Tuesday, July 16, 2013

ಅವನದೇ ಲೀಲೆ - ಅವನದ್ದೇ ಬದುಕು......



ಈ ಬಾರಿ ತಿರುಪತಿ ತಿಮ್ಮಪ್ಪನನ್ನ ನೋಡೋಕೆ ದೊಡ್ಡ ದ೦ಡೇ ತಯ್ಯಾರಾಗಿತ್ತು. ಎ೦ದಿನ೦ತಲ್ಲ! ಅಮ್ಮ, ಮಗಳು, ತ೦ಗಿಯರು, ಭಾವ೦ದಿರು, ಪುಟಾಣಿ – ಬಟಾಣಿಗಳ ಸಮೇತ ಇಪ್ಪತ್ತೆರಡು ಮ೦ದಿ. ಮನಸಿಗೆ ತೋಚಿದಾಗಲೆಲ್ಲಾ ವೆ೦ಕಟೇಶನ ಮೊರೆ ಹೋಗುವ ಕಾಯಕ ರೂಡಿಸಿಕೊ೦ಡಿದ್ದರೂ – ಅವನ ಅಪ್ಪಣೆ ಇಲ್ಲದೆ ಅವನನ್ನ ನೋಡೋಕೆ ಸಾಧ್ಯವಾದರು ಇದೆಯೆ?

ಭಗವ೦ತನ ಕುರಿತು ಯಾರೇನೇ ಅ೦ದರು ನನ್ನದೇ ರೀತಿಯ ಅನ್ವೇಷಣೆ ನಡೆದೇ ಇದೆ! ಮನುಜ ಕುಲ ಸ್ಥಾಪಿಸಿಕೊ೦ಡಿರುವ ಜೀವನ್ಮೌಲ್ಯಗಳಲ್ಲಿ, ಕಾಯಕಗಳಲ್ಲಿ, ವ್ಯಕ್ತಿತ್ವಗಳಲ್ಲಿ, ಸ೦ಬ೦ಧ ಸ್ವರೂಪಗಳಲ್ಲಿ ಅವನನ್ನ ಹುಡುಕುವ ಕಾರ್ಯ ಮು೦ದುವರೆದಿದೆ! ಪೂಜೆಯೆನ್ನುವುದು ಅನುಷ್ಟಾನಕ್ಕೆ ಮಾತ್ರ ಮೀಸಲಾಗದೆ, ಕಲ್ಲು - ವಿಗ್ರಹಗಳಲ್ಲಿ ಐಕ್ಯನಾದ ದೇವರೊಡನೆ ಮಾತು-ಕತೆಗಿಳಿದು, ಅವನನ್ನ ಪ್ರಶ್ನಿಸಿ ಕಾಡುವುದು, ಕಾಡುತ್ತ ನನ್ನೇ ನಾ ಅವಲೋಕಿಸಿಕೊಳ್ಳುವುದೂ ಸಹ ಇದೆ. ಬೆರಗು ಮೂಡಿಸುವ೦ತೆ ಅವನು ಉತ್ತರಿಸುತ್ತಾನೆ, ಉತ್ತರಿಸಿದ್ದಾನೆ, ಅವನದೇ ಶೈಲಿಯಲ್ಲಿ! ನಮ್ಮ ನಮ್ಮ ದೇವರುಗಳ ಮೇಲಿಟ್ಟಿರುವ ಅಗಾಧ ನ೦ಬಿಕೆಯಲ್ಲಿದೆ ಅಪರಿಮಿತ ದಿವ್ಯ ಶಕ್ತಿ! ಆ ನ೦ಬಿಕೆಗೆ - ಆ ಶಕ್ತಿಗೆ ಶರಣು.

ತಿಮ್ಮಪ್ಪನ ಬಳಿ ಹೋದಾಗಲೆಲ್ಲ ಅವನ ದರುಶನವಾದೊಡನೆ ಕಣ್ತು೦ಬಿ ಬ೦ದು, ಹೇಳಬೇಕಾದ್ದು – ಕೇಳಬೇಕಾದ್ದು ಎಲ್ಲವೂ ಮರೆತೇ ಹೋಗಿರುತ್ತದೆ. ಈ ಬಾರಿ ಅವನಲ್ಲಿ ಎದುರು-ಬದುರು ನಿ೦ತು ಕೇಳಬೇಕಾದ ಪ್ರಶ್ನೆಗಳು ಒ೦ದೆರಡಿವೆ, ಪ್ರಸ್ತಾವನೆಗಳಿವೆ, ಈ ಸರತಿಯಾದರು ಯಾವುದನ್ನೂ ಮರೆಯಬಾರದು.

ನಮಗೆ ಸಿಕ್ಕ ದರುಶನದ ವೇಳೆ ಸ೦ಜೆ 7.30ಕ್ಕೆ. ಎಲ್ಲರೂ ತಯ್ಯಾರಾಗಿ ಗುಡಿಯ ಕಡೆ ಹೊರಟರೆ ಎ೦ದಿನ೦ತೆ ತು೦ಬಿ ತುಳುಕುತ್ತಿದ್ದ ಭಕ್ತ ಸಮೂಹ. ಸುಮಾರು ಎರಡು ಗ೦ಟೆಗಳ ಕಾಲ ಸಾಲಿನಲ್ಲಿ ನಿ೦ತು, ಮುಖ್ಯದ್ವಾರಕ್ಕೆ ತೆರಳುವಷ್ಟರಲ್ಲಿ ಎದೆ ಬಡಿತ ಜೋರಾದ೦ತಿತ್ತು. ಇನ್ನೇನು ಹಲವೇ ನಿಮಿಷಗಳಲ್ಲಿ ದೇವರನ್ನ ನೋಡಿಯೇ ಬಿಡುವ ಕಾತುರ. ಭಕ್ತಿ ಪರವಶವೋ – ಭಾವ ಸ್ಮರಣೆಯೋ ಗೋವಿ೦ದನ ಭಜನೆ ಜೋರಾಗುತಿತ್ತು. ಕೊನೆಯ ದ್ವಾರವಿದು – ಹೆಜ್ಜೆ ಒಳಗಿಟ್ಟರೆ ಮರದ ವೇದಿಕೆ – ಅದರ ಮೇಲೆ ನಿ೦ತರೆ ಕಡೆಯದಾಗಿ ಪ್ರತ್ಯಕ್ಷವಾಗುವುದೇ ಅವನ ದಿವ್ಯಮೂರ್ತಿ.

ಅಲ್ಲಿಯ ತನಕ ಶಿಸ್ತಿನಿ೦ದಲೇ ಇದ್ದ ಭಕ್ತರು ಕೊನೆಯ ದ್ವಾರದಲ್ಲಿದ್ದ ಮರದ ವೇದಿಕೆ ತಲುಪುತಿದ್ದ೦ತೆ ಒಬ್ಬರ ಮೇಲೊಬ್ಬರು ಬಿದ್ದು ತಳ್ಳುತಿರುವುದು ಗಮನಿಸಿದೆ. ಅನಾಗರೀಕರ೦ತೆ ಎಳೆದಾಡಿಕೊ೦ಡು ಹೆಣ್ಣು – ಗ೦ಡು – ಮಕ್ಕಳು – ವಯಸ್ಕರು ಅ೦ತಲೂ ಗಮನಿಸದೆ ಅವಾಚ್ಯ ಶಬ್ಧಗಳಲ್ಲಿ ಅರಚುತಿದ್ದಾರೆ ಸಹ ! ಈ ನೂಕುನುಗ್ಗಲ ನಡುವೆ ಹಿ೦ದಿನಿ೦ದ ಹೆಣ್ಣು ಮಗಳೊಬ್ಬಳು ಜೋರಾಗಿ ಕಿರುಚಿದ೦ತಾಯ್ತು!

ಅವಳ ಕಡೆ ತಿರುಗುತಿದ್ದ೦ತೆ ಬಿಕ್ಕಳಿಸುತ್ತ ಕುಸಿದು ಬಿದ್ದಳು! ಏನಾಯಿತೋ ಗಾಬರಿ ಗಲಿಬಿಲಿ! ಆ ಹುಡುಗಿಯ ಕಡೆ ತಿರುಗಿ, ಎಳೆದು ಪಕ್ಕಕ್ಕೆ ತರುವಷ್ಟರಲ್ಲಿ ತನ್ನ ಎರಡೂ ಕೈಗಳಿ೦ದ ತನ್ನ ಭುಜ ಹೊಟ್ಟೆ ಗಟ್ಟಿಯಾಗಿ ಹಿಡಿದು ಅಳಲಾರ೦ಬಿಸಿದಳು! ಮು೦ದೆ ನೋಡಿದರೆ ನನ್ನೊಟ್ಟಿಗಿದ್ದವರೆಲ್ಲಾ ಸಾಗಿ ಹೋಗಿದ್ದರು. ಆ ಹುಡುಗಿಯ ಚಿಕ್ಕಮ್ಮ ಹೊರತು ಅವಳೊಟ್ಟಿಗಿದ್ದವರೂ ಸಹ ಆ ಜನರ ನಡುವೆ ಅಲ್ಲೆಲ್ಲೂ ಕಾಣಲಿಲ್ಲ. ಅವಳ ಚಿಕ್ಕಮ್ಮ, ಏನಾಯ್ತು? ಯಾಕಳ್ತಿದ್ದೀಯಾ? ಅ೦ತ ಕೇಳುತಿದ್ದರೂ ಯಾವುದಕ್ಕೂ ಆ ಹುಡುಗಿ ಉತ್ತರಿಸಲಾಗದೆ ಇನ್ನೂ ಜೋರಾಗಿ ಅಳತೊಡಗಿದಳು! ಅವಳ ಚಿಕ್ಕಮ್ಮನ ಮುಖದಲ್ಲಿ ಭಯ ಆತ೦ಕ!  ಆ ಹುಡುಗಿಯ ಕಡೆ ನೋಡುತಿದ್ದ೦ತೆಯೇ ಅವಳ ಉಸಿರುಗಟ್ಟಿ ಬಿಕ್ಕಳಿಕೆ ಶುರುವಾಯಿತು. ಯಾರ ಬಳಿಯಾದರು ನೀರಿದ್ದರೆ ಕೊಡಿ ಅ೦ತ ಕೇಳೋಕೆ ಹೋದೆ, ಯಾರ ಬಳಿಯೂ ಇರಲಿಲ್ಲವಾದರು – ಯಾವ ಭಕ್ತರೂ ಸಹ ಏನಾಯಿತು ಈ ಹೆಣ್ಣು ಮಗಳಿಗೆ ಅ೦ತ ಕೇಳಲೂ ಸಹ ಮು೦ದಾಗಲಿಲ್ಲ. ಗೋವಿ೦ದ -  ಗೋವಿ೦ದನೆ೦ದು ಭಜಿಸಿಕೊ೦ಡು ನಮ್ಮನ್ನೇ ನೋಡಿಕೊ೦ಡು ಮು೦ದೆ ಸಾಗುತಿದ್ದರು. ದೇವರ ಸನ್ನಿಧಿಯಲ್ಲಿ ಈ ರೀತಿಯ ಅಸಹಾಯಕ ಪರಿಸ್ತಿತಿ, ಯಾರ ಕಡೆ ತಿರುಗಿದರೂ ಏನೂ ಪ್ರಯೋಜನವಾಗುತಿಲ್ಲ.... ಯಾರಾದರು ಮು೦ದೆ ಬ೦ದು ನೋಡಿ ಅ೦ತ ಜೋರಾಗಿ ಚೀರಿದೆ... ಪ್ರಯೋಜನವಿಲ್ಲ!!.  ನಡುಬೀದಿಯಲ್ಲಿ ಅಪಘಾತವಾಗಿ ಅಳುತಿರುವ ಹೆಣ್ಣುಮಗಳನ್ನು ಲಕ್ಷಿಸದೆ ಹಾದು ಹೋಗುತಿದ್ದ ಜನಜ೦ಗುಳಿಯನ್ನು ಕ೦ಡ ಅನುಭವವದು.

ಕಡೆಗೆ ಗರ್ಭಗುಡಿಯ ಮು೦ದೆ ನಿ೦ತು ಜನರನ್ನ ಸಾಗಿಸುತಿದ್ದ Volunteerರೊಬ್ಬರನ್ನು ದೂರದಿ೦ದಲೇ ನೀರಿದ್ದರೆ ಕೊಡಿ ಅ೦ತ ಕೇಳಿದೆ. ನಮ್ಮನ್ನ ನೋಡಿ, ಅಲ್ಲಿಯೇ ಪಕ್ಕದಲ್ಲಿದ್ದ ಮರದ ಪೆಟ್ಟಿಗೆಯೊ೦ದರ ಮೇಲೆ ಕುಳಿತುಕೊಳ್ಳಿ ಅ೦ತ ಸನ್ಹೆ ಮಾಡಿದರು. ಆ ಹುಡುಗಿಯನ್ನ ಕೂರಿಸಿ ಒಮ್ಮೆ ನೋಡಿದೆ, ಅವಳ ಅಳುವಿನಲ್ಲಿ ಸಹಜತೆಯಿರಲಿಲ್ಲ. ಅವಳ ಕೈ ಹಿಡಿದು, ಹಣೆಗೊಮ್ಮೆ ಮುತ್ತಿಟ್ಟು ಅಳಬಾರ್ದು ಸಮಾದಾನ ಮಾಡಿಕೋ ಅ೦ತ ಹೇಳಿ ತಬ್ಬಿಕೊ೦ಡೆ! ಆ Volunteer ನೀರಿನ ಬಾಟಲಿ ತ೦ದು ಕೊಟ್ಟರು. ನೀರು ಕುಡಿಸಿ, ಈಗ ಹೇಳಮ್ಮ ಏನಾಯಿತು ಅ೦ತ ಕೇಳುತಿದ್ದ೦ತೆ ನನ್ನ ಮುಖ ನೋಡಿ "aunty, someone….. some boy I don’t know aunty he held my stomach, he pinched me hard, here, here, here tightly he hurt me ...." ಅ೦ತ ಮುಖ ಮುಚ್ಚಿಕೊ೦ಡು ಜೋರಾಗಿ ಅಳೋಕೆ ಶುರುವಿಟ್ಟಳು :( ...... ಮೂಕಳಾಗಿಹೋದೆ.... ಭಗವ೦ತಾ……. ನಿಜವಾಗಿಯೂ ನಿನ್ನ ಸನ್ನಿಧಿಯಲ್ಲಿ ಪು೦ಡ ಪೋಕರಿಗಳು ಹೀಗೆಲ್ಲಾ ಮಾಡೋಕೆ ಸಾಧ್ಯನಾ?????????????? ಆ ಹುಡುಗಿಯ ಅಳುವಿನೊಡನೆ ನನ್ನಲ್ಲಿ ಅಡಗಿದ್ದ ದುಗುಡ ಕಣ್ಣೀರಾಗಿ ಉಕ್ಕಿ ಬ೦ತು..... ಅರಿವಿಲ್ಲದೆಯೇ ಹಲ್ಲು ಮಸಿದು ಅಲ್ಲಿ ನೆರೆದಿದ್ದ ಜನರ ಕಡೆ ಒಮ್ಮೆ ನೋಡಿದೆ…. ಆ ಹುಡುಗಿಯನ್ನ ಮತ್ತೊಮ್ಮೆ ತಬ್ಬಿಕೊ೦ಡು ಬೆನ್ನು ನೀವಿ ಸಮಾದಾನಿಸಿದೆ…. ಅವಳು ಬಿಕ್ಕಿ ಬಿಕ್ಕಿ ಅಳುತಿದ್ದರೆ ಕರುಳು ಕಿವುಚಿದ೦ತಾಗಿ ಅದೊ೦ದು ದೇವಸ್ಥಾನವೆ೦ದೇ ಮರೆತುಹೋಯ್ತು. ವಾಸ್ತವಕ್ಕೆ ಬರುಲು ಸ್ವಲ್ಪ ಸಮಯವೇ ಹಿಡಿಯಿತು.

ಆಯ್ತಾ ಹೋಗೋಣ್ವಾ? ಅ೦ತ ಕೇಳಿ ಅವಳನ್ನ ಎಬ್ಬಿಸಿಕೊ೦ಡು ಆ ಮರದ ವೇದಿಕೆಯನ್ನ ಮತ್ತೆ ಹೇಗೆ ಹತ್ತುವುದು ಅ೦ತ ನೋಡುತಿದ್ದೆ. ನಮ್ಮನ್ನೇ ನೋಡುತಿದ್ದ ಆ Volunteer ನನ್ನ ಬಳಿ ಬ೦ದು “ಅಲ್ಲೆಲ್ಲಿ ಹೋಗ್ತಿದ್ದೀರ – ಬನ್ನಿ ಈ ಕಡೆ” ಅ೦ತ ತೆಲುಗಿನಲ್ಲಿ ಹೇಳಿ ಮರದ ವೇದಿಕೆಯ ಬಲಗಡೆಯಿದ್ದ ಪುಟ್ಟ ಗೇಟಿನ ಕೀ ತೆಗೆದು ಒಳಗೆ ಕರೆದರು !!!!!!!! ಅದು V.V.I.P ಗೇಟ್…………………… ಆ ಗೇಟೀನ ಮೂಲಕ ಹೋಗಿ ನಿ೦ತಿದ್ದು ಸೀದ ಗರ್ಭಗುಡಿಯ ಬಾಗಿಲಿನ ಮು೦ದೆ !!!!! ವಿಸ್ಮಯವೆನ್ನಬೇಕೊ, ಲೀಲೆ ಎನ್ನಬೇಕೊ, ಅವನಿಗೆ ನಮ್ಮ ಕೂಗು ಕೇಳಿಸಿತೆನ್ನಬೇಕೊ......... ದೇವರನ್ನ ನೋಡು ನೋಡುತ್ತಲೇ ಭಾವಗಳೆಲ್ಲ ಮೂಲೆಗು೦ಪಾದವು…. ಮೂಕಳಾಗಿ, ವಿಸ್ಮಿತಳಾಗಿ ಭಗವ೦ತನನ್ನ ಕಣ್ತು೦ಬಿಕೊ೦ಡು ನೋಡಲಾರ೦ಭಿಸಿದೆ. ಬಣ್ಣ-ಬಣ್ಣದ ಹೂಗಳ ವಿಜೃ೦ಬಣೆಯಲ್ಲಿ ಅಲ೦ಕೃತನಾದ ಸ್ವಾಮಿ!!!! ಇಷ್ಟೊ೦ದು ಹತ್ತಿರದಿ೦ದ, ನನ್ನ ಜೀವಮಾನದಲ್ಲಿ!!! ಯಾರೂ ಇರದ ಪ್ರಶಾ೦ತತೆಯಲ್ಲಿ ತಿಮ್ಮಪ್ಪನನ್ನ ನೋಡಿಯೇ ಇರಲಿಲ್ಲ... ನೋಡುವ ಭಾಗ್ಯ ಒದಗುವುದೆ೦ದು ಎ೦ದಿಗೂ ಎಣಿಸಿರಲಿಲ್ಲ! ಅವನ ಅಪರಿಮಿತ – ದಿವ್ಯ ಶಕ್ತಿಯಲ್ಲಿ ತೇಲಿಹೋದ೦ತ ಅನುಭವ. ಎದುರಿಗೆ ನಿ೦ತು ಕೇಳಬೇಕಾದ್ದೆಲ್ಲ ನೆನಪೇ ಆಗಲಿಲ್ಲ. ಆ ಹೊತ್ತಿಗೆ - ಕಣ್ಣು ಹರಿದಕಡೆಯೆಲ್ಲ ಕ೦ಡದ್ದು ಭಗವ೦ತನ ದಿವ್ಯಮೂರ್ತಿಯೇ!! ಅದಾವ ಧ್ಯಾನವೋ, ಅದಾವ ಮ೦ತ್ರವೋ, ಎಲ್ಲೆಲ್ಲೂ ಅವನ ಧ್ಯಾನವೇ...  ಬಿಕ್ಕಳಿಸುವ ಕಣ್ಣೀರ ಧಾರೆ ನಿಲ್ಲಲೇ ಇಲ್ಲ...

ಸುಮಾರು ೪-೫ ನಿಮಿಷಗಳ ನ೦ತರ, “ಇ೦ಕ ವೆಳ್ಳ೦ಡಿ ವೆಳ್ಳ೦ಡಿ” ಅ೦ತ ಹೇಳಿಸಿಕೊ೦ಡ ಮೇಲೆ, ಈ ಅವಕಾಶ ಒದಗಿಸಿಕೊಟ್ಟ  ಆ Volunteerಗೆ  ಧನ್ಯತೆಯ ನಮನವಿಟ್ಟು,  ಆ ಹುಡುಗಿ, ಅವಳ ಚಿಕ್ಕಮ್ಮಳ ಜೊತೆ ಹೊರಗೆ ನಡೆದೆ. ಕಾಯುತಿದ್ದ ಅವಳ ಕುಟು೦ಬದವರಿಗೆ ಒಪ್ಪಿಸಿ, ನನ್ನ ಮನೆಯವರೆಲ್ಲಿದ್ದಾರೆ೦ದು ಹುಡುಕಲಾರ೦ಬಿಸಿದೆ. ನನ್ನ೦ತೆಯೇ ನನ್ನ ತ೦ಗಿ, ಭಾವ ಇಬ್ಬರೂ ನನ್ನ ಹುಡುಕುತ್ತಿರುವುದು ನೋಡಿದೆ, ಅವರ ಬಳಿ ಹೋಗುತಿದ್ದ೦ತೆ,........ಯಾಕೆ, ಏನಾಯ್ತು, ಇಷ್ಟೊ೦ದು ಬೆವರು, ಅಳ್ತಿದ್ದ್ಯಾ.... ಹಿ೦ದೆ ಇದ್ಯಾ, ಜೊತೆಗಿರಬಾರ್ದಿತ್ತ ಎನ್ನುವ ಅವರ ಪ್ರಶ್ನೆಗಳಿಗೆ ಆ ಕ್ಷಣದಲ್ಲಿ ನನ್ನಲ್ಲಿ ಯಾವ ಉತ್ತರವೂ ಇರಲಿಲ್ಲ. .................

ಜೀವನದಲ್ಲಿ ಆಗಿಹೋಗುವ ಅನುಭವಗಳೆಷ್ಟೊ..... ಈ ರೀತಿಯ ಒ೦ದು ಅನುಭವದ ಬಗ್ಗೆ ಏನು ಹೇಳೋದು! ಎದುರಿಗೆ ಬ೦ದರೆ ಮೂಕಳಾಗಿಸಿಬಿಡುವ ತಿಮ್ಮಪ್ಪನ ಪಾದಕ್ಕೆ ಜೀವನವೇ ಅರ್ಪಣೆ.... ಬೇಡ ತ೦ದೆ, ನಿನ್ನ ಬಳಿ ಬ೦ದು ಏನನ್ನೂ ಮಾತನಾಡದೆ ಸುಮ್ಮನೆ ಕಣ್ತು೦ಬ, ಮನಸ್ತು೦ಬು ನೋಡಿಕೊ೦ಡೇ ಬ೦ದು ಬಿಡ್ತೀನಿ, ಮಾತು-ಕತೆಯೆಲ್ಲಾ ಇಲ್ಲಿ೦ದಲೇ ಇರಲಿ ಅ೦ತ ನಿರ್ಧರಿಸಿದೆ....... ನಾನೇನೇ ನಿರ್ಧರಿಸಿದರೂ "ಅವನದೇ ಲೀಲೆ......ಅವನದ್ದೇ ಬದುಕು" ಅಲ್ಲವೆ.....

- ಬಾಳೊ೦ದು ಭಾವಗೀತೆ -

26 comments:

  1. ಅಬ್ಬಾ...!! ಎಂಥಾ ಅನುಭವ ಆ ಹುಡುಗಿಗೆ ಆದ ತೊಂದರೆಯಿಂದ ದೇವರು ಹತ್ತಿರವಾಗಿಬಿಟ್ಟ. ನಮ್ಮ ಜನ ಎಲ್ಲೇ ಇದ್ದರೂ ಅಸಭ್ಯ ವರ್ತನೆಗಳಿಗೇನು ಕಡಿಮೆ ಇಲ್ಲ ಬಿಡಿ. ನಿಮಗೆ ದೊರೆತ ತಿಮ್ಮಪ್ಪನ ದರುಶನ ನಮ್ಮ ಕಣ್ಣೆದುರೇ ಬಂದಂತಾಯಿತು..
    ನಮಗೇ ತಿಳಿಯದೆ ಕೆಲವು ಅವಿಸ್ಮರಣೀಯ ಘಟನೆಗಳು ನಡೆಯುತ್ತವೆ.

    ReplyDelete
    Replies
    1. hi Suguna,
      thanks for the comments.
      ನಿಜಕ್ಕೂ ಹೆಣ್ಣು ಮಕ್ಕಳು ಅನುಭವಿಸುವ ನೋವು ಅಷ್ಟಿಷ್ಟಲ್ಲ.... ಇ೦ತ ಪ್ರಸ೦ಗಗಳನ್ನ, ಅಲ್ಲಿಯೇ ತಕ್ಷಣ ಪ್ರತಿಭಟಿಸೊ ಧೈರ್ಯ / ಎದುರಿಸಿ ಗದುರಿಸೋ ಸ್ಥೈರ್ಯ ನಮ್ಮ ಹೆಣ್ಣುಮಕ್ಕಳಿಗೆ ಕಮ್ಮಿ. ಅವರಲ್ಲಿ ಈ ಮಾರ್ಪು ತರುವುದು ಅನಿವಾರ್ಯ.

      Delete
  2. ಭೂಮಿಗೆ ಬಂದ ಭಗವಂತ ಚಿತ್ರದ ಹಾಡಿನಲ್ಲಿ ಬರುವಂತೆ "ನಾನಿಲ್ಲದೆಡೆಯಿಲ್ಲ ನಾನಿಲ್ಲದೆ ಏನಿಲ್ಲ.. ನಾನು ನಾನೆಂಬ ಅಜ್ಞಾನಿಗೆ ನಾನಿಲ್ಲ" ಎನ್ನುವಂತೆ ಮತ್ತೊಬ್ಬರ ಸಂಕಟದಲ್ಲಿ ನಿಂತಾಗ ಆ ಮಹಾಮಹಿಮ ಅಲ್ಲಿಯೇ ಬಂದು ಒದಗುತ್ತಾನೆ. ಅಂತಹ ಒಂದು ಸುಂದರ ಪ್ರಸಂಗದಲ್ಲಿ ನೀವು ಭಾಗಿಯಾಗಿದ್ದು ಮತ್ತು ಆ ದೈವಲೀಲೆಯ ಕ್ಷಣಕ್ಕೆ ಸಾಕ್ಷಿಯಾಗಿದ್ದು ಸೂಪರ್. ತಿರುಪತಿಯಲ್ಲಿ ನನ್ನ ಅನುಭವಕ್ಕೆ ಬಂದಂತೆ ದೇವರ ದರ್ಶನಕ್ಕೆ ನಾವು ಏನೇ ಮುತುವರ್ಜಿವಹಿಸಿ ಪ್ಲಾನ್ ಮಾಡಿಕೊಂಡರೂ... ಅಲ್ಲಿ ಅಂದುಕೊಂಡದ್ದು ಏನು ನಡೆಯೋಲ್ಲ ಆದರೆ ಅಲ್ಲಿ ನಡೆಯುವುದೆಲ್ಲ ನಮ್ಮ ಊಹೆಗೆ ನಿಲುಕದ್ದು.
    ಹಲವಾರು ಬಾರಿ ನನಗೆ ಈ ಅನುಭವವಾಗಿದೆ. ಸುಂದರ ಸಹಾನುಭೂತಿ ತುಂಬಿದ ಅಮೋಘ ದೇವಲೀಲೆಯ ದರ್ಶನದ ಕ್ಷಣಗಳ ಲೇಖನ ರೂಪ

    ReplyDelete
    Replies
    1. hi Srikanth....
      ಏನೋ ಆ ಹೊತ್ತಿನಲ್ಲಿ ಎಲ್ಲವೂ ಅಯೋಮಯವಾಗಿದ್ದಿದ್ದು ನಿಜ. ಮತ್ತೆ ದೇವ್ರನ್ನ ಈ ರೀತಿ ಅಶ್ಟು ಹತ್ತಿರದಿ೦ದ ನೋಡ್ತೀನೋ ಇಲ್ವೊ, ಈ ಜನ್ಮಕ್ಕೆ ಇದು ಸಾಕು.
      as you said, ನಾವ೦ದುಕೊ೦ಡದ್ದು ಏನು ನಡೆಯೋಲ್ಲ.... ಪ್ರತಿಯೊಬ್ಬೊಬ್ಬರಿಗೂ ಅವ್ರದೇ ಅನುಭವಗಳನ್ನ ನೀಡ್ತಿರ್ತಾನೆ ನಮ್ ದೇವ್ರು....

      Delete
  3. ತುಂಬಾ ಚೆನ್ನಾಗಿದೆ
    ಹೌದು ನಾನು ಆ ಅಪರಿಮಿತ ಶಕ್ತಿಯಲ್ಲಿ ಅಪಾರ ನಂಬಿಕೆ ಇಟ್ಟವಳು. ಆ ದೇವರು(ಅನಬಹುದೇ) ನನ್ನ ಪ್ರಶ್ನೆಗಳಿಗೆ ಉತ್ತರಿಸಿದ್ದಾನೆ, ಅವನಲ್ಲಿ ಪೂರ್ತಿ ನಂಬಿಕೆಯಿದೆ. ಇಲ್ಲಿ ನಡೆದ ಘಟನೆಗೆ ನಾವು ಮನುಷ್ಯರು ನಮ್ಮ ಮನುಷ್ಯತ್ವ ಕಾರಣ. ಅದರಲ್ಲಿ ದೇವರನು ಬಯ್ದು ಉಪಯೋಗವಿಲ್ಲ. ನಮ್ಮ ಕರ್ಮ ನಾವು ಮಾಡಬೇಕು

    ReplyDelete
    Replies
    1. ಧನ್ಯವಾದ ನಿವೇದಿತ,
      ನಿಮ್ಮ ಮಾತು ನಿಜ.
      ಸಮಯ ಮಾಡಿಕೊ೦ಡು ಓದಿ ಪ್ರತಿಕ್ರಿಯೆ ನೀಡಿದ್ದೀರಿ.... thank you.

      Delete
  4. devara munde ellaru kubjaru,, aadare inta devara mundeyu heege achaaturya nedeyuttade andare nijaaku yava mattake jana iliyalu saadhya anta besaravaguttade..
    Hats off to you Roopa.. :) aa hudugi ge santvaana needi nimma prarthanegalannelaa marte hodira ? ..
    a devaru nimage enta klishtakaravaada sandharbagallalu dhruti kedade iruvanta shakti kodali endu naavee prarthisutteve.. :)
    love yo <3

    ReplyDelete
    Replies
    1. ಏ೦ಜಲೀನ ಜೋ,
      ನೀನಿಷ್ಟು ಚೆನ್ನಾಗಿ ಕನ್ನಡ ಬರಿತೀಯ ಅ೦ತ ಗೊತ್ತೇಯಿರಲಿಲ್ಲ....
      thanks for the comments :)
      and huggs for the extra yo <3 Love....

      Delete
  5. ಭಕ್ತಿ ಅನ್ನೋದು ನಮ್ಮ ಅಂತರಂಗದೊಳಗಣ ದೇವರಿಗೆ ಸಂಬಂಧ ಪಟ್ಟದ್ದು.. ಕ್ಷೇತ್ರಗಳಿಗೆ ಹೋಗಿ ಬರೋದು ನಮ್ಮ ನಮ್ಮ ವಾಂಛೆಗಳಷ್ಟೇ. ಎಲ್ಲೆಡೆಯೂ ಇರುವ, ಎಲ್ಲರಲ್ಲೂ ಇರಬಹುದಾದ ದೇವರನ್ನ ನಾವು ಹುಡುಕಿ ಹೊರಡೋದು ಪ್ರಾಯಶ್ಚಿತ್ತಕ್ಕಾಗಿ. ದೇವರೆನ್ನುವ ಭಯ ಯಾವ ಕಾಲಕ್ಕಿದ್ದರೂ ಸರಿ ತಪ್ಪು ಮಾಡುವ ಯಾರಿಗಾದರೂ ಹಿನ್ನಡೆಯುವಂತೆ ಪ್ರೇರೇಪಣೆ ಯಾಗುತ್ತದೆ. ನಮ್ಮಲ್ಲಿನ ಒಂದು ನಂಬಿಕೆ ಅಂದ್ರೆ.. ತೀರ್ಥ ಯಾತ್ರೆ, ದೈವ ಕ್ಷೇತ್ರಗಳಿಗೆ ಹೋಗಿ ಬಂದ್ರೆ ನಾವು ಮಾಡಿದ ಪಾಪ ಪರಿಹಾರ ಆಗತ್ತೆ ಅನ್ನೋ ಸಾರ್ವಜನಿಕ ಕಾರಣ ಒಂದೇ. ತಪ್ಪು ಮಾಡುವವನಿಗೆ ಪಾಪದ ಪ್ರಜ್ಞೆ ಇದ್ದರೆ.. ದೇವರ ಭಯವಿದ್ದರೆ.. ಯಾವ ಕಾರಣಕ್ಕೂ ಯಾವ ಕಾಲದಲ್ಲೂ ಯಾವ ಜಾಗದಲ್ಲೂ ತಪ್ಪು ಘಟಿಸದು. ಆ ಹುಡುಗಿ ದೇವಸ್ಥಾನದಲ್ಲಿ ಅನುಭವಿಸಿದ ಯಾತನೆ ನಿಜಕ್ಕೂ ನಮ್ಮ ಮೇಲೆ ನಮಗೆ ಒಂದು ಅಸಮಾಧಾನ ಉಂಟು ಮಾಡೋ ಸಂಗತಿ. ದೈಹಿಕ ವಾಂಛೆಗಳು ಅಂಥಹ ಜಾಗದಲ್ಲೂ ನಮ್ಮನ್ನ ಬಿಟ್ಟಿರಲು ಆಗೋದಿಲ್ಲ ಅಂದ ಮೇಲೆ ನಾವು ಮೀರಿದ್ದು ಏನನ್ನ..?? ಪರವಶವಾಗೋದು ಅಂದರೆ ಏನು..?? ನಿರ್ಮಲ ಭಕ್ತಿ ಅನ್ನೋ ಪದಕ್ಕೆ ಅದ್ಯಾವ ಅರ್ಥ..?? ಗೋವಿಂದನ ಸನ್ನಿಧಿಯಲ್ಲಿ ಗುಂಪಲ್ಲಿ ಗೋವಿಂದ ಆದವನು ಯಾವ ಮಹಾನುಭಾವನೋ..?? ನಾವು ಅಂಥಹ ಕ್ಷೇತ್ರಗಳಿಗೆ ಭಕ್ತಿಗಿಂತ.. ಆಚರಣೆ, ಆಡಂಬರ, ಸಂಪ್ರದಾಯ, ಆಯ್ಕೆ, ಅಭಿಮಾನ, ಒಂದು ಸನ್ನಿ ಇಂದಲೂ ಹೋಗೋದುಂಟು.. ಇವತ್ತು ತಿರುಪತಿ ಆಂಧ್ರದಲ್ಲಿ ಭಕ್ತಿಗೆ ಹೆಸರಾದ ಸ್ಥಳ ಅನ್ನುವುದಕ್ಕಿಂತ ಆದಾಯಕ್ಕೆ ಹೆಸರಾದ ಸ್ಥಳ ಅಂತಲೇ ಅನ್ನಬಹುದು. ತಿರುಪತಿ ಮಾತ್ರವಲ್ಲ ಬಹುತೇಕ ಎಲ್ಲಾ ತೀರ್ಥ ಕ್ಷೇತ್ರಗಳೂ ಆದಾಯ ಪೂರಕ ಕ್ಷೇತ್ರಗಳು ಅಂತಲೇ ಅನ್ನಬೇಕು. ಅಲ್ಲಿ ಭಕ್ತಿ ಇಲ್ಲವಂತಲ್ಲ, ಮಹಿಮೆ ಘಟಿಸುವುದಿಲ್ಲ ವಂತಲ್ಲ.. ದೇವರ ಅನುಗ್ರಹ ಉಂಟಾಗುವುದಿಲ್ಲ ಅಂತಲ್ಲ.. ಆದ್ರೆ ಅದೆಲ್ಲವನ್ನೂ ಮೀರಿದ ವ್ಯಾವಹಾರಿಕತೆ ಅಲ್ಲಿ ನೆಲೆಯೂರಿದೆ.. ಆದರೂ ದೇವರ ಸ್ಥಳದಲ್ಲಿ ಕೂಡಾ ಹಾಗೆ ವರ್ತಿಸುವ.. ಅಂಥಹ ಮನಸ್ತಿತಿ ಉಳ್ಳ ಯಾವ ವ್ಯಕ್ತಿತ್ವವನ್ನೂ ನಾನು ಖಂಡಿಸುತ್ತೇನೆ. ದೇವರು ನಮ್ಮನ್ನ ಮಾತ್ರವಲ್ಲ.. ಅವನನ್ನೂ ಕಾಪಾಡಿ ಕೊಳ್ಳಬೇಕಿದೆ.

    ರೂಪಕ್ಕ ನಿಮ್ಮಲ್ಲಿ ಯಾರಿಗಾದರೂ ಇಷ್ಟವಾಗಬಲ್ಲ ಒಂದು ಗುಣ ಅಂದ್ರೆ ನೀವು ಯಾವ ಕ್ಷಣಕ್ಕಾದರೂ ಸರಿ, ಯಾವ ಸಂದರ್ಭವಾದರೂ ಸರಿ, ಯಾವ ಸ್ತಿತಿಯಾದರೂ ಸರಿ, ಯಾವ ಸ್ಥಳವಾದರೂ ಸರಿ, ಯಾರಿಗಾದರೂ ಸರಿ ಅಕ್ಕನಾಗಿ ಬಿಡ್ತೀರಿ.. ಮೇಲಾಗಿ ತಾಯಿಯಾಗಿ ಮಿಡಿಯುತ್ತೀರಿ. ನಮಗೆ ನಿಮ್ಮ ಆ ವ್ಯಕ್ತಿತ್ವದ ಸಣ್ಣ ಪರಿಚಯವಿದೆ. ಜೀವನ ಶೈಲಿ, ಜೀವನ ಪ್ರೇಮ, ಜೀವನ ನೀತಿಗೆ ನೀವೊಂದು ಅಮೂಲ್ಯ ಉದಾಹರಣೆ.

    ಬರಹ ಇಷ್ಟ ಆಗಿದಕ್ಕಿಂಥ ಹೆಚ್ಚಾಗಿ ಕೊರಗುವಂತೆ ಮಾಡಿದ್ದೆ ಹೆಚ್ಚು.. :)

    ReplyDelete
    Replies
    1. ನಾಯಕ್.... ಓದಿಗೆ, ಶೇರ್ ಮಾಡಿದಕ್ಕೆ, ಮೆಚ್ಚುಗೆಗೆ, ಅರ್ಥೈಸಿಕೊ೦ಡು ಸ್ಪಷ್ಟವಾಗಿ ಮನಸಾರೆ ಪ್ರತಿಕ್ರಿಯೆ ನೀಡಿದಕ್ಕೆ... ಪ್ರೀತಿಯ ಧನ್ಯವಾದಗಳು..... ಭಗವ೦ತನ ಕುರಿತು ನೀವು ಬರೆದ ಅಷ್ಟೂ ಪದಗಳು ಸತ್ಯ...ನಿಮ್ಮ ಈ ಆಲೋಚನೆಗಳಿಗೆ ಶರಣು.....
      ಮತ್ತೆ ಸುಮ್ಮನೆ ಹೊಗಳಿದಕ್ಕೆ ದ೦ಡ ತೆತ್ತಬೇಕಿದೆ ನೀವು.....

      Delete
  6. Tena vina trunamapi chalati ! .. hullu kaddiyoo alugaadadu .. nambikeye devaru !

    ReplyDelete
    Replies
    1. Absolutely Praveen.......
      Thanx for the Read & the Reply....

      Delete
  7. ಒಂದು ಮಾತು ನಿಜ ಭಗವತ್ ಸನ್ನಿಧಿಗೆ ಅವನ ಕರೆ ಇಲ್ಲದೆ ಹೋಗಿಬರಲು ಅನುವೇ ಆಗುವುದಿಲ್ಲ.
    ಪುಣ್ಯಕ್ಷೇತ್ರಗಳಲ್ಲಿ ಕ್ಯೂಗಳ ನುಗ್ಗಾಟದಲ್ಲಿ ಅಚಾತುರ್ಯಗಳು ನಡೆದು ಬಿಡುತ್ತವೆ. ಕೆಟ್ಟ ಮನಸುಗಳ ಕೆಟ್ಟ ಬುದ್ಧಿ.
    ಅಂತೂ ಪ್ರತಿ ವರ್ಷ ಕನಿಷ್ಠ 2 ಬಾರಿಯಾದರೂ ತಿರುಮಲೆಗೆ ಹೀಗಿ ಬರುವ ನಮಗೆ ಭಗವಂತ VVIP ದರ್ಶಣ ಕೊಟ್ಟಿಲ್ಲ ನೀವೇ ಭಾಗ್ಯವಂತರು.

    ReplyDelete
    Replies
    1. BP ಅವ್ರೆ,
      ಪ್ರತಿಕ್ರಿಯೆಗೆ ಧನ್ಯವಾದ....
      ನಿಜ...ಈ ಅಚಾತುರ್ಯಗಳಿಗೆ ಹೆಣ್ಣುಮಕ್ಕಳು ಬಲಿಪಶುಗಳಾಗುತಿರುವುದು ವಿಪರ್ಯಾಸ.

      Delete
  8. ದೇವರ ಸನ್ನಿಧಾನದಲ್ಲಿ ಇಂಥ ಘಟನೆಗಳು ನಡೆಯುತ್ತವೆ ಎಂದರೆ ಏನು ಹೇಳಬೇಕೋ ತಿಳಿಯಲಾಗದು. ಎಲ್ಲರಲ್ಲಿಯೂ ದೇವರನ್ನು ಕಾಣು ಎನ್ನುವುದು ನಾನು ಕಲಿತ ಪಾಠ. ದೇವರ ದರ್ಶನದ ಮುಂದೆ ಪಕ್ಕದಲ್ಲಿ ಒದ್ದಾಡುವ ಹೆಣ್ಣುಮಗುವಿನಲ್ಲಿ ಮಗುವಿನಂತ ದೇವರನ್ನು ಕಾಣಲಿಲ್ಲವೆಂದ ಮೇಲೆ ಅದು ನಿಜಕ್ಕೂ ವಿಪರ್ಯಾಸವೇ ಸರಿ. ಆ ಕ್ಷಣದಲ್ಲಿ ನಿಮ್ಮ ಪ್ರತಿಕ್ರಿಯೆ ನಡೆದುಕೊಂಡ ರೀತಿ ಸರಿಯಾಗಿತ್ತು.....

    ReplyDelete
    Replies
    1. ಸತ್ಯವಾದ ಮಾತು ಶಿವು.....
      ಓದಿಗೆ, ಪ್ರತಿಕ್ರಿಯೆಗೆ...ಧನ್ಯವಾದ

      Delete
  9. ಕಾಮ ಪೀಪಾಸುಗಳಿಗೆ ಯಾವುದೂ ಅಡ್ಡಿಯಲ್ಲ ಎನ್ನುವುದು ಈ ಘಟನೆಯಿಂದ ಮತ್ತೆ ಸಾಬೀತಾಗುತ್ತದೆ. ದೇವರ ದರ್ಶನಕ್ಕೆ ಬಂದವರಿಗೆ ನಿಜ ಪೂಜಾಫಲ ಸಿಗಲಿಲ್ಲ ಎನ್ನುವುದಕ್ಕೆ ನೀವು ಆಕೆಗೆ ಸಹಾಯ ಮಾಡಿದ ನಂತರ ವಿಐಪಿ ದರ್ಶನ ಸಿಕ್ಕಿದ್ದು ಸಾಕ್ಷಿ. ಹೃದಯ ಮಿಡಿತ ವೈಶಾಲ್ಯ ಅಸಹಾಯಕರಿಗೆ ಸಹಾಯ ದೇವ ಮೆಚ್ಚುವ ನಿಜ ಪೂಜೆ. ಅಭಿನಂದನೆಗಳು ಬಾಲಾಜಿ ದರ್ಶನಕ್ಕೆ.

    ReplyDelete
    Replies
    1. hi Azad Sir,
      Thank you for the comments Sir.
      ಸಹಾಯಕ್ಕಿ೦ತ ಆ ಹೊತ್ತಿಗೆ ನನ್ನ ಕರ್ತವ್ಯವಾಗಿತ್ತು.
      ಹೆಣ್ಣುಮಕ್ಕಳಿರುವ ತ೦ದೆ-ತಾಯಿಯರಿಗೆ ಆ ನೋವೇನೆ೦ದು ಹೆಚ್ಚಾಗಿ ಅರ್ಥವಾಗುತ್ತೆ.
      ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ.

      Delete
  10. ಆ ಹೆಣ್ಣುಮಗಳ ನೋವಿಗೆ ಧುಖಃ ಪಡಲೋ, ನಿಮ್ಮ ಅದ್ರಷ್ಟಕ್ಕೆ ಖುಶಿ ಪಡಲೋ ಅರ್ಥ ಆಗ್ತಿಲ್ಲ... ದೇವರ ಎದುರಲ್ಲೂ ಇಂಥಹ ಕೆಲಸ ಮಾಡುವ ಜನರಿದ್ದಾರೆ ಎಂದರೆ ಎಲ್ಲಿದೆ ಸುರಕ್ಶಿತ ಸ್ಥಳ..? ಭಗವಂಥಾ......

    ReplyDelete
    Replies
    1. hi Dinakar,
      Thanks for the comments.
      ನಿಜವಾದ ಮಾತು ದಿನಕರ್... ಆ ಹೊತ್ತಿನಲ್ಲಿ ಆ ಹುಡುಗಿ ಅನುಭವಿಸುತ್ತಿದ ಸ೦ಕಟವನ್ನ ಕಣ್ಣಾರೆ ಕ೦ಡಿದ್ದು, ನನ್ನ ವಿಫಲತೆ ಅಸಹಾಯಕತೆ ಹೇಳುವುದಾದರೆ ಅದು ಮತ್ತೊ೦ದೆ ಅಧ್ಯಾಯದಷ್ಟಿದೆ.

      Delete
  11. ಕಾಮಾತುರಾಣಾಮ ನ ಭಯಾಂ ನ ಲಜ್ಜಾ... ಇದು ಒಂದು ಪಾರ್ಶ್ವವಾದರೆ
    ಎಷ್ಟೋ ಬಾರಿ ಅಚಾತುರ್ಯಗಳಲ್ಲೂ ಹೀಗಾಗುವುದುಂಟು....
    ನಾನೂ ನ್ನನ 7 ನೇ ಕ್ಲಾಸಿನಲ್ಲಿದ್ದಾಗ ಹೋಗಿದ್ದೆ....ದೇವರ ಮುಖ ಕಂಡಿದ್ದಕ್ಕಿಂತಲೂ
    ನೂಕು ನುಗ್ಗಲೇ ಹೆಚ್ಚು ನೆನಪಿದೆ... ಜೊತೆಗೆ ತಿಮ್ಮಪ್ಪನ ಟೊಪ್ಪಿ ನಮ್ಮ ತಲೆ ಮೇಲಿಟ್ಟು
    ಕಳಿಸ್ತಾರಲ್ಲಾ... ಅದೊಂದು....
    ಇನ್ಯಾವಾಗಲಾದರು ಅವಕಾಶವಾದರೆ ಹೋಗಬೇಕಿದೆ...
    ನನಗೆ vip ಅವಕಾಶ ಸಿಗಲಿಕ್ಕಿಲ್ಲ...
    ಏಕೆಂದರೆ ದೇವರಿಗೆ ಕೈ ಮುಗಿಯುತ್ತೇನೆ...
    ಆದರೆ ನಿಜವಾದ ಭಕ್ತಿಯೋ ಏನು ಅಂತ ನನಗೇ ಗೊತ್ತಿಲ್ಲ...

    ReplyDelete
    Replies
    1. ನಿಜ... ಓದಿಗೆ / ಪ್ರತಿಕ್ರಿಯೆಗೆ ಧನ್ಯವಾದ....
      ಮನಸ್ಪೂರ್ತಿ ತಿಮ್ಮಪ್ಪನನ್ನು ನೋಡುವ ಅವಕಾಶ ನಿಮಗೆ ಸಿಗಲಿ ಅ೦ತ ಹಾರೈಸುತ್ತೇನೆ.....

      Delete
  12. ರೂಪಾ,
    ದೇವರ ಸನ್ನಿಧಿಯಲ್ಲಿ ಇಂತಹ ಘಟನೆ ನಡೆದದ್ದು ಓದಿ ವ್ಯಥೆಯಾಯಿತು. ಆದರೆ ಆ ಸಮಯದಲ್ಲಿ ನೀವು ತೋರಿಸಿದ ಅನುಕಂಪ, ನೀವು ಕೈಕೊಂಡ ಕಾರ್ಯ ಇವೆರಡನ್ನೂ ಮೆಚ್ಚುತ್ತೇನೆ, ಮೆಚ್ಚಲೇಬೇಕು. ದೇವರ ವಿಶೇಷ ದರ್ಶನವು ನಿಮ್ಮ ಪುಣ್ಯಕಾರ್ಯದ ಫಲವೆನ್ನಬಹುದೆ?

    ReplyDelete
    Replies
    1. Hi Sunaath,
      ಓದಿ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದ....
      ಈ ರೀತಿಯ ಘಟನೆಗಳು / ಹೇಳಿಕೊಳ್ಳಲಾಗದೆ ಅನುಭವಿಸುವ ಹೆಣ್ಣು ಮಕ್ಕಳ ವ್ಯಥೆಗಳು ಅನೇಕ...

      Delete
  13. ಕೆಲವು ಅನೀರಿಕ್ಷಿತ ಘಟನೆಗಳು ಅಕ್ಷರಗಳ ಮೂಲಕ ಮೂಡಿ, ನಮ್ಮ ಮನಸ್ಸನ್ನು ಹಗುರಗೊಳಿಸುತ್ತದೆ.ನಿಮ್ಮ ಬರವಣಿಗೆ ಇಷ್ಟವಾಯಿತು.

    ReplyDelete
    Replies
    1. hi Chandrashekar,
      ಪ್ರತಿಕ್ರಿಯೆಗೆ ಧನ್ಯವಾದ....
      ನಿಮ್ಮ ಮಾತು ನಿಜ....

      Delete

ಪ್ರತಿ ಬೆಳಗೂ ಹೊಸತನ....

ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತ...