Friday, October 12, 2012

ಹಳೆಯ ಡೈರಿ - ಹಳೆಯ ನೆನಪು


ಎಲ್ಲರೂ ಡೈರಿ ಬರೆಯುತ್ತಾರೆ ಹಾಗೆಯೇ ನಾನು ಸಹ ಬರೆಯಬೇಕು ಎಂದು ಚಿಕ್ಕಂದಿನಲ್ಲಿ ಡೈರಿ ಬರೆಯುವ ಅಭ್ಯಾಸ ಶುರುವಿಟ್ಟೆ! ಅದು-ಇದು ಇಷ್ಟವಾಗಿದ್ದು ಇಲ್ಲವಾಗಿದ್ದು ಬರೆದುಕೊಂಡ ಡೈರಿ ಅದು. ಶಾಲೆಯ ದಿನಗಳಲ್ಲಿ ಬರೆಯುತ್ತ - ಕಾಲೇಜಿನ ಮೆಟ್ಟಿಲು ಹತ್ತುವಷ್ಟರಲ್ಲಿ ಆ ಅಭ್ಯಾಸ ಬಿಟ್ಟು ಹೋಗಿತ್ತು. ನನ್ನ ಸ್ನೇಹಿತರು, ತಂಗಿಯರು, ಅವರಿವರ ಚೇಷ್ಟೆ, ಪತ್ರಿಕೆಗಳಿಂದ ಕತ್ತರಿಸಿ ಅಂಟಿಸಿದ್ದ ವಿಭಿನ್ನ ವಿಷಯಗಳು, ಹುಟ್ಟುಹಬ್ಬದ೦ದು ಸಿಕ್ಕ ಉಡುಗೊರೆಯ ಪಟ್ಟಿ, ಸಿಟ್ಟು, ಕಲಾಪ, ಹೀಗೆ ಅನೇಕ ವಿಷಯಗಳು ಅದರಲ್ಲಿದೆ. ವ್ಯಾಕರಣಾತ್ಮಕ ಹೊರತು-ಮರೆತು ಓದಬೇಕಷ್ಟೇ!!

ಡೈರಿ ಬರೆಯುವುದರಿಂದ ಮನಸಿಗೆ ನೆಮ್ಮದಿ ಸಿಗೋದು, ಮನದ ಮಾತುಗಳೆಲ್ಲ ಹೊರಗೆ ಬರೋಕೆ ಸಹಾಯವಾಗುತ್ತೆ ಅನ್ನೋದು ಎಷ್ಟು ನಿಜ? ಅಷ್ಟಕ್ಕೂ ಈ ಡೈರಿ ಬರೆಯುವ ನನ್ನ ಸ್ನೇಹಿತರು ಹೇಳಿಕೊಂಡಂತೆ ಅದರಿಂದ ಆದ ಅನಾಹುತ, ಅಪಾರ್ಥ, ಅಪವಾದಗಳೆ ಹೆಚ್ಚು. ನನ್ನ ಮಟ್ಟಿಗೆ - ನಾನಂತೂ ಕಿಲಾಡಿ ಎಂದುಕೊಂಡೆ! ನನಗೆ ಬೇಕಾಗಿರುವ ವಸ್ತುಗಳನ್ನ ಅಪ್ಪನಿಗೆ ಸೂಚನೆ ಕೊಡುವ ಸಲುವಾಗಿ ಬರೆದು - ಬರೆದು ಅವರ ಕೈಗೆ ಸಿಗುವ ಜಾಗದಲ್ಲೇ ಇಡುತಿದ್ದೆ. ಸಾಲದಕ್ಕೆ ನನ್ನ ಡೈರಿಯನ್ನ ಓದಲಿ ಎನ್ನುವ ಸಲುವಾಗಿ "Do Not Open - My Personal Diary" ಅಂತ ದಪ್ಪಕ್ಷರಗಳಲ್ಲಿ ಡೈರಿಯ ಮೇಲೆ ಬರೆದಿದ್ದೆ. ಅಪ್ಪನಿಗೆ ನನ್ನ ಪೆದ್ದುತನ ತಿಳಿದಿದ್ದರೂ - ಏನೂ ತಿಳಿಯದವರಂತೆ ಮುದ್ದು ಮಾಡುತಿದ್ದರು ಎನ್ನುವ ವಿಷಯ ನಾನು ತಾಯಿ ಆದಮೇಲೆಯೇ ನನಗೆ ಅರಿವಿಗೆ ಬಂದದ್ದು.

ಆಗೊಮ್ಮೆ ಈಗೊಮ್ಮೆ ಕಣ್ಣಿಗೆ ಬಿದ್ದು ಮಾಯವಾಗುತಿದ್ದ ಈ ಹಳೆಯ ಡೈರಿ ಕೆಲವು ತಿಂಗಳುಗಳ ಹಿಂದೆ ಮತ್ತೆ ಕಾಣಿಸಿತ್ತು. ಕೈಗೆತ್ತಿಕೊಂಡು ಒಂದೊಂದೇ ಪುಟಗಳನ್ನ ಕುತೂಹಲದಿಂದ ಓದುತಿದ್ದೆ! ಪ್ರತೀ ಬಾರಿ ಈ ಡೈರಿ ಓದುವಾಗಲು ಒಂದೊಂದು ಅನುಭವ. ನೆನಪುಗಳ ಬುತ್ತಿ ಬಿಚ್ಚಿಟ್ಟಹಾಗಿತ್ತು. ಒಂದು ಪುಟದ ಮೂಲೆಯಲ್ಲೆಲ್ಲೋ "I will not like Nanju Ajji" ಎಂದು ಬರೆದಿದ್ದು ಕಾಣಿಸಿತು. ಇದೆಂತ: ಇಂಗ್ಲಿಷೋ! ಹೀಗೂ ಸಹ ಬರೆದಿದ್ನ ಅಂತ. ಸರಿ, ಹೀಗ್ಯಾಕೆ ಬರೆದಿದ್ದೆ? ನಂಜು ಅಜ್ಜಿ, - ಅವರ್ಯಾಕೆ ಇಷ್ಟವಿರಲಿಲ್ಲ? ನೆನಪಿಸಿಕೊಳ್ಳುವುದು, ಕೆದಕುವುದು ಈಗ ಅನಿವಾರ್ಯ.

ಮೊದಲ ಮೊಗ್ಗಿನ ಜಡೆ

ನಂಜು ಅಜ್ಜಿಗೆ ಇಬ್ಬರು ಗಂಡುಮಕ್ಕಳು - ಆರು ಜನ ಹೆಣ್ಣುಮಕ್ಕಳು. ಇವರ ಕೊನೆಯ ಮಗಳು ನಿರ್ಮಲ ನನ್ನ ಸ್ನೇಹಿತೆ. ಶಾಲೆಗೆ ಜೊತೆಯಲ್ಲೇ ಹೊಗಿಬರುತಿದ್ದೆವು. ಕೆಲವೊಮ್ಮೆ ಜೊತೆಯಲ್ಲಿ ಆಡುತಿದ್ದೆವು. ಅವಳಿಗಿಷ್ಟ ಬಂದಾಗಷ್ಟೇ ನನ್ನ ಜೊತೆ ಇರುತಿದ್ದಳು - ಇಲ್ಲವಾದಾಗ ಮುಲಾಜಿಲ್ಲದೆ "ನೀನೀಗ ಹೋಗ್ತೀಯ ನಾನು ಊಟ ಮಾಡ್ಬೇಕು, ಹೊಸ ಗೊಂಬೆ ಜೊತೆ ಆಟ ಆಡ್ಬೇಕು" ಅಂತ ಹೇಳಿ ಓಡಿಸುತಿದ್ದಳು. ನಮ್ಮ ಮನೆಯ ಬೀದಿಯ ಕೊನೆಯಲ್ಲೇ ಇವರ ಮನೆ. ಓಡಿಸಿದಾಗೆಲ್ಲ ನಮ್ಮ ಮನೆಗೆ ಓಡಿ ಬಂದು ಏನು ಆಗದಂತೆ ಇದ್ದು ಬಿಡುವುದು ವಾಡಿಕೆಯಾಗಿಬಿಟ್ಟಿತ್ತು. ನಂಜು ಅಜ್ಜಿ ಅಂತ ಎಲ್ಲರು ಕರೆಯುತಿದ್ದು, ನಾನು ಸಹ ಅವಳ ತಾಯಿಯನ್ನ ಹಾಗೆ ಕರೆಯುತಿದ್ದೆ.


ಬೇಸಿಗೆ ರಜೆ. ಸರಿಯಾಗಿ ನೆನಪಿಲ್ಲವಾದರೂ ಎರಡನೇ ಅಥವಾ ಮೂರನೇ ತರಗತಿಯಲ್ಲಿರಬಹುದು.  ಮೊದಲ ಬಾರಿ ಅಮ್ಮ ನನಗೆ ಮೊಗ್ಗಿನ ಜಡೆ ಹಾಕಿಸಿದ್ದು. ಅವರ ಮೊದಲ ಮುದ್ದು ಮಗಳು ನಾನು, ಅವರ ಪ್ರಯೋಗಗಳೆಲ್ಲವು ನನ್ನ ಮೇಲೆ ಆಗಾಗ ನಡೆಯುತಲೆ ಇತ್ತು. ಅಂದು ಮೊಗ್ಗಿನ ಜಡೆ ಹಾಕಿಸಿದ್ದ ದಿನ, ಹೊಸ ರೇಶಿಮೆ ಲಂಗ, ಎರಡೂ ಕೈಗಳ ತುಂಬ ಗಾಜಿನ ಬಳೆಗಳು, ಅಮ್ಮನ ಬಂಗಾರ, ಅಜ್ಜಿಯ ಅವಲಕ್ಕಿ ಸರ ಎಲ್ಲವೂ ನನ್ನ ಮೇಲೇ ಇತ್ತು. ಅಪ್ಪ-ಅಮ್ಮನ ಜೊತೆ ಅವೇನ್ಯೂ ರೋಡಿನಲ್ಲಿದ್ದ ಎಂಪೈರ್ ಸ್ಟುಡಿಯೋಗೆ ಹೋದದ್ದು, ಬಣ್ಣ ಬಣ್ಣದ ಪ್ಲಾಸ್ಟಿಕ್ ಹೂವಿನ ಕುಂಡದ ಮುಂದೆ ನಿಲ್ಲಿಸಿ ಫೋಟೋ ತೆಗೆಸಿದ್ದು, ಅಪ್ಪ ನನ್ನನ್ನು ತಬ್ಬಿ ಮುದ್ದಾಡಿದ್ದು, ಮನೆಗೆ ಬಂದು ಆ ದಿನ ರಾತ್ರಿ ತಿಂದ ಊಟವನ್ನೆಲ್ಲ ಕಕ್ಕಿದ್ದು, ನ೦ತರ ಉಪ್ಪು - ಮೆಣಸು ನಿವಾಳಿಸಿ, ಪೊರಕೆ ಕಡ್ಡಿಗಳನ್ನ ಸುಟ್ಟು ಅಮ್ಮ ದೃಷ್ಟಿ ತೆಗೆದದ್ದು.... ಎಲ್ಲವೂ ನೆನಪಿದೆ!

ಎರಡು ದಿನಗಳ ನಂತರ ಸ್ಟುಡಿಯೋದಿಂದ ಅಪ್ಪ ಫೋಟೋ ತಂದಿದ್ದರು, ಅದನ್ನ ನೋಡಿದ್ದೆ ನನ್ನ ಮುಖ ಊರಗಲ ಅರಳಿತ್ತು. ಸುಮ್ಮನಿರದೆ ಆ ಫೋಟೋವನ್ನು ನಿರ್ಮಲಳಿಗೆ ತೋರಿಸಲು ಅವಳ ಮನೆಯ ಕಡೆ ಓಡಿದ್ದೆ. ಅವಳಂತೂ ಮನೆಯಲ್ಲಿರಲಿಲ್ಲ, ಬದಲಿಗೆ ನಂಜು ಅಜ್ಜಿ ನನ್ನ ಫೋಟೋ ನೋಡಿದರು. ನೋಡುತ್ತಲೇ, "ನಮ್ಮ ನಿರ್ಮಲಳ ಫೋಟೋ ಇನ್ನು ಚೆನ್ನಾಗಿರುತ್ತೆ, ಅವಳ ಕಲರ್ ನೋಡಿದ್ಯ ಏನ್ ಕಲರ್ ಇದಾಳೆ, ನಿನಗಿಂತ ಬೆಳ್ಳಗೆ ಬರ್ತಾಳೆ ಫೋಟೋದಲ್ಲಿ, ಅವಳ ಮೊಗ್ಗಿನ ಜಡೆ ಇನ್ನೂ ಉದ್ದ ಇರುತ್ತೆ" ಅಂತ ವ್ಯಂಗ್ಯವಾಗಿ ಹೇಳಿಬಿಟ್ಟರು. ಫೋಟೋ ತೆಗೆದುಕೊಂಡು ಅಳುತ್ತಲೇ ಮನೆಗೆ ಬಂದೆ. ಕಣ್ಣೀರ ಕೆಲವು ಹನಿಗಳು ಜಾರಿ ನನ್ನ ಮೊದಲ ಮೊಗ್ಗಿನ ಜಡೆಯ ಫೋಟೋದ ಮೇಲೆ ಬಿದ್ದಿತ್ತು. ಆ ಫೋಟೋ ಕದಡಿ ಅಲ್ಲಲ್ಲಿ ಹಾಳಾಗಿ ಹೋಯ್ತು. ಇಂದಿಗೂ ಆ ಫೋಟೋ ಹಾಗೆಯೇ ಇದೆ. ಒಂದೇ ಚಿತ್ರದ ಮೂರು ಪ್ರತಿಗಳಿದ್ದರಿಂದ ಅಪ್ಪ ಮತ್ತೊಂದು ಫೋಟೋಗೆ ಫ್ರೇಮ್ ಹಾಕಿಸಿಟ್ಟರು.


ಆ ಘಟಣೆಯ ನೆನಪಿನಲ್ಲಿ ನಂಜು ಅಜ್ಜಿಯ ಬಗ್ಗೆ ಆ ಸಾಲು ಬರೆದಿರುತ್ತೇನೆ ಎಂದುಕೊಂಡೆ. ಅಷ್ಟಕ್ಕೂ ಇದ್ಯಾವುದು ನೆನಪಿರಲಿಲ್ಲ. ಆ ಹಳೆಯ ಡೈರಿ ನೋಡಿದಾಗಲೆಲ್ಲ ಈ ವಿಷಯ ಕಣ್ಣಿಗೂ ಬೀಳುತಿರಲಿಲ್ಲ. ಮೂಲೆಯಲ್ಲೆಲ್ಲೋ ಬರೆದದ್ದು ಈ ಬಾರಿ ಕಂಡುಬಂದದ್ದು ಯಾಕಂತಲೂ ತಿಳಿಯುತ್ತಿಲ್ಲ!

ನಂಜು ಅಜ್ಜಿ ಮತ್ತೆ ನೆನಪಾದದ್ದು

ನಂಜು ಅಜ್ಜಿ ಬಗ್ಗೆ ಇತ್ತೀಚೆಗಷ್ಟೇ ಮತ್ತೆ ಕೇಳಿಪಟ್ಟೆ. ಅಮ್ಮನಿಗೆ ಯಾರೋ ಹೇಳಿದ ಇತ್ತೀಚಿನ ಸುದ್ದಿ ಇದು. ಎಂಟು ಮಕ್ಕಳ ಮಹಾತಾಯಿ ಆಕೆ. ಅವರ ಇಬ್ಬರು ಗಂಡು ಮಕ್ಕಳಾಗಲಿ, ಆರು ಮಂದಿ ಹೆಣ್ಣು ಮಕ್ಕಳಾಗಲಿ, ಸೊಸೆ - ಅಳಿಯನ್ದಿರಾಗಲಿ ಇವರನ್ನು ನೋಡಿಕೊಳ್ಳಲು ನಿರಾಕರಿಸಿದ್ದಾರೆ. ಎಲ್ಲರು ಸೇರಿ ಮಾತು-ಕತೆ ನಡೆಸಿ ಇವರನ್ನು ವೃದ್ದಾಶ್ರಮದಲ್ಲಿ ಬಿಟ್ಟಿದ್ದಾರೆ. ಇವರ ಆಶ್ರಮದಲ್ಲಿನ ಖರ್ಚಿಗೂ ಹಣ ಕೊಡುವುದಕ್ಕೆ ಇವರ ಮಕ್ಕಳು ಜಗಳಕ್ಕೆ ಬಿದ್ದಿದ್ದಾರೆ. ಒಬ್ಬೊಬ್ಬರೂ ಉನ್ನತ ಸ್ಥಾನಗಳಲ್ಲಿರುವವರೇ, ಆಸ್ತಿ ಅಂತಸ್ತು ಅಂತ ಹೆಚ್ಚೆಚ್ಚಿಗೆ ಮಾಡಿಕೊಂಡವರೆ. ಇನ್ನುಳಿದಂತೆ ನಂಜು ಅಜ್ಜಿಯ ಹೆಸರಿಗಿದ್ದ ಆಸ್ತಿಯನ್ನ ಅಕ್ಷರ ಸಹ ಇವರ ಮಕ್ಕಳು ತಮ್ಮ ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.

ನಂಜು ಅಜ್ಜಿ ಇನ್ನೂ ಆರೋಗ್ಯವಾಗೇ ಇದ್ದಾರೆ, ಮೊಮ್ಮಕ್ಕಳೆಂದರೆ ಇವರಿಗೆ ಪ್ರಪಂಚ, ಕೊನೆಯ ಮಗಳೆಂದರೆ ಅಪಾರ ಪ್ರೀತಿ. ಆ ಆಶ್ರಮದಲ್ಲಿ ಇವರು ಹೇಗೆ ಕಾಲ ಕಳೆಯುತ್ತಿರಬಹುದು? ಇವರ ಮನಸ್ತಿತಿಗೆ ಸ್ಪಂದಿಸುವ ಒಂದು ಜೀವವು ಇವರ ಮನೆಯಲ್ಲಿ ಇಲ್ಲವಾಗಿದೆ. ಇದು ವಿಪರ್ಯಾಸ.

ಯಾಕೋ ಈ ವಿಷಯ ಅಮ್ಮನಿಂದ ತಿಳಿದು ನಂಜು ಅಜ್ಜಿಯ ಬಗ್ಗೆ ದುಖವಾಗ್ತಿದೆ. ಇವರನ್ನ ಬೇಟಿ ಆಗಿ ಬರುವ ಮನಸ್ಸಾಗಿದೆ. ವಯಸ್ಸಾಗುತಿದ್ದಂತೆ ಮತ್ತೊಮ್ಮೆ ಮಕ್ಕಳೇ ಆಗಿಬಿಡ್ತಾರೆ ಅಂತ ಕೇಳಿದ್ದೆ. ಇದು ಅಕ್ಷರ ಸಹ ನಿಜ, ಅನುಭವವಾಗಿದೆ. ಮಕ್ಕಳಂತೆ ಇವರಿಗೂ ಹೆಚ್ಚಿನ ಖಾಳಜಿ ನೀಡಬೇಕಿದೆ. ವ್ರುದ್ದಾಶ್ರಮದೆಡೆಗೆ ದೂಡಿದ ನಂಜು ಅಜ್ಜಿಯ ಎಂಟೂ ಜನ ಮಕ್ಕಳು ಹಾಗು ಇವರು ಬೆಳೆಸಿಕೊಂಡು ಬಂದ ಮೌಲ್ಯಗಳ ಮೇಲೆ ದಿಕ್ಕಾರವಿದೆ. ಪ್ರೀತಿ ಗೌರವಗಳಿಂದ ವಂಚಿತರಾದ ನಂಜು ಅಜ್ಜಿಯ ಮೇಲೆ ಅನುಕಂಪವಿದೆ. ಅಲ್ಲಲ್ಲಿ / ಕಾರ್ಯಕ್ರಮಗಳಲ್ಲಿ ಸಿಗುವ ಇವರ ಮಕ್ಕಳನ್ನ ನೋಡಿದಾಗ ಮಾತನಾಡಿಸುವ ಮನಸೂ ಆಗುವುದಿಲ್ಲ. ನನ್ನ ಸಿಟ್ಟು, ನನ್ನ ವರ್ತನೆಯನ್ನ ನಿಯಂತ್ರಿಸುವ ಮಾರ್ಗ ಹುಡುಕಿಕೊಳ್ಳುತಿರುತ್ತೇನೆ.

--------------------------------------------------------

ಹಳೆ ಡೈರಿಯ...ಮಾತು ಕತೆ...ನೆನಪುಗಳು ...ಇನ್ನೂ ಇವೆ!

8 comments:

 1. ಕಾವೇರಿ ಒಂದು ಸಣ್ಣ ಕುಂಡದಲ್ಲಿ ತಲಕಾವೇರಿಯಲ್ಲಿ ಹುಟ್ಟಿ..ಗುಪ್ತಗಾಮಿನಿಯಾಗಿ ಹರಿದು ಭಾಗಮಂಡಲದಲ್ಲಿ ಇನ್ನುಳಿದ ಎರಡು ನದಿಗಳ ಜೊತೆಸಂಗಮವಾಗಿ..ಮುಂದೆ ಮಹಾ ನದಿಯಾಗಿ ಹಳ್ಳ ಕೊಳ್ಳಗಳಲ್ಲಿ ಧುಮುಕಿ ಕಡೆಗೆ ಸದ್ದಿಲ್ಲದೇ ಬಂಗಾಳ ಕೊಲ್ಲಿ ಸೇರುತ್ತಾಳೆ..ಏನ್ರಿ ಶ್ರೀ ಏನೋ ಕಾಮೆಂಟ್ ಬರೀತಾ ಇದ್ದಾರೆ ಅಂದ್ರೆ ಹರಿ ಕಥೆ ಅಂತ ಅಂದುಕೊಳ್ಳಬೇಡಿ..ನಿಮ್ಮ ಡೈರಿ ಲೇಖನ ಓದಿದಾಗ ಅರಿವಿಗೆ ಬಂದದ್ದು ಮೇಲಿನ ಸಾಲುಗಳು..
  ಅರಿವಿಲ್ಲದೆ ಬರೆಯುವ ಡೈರಿ ಅರಿವು ಬಂದಾಗ ಅದನ್ನ ಓದಿ ನಂತರ ಆ ಘಟನೆಗಳನ್ನ ನೆನಪು ಮಾಡಿಕೊಂಡು ಮೆಲುಕು ಹಾಕುತ್ತ..ತನ್ನ ತಪ್ಪು ಸರಿ ವಿಶ್ಲೇಷಿಸುತ್ತ ಸರಿ ಮಾರ್ಗ ಹುಡುಕುತ್ತ ಹೋಗುವ ನಿಮ್ಮ ಲೇಖನದ ಪರಿ ನನಗೆ ಕಾವೇರಿ ನದಿ ನೆನಪಿಸಿತು..ಮನೋಜ್ಞ ಲೇಖನ..ಖಂಡಿತ ಆ ಹಿರಿ ಜೀವವನ್ನು ಭೇಟಿ ಮಾಡಿ..ಸಾಧ್ಯವಾದರೆ ಹೋಗುವಾಗ ನನಗು ಹೇಳಿದರೆ ನಾನು ಬರುವೆ..ಅಂತಹ ಹಿರಿಯ ಚೇತನಗಳ ಹಾರೈಕೆ..ಅವರಿಗೆ ನಾವು ತೋರಿಸುವ ಪ್ರೀತಿ..ಅವರ ಜೀವನಕ್ಕೊಂದು ಸುವರ್ಣ ಚೌಕಟ್ಟು ಹಾಕಿದ ಹಾಗೆ..
  (ಕಾಮೆಂಟ್ ಉದ್ದವಾಯಿತು ಕ್ಷಮೆಯೊಂದಿಗೆ - ಶ್ರೀ)

  ReplyDelete
  Replies
  1. hi Srikanth,
   ha ha, nijavaagiyoo anisiddu haage....Cauvery kurit heLtideeralla ondakkondu elliya sambandha antha.
   nimma anisike protsaahakke preetiya dhanyavaadagaLu.
   Comment uddavaagilla, kshameya maatantu modale illa. Yes, naanu mattu nanna taayi nanju ajjiyavarannu bEti maadi baruttiddeve. Nimma concern definitely appreciated. Thanx a Lot Srikanth :)

   Delete
 2. ಹಳೇ ಡೈರಿಯ ನೆನಪು ಚೆನ್ನಾಗಿ ಕೆದಕಿದ್ದೀರಿ. ನಮ್ಮ ಮನಸ್ಸಿಗೆ ಅನಿಸಿದ್ದನ್ನು ಬರೆದಿಡುವ ಡೈರಿ, ’ಕಪಟಿ’ ಎಂದು ಕವಿಯೊಬ್ಬ ಹೇಳುತ್ತಾನೆ. ಯಾಕೆಂದರೆ ನಾವು ಬೇಡ ಬೇಡ ಎಂದರೂ ಬರೆಯುವಾಗ ನಮ್ಮ ಬಗ್ಗೆ ಒಳ್ಳೆಯದನ್ನು ಬಿಂಬಿಸಿ. ಆದಷ್ಟೂ ಕೆಟ್ಟದ್ದನ್ನು ಮರೆಮಾಚುತ್ತೇವೆ ಎನ್ನುತ್ತಾನೆ. ಇದ್ದದ್ದನ್ನು ಇದ್ದ ಹಾಗೆ ಬರೆದುಕೊಂಡರೆ ಅವರು ಮಹಾತ್ಮ ಅಲ್ಲವೇ?

  ನಮ್ಮ ತಾಯಿಗೆ ಸಾಲಾಗಿ ಏಳು ಗಂಡು ಮಕ್ಕಳು. ನಾನೇ ಕಡೆಯವನು. ಬಯಸಿದರೂ ಹೆಣ್ಣು ಮಗು ಪಡೆಯಲಿಲ್ಲ ಎಂಬ ಕೊರಗನ್ನು ನಮ್ಮ ಅಮ್ಮ ನನಗೆ ಮಲ್ಲಿಗೆ ಜಡೆ ಹಾಕಿ ತೀರಿಸಿಕೊಂಡರಂತೆ!

  ನಂಜು ಅಜ್ಜಿಯ ವೃದ್ಧಾಶ್ರಮದ ಜೀವನ, ಅವರ ಮಕ್ಕಳ ಹೃದಯ ಶೂನ್ಯದ ಚಿಹ್ನೆ.

  ReplyDelete
  Replies
  1. hi Badari,
   nimma maatu nija. makkaLillavendu koraguva mandi ondede, iddaroo intaha varthanege guryaaguva mandi innondu ede.
   lekhana mecchidakke, tumba tumbaa thanks...

   Delete
 3. ಸೊಗಸಾದ ಲಹರಿ... ಎದುರಿಗೇ ಕೂತು ಹಂಚಿಕೊಂಡಂತೆ, ಆಪ್ತ.

  ReplyDelete
  Replies
  1. Hi Mestre,
   (Re)marks kottiddakke khushiyaaytu. Always await your word of appreciation.
   Dhanyavaada :)

   Delete
 4. ಡೈರೀ ಬರೆಯುವವರಿಗೆ ಗೊತ್ತು, ಅದರ ಸೊಬಗು ಎಂಥದು ಅಂತಾ. ತುಂಬಾ ಆಪ್ತವೆನಿಸುವ ಸಾಲುಗಳು Roo-1 didi :-) . ನಿಮ್ಮ ಡೈರಿಯ ಪುಟಗಳನ್ನ ಓದಿ, ಮನಸಿಗೆ ತಾಕುವಂತ ನನ್ನ ಡೈರಿಯ ಕೆಲವು ಪ್ರಸಂಗಗಳು ನೆನಪಾಗಿದ್ದರಲ್ಲಿ ಖಂಡಿತವಾಗಿಯೂ ಅರ್ಥವಿದೆ. Especially "ಹೀಗ್ಯಾಕೆ ಬರೆದಿದ್ದೆ? ನಂಜು ಅಜ್ಜಿ, - ಅವರ್ಯಾಕೆ ಇಷ್ಟವಿರಲಿಲ್ಲ? ನೆನಪಿಸಿಕೊಳ್ಳುವುದು, ಕೆದಕುವುದು ಈಗ ಅನಿವಾರ್ಯ." ಈ ಸಾಲು ನನ್ನ ಡೈರಿಯಿಂದ ಕದ್ದ ಮಾಲೇ ..? ಎಂಬ ಅನುಮಾನ ಬಲವಾಗಿ ಕಾಡುತಿದೆ.

  ಡೈರಿಯನ್ನ "ಹೀಗೆಯೇ" ಬರೆಯಬೇಕೆಂಬ ಹಳೇ ಸಾಂಪ್ರದಾಯಿಕ ಕಟ್ಟುಪಾಡುಗಳನ್ನೂ ಮೀರಿ, ಮತ್ತೆ ನನ್ನ ಹಳೆಯ ಡೈರಿಯನ್ನ ಓದಲು ಹುಡುಕುವಂತೆ ಮಾಡಿದ ನಿಮ್ಮ ಈ ಬರಹಕ್ಕೆ ಧನ್ಯವಾದಗಳು.

  ReplyDelete
 5. hi Ra-1,
  Thanks for your comments.
  Nimma Diary-yinda Namma Diary-yavarege harindu banda saalu.... "Same Pinch"...... :)

  ReplyDelete

"ಆನ್ ಸುಲ್ಲಿವನ್" ಎಂಬ ಪಂಜು !!!

"When one door of happiness closes, another opens; but often we look so long at the closed door that we do not see the one which h...