಹೇಳು ನಿಮ್ಮ ದರ್ಶನ್ ಕಾಲುಗಳು ಸುರಕ್ಷಿತವಾಗಿದಾವ?" ಅಂತ ಕೇಳಿದ್ದೆ ತಡ....... ಮತ್ತೆ ಶುರುವಿಟ್ಟ ಸೋಮೇಶ. ಅದೇನೇ ಇರಲಿ, ನಮ್ಮವರು, ನನ್ನೂರು, ನನ್ನ ಜನ, ನನ್ನ ತವರು, ನಾನಿಷ್ಟ ಪಡುವ ನೆಲ ಜಲ ಜೀವ ಜಂತುಗಳು ಸುರಕ್ಷಿತವಾಗಿದ್ದರೆ ಜೀವನದಲ್ಲಿ ಎಲ್ಲವೂ ಸರಿಯಾಗಿದೆ ಅನ್ನುವ ಗಾಢವಾದ ತೃಪ್ತಿ ತಂತಾನೇ ಮೂಡುತ್ತದೆ. ಈ ತೃಪ್ತಿಗಾಗಿ ಹಂಬಲಿಸುವ ಸ್ವಾರ್ಥಜೀವಿ ಈ ಮನಸು.

ಬಾನಿನ ವಿಹಂಗಮ ....ಹಾರಲು ಸಂಭ್ರಮ

ನನ್ನ ಟೇಬಲ್ಲಿಗೆ ಅಂಟಿಕೊಂಡಿದ್ದ ಬಿಳಿ ಬೋರ್ಡ್ ನನ್ನೊಮ್ಮೆ ನೋಡಿ, ಏನೋ ಹೇಳಲು ಹೊರಟು ಹಾಗೆ ಸುಮ್ಮನಾದಂತೆ ಭಾಸವಾಯ್ತು! ಹೋಯ್ ಗುರಾಯಿಸಬೇಡ! ಅಂತ ಅದರಮೇಲೆ ಗೀಚಿದೆ. ಕಯ್ಯಲ್ಲಿ ಕಾಫಿ ಹಿಡಿದು ಕಿಟಕಿಯಿಂದಾಚೆ ಒಮ್ಮೆ ನೋಡಿದೆ, - ನೀಲಿ ಬಾನು : ಪಾರಿವಾಳಗಳ ಗುಂಪು : ಬಿಳಿ ಗುಡ್ದೆಗಳ ಹಾಗೆ ಮೋಡಗಳು : ಹಾಯೆನಿಸಿತು! ನನ್ನ ಡೈರಿ ತೆಗೆದು ಕವನವೊಂದನ್ನ ಬರೆದಿಟ್ಟೆ! ಆ ಸಮಯದಲ್ಲಿ ನನ್ನ ಮಟ್ಟಿಗೆ ನಾನೊಂದು ಕವನ ಬರೆದೆನೆಂಬ ಬ್ರಮೆಯಲ್ಲಿದ್ದೆ. ಈಗದನ್ನು ಪ್ರಸ್ತುತ ಪಡಿಸೋಕೆ ಸ್ವಲ್ಪ ಕಸಿವಿಸಿ, ಆದರು ಹೇಳಿ ಆದಮೇಲೆ ಬರೆದು ತೀರಬೇಕು.

ಸೌಂದರ್ಯದ ಸುಗಮ ಎಲ್ಲೆಲ್ಲು
ತಿಳಿ ಸಂಜೆಯ ನೆನಪು ನನ್ನಲ್ಲೂ!
ಸೂರ್ಯಾಸ್ತದ ತಿಳಿಗೆಂಪು
ಹಕ್ಕಿಗಳ ಗುಂಪು ಗುಂಪು
ಹಸಿರೆಲೆಗಳ ಸೊಂಪು
ಹಾಡುಗಳೆಲ್ಲವೂ ಹಿ೦ಪು ಹಿ೦ಪು
ಬೆಳ್ಮುಗಿಲ ಚಿತ್ತಾರ
ಕೊಲ್ಬಂಡೆಗಳ ಆಕಾರ
ಸವಿ ಮಾತುಗಳ ಝೇಂಕಾರ
ಹೃದಯದಲ್ಲೇನೋ ಸಂಚಾರ
ಸೌಂದರ್ಯದ ಸುಗಮ ಎಲ್ಲೆಲ್ಲು
ತಿಳಿ ಸಂಜೆಯ ನೆನಪು ನನ್ನಲ್ಲೂ!

ಆಗಷ್ಟೇ ಬರೆದಿಟ್ಟುಕೊಂಡ ಕವನವಿದು. ಡೈರಿ-ಯಲ್ಲಿ ಉಳಿಯಿತು. ಇದನ್ನ ಕವನ ಅಂತಾರ? ನೆನಪಾಗಿದ್ದು ನಾನು ೭ನೆ ತರಗತಿಯಲ್ಲಿದ್ದಾಗ ಬರೆದ ನನ್ನ ಮೊದಲನೇ ಕವನ. "ಅಮ್ಮ". ಈ ಕವನ ನಮ್ಮ ಶಾಲೆಯ ವಾರ್ಷಿಕ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಪ್ರತಿ ವರ್ಷವೂ ಶಾಲಾ ವಾರ್ಷಿಕೋತ್ಸವ ನಡೆಯುತಿದ್ದದ್ದು ಬೆಂಗಳೂರಿನ ಪ್ರಸಿದ್ದ ಟೌನ್ಹಾಲಿನಲ್ಲಿ. ವಾರ್ಷಿಕ ಪುಸ್ತಕವನ್ನು ಬಿಡುಗಡೆ ಮಾಡಿದ್ದ ಮುಖ್ಯಾತಿಥಿಗಳು ವೇದಿಕೆಯ ಮೇಲೆ, ಎಲ್ಲರ ಮುಂದು ನನ್ನ ಕವನ ಮೆಚ್ಚಿ ಓದಿದ್ದರು. ಆ ದಿನ ನನಗರಿವಿಲ್ಲದ ಒಂದು ಖುಷಿ. ನನ್ನ ಹಳೆಯ Geometry ಪುಸ್ತಕದ ಹಾಳೆಗಳ ಮೇಲೆ ಕವನ ಬರೆಯಲು ಶುರುವಿಟ್ಟೆ. ಆ ಹಾಳೆಗಳನ್ನೆಲ್ಲಾ ಪುಸ್ತಕದಿಂದ ಬಿಡಿಸಿ - ಒಂದು ಗಟ್ಟಿಯಾದ ಫೈಲಿನೊಳಗೆ ಸೇರಿಸಿಟ್ಟೆ. ಇದುವರೆಗೂ ಆ ಫೈಲನ್ನು ಯಾರಿಗೂ ತೋರಿಸುವ ಸಾಹಸಕ್ಕೆ ಕೈ ಹಾಕಲಿಲ್ಲ. ಪ್ರೇರಣೆ ಯಾರಿಂದ ಯಾವಾಗ ಹೇಗೆ ದೊರೆವುದೋ! ಅದಕ್ಕೆ ವಿಪರೀತವಾದ ಶಕ್ತಿ ಇದೆ ಅನ್ನೋದು ನನ್ನ ನಂಬಿಕೆ.


ಕನ್ನಡ ಅಂದ್ರೆ ಒಲವು, ಅಭಿಮಾನ! ಮಾತೃಭಾಷೆ ತೆಲುಗು! ಸ್ನೇಹಿತರೆಲ್ಲರೂ ಹಿಂದಿ - ರಾಜಸ್ತಾನಿ - ಗುಜರಾತಿನವರು, ನೆರೆ -ಹೊರೆಯವರು ಅಂದ್ರವಾಲ್ಳು! ನರ್ಸರಿಯಿಂದ ಓದಿದ್ದು ಇಂಗ್ಲಿಷ್ ಮೀಡಿಯಂನಲ್ಲಿ - ಅಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ಅಷ್ಟಕ್ಕಷ್ಟೇ! ಆದರೇನಂತೆ ಕನ್ನಡ ಇಷ್ಟಪಡೋಕೆ ಕನ್ನಡವೆ ಮಾತೃಭಾಷೆ ಆಗಬೇಕೆ?.... ನಾನು ಅವರ ಅರ್ಧಾಂಗಿ - ಅವರು ಕನ್ನಡದವರು - ನಾನು ಕನ್ನಡತಿ, ಇಷ್ಟು ಸಾಕೆ?

No comments:

Post a Comment

"ಆನ್ ಸುಲ್ಲಿವನ್" ಎಂಬ ಪಂಜು !!!

"When one door of happiness closes, another opens; but often we look so long at the closed door that we do not see the one which h...