Tuesday, April 20, 2021

ಉತ್ತರಾರ್ಧ ... ನನ್ನ ಇತ್ತೀಚಿನ ಓದು.

********

ಪ್ರತಿಯೊಂದು ವಿಷಯಕ್ಕೂ, ಘಟನೆಗೂ ನಾನಾ ಮಜಲುಗಳು, ವಾಸ್ತವಗಳು. ನಾವು ನಿಂತ ನೆಲದ ಮೇಲೆ, ಒಂದು ಬದಿಯಲ್ಲಿ ನಮ್ಮ ಕಣ್ಣಳತೆಗೆ ಕಾಣಿಸುವಷ್ಟು ವಿಸ್ತಾರ ಮಾತ್ರ ನಮ್ಮ ಸತ್ಯ. ನಮಗೆ ಕಾಣಿಸದ ಇನ್ನೊಂದು ಬದಿ ಇದೆ. ಅಲ್ಲಿಯೂ ಒಂದು ಸತ್ಯ ಇದೆ. ಒಂದು ಪೂರ್ವಾರ್ಧ - ಮತ್ತೊಂದು ಉತ್ತರಾರ್ಧ. ಎಲ್ಲವೂ ಸರಿ, ಎಲ್ಲರೂ ಸರಿ; ಅವರವರ ನೇರಕ್ಕೆ.
ಜಯಕ್ಕ, ನಿಮ್ಮ ಕಥಾಸಂಕಲನ ಉತ್ತರಾರ್ಧ ಓದಿದೆ. ಹತ್ತು ಕತೆಗಳೂ ಹತ್ತು ಆಯಾಮಗಳನ್ನು ಹೊಂದಿರುವ ಅರ್ಥಪೂರ್ಣ ರಚನೆಗಳು. ಪ್ರತಿಯೊಂದು ಕತೆಯಲ್ಲೂ ತೆರೆದಿಟ್ಟಿರುವುದು ಒಂದು ಬದಿಯ ದೃಷ್ಟಿಕೋನ, ಉತ್ತರಾರ್ಧ. ಮತ್ತೊಂದು ಬದಿ ಏನಿದ್ದಿರಬಹುದು, ಏನಾಗಿರಬಹುದೆಂದು ಓದುಗರ ಆಲೋಚನೆಗೆ, ಒರೆಗೆ ಹಚ್ಚಿ ಬಿಟ್ಟ ಪೂರ್ವಾರ್ಧ!
Indeed, a very interesting concept.

ತನ್ನೊಡಲ ತುಂಬ ಲಕ್ಷೋಪಲಕ್ಷ ಚುಕ್ಕಿಗಳನ್ನು ತುಂಬಿಕೊಂಡಿರುವ ಆಗಸಕ್ಕೆ, ಮೂರು ಚುಕ್ಕಿಗಳನ್ನು ತನ್ನೊಡಲಿಗೂ ಎಸೆದುಬಿಡು ಎನ್ನುತ್ತಾ, ಒಂದಿಷ್ಟು ಬೆಳಕಿಗಾಗಿ ಹಂಬಲಿಸಿ ಬೇಡುವ ನಾಯಕನ ಅಸಹಾಯಕತೆ. ಸಂಸಾರಗಳಲ್ಲಿ ಬಿರುಕುಗಳು ಅದಾವ ಕ್ಷಣದಲ್ಲಿ ಮೂಡುವವೋ! ಸಾನ್ವಿಯ ಆ ತೀರ್ಮಾನ ಎಷ್ಟು ಸರಿಯೋ - ಎಷ್ಟು ತಪ್ಪೋ? ಅವಳ ಬದಿಯ ಕತೆ ಅಥವಾ ವಾಸ್ತವ ಏನಿರಬಹುದೋ?
"ನೆಲ ಮುಗಿಲುಗಳ ನಡುವೆ ಮುನಿಸು, ಕಾಳಗವೇ? ಅವೆರಡು ಕೂಡ ಒಂದಕ್ಕೊಂದು ವಿರೋಧವೇ ಅಥವಾ ಯಾವೊಂದನ್ನು ಹೊರತುಪಡಿಸಿದರೂ ಮತ್ತೊಂದಕ್ಕೆ ಅರ್ಥವಿಲ್ಲವೇ? ಹಾಗಿದ್ದಲ್ಲಿ, ಅವೆರಡು ಎಂದೂ ಬೇರ್ಪಡಿಸಲಾಗದ ಒಂದೇ ಕಿರಣದ ಆದಿ ಮತ್ತು ಅಂತ್ಯ ಅಲ್ಲವೇ?"
ಅನಂತು ಹಾಗೂ ಅವನ ಸ್ನೇಹಿತನ ಬದುಕಿನ ಪುಟಗಳನ್ನು ತಿರುವಿದಾಗ, ನಿಜಕ್ಕೂ ಒಂದಷ್ಟು ಜನ ತಮ್ಮ ಜೀವನವನ್ನು ಪೂರ್ತಿಯಾಗಿ ಹೀಗೆ ಕಳೆದುಬಿಡುತ್ತಾರಾ, ಎಂದು ಅನಿಸಿತು ಜಯಕ್ಕ.
ನಿಕಾಶ ಮತ್ತು ಅವಳ ಮೂರು ಮಕ್ಕಳ ಅಲೆದಾಟ, ಯಾವ ನೆಲಕ್ಕೂ ಸಲ್ಲದಂತೆ ನಿರಂತರ ಅಭದ್ರತೆಯ ಭಯದಲ್ಲಿ ಪರಿತಪಿಸುವ ಅವಳಂತ ನಿರಾಶ್ರಿತರ ಬದುಕು ಕಣ್ಣ ಮುಂದಿ ಹಾದುಹೋಯಿತು. ಮಾನವನಿಗಿಂತ ಕ್ರೂರ ಮತ್ತೋರ್ವ ಪ್ರಾಣಿ ಇರಲು ಅಸಾಧ್ಯ ನಿಜ. ಬದುಕನುಳಿಸುವ ನೆಪದಲ್ಲಿ, ಬದುಕನಳಿಸುವ ಯತ್ನ, ಮಾನವೀಯತೆ ಮೆರೆವ ಟೊಳ್ಳು ಯತ್ನವದು.
ಒಂದೆಡೆ ಅದಿತಿ, ವಲ್ಲಭ ಮತ್ತು ವಲ್ಲಭನ ಒಂದೂವರೆ ಕಾಲು; ಮತ್ತೊಂದೆಡೆ ಸೋಲೊಪ್ಪಲು ತಯಾರಿಲ್ಲದ ಅವನ ಗಾಲಿಕುರ್ಚಿ ಮತ್ತು ಆ ಜೀವವಿಲ್ಲದ ಕುರ್ಚಿ ಅವನನ್ನು ಅವನ ಗುರಿಯ ಕಡೆಗೆ ಹುರಿದುಂಬಿಸುವ ಪರಿ, ಇಷ್ಟವಾಗುತ್ತವೆ.
ಸುರಸುಂದರಾಂಗ ಪತ್ರೀಗೌಡನ ತಿಣುಕಾಟ ಮತ್ತು ಅವನ ಬಾಸ್ ಜೊತೆಗಿನ ಪೇಚಾಟಗಳು ಸಾಕಷ್ಟು ನಗಿಸಿದ್ದು ಹೌದು. ಆದರೂ ಯಾವ ಸಂದರ್ಭದಲ್ಲೂ ಕೆಟ್ಟದ್ದನ್ನು ಮನಸಾ ಅಪೇಕ್ಷಿಸಬಾರದು ಅನ್ನುವುದಕ್ಕೆ ಈ ಕತೆ ನಿದರ್ಶನವಾಗಿತ್ತು. This one was too effective.
ಮನು ಮತ್ತು ಗಿರಿಯ ಮದುವೆ! ಅದೊಂದು ತ್ಯಾಗವೋ ಅಥವಾ ಪ್ರಾಯಶ್ಚಿತವೋ, ಸಹಜವಾದ ಗೊಂದಲವಿದೆ ನನಗೂ. ಮತ್ತೆ, ಆ ಹರಕಲು ಪುಸ್ತಕದ ಹಾಳೆಗಳಲ್ಲಿ ಮೆರೆದಿದ್ದು ಮಾತ್ರ ಮನ ಸೂರೆಗೊಳಿಸುವ ಬಾಜೀರಾಯ ಹಾಗೂ ಮಸ್ತಾನಿಯ ಗಾಢವಾದ "ಪ್ರೇಮ್ ಕಹಾನೀ" ನೋಡಿ.
ನಮ್ಮಲ್ಲಿ ಹೆಂಡತಿಯನ್ನು ಹೊಡೆಯುವ ಮಹನೀಯರುಗಳಿಗೇನು ಕಮ್ಮಿ ಇಲ್ಲ. ಅವರು ಎಲ್ಲ ವರ್ಗಗಳಲ್ಲೂ ಸಿಗುತ್ತಾರೆ, from all corners of the world. ನ್ಯಾಯ ಹೇಳುವ ನ್ಯಾಯಾಧೀಶೆಗೆ ತನ್ನ ಗಂಡ ಹೊಡೆದು ಬಡೆದು ಮಾಡುತ್ತಿದ್ದರೂ ಅದನ್ನು ಸಹಿಸುವ ಆ ತಾಳ್ಮೆ, ಆ ತ್ಯಾಗ ಯಾವ ನಿಲುಮೆಯನ್ನು ಸೂಚಿಸುತ್ತದೆ!? ಇದು ಕೇವಲ ನಮ್ಮ ದೇಶದ ಸ್ಥಿತಿ ಮಾತ್ರವಲ್ಲ. ಈ PATRIARCHY ಎಲ್ಲ ದೇಶಗಳ, ಎಲ್ಲ ವರ್ಗಗಳ ಹೆಣ್ಣುಮಕ್ಕಳು, ಒಂದಲ್ಲ ಒಂದು ರೀತಿಯಲ್ಲಿ ಅನುಭವಿಸಿಯೇ ತೀರುತ್ತಾರೆ ಅನ್ನುವುದು ನನ್ನ ಭಾವನೆ. Its still a long, long way to go!
ಜಯಕ್ಕ, ನೀವು ಪ್ರತಿಯೊಂದು ವಿಷಯದಲ್ಲೂ ಅದೆಷ್ಟು ಅಪ್ಡೇಟ್ ಆಗಿರುತ್ತೀರಿ ಅಂತ, ನಿಮ್ಮ ಬಗ್ಗೆ ಒಂದು ಸಣ್ಣ ಬೆರಗು ಸದಾ ಇದೆ ನನ್ನೊಳಗೆ. ಅದು ನಿಮ್ಮ ಕತೆಗಳಲ್ಲೂ ಕಾಣಿಸಿದ್ದು ನನಗಂತೂ ಆಶ್ಚರ್ಯವೆನಿಸಲಿಲ್ಲ.
ಉತ್ತರಾರ್ಧ ಬಹಳ ಇಷ್ಟವಾಯಿತು 🙂 ❤
ಮತ್ತೊಮ್ಮೆ ಅಭಿನಂದನೆಗಳು ನಿಮಗೆ.


1 comment:

ಪ್ರತಿ ಬೆಳಗೂ ಹೊಸತನ....

ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತ...