Monday, June 3, 2013

ಸೂಚನೆ : ಸಸ್ಯಹಾರಿಗಳಿಗೆ ಸೂಕ್ತವಲ್ಲ :)

ಹಿ ಹಿ ಹೀಗೊಂದು ಭಾನುವಾರ!

ಪ್ರತಿ ದಿನ ಬೆಳಗ್ಗೆ 6.30 ಕ್ಕೆ ಆಫಿಸ್ ಹೊರಡುವ ಸಮಯ, ಹಾಗಾಗಿ 5 ಗಂಟೆಗೆ ಏಳುವ ಅಭ್ಯಾಸ! ಅಮ್ಮ ನಮ್ಮೊಟ್ಟಿಗೆ ಉಳಿಯುವ೦ದಿನಿಂದ ಅರ್ಧ ಗಂಟೆ ಬೋನಸ್ ನಿದ್ದೆ, ಈ ನಡುವೆ ಏಳುವುದು 5.30ಕ್ಕೆ. ಭಾನುವಾರವೆಂದರೆ - ಬೇಕಾದಷ್ಟು ನಿದ್ದೆ ಮಾಡುವ ದಿನ, ಯಾರನ್ನೂ ಯಾರು ನಿದ್ದೆಯಿಂದೆಬ್ಬಿಸದೆ - ಯಾರು ಮೊದಲು ಏಳ್ತಾರೊ ಅವರೇ ಎಲ್ಲರಿಗು ಕಾಫಿ ಮಾಡಬೇಕು, ಇದು ನಾವು ರೂಡಿಸಿಕೊಂಡಿರುವ ಪದ್ಧತಿ. "ಕಾಫಿ" ಅಂತ ಅಮ್ಮ ಕೂಗುವವರೆಗೂ ಹಾಸಿಗೆ ಬಿಟ್ಟು ಏಳುವ ಪ್ರಾಣಿ ನಾನಂತೂ ಅಲ್ಲ. ಇವತ್ತು ಭಾನುವಾರ, ಆರಾಮ್ ನಿದ್ದೆ, ಅಮ್ಮನ ಕೂಗು ಕೇಳಿ ಬಂದು ನಾನು ಕಣ್ ಬಿಟ್ಟಾಗ ಒಂಬತ್ತಕ್ಕೆ ಇನ್ನು ಹತ್ತು ನಿಮಿಷ ಬಾಕಿ.

ತಿಂಡಿಯಾದ ಮೇಲೆ ಅಮ್ಮನಿಗೆ ಏನನ್ನಿಸಿತೋ, ಒಂಟಿ ಕೊಪ್ಪಲ್ ಪಂಚಾಗ ಹಿಡಿದು, "ಇವತ್ತು ತಿನ್ನಬಹುದು" ಎಂದರು! "ಅಜ್ಜಿ ತಿನ್ನೋದಕ್ಕೂ ವಾರ - ನಕ್ಷತ್ರ ನೋಡ್ತಾರ?", ಅಂತ ಮಗಳ ನಗು / ಕೀಟಲೆ. "ಇವತ್ತು ಅರ್ಧ - ಮುಕ್ಕಾಲು KG ಮಟನ್ ತಂದು ಬಿಡು, ಸಾರು ಮಾಡಿ ಮುದ್ದೆ ಮಾಡ್ಬಿಡ್ತೀನಿ" ಅಂತ ಅಮ್ಮ ಹೆಳ್ತಿದ್ದಂಗೆ, ಮನೆಯಲ್ಲಿ ಸ್ಪೆಷಲ್ ಅಡುಗೆ ಅಂತ ಮಗಳಿಗೆ ಖುಷಿ. ಸರಿ ಮನೆಯ ಬಳಿ ಇರುವ "ಚಾಯ್ಸ್ ಚಿಕೆನ್" ಅಂಗಡಿಯಿಂದ ಕೋಳಿ ಅಥವಾ ಅದರ ಮೊಟ್ಟೆ ತಂದು ಅಭ್ಯಾಸ, ಹಿಂದೆಂದು ಹೋದದ್ದಿಲ್ಲ ಈಗ ಮಟನ್ ಅಂಗಡಿ ಹುಡುಕಿಕೊಂಡು ಎಲ್ಲಿ ಹೋಗಲಿ? ಮನೆಯಲ್ಲಿ ಮಟನ್ ಅಪರೂಪವೆಂದರೆ ವರುಷಕ್ಕೆಲ್ಲ ಒಂದು - ಎರಡು ಬಾರಿ ಅಷ್ಟೇ!!.... "ಅಪ್ಪ ಎಲ್ಲಿ ತರ್ತಿದ್ದು ಗೊತ್ತಾ?" ಅಂತ ಮಗಳು ಕೇಳಿದಾಗ ನೆನಪಾಯ್ತು ಇನ್ನು ಸ್ವಲ್ಪ ದೂರದಲ್ಲಿರುವ ಮೀನಿನಂಗಡಿ, ಅದರ ಪಕ್ಕದಲ್ಲೇ ಇರುವ ಮಟನ್ ಅಂಗಡಿ. ಅಲ್ಲಿ ಹೋದ ಮೇಲೆ ತಿಳಿಯಿತು ಅದು "ರೆಹಮಾನ್ ಮಟನ್ ಸ್ಟಾಲ್"! .

"KG - 400/-" ಅಂತ ಬರೆದ ಸ್ಲೇಟು ನೇತಾಡುತ್ತಿತ್ತಾದರು ಅಂಗಡಿ ತುಂಬಾ ಊರಹಬ್ಬ ಮಾಡುವ೦ತೆ ಜನ-ಜಂಗುಳಿ. ನನ್ನ ಸರದಿ ಬರುವ ಹೊತ್ತಿಗೆ ಮುಂದಿರುವವರೆಲ್ಲ, "ರೆಹಮಾನ್ ಭಾಯ್,- .......ಅದು ಬೇಡ, ಇದು ತೆಗಿರಿ, ಇದನ್ನ ಹಾಕಿ, ಬಿಡಿ ತೂಕ ಏನಾಗುತ್ತೆ, ಓದ್ವಾರ ಕೊಟ್ಟಿದ್ದು ಸ್ವಲ್ಪ ಬಲ್ತೋಗಿತ್ತು, ಮತ್ತೆ ಅದನ್ನೇ ಹಾಕ್ತೀಯಲ್ಲಪ್ಪಾ ತೆಗಿ ತೆಗಿ, ಇಲ್ನೋಡು ಇದನ್ನ ಸ್ವಲ್ಪ ಹಾಕು, ಯಾವ್ದಂದ್ರೆ ಅದನ್ನ ಹಾಕ್ಬೇಡ.... " ಹೀಗೆ ಏನಾದರೊಂದು ಹೇಳ್ತಿರೊದನ್ನ ಗಮನಿಸಿದೆ. ಹೀಗೆಲ್ಲ ಉಂಟೆ? ಅಂಗಡಿಯವನನ್ನ ಏನು ಕೇಳಬೇಕೋ ತಿಳಿಯುತ್ತಿಲ್ಲವಲ್ಲ? ಯಾವುದು ಬೇಕು - ಯಾವುದು ಬೇಡ ಅಂತ ಹೆಂಗೆ ಹೇಳೋದು? ಅದರ ಬಗ್ಗೆ ಗೊತ್ತಿದ್ದರೆ ತಾನೆ ಹೇಳೋಕೆ / ಕೇಳೋಕೆ! ನನ್ನ ಸರದಿ ಬರುವ ಹೊತ್ತಿಗೆ, ಎಷ್ಟುದ್ದ ನೇತಾಡುತಿದ್ದ ಮಟನ್ ಇಷ್ಟೇ ಆಗಿ ಹೋಗಿದೆ, ಎಲ್ಲರಿಗೂ ಕೊಟ್ಟು-ಬಿಟ್ಟು ಉಳಿದಿರುವುದನ್ನ ಕೊಡ್ತಾನೆಯೆ? ಪೇಚಾಟ! ಸ್ವಲ್ಪ ಮುಜುಗರವಾದರೂ, ಅಕ್ಕ-ಪಕ್ಕ ನಿಂತು ನೋಡುತಿದ್ದ ಜನರ ನಡುವೆಯೇ, "ನೋಡಿ ಇದೆ ಮೊದಲು ಬರ್ತಿರೋದು, ಯಾವುದು ತಗೋಬೇಕೊ / ತಗೊಬಾರ್ದೊ ಗೊತ್ತಾಗ್ತಿಲ್ಲ, ದಯವಿಟ್ಟು ಒಳ್ಳೇದು ಕೊಡಿ, ಮನೆಗೆ ಹೋದ್ಮೇಲೆ ಯಾರು ನನ್ನ ಬಯ್ಯಬಾರದು ಅಂತ ಮಟನ್ ಕೊಡಿ ಪ್ಲೀಸ್" ಅಂತ ರೆಹಮಾನನನ್ನು ಕೇಳಿಕೊಂಡೆ. "ಯೋಚನೆನೆ ಮಾಡ್ಬೇಡಿ ಮೇಡಂ - ಇದ್ರಲ್ಲಿ ಮಿಟಾಯಿ - ಮಿಟಾಯಿ ಮಾಡ್ಬೋದು ಅಷ್ಟು ಚೆನ್ನಾಗಿದೆ, ಇಲ್ನೋಡಿ ಇದನ್ನ ಹಾಕ್ಲ?" ಅಂತ ಯಾವುದೋ ಒಂದು ಮಾಂಸದ ತುಂಡನ್ನು ತೋರಿಸಿದ. ಅದೇನೆಂದು ಗೊತ್ತಿಲ್ಲವಾದರು, ಯಾವುದಕ್ಕೂ ಬೇಡ ಅನ್ನುವುದೇ ಒಳ್ಳೆಯದು ಅಂತ, "ಬೇಡ ಬೇಡ ಹಾಕಬೇಡಿ" ಅಂದೆ. ಅಷ್ಟಕ್ಕೇ ಸುಮ್ಮನೆಲ್ಲಿದ್ದ ರೆಹೆಮಾನ, "ಇದು ಮೇಡಂ" ಅಂತ ಇನ್ನೇನನ್ನೋ ತೋರಿಸಿದ. "ಹಾ, ಲಿವರ್ ಅಲ್ವ ಹಾಕಿ ಹಾಕಿ" ಅಂದೇ, "ಹೆ ಹೆ ಅದು ಲಿವರ್ ಅಲ್ಲ ಹಾರ್ಟು" ಅಂತ ಹೇಳಿ ನಗುತ್ತ ಇನ್ನಷ್ಟು ಮುಜುಗರ ಮೂಡಿಸಿದ.

ಅಂತೂ ಇಂತೂ ಅದನ್ನ ಮನೆಗೆ ತಂದು ಅಮ್ಮನ ಕೈಗಿಟ್ಟು, "ಹೇಗಿದೆಯೋ ಗೊತ್ತಿಲ್ಲ - ಅವನು ಕೊಟ್ಟ - ನಾನು ತಂದೆ - ಇದ್ರಲ್ಲಿ ಮಿಟಾಯಿ ಮಾಡಬಹುದಂತೆ" ಅಂದೇ..... "ಹ ಹ ಹ ಮಟನ್ ಮಿಟಾಯಿ - ಬರ್ಫಿ ಮಾಡ್ತೀರ ಅಜ್ಜಿ? ಇದೊಂಥರ ಚೆನ್ನಾಗಿದೆ", ಅಂತ ಮಗಳು. ಸಧ್ಯ ರೆಹಮಾನ್ ಅಂಗಡಿಯ ಮಿಟಾಯಿ ಅಮ್ಮ ಓಕೆ ಮಾಡಿದರು.

ಮಳೆಯೂ ಬರದ ಬಿಸಿಲು ಇರದ ಸಣ್ಣ ಚಳಿಯಲ್ಲಿ ಸುಖಿಸುವ ಸೋಮಾರಿ ಭಾನುವಾರವಿದು. ಇಂಥ ಸ್ಪೆಶಲ್ ಅಡುಗೆ ಮಾಡಿದಾಗ, ತಮ್ಮ ತಟ್ಟೆಯಿಂದಾಯ್ದು ಮೆತ್ತಗಿರುವ ಸಣ್ಣ ಸಣ್ಣ ತುಂಡುಗಳನ್ನ ತಮ್ಮ ಮಕ್ಕಳ ಬಾಯಿಗೆ ತುತ್ತಿಡುವುದು ಅಪ್ಪಂದಿರಿಗೆ ಒಂದು ವಿಶೇಷ ಸಂತೃಪ್ತಿ ಕೊಡುವ ಸಂಗತಿ. ಮಗಳಿಗೂ ಈ ರೀತಿ ತಿನ್ನಿಸುವಾಗ ಅವಳ ಅಪ್ಪನ ಮುಖದಲ್ಲಿ ಚಿಮ್ಮುತಿದ್ದ ಒಂದು ಖುಷಿಯನ್ನ ನಾನು ಸಹ ನೋಡಿದ್ದೇನೆ.


ತಡವಾದಷ್ಟು ಹಸಿವೆ ಹೆಚ್ಚು! ಎಲ್ಲರೂ ಊಟಕ್ಕೆ ಕುಳಿತದ್ದಾಯ್ತು. ಮಗಳಿಗೆ ತಿನಿಸಲು ನನ್ನ ತಟ್ಟೆಯಲ್ಲಿ ಕೆದಕಿ - ಹುಡುಕಿ, ಎರಡು - ಮೂರು - ನಾಕು ಬಾರಿ ತಿನಿಸಿದ ಮೇಲೆ, ನಿಜವಾಗಿಯೂ ಎಂತದ್ದೋ ಖುಷಿ. ಇಂದಿಗೂ ಮಗಳಿಗೆ ತಿನ್ನಿಸುವುದು ತಪ್ಪಿಲ್ಲ, ಅನೇಕ ಬಾರಿ "ನೀನೆ ತಿನ್ಸಿದ್ರೆ ತಿಂತೀನಿ" ಅನ್ನೋ ಹಠ ಹಿಡೀತಾಳೆ.  ಅವಳಿಗೆ ತಿನ್ನಿಸುವುದೊಂದು ಪ್ರೀತಿಯಾದರೆ - ಈ ರೀತಿ  ಮಟನ್ / ಚಿಕನ್ ಮಾತ್ರ ತಟ್ಟೆಯಿಂದ ಹುಡುಕಿ ಕೆದಕಿ ತಿನ್ನಿಸುವುದು ನನಗಿನ್ನೂ ಹೊಸತು. ಇದೊಂದು ವಿಚಿತ್ರ ಅನುಭವ, ಹೀಗಿರಬಹುದೆಂದು ಊಹಿಸಿರಲಿಲ್ಲ! 

ಅಂದ ಹಾಗೆ, ರೆಹಮಾನನ ಮಾತು ನಿಜ, ನನ್ನ ಕಸಿವಿಸಿಯ ಹೊರತು ಅವನ ಅಂಗಡಿಯ ಮಟನ್ ನಿಜಕ್ಕೂ ಚೆನ್ನಾಗಿತ್ತು, ಅಮ್ಮನ ಕೈ ರುಚಿ ಕೂಡಿದ ಅಡುಗೆಗೆ ಸಾಟಿ ಉಂಟೆ!  ಇವೆಲ್ಲದರ ನಡುವೆ, ಮತ್ತೊಮ್ಮೆ ಅಂಗಡಿಗೆ ಹೋದಾಗ ಏನು ಕೇಳಬೇಕು ಅನ್ನುವ ವಿಷಯವಂತು ಇನ್ನು ಗೋಜಲಾಗಿಯೇ ಉಳಿದಿದೆ!!!



17 comments:

  1. ಭಗವಂತ, ನಿಮ್ಮ ಈ ಲೇಖನ ಓದಿದ ಮೇಲೆ ನನಗೆ ಶುದ್ಧ ಮಾಂಸಾಹಾರ ತಿನ್ನಲೇ ಬೇಕಂತ ಆಸೆ ಆಯಿತು (ಬಾಯಲ್ಲಿ ಜೊಲ್ಲು...). ಅಂದಹಾಗೆ ಮಟನ್ ಚಾಪ್ಸ್ ಮಾಡಿದ್ರಾ? ಮಟನ್ ಸಾರಾ? (5 ಅಂಕಗಳಿಗೆ ವಿವರಿಸಿ - ಮತ್ತೆ ಬಾಯಲ್ಲಿ ಜೊಲ್ಲು...)

    ಪುಟ್ಟ ಮಕ್ಕಳಿಗೆ ಅಪ್ಪ - ಅಮ್ಮಂದಿರು ಹೀಗೆ ಗುಕ್ಕು ತಿನ್ನಿಸುತ್ತಿದ್ದದ್ದು ನನಗೆ ಹಾಸ್ಟೆಲಿನಲ್ಲಿ ತುಂಬಾ ಜ್ಞಾಪಕಕ್ಕೆ ಬರುತ್ತಿತ್ತು.

    ನಿನ್ನೆ ಸೋಮವಾರ ಆಫೀಸಿನಲ್ಲಿ ರಾತ್ರಿ ಊಟದ ಡಬ್ಬಿ ತೆರೆದು ಕೂತೆ, ಯಥಾ ಪ್ರಕಾರಮ್ ತರಕಾರಿ ಸಾಂಬಾರ್ರು. ಆಗಲೇ ಅಲ್ಲಿಗೆ ಬಂದ ಇನ್ನೊಬ್ಬ ಗೆಳೆಯ ಪೊಟ್ಟಣ ಬಿಚ್ಚಿದ ಹಬೆಯಾಡೋ ಹೈದರಾಬಾದಿ ಬಿರಿಯಾನಿ (ಬಾಯಲ್ಲಿ ಜೊಲ್ಲು...). ಅವನನ್ನೇ ಕೇಳಿದೆ ಅಲ್ಲ ಕಣಯ್ಯ ಈವತ್ತು ಸೋಮವಾರ ಯಾವನಾದರೂ ಚಿಕನ್ನೂ ಮಟನ್ನೂ ಮುಟ್ಟುತ್ತಾನ ಅಂದೆ. ನಕ್ಕು ಮಾಂಸ ಜಗೆಯುತ್ತಾ ಅವನು ಅಂದ 'ಅರೇ ಬದ್ರಣ್ಣ, ಕೋಳೀಗೇನು ಗೊತ್ತು ಸೋಮವಾರ? ಅದಕ್ಕೇ ಇಲ್ಲ ಸಾಯೋಕೆ ತೊಂದ್ರೆ, ತಿನ್ನೋ ನನಗ್ಯಾಕೆ?' ಅಂದ. :-D

    ReplyDelete
    Replies
    1. ha ha ...... ಮಾಡಿದ್ದು ಮಟನ್ ಸಾರು BPಅವರೇ :) .......... ಇದನ್ನ ಖಂಡಿತ ನೀವು ಓದ್ತೀರಾ ಅಂತ ಊಹಿಸಿರಲಿಲ್ಲ ....ಪ್ರತಿಕ್ರಿಯೆಗೆ ಧನ್ಯವಾದ ........
      ಖುಷಿಯಾಯ್ತು :)

      Delete
  2. ಜೊಲ್ಲಿನಲ್ಲೆ ಹೊಟ್ಟೆ ತುಂಬುವಂತಿದೆ. ಚೆನ್ನಾಗಿದೆ

    ReplyDelete
    Replies
    1. dhanyavaada RajsHekhar..... :)
      anthu, Mutton angadige hogi enu keLabeku antha tiLitillavashte!.....

      Delete
  3. ಅರೆರೆರೆ...ಮಿಸ್ ಆಗ್ತಿತ್ತು...ನನ್ನ ಮಟನ್ ಸಾರು ಮುದ್ದೆ ರಸಗವಳ...ಬದರಿ ಥ್ಯಾಂಕ್ಸ್ ರೀ ರೂಪಾ ಮಾಂಸದ ಸಾರು ಬಡಿಸಿ ಮುದ್ದೆ ಹಾಕಿದ್ರೆ...ನೀವು ತಟ್ಟೆ ಮುಂದೆ ಇಟ್ರಿ...ವಾವ್..

    ರೂಪಾ.... ನನಗೂ ಮಾಂಸದ ಅಂಗಡಿ ಅಂದ್ರೆ ಆಗೊಲ್ಲ ತಿನ್ನೋದೇ ಉಂಟಂತೆ..ಅದು ಬೇಡ ಇದು ಬೇಡ ಅನ್ನೋದು ಯಾಕೆ...?? ಆ ಬೇಡದ್ದು ಯಾರು ತಗೋತಾರೆ..?? ಪಾಪ ರೆಹಮಾನ್ ಭಾಯ್ ಗೆ ಲಾಸ್ ಆಗೊಲ್ವಾ ಅನ್ಸಿದ್ದುಂಟು...(ಅಂದಹಾಗೆ ನನ್ನ ರೆಗ್ಯುಲರ್ರೂ ರೆಹಮಾನ್ ಭಾಯ್ ನೇ ಆದರೆ ಅದು ಮದ್ರಾಸಲ್ಲಿ....!!!!) ಆದರೆ ಆಮೇಲೆ ಗೊತ್ತಾಯ್ತು... ರಹಮಾನ್ ಭಾಯ್ ಬಹಳ ಚಾಲಾಕಿ ಅಂತ... ಆ ಬೇಡ-ದ ತುಂಡುಗಳನ್ನ ಇಟ್ಟುಕೊಂಡು ಅಂಗಡಿ ಮದ್ಯಾನ್ಹ ೨-೩ ರ ನಂತರ ಮುಚ್ಚಿ, ಅಲ್ಲೇ ಹತ್ತಿರ ಇದ್ದ ಬಂಗ್ಲಾಗಳ ಶ್ರೀಮಂತ ನಾಯಿ ಮಾಲಿಕರಿಗೆ ಮಾರ್ತಿದ್ದ ಅದೂ ನಾವು ಕೊಡುತ್ತಿದ್ದಕ್ಕಿಂತ ಹೆಚ್ಚು ದರಕ್ಕೆ...!!!!
    ಒಳ್ಳೆ ಜೊಲ್ಲೋತ್ಪಾದಕ ಲೇಖನ...ಯಮ್ಮಿ ಯಮ್ಮಿ...

    ReplyDelete
    Replies
    1. ಹ ಹ ಹ..... ಅಜ಼ಾದ್ ಸರ್, "ಜೊಲ್ಲೋತ್ಪಾದಕ ಲೇಖನ"..... ಹೀಗೊ೦ದು ಪ್ರತಿಕ್ರಿಯೆ ಊಹಿಸಿರಲಿಲ್ಲ :೦)
      ಅ೦ಗಡಿಯವರು ಶ್ರೀಮ೦ತ ನಾಯಿಗಳಿಗೆ ಹೀಗೆ ಮಾರುವ ವಿಚಾರ ಗೊತ್ತಿರಲಿಲ್ಲ......
      ಇನ್ನು ಆರು ತಿ೦ಗಳು ರೆಹಮಾನನ ಅ೦ಗಡಿ ಕಡೆ ತಲೆ ಹಾಕುವುದಿಲ್ಲ ಅ೦ದುಕೊಳ್ತೀನಿ.....
      ಕೊಳಿ ಮಕ್ಕಳು ನಾವು :)....

      Delete
  4. ನೀವು ರಹಮಾನ್ ಅಂಗಡಿಗೆ ಕರೆದೊಯ್ದಿದ್ದು ಸೂಪರ್ ಆಗಿತ್ತು. ನನಗೆ ಜನಿವಾರ ಇದ್ದರೂ... ನೀವು ಬರೆದಿದ್ದು, ಅದನ್ನ ಸವಿದಿದ್ದು, ಅದರ ರುಚಿಯಲ್ಲಿ ಮುಖ ಅರಳಿದ್ದು ಎಲ್ಲವೂ.. ನಾನು ಕಳೆದ ಭಾನುವಾರ ಅಮ್ಮ ಮಾಡಿದ ಮುದ್ದೆ ಸೊಪ್ಪಿನ ಸಾರು ತಿಂದದ್ದು ನೆನಪಾಯಿತು. ಬರಹ ನಾನ್ ವೆಜ್ ಬಗ್ಗೆಯಾದರೂ.. ಬರಹದಲ್ಲಿ ವೆಜ್ ಕಾಣಿಸುತ್ತದೆ.. ಸೊಗಸಾಗಿದೆ.. ನಗುವಾಗ ತಿನ್ನಬೇಕು ತಿಂದಮೇಲೆ ಅನುಭವಿಸಿ ಬರೆಯಬೇಕು ಸಿದ್ಧಾಂತ ಸೊಗಸಾಗಿದೆ ರೂಪ

    ReplyDelete
    Replies
    1. ಶೀಕಾ೦ತ್,
      ಪ್ರತಿಕ್ರಿಯೆಗೆ ಧನ್ಯವಾದ..... ಆದರು ಅ೦ಗಡಿಗೆ ಹೋಗಿ ಏನು ಕೇಳಬೇಕು ಅ೦ತ ಯಾರು ಹೆಳಿಕೊಡ್ತಿಲ್ಲ.... ನನಗಿನ್ನು ಕಾನ್ಫ಼ಿಡೆನ್ಸ್ ಬರ್ತಿಲ್ಲ :(.... :)

      Delete
  5. u should have invite me roopaji next time dont forget

    ReplyDelete
    Replies
    1. Umesh, thank you for the "ReaD"
      By the way, Welcome Home, Just intimate us a day in advance :) ಯಾವುದಕ್ಕು ಅಮ್ಮ ಪ೦ಚಾ೦ಗ ನೋಡಿಯೆ ನಿರ್ದರಿಸೊದು :)

      Delete
  6. ರೂಪ ಮೇಡಮ್,
    ನಿಮ್ಮ ಭಾನುವಾರದ ಮಟನ್ ಅಡುಗೆ ತಯಾರಿ ನೋಡಿ ನನ್ನ ಬಾಯಲ್ಲಿ ನೀರೂರಿತ್ತು. ವೆಜ್, ನಾನ್ವೆಜ್, ಪುಳ್ಚಾರ್, ಇತ್ಯಾದಿ ಯಾವುದೇ ನಿತ್ಯ ಬದುಕಿನ ಅನುಭವಗಳನ್ನು ಹೀಗೆ ನೇರವಾಗಿ ಮತ್ತು ಸರಳವಾಗಿದ್ದರೆ ಓದುವುದಕ್ಕೆ ನನಗೆ ತುಂಬಾ ಇಷ್ಟ. ತೇಜಸ್ವಿ ಬರಹಗಳು ಹೀಗೆ ನೇರವಾಗಿರುತ್ತವಲ್ಲವೇ..
    ಚಿಕ್ಕಂದಿನಲ್ಲಿ ನನ್ನಪ್ಪ ಹೀಗೆ ತಟ್ಟೆಯಲ್ಲಿ ಆಯ್ದು ಮೆದುವಾದ ತುಂಡುಗಳನ್ನು ತಿನ್ನಿಸುತ್ತಿದ್ದುದ್ದು ನೆನಪಾಯ್ತು..
    ಭಾನುವಾರದ ಸೋಮಾರಿತನದ ಸಕತ್ ಸುಖನಿದ್ರೆಯಲ್ಲಿನ ಖುಷಿಯನ್ನು ವರ್ಣಿಸಲಾಗುವುದಿಲ್ಲ ಅಲ್ಲವೇ...ನನಗೆ ಭಾನುವಾರವಿರಲಿ ವಾರದ ಏಳು ದಿನಗಳು ಆಂಥ ಅದೃಷ್ಟವಿಲ್ಲ. ಆದರೂ ಮೊನ್ನೆ ಎರಡು ದಿನ ಸತತವಾಗಿ ಮದುವೆ ಫೋಟೊಗ್ರಫಿ ಮುಗಿಸಿಕೊಂಡು ಸುಸ್ತಾಗಿ ಮಧ್ಯಾಹ್ನ ನಾಲ್ಕುಗಂಟೆಗೆ ಮಲಗಿದವನು ಮತ್ತೆ ಎದ್ದಿದ್ದು ಮರುದಿನ ಮುಂಜಾನೆ ನಾಲ್ಕುಗಂಟೆಗೆ...ಅದರ ಸುಖವನ್ನು ವಿವರಿಸಲು ನನ್ನಲ್ಲಿ ಪದಗಳಿಲ್ಲ..
    ಬದರಿ ಸರ್..ಇದನ್ನು FB ನಲ್ಲಿ ತೋರಿಸಿದ್ದಕ್ಕೆ ಥ್ಯಾಂಕ್ಸ್.

    ReplyDelete
    Replies
    1. ಧನ್ಯೊಸ್ಮಿ, ಈ ಬರಹನ ಟೈಪ್ ಮಾಡಿಟ್ಕೊ೦ಡು, ಪೋಸ್ಟ್ ಮಾಡ್ಲೊ ಬೇಡ್ವೊ ಅ೦ತ ಯೋಚಿಸ್ತಿದ್ದೆ.... ನಿಮ್ಮ ಓದಿಗೆ, ಪ್ರತಕ್ರಿಯೆಗೆ ಧನ್ಯವಾದ :) .....
      ಸೂಪರ್ ಭಾನುವಾರದ ಸುಖನಿದ್ರೆ, ನೀವು ಹೇಳಿದ೦ತೆ ವಿವರಿಸಲು ಅಸಾಧ್ಯ :)......

      Delete
  7. ನಮಗೆಲ್ಲ ಅಮ್ಮ ಊಟ ಮಾಡಿಸುವಾಗ ಮೀನು ತುಂಡನ್ನು ತುತ್ತಿನ ಹಿಂದುಗಡೇ ಇಟ್ಟು ತಿನ್ನಿಸುತ್ತಿದ್ದರು.... ತುತ್ತು ದೊಡ್ಡದಾಗಿರುತ್ತಿತ್ತು.... ಅರ್ಧ ತುತ್ತಷ್ಟೇ ಬಾಯಿಗೆ ಹೋಗಿ ಮೀನು ಅವರ ಕೈಯಲ್ಲೇ ಉಳಿಯುತ್ತಿತ್ತು.... ಅದೆಲ್ಲಾ ನೆನಪಾಯ್ತು.... ಈ ಸಾರಿ ಊರಿಗೆ ಹೋದಾಗ ಅಮ್ಮನಿಗೆ ಹೇಳಬೇಕು ಇದನ್ನು... ನೀವು ಬರೆದ ರೀತಿ ಚೆನ್ನಾಗಿದೆ...

    ReplyDelete
    Replies
    1. ಓದಿಗೆ - ಪ್ರತಿಕ್ರಿಯೆಗೆ....ಧನ್ಯವಾದ ದಿನಕರ್
      ನಿಮ್ಮ ತಾಯಿ ಮೀನು ತಿನಿಸುತಿದ್ದ ರೀತಿ ಓದಿ - ಮೀನು ತಿನ್ನುವ ಆಸೆ ಆಗಿದೆ.....

      Delete
  8. ಹಹ್ಹ... ನೀವು biology ಕ್ಲಾಸಿಗೆ ಸರಿಯಾಗಿ ಹೋಗಿದ್ದಿದ್ದರೆ ಹೀಗೆಲ್ಲಾ ಆಗುತ್ತಿರಲಿಲ್ಲ. ಲಘು ಹಾಸ್ಯದ ಮುಸುಕು ಸರಿಸಿ ಪಕ್ಕನೆ ಹೊರಗಿಣುಕುವ ನವಿರು ಭಾವಗಳು ಮನ ತಟ್ಟಿದುವು. ಮಟನ್ ಮಿಠಾಯಿಯಂತಿರುತ್ತದೆಯೋ ಇಲ್ಲವೋ ಆದರೆ ನಿಮ್ಮ ಬರಹವಂತೂ ಹಾಗಿದೆ.

    ReplyDelete
    Replies
    1. ಮಾಸ್ಟರ್....
      ಸಮಯ ಮಾಡಿಕೊ೦ಡು ಓದಿದಕ್ಕೆ ಧನ್ಯವಾದ.......
      biology ಕ್ಲಾಸ...ಹ..ಹ...ಹ....
      ಪ್ರತಿಕ್ರಿಯೆಗೆ ಧನ್ಯವಾದ..........

      Delete
  9. ಅರೆ ವಾಹ್....
    ಅಕ್ಕ ಸೂಪರ್. ಸರಳ ಮತ್ತು ಸುಂದರ ನಿರೂಪಣೆ.
    ಇನ್ನೂ ಮಟನ್ ಅಂಗಡಿಗೆ ಹೋಗಿ ಏನ್ ಕೇಳ್ಬೇಕು ಅನ್ನೊ ಅನುಮಾನ ಇದ್ರೆ ಬಂದ್ರೆ ನಂಗೆ ಕಾಲ್ ಮಾಡಿ😉

    ReplyDelete

ಪ್ರತಿ ಬೆಳಗೂ ಹೊಸತನ....

ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತ...