ಸಮಯಕ್ಕೂ ಸಮಯವಿದೆ!"ಸಮಯ" - ಎಲ್ಲರನ್ನು ಕಾಡುವ, ಎಲ್ಲರ ಜೀವನದ ಜೊತೆ ಆಟವಾಡುವ ತನ್ನ ಇರುವಿಕೆಯನ್ನು ಉಸಿರಿನ ನಿಮಿಷಗಳಲ್ಲಿ, ದಿನಗಳಲ್ಲಿ, ಕ್ಷಣಗಳಲ್ಲಿ ತುಂಬಿರುವ ಭಗವ೦ತನ ರೂವಾರಿ. ಯಾರ ಕೈಗೂ ಎಟುಕದ - ಯಾರ ಕಣ್ಣಿಗೂ ಕಾಣಿಸದ ಅಗೋಚರ! ಆದರು ತನ್ನ ಸಾಮರ್ಥ್ಯದ ಬಲದಿಂದ ನಮ್ಮ ಜೀವನವನ್ನು ಹೆಣೆಯುತ್ತಿರುವ ಅಂತರ್ಮುಖಿ. ಒಳ್ಳೆಯದಾದರೂ ಕೆಟ್ಟದಾದರು, ಎಲ್ಲದಕ್ಕೂ ಸಮಯವನ್ನೇ ದೂಷಿಸುವ ನಮ್ಮ ಗುಣವನ್ನು ಅರಿತು "ಕಾಲಾಯ ತಸ್ಮೈ ನಮಃ" ಎಂದು ಸಾರುವ ಜೀವನ್ಮುಖಿ.
ನಾನ್ಯಾಕೆ ಇದನ್ನೆಲ್ಲಾ ಹೇಳ್ತಿದೀನಿ? ಆ ದಿನ ಆಫೀಸಿನಲ್ಲಿ ನಡೆದ ತರಬೇತಿ ಶಿಬಿರ ನೆನಪಾಗಿದೆ! ವಿಷಯ "Time Management Tools" ...ಹೌದು, ಸಮಯವನ್ನ ನಿಯಂತ್ರಿಸುವ / ನಿರ್ವಹಿಸುವ / ನಿಭಾಯಿಸುವ ಬಗ್ಗೆ ನಮಗೆಲ್ಲ ತರಬೇತಿ ನೀಡಲು ಬಂದಿರುವ ನಿಪುಣರ ಒಂದು ತಂಡ(?!). ಬೆಳಗ್ಗಿನಿಂದ ಸಂಜೆಯವರೆಗೂ ಗೊತ್ತಿರುವ ವಿಷಯಗಳನ್ನೇ ತಿರುವು - ಮುರುವು ಮಾಡಿ ಹೇಳುತ್ತಿರುವುದೇ ಒಂದು ವಿಪರ್ಯಾಸ. ಸಮಯವನ್ನು ಹೇಗೆ ಉಪಯುಕ್ತವಾಗಿ ಬಳಸಿಕೊಳ್ಳಬೇಕೆಂದು ಹೇಳಲು ಬಂದ ನಿಪುಣರು ಸಮಯವನ್ನಷ್ಟೇ ಅಲ್ಲ ಹಣವನ್ನೂ ಸಹ ವ್ಯರ್ಥ ಮಾಡುತಿದ್ದಾರೆ ಅನಿಸಿತ್ತು. ಇವರ ಮಧ್ಯೆ ಮಿಂಚಿನಂತೆ ಪ್ರವೇಶಿಸಿದ ನಮ್ಮ ಕಂಪನಿಯ CEO ! ಹದಿನೈದು ನಿಮಿಷ ಇವರ ತರಬೇತಿಯನ್ನು ಆಲಿಸಿ, ನಂತರ ಮಾತನಾಡಲು ಶುರುವಿಟ್ಟರು.

"ಸಮಯ! ಇದನ್ನು ಹೇಗೆ ನಿಯಂತ್ರಿಸಲು ಸಾಧ್ಯ? ಮನುಷ್ಯನ ಸುತ್ತ-ಮುತ್ತಲು ನಡೆಯುವ ಕಾರ್ಯಕಲಾಪಗಳು, ಅವನು ಮಾಡಲೇ ಬೇಕೆಂಬ ಅನಿವಾರ್ಯತೆಗಳು, ಇದರಿಂದ ಸಮಯವನ್ನು ಒಂದು ಸಣ್ಣ ಹಂತದಲ್ಲಿ ಸಂಬಾಳಿಸಬಹುದು ಅಷ್ಟೇ. ಆದರು ಇಷ್ಟು ಸಮಯದಲ್ಲಿ ಇದನ್ನೇ ಮಾಡುತ್ತೇನೆ, ಹೀಗೆ ಮಾಡುತ್ತೇನೆ ಅನ್ನುವುದು ಮೂರ್ಖತನ. ನೀವೆಂದಾದರೂ ನಿಮ್ಮ ಜೀವನದ ಕೊನೆ ಘಳಿಗೆಗಳ ಬಗ್ಗೆ ಯೋಚಿಸಿದ್ದೀರಾ? Just Think, ಇನ್ನು ಬದುಕಲು ನಿಮಗುಳಿದಿರುವುದು ಬರೇ ಆರು ತಿಂಗಳು ಮಾತ್ರ, ಈ-ಆರು ತಿಂಗಳುಗಳಲ್ಲಿ ನೀವು ಮಾಡಬೇಕಾದ ಕಾರ್ಯ ಕೆಲಸಗಳು ಮಾಡಿ ಮುಗಿಸಿಬಿಡ ಬೇಕು, ನಂತರ ನಿಮಗೆ ಉಳಿವಿಲ್ಲ. ಹೀಗೆ ನೀವು ನೆನೆದು ಕೆಲಸ ಮಾಡಿದ್ದಲ್ಲಿ ನಿಮ್ಮೆಲ್ಲ ಕೆಲಸಗಳು ನೀವಂದುಕೊಂಡ ಸಮಯದೊಳಗೆ ಆಗುವುದಂತೂ ಖಚಿತ. ಆಲೋಚಿಸಿ ನೋಡಿ, ಇದು ಚಿಂತನೆಗೆ ಹಚ್ಚುವ ವಿಷಯ! ಇನ್ನು ನಾನೇನೆ ಹೇಳಿದರು ಅದನ್ನು ಸ್ವೀಕರಿಸಲೇ ಬೇಕೆಂಬ ಆಜ್ಞೆ ಏನೂ ಇಲ್ಲ - ಯೋಚಿಸಿ ನೋಡಿ". ಹೀಗೆ ಹೇಳಿ ಹೊರಟು ಹೋದರು.

ಇನ್ನುಳಿದ ನಾಲ್ಕು + ಎರಡು ತಿಂಗಳು


ನಿಜಕ್ಕೂ ಆಲೋಚನೆಗೆ ದೂಕಿದ್ದು ಆ ಅರೆಘಳಿಗೆಯ ಮಾತು. ಇನ್ನು ನಾನುಳಿಯುವುದು ಆರು ತಿಂಗಳೆಂದು ನಿರ್ಧರಿಸಿ ನನ್ನ ಜೀವನವನ್ನು ಒಮ್ಮೆ ಕಲ್ಪಿಸಿಕೊಂಡೆ. ಥಟ್ ಅಂತ ಹೊಳೆದುದು, "ನಾನು ಸತ್ತರೆ ಯಾರ್ಯಾರು ಅಳಬಹುದು, ಯಾರ್ಯಾರು ನಿಂದಿಸಬಹುದು, ಯಾರಿಗೆಲ್ಲ ಸಂತಸವಾಗಬಹುದು" ಎಂಬ ವಿಚಿತ್ರ ವಿಕಾರ ಸಂಗತಿಯ ದು(ದೂ)ರಾಲೋಚನೆ. ಇನ್ನು ಸ್ವಲ್ಪ ಹೊತ್ತಿನ ನಂತರ, ಉಳಿದ ಜೀವನವನ್ನು ಸುಮ್ಮನೆ ಹಾಗೆ ಮೆಲುಕು ಹಾಕಿದೆ.. ನೆನಪಿಗೆ ಬಂದದ್ದು ಹಲವು - ನಾನು ಮಾಡಲೇ ಬೇಕಾದ ಕೆಲಸಗಳು, ಬೇಟಿಯಾಗಲೇ ಬೇಕಾದ ವ್ಯಕ್ತಿಗಳು, ಹೇಳಲೇ ಬೇಕಾದ ಮನಸಿನ ಮಾತುಗಳು! ಕೆಲವರಿಗೆ ನಾನು ಅಭಾರಿ - ಅವರಿಗೆ ನನ್ನಿಂದ ಸಲ್ಲಲೇಬೇಕಾದ ಧನ್ಯವಾದಗಳು. ಓದಲೇ ಬೇಕೆಂದು ಪಟ್ಟಿ ಮಾಡಿರುವ ಪುಸ್ತಕಗಳು, ನೋಡಲೇ ಬೇಕಾದ ನೆಚ್ಚಿನ ಚಿತ್ರಗಳು, ಕಲಿಯಲೇಬೇಕಾದ ಹಾಡುಗಳು. ಅರೆ, ಇನ್ನು ಕ್ಷಮೆ ಯಾಚಿಸುವುದು ಸಹ ಬಾಕಿ ಇದೆ. ನನ್ನ ಕೋಳಿ, ನನ್ನ ಮೀನು, ಇನ್ನು ಅನೇಕಾನೇಕ ಗೊಂದಲಗಳು ಆಗಲೇ ತಲೆಯಲ್ಲಿ ಗೋಚರಿಸುತ್ತಿತ್ತು. ಮುಂದೇನು? ನನ್ನ ಇರುವಿಕೆಯ ಛಾಪು ಕಳೆದು ಹೋಗುವುದೇನೋ!

ಇವೆಲ್ಲವನ್ನೂ ಆರು ತಿಂಗಳಲ್ಲ - ನಾಲ್ಕು ತಿಂಗಳುಗಳಲ್ಲಿ ಮಾಡಿಬಿಡಬೇಕು, ಇನ್ನುಳಿದ ಎರಡು ತಿಂಗಳು ಈ ನೆನಪುಗಳಿಗಾಗಿ ಮೀಸಲು ಎಂದು ಲೆಕ್ಕ ಹಾಕಲು ಶುರುವಿಟ್ಟೆ. ಹೇಗಾದರೂ ಮಾಡಿ ಈ ನಾಲ್ಕು ತಿಂಗಳುಗಳಲ್ಲಿ ಇದನ್ನು ಸಾದಿಸಿಬಿಡಬೇಕು, ಆದರೆ ಇದು ಸಾಧನೆಯಲ್ಲ. ನಾನಿಲ್ಲದಿರೆ ಎಷ್ಟು ಜೀವಗಳು ನನಗಾಗಿ ಮಿಡಿಯಬಲ್ಲದ್ದು? ಸ್ನೇಹದ ಸೇತುವೆಗಳು ಬಿಗಿಯಾಗಬೇಕಿದೆ. ನನಗೆ ಸಾವಿನ ನಂತರವೂ ಬದುಕಬೇಕಿದೆ. 

ಅಂದಿನಿಂದ ಪ್ರತಿ ದಿನವು ನನ್ನ ಆರು ತಿಂಗಳ ಬದುಕನ್ನು ಒಮ್ಮೆ ನೆನೆಸಿಕೊಂಡು, ನನ್ನ ಜೀವನವನ್ನ "Renew" ಮಾಡಿಕೊಳ್ಳ ಬೇಕೆಂದು ನಿರ್ಧರಿಸಿ ಆಯಿತು. ಈ ಸಮಯ ನಿಯಂತ್ರಣ ತಂತ್ರವೊಂದನ್ನು ಹಲವು ಮಾತುಗಳಲ್ಲಿ ಹೇಳಿಕೊಟ್ಟ ಮಹಾನುಭಾವನಿಗೆ ಮನಸಾರೆ ವಂದಿಸುವೆ. ಸಮಯವೆಂಬ ಭಗವಂತನು ಈ ಆರು ತಿಂಗಳ ಜೀವನ ಭಿಕ್ಷೆ ನೀಡಿದ್ದಲ್ಲಿ, ಅದರೊಳಗಿದೆ ಹುರುಪು, ಜೀವಿಸಿಬಿಡಬೇಕೆಂಬ ದೃಢತೆ, ಮಾಡಿ ಮುಗಿಸಿಬಿಡುವ ಹಪ-ಹಪಿ, ಸತ್ತ ಮೇಲು ಬದುಕುಳಿಯುವ ಹಂಬಲ, ಕ್ಷಣ ಕ್ಷಣವೂ ನನ್ನದಾಗಿಸಿಕೊಳ್ಳುವ ಕಾತುರ.

ಈಗಷ್ಟೇ ನನ್ನ ಕೈ ಗಡಿಯಾರ ನೋಡಿಕೊಂಡೆ... ಸಮಯ ಬೆಳಗ್ಗೆ ೬.೦೬! 

 

3K - ಹರಟೆ ಕಟ್ಟೆಯಿಂದ ಕಾಪಿ-ದಿನ ದವರೆಗೆ .....


ಈ ಜೀವನದ ಅಂತರಾವಧಿಯಲ್ಲಿ 3K ಸಹ ಸೇರಿಹೋಗಿದೆ. ನಾನು ಮಾಡಬೇಕಾದ ಕೆಲಸಗಳ ಪಟ್ಟಿಯಲ್ಲಿ 3K ಕೂಡ ಸ್ಥಾನ ಪಡೆದಾಗಿದೆ.

ಒಂದು ಹೊಸ ಪ್ರಸ್ತಾವನೆ - ಕ್ವಿಕಿ ಅರುಣನಿಂದ .... ನಾವೆಲ್ಲರೂ ಒಮ್ಮೆ ಬೇಟಿಯಾಗಬೇಕೆಂದು. ಅದೊಂದು ರೀತಿಯ ಸಂಭ್ರಮ - ಅದಕ್ಕೆ ಕ್ವಿಕಿ ಇಟ್ಟ ಹೆಸರು "3K - ಸಂಭ್ರಮ". ಹರಟೆಕಟ್ಟೆಯಲ್ಲಿ ಮಾತನಾಡಿಕೊಂಡಿರುವುದು ಹೊರತು - ಯಾರೊಬ್ಬರ ಮುಖ ಪರಿಚಯ ಯಾರಿಗೂ ಇಲ್ಲ. ಇದೊಂದು ವಿಚಿತ್ರ ಅನುಭವ! ನಿಗದಿ ಪಡಿಸಿದ ದಿನಾಂಕ 26.11.2010 ...ಸಮಯ ಬೆಳಗ್ಗೆ 10.30....ಸ್ಥಳ ಅದೇ ಕಾಫಿ ಡೇ, ಮಲ್ಲೇಶ್ವರಂ....

ಈ ಸಂಭ್ರಮ ಹೇಗೆಲ್ಲ ಇರಬಹುದು? ಇಲ್ಲಿಗೆ ಯಾರ್ಯಾರು ಬರಬಹುದು? ಹೇಗೇಗೆ ಮಾತಾಡಬಹುದು..... ನಾನೇನು ಮಾತಾಡಬೇಕು? ಈ ಹಿಂದೆ ಯಾರನ್ನು ಈ ರೀತಿ ಬೇಟಿಯಾಗುವ ಧೈರ್ಯ ಮಾಡಿರಲಿಲ್ಲ! ತಿಳಿಯದ ಅರಿಯದ ಸ್ನೇಹ ಸೇತುವೆ ಹರಟೆಕಟ್ಟೆಯಲ್ಲಿ ಬೆಸೆದಿದೆ. ಆದರು ಹ್ಯಾಕಿಂಗ್ / ಇಂಟರ್ನೆಟ್ ಕ್ರೈಂ / ಫ್ರಾಡ್ ಹೀಗೆ ಏನೇನೋ ಆಲೋಚನೆ... ಒಂದೇ ಧೈರ್ಯವೆಂದರೆ ನನ್ನ ಜೊತೆ "ಅನುಪಮ ಹೆಗಡೆ"ಯವರು ಸಹ ಇರ್ತಾರೆ ಅನ್ನುವುದು! ಇವರ ಜೊತೆ ಮಾತನಾಡಿದ ಬಳಿಕ ಒಂದು ಧೈರ್ಯ. ಇವರ ಮಾತಿನ ರೀತಿಯೇ ಹೀಗೆ... ಮಿಕ್ಕಂತೆ ನೋಡೋಣ - ಈ ಅನುಭವಕ್ಕಾಗಿ ಕಾತುರತೆ ಇದೆ ಎಂದುಕೊಳ್ಳುತಿದ್ದಂತೆ, ಬಂದೆ ಬಿಟ್ಟಿತು ಆ ದಿನ!

ಆ ಭಾನುವಾರ ನಿಜಕ್ಕೂ ಸಂಭ್ರಮಿಸಿದ್ದು ಹೇಗೆ?

Comments

 1. ಸಮಯದ ಭಾವ, ಸಮಯದ ಅಭಾವ ಇವೆರಡನ್ನೂ ಸಂಭಾಳಿಸಿದರೆ..ಮನುಜ ಗೆದ್ದಂತೆ...ಈ ಉಕ್ತಿಯನ್ನು ಚೆನ್ನಾಗಿ ವಿವರಿಸಿದ್ದೀರಿ..ರೂಪ..ಹೌದು ದಿನಗಟ್ಟಲೆ ಹೇಳುವ ಪಾಠ ಕ್ಕಿಂತ..ಹಾಗೆ ಬಂದು ಹೀಗೆ ಹೋಗಿ ಆಡುವ ಮಾತುಗಳು ಸದಾ ಉಪಯುಕ್ತ ಅನ್ನಿಸುತ್ತೆ...ಸುಂದರ ಲೇಖನ, ಸಮಯದ ಬಗ್ಗೆ...ಅಭಿನಂದನೆಗಳು..

  ReplyDelete
 2. Srikanth... ನಿಮ್ಮ ಪ್ರೋತ್ಸಾಹ ಹಾಗು ಮೆಚ್ಚುಗೆಗೆ ಧನ್ಯವಾದ....

  ReplyDelete
 3. ಸರಿಯುವ ಸಮಯದ ಬಗೆಗಿನ ಲೇಖನ ಚೆನ್ನಾಗಿ ಮೂಡಿ ಬಂದಿದೆ...

  ReplyDelete
 4. ರೂಪಕ್ಕ,

  ಆ ನಿಪುಣರನ್ನು ನಮ್ ಆಫೀಸ್ ಗೂ ಕಳಿಸಿಕೊಡಿ ...ನಮಗೂ ಅವರ ಅಗತ್ಯ ಇದೆ......

  ಹೌದು, ಆ ಭಾನುವಾರ ಕಳೆದದ್ದು ಹೇಗೆ ? ನಿಮ್ಮ ಮಾತಿನಲ್ಲೇ ಕೇಳುವಾಸೆ........ಕಾದಿರುತ್ತೇನೆ.....

  ReplyDelete
 5. HI Ashok,
  nanagoo aa bhanuvaarada kuritu hechchaagi bareyuva aase ide. bareyuve....

  Innu... aa nipuNaru nijavaagiyu beke nimma aafisige.... neeve avariginta uttamavaagi samayavanna nibhaayisteereno ansutte. Mumbai / Sirsi / Bengalooru ..... we must learn Time Management from you :)

  Roopa

  ReplyDelete

Post a Comment

Popular posts from this blog

ಹೀಗೊಂದು ಮಹಿಳಾ ದಿನಾಚರಣೆ!!

ನಸುಕಿನ ಕನವರಿಕೆಗಳು

ದಿ ಪ್ರೊಫೆಷನಲ್ - ಬದುಕಿನ ಕೊನೆ ಪುಟಗಳಲ್ಲಿ