Thursday, April 24, 2014

ಮಿತಿ


ಭಾಗ (೧) : ಪ್ರಕಾಶ್ ಹೆಗಡೆಯವರ "ಬೇಲಿ" http://ittigecement.blogspot.in/2014/04/blog-post.html
ಭಾಗ (೨) :  ದಿನಕರ್ ಮೋಗೆರರವರ "ದಣಪೆhttp://dinakarmoger.blogspot.in/2014/04/blog-post_14.html  
ಭಾಗ (೩) : ಬಾಲು ಸರ್ ರವರ "ಎಲ್ಲೆಯ ಮಿಂಚು" http://nimmolagobba.blogspot.in/2014/04/blog-post_1912.html
ಭಾಗ (೪) :  "ಮಿತಿ" ಎಂದು ಮುಂದುವರೆಸುವ ನನ್ನ ಪುಟ್ಟ ಪ್ರಯತ್ನ: 


ಅಲ್ಲಿಂದ ಮನೆಯ ಹಾದಿ ಹಿಡಿದು ಹೇಗೆ ಬಂದೆನೋ! ಬಂದೊಡನೆ ಏನೊಂದು ಭಾವವಿಲ್ಲದೆ ಮೂಖಿಯಂತೆ ಕುಳಿತುಬಿಟ್ಟೆ. ಫ್ಯಾನಿನ ಗಾಳಿ ಜೋರಾಗಿ ಬೀಸುತಿದ್ದರೂ ಬೆವರುತ್ತಿದ್ದೆ. ನನ್ನ ಬಗ್ಗೆ ನನಗೆ ನಾಚಿಕೆ, ಕೀಳರಿಮೆ. ಪತಿಯ ಪ್ರಾಮಾಣಿಕತೆ  ಆ ಘಳಿಗೆಯನ್ನು  ಎಚ್ಚರಿಸಿತ್ತು. ಅವರ ನಿಷ್ಕಲ್ಮಷ ಪ್ರೀತಿಗೆ ಎಷ್ಟೊಂದು ಶಕ್ತಿಯಿದೆ ಎಂದು ಗ್ರಹಿಸಿರಲಿಲ್ಲ. ನಾನು ಮಾರುಹೋದೆ!

ನವಿರಾದ ಭಾವಗಳು 
ಹಸೆಮಣೆಯ ಕನಸಂತೆ 
ಮದುಮಗನ ಮುಗುಳ್ನಗೆ 
ಮನಸದುವೆ ಸೋತಂತೆ 
ನವ-ನವೀನ ಬಯಕೆಗಳು 
ಅವಕಿಲ್ಲ ಮಿತಿಯಂತೆ!

ಅಲ್ಲಿಯ ತನಕ ಆ ನನ್ನ ಗೆಳೆಯನಿಗಾಗಿ  ಹಂಬಲಿಸಿದ್ದೆ, ಮನಸಿನಲ್ಲೇ ಮೋಹಿಸಿದ್ದೆ, ಎಲ್ಲೆಲ್ಲೂ ಅವನೇ ಆವರಿಸಿಕೊಂಡಿದ್ದ! ನನಗಾದರೂ ಯಾವ ಮಂಕು ಬಡಿದಿತ್ತೊ? ಆ ಸಮಯದಲ್ಲಿ ಇವರು ಫೋನ್ ಮಾಡದೆ ಇದ್ದಿದ್ದರೆ! ಅಬ್ಭಾ..! ಊಹೆಯೂ ಸಹ ತಲೆ ತಗ್ಗಿಸುವಂತೆ ಮಾಡಿದೆ. 

ಅದೆಷ್ಟು ಹೊತ್ತು ಹಾಗೆ ಶವದಂತೆ ಕುಳಿತಿದ್ದೆನೋ, ಪಕ್ಕದ ಮನೆಯ ಚಿಂಟು ನಮ್ಮ ಮನೆಯ ಬಾಗಿಲು ಬಡಿದಾಗಲೆ ಎಚ್ಚರವಾಗಿದ್ದು. ಅವನನ್ನ ನೋಡಿದೊಡನೆ, ತವರಿನಲ್ಲಿರುವ ನನ್ನ ಮಗಳ ನೆನಪಾಯ್ತು, ದುಖ-ಅಳು ಇಮ್ಮಡಿಯಾಗಿ ಇನ್ನಷ್ಟು ಬಿಕ್ಕಳಿಸಿದೆ. ಇನ್ನಷ್ಟು ಮರುಗಿ ಹೋದೆ. 

ಆ ಕ್ಷಣದಲ್ಲಿ ನನ್ನ ಗಂಡನ ತೋಳ ತೆಕ್ಕೆ ಬೇಕೆನಿಸಿತ್ತು. ಅಂದಿನವರೆಗೂ ಅವರ ನಿಷ್ಕಲ್ಮಷ ಪ್ರೀತಿಯ, ಔದಾರ್ಯದ, ಅಪ್ಪುಗೆಯ ಮಹತ್ವ ನನ್ನ ಅರಿವಿಗೆ ಇರದೇ ಹೋದದ್ದು ವಿಪರ್ಯಾಸ. ನಮ್ಮ ಮಗುವಿನ  ಹೆರಿಗೆಯ ಸಮಯ, ಪ್ರಸವ ವೇದನೆಯ ಜೊತೆ ನನ್ನ ಜೀವ ಉಳಿಯುವುದೂ ಕ್ಲಿಷ್ಟವೇ ಆಗಿದ್ದ ಸಮಯ. ನನಗಾಗಿ, ನಮ್ಮ ಮಗುವಿಗಾಗಿ ಗುರುರಾಯರಲ್ಲಿ ಉರುಳು ಸೇವೆ ಮಾಡುವೆನೆಂದು ಹರಕೆ ಹೊತ್ತಿದ್ದರು. ಆಸ್ಪತ್ರೆಯಲ್ಲಿ ಇದ್ದ ಮೇರಿ ಮಾತಾಳ ಪ್ರತಿಮೆಯ ಮುಂದೆ 101 ಮೊಂಬತ್ತಿ ಬೆಳಗುವುದಾಗಿ ಬೇಡಿಕೊಂಡಿದ್ದರು. ನಾ ತಾಯಾಗಿ ಸಂಭ್ರಮಿಸಿದ್ದಕ್ಕಿಂತ ಹೆಚ್ಚಾಗಿ ಅವರು ತಂದೆಯಾಗಿ - ನನ್ನ ಪತಿಯಾಗಿ ಸಂಭ್ರಮಿಸಿದ್ದರು. ಎಲ್ಲವನ್ನೂ ನಾ ಹೇಗೆ ಮರೆತುಬಿಟ್ಟೆ? ಆ ಮನೆ - ಮನ ಒಡೆಯುವ ಕಾಯಕಕ್ಕೆ ಇವು ನೆನಪು ಬಾರದೆ? 

ನನ್ನ ತವರು ಮನೆಯ ನೆನಪೂ ಸಹ ಆಗುತ್ತಿದೆ! ಅಪ್ಪ ಅಮ್ಮನಲ್ಲಿ ಅಷ್ಟಾಗಿ ಹೊಂದಾಣಿಕೆ ಇರಲಿಲ್ಲ ಹೌದು. ಆದರು ಅವರು ಒಬ್ಬರಿಗಾಗಿ ಒಬ್ಬರು ಬಾಳಿದ್ದರು, ಬದುಕಿದ್ದರು. ಯಾರೊಬ್ಬರು ಮನೆಯಲ್ಲಿ ಇಲ್ಲದಿದ್ದರೂ ಒಬ್ಬರನ್ನೊಬ್ಬರು ಅತಿಯಾಗಿ ಮಿಸ್ ಮಾಡಿಕೊಳ್ಳುತಿದ್ದರು, ಏನನ್ನೋ ಕಳೆದುಕೊಂಡವರಂತೆ ಆಡುತಿದ್ದರು. ಪ್ರೀತಿ ಆಮೇಲೆ, ಜಗಳವಾಡಲೂ ಸಹ ನಿಮ್ಮಮ್ಮ ಇಲ್ಲವಲ್ಲ ಅಂತ ಹೇಳುತಿದ್ದ ಅಪ್ಪನ ಮಾತು ಈಗ ನೆನಪಾಗುತ್ತಿದೆ. ಅಪ್ಪನಿಗಾಗಿ ಅಮ್ಮ ಅನುಸರಿಸಿಕೊಂಡು ಹೋಗುತಿದ್ದ ಸಹನೆಯ ರೀತಿ ನೆನಪಾಗುತ್ತಿದೆ. ಇವರ ಸಂಸ್ಕಾರವೇ ಅಲ್ಲವೇ ನನಗೆ. ಯಾಕೋ ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ. 

ಅಷ್ಟಕ್ಕೂ ನನ್ನ ಸಂಸಾರವನ್ನು ಹೋಲಿಸಿಕೊಂಡರೆ, ನಾನೆಷ್ಟು ಪುಣ್ಯವಂತೆ! ಎಂದಾದರೊಮ್ಮೆ ಅಪ್ಪಿ ತಪ್ಪಿ ಜೋರಾಗಿ ಗದರಿದರು, "ತಪ್ಪಾಯ್ತು ಕಣೆ" ಅಂತ ಗೋಗರಿಯುತ್ತಿದ್ದ ನನ್ನ ಪತಿಯ ಅಗಾಧ ಪ್ರೀತಿ ನಾನೇಕೆ ತಿಳಿಯದೆಹೋದೆ? ಹಣ ಖರ್ಚು ಮಾಡುವ ವಿಷಯದಲ್ಲೂ ಎಂದೂ ಸಾಕೆನ್ನಲಿಲ್ಲ. ದೇವರ ಕರುಣೆಯಿಂದ ಮಾಡಿದಂತ ಸಂಸಾರ ನನ್ನದು. ನಮ್ಮ ಜೋಡಿಯನ್ನು, ಸಂಸಾರವನ್ನು ನೋಡುತಿದ್ದ ನಮ್ಮ ಸಂಬಂಧಿಕರು  "ನಿಮ್ಮ ಜೋಡಿ ಹೀಗೆ ನೂರ್ ಕಾಲ ಇರಲಿ" ಅಂತ ಹರಸಿದ್ದುಂಟು, ಸ್ನೇಹಿತೆಯರು ಹೊಟ್ಟೆಕಿಚ್ಚು ಪಟ್ಟಿದ್ದುಂಟು. ಎಲ್ಲ ಸುಗಮವಾಗಿ ಸರಾಗವಾಗಿ ನಡೆಯುವಾಗ ಈ ಹುಚ್ಚಾಟ ನನಗೆ ಬೇಕಿತ್ತೆ? ಈ ಸ್ವಚ್ಚಂದ - ಚೇಷ್ಟೆ ನನ್ನ ಬದುಕಿನ ದಿಕ್ಕನ್ನೇ ಬದಲಾಯಿಸಲು ಹೊರಟಿತ್ತು.
ಸರಿ-ತಪ್ಪುಗಳ ಸೆರೆ 
ಬಲಿಯಾದ ಅಸ್ತಿತ್ವ 
ಬದಲಾದ ಸಂಬಂಧ 
ಬರಿದಾದ ವ್ಯಕ್ತಿತ್ವ 
ಸೆಲೆ, ಸಂಕೋಲೆ 
ಬೇಕಿತ್ತು ವಯಸ್ಸಿಗೆ, ಮನಸಿಗೆ!

ಯಾಕೋ ಎಲ್ಲವನ್ನು ಅವರ ಬಳಿ ಹೇಳಿಕೊಳ್ಳಬೇಕೆನಿಸಿದೆ. ಅವರಲ್ಲಿ ಕ್ಷಮೆ ಕೇಳಬೇಕು. ಈ ಪಾಪ ಪ್ರಜ್ಞೆಯಿಂದ ಹೊರಬರಬೇಕು. ಆ ದೇವರಿಗಿಂತ ಎತ್ತರವಾಗಿ ಕಾಣ್ತಿದ್ದಾರೆ ಅವರು. ನನ್ನ ಮಾತು ಆಲಿಸ್ತಾರೆ, ಹಾಂ ಆಲಿಸ್ತಾರೆ, ನಂಗೊತ್ತು,  ಅವರದು ದೊಡ್ಡ ಮನಸು, ನನ್ನ ಕ್ಷಮಿಸ್ತಾರೆ ಸಹ. ದೇವರ ದೀಪ ಹಚ್ಚಿದೆ, ಆ ದೀಪಗಳಿಂದ ಹೊಮ್ಮುತಿದ್ದ ಬೆಳಕು ಹೊಸದಾಗಿ ಪ್ರಕಾಶಿಸುತ್ತಿದೆ, ಎಲ್ಲವೂ ಮತ್ತೊಮ್ಮೆ ಹೊಸದಾಗಿ ಶುರು ಮಾಡಬೇಕು. 

ಹೀಗಂದುಕೊಳ್ಳುವಾಗಲೇ, ಮೊಬೈಲಿಗೆ ಅವರ ಮೆಸೇಜ್, "Have Your Dinner Chinnu, I Will Be Late Tonight".....  ಆ ಮೊಬೈಲಿಗೊಂದು ಮುತ್ತಿಟ್ಟೆ. ಅವರಿಗಾಗಿ ಕಾಯುತ್ತ ಸೋಫಾದ ಮೇಲೆ ಕುಳಿತಿದ್ದವಳು ಹಾಗೇ ಮಲಗಿಬಿಟ್ಟೆ. 

ಕಣ್ಣು ಬಿಟ್ಟಾಗ ಬೆಳಗಿನ ಐದು ಗಂಟೆ! ನನ್ನ ತಲೆಯ ಕೆಳಗೆ ದಿಂಬು? ಅವರು ಆಗಲೇ ಬಂದಾಗಿದೆ! ರಾತ್ರಿಯ ಯಾವ ಹೊತ್ತಿನಲ್ಲಿ ಬಂದರೋ, ರೂಮಿನ ಕಡೆ ನಡೆದೆ. ಅವರನ್ನೊಮ್ಮೆ ಅಪ್ಪಿಕೊಳ್ಳಬೇಕಿತ್ತು. ಮನಸಾರೆ ಅತ್ತು ಎಲ್ಲವನ್ನು ಹೇಳಬೇಕಿತ್ತು.  ನನ್ನ ಮನಸಿನ ಹೊರೆ ಇಳಿಸಿಕೊಳ್ಳಬೇಕಿತ್ತು. ಗಾಢ ನಿದ್ರೆಯಲ್ಲಿದ್ದಾರೆ, ಹೇಗೆ ಎಬ್ಬಿಸೋದು...ಇನ್ನಷ್ಟು  ಮಲಗಲಿ.  

ಅಡುಗೆ ಮನೆಯ ಕಿಟಕಿಯಿಂದ ಇಣುಕಿದ ಸೂರ್ಯನ ಕಿರಣ ಈ ದಿನ ಹೊಸ ಬದುಕನ್ನು ಕಟ್ಟಿ ಕೊಟ್ಟಂತೆ ಭಾಸವಾಗಿದೆ. ಇನ್ನು ಇವರು ಮಲಗೇ ಇದ್ದಾರೆ ಎಂದುಕೊಂಡು ಬಂದೆ, ಅರೆ ಇದೇನಿದು ಇಷ್ಟು ಬೇಗ ರೆಡಿ ಆಗ್ತಿದ್ದಾರೆ....., "ರೀ ನಿಮ್ಮ ಹತ್ರ ಮಾತಾಡಬೇಕಿತ್ತು, " ಎನ್ನುವಷ್ಟರಲ್ಲಿ, "ಚಿನ್ನು ನಾ ಆಫೀಸಿಗೆ ಹೊರಡಬೇಕು, ತುಂಬಾ ಅರ್ಜೆಂಟ್ ಕೆಲಸವಿದೆ ಬಂದು ಮಾತಾಡ್ತೀನಿ" ಅಂತ ಹೇಳಿ, ತಿಂಡಿಯೂ ತಿನ್ನದೇ ತಮ್ಮ ಲ್ಯಾಪ್-ಟಾಪ್ ಬ್ಯಾಗ್ ಹಿಡಿದು ಹೊರಟೇ ಬಿಟ್ಟರು. ಇರಲಿ, ಸಂಜೆ ಬಂದೆ  ಬರ್ತಾರೆ ಎಲ್ಲಿಗೆ ಹೋಗ್ತಾರೆ ಅಂದುಕೊಂಡು ಅವರಿಗೆ ಬೀಳ್ಕೊಟ್ಟೆ. 

ಡೈನಿಂಗ್ ಟೇಬಲ್ಲಿನ ಮೇಲೆ ಇವರ ಮೊಬೈಲ್ ರಿಂಗ್ ಆಗುವ ಶಬ್ದ, ಅರೆ ಇವರು ಗಡಿಬಿಡಿಯಲ್ಲಿ ಮೊಬೈಲ್ ಇಲ್ಲೇ ಬಿಟ್ಟು ಹೋದಂತಿದೆ. ನೋಡಬೇಕೆನಿಸದಿದ್ದರು, ಮೇಲಿಂದ ಮೇಲೆ ಬರುತಿದ್ದ ಮೆಸೇಜ್ಗಳ ಹಾವಳಿ ಒಮ್ಮೆ ನೋಡುವಂತೆ ಮಾಡಿತ್ತು. ಆ ಮೊಬೈಲ್ ಕೈಗೆತ್ತಿಕೊಂಡು ನೋಡುತಿದ್ದಂತೆ............ಕುಸಿದೆ.......... ಕುಸಿದು ಬಿದ್ದೆ........... ನನ್ನ ಲೋಕ ತಲೆಕೆಳಗಾದಂತೆ ಕುಸಿದು ಬಿದ್ದೆ!!!!!!

21 comments:

 1. ಉಸಿರು ಬಿಗಿಗೊಳಿಸುವ ನಿರೂಪಣೆ.. ಮುಂದೇನು ಎನ್ನಿಸುವಂತೆ ಢವ ಢವ ಎದೆ ಹೊಡೆದುಕೊಳ್ಳುತ್ತದೆ.. DFR ಮುಂದುವೆರೆದ ಕಥಾಮಾಲಿಕೆ ಒಳ್ಳೆಯ ತಿರುವು ತೆಗೆದುಕೊಂಡು ಸಾಗಿದೆ. ಹಿಮಾಲಯದಲ್ಲಿ ಹುಟ್ಟುವ ಗಂಗೆ ಹರಿದು ಬರುವ ರಭಸದಲ್ಲಿ ತನ್ನ ಜೊತೆಯಲ್ಲಿ ಮಲಿನ ತ್ಯಾಜ್ಯದ ಜೊತೆಯಲ್ಲಿ ಕೆಲವೊಮ್ಮೆ ಒಳ್ಳೆಯ ಬೆಲೆಯನ್ನು ಕೊಚ್ಚಿಕೊಂಡು ಬರುತ್ತದೆ..
  ಒಂದು ಕ್ಷುಲ್ಲಕ ನಿರ್ಧಾರ ಬುಡವನ್ನೇ ಅಲುಗಾಡಿಸುತ್ತದೆ..

  ಸೂಪರ್ DFR ನೀವು ಕೊಟ್ಟ ತಿರುವು ಮಹಾನ್ ತಿರುವು, ಕಥೆ ಮುಂದುವರೆಯಲು ಸೂಕ್ತವಾಗಿ ನಿಂತಿದೆ..

  ReplyDelete
 2. ವಾಹ್ ವಾಹ್ ಒಳ್ಳೆಯ ತಿರುವು ಈ ಕಥೆಗೆ , ಮೊದಲ ಮೂರು ಭಾಗ ಬರೆದದ್ದು ಪುರುಷರು, ನಾಲ್ಕನೇ ಭಾಗದ ಕಥೆ ಒಬ್ಬ ಹೆಣ್ಣುಮಗಳು ಬರೆದರೆ ಹೇಗೆ ಎನ್ನುವ ಆಸೆ ಇತ್ತು, ಅದನ್ನು ಬಹಳ ಅರ್ಥ ಪೂರ್ಣವಾಗಿ ಸಮಂಜಸವಾಗಿ ಮುಂದುವರೆಸಿ ಕೊಂಡು ಹೋಗಿದ್ದೀರಿ . ಕೆಲವು ಸನ್ನಿವೇಶದಲ್ಲಿ ಬಳಸಿದ ಕವಿತೆಗಳು ಬಹಳಷ್ಟು ವಿಚಾರಗಳನ್ನು ತಿಳಿಸಿವೆ ಉದಾಹರಣೆ ಗೆ

  ಸರಿ-ತಪ್ಪುಗಳ ಸೆರೆ
  ಬಲಿಯಾದ ಅಸ್ತಿತ್ವ
  ಬದಲಾದ ಸಂಬಂಧ
  ಬರಿದಾದ ವ್ಯಕ್ತಿತ್ವ
  ಸೆಲೆ, ಸಂಕೋಲೆ
  ಬೇಕಿತ್ತು ವಯಸ್ಸಿಗೆ, ಮನಸಿಗೆ!


  ಹೆಚ್ಚು ರಂಜನೆ ಇಲ್ಲದೆ ವಾಸ್ತವ ಚಿತ್ರಣದ ಕಥೆ ಇಲ್ಲಿ ಬಿಚ್ಚಿಕೊಂಡಿದೆ . ನಮ್ಮೆಲ್ಲರ ಸಹೋದರಿಯಾಗಿ ಈ ಕಥೆಯ ಮೂಲಕ ಸಿಕ್ಸರ್ ಭಾರಿಸಿದ್ದೀರಿ ಅಭಿನಂದನೆಗಳು .

  ಗೆಳೆಯರೇ ಮುಂದಿನ ಕಥೆ ಯಾರು ಮುಂದು ವರೆಸುತ್ತೀರಾ ................ ?

  ReplyDelete
 3. ಅಬ್ಭಾ !
  ಕಥೆ ಮತ್ತೆ ಕುತೂಹಲದ ತಿರುವು ಪಡೆದು ನಿಂತಿದೆ...!

  ನಿಜಕ್ಕೂ ಈ ಥರಹದ "ಖೋ ಖೋ" ಆಟ ಮಜಾ ಬರ್ತ ಇದೆ...

  ರೂಪಾರವರೆ ನಿಮ್ಮ ಕಥಾ ಶೈಲಿಗೆ.. ಅದನ್ನು ಹೇಳುವ ಪರಿಗೆ ಪ್ರೀತಿಯ ಜೈ ಹೋ !

  ReplyDelete
  Replies
  1. Hi Prakash Ji,
   Thank you for your inputs, that helped me form the rest of my story. Dhanyavaada.

   Delete
 4. ಹೊಸ ತಿರುವಿಗೆ ತಂದು ನಿಲ್ಲಿಸಿದ ತಮಗೆ ಉಘೇ ಉಘೇ.

  ಈ ಭಾಗದ highlight ಆ ಹನಿಗವನಗಳು.

  ನಾಯಕಿಯ ಏಕಾಂತ ಸ್ವಗತಗಳು ಅತೀವ ನೆಚ್ಚಿಗೆಯಾದವು. ಪತಿಯ ಬಗ್ಗೆ ಮತ್ತು ತವರು ಮನೆಯ ಬಗ್ಗೆ ಆಕೆಯ ಮೆಲುಕುಗಳು ಮನಕುಲುಕಿದವು.

  ಮುಂದಿನ ಸರಿ ತೂಗಿಸುವ ದಿನಗಳ ಬಗೆಗಿನ ಆಕೆಯ ಉದ್ದೇಶ ಅರೆರೇ ಹೀಗೆ ಮಣ್ಣುಗೂಡಿತೆಂದು ಮನ ಮೊಂದಿತು.

  ಕಥನ ಶೈಲಿಗೂ, ಭಾವೊೋತ್ಕಟತೆಗೆ ಮನಸ್ಸು ಮಾರಹೋಯಿತು.

  ReplyDelete
 5. ರೂಪಕ್ಕಾ,ಮೊದಲನೇ ಸಲ ಓದುವಾಗ ಬರೀ ಕವನದ ಸಾಲುಗಳನ್ನೇ ಪಾಯಸದಲ್ಲಿನ ದ್ರಾಕ್ಷಿ ಗೋಡಂಬಿಯ ಥರ !!..ಒಳ್ಳೆ ರುಚಿಕೊಟ್ಟಿತು..ಜೊತೆಗೆ ಅದನ್ನು ಕಡುಗೆಂಪು ಬಣ್ಣದಲ್ಲಿ ಬರೆದದ್ದೂ ಕೂಡಾ ಕಣ್ಣನ್ನು ಸೆಳೆಯಿತು.
  ಕಥೆಯೇ ಕಥೆಯೇ...
  ಇದನ್ನ ಓದಿ ನಂಗನಿಸಿದ್ದಿಷ್ಟು...
  ಮೊದಲಿಗೆ ಪ್ರಕಾಶಣ್ಣನ ಕಥೆಯಲ್ಲಿ ಆಸೆಗಳಿಗೆ ಸ್ಪಂದಿಸುವ ಸಹಜತೆ ಇತ್ತು,ಪ್ರಾಯಶಃ ಅದೇ ಸಹಜತೆ ಕಥೆ ಮುಂದುವರೆಯಲೂ ಅವಕಾಶವಾಯಿತೇನೋ.ಮುಂದೆ ದಿನಕರಣ್ಣನ ಬರಹದಲ್ಲಿ ಗತಕಾಲದ ನೆನಪುಗಳು ಮತ್ತು ಗಟ್ಟಿ ಸ್ನೇಹದ ಗುರುತುಗಳು ಕಾಣಿಸಿಕೊಂಡು "ಬೇಲಿ"ಯ ಸಹಜತೆಗೆ ಒಂದು ಸಕಾರಣವನ್ನೂ ಕೊಟ್ಟಿತು.ಮುಂದೆ ಬಾಲು ಸರ್ ಬರೆದದ್ದರಲ್ಲಿ ಭಾವಾವೇಶದ ,ಹುಚ್ಚುಕನಸುಗಳು ನನಸಾಗುವ ಧಾವಂತದ ಆರೋಹಣವಿದ್ದರೆ ಇಲ್ಲಿ ತನ್ನ ಜವಾಬ್ದಾರಿ,ಕುಟುಂಬದ ಕಾಳಜಿಗಳು ಮೇಳೈಸಿ ಅದೇ "ಬೇಲಿ"ಯ ಭಾವಗಳು ಅವರೋಹಣಗೊಂಡಿದೆ,ವಸ್ತುಸ್ತಿತಿಯೆಡೆಗೆ ಚಿಂತನೆ ಶುರುವಾಗಿದೆ.

  ಸಧ್ಯದ ಕಥೆಯ ಪ್ರಕಾರ "ಆಕೆಯ" ಮನಸ್ಸು ತನ್ನ ತೊಳಲಾಟಗಳ ವರ್ತುಳವನ್ನು ಸುತ್ತಿ ಬಹುತೇಕ ಓಡಾಟವನ್ನು ಮುಗಿಸುವ ಹಂತದಲ್ಲಿದೆ. ಮುಂದೇನು??
  ಗೊತ್ತಿಲ್ಲ.ಖೋ ಖೋ...

  ಜಡವು ಬದುಕಿನ ಹೊಣೆಯು,ಬಾಳ ಚೇತನ ಚಿಗುರು
  ಭೂಮರಂಗಿನ ನಡೆಯು,ಬಿಡದು ಮಣ್ಮುಕ ನಜರು....

  ನಮಸ್ತೆ :)

  ReplyDelete
  Replies
  1. Chinmay,
   thanks for your feedback. Nimma katheya tiruvu saha bahala ishtavaayitu.

   Delete
 6. dvandva manassu...
  tumba chandavaagi bandide Roopa ..
  tudigallali nilliside nimma kathe... :)

  ReplyDelete
  Replies
  1. Thanks Angy, Further 3 of them have written,
   Time iddaaga go through these :
   ಭಾಗ (೫) : ಶಮ್ಮಿ ಸಂಜೀವ್ ಅವರ "ವ್ಯಾಪ್ತಿ-ಪ್ರಾಪ್ತಿ" http://goo.gl/cThzK1
   ಭಾಗ (೬) : ಸುಷ್ಮಾ ಮೂದಬಿದ್ರೀ ಅವರ "ಕದಡಿದ ಕಡಲು " http://kanasukangalathumbaa.blogspot.in/2014/04/blog-post.html?
   and then, http://chinmaysbhat.blogspot.in/2014/04/blog-post_27.html

   Delete
 7. ಅರರೇ...!!
  ರೂಪಕ್ಕಾ... ನಿಮ್ಮ ಬ್ಲಾಗ್ ಗೆ ಕಾಲಿಟ್ಟಾಗ.. ನಿಜಕ್ಕೂ ನಾನಂದುಕೊಂಡಿದ್ದು, ಖೋ ಖೋ ಗೊಂದು ಚಂದದ ಮುಕ್ತಾಯ ಕಾದಿದೆ ಅಂತ..


  ಉಫ಼್ಫ಼್ಫ಼್..
  ಮತ್ತೊಂದು ಹೊಸ ಕುತೂಹಲಕಾರಿ ತಿರುವು ಸಿಕ್ಕಿದೆ..

  ReplyDelete
  Replies
  1. Thank you :) Liked your part of the story too :)

   Delete
 8. ಅಬ್ಬಾ... ಮತ್ತೊಂದು ತಿರುವು ಶುರುವಾಗಿದೆ... ಚೆನ್ನಾಗಿದೆ ರೂಪ ಕಥೆ

  ReplyDelete
 9. abba.. really I never thought even the 4th part of a story written by 4th person could be so thrilling & interesting... liked it the most.. wonderful twists...

  ReplyDelete
  Replies
  1. Yepp... thanx Pradeep, hope you read part 5, 6 and 7. I am awaiting part - 8 now.

   Delete
 10. ಖೋ ಖೋ ಆಟದಲ್ಲಿ ಭಾಗವಹಿಸುವ ಹಂಬಲ ನನಗೂ ಆಯಿತು. ಬಂದ ಕೆಲಸಗಳನ್ನೆಲ್ಲ ಬದಿಗೊತ್ತಿ ಈ ಕಥೆಯನ್ನು ಮುಂದುವರೆಸಿರುವೆ. ಮೂಲ ಹಾಗು ಮುಂದುವರೆಸಿದ ಲೇಖಕರಂತೆ ನಾನೂ ಕೂಡ ಕಥೆಯಲ್ಲಿ ಎಲ್ಲೂ ಎಲ್ಲೆ ಮೀರಿ ಹೋಗದಂತೆ ನೋಡಿಕೊಂಡಿದ್ದೇನೆ. ಕಥೆಯ ಈ ಎಂಟನೇ ಭಾಗವನ್ನು ನೀವು ಓದುವಿರೆಂದು ನಂಬಿದ್ದೇನೆ. http://sudhieblog.blogspot.in/2014/05/blog-post.html

  ReplyDelete

"ಆನ್ ಸುಲ್ಲಿವನ್" ಎಂಬ ಪಂಜು !!!

"When one door of happiness closes, another opens; but often we look so long at the closed door that we do not see the one which h...