ಕನ್ನಡದೂರಿನ ಕನ್ನಡತಿ ನಾನು.......೨೦೦೮ ನವೆಂಬರ್ ತಿಂಗಳಲ್ಲಿ,

- ೫ ವರ್ಷಗಳ ಕಾಲ ಯೋಕೊಗಾವ ಇಂಡಿಯಾದಲ್ಲಿ ಕೆಲಸ ಮಾಡಿ ಆಗಷ್ಟೇ ಆಸಿಪೆಕ್ ಅನ್ನುವ ಕಂಪನಿ ಒಂದರ ಚೇರ್ಮನ್ನಿಗೆ ಅಸಿಸ್ಟೆಂಟ್‌ಆಗಿ ಸೇರಿದ್ದೆ.
ಅದುವರೆಗೂ ಆರ್ಕುಟ್ನ ಪರಿಚಯ ನನಗಿರಲಿಲ್ಲ. ನಿಜ ಹೇಳಬೇಕಂದ್ರೆ ಆರ್ಕುಟ್ ಅನ್ನುವ ಪದ ಕೇಳಿಯೇ ಇರಲಿಲ್ಲ. ಕಾರಣ ಇಷ್ಟೇ, - ಯಾವುದೇ ಸಾಮಾಜಿಕ ಅಂತರ್ಜಾಲಗಳ ಬಳಕೆ ಯೋಕೊಗಾವದ ಕೆಲಸಗಾರರಿಗೆ ಲಭ್ಯವಿರಲಿಲ್ಲ. ಆಸಿಪೆಕ್‌ಗೆ ಸೇರಿದ ಮೊದಲೆರಡು ದಿನಗಳಲ್ಲಿ ನನಗೆ ಆತ್ಮೀಯತೆ ತೋರಿದವರು ವನಜ ಹಾಗೂ ರಜನಿ. ಮೂಲತಃ ಕೇರಳದವರು! ಬೆಂಗಳೂರಿನ ವಾಸ ಇವರಿಗೆ ಅಷ್ಟಿಷ್ಟು ಕನ್ನಡ ಮಾತನಾಡೋದನ್ನ ಕಲಿಸಿಯೇ ಇತ್ತು.

ಉತ್ತರ-ಭಾರತೀಯರು, ಆಂಗ್ಲೋ-ಭಾರತೀಯರು ಹಾಗು ತಮ್ಮ ಇಂಟರ್ನ್-ಶಿಪ್ ಮಾಡಲು ಬಂದ ಹೊರ ದೇಶದವರೇ ಕೂಡಿದ್ದ ಆ ಸಂಸ್ಥೆಯಲ್ಲಿ ನನ್ನವರಂತೆ ನನಗೆ ಕಂಡಿದ್ದು ರಜನಿ ಹಾಗು ವನಜ.

೫ ವರ್ಷಗಳು ಅಂದರೆ - ಸುಮಾರು ೧೮೦೦ಕ್ಕೂ ಹೆಚ್ಚು ದಿನಗಳ ಕಾಲ ಯೋಕೊಗಾವದಲ್ಲಿ ಕೆಲಸ ಮಾಡಿದ್ದೆ! ಸಾವಿರಕ್ಕೂ ಹೆಚ್ಚು ಮಂದಿ ಇದ್ದ ಆ ಸಂಸ್ಥೆಯಲ್ಲಿ - ಅನೇಕ ಸ್ನೇಹಿತರು! ನನ್ನ ಸ್ನೇಹಿತರನ್ನ ಅಗಲಿದ ನೋವು ಇನ್ನು ಹಸಿಯಾಗೆ ಇದ್ದ ದಿನಗಳವು! ಮುಖ ಮನದ ಕನ್ನಡಿ ಎನ್ನುವ ಹಾಗೆ -ನನ್ನ ಮುಖದಲ್ಲಿ ಆ ಅಗಲಿಕೆಯ ಛಾಯೆ ಆಗಾಗ ಎದ್ದು ಕಾಣುತಿತ್ತು. ಇದನ್ನ ಗಮನಿಸಿದ ರಜನಿ, ಆರ್ಕುಟ್ ಅನ್ನುವ ಅಂತರ್ಜಾಲದ ನೆಲೆಯೊಂದನ್ನು ಪರಿಚಯಿಸಿದಳು. ನನಗಾಗಿ ಆರ್ಕುಟ್ನಲ್ಲಿ ಒಂದು ಖಾತೆ ಸಹ ತೆರೆದು ಕೊಟ್ಟಳು! ರಜನಿಗೆ ಒಂದು ದೊಡ್ಡ ಥ್ಯಾಂಕ್ಸ್ ಹೇಳಿ - ಕಳೆದ ಉಳಿದ ಸ್ನೇಹಿತರನ್ನೆಲ್ಲ ಗುಡ್ಡೆ ಹಾಕಿಕೊಂಡೆ. ಅಬ್ಬ! ಸ್ನೇಹಕ್ಕೆ ಸ್ನೇಹವೇ ಸಾಟಿ! ಮರುಕಳಿಸಿತು ನನ್ನಲ್ಲಿ ಕುಗ್ಗಿದ್ದ ಉತ್ಸಾಹ ಹಾಗು ಹುರುಪು.

ಆರ್ಕುಟ್ ಏನಿದು?:
ಹೀಗೆ ಆರ್ಕುಟ್‌ನ ಒಳಗೆ ಧುಮುಕಿ ಇದರ ಸರಿ-ತಪ್ಪು-ಒಪ್ಪುಗಳನ್ನ ಜಾಲಾಡಿದೆ! ಆಗ ನನಗನಿಸಿದ್ದು, - ಅಂತರ್ಜಾಲ... ಹಂತ ಹಂತವಾಗಿ ತನ್ನ ಬಲೆಗೆ ಸಿಲುಕಿಸುವ ಜಾಲವೇ ಸರಿ ಎಂದು. ಇದನ್ನ ಒಳಿತಿಗಾಗಿ ಉಪಯೋಗಿಸುವವರು ಎಷ್ಟು ಮಂದಿ ಇದ್ದಾರೋ - ಕೆಡುಕಿಗೆ೦ದೆ ಬಳಸುವವರೂ ಅಷ್ಟೇ ಮಂದಿ! ಸ್ಪಾಮ್ / ವೈರಸ್ / ಹ್ಯಾಕಿಂಗ್ ನಿಂದ ಕೂಡಿ ನಮ್ಮ ಕ೦ಪ್ಯೂಟರ್ ಅಲ್ಲದೆ ಮನಸ್ಥಿತಿಯನ್ನು ಕದಡುವ ಶಕ್ತಿ ಈ ಜಾಲಕ್ಕಿದೆ. ಅದೇನೇ ಇರಲಿ ನಮ್ಮ ಜೋಪಾನ ನಮ್ಮ ಕೈಯಲ್ಲಿರಬೇಕು ಅನ್ನುವ ದೊಡ್ಡವರ ಮಾತು ನೆನಪಾಗಿತ್ತು.


ನನ್ನ ಹುಡುಕಾಟದ ಮಧ್ಯೆ ಆರ್ಕುಟ್‌ನ ಮತ್ತೊಂದು ವಿಶೇಷ ಕಂಡೆ! ಅದೇ ಸಮುದಾಯಗಳು / ಕಮ್ಯುನಿಟಿಗಳು. ಅಲ್ಲಿ ಪ್ರತಿ ಆಶಯಕ್ಕೊಂದು ಸಮುದಾಯ, ಪ್ರತಿ ಭಾಷೆಗೊಂದು ಸಮುದಾಯ, ಇಷ್ಟ - ಕಷ್ಟಗಳಿಗೊಂದು ಸಮುದಾಯ, ಪ್ರೇಮಕ್ಕೆ - ಪ್ರಣಯಕ್ಕೆ ಒಂದೊಂದು ಸಮುದಾಯ, ಬೇಜಾರಿಗೊಂದು - ಸಂತಸಕ್ಕೊಂದು ಸಮುದಾಯ.... ಹೇಳಬೇಕೆಂದರೆ ಮನದಲ್ಲಿ ನೆನೆಸಿದ ಪ್ರತಿಯೊಂದು ಅಂಶಗಳಿಗೆ ಅಲ್ಲೊಂದು ಸಮುದಾಯವಿತ್ತು. ಇದೊಂದು ಅಚ್ಚರಿಯಂತೆ ಕಂಡಿತ್ತು ಅಂದು.
ನನಗಿಷ್ಟವಾದ ಸಮುದಾಯಗಳಿಗೆಲ್ಲ ನಾನು ಸದಸ್ಯೆಯಾದೆ, - ಬಡ ಮಕ್ಕಳ ಅಭಿವೃದ್ದಿ, ಹೆಣ್ಣು ಮಗುವನ್ನು ಉಳಿಸಿ, ವಯಸ್ಸಾದ ಜೀವಗಳಿಗೆ ಬೆಂಬಲ,ಸೋನು ನಿಗಮ್ ಫ್ಯಾನ್ ಕ್ಲಬ್, ಕನ್ನಡ ಹಾಡುಗಳು, ಚಿತ್ರತಾರೆ ಕೊಂಕೋಣ ಸೇನ್, ಸೂರ್ಯ, ಆರ್ ಕೆ ನಾರಾಯಣ್, ರಂಗಶಂಕರ ..... ಹೀಗೆ ಅನೇಕ ಅನೇಕ ಸಮುದಾಯಗಳಿಗೆ ಸದಸ್ಯೆಯಾದೆ. ಇಲ್ಲಿ ನಡೆಸುವ ಕಾರ್ಯಚಟುವಟಿಕೆಗಳನ್ನ ಗಮನಿಸಿದೆ. ಆರ್ಕುಟ್ ಬಗ್ಗೆ ಇದಿಷ್ಟು ತಿಳಿದುಕೊಂಡೆ.

ಇನ್ನು ಆಸಿಪೆಕ್ನಲ್ಲಿ :

ಕನ್ನಡದಲ್ಲಿ ನನ್ನ ಹೆಸರಿನ ನಾಮಫಲಕ ಬರೆದು ಹಾಕಿಕೊಂಡಿದ್ದೆ. "ಜೊತೆಯಲಿ ಜೊತೆ - ಜೊತೆಯಲಿ ಇರುವೆನು ಹೀಗೆ ಎಂದು" ಅಂತ ಕನ್ನಡ ಹಾಡಿನ ರಾಗವನ್ನು ಮನಸಲ್ಲಿಯೇ ಗುನಗುನಿಸಿದ್ದೆ! ಇದನ್ನು ಕೇಳಿದ್ದ ರಜನಿ - ವನಜ, "ಕನ್ನಡ ಹಾಡು ಹಾಡ್ತೀಯ ಗುಡ್ ಗುಡ್" ಅಂದಿದ್ದರು. ಸುಮಾರು ಕನ್ನಡ ಹಾಡುಗಳನ್ನು ಹಾಡಿಸಿಕೊಂಡಿದ್ದರು. ಹಾಡುವ ಮೊದಲು ಸಾಲುಗಳ ಅರ್ಥವನ್ನು ಹೇಳುತಿದ್ದ ಕಾರಣ ಅವರಿಬ್ಬರಿಗೂ ಆ ಹಾಡುಗಳು ಇಷ್ಟವಾಗತೊಡಗಿದವು! ಅದು ಯಾವ ಮಟ್ಟಿಗೆ ಇಷ್ಟವಾಗಿತ್ತೆಂದರೆ "ಅವರುಗಳ ಕನ್ನಡ ಫೇವರಿಟ್" ಹಾಡುಗಳ ಪಟ್ಟಿ ಸಹ ಮಾಡಿಕೊಂಡಿದ್ದರು. ಅವರಿಗಿಷ್ಟ ಬಂದಾಗಲೆಲ್ಲ "roops - ಪ್ಲೀಸ್ ಸಿಂಗ್ ದಿಸ್, ಸಿಂಗ್ ದಟ್" ಅಂತ ತಮ್ಮ ಇಷ್ಟವಾದ ಕನ್ನಡ ಹಾಡುಗಳನ್ನ ಹಾಡಿಸುತ್ತಿದ್ದರು.
ನಾನೇನು ಮಹಾನ್ ಗಾಯಕಿಯಲ್ಲ! ನಾನು ಯಾವ ಮಟ್ಟಿಗೆ ಹಾಡಬಲ್ಲೆ ಎಂದು ಕೇಳದಿರಿ - ಇದೊಂದು ಗೋಜಲು ಪ್ರಶ್ನೆ! ಆ ಸಮಯದಲ್ಲಿ ಕನ್ನಡ ತಿಳಿಯದವರ ಮುಂದೆ ನಾನು ಹಾಡುತಿದ್ದ ಹಾಡುಗಳು ನನಗೆ ಕನ್ನಡದ ಮೇಲಿನ ಅಭಿಮಾನವನ್ನು ಹೆಚ್ಚಿಸುತ್ತಿತ್ತು ಮಾತ್ರ.


ಹೀಗಿರುವಾಗ ಒಂದು ದಿನ ಮಧ್ಯಾಹ್ನದ ಊಟ ಮುಗಿಸಿ ನನ್ನ ಟೇಬಲ್ಲಿಗೆ ಅಂಟಿಕೊಂಡಿದ್ದ ನೋಟೀಸ್ ಬೋರ್ಡ್ ಒಂದರ ಮೇಲೆ ಹೀಗೆ ಗೀಚಿಕೊಂಡೆ!

ಕನ್ನಡದೂರಿನ ಕನ್ನಡತಿ ನಾನು!
ಹೊಳೆಯುವ ಮೂಗುತಿ ಹೇಳದೆ ಏನು?

ಹೀಗೆ ಬರೆಯಲು ಕಾರಣ? ಮತ್ತದೇ ಲಾಜಿಕ್! ಕಾರಣ ಏಕೆ ಬೇಕು... ಬರೆದೆನೆಂದರೆ ಹೀಗೆ ಬರೆಯಬೇಕನಿಸಿತ್ತು ಅಷ್ಟೇ!
ಇದನ್ನು ನೋಡಿದ ವನಜ,- "ಯಾನಿದು {ಏನಿದು} ರೂಪ, ವಾಟ್ ಈಸ್ ದೀಸ್?" ಅಂತ ಕೇಳಿದ್ದೆ ತಡ, "ವೇಟ್ - ಲೆಟ್ ಮಿ ಟೆಲ್ ಯು"... ಅಂತ ಇದರ ಅರ್ಥ ಅವಳಿಗೆ ಅರ್ಥೈಸಿದೆ! "ವಃ ವಃ ಟೂ ಗುಡ್, ವಾಟ್ ಯು ಆರ್ ಪೊಯೆಟ್ಟು?" ಅಂತ ಆಶ್ಚರ್ಯವಾಗಿ ರಾಗವಾಗಿ ಕೇಳಿದ್ದಳು. "Nopes, i just scribble.. & if you call me a poet! either I am lucky to have met you or you are a Sweet Dumb!" [ಇಲ್ಲಮ್ಮ! ಹೀಗೆ ಅದು ಇದು ಗೀಚುವ ಅಭ್ಯಾಸ. ನೀನು ನನ್ನ ಕವಿ ಅಂತ ಕರೆದರೆ, -ನಿನ್ನ ಬೇಟಿ ಆದದ್ದು ನನ್ನ ಅದೃಷ್ಟ ಇರಬೇಕು ಅಥವಾ ನೀನು ಮುದ್ದು ದಡ್ಡಿಯಾಗಿರಬೇಕು!].....


ಈ ಮಾತುಕತೆಯೇನೋ ಅಲ್ಲಿಗೆ ಮುಗಿದಿತ್ತು. ಆದರೆ ಇದರ ಪರಿಣಾಮ ಮಾತ್ರ ನನ್ನ ತಲೆಯಲ್ಲಿ ಕನ್ನಡಕ್ಕಾಗಿ ಮತ್ತೊಂದು ಸಸಿಯನ್ನು ನೆಟ್ಟಿತ್ತು! ಏನದು ...?

Comments

Popular posts from this blog

ಹೀಗೊಂದು ಮಹಿಳಾ ದಿನಾಚರಣೆ!!

ನಸುಕಿನ ಕನವರಿಕೆಗಳು

ದಿ ಪ್ರೊಫೆಷನಲ್ - ಬದುಕಿನ ಕೊನೆ ಪುಟಗಳಲ್ಲಿ